ಸುಡುತ್ತಿರುವ ನನ್ನ ದೇಹ
ʼದುರ್ಗಾ ದುರ್ಗಾʼ ಎನ್ನುತ್ತಿದೆ,
ನಿನ್ನದೊಂದು ಸಾಂತ್ವನಕ್ಕಾಗಿ
ಎರಗಿ ಬೇಡುತ್ತಿರುವೆ ತಾಯೇ…
ದುರ್ಗಾದೇವಿಯ ಗುಣಗಾನ ಮಾಡುತ್ತಿದ್ದ ವಿಜಯ್ ಚಿತ್ರಕಾರ್ ಅವರ ದನಿ ತಾರಕಕ್ಕೆ ಏರುತ್ತಿತ್ತು. ಇಂತಹ ಕಲಾವಿದರು ಮೊದಲು ಹಾಡನ್ನು ಬರೆಯುತ್ತಾರೆ ನಂತರ ಚಿತ್ರ ಬಿಡಿಸುತ್ತಾರೆ – ಸುಮಾರು 14 ಅಡಿಗಳ ತನಕ ಇರುತ್ತದೆ – ಇದನ್ನು ಸಂಗೀತ ಮತ್ತು ಕತೆಯೊಂದಿಗೆ ನೋಡುಗರೆದುರು ಪ್ರಸ್ತುತಪಡಿಸಲಾಗುತ್ತದೆ.
41 ವರ್ಷದ ವಿಜಯ್ ಜಾರ್ಖಂಡ್ ರಾಜ್ಯಸ ಪುರ್ಬಿ ಸಿಂಗ್ಭುಮ್ ಜಿಲ್ಲೆಯ ಅಮಾದೊಬಿ ಗ್ರಾಮದ ನಿವಾಸಿ. ಪೈಟ್ಕರ್ ವರ್ಣಚಿತ್ರಗಳು ಸ್ಥಳೀಯ ಸಂತಾಲಿ ಕಥೆಗಳು, ಗ್ರಾಮೀಣ ಜೀವನಶೈಲಿ, ಪ್ರಕೃತಿ ಮತ್ತು ಪುರಾಣಗಳನ್ನು ಆಧರಿಸಿವೆ ಎಂದು ಅವರು ಹೇಳುತ್ತಾರೆ. "ನಮ್ಮ ಕಲೆಯ ಮುಖ್ಯ ವಿಷಯ ಗ್ರಾಮೀಣ ಸಂಸ್ಕೃತಿ; ನಮ್ಮ ಸುತ್ತಲೂ ಕಾಣುವ ವಸ್ತುಗಳನ್ನು ನಾವು ನಮ್ಮ ಕಲೆಯಲ್ಲಿ ಚಿತ್ರಿಸುತ್ತೇವೆ" ಎಂದು 10 ವರ್ಷದವರಿದ್ದಾಗಿನಿಂದ ಪೈಟ್ಕರ್ ವರ್ಣಚಿತ್ರಗಳನ್ನು ರಚಿಸುತ್ತಿರುವ ವಿಜಯ್ ಹೇಳುತ್ತಾರೆ. "ಕರ್ಮ ನೃತ್ಯ, ಬಹಾ ನೃತ್ಯ, ಅಥವಾ ರಾಮಾಯಣ, ಮಹಾಭಾರತದ ಚಿತ್ರಕಲೆ, ಹಳ್ಳಿಯ ದೃಶ್ಯ..." ಎಂದು ಸಂತಾಲಿ ಚಿತ್ರಕಲೆಯ ವಿವಿಧ ಭಾಗಗಳನ್ನು ಅವರು ವಿವರಿಸುತ್ತಾ, "ಇದು ಮಹಿಳೆಯರು ಮನೆಕೆಲಸಗಳನ್ನು ಮಾಡುವುದನ್ನು, ಗಂಡಸರು ಎತ್ತುಗಳೊಂದಿಗೆ ಹೊಲದಲ್ಲಿ ದುಡಿಯುವುದು ಮತ್ತು ಆಕಾಶದಲ್ಲಿನ ಪಕ್ಷಿಗಳನ್ನು ತೋರಿಸುತ್ತದೆ" ಎಂದು ನಮಗೆ ಹೇಳಿದರು.
"ನಾನು ಈ ಕಲೆಯನ್ನು ನನ್ನ ಅಜ್ಜನಿಂದ ಕಲಿತಿದ್ದು. ಅವರು ಬಹಳ ಪ್ರಸಿದ್ಧ ಕಲಾವಿದರಾಗಿದ್ದರು, ಮತ್ತು ಆಗ ಜನರು ಕಲ್ಕತ್ತಾದಿಂದ [ಕೋಲ್ಕತ್ತಾ] ಅವರ ಸಂಗೀತವನ್ನು ಕೇಳಲು [ಅವರ ಚಿತ್ರಕಲೆಯನ್ನು ನೋಡಲು] ಬರುತ್ತಿದ್ದರು." ವಿಜಯ್ ಅವರ ಕುಟುಂಬದ ಅನೇಕ ತಲೆಮಾರುಗಳು ಪೈಟ್ಕರ್ ವರ್ಣಚಿತ್ರಕಾರರಾಗಿದ್ದು, "ಪಾಟ್ ಯುಕ್ತ್ ಆಕಾರ್, ಮಾನೆ ಪೈಟಿಕರ್, ಇಸಿಲಿಯೇ ಪೈಟ್ಕರ್ ಪೇಂಟಿಂಗ್ ಅಯಾ [ಇದರ ಆಕಾರವು ಸುರುಳಿಯಂತೆ ಇರುತ್ತಿತ್ತು, ಆದ್ದರಿಂದ ಇದಕ್ಕೆ ಪೈಟ್ಕರ್ ಚಿತ್ರಕಲೆ ಎಂಬ ಹೆಸರು ಬಂದಿತು] ಎಂದು ಅವರು ಹೇಳುತ್ತಾರೆ.
ಪೈಟ್ಕರ್ ಕಲೆ ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಹುಟ್ಟಿಕೊಂಡಿತು. ಇದು ಕಥೆ ಹೇಳುವಿಕೆಯನ್ನು ಸಂಕೀರ್ಣ ದೃಶ್ಯಗಳೊಂದಿಗೆ ಸಂಯೋಜಿತಗೊಂಡಿರುವ ಪಾಂಡುಲಿಪಿ (ಹಸ್ತಪ್ರತಿ ಸುರುಳಿಗಳು) ಎಂದು ಕರೆಯಲ್ಪಡುವ ಪ್ರಾಚೀನ ರಾಜ ಕಲೆಯಿಂದ ಪ್ರಭಾವಿತವಾಗಿದೆ. "ಈ ಕಲಾ ಪ್ರಕಾರವು ಎಷ್ಟು ಹಳೆಯದು ಎಂದು ನಿರ್ಧರಿಸುವುದು ತುಂಬಾ ಕಷ್ಟ, ಏಕೆಂದರೆ ಇದು ತಲೆಮಾರಿನಿಂದ ತಲೆಮಾರಿಗೆ ರವಾನಿಸಲ್ಪಟ್ಟಿದೆ, ಮತ್ತು ಅದರ ಬಗ್ಗೆ ಯಾವುದೇ ಲಿಖಿತ ಪುರಾವೆಗಳಿಲ್ಲ" ಎಂದು ರಾಂಚಿ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮತ್ತು ಬುಡಕಟ್ಟು ಜಾನಪದ ತಜ್ಞ ಪ್ರೊಫೆಸರ್ ಪುರುಷೋತ್ತಮ್ ಶರ್ಮಾ ಹೇಳುತ್ತಾರೆ.
ಅಮಾದೊಬಿಯಲ್ಲಿ ಅನೇಕ ಪೈಟ್ಕರ್ ಕಲಾವಿದರಿದ್ದಾರೆ ಮತ್ತು 71 ವರ್ಷದ ಅನಿಲ್ ಚಿತ್ರಕಾರ್ ಗ್ರಾಮದ ಅತ್ಯಂತ ಹಿರಿಯ ವರ್ಣಚಿತ್ರಕಾರರು. "ನನ್ನ ಪ್ರತಿಯೊಂದು ವರ್ಣಚಿತ್ರದಲ್ಲೂ ಒಂದು ಹಾಡು ಇರುತ್ತದೆ. ಮತ್ತು ನಾವು ಆ ಹಾಡನ್ನು ಹಾಡುತ್ತೇವೆ" ಎಂದು ಅನಿಲ್ ವಿವರಿಸುತ್ತಾರೆ. ಪ್ರಮುಖ ಸಂತಾಲಿ ಉತ್ಸವದಲ್ಲಿ ಕರ್ಮ ನೃತ್ಯದ ಸ್ಕ್ರಾಲ್ ವರ್ಣಚಿತ್ರವನ್ನು ಪರಿಗೆ ತೋರಿಸಿದ ಅವರು, "ಒಮ್ಮೆ ಕಥೆ ನೆನಪಿಗೆ ಬಂದರೆ, ನಾವು ಅದನ್ನು ಚಿತ್ರಿಸುತ್ತೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಹಾಡನ್ನು ಬರೆಯುವುದು, ನಂತರ ಚಿತ್ರಕಲೆಯನ್ನು ಮಾಡುವುದು ಮತ್ತು ಅಂತಿಮವಾಗಿ ಅದನ್ನು ಜನರಿಗೆ ಹಾಡುವುದು."
ಅಮಾದೊಬಿಯಲ್ಲಿ ಅನೇಕ ಪೈಟ್ಕರ್ ಕಲಾವಿದರಿದ್ದಾರೆ ಮತ್ತು 71 ವರ್ಷದ ಅನಿಲ್ ಚಿತ್ರಕಾರ್ ಗ್ರಾಮದ ಅತ್ಯಂತ ಹಿರಿಯ ವರ್ಣಚಿತ್ರಕಾರರು. "ನನ್ನ ಪ್ರತಿಯೊಂದು ವರ್ಣಚಿತ್ರದಲ್ಲೂ ಒಂದು ಹಾಡು ಇರುತ್ತದೆ. ಮತ್ತು ನಾವು ಆ ಹಾಡನ್ನು ಹಾಡುತ್ತೇವೆ" ಎಂದು ಅನಿಲ್ ವಿವರಿಸುತ್ತಾರೆ. ಪ್ರಮುಖ ಸಂತಾಲಿ ಉತ್ಸವದಲ್ಲಿ ಕರ್ಮ ನೃತ್ಯದ ಸುರುಳಿ ವರ್ಣಚಿತ್ರವನ್ನು ಪರಿಗೆ ತೋರಿಸಿದ ಅವರು, "ಒಮ್ಮೆ ಕಥೆ ನೆನಪಿಗೆ ಬಂದರೆ, ನಾವು ಅದನ್ನು ಚಿತ್ರಿಸುತ್ತೇವೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಹಾಡನ್ನು ಬರೆಯುವುದು, ನಂತರ ಚಿತ್ರಕಲೆಯನ್ನು ಮಾಡುವುದು ಮತ್ತು ಅಂತಿಮವಾಗಿ ಅದನ್ನು ಜನರೆದುರು ಹಾಡುವುದು."
ಅನಿಲ್ ಅವರು ತನ್ನ ತಂದೆಯಿಂದ ಸಂಗೀತವನ್ನು ಕಲಿತರು ಮತ್ತು ಅವರು (ತಂದೆ) ವರ್ಣಚಿತ್ರಗಳಿಗೆ ಸಂಬಂಧಿಸಿದ ಹಾಡುಗಳ ಅತಿದೊಡ್ಡ ಭಂಡಾರವನ್ನು ಹೊಂದಿದ್ದಾರೆಂದು ಹೇಳಲಾಗುತ್ತದೆ. "[ಸಂತಾಲಿ ಮತ್ತು ಹಿಂದೂ] ಹಬ್ಬಗಳ ಸಮಯದಲ್ಲಿ ನಾವು ನಮ್ಮ ವರ್ಣಚಿತ್ರಗಳನ್ನು ತೋರಿಸುತ್ತಾ ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸಿ ಏಕತಾರಾ [ಏಕತಾರಿ] ಮತ್ತು ಹಾರ್ಮೋನಿಯಂ ಜೊತೆಗೆ ಹಾಡುತ್ತಿದ್ದೆವು. ಇದಕ್ಕೆ ಪ್ರತಿಯಾಗಿ, ಜನರು ವರ್ಣಚಿತ್ರಗಳನ್ನು ಖರೀದಿಸಿ ಸ್ವಲ್ಪ ಹಣ ಅಥವಾ ಧಾನ್ಯಗಳನ್ನು ನೀಡುತ್ತಿದ್ದರು" ಎಂದು ಅವರು ಹೇಳುತ್ತಾರೆ.
ಚಿತ್ರ, ಹಾಡು ಮತ್ತು ಸಂಗೀತದೊಡನೆ ಪ್ರದರ್ಶಿಸಲಾಗುವ ಪೈಟ್ಕರ್ ಕಲೆ ಪಾಂಡುಲಿಪಿ (ಹಸ್ತಪ್ರತಿ ಸುರುಳಿಗಳು) ಎಂದು ಕರೆಯಲ್ಪಡುವ ಪ್ರಾಚೀನ ಕಲೆಯಿಂದ ಪ್ರಭಾವಿತವಾಗಿದೆ
ಇತ್ತೀಚಿನ ವರ್ಷಗಳಲ್ಲಿ ಸಂತಾಲರ ಮೂಲದ ಬಗ್ಗೆ ಜಾನಪದ ಕಥೆಯನ್ನು ವಿವರಿಸುವ ಪೈಟ್ಕರ್ ವರ್ಣಚಿತ್ರಗಳು ತಮ್ಮ ಮೂಲ 12ರಿಂದ 14ಅಡಿ ಉದ್ದದಿಂದ ಎ 4 ಗಾತ್ರಕ್ಕೆ ಕುಗ್ಗಿವೆ. ಒಂದು ಅಡಿ ಉದ್ದದ ಈ ಚಿತ್ರಗಳು 200ರಿಂದ 2,000 ರೂಪಾಯಿಗಳಿಗೆ ಮಾರಾಟವಾಗುತ್ತವೆ. "ನಾವು ದೊಡ್ಡ ವರ್ಣಚಿತ್ರಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ, ಹೀಗಾಗಿ ಸಣ್ಣ ವರ್ಣಚಿತ್ರಗಳನ್ನು ತಯಾರಿಸುತ್ತೇವೆ. ಗ್ರಾಹಕರು ಗ್ರಾಮಕ್ಕೆ ಬಂದರೆ, ಚಿತ್ರವೊಂದನ್ನು 400-500 ರೂ.ಗಳಿಗೆ ಮಾರಾಟ ಮಾಡುತ್ತೇವೆ" ಎಂದು ಅನಿಲ್ ಹೇಳುತ್ತಾರೆ.
ಅನಿಲ್ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮೇಳಗಳು ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿದ್ದಾರೆ. ಈ ಕಲೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ ಆದರೆ ಇದೊಂದು ಸುಸ್ಥಿರ ಜೀವನೋಪಾಯವಲ್ಲ ಎಂದು ಅವರು ನಮ್ಮ ಗಮನಸೆಳೆದರು. "ಮೊಬೈಲ್ ಫೋನುಗಳ ಆಗಮನವು ನೇರ ಸಂಗೀತ ಪ್ರದರ್ಶನದ ಸಂಪ್ರದಾಯಗಳ ಕುಸಿತಕ್ಕೆ ಕಾರಣವಾಗಿದೆ, ಏಕೆಂದರೆ ಈಗ ಹೆಚ್ಚಿನವರ ಬಳಿ ಮೊಬೈಲ್ ಫೋನುಗಳಿವೆ, ಇದರಿಂದಾಗಿ ಹಾಡುವ ಮತ್ತು ಸಂಗೀತವನ್ನು ನುಡಿಸುವ ಹಳೆಯ ಸಂಪ್ರದಾಯವು ಕಣ್ಮರೆಯಾಗಿದೆ. ಈಗ, ಫುಲ್ಕಾ ಫುಲ್ಕಾ ಚುಲ್, ಉಡ್ಡಿ ಉಡ್ಡಿ ಜಾಯೆ" ರೀತಿಯ ಹಾಡುಗಳೇ ಜನಪ್ರಿಯ ಎಂದು ಗಾಳಿಯಲ್ಲಿ ಹಾರುವ ಒದ್ದೆ ಕೂದಲಿನ ಕುರಿತಾದ ಜನಪ್ರಿಯ ಹಾಡಿನ ಸಾಹಿತ್ಯವನ್ನು ಅನುಕರಿಸುತ್ತಾ ಅನಿಲ್ ಹೇಳುತ್ತಾರೆ.
ಒಂದು ಕಾಲದಲ್ಲಿ ಅಮಾದೊಬಿಯಲ್ಲಿ ಪೈಟ್ಕರ್ ಚಿತ್ರಕಲೆಯನ್ನು ಅಭ್ಯಾಸ ಮಾಡುತ್ತಿದ್ದ 40ಕ್ಕೂ ಹೆಚ್ಚು ಮನೆಗಳಿದ್ದವು, ಆದರೆ ಇಂದು ಕೆಲವೇ ಮನೆಗಳು ಮಾತ್ರ ಈ ಕಲೆಯನ್ನು ಅಭ್ಯಾಸ ಮಾಡುತ್ತಿವೆ ಎಂದು ಹಿರಿಯ ಕಲಾವಿದ ಹೇಳುತ್ತಾರೆ. "ನಾನು ಅನೇಕ ವಿದ್ಯಾರ್ಥಿಗಳಿಗೆ ಚಿತ್ರಕಲೆಯನ್ನು ಕಲಿಸಿದೆ, ಆದರೆ ಅವರೆಲ್ಲರೂ ಅದರಿಂದ ಹಣವನ್ನು ಸಂಪಾದಿಸಲು ಸಾಧ್ಯವಾಗದ ಕಾರಣ ಕೆಲಸವನ್ನು ತೊರೆದು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ" ಎಂದು ಅನಿಲ್ ಹೇಳುತ್ತಾರೆ. "ನಾನು ನನ್ನ ಮಕ್ಕಳಿಗೂ ಈ ಕೌಶಲವನ್ನು ಕಲಿಸಿದೆ, ಆದರೆ ಅದರಿಂದ ಸಾಕಷ್ಟು ಸಂಪಾದಿಸಲು ಸಾಧ್ಯವಾಗದ ಕಾರಣ ಅವರೂ ಇದರಿಂದ ದೂರ ಹೊರಟುಹೋದರು." ಅವರ ಹಿರಿಯ ಮಗ ಜೆಮ್ಷೆಡ್‌ಪುರದಲ್ಲಿ ರಾಜ್ ಮಿಸ್ತ್ರಿ (ಮೇಸ್ತ್ರಿ) ಕೆಲಸ ಮಾಡುತ್ತಿದ್ದರೆ, ಕಿರಿಯ ಮಗ ಕಾರ್ಮಿಕನಾಗಿ ಕೆಲಸ ಮಾಡುತ್ತಾರೆ. ಅನಿಲ್ ಮತ್ತು ಅವರ ಪತ್ನಿ ಹಳ್ಳಿಯಲ್ಲಿನ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ಕೆಲವು ಆಡುಗಳು ಮತ್ತು ಕೋಳಿಗಳನ್ನು ಸಾಕುತ್ತಾರೆ; ಗಿಳಿಯೊಂದು ಅವರ ಮನೆಯ ಹೊರಗಿನ ಪಂಜರದಲ್ಲಿ ವಿಶ್ರಾಂತಿ ಪಡೆಯುತ್ತದೆ.
2013ರಲ್ಲಿ, ಜಾರ್ಖಂಡ್ ಸರ್ಕಾರವು ಅಮಾದೊಬಿ ಗ್ರಾಮವನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿತು ಆದರೆ ಇದು ಕೆಲವೇ ಪ್ರವಾಸಿಗರನ್ನು ಆಕರ್ಷಿಸಿಸುವಲ್ಲಿ ಯಶಸ್ವಿಯಾಗಿದೆ. "ಪ್ರವಾಸಿಗರು ಅಥವಾ ಸಾಹೇಬ್ [ಸರ್ಕಾರಿ ಅಧಿಕಾರಿ] ಬಂದರೆ, ನಾವು ಅವರಿಗಾಗಿ ಹಾಡುತ್ತೇವೆ, ನಂತರ ಅವರು ನಮಗೆ ಸ್ವಲ್ಪ ಹಣವನ್ನು ನೀಡುತ್ತಾರೆ. ಕಳೆದ ವರ್ಷ ನಾನು ಕೇವಲ ಎರಡು ವರ್ಣಚಿತ್ರಗಳನ್ನು ಮಾರಾಟ ಮಾಡಿದ್ದೇನೆ" ಎಂದು ಅವರು ಹೇಳುತ್ತಾರೆ.
ಕರ್ಮ ಪೂಜೆ, ಬಂಧನ್ ಪರ್ವ್ ರೀತಿಯ ಸಂತಾಲ್ ಹಬ್ಬಗಳು ಮತ್ತು ಸ್ಥಳೀಯ ಹಿಂದೂ ಹಬ್ಬಗಳು ಮತ್ತು ಜಾತ್ರೆಗಳ ಸಮಯದಲ್ಲಿ ಕಲಾವಿದರು ಹತ್ತಿರದ ಹಳ್ಳಿಗಳಲ್ಲಿ ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಾರೆ. "ಮೊದಲು, ನಾವು ವರ್ಣಚಿತ್ರಗಳನ್ನು ಮಾರಾಟ ಮಾಡಲು ಹಳ್ಳಿಗಳಿಗೆ ಹೋಗುತ್ತಿದ್ದೆವು. ಬಂಗಾಳ, ಒರಿಸ್ಸಾ ಮತ್ತು ಛತ್ತೀಸಗಢದಂತಹ ಸ್ಥಳಗಳಿಗೆ ಸಹ ಹೋಗುತ್ತಿದ್ದೆವು" ಎಂದು ಅನಿಲ್ ಚಿತ್ರಕಾರ್ ಹೇಳುತ್ತಾರೆ.
*****
ಪೈಟ್ಕರ್ ಕಲೆಯ ಹಿಂದಿನ ಪ್ರಕ್ರಿಯೆಯನ್ನು ವಿಜಯ್ ನಮಗೆ ತೋರಿಸುತ್ತಾರೆ. ಅವರು ಮೊದಲು ಸಣ್ಣ ಕಲ್ಲಿನ ಚಪ್ಪಡಿಯ ಮೇಲೆ ಸ್ವಲ್ಪ ನೀರನ್ನು ಸುರಿದು ಕೆಸರು ಕೆಂಪು ಬಣ್ಣವನ್ನು ಹೊರತೆಗೆಯಲು ಅದರ ಮೇಲೆ ಮತ್ತೊಂದು ಕಲ್ಲನ್ನು ಉಜ್ಜುತ್ತಾರೆ. ನಂತರ, ಸಣ್ಣ ಪೇಂಟ್ ಬ್ರಷ್ ಸಹಾಯದಿಂದ, ಅವರು ಚಿತ್ರಕಲೆಯನ್ನು ಪ್ರಾರಂಭಿಸುತ್ತಾರೆ.
ಪೈಟ್ಕರ್ ವರ್ಣಚಿತ್ರಗಳಲ್ಲಿ ಬಳಸಲಾಗುವ ಬಣ್ಣಗಳನ್ನು ನದಿಯ ದಡದ ಕಲ್ಲುಗಳು ಮತ್ತು ಹೂವುಗಳು ಮತ್ತು ಎಲೆಗಳ ಸಾರಗಳಿಂದ ಪಡೆಯಲಾಗುತ್ತದೆ. ಕಲ್ಲುಗಳನ್ನು ಹುಡುಕುವುದು ಅತ್ಯಂತ ಸವಾಲಿನ ಕೆಲಸ. "ನಾವು ಅದನ್ನು ಹುಡುಕಲು ಬೆಟ್ಟ ಅಥವಾ ನದಿಯ ದಡಕ್ಕೆ ಹೋಗಬೇಕು; ಕೆಲವೊಮ್ಮೆ ಸುಣ್ಣದ ಕಲ್ಲು ಸಿಗಲು ಮೂರರಿಂದ ನಾಲ್ಕು ದಿನಗಳು ಬೇಕಾಗುತ್ತದೆ" ಎಂದು ವಿಜಯ್ ಹೇಳುತ್ತಾರೆ.
ಕಲಾವಿದರು ಹಳದಿಗೆ ಅರಿಶಿನ, ಹಸಿರು ಬಣ್ಣಕ್ಕೆ ಬೀನ್ಸ್ ಅಥವಾ ಮೆಣಸಿನಕಾಯಿ ಮತ್ತು ನೇರಳೆ ಬಣ್ಣಕ್ಕೆ ಲಂಟಾನ ಹಣ್ಣನ್ನು ಬಳಸುತ್ತಾರೆ. ಸೀಮೆಎಣ್ಣೆ ದೀಪಗಳಿಂದ ಮಸಿಯನ್ನು ಸಂಗ್ರಹಿಸಿ ಕಪ್ಪು ಬಣ್ಣವನ್ನು ತಯಾರಿಸಲಾಗುತ್ತದೆ; ಕೆಂಪು, ಬಿಳಿ ಮತ್ತು ಇಟ್ಟಿಗೆ ಬಣ್ಣಗಳನ್ನು ಕಲ್ಲುಗಳಿಂದ ಹೊರತೆಗೆಯಲಾಗುತ್ತದೆ.
ವರ್ಣಚಿತ್ರಗಳನ್ನು ಬಟ್ಟೆ ಅಥವಾ ಕಾಗದದ ಮೇಲೆ ಬಿಡಿಸಬಹುದಾದರೂ, ಇಂದು, ಹೆಚ್ಚಿನ ಕಲಾವಿದರು 70 ಕಿಲೋಮೀಟರ್ ದೂರದಲ್ಲಿರುವ ಜೆಮ್ಷೆಡ್‌ಪುರದಿಂದ ಖರೀದಿಸಿ ತರುವ ಕಾಗದವನ್ನು ಬಳಸುತ್ತಾರೆ. "ಒಂದು ಹಾಳೆಯ ಬೆಲೆ 70ರಿಂದ 120 ರೂಪಾಯಿಗಳವರೆಗೆ ಇರುತ್ತದೆ ಮತ್ತು ಅದರಿಂದ ಸುಲಭವಾಗಿ ನಾಲ್ಕು ಸಣ್ಣ ವರ್ಣಚಿತ್ರಗಳನ್ನು ತಯಾರಿಸಬಹುದು" ಎಂದು ವಿಜಯ್ ಹೇಳುತ್ತಾರೆ.
ವರ್ಣಚಿತ್ರಗಳನ್ನು ಸಂರಕ್ಷಿಸಲು ಈ ನೈಸರ್ಗಿಕ ಬಣ್ಣಗಳನ್ನು ಬೇವು (ಆಜಾದಿರಾಚ್ಟಾ ಇಂಡಿಕಾ) ಅಥವಾ ಕರಿಜಾಲಿ (ಅಕೇಶಿಯಾ ನಿಲೋಟಿಕಾ) ಮರಗಳ ರಾಳದೊಂದಿಗೆ ಬೆರೆಸಲಾಗುತ್ತದೆ. "ಈ ರೀತಿಯಾಗಿ ಮಾಡಿದಾಗ ಕೀಟಗಳು ಕಾಗದದ ಮೇಲೆ ದಾಳಿ ಮಾಡುವುದಿಲ್ಲ, ಮತ್ತು ಚಿತ್ರಕಲೆಯು ಹಾಗೆಯೇ ಉಳಿಯುತ್ತದೆ" ಎಂದು ವಿಜಯ್ ಹೇಳುತ್ತಾರೆ, ಅವರು ನೈಸರ್ಗಿಕ ಬಣ್ಣಗಳನ್ನು ಬಳಸುವುದು ಈ ಕಲೆಯ ದೊಡ್ಡ ಆಕರ್ಷಣೆಯಾಗಿದೆ.
*****
ಎಂಟು ವರ್ಷಗಳ ಹಿಂದೆ ಅನಿಲ್ ಅವರ ಎರಡೂ ಕಣ್ಣುಗಳಲ್ಲಿ ಕಣ್ಣಿನ ಪೊರೆ ಕಾಣಿಸಿಕೊಂಡಿತ್ತು. ದೃಷ್ಟಿ ಮಸುಕಾಗುತ್ತಿದ್ದಂತೆ ಚಿತ್ರಕಲೆಯನ್ನು ನಿಲ್ಲಿಸಿದರು "ನನಗೆ ಸರಿಯಾಗಿ ನೋಡಲು ಸಾಧ್ಯವಿಲ್ಲ. ನಾನು ಚಿತ್ರಿಸಬಲ್ಲೆ, ಹಾಡುಗಳನ್ನು ಮತ್ತು ನಿರೂಪಿಸಬಲ್ಲೆ, ಆದರೆ ಚಿತ್ರಗಳಿಗೆ ಬಣ್ಣಗಳನ್ನು ತುಂಬಲು ಸಾಧ್ಯವಿಲ್ಲ" ಎಂದು ಅವರು ತಮ್ಮ ವರ್ಣಚಿತ್ರಗಳಲ್ಲಿ ಒಂದನ್ನು ಎತ್ತಿ ಹಿಡಿದು ತೋರಿಸುತ್ತಾರೆ ಹೇಳುತ್ತಾರೆ. ಈ ವರ್ಣಚಿತ್ರಗಳು ಎರಡು ಹೆಸರುಗಳನ್ನು ಹೊಂದಿವೆ - ಒಂದು ಸ್ಕೆಚ್ ತಯಾರಿಸಿದ ಅನಿಲ್ ಅವರದು, ಮತ್ತು ಇನ್ನೊಂದು ಬಣ್ಣಗಳನ್ನು ತುಂಬಿದ ಅವರ ವಿದ್ಯಾರ್ಥಿಯದು.
36 ವರ್ಷದ ಅಂಜನಾ ಪಾಟೇಕರ್ ನುರಿತ ಪೈಟ್ಕರ್ ಕಲಾವಿದೆ, ಆದರೆ ಅವರು ಹೇಳುತ್ತಾರೆ, "ಈಗ ಈ ಕೆಲಸ ಮಾಡುವುದನ್ನು ನಿಲ್ಲಿಸಿದ್ದೇನೆ. ಮನೆಕೆಲಸಗಳ ಜೊತೆಗೆ ಚಿತ್ರಕಲೆಯನ್ನೂ ಮಾಡುತ್ತಾ ಆಯಾಸಗೊಳ್ಳುತ್ತೇನೆ ಎಂದು ಪತಿ ಅಸಮಾಧಾನ ತೋರಿಸುತ್ತಾರೆ. ಇದು ಬಹಳ ಕಷ್ಟದ ಕೆಲಸ, ಅದರಿಂದ ಯಾವುದೇ ಲಾಭವೂ ಇಲ್ಲ. ಹೀಗಿರುವಾಗ ಅದನ್ನು ಮಾಡುವುದರಿಂದ ಏನು ಪ್ರಯೋಜನ?" ಎಂದು ಕೇಳುವಾ ಅಂಜನಾ ಅವರ ಬಳಿ 50 ವರ್ಣಚಿತ್ರಗಳಿವೆ ಆದರೆ ಅವುಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ತನ್ನ ಮಕ್ಕಳು ಈ ಕಲಾ ಪ್ರಕಾರವನ್ನು ಕಲಿಯುವ ಆಸಕ್ತಿಯನ್ನು ಹೊಂದಿಲ್ಲ ಎಂದು ಅವರು ಹೇಳುತ್ತಾರೆ.
ಅಂಜನಾ ಅವರಂತೆ, 24 ವರ್ಷದ ಗಣೇಶ್ ಗಾಯನ್ ಒಂದು ಕಾಲದಲ್ಲಿ ಪೈಟ್ಕರ್ ಚಿತ್ರಕಲೆಯಲ್ಲಿ ಪ್ರವೀಣರಾಗಿದ್ದರು, ಆದರೆ ಇಂದು ಅವರು ಹಳ್ಳಿಯಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ ಮತ್ತು ಸಾಂದರ್ಭಿಕವಾಗಿ ದೈಹಿಕ ಶ್ರಮ ಕೆಲಸಗಳಿಗೆ ಹೋಗುತ್ತಾರೆ. "ನಾನು ಕಳೆದ ವರ್ಷ ಕೇವಲ ಮೂರು ವರ್ಣಚಿತ್ರಗಳನ್ನು ಮಾರಾಟ ಮಾಡಿದ್ದೇನೆ. ನಾವು ಈ ಆದಾಯವನ್ನು ಮಾತ್ರ ನಂಬಿಕೊಂಡು ನಮ್ಮ ಕುಟುಂಬವನ್ನು ಹೇಗೆ ಪೋಷಿಸುವುದು?"
"ಹೊಸ ಪೀಳಿಗೆಗೆ ಹಾಡುಗಳನ್ನು ಬರೆಯುವುದು ಹೇಗೆಂದು ತಿಳಿದಿಲ್ಲ. ಯಾರಾದರೂ ಹಾಡುವುದು ಮತ್ತು ಕಥೆ ಹೇಳುವುದನ್ನು ಕಲಿತರೆ ಮಾತ್ರ ಪೈಟ್ಕರ್ ಚಿತ್ರಕಲೆ ಉಳಿಯುತ್ತದೆ. ಇಲ್ಲದಿದ್ದರೆ, ಅದು ಸಾಯುತ್ತದೆ" ಎಂದು ಅನಿಲ್ ಹೇಳುತ್ತಾರೆ.
ಈ ಕಥಾನಕದಲ್ಲಿನ ಪೈಟ್ಕರ್ ಹಾಡುಗಳನ್ನು ಸೀತಾರಾಮ್ ಬಾಸ್ಕಿ ಮತ್ತು ರೋನಿತ್ ಹೆಂಬ್ರೋಮ್ ಅವರ ಸಹಾಯದಿಂದ ಜೋಶುವಾ ಬೋಧಿನೇತ್ರ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ.
ಈ ಕಥಾನಕಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರೆತಿರುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು