“ಇವರಿಗೆ ಹುಡುಗಿ ತರುವ ಸಲುವಾಗಿ ಅತ್ತೆ, ಮಾವ ಹಣ ನೀಡಿದ್ದರು. ಇದು ಇಲ್ಲಿ ತೀರಾ ಸಾಮಾನ್ಯ” ಎಂದು ರೂಮಾ ಖೀಚಡ್ (20) ತನ್ನ ಬದುಕಿನ ಕತೆಯನ್ನು ನನ್ನೊಡನೆ ಹಂಚಿಕೊಳ್ಳುತ್ತಾ ಹೇಳಿದರು. “ದೂರದ ಊರುಗಳಿಂದ ಬಂದು ಇಲ್ಲಿ [ರಾಜಸ್ಥಾನದಲ್ಲಿ] ಸೆಟಲ್ ಆಗೋದು ಎಲ್ಲರಿಗೂ ಸುಲಭದ ಕೆಲಸವಲ್ಲ. ನನ್ನ ಜೇಠಾಣಿ [ಅತ್ತಿಗೆ]…”
“ಪಚಾಸ್ ಹಜಾರ್ ಲಗಾ ಕೇ ಉಸ್ಕೋ ಲಾಯೇ ಥೇ! ಫಿರ್ ಭೀ ಸಾತ್ ಸಾಲ್ ಕೀ ಬಚ್ಚಿ ಕೋ ಚೋಡ್ ಕೇ ಭಾಗ್ ಗಯೀ ವೋ [50,000 ಸಾವಿರ ಕೊಟ್ಟು ಅವಳನ್ನ ತಂದಿದ್ವಿ. ಆದ್ರೂ ಏಳು ವರ್ಷದ ಮಗಳನ್ನ ಬಿಟ್ಟು ಓಡಿ ಹೋಗ್ಬಿಟ್ಳು].” ಎಂದು 67 ವರ್ಷದ ಯಶೋಧಾ ಖೀಚಡ್ (ಹೆಸರು ಬದಲಾಯಿಸಲಾಗಿದೆ) ತನ್ನ ಸೊಸೆಯ ಮಾತನ್ನು ತುಂಡರಿಸುತ್ತಾ ತಾನು ಮಾತು ಮುಂದುವರೆಸಿದರು.
“ಅವ್ಳು, ಆ ಹೆಂಗಸು! ಮೂರು ವರ್ಷ ಇಲ್ಲಿ ಇದ್ದಳು.” ಯಶೋಧಾ ಈಗಲೂ ಓಡಿ ಹೋದ ತಮ್ಮ ಪಂಜಾಬಿನ ಸೊಸೆಯ ಮೇಲೆ ಸಿಟ್ಟಿನಲ್ಲಿದ್ದಾರೆ. “ಅವಳಿಗೆ ಇಲ್ಲಿ ಭಾಷೆಯ ಸಮಸ್ಯೆಯಾಗಿತ್ತು. ಅವಳು ನಮ್ಮ ಭಾಷೆಯನ್ನ ಕಲಿಯಲೇ ಇಲ್ಲ. ಒಮ್ಮೆ ರಕ್ಷಾಬಂಧನದ ದಿನ ಊರಿಗೆ ಹೋಗಿ ಅಣ್ಣ ಮತ್ತು ಅಪ್ಪನನ್ನು ಮಾತನಾಡಿಸಿಕೊಂಡು ಬರುವುದಾಗಿ ಹೇಳಿದಳು. ಮದುವೆಯ ನಂತರ ಅದೇ ಮೊದಲ ಸಲ ಊರಿಗೆ ಹೋಗುವುದಕ್ಕೆ ಅನುಮತಿ ಕೇಳಿದ್ದ ಕಾರಣ ನಾವೂ ಕಳುಹಿಸಿಕೊಟ್ಟೆವು. ಹಾಗೆ ಹೋದವಳು ಮತ್ತೆ ಮರಳಲೇ ಇಲ್ಲ. ಅದೆಲ್ಲ ಆಗಿ ಈಗ ಆರು ವರ್ಷಗಳು ಕಳೆದಿವೆ” ಎಂದು ಆಕೆ ಹೇಳಿದರು.
ಯಶೋಧಾರ ಎರಡನೇ ಸೊಸೆಯಾದ ರೂಮಾ ಇನ್ನೊಬ್ಬ ಬ್ರೋಕರ್ ಮೂಲಕ ಜುಂಜುನುನ್ (ಝುಂಜುನು ಎಂದೂ ಉಚ್ಚರಿಸಲಾಗುತ್ತದೆ) ಗೆ ಬಂದರು.
ಅವರಿಗೆ ತನಗೆ ಎಷ್ಟು ವರ್ಷಕ್ಕೆ ಮದುವೆಯಾಯಿತೆನ್ನುವುದು ತಿಳಿದಿಲ್ಲ. “ನಾನು ಯಾವತ್ತೂ ಸ್ಕೂಲಿಗೆ ಹೋದವಳಲ್ಲ, ಹೀಗಾಗಿ ನಾನು ಯಾವ ವರ್ಷ ಹುಟ್ಟಿದೆ ಎನ್ನುವುದನ್ನು ನಿಮಗೆ ತಿಳಿಸುವುದು ಕಷ್ಟ” ಎಂದು ಬೂದು ಬಣ್ಣದ ಅಲ್ಮೆರಾದಲ್ಲಿದ್ದ ತನ್ನ ಆಧಾರ್ ಕಾರ್ಡನ್ನು ಹುಡುಕುತ್ತಾ ಹೇಳಿದರು.
ನಾನು ಅವರ ಐದು ವರ್ಷದ ಮಗಳು ಕೋಣೆಯಲ್ಲಿದ್ದ ಮಂಚದ ಮೇಲೆ ಆಡುವುದನ್ನು ನೋಡುತ್ತಾ ಕುಳಿತಿದ್ದೆ.
“ಬಹುಶಃ ನನ್ನ ಆಧಾರ್ ನನ್ನ ಗಂಡನ ಪರ್ಸಿನಲ್ಲಿರಬೇಕು. ಬಹುಶಃ ನನಗೀಗ 22 ವರ್ಷವಿರಬಹುದು ಅನ್ನಿಸುತ್ತದೆ” ಎಂದು ರೂಮಾ ಹೇಳಿದರು.
“ನಾನು ಹುಟ್ಟಿ ಬೆಳೆದಿದ್ದು ಅಸ್ಸಾಮಿನ ಗೋಲಾಘಾಟ್ ಎನ್ನುವಲ್ಲಿ” ಎನ್ನುತ್ತಾ ಮಾತು ಮುಂದುವರೆಸಿದ ಅವರು, “ನನ್ನ ಪೋಷಕರು ಅಪಘಾತವೊಂದರಲ್ಲಿ ತೀರಿಕೊಂಡರು. ಆಗ ನನಗೆ ಕೇವಲ ಐದು ವರ್ಷ. ಅಂದಿನಿಂದ ನನ್ನ ಪಾಲಿಗೆ ಕುಟುಂಬವೆಂದರೆ ಅಣ್ಣ-ಅತ್ತಿಗೆ ಮತ್ತು ಅಜ್ಜ-ಅಜ್ಜಿ (ಅಮ್ಮನ ಅಪ್ಪ-ಅಮ್ಮ)” ಎಂದರು.
2016ರ ಒಂದು ಭಾನುವಾರ ಮಧ್ಯಾಹ್ನದಂದು ರೂಮಾ ತನ್ನ ಅಣ್ಣ ಅಜ್ಜಿಯ ಮನೆಗೆ ಅಣ್ಣ ಇಬ್ಬರು ವಿಚಿತ್ರವಾಗಿ ಉಡುಪು ಧರಿಸಿದ್ದ ರಾಜಸ್ಥಾನಿ ವ್ಯಕ್ತಿಗಳನ್ನು ಕರೆದುಕೊಂಡು ಬರುತ್ತಿರುವುದನ್ನು ನೋಡಿದರು. ಅವರಲ್ಲಿ ಒಬ್ಬ ಮದುವೆಗೆ ಹುಡುಗಿಯರನ್ನು ಹುಡುಕಿ ಕೊಡುವ ಬ್ರೋಕರ್ ಆಗಿದ್ದ.
“ಬೇರೆ ರಾಜ್ಯಗಳಿಂದ ಜನರು ನಮ್ಮ ಊರಿಗೆ ಬರುವುದು ಸಾಮಾನ್ಯ ಸಂಗತಿಯಾಗಿರಲಿಲ್ಲ” ಎಂದು ರೂಮಾ ಹೇಳುತ್ತಾರೆ. ಹಾಗೆ ಬಂದವರು ಆಕೆಗೆ ವರದಕ್ಷಿಣೆಯಿಲ್ಲದೆ ಒಳ್ಳೆಯ ಗಂಡನ್ನು ಹುಡುಕಿಕೊಡುವುದಾಗಿ ತಿಳಿಸಿದರು. ಅಲ್ಲದೆ ಮದುವೆ ಖರ್ಚು ತಾವೇ ಹಾಕಿಕೊಳ್ಳುವುದಲ್ಲದೆ ಮೇಲೆ ಒಂದಷ್ಟು ಹಣ ನೀಡುವುದಾಗಿಯೂ ಹೇಳಿದರು.
ʼಪ್ರಶಸ್ತ ಹುಡುಗಿʼ ರೂಮಾರನ್ನು ಬಂದಿದ್ದ ಒಬ್ಬರೊಂದಿಗೆ ಕಳುಹಿಸಿಕೊಡಲಾಯಿತು. ಒಂದೇ ವಾರದೊಳಗೆ ಆಕೆಯನ್ನು ಅವರು ಅಸ್ಸಾಮಿನ ಆಕೆಯ ಮನೆಯಿಂದ 2,500 ಕಿಲೋಮೀಟರ್ ದೂರದಲ್ಲಿರುವ ಜುಂಜುನುನ್ ಜಿಲ್ಲೆಯ ಕಿಶನ್ಪುರ ಗ್ರಾಮಕ್ಕೆ ಸಾಗಿಸಿದರು.
ಇಷ್ಟು ದೂರಕ್ಕೆ ಮದುವೆ ಮಾಡಿಕೊಡಲು ಒಪ್ಪಿದ್ದಕ್ಕಾಗಿ ಆಕೆಯ ಕುಟುಂಬಕ್ಕೆ ಕೊಡುವುದಾಗಿ ಹೇಳಲಾಗಿದ್ದ ಮೊತ್ತ ಅವರಿಗೆ ಸಿಗಲಿಲ್ಲ. ಆದರೆ ಆ ಹಣವನ್ನು ನಾವು ಅವನ ಕಮಿಷನ್ ಜೊತೆ ಸೇರಿಸಿ ಬ್ರೋಕರ್ ಬಳಿ ಕೊಟ್ಟಿದ್ದೇವೆ ಎಂದು ಖೀಚಡ್ ದಂಪತಿ ಹೇಳುತ್ತಾರೆ.
“ಇಲ್ಲಿನ ಹೆಚ್ಚಿನ ಮನೆಗಳಲ್ಲಿ ಬೇರೆ ಬೇರೆ ರಾಜ್ಯಗಳ ಸೊಸೆಯಂದಿರಿದ್ದಾರೆ. ಇಲ್ಲಿ ಅದು ಬಹಳ ಸಾಮಾನ್ಯ” ಎನ್ನುತ್ತಾರೆ ರೂಮಾ. ಮಧ್ಯಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಉತ್ತರ ಪ್ರದೇಶದಿಂದ ಯುವತಿಯರನ್ನು ಹೆಚ್ಚಾಗಿ ರಾಜಸ್ಥಾನಕ್ಕೆ ಕರೆತರಲಾಗುತ್ತದೆ ಎಂದು ಸ್ಥಳೀಯರು ಮತ್ತು ಈ ಪ್ರದೇಶದಲ್ಲಿ ಕೆಲಸ ಮಾಡುವ ಕಾರ್ಯಕರ್ತರು ಹೇಳುತ್ತಾರೆ.
ರಾಜಸ್ಥಾನದಲ್ಲಿ ಹೆಣ್ಣು ಹುಡುಕುವುದು ಕಷ್ಟ – ಸಿಎಸ್ಆರ್ (child sex ratio) - ಮಕ್ಕಳ ಲಿಂಗ ಅನುಪಾತ (0 ರಿಂದ 6 ವಯೋಮಾನದವರು) ವಿಷಯದಲ್ಲಿ ರಾಜ್ಯವು ಅತ್ಯಂತ ಕೆಟ್ಟ ಸ್ಥಿತಿಯಲ್ಲಿದೆ. ರಾಜ್ಯದ 33 ಜಿಲ್ಲೆಗಳಲ್ಲಿ, ಜುಂಜುನುನ್ ಮತ್ತು ಸಿಕರ್ ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದೆ. ಜುಂಜುನುನ್ ಗ್ರಾಮೀಣ ಪ್ರದೇಶದ ಸಿಎಸ್ಆರ್ 1,000 ಹುಡುಗರಿಗೆ 832 ಬಾಲಕಿಯರಿದ್ದು, ಇದು 1,000 ಹುಡುಗರಿಗೆ 923 ಹುಡುಗಿಯರ ರಾಷ್ಟ್ರೀಯ ಅಂಕಿ-ಅಂಶಕ್ಕಿಂತಲೂ ಕಡಿಮೆಯಾಗಿದೆ (2011ರ ಜನಗಣತಿಯ ಅಂಕಿಅಂಶಗಳ ಪ್ರಕಾರ.)
ಮಾನವ ಹಕ್ಕುಗಳ ಕಾರ್ಯಕರ್ತ ವಿಕಾಸ್ ಕುಮಾರ್ ರಹರ್, ಜಿಲ್ಲೆಯಲ್ಲಿ ಲಿಂಗ ಆಯ್ಕೆಯು ಗಂಡು ಮಕ್ಕಳಿಗೆ ಅನುಕೂಲಕರವಾಗಿರುವುದರಿಂದ ಹೆಣ್ಣುಮಕ್ಕಳ ಕೊರತೆಯುಂಟಾಗಿದೆ ಎಂದು ಹೇಳುತ್ತಾರೆ. "ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಸಿಗದಿರುವ ಸ್ಥಿತಿಯು ಪೋಷಕರನ್ನು ಸುಲಭವಾಗಿ ಲಭ್ಯವಿರುವ ದಲ್ಲಾಳಿಗಳನ್ನು ಸಂಪರ್ಕಿಸುವಂತೆ ಮಾಡುತ್ತದೆ. ದಲ್ಲಾಳಿಗಳು ಇತರ ರಾಜ್ಯಗಳ ಬಡ ಹಿನ್ನೆಲೆಯ ಹುಡುಗಿಯರನ್ನು ಅಂತಹ ಕುಟುಂಬಗಳಿಗೆ ಕೊಡಿಸುತ್ತಾರೆ" ಎಂದು ಅವರು ಹೇಳುತ್ತಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್ಎಫ್ಎಚ್ಎಸ್ -5 ) ಯಲ್ಲಿ ದಾಖಲಾದ 2019-2020ರ ಇತ್ತೀಚಿನ ಸಂಖ್ಯೆಗಳ ಪ್ರಕಾರ, ರಾಜಸ್ಥಾನದಲ್ಲಿ ಕಳೆದ ಐದು ವರ್ಷಗಳಲ್ಲಿ ಜನಿಸಿದ ಮಕ್ಕಳ ಜನನದ ಲಿಂಗ ಅನುಪಾತವು ನಗರ ಪ್ರದೇಶಗಳಲ್ಲಿ 1,000 ಪುರುಷರಿಗೆ 940 ಮಹಿಳೆಯರು. ಗ್ರಾಮೀಣ ಪ್ರದೇಶಗಳಲ್ಲಿ ಈ ಸಂಖ್ಯೆ 1,000 ಪುರುಷರಿಗೆ 879 ಮಹಿಳೆಯರಿಗೆ ಇಳಿಯುತ್ತದೆ. ಜುಂಜುನುನ್ ಜಿಲ್ಲೆಯ ಒಟ್ಟು ಜನಸಂಖ್ಯೆಯ ಶೇಕಡಾ 70ಕ್ಕಿಂತಲೂ ಹೆಚ್ಚು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
ರಹರ್ ಅವರು ಸ್ಥಳೀಯ ಸರ್ಕಾರೇತರ ಸಂಸ್ಥೆ ಶಿಕ್ಷಿತ್ ರೋಜ್ಗಾರ್ ಕೇಂದ್ರ ಪ್ರಬಂಧಕ್ ಸಮಿತಿ (ಎಸ್ಆರ್‌ಕೆಪಿಎಸ್) ಯಲ್ಲಿ ಸಂಯೋಜಕರಾಗಿದ್ದಾರೆ. "ಜನರು [ಮದುವ ಹೆಣ್ಣಿಗೆ] 20,000 ರೂ.ಗಳಿಂದ ಹಿಡಿದು 2.5 ಲಕ್ಷ ರೂ.ಗಳವರೆಗೆ ಹಣವನ್ನು ನೀಡುತ್ತಾರೆ, ಇದರಲ್ಲಿ ದಲ್ಲಾಳಿಗಳ ಕಮಿಷನ್ ಕೂಡಾ ಸೇರಿದೆ" ಎಂದು ಅವರು ಹೇಳುತ್ತಾರೆ.
ಆದರೆ ಯಾಕೆ?
“ಹಣ ಕೊಡದೆ ಯಾರನ್ನಾದರೂ [ಹೆಣ್ಣು] ತರುವುದಾದರೂ ಹೇಗೆ?” ಎಂದು ಕೇಳುತ್ತಾರೆ ಯಶೋಧಾ. “ಇಲ್ಲಿನ ಜನರು ಸರ್ಕಾರಿ ಕೆಲಸವಿಲ್ಲದಿದ್ದರೆ ನಿಮ್ಮ ಮಗನಿಗೆ ಹೆಣ್ಣು ಕೊಡುವುದಿಲ್ಲ.”
ಯಶೋಧಾರ ಇಬ್ಬರು ಗಂಡು ಮಕ್ಕಳು ಅಪ್ಪನಿಗೆ ಕೃಷಿಯಲ್ಲಿ ಸಹಾಯ ಮಾಡುವುದು ಮತ್ತು ಮನೆಯಲ್ಲಿ ಆರು ಜಾನುವಾರುಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಾರೆ. ಕುಟುಂಬವು 18 ಬಿಘಾ ಭೂಮಿಯನ್ನು ಹೊಂದಿದ್ದು ಅಲ್ಲಿ ಅವರು ಏಕದಳ ಧಾನ್ಯ, ಗೋಧಿ, ಹತ್ತಿ ಮತ್ತು ಸಾಸಿವೆಯನ್ನು ಬೆಳೆಯುತ್ತಾರೆ. (ರಾಜಸ್ಥಾನದ ಈ ಭಾಗದಲ್ಲಿ ಒಂದು ಬಿಘಾ 0.625 ಎಕರೆಗೆ ಸಮ).
“ನನ್ನ ಮಕ್ಕಳಿಗೆ ಇಲ್ಲಿ ಹೆಣ್ಣು ಸಿಗಲಿಲ್ಲ, ಹೀಗಾಗಿ ಹೊರಗಿನಿಂದ [ಕಳ್ಳಸಾಗಣೆ ಮೂಲಕ] ತರಬೇಕಾಯಿತು. ನಮ್ಮ ಪಾಲಿ ಇದ್ದಿದ್ದು ಅದೊಂದೇ ಆಯ್ಕೆ. ಎಷ್ಟು ದಿನಗಳ ಕಾಲ ನಮ್ಮ ಮಕ್ಕಳು ಮದುವೆಯಾಗದೆ ಉಳಿದಿರುವುದನ್ನು ನೋಡಲು ಸಾಧ್ಯ?” ಎಂದು ಕೇಳುತ್ತಾರೆ ಯಶೋಧಾ.
ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಡ್ರಗ್ಸ್ ಅಂಡ್ ಕ್ರೈಮ್ (ಯುಎನ್ಒಡಿಸಿ) ವ್ಯಕ್ತಿಯ ಕಳ್ಳಸಾಗಣೆಯನ್ನು ತಡೆಗಟ್ಟುವ, ನಿಗ್ರಹಿಸುವ ಮತ್ತು ಶಿಕ್ಷಿಸುವ ನಿಯಮಾವಳಿಯಲ್ಲಿ ಮಾನವ ಕಳ್ಳಸಾಗಣೆಯನ್ನು "ಲಾಭಕ್ಕಾಗಿ ಶೋಷಿಸುವ ಉದ್ದೇಶದಿಂದ ಬಲವಂತ, ವಂಚನೆ ಅಥವಾ ಮೋಸದ ಮೂಲಕ ಜನರನ್ನು ನೇಮಕ ಮಾಡುವುದು, ಸಾಗಿಸುವುದು, ವರ್ಗಾವಣೆ, ಆಶ್ರಯ ನೀಡುವುದು ಅಥವಾ ಸ್ವೀಕರಿಸುವುದು" ಎಂದು ವ್ಯಾಖ್ಯಾನಿಸುತ್ತದೆ. ಭಾರತದಲ್ಲಿ ಇದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 370ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಮತ್ತು 7ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಹೊಂದಿರುತ್ತದೆ.
"ರಾಜಸ್ಥಾನದ ಪ್ರತಿ ಜಿಲ್ಲೆಯಲ್ಲೂ ಮಾನವ ಕಳ್ಳಸಾಗಣೆ ವಿರೋಧಿ ಘಟಕವನ್ನು (ಎಎಚ್ಟಿಯು) ಸ್ಥಾಪಿಸಲಾಗಿದೆ" ಎಂದು ಜುಂಜುನು ಪೊಲೀಸ್ ವರಿಷ್ಠಾಧಿಕಾರಿ ಮೃದುಲ್ ಕಚವಾ ಈ ಅಭ್ಯಾಸವನ್ನು ನಿಗ್ರಹಿಸುವ ಪ್ರಯತ್ನಗಳ ಬಗ್ಗೆ ಪರಿಯೊಂದಿಗೆ ಮಾತನಾಡುತ್ತಾ ಹೇಳುತ್ತಾರೆ. "ಕೆಲವು ತಿಂಗಳ ಹಿಂದೆ, ಬಾಲಕಿಯ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ನಮ್ಮನ್ನು ಸಂಪರ್ಕಿಸಿದರು. ನಾವು ತನಿಖೆ ನಡೆಸಿದ್ದೇವೆ, ಹುಡುಗಿಯನ್ನು ರಕ್ಷಿಸಿ ಅವಳನ್ನು ವಾಪಸ್ ಕಳುಹಿಸಿದ್ದೇವೆ. ಆದರೆ ಕೆಲವು ಸಂದರ್ಭಗಳಲ್ಲಿ, ಕಳ್ಳಸಾಗಣೆ ಮಾಡಲ್ಪಟ್ಟ ಮಹಿಳೆಯರು ಹಿಂತಿರುಗಲು ನಿರಾಕರಿಸುತ್ತಾರೆ. ಅವರು ತಮ್ಮಿಚ್ಛೆಯೆಂತೆ ಇಲ್ಲಿರುವುದಾಗಿ ಹೇಳುತ್ತಾರೆ. ನಂತರ ಪ್ರಕರಣ ಜಟಿಲವಾಗುತ್ತದೆ."
ರೂಮಾ ಅವರಿಗೆ ತನ್ನ ಕುಟುಂಬವನ್ನು ಭೇಟಿ ಮಾಡುವ ಅದಮ್ಯ ಬಯಕೆಯಿದೆ. ಆದರೆ ಅತ್ತೆ-ಮಾವನೇ ಜೊತೆಯಲ್ಲೇ ಉಳಿಯಬಯಸುತ್ತಾರೆ. “ನಾನು ಇಲ್ಲಿ ಎಲ್ಲ ಹುಡುಗಿಯರಂತೆ ಸಂತೋಷವಾಗಿದ್ದೇನೆ. ಇಲ್ಲಿ ನನಗೆ ಯಾವುದೇ ಸಮಸ್ಯೆಯಿಲ್ಲ. ಹೌದು ಆಗಾಗ ಮನೆಗೆ ಹೋಗಿ ಬರಲು ಸಾಧ್ಯವಾಗುವುದಿಲ್ಲ. ಆದಷ್ಟೂ ಬೇಗ ಅಣ್ಣ ಮತ್ತು ಕುಟುಂಬದವರನ್ನು ನೋಡುವ ಬಯಕೆಯಿದೆ.” ಉಳಿದಂತೆ ರೂಮಾ ತನ್ನ ಅತ್ತೆ-ಮಾವನ ಮನೆಯಲ್ಲಿ ಯಾವುದೇ ದೈಹಿಕ ಅಥವಾ ಮೌಖಿಕ ನಿಂದನೆಯನ್ನು ಎದುರಿಸಿಲ್ಲ.
ರೂಮಾ ಪಾಲಿಗೆ ಬದುಕು ಎಲ್ಲಾ ʼಸಾಮಾನ್ಯ ಹುಡುಗಿಯರʼ ಬದುಕಿನಂತಿದೆಯಾದರೂ, 2019ರಲ್ಲಿ ಪಶ್ಚಿಮ ಬಂಗಾಳದಿಂದ ಕಳ್ಳಸಾಗಣೆಯಾದ ಇಪ್ಪತ್ತರ ಹರೆಯದ ಸೀತಾ (ಇದು ಅವರ ನಿಜವಾದ ಹೆಸರಲ್ಲ) ಅವರ ಬದುಕು ಹಾಗಿಲ್ಲ ಮತ್ತು ಅವರಿಗೆ ತನ್ನ ಬದುಕಿನ ಕತೆ ಹಂಚಿಕೊಳ್ಳುವ ಧೈರ್ಯವೂ ಇಲ್ಲ. “ನೀವು ನನ್ನ ಜಿಲ್ಲೆಯ ಹೆಸರನ್ನಾಗಲೀ, ನಮ್ಮ ಕುಟುಂಬದವರ ಹೆಸರನ್ನಾಗಲೀ ಬಳಸುವುದು ನನಗಿಷ್ಟವಿಲ್ಲ” ಎನ್ನುತ್ತಾರವರು.
“2019ರಲ್ಲಿ ರಾಜಸ್ಥಾನದ ದಲ್ಲಾಳಿಯೊಬ್ಬರು ಜುಂಜುನುವಿನಿಂದ ಒಂದು ವಿವಾಹದ ಪ್ರಸ್ತಾಪವನ್ನು ತಂದು ನಮ್ಮ ಕುಟುಂಬವನ್ನು ಭೇಟಿಯಾದರು. ಹುಡುಗನ ಕುಟುಂಬದ ಬಳಿ ಸಾಕಷ್ಟು ಹಣವಿದ್ದು ಹುಡುಗನಿಗೆ ಒಳ್ಳೆಯ ಕೆಲಸವಿದೆಯೆಂದು ಸುಳ್ಳು ಹೇಳಿದರು. ನಂತರ ನನ್ನ ಅಪ್ಪನಿಗೆ 1.5 ಲಕ್ಷ ರೂಪಾಯಿ ಹಣ ನೀಡಿ ನನ್ನನ್ನ ಆ ಕೂಡಲೇ ಕಳುಹಿಸುವಂತೆ ಒತ್ತಾಯಿಸಿದರು.” ಮದುವೆಯು ರಾಜಸ್ಥಾನದಲ್ಲಿ ನಡೆಯಲಿದ್ದು, ಅದರ ಫೋಟೊಗಳನ್ನು ಕಳುಹಿಸುವುದಾಗಿ ಆ ದಲ್ಲಾಳಿ ಹೇಳಿದ್ದರು.
ಸೀತಾ ಅದೇ ದಿನ ತನ್ನ ತಂದೆಗೆ ಇದರಿಂದ ಸಹಾಯವಾಗುತ್ತದೆಂದು ಭಾವಿಸಿ ಅದೇ ದಿನ ಅವರೊಡನೆ ಹೊರಟರು. ಆಕೆಯ ತಂದೆಗೆ ಸಾಕಷ್ಟು ಸಾಲವಿತ್ತು ಮತ್ತು ನಾಲ್ಕು ಚಿಕ್ಕ-ಚಿಕ್ಕ ಮಕ್ಕಳಿದ್ದರು.
“ಎರಡು ದಿನಗಳ ನಂತರ ನನ್ನನ್ನು ಒಂದು ಕೋಣೆಯೊಳಗೆ ಕೂಡಿ ಹಾಕಿ ಗಂಡಸೊಬ್ಬನನ್ನು ಒಳಗೆ ಕಳುಹಿಸಲಾಯಿತು. ನಾನು ಅವನ ನನ್ನ ಗಂಡನಿರಬಹುದೆಂದು ಭಾವಿಸಿದೆ. ಅವನು ನನ್ನ ಬಟ್ಟೆಗಳನು ಎಳೆಯತೊಡಗಿದ. ನಾನು ಅವನ ಬಳಿ ಮದುವೆಯ ಕುರಿತು ಕೇಳಿದಾಗ ಆತ ನನಗೆ ಕಪಾಳಕ್ಕೆ ಹೊಡೆದ. ಅಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಯಿತು. ಮುಂದಿನ ಎರಡು ದಿನಗಳನ್ನು ಅದೇ ಕೋಣೆಯಲ್ಲಿ ಕನಿಷ್ಟ ಆಹಾರದೊಂದಿಗೆ ಕಳೆದೆ. ನಂತರ ಅಲ್ಲಿಂದ ನನ್ನನ್ನು ನನ್ನ ಅತ್ತೆ-ಮಾವನ ಮನೆಗೆ ಕರೆದೊಯ್ಯಲಾಯಿತು. ಆಗ ನನಗೆ ನನ್ನ ಗಂಡ ಬೇರೆ ವ್ಯಕ್ತಿ ಮತ್ತು ಅವನು ನನಗಿಂತಲೂ ಎಂಟು ವರ್ಷ ದೊಡ್ಡವನು ಎನ್ನುವುದು ತಿಳಿಯಿತು.”
“ಇಲ್ಲಿ ಒಂದೊಂದು ವಯಸ್ಸು ಮತ್ತು ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ದಲ್ಲಾಳಿಗಳಿದ್ದಾರೆ” ಎನ್ನುತ್ತಾರೆ ಜುಂಜುನು ಎಸ್ಆರ್‌ಕೆಪಿಎಸ್ ಸಂಸ್ಥಾಪಕ ರಾಜನ್ ಚೌಧರಿ. “ನಾನೊಮ್ಮೆ ದಲ್ಲಾಳಿಯೊಬ್ಬನ ಬಳಿ ʼನನಗೀಗ 60 ವರ್ಷ. ನನಗೊಬ್ಬಳು ಹುಡುಗಿ ಸಿಗಬಹುದೇʼ ಎಂದು ಕೇಳಿದ್ದೆ. ಆಶ್ಚರ್ಯವೆಂಬಂತೆ ಅವನು ʼಯಾಕೆ ಸಿಗುವುದಿಲ್ಲ?ʼ ಕೇಳಿದ್ದ. ಆದರೆ ಅದಕ್ಕೆ ಹೆಚ್ಚು ಹಣ ಕೊಡಬೇಕಾಗುತ್ತದೆ ಆದರೆ ಕೆಲಸ ಸುಲಭವಾಗಿ ಆಗುತ್ತದೆ ಎಂದಿದ್ದ. ಅವನು ಅದಕ್ಕೆ ಹೇಳಿದ ಉಪಾಯವೆಂದರೆ ಯುವಕನೊಬ್ಬನನ್ನು ಮದುವೆ ಗಂಡೆಂದು ಹೇಳಿ ಕರೆದುಕೊಂಡು ಹೋಗುವುದು.” ಆ ಹುಡುಗನನ್ನು ನೋಡಿ ಹೆಣ್ಣಿನ ಮನೆಯವರು ಹುಡುಗಿಯನ್ನು ಕಳುಹಿಸಿಕೊಟ್ಟ ನಂತರ ದಲ್ಲಾಳಿ ರಾಜಸ್ಥಾನಕ್ಕೆ ಬಂದು ಅವಳನ್ನು ಇನ್ನೊಬ್ಬರಿಗೆ ಮದುವೆ ಮಾಡಿಸುತ್ತಾನೆ.
ಜುಂಜುನುವಿನಲ್ಲಿನ ಹೆಣ್ಣುಮಕ್ಕಳಿ ಕಳ್ಳಸಾಗಣೆಗೆ ಮುಖ್ಯ ಕಾರಣ ಜಿಲ್ಲೆಯ ಲಿಂಗಾನುಪಾತ ಎನ್ನುತ್ತಾರೆ ರಾಜನ್. “ಹೆಣ್ಣು ಭ್ರೂಣಗಳನ್ನು ಗುರಿಯಾಗಿಸಿಕೊಂಡ ಕಾನೂನು ಬಾಹಿರ ಲಿಂಗ ಪರೀಕ್ಷೆ ಜಿಲ್ಲೆಯ ಹೊರಗೆ ಮತ್ತು ಒಳಗೆ ಸುಲಭಾವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ” ಎಂದು ಅವರು ಹೇಳುತ್ತಾರೆ.
ವರ್ಷಾ ಡಾಂಗೆ ರೂಮಾ ಅವರ ಮನೆಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಜುಂಜುನು ಜಿಲ್ಲೆಯ ಅಲ್ಸಿಸಾರ್ ಗ್ರಾಮದವರು. ಆಕೆಗೆ 2016ರಲ್ಲಿ ಅವರಿಗಿಂತಲೂ 15 ವರ್ಷಗಳಷ್ಟು ಹಿರಿಯ ವ್ಯಕ್ತಿಯೊಡನೆ ಮಾಡಿಸಲಾಯಿತು. ಅವರನ್ನು ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿರುವ ಅವರ ಮನೆಯಿಂದ ಪತಿಯ ಊರಿಗೆ ಕರೆತರಲಾಯಿತು.
“ಅವರು ನನಗಿಂತಲೂ ದೊಡ್ಡವರಾದರೂ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು” ಎನ್ನುತ್ತಾರೆ ವರ್ಷ. “ಇಲ್ಲಿಗೆ ಬಂದಾಗಿನಿಂದಲೂ ಅತ್ತೆ ತೊಂದರೆ ಕೊಡುತ್ತಿದ್ದರು. ಈಗ ಗಂಡ ತೀರಿಕೊಂಡಿರುವುದರಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ” ಎಂದು 32 ವರ್ಷದ ಈ ಮಹಿಳೆ ಹೇಳುತ್ತಾರೆ.
“ಯಂಹಾ ಕಾ ಏಕ್ ಬಿಚೌಲಿಯಾ ಥಾ ಜೋ ಎಮ್‌ಪಿ ಮೇ ಆತಾ ಥಾ. ಮೇರೆ ಘರ್ ವಾಲೋಂಕೇ ಪಾಸ್ ಪೈಸೇ ನಹೀ ಥೇ ದಹೇಜ್ ದೇನೇ ಕೇ ಲಿಯೇ, ತೋ ಉನ್ಹೋನೆ ಮುಜೆ ಭೇಜ್ ದಿಯಾ ಯಹಾಂ ಪರ್, ಬಿಚೌಲಿಯಾ ಕೇ ಸಾಥ್. [ರಾಜಸ್ಥಾನದ ದಲ್ಲಾಳಿಯೊಬ್ಬ ಆಗಾಗ ಮಧ್ಯಪ್ರದೇಶಕ್ಕೆ ಬರುತ್ತಿದ್ದ. ನಮ್ಮ ಮನೆಯವರ ಬಳಿ ವರದಕ್ಷಿಣೆ ಕೊಡಲು ಹಣವಿಲ್ಲದ ಕಾರಣ ಅವರು ನನ್ನನ್ನು ಆ ದಲ್ಲಾಳಿಯೊಡನೆ ಕಳುಹಿಸಿಕೊಟ್ಟರು.]” ಎನ್ನುತ್ತಾರೆ ಆಕೆ.
ಅವರು ಪಕ್ಕದ ಮನೆಯಲ್ಲಿ ಅವಿತು ನಮ್ಮೊಡನೆ ಮಾತನಾಡುತ್ತಿದ್ದರು: “ನನ್ನ ಸಾಸ್ [ಅತ್ತೆ] ಅಥವಾ ದೇವ್ರಾನಿ [ನಾದಿನಿ] ಇಲ್ಲಿಗೆ ಬಂದಾಗ ಈ ಬಗ್ಗೆ ನನ್ನ ಜೊತೆ ಮಾತನಾಡಬೇಡಿ. ಅವರಲ್ಲಿ ಒಬ್ಬರು ನಮ್ಮ ಮಾತುಗಳನ್ನು ಕೇಳಿಸಿಕೊಂಡರೂ ನನ್ನ ಬದುಕು ಇನ್ನಷ್ಟು ನರಕವಾಗುತ್ತದೆ.”
ʼರಾಜಸ್ಥಾನದ ದಲ್ಲಾಳಿಯೊಬ್ಬ ಆಗಾಗ ಮಧ್ಯಪ್ರದೇಶಕ್ಕೆ ಬರುತ್ತಿದ್ದ. ನಮ್ಮ ಮನೆಯವರ ಬಳಿ ಮದುವೆಗೆ ವರದಕ್ಷಿಣೆ ಕೊಡಲು ಹಣವಿಲ್ಲದ ಕಾರಣ ಅವರು ನನ್ನನ್ನು ಆ ದಲ್ಲಾಳಿಯೊಡನೆ ಕಳುಹಿಸಿಕೊಟ್ಟರುʼ
ಅವರ ನಾಲ್ಕು ವರ್ಷದ ಮಗ ಬಿಸ್ಕೆಟ್ ಬೇಕೆಂದು ಅಮ್ಮನನ್ನು ಪೀಡಿಸುತ್ತಿದ್ದ. ನಂತರ ಅವರ ಪಕ್ಕದ ಮನೆಯವರು ಮಗುವಿಗೆ ಬಿಸ್ಕೆಟ್ ಕೊಟ್ಟರು. “ಇವರು ಇಲ್ಲದೆ ಹೋಗಿದ್ದರೆ” ಎಂದು ತನ್ನ ಪಕ್ಕದ ಮನೆಯವರತ್ತ ತೋರಿಸುತ್ತಾ, “ನಾನು ನನ್ನ ಮಗು ಇಷ್ಟೊತ್ತಿಗೆ ಉಪವಾಸದಿಂದ ಸತ್ತು ಹೋಗಿರುತ್ತಿದ್ದೆವು. ನನ್ನ ನಾದಿನಿ ಮತ್ತು ನನ್ನ ಅಡುಗೆ ಮನೆ ಬೇರೆ ಬೇರೆಯಿದೆ. ನನ್ನ ಗಂಡ ತೀರಿಕೊಂಡಾಗಿನಿಂದ ಒಂದೊಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದೇವೆ.” ಎನ್ನುತ್ತಾ ವರ್ಷ ಕಣ್ಣೊರೆಸಿಕೊಂಡರು. ಅವರ ಗಂಡ 2022ರಲ್ಲಿ ತೀರಿಕೊಂಡಿದ್ದು ಅಂದಿನಿಂದ ಅವರು ಸೀಮಿತ ರೇಷನ್ ಬಳಸಿ ಅಡುಗೆ ಮಾಡುವ ಮೂಲಕ ದಿನ ದೂಡುತ್ತಿದ್ದಾರೆ.
“ದಿನ ದಿನವೂ ನನ್ನನ್ನು ಮನೆಯಿಂದ ಹೊರಹಾಕುವ ಪ್ರಯತ್ನಗಳು ನಡೆಯುತ್ತಿವೆ, ಅತ್ತೆ ನನಗೆ ಬದುಕುವ ಆಸೆಯಿದ್ದರೆ ಬೇರೊಬ್ಬರ ಚೂಡಾ ಧರಿಸಿ ಬದುಕು ಎನ್ನುತ್ತಾರೆ” ಎನ್ನುತ್ತಾರೆ ವರ್ಷ. ಚೂಡಾ ಎನ್ನುವುದು ರಾಜಸ್ಥಾನಿ ವಿಧವಾ ವಿವಾಹ ಪದ್ಧತಿಯಾಗಿದ್ದು, ಇದರಡಿ ವಿಧವೆಯನ್ನು ವರನ ಕುಟುಂಬ ಇನ್ನೊಬ್ಬ ವ್ಯಕ್ತಿಯೊಡನೆ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಲಾಗುತ್ತದೆ. ಇಲ್ಲಿ ಗಂಡಿನ ವಯಸ್ಸು ಲೆಕ್ಕಕ್ಕೆ ಬರುವುದಿಲ್ಲ. “ಅವರಿಗೆ ನಾನು ಗಂಡನ ಪಾಲಿನ ಆಸ್ತಿ ಕೇಳಬಹುದೆನ್ನುವ ಭಯ” ಎನ್ನುತ್ತಾ ವರ್ಷ ಅತ್ತೆಯ ವರ್ತನೆಯ ಹಿಂದಿನ ಕಾರಣವನ್ನು ತಿಳಿಸುತ್ತಾರೆ.
ಜಿಲ್ಲೆಯ ಹೆಚ್ಚಿನ ಭಾಗ ಗ್ರಾಮೀಣ ಪ್ರದೇಶವಾಗಿದ್ದು, ಇಲ್ಲಿನ ಜನಸಂಖ್ಯೆಯ 66 ಪ್ರತಿಶತದಷ್ಟು ಜನರು ಕೃಷಿಯಲ್ಲಿ ತೊಡಗಿದ್ದಾರೆ. ಆಕೆಯ ಪತಿಯೂ ಒಬ್ಬ ರೈತನಾಗಿದ್ದರು, ಮತ್ತು ವರ್ಷಾರ ಗಂಡನ ಮರಣದ ನಂತರ ಅವರ ಪಾಲಿನ ಜಮೀನಿನಲ್ಲಿ ಯಾರೂ ಕೃಷಿ ಮಾಡುತ್ತಿಲ್ಲ. ಕುಟುಂಬವು 20 ಬಿಘಾ ಭೂಮಿಯನ್ನು ಹೊಂದಿದ್ದು, ಇದನ್ನು ಇಬ್ಬರು ಸಹೋದರರು ಹಂಚಿಕೊಂಡಿದ್ದಾರೆ.
“ಹಮ್ ತುಮ್ಕೋ ಖರೀದ್ ಕೇ ಲಾಯೇ ಹೈ, ಢಾಯಿ ಲಾಖ್ ಮೇ. ಜೋ ಕಾಮ್ ಬೋಲಾ ಜಾಯೇ ವೋ ಕರ್ನಾ ಹೀ ಪಡೇಗಾ. [ನಾವು ನಿನ್ನನ್ನು ದುಡ್ಡು ಕೊಟ್ಟು ಖರೀದಿಸಿ ತಂದಿದ್ದೇವೆ. 2.5 ಲಕ್ಷ ಕೊಟ್ಟಿದ್ದೇವೆ. ನೀನು ನಾವು ಹೇಳಿದ ಕೆಲಸಗಳನ್ನು ಮಾಡಲೇಬೇಕು]” ಎಂದು ಅತ್ತೆ ಆಗಾಗ ನನ್ನನ್ನು ಕೆಣಕುತ್ತಿರುತ್ತಾರೆ ಎನ್ನುತ್ತಾರೆ ವರ್ಷಾ.
“ನಾನು “ಖರೀದಿ ಹುಯೀ” [ಖರೀದಿಸಲ್ಪಟ್ಟವಳು] ಎನ್ನುವ ಹಣೆಪಟ್ಟಿಯೊಡನೆ ಬದುಕುತ್ತಿದ್ದೇನೆ, ಮತ್ತು ಅದೇ ಹಣೆ ಪಟ್ಟಿಯೊಡನೆ ಸಾಯಲಿದ್ದೇನೆ.”
*****
ಇದೆಲ್ಲ ನಡೆದು ಆರು ತಿಂಗಳ ನಂತರ 2022ರ ಡಿಸೆಂಬರ್ ತಿಂಗಳಿನಲ್ಲಿ ಪರಿಯೊಂದಿಗೆ ಫೋನ್ ಮೂಲಕ ಮಾತನಾಡಿದ ವರ್ಷಾರ ದನಿಯಲ್ಲಿ ಬೇರೆಯದೇ ಲಯವಿತ್ತು. "ಆಜ್ ಸುಬಹ್ ಹಮ್ ಅಪ್ನೆ ಘರ್ ಆ ಗಯೇ ಹೈ” [ಇಂದು ಬೆಳಿಗ್ಗೆ ನಾವು ನಮ್ಮ ತವರು ಮನೆಗೆ ಮರಳಿದೆವು] ಎಂದು ಹೇಳಿದರು. ಅವರ ಗಂಡನ ಮನೆಯಲ್ಲಿ ಮೈದುನನೊಡನೆ ಬದುಕು ಅಥವಾ ಮನೆ ಬಿಟ್ಟು ಹೊರಡು ಎಂದು ಹಿಂಸೆ ಮಾಡುತ್ತಲೇ ಇದ್ದರು. “ಅವರು ನನ್ನನ್ನು ಹೊಡೆದರು. ಹೀಗಾಗಿ ನಾನು ಮನೆ ಬಿಟ್ಟು ಹೊರಡಬೇಕಾಯಿತು” ಎಂದು ಅವರು ಹೇಳಿದರು.
ಅವರು ಇನ್ನು ಸಹಿಸುವುದು ಸಾಧ್ಯವಿಲ್ಲವೆಂದು ತೀರ್ಮಾನಿಸಿದರು. ಅವರ ಮೈದುನ ಈಗಾಗಲೇ ಮದುವೆಯಾಗಿ ತನ್ನ ಹೆಂಡತಿಯೊಡನೆ ಬದುಕುತ್ತಿದ್ದ. “ನಮ್ಮ ಊರಿನಲ್ಲಿ ವಿಧವೆಯವರು ಮನೆಯಲ್ಲಿನ ಯಾವುದಾದರೂ ಗಂಡಿನ ಜೊತೆ ಮದುವೆಯಾಗುವುದು ಸರ್ವೇಸಾಮಾನ್ಯ. ಈ ವಿಷಯದಲ್ಲಿ ವಯಸ್ಸು, ವೈವಾಹಿಕ ಸ್ಥಿತಿ ಹೀಗೆ ಯಾವುದೂ ಪರಿಗಣನೆಗೆ ಬರುವುದಿಲ್ಲ” ಎನ್ನುತ್ತಾರೆ ವರ್ಷ.
ವ್ಯಾಕ್ಸಿನೇಷನ್ ನೆಪ ಹೇಳಿ ವರ್ಷ ಮಗನೊಡನೆ ಮನೆ ಬಿಟ್ಟರು. ಮನೆಯಿಂದ ಹೊರಬಂದವರು ಮಧ್ಯಪ್ರದೇಶಕ್ಕೆ ಹೋಗುವ ರೈಲನ್ನು ಹಿಡಿದರು. “ಅಕ್ಕಪಕ್ಕದ ಮನೆಯ ಹೆಂಗಸರು ರೈಲು ಚಾರ್ಜಿಗಾಗುವಷ್ಟು ಹಣ ಒಟ್ಟು ಮಾಡಿಕೊಟ್ಟರು. ಆದರೆ ದಾರಿ ಖರ್ಚಿಗೆ ನನ್ನ ಬಳಿ ಹಣವಿದ್ದಿರಲಿಲ್ಲ.” ಎಂದು ಅವರು ಹೇಳುತ್ತಾರೆ
"ನಾನು ಒಮ್ಮೆ 100 [ಪೊಲೀಸ್] ಡಯಲ್ ಮಾಡುವ ಮೂಲಕ ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದ್ದೆ ಆದರೆ ಅವರು ಪಂಚಾಯತ್ ಸಹಾಯ ಮಾಡುತ್ತದೆ ಎಂದು ಹೇಳಿದರು. ನನ್ನ ಪ್ರಕರಣವು ಪಂಚಾಯತ್ ಬಳಿ ಹೋಯಿತಾದರೂ ಅವರು ಏನೂ ಸಹಾಯ ಮಾಡಲಿಲ್ಲ."
ಹೊಸ ನಂಬಿಕೆ ಮತ್ತು ಅಧಿಕಾರಯುತ ದನಿಯಲ್ಲಿ ಮಾತನಾಡುತ್ತಾ, “ನಾನು ನಿಜವಾಗಿಯೂ ನನ್ನಂತಹ ಹೆಂಗಸರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆಯೆನ್ನುವುದನ್ನು ಈ ಜಗತ್ತು ನೋಡಬೇಕೆಂದು ಬಯಸುತ್ತೇನೆ” ಎಂದು ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು