ದಟ್ಟ ಮರಗಳಿಂದ ತುಂಬಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನದ ಬೆಟ್ಟಗಳಲ್ಲಿ, ಪ್ರಾಚೀನ ಕಾಲದಿಂದಲೂ ಕಾಡಿನಲ್ಲಿಯೇ ವಾಸಿಸುತ್ತಿರುವ ಸಮುದಾಯಗಳು ಬದುಕಿಗೆ ಅತ್ಯಗತ್ಯವಾದ ಸೌಲಭ್ಯಗಳಿಲ್ಲದೆ ಸಂಕಷ್ಟದಿಂದ ಬದುಕುತ್ತಿವೆ. ಇಂತಹ ಸಮುದಾಯಗಳಲ್ಲಿ ಒಂದಾಗಿರುವ ಕುತ್ಲೂರು ಗ್ರಾಮದ ಮಲೆಕುಡಿಯರ 30 ಮನೆಗಳು ಇಂದಿಗೂ ವಿದ್ಯುತ್ ಸಂಪರ್ಕ ಮತ್ತು ನೀರಿನ ಸಮಸ್ಯೆಗಳಿಂದ ಬಳಲುತ್ತಿವೆ. “ಇಲ್ಲಿನ ಜನರ ದೊಡ್ಡ ಬೇಡಿಕೆಯೆಂದರೆ ವಿದ್ಯುತ್,” ಎಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ರೈತ ಶ್ರೀಧರ ಮಲೆಕುಡಿಯರವರು ಹೇಳುತ್ತಾರೆ.
ಸುಮಾರು ಎಂಟು ವರ್ಷಗಳ ಹಿಂದೆ ತಮ್ಮ ಮನೆಗೆ ವಿದ್ಯುತ್ ಸಂಪರ್ಕ ನೀಡಲು ಶ್ರೀಧರ ಅವರು ಪಿಕೋ ಹೈಡ್ರೋ ಜನರೇಟರನ್ನು ಖರೀದಿಸಿದರು. ಸ್ವತಃ ವಿದ್ಯುಚ್ಛಶಕ್ತಿಯನ್ನು ಉತ್ಪಾದಿಸಲು ಹೂಡಿಕೆ ಮಾಡಿದ 11 ಮನೆಗಳಲ್ಲಿ ಇವರದೂ ಒಂದು. "ಉಳಿದ ಮನೆಗಳಿಗೆ ವಿದ್ಯುತ್ ಆಗಲಿ, ಜಲವಿದ್ಯುತ್ ಆಗಲಿ, ನೀರಿನ ಸರಬರಾಜಾಗಲೀ ಏನೂ ಇಲ್ಲ,” ಎಂದು ಅವರು ಹೇಳುತ್ತಾರೆ. ಈಗ ಆ ಗ್ರಾಮದ 15 ಮನೆಗಳು ಪಿಕೋ ಹೈಡ್ರೋ ಯಂತ್ರಗಳಿಂದ ಜಲವಿದ್ಯುತನ್ನು ಉತ್ಪಾದಿಸುತ್ತಿವೆ. ಸಣ್ಣ ನೀರಿನ ಟರ್ಬೈನ್ ಮನೆಯ ಒಂದೆರಡು ಬಲ್ಬ್‌ಗಳು ಉರಿಯಲು ಸಾಕಾಗುವಷ್ಟು ಸುಮಾರು 1 ಕಿಲೋವ್ಯಾಟ್ ವಿದ್ಯುತನ್ನು ಉತ್ಪಾದಿಸುತ್ತದೆ.
ಅರಣ್ಯ ಹಕ್ಕು ಕಾಯಿದೆ ಜಾರಿಯಾಗಿ 18 ವರ್ಷ ಕಳೆದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಬದುಕುತ್ತಿರುವ ಈ ಜನರಿಗೆ ಕಾನೂನಿನಡಿ ಮಂಜೂರಾದ ನೀರು, ರಸ್ತೆ, ಶಾಲೆ, ಆಸ್ಪತ್ರೆಯಂತಹ ಮೂಲ ಸೌಕರ್ಯಗಳು ಇನ್ನೂ ಸಿಕ್ಕಿಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿರುವ ಮಲೆಕುಡಿಯ ಸಮುದಾಯದವರು ವಿದ್ಯುತ್ ಸಂಪರ್ಕ ಸೇರಿದಂತೆ ತಮಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಪಡೆಯಲು ಹರಸಾಹಸ ಪಡುತ್ತಿದ್ದಾರೆ.
ವಿ . ಸೂ : ಈ ವಿಡಿಯೋವನ್ನು 2017ರಲ್ಲಿ ಮಾಡಲಾಗಿದೆ. ಕುತ್ಲೂರಿಗೆ ಇಂದಿಗೂ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ.
ಅನುವಾದ: ಚರಣ್ ಐವರ್ನಾಡು