ಅಜೀಮ್ ಶೇಖ್ ಜೂನ್ 2023ರ ಮಧ್ಯದಲ್ಲಿ, ಔರಂಗಾಬಾದ್‌ ನಗರದಲ್ಲಿರುವ ವಿಭಾಗೀಯ ಆಯುಕ್ತರ ಕಚೇರಿಯ ಮುಂದೆ ಐದು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರು.

ಬಿಸಿಲಿನ ತಾಪದ ನಡುವೆಯೂ 26 ವರ್ಷದ ಅಜೀಮ್ ಅಂದು ನೀರು ಬಿಟ್ಟರೆ ಬೇರೇನನ್ನೂ ಸೇವಿಸಲಿಲ್ಲ. ಮುಷ್ಕರದ ಅಂತ್ಯದ ವೇಳೆಗೆ ಅವರಿಗೆ ದಣಿದು ದೌರ್ಬಲ್ಯದಿಂದಾಗಿ ತಲೆ ತಿರುಗುತ್ತಿತ್ತು. ನೇರವಾಗಿ ನಡೆಯಲು ಕೂಡ ಕಷ್ಟಪಡುತ್ತಿದ್ದರು.

ಹಾಗಿದ್ದರೆ ಅವರ ಬೇಡಿಕೆ ಏನಾಗಿತ್ತು? ಅವರು ಪೊಲೀಸರಿಗೆ ದೂರು ನೀಡಲು ಬಯಸಿದ್ದರು. ಆದರೆ ಔರಂಗಾಬಾದ್‌ ನಗರದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಜಲ್ನಾ ಜಿಲ್ಲೆಯ ಅವರ ಗ್ರಾಮದ ಬಳಿಯ ಸ್ಥಳೀಯ ಪೊಲೀಸ್ ಠಾಣೆ ದೂರು ದಾಖಲಿಕೊಂಡಿರಲಿಲ್ಲ.

ಕಳೆದ ವರ್ಷ, 19 ಮೇ 2023ರಂದು, ಮರಾಠ ಸಮುದಾಯಕ್ಕೆ ಸೇರಿದ ಸೋನಾವಣೆ ಕುಟುಂಬದ ಸದಸ್ಯರು ರಾತ್ರಿ 11 ಗಂಟೆಗೆ ಅಜೀಂ ಅವರ ಮನೆಗೆ ನುಗ್ಗಿ ಅವರ ಕುಟುಂಬದ ಮೇಲೆ ದೊಣ್ಣೆ ಮತ್ತು ಕಲ್ಲುಗಳಿಂದ ದಾಳಿ ಮಾಡಿದರು. ಈ ವೇಳೆ ಅವರ ಸಹೋದರ ಹಾಗೂ ಪೋಷಕರು ಗಾಯಗೊಂಡಿದ್ದಾರೆ. ಅವರು ಪರಿಗೆ ಹೇಳಿದಂತೆ, “ನನ್ನ ವಯಸ್ಸಾದ ತಾಯಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗಿತ್ತು. ಈ ದಾಳಿಯನ್ನು ಕ್ರೌರ್ಯದಿಂದ ನಡೆಸಲಾಗಿದೆ. ಮನೆಯಲ್ಲಿದ್ದ 1.5 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.”

ಹಲ್ಲೆ ನಡೆಸಿದ ಗುಂಪಿನ ಭಾಗವಾಗಿದ್ದರು ಎಂದು ಅಜೀಮ್ ಆರೋಪಿಸಿರುವ ನಿತಿನ್ ಸೋನಾವಾಣೆಯನ್ನು ಈ ವರದಿಗಾರ ಸಂಪರ್ಕಿಸಿದರು. ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ಸೋನಾವಾನೆ ನಿರಾಕರಿಸಿದ ಮತ್ತು "ಘಟನೆಯ ಬಗ್ಗೆ ನನಗೆ ಏನೂ ತಿಳಿದಿಲ್ಲ" ಎಂದು ಹೇಳಿದನು.

ಅಜೀಮ್ ಅವರ ಮನೆ ಮಧ್ಯ ಮಹಾರಾಷ್ಟ್ರದ ಭೋಕರ್ದಾನ್ ತಾಲ್ಲೂಕಿನ ಪಾಲಸ್ಖೇಡಾ ಮುರ್ತಾದ್ ಎಂಬ ಹಳ್ಳಿಯಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಎಂಟು ಎಕರೆ ಕೃಷಿ ಭೂಮಿಯ ನಡುವೆ ಇದೆ.

"ರಾತ್ರಿಯಲ್ಲಿ ನಿರ್ಜನವಾಗಿದ್ದು ಶಾಂತವಾಗಿರುತ್ತದೆ. ಹೀಗಾಗಿ ಸಹಾಯಕ್ಕಾಗಿ ಯಾರನ್ನಾದರೂ ಕರೆಯುವುದಕ್ಕೂ ಸಾಧ್ಯವಾಗಲಿಲ್ಲ."

On May 19, 2023, Ajim and his family members were assaulted at their home in Palaskheda Murtad village of Jalna district
PHOTO • Parth M.N.

ಕಳೆದ ವರ್ಷ, ಮೇ 19, 2023ರಂದು, ಅಜೀಮ್ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ಜಲ್ನಾ ಜಿಲ್ಲೆಯ ಪಲಸ್ಖೇರಾ ಮುರ್ತಾದ್ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಹಲ್ಲೆ ನಡೆಸಲಾಯಿತು

ವ್ಯವಹಾರದ ವೈಷಮ್ಯದ ಪರಿಣಾಮವಾಗಿ ಈ ದಾಳಿ ನಡೆದಿದೆ ಎಂದು ಅಜೀಮ್ ಶಂಕಿಸುತ್ತಾರೆ. ಗ್ರಾಮದಲ್ಲಿ ಎರಡೂ ಕುಟುಂಬಗಳು ಜೆಸಿಬಿ ಯಂತ್ರವನ್ನು ಹೊಂದಿವೆ. ಊರಿನಲ್ಲಿ ಜೆಸಿಬಿ ಇರುವುದು ಇವೆರಡು ಕುಟುಂಬಗಳ ಬಳಿ ಮಾತ್ರ. "ಹತ್ತಿರದಲ್ಲಿ [ಜುಯಿ] ಅಣೆಕಟ್ಟು ಇದೆ. ಗ್ರಾಮದ ರೈತರು ಉತ್ತಮ ಬೆಳೆಗಾಗಿ ಜಲಾನಯನ ಪ್ರದೇಶದಿಂದ ಹೂಳನ್ನು ತಂದು ತಮ್ಮ ಭೂಮಿಯಲ್ಲಿ ಹರಡುತ್ತಾರೆ. ರೈತರಿಗೆ ಹೂಳು ಅಗೆದು ಕೊಡುವುದು ನಮ್ಮ ಕೆಲಸ.

ಹೂಳೆತ್ತಲು ಎರಡೂ ಕುಟುಂಬಗಳು ರೈತರಿಗೆ ಗಂಟೆಗೆ 80 ರೂ.ಗಳನ್ನು ವಿಧಿಸುತ್ತವೆ. "ನಾನು ರೈತರಿಗೆ ಗಂಟೆಗೆ 70 ರೂಪಾಯಿಯಂತೆ ಕೆಲಸ ಮಾಡಲು ಆರಮಭಿಸಿದೆ. ಇದರಿಂದಾಗಿ ನನಗೆ ಹೆಚ್ಚು ಹೆಚ್ಚು ಕೆಲಸ ದೊರಕತೊಡಗಿತು. ನಂತರ ನನಗೆ ಬೆದರಿಕೆ ಹಾಕಲಾಯಿತು, ಮತ್ತು ದರವನ್ನು ಹೆಚ್ಚಿಸದಿದ್ದಾಗ, ಅವರು ನನ್ನ ಮನೆಯ ಮೇಲೆ ದಾಳಿ ಮಾಡಿದರು. ಮನೆ ಮುಂದೆ ನಿಲ್ಲಿಸಿದ್ದ ಜೆಸಿಬಿ ಯಂತ್ರವನ್ನು ಸಹ ಧ್ವಂಸಗೊಳಿಸಿದರು" ಎಂದು ಅವರು ಹೇಳಿದರು.

ಮರುದಿನ ಬೆಳಿಗ್ಗೆ ಅಜೀಂ ತನ್ನ ಗ್ರಾಮವಿರುವ ತಾಲೂಕಾದ ಭೋಕರ್ದನ್‌ ಪೊಲೀಸ್ ಠಾಣೆಗೆ ಹೋದರು. ಆದರೆ ಅಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ನಿರಾಕರಿಸಿದ್ದಾರೆ. ಬದಲಿಗೆ,  "ಪೊಲೀಸರು ನನಗೆ ಬೆದರಿಕೆ ಹಾಕಿದರು, ಅವರು ನಾನು ಆ ಕುಟುಂಬದ ವಿರುದ್ಧ ದೂರು ನೀಡಿದರೆ ತೊಂದರೆಗೆ ಸಿಲುಕುವುದಾಗಿ ಹೇಳಿದರು. ಅವರು ರಾಜಕೀಯವಾಗಿ ಪ್ರಬಲರು ಎಂದೂ ಹೇಳಿದರು." ಎಂದು ಅವರು ನೆನಪಿಸಿಕೊಳ್ಳುತ್ತಾರೆ

ಅಜೀಮ್ ಹೇಳುವಂತೆ, ತನ್ನ ದೂರನ್ನು ಅಧಿಕೃತವಾಗಿ ದಾಖಲಿಸಬೇಕೆಂದು ಒತ್ತಾಯಿಸಿದಾಗ, ಇನ್ನೊಂದು ಕಡೆಯವರು ಅವರ ವಿರುದ್ಧ ಅನೇಕ ದೂರುಗಳನ್ನು ದಾಖಲಿಸುತ್ತಾರೆ ಮತ್ತು ಗ್ರಾಮದಿಂದ ಹೊರಹಾಕುತ್ತಾರೆ ಎಂದು ಪೊಲೀಸರು ಎಚ್ಚರಿಕೆ ನೀಡಿದರು.

ಅವರು ಕೇಳುತ್ತಾರೆ, "ಹೀ ಲಾ ಎಂಡ್‌ ಆರ್ಡರ್? [ಇದು ಯಾವ ರೀತಿಯ ಕಾನೂನು ಮತ್ತು ಸುವ್ಯವಸ್ಥೆ]? ಇದು ಯೋಜಿತ ದಾಳಿಯಾಗಿದ್ದು, ಅಲ್ಲಿ 25-30 ಜನರು ನನ್ನ ಮನೆಗೆ ಪ್ರವೇಶಿಸಿ ಗಲಭೆ ನಡೆಸಿದರು. ಆ ದಾಳಿ ಯಾತನಾದಾಯಕವಾಗಿತ್ತು ಮತ್ತು ಭಯಾನಕವಾಗಿತ್ತು."

ಅಜೀಂ ಪಾಲಿಗೆ ಇದು ತತ್ವದ, ಸ್ವಾಭಿಮಾನದ ವಿಷಯವಾಗಿತ್ತು. ಮರಾಠಾ ಕುಟುಂಬವು ಸುಲಭವಾಗಿ ತಪ್ಪಿಸಿಕೊಳ್ಳುತ್ತದೆ ಎಂಬ ಆಲೋಚನೆಯು ಅವರಿಗೆ ಹಿಡಿಸಲಿಲ್ಲ. ಹೀಗಾಗಿ, “ನಾನು ಹಿಂದೆ ಸರಿಯಲಿಲ್ಲ. ಅವರು ಎಫ್‌ಐಆರ್ ದಾಖಲಿಸಲು ಒಪ್ಪುವವರೆಗೂ ನಾನು ಪೊಲೀಸ್ ಠಾಣೆಯಲ್ಲಿ ದೂರು ನೀಡುತ್ತಲೇ ಇದ್ದೆ.”

ಅಂತಿಮವಾಗಿ ಪೊಲೀಸರು ಕೇಸು ದಾಖಲಿಸಲು ಒಪ್ಪಿದರು, ಆದರೆ ಅವರು ಅಜೀಮ್‌ ಬಳಿ ಎಲ್ಲಾ ವಿವರಗಳನ್ನು ಎಫ್‌ಐಆರ್‌ನಲ್ಲಿ ಸೇರಿಸುವುದಿಲ್ಲ ಎಂದು ಹೇಳಿದರು. “ನಗದು ಮತ್ತು ಆಭರಣಗಳನ್ನು ಕದ್ದಿರುವುದಾಗಿ ಎಫ್‌ಐಆರ್‌ನಲ್ಲಿ ದಾಖಲಿಸಲು ಅವರು ನಿರಾಕರಿಸಿದರು. ನಾನು ಅದನ್ನು ಒಪ್ಪಲಿಲ್ಲ” ಎಂದು ಅಜೀಮ್ ಹೇಳುತ್ತಾರೆ.

When Ajim first went to file an FIR at the station, he was warned by the police. 'They said I would get in trouble for complaining against that family. They are politically connected'
PHOTO • Parth M.N.

ಅಜೀಮ್‌ ದೂರು ದಾಖಲಿಸಲು ಹೋದ ಮೊದಲಿಗೆ ಪೊಲೀಸರು, “ಆ ಕುಟುಂಬಕ್ಕೆ ರಾಜಕೀಯ ಸಂಪರ್ಕವಿದೆ. ಅವರ ವಿರುದ್ಧ ದೂರು ನೀಡಿದರೆ ನೀವು ತೊಂದರೆಗೆ ಸಿಲುಕುತ್ತೀರಿ” ಎಂದು ಎಚ್ಚರಿಸಿದ್ದರು

ನಂತರ ಅವರು ಗ್ರಾಮ ಪಂಚಾಯತಿಗೆ ಹೋಗಿ ಊರಿನ ಹಿರಿಯರೆದುರು ಘಟನೆಯ ಕುರಿತು ವಿವರಿಸಿದರು. ಅಜೀಂ ಅವರ ಕುಟುಂಬದ ಹಲವಾರು ತಲೆಮಾರುಗಳು ಈ ಗ್ರಾಮದಲ್ಲಿ ವಾಸಿಸುತ್ತಿವೆ. ಹಳ್ಳಿಯ ಜನರು ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಖಚಿತವಾಗಿತ್ತು. "ನಾವು ಗ್ರಾಮಸ್ಥರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ" ಎಂದು ಅವರು ಹೇಳುತ್ತಾರೆ. "ಜನರು ನನ್ನ ಪರವಾಗಿ ನಿಲ್ಲುತ್ತಾರೆ ಎಂದು ನನಗೆ ಖಚಿತವಾಗಿತ್ತು."

ಅಜೀಂ ಏನಾಯಿತು ಎಂಬುದರ ಕುರಿತು ಹೇಳಿಕೆಯನ್ನು ಮುದ್ರಿಸಿದರು ಮತ್ತು ಬೆಂಬಲದ ಸಂಕೇತವಾಗಿ ಗ್ರಾಮದ ಎಲ್ಲರಿಗೂ ಸಹಿ ಹಾಕುವಂತೆ ಮನವಿ ಮಾಡಿದರು. ಅವರು ಈ ವಿಷಯವನ್ನು ಔರಂಗಾಬಾದ್‌ನ ವಿಭಾಗೀಯ ಆಯುಕ್ತರ ಬಳಿ ಕೊಂಡೊಯ್ಯಲು ಬಯಸಿದ್ದರು.

ಆದರೆ ಪತ್ರಕ್ಕೆ ಕೇವಲ 20 ಜನರು ಸಹಿ ಹಾಕಿದ್ದಾರೆ - ಎಲ್ಲಾ ಮುಸ್ಲಿಮರು. "ಕೆಲವರು ನನಗೆ ಖಾಸಗಿಯಾಗಿ ತಮ್ಮ ಬೆಂಬಲವಿದೆ, ಆದರೆ ಬಹಿರಂಗವಾಗಿ ಯಾರ ವಿರುದ್ಧವೂ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ."

ಗ್ರಾಮ ಬಂಧುತ್ವದ ವಾಸ್ತವತೆ ಮುನ್ನೆಲೆಗೆ ಬಂದ ಕ್ಷಣ ಅದಾಗಿತ್ತು. ಅಜೀಂ ಹೇಳುತ್ತಾರೆ, "ಗ್ರಾಮವು ಕೋಮುವಾದದ ಆಧಾರದ ಮೇಲೆ ವಿಭಜನೆಯಾಗುತ್ತದೆ ಎಂದು ನಾನು ಭಾವಿಸಿರಲಿಲ್ಲ." ಅನೇಕ ಹಿಂದೂಗಳು ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಲು ಸಿದ್ಧರಿಲ್ಲ, ಮತ್ತು ಸಿದ್ಧರಾಗಿರುವವರು ಅವರು ಬೆಂಬಲಿಸದಿರುವ ಹಿಂದೆ ಧಾರ್ಮಿಕ ಆಧಾರಗಳು ಅಥವಾ ಯಾವುದೇ ರೀತಿಯ ಉದ್ವಿಗ್ನತೆಯ ಕಾರಣವಿದೆಯೆನ್ನುವುದನ್ನು ನಿರಾಕರಿಸಿದರು.

ಹೆಸರು ಹೇಳಲಿಚ್ಛಿಸದ ಕೆಲವು ರೈತರು ಪ್ರತೀಕಾರದ ಭಯದಿಂದಾಗಿ ಅವರೊಂದಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಪರಿಸ್ಥಿತಿ ಅಸ್ಥಿರವಾಗಿದ್ದು ತಮಗೆ ಇದೆಲ್ಲದರಲ್ಲಿ ಸಿಲುಕಿಕೊಳ್ಳುವುದು ಇಷ್ಟವಿಲ್ಲ ಎನ್ನುತ್ತಾರೆ.

65 ವರ್ಷದ ಭಗವಾನ್ ಸೋನಾವಣೆ ಕಳೆದ 20 ವರ್ಷಗಳಿಂದ ಈ ಗ್ರಾಮದ ಸರಪಂಚ್. ಆ ಸಮಯದಲ್ಲಿ ಕೋಮು ಉದ್ವಿಗ್ನತೆಯಿತ್ತು, ಆದರೆ ಈಗ ತಣ್ಣಗಾಗಿದೆ ಎನ್ನುತ್ತಾರೆ. “ಎರಡು ಧರ್ಮಗಳಿಗೆ ಸೇರಿದ ಎರಡು ಕುಟುಂಬಗಳು ಈ ರೀತಿ ಜಗಳವಾಡಿಕೊಂಡಾಗ ಸಹಜವಾಗಿಯೇ ಅದು ಇಡೀ ಗ್ರಾಮದ ಮೇಲೆ ಪರಿಣಾಮ ಬೀರುತ್ತದೆ” ಎಂದು ಅವರು ಹೇಳುತ್ತಾರೆ.

“ಈ ಘಟನೆಯಲ್ಲಿ ಅಜೀಮ್‌ ಏನೂ ತಪ್ಪು ಮಾಡಿರಲಿಲ್ಲ. ಆದರೆ ಹಳ್ಳಿಯ ಜನರು ಇದರಲ್ಲಿ ತಲೆ ಹಾಕಲು ಬಯಸಲಿಲ್ಲ” ಎಂದು ಸ್ವತಃ ಮರಾಠರಾಗಿರುವ ಸೋನಾವಣೆ ಹೇಳಿದರು. ಸುಮಾರು 15 ವರ್ಷಗಳ ಹಿಂದೆ ಒಮ್ಮೆ ನಮ್ಮ ಊರಿನಲ್ಲಿ ಹಿಂದೂ-ಮುಸ್ಲಿಮರ ನಡುವೆ ಶಾಂತಿ ಕದಡಿತ್ತು. “ಈ ಘಟನೆ ನಡೆಯುವ ತನಕವೂ ಊರು ಶಾಂತವಾಗಿತ್ತು” ಎಂದು ಅವರು ಹೇಳುತ್ತಾರೆ.

ಪಾಲಸ್‌ ಖೇಡಾ ಗ್ರಾಮವು ಜಲ್ನಾ ಜಿಲ್ಲೆಯ ಹಾಗೂ ಈಗ ಕೋಮು ಸೌಹಾರ್ದ ಕದಡಿ ಹೋಗಿರುವ ಮಹಾರಾಷ್ಟ್ರದ ಸಂಕೇತದಂತಿದೆ.

Saiyyad Zakir Khajamiya was attacked by men in black masks who barged into the mosque and beat him when he refused to chant Jai Shri Ram.
PHOTO • Courtesy: Imaad ul Hasan
At his home (right) in Anwa village
PHOTO • Courtesy: Imaad ul Hasan

ಸೈಯದ್ ಜಾಕಿರ್ ಖಾಜ್ಮಿಯಾ ಎಂಬುವರ ಮೇಲೆ ಕಪ್ಪು ಮುಸುಕುಧಾರಿಗಳು ಮಸೀದಿಯೊಳಗೆ ನುಗ್ಗಿ ಜೈ ಶ್ರೀ ರಾಮ್ ಎಂದು ಕೂಗಲು ನಿರಾಕರಿಸಿದ್ದಕ್ಕಾಗಿ ಥಳಿಸಿದ್ದಾರೆ. ಅನ್ವಾ ಗ್ರಾಮದ ಅವರ ಮನೆಯಲ್ಲಿ (ಬಲ)

ಕಳೆದ ವರ್ಷ, ಮಾರ್ಚ್ 26, 2023ರಂದು, ಧಾರ್ಮಿಕ ವಿದ್ವಾಂಸ ಸೈಯದ್ ಜಾಕಿರ್ ಖಾಜ್ಮಿಯಾ ಅವರು ಜಲ್ನಾ ಜಿಲ್ಲೆಯ ಅನ್ವಾ ಗ್ರಾಮದ ಮಸೀದಿಯಲ್ಲಿ ಮೌನವಾಗಿ ಕುರಾನ್ ಓದುತ್ತಿದ್ದರು. “ಆ ಕ್ಷಣದಲ್ಲಿಯೇ ಮೂವರು ಅಪರಿಚಿತ ಮುಸುಕುಧಾರಿಗಳು ಮಸೀದಿಗೆ ಬಂದು ಜೈ ಶ್ರೀರಾಮ್ ಎಂದು ಹೇಳುವಂತೆ ನನ್ನನ್ನು ಕೇಳಿದರು” ಎಂದು ಜಾಕೀರ್ (26) ಪೊಲೀಸರಿಗೆ ತಿಳಿಸಿದರು. “ನಾನು ಅದಕ್ಕೆ ನಿರಾಕರಿಸಿದಾಗ, ಅವರು ನನ್ನ ಎದೆಗೆ ಒದ್ದು, ನನ್ನನ್ನು ಹೊಡೆದರು ಮತ್ತು ನನ್ನ ಗಡ್ಡವನ್ನು ಸಹ ಎಳೆದರು.”

ಅವರ ಸಾಕ್ಷ್ಯದ ಪ್ರಕಾರ, ಕಪ್ಪು ಮುಖವಾಡಗಳನ್ನು ಧರಿಸಿದ ಈ ಜನರು ಅವರನ್ನು ಪ್ರಜ್ಞೆ ಕಳೆದುಕೊಳ್ಳುವವರೆಗೂ ಹೊಡೆದರು ಮತ್ತು ಅವರ ಗಡ್ಡವನ್ನು ಕತ್ತರಿಸಿದರು. ಪ್ರಸ್ತುತ, ಅವರು ಇಲ್ಲಿಂದ 100 ಕಿಲೋಮೀಟರ್ ದೂರದಲ್ಲಿರುವ ಔರಂಗಾಬಾದ್‌ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಲ್ಲಿ ಇಂತಹ ಘಟನೆಗಳು ಅಪರೂಪವೇನಲ್ಲ. ಪರಿಸ್ಥಿತಿ ಉದ್ವಿಗ್ನವಾಗಿದೆ ಎನ್ನುತ್ತಾರೆ ಪಕ್ಕದ ಗ್ರಾಮದ ಮುಖಂಡ ಅಬ್ದುಲ್ ಸತ್ತಾರ್. ಮುಸ್ಲಿಂ ಸಮುದಾಯಕ್ಕೆ ಧೈರ್ಯ ತುಂಬಲು ಪೊಲೀಸರು ಏನನ್ನೂ ಮಾಡಿಲ್ಲ. "ಇಂತಹ ಘಟನೆಗಳು ಹೆಚ್ಚು ವರದಿಯಾಗಿಲ್ಲ, ಆದರೆ ಈಗ ಅವು ನಮ್ಮ ದೈನಂದಿನ ಜೀವನದ ಭಾಗವಾಗಿವೆ."

19 ಜೂನ್ 2023ರಂದು, ಜಲ್ನಾ ಪೊಲೀಸರು 18 ವರ್ಷ ವಯಸ್ಸಿನ ತೌಫಿಕ್ ಬಾಗ್ವಾನ್ ಮೇಲೆ "ಉದ್ದೇಶಪೂರ್ವಕವಾಗಿ ಮತ್ತು ದುರುದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ" ಎಂದು ಆರೋಪಿಸಿದರು. ರೈತ ಕುಟುಂಬಕ್ಕೆ ಸೇರಿದ ತೌಫಿಕ್ ಔರಂಗಜೇಬ್ ಫೋಟೋ ಒಂದನ್ನು ಅಪ್ಲೋಡ್‌ ಮಾಡಿದ್ದ.

ಹಸ್ನಾಬಾದ್‌ ಗ್ರಾಮದ ಕೆಲವು ಬಲಪಂಥೀಯರು ತೌಫೀಖ್ ಅಪ್ಲೋಡ್‌ ಮಾಡಿದ್ದ ಸ್ಟೋರಿಯ ಸ್ಕ್ರೀನ್‌ ಶಾಟ್‌ ತೆಗೆದುಕೊಂಡು ಪೊಲೀಸ್‌ ಠಾಣೆಗೆ ಹೋಗಿದ್ದರು ಎಂದು ತೌಫೀಖ್ ಅವರ ಅಣ್ಣ ಶಫೀಖ್‌ ಹೇಳುತ್ತಾರೆ. “ತೌಫೀಖ್‌ ಬಳಿಯಿದ್ದ ಫೋನನ್ನು ಇನ್ಯಾರಾದರೂ ಸ್ಟೋರಿ ಅಪ್ಲೋಡ್‌ ಮಾಡಿರಬಹುದೇ ಎನ್ನುವುದನ್ನು ಪರಿಶೀಲಿಸಲು ಕೊಂಡು ಹೋಗಿದ್ದಾರೆ. ನನ್ನ ತಮ್ಮನಿಗೆ ಕೇವಲ 18 ವರ್ಷ. ಅವನು ಈಗಾಗಲೇ ಭಯದಿಂದ ನಡುಗಿ ಹೋಗಿದ್ದಾನೆ” ಎಂದು ಶಫೀಖ್‌ ಹೇಳುತ್ತಾರೆ.

ಹಸ್ನಾಬಾದ್ ಭೋಕರ್ದಾನ್ ತಾಲ್ಲೂಕಿನ ಒಂದು ಹಳ್ಳಿಯಾಗಿದ್ದು, ಅಲ್ಲಿ ಅಜೀಮ್ ಅವರ ಗ್ರಾಮವೂ ಇದೆ. ಸಾಮಾಜಿಕ ಮಾಧ್ಯಮ ಪೋಸ್ಟ್ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ಪೊಲೀಸರ ಸಹಕಾರ ಮತ್ತು ಕ್ರಿಯಾಶೀಲತೆಯು ಅಜೀಮ್ ಅನುಭವಿಸಿದ ಭಯಾನಕ ದಾಳಿಗೆ ವ್ಯತಿರಿಕ್ತವಾಗಿತ್ತು.

It was only after Ajim's protest in front of the DC's office in Aurangabad, and his meeting with the Jalna SP, that the Bhokardan police finally filed an FIR
PHOTO • Parth M.N.

ಔರಂಗಾಬಾದ್ ಡಿಸಿ ಕಚೇರಿಯ ಮುಂದೆ ಅಜೀಮ್ ನಡೆಸಿದ ಉಪವಾಸ ಸತ್ಯಾಗ್ರಹ ಮತ್ತು ಜಲ್ನಾ ಪೊಲೀಸ್ ವರಿಷ್ಠಾಧಿಕಾರಿಯೊಂದಿಗಿನ ಭೇಟಿಯ ನಂತರ ಕೊನೆಗೂ ಭೋಕರ್ದಾನ್ ಪೊಲೀಸರು ಎಫ್‌ಐಆರ್ ದಾಖಲಿಸಿದರು

ದೂರು ದಾಖಲಿಸಿಕೊಳ್ಳುತ್ತೇವೆ ಆದರೆ ಅದರಲ್ಲಿ ಕೆಲವು ವಿಷಯಗಳನ್ನು ಸೇರಿಸುವುದಿಲ್ಲ ಎಂದು ಪೊಲೀಸರು ಅಜೀಮ್‌ಗೆ ತಿಳಿಸಿದರು. ಅವರು ಗ್ರಾಮದ 20 ಮುಸ್ಲಿಂ ನಿವಾಸಿಗಳು ಸಹಿ ಮಾಡಿದ ಹೇಳಿಕೆಯನ್ನು ಔರಂಗಾಬಾದ್ ವಿಭಾಗೀಯ ಆಯುಕ್ತರಿಗೆ ಸಲ್ಲಿಸಿದರು. ಗ್ರಾಮದ ಇತರ ಕೆಲವು ಮುಸ್ಲಿಂ ರೈತರು ಅಜೀಮ್ ಜೊತೆಗೆ ಔರಂಗಾಬಾದ್‌ ನಗರದಲ್ಲಿ ಉಪವಾಸ ಮಾಡಿದರು. "ಯಾರೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ತೋರುತ್ತದೆ. ಆಡಳಿತದ ಕಣ್ಣಿಗೆ ನಾವು ಕಾಣಿಸುವುದೇ ಇಲ್ಲ” ಎಂದು ಅಜೀಮ್ ಹೇಳುತ್ತಾರೆ.

ಐದು ದಿನಗಳ ನಂತರ, ವಿಭಾಗೀಯ ಆಯುಕ್ತರು ಅಜೀಮ್ ಮತ್ತು ಇತರ ಪ್ರತಿಭಟನಾಕಾರರನ್ನು ಭೇಟಿಯಾಗಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಜಲ್ನಾದ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗುವಂತೆ ಅವರಿಗೆ ಹೇಳಿದರು.

ಔರಂಗಾಬಾದಿನಲ್ಲಿ ಪ್ರತಿಭಟನೆ ನಡೆಸಿದ ನಂತರ, ಅಜೀನ್ ಜಲ್ನಾದ ಪೊಲೀಸ್ ವರಿಷ್ಠಾಧಿಕಾರಿ ಬಳಿಗೆ ಹೋಗಿ ಅವರನ್ನು ಭೇಟಿಯಾದರು. ಮತ್ತು ದಾಳಿಯ ಬಗ್ಗೆ ಹೇಳಿಕೆಯನ್ನೂ ನೀಡಿದರು. ಅವರು ಭೋಕರ್ದಾನ್ ಪೊಲೀಸ್ ಠಾಣೆಗೆ ಕರೆ ಮಾಡಿ ಈ ವಿಷಯವನ್ನು ಪರಿಶೀಲಿಸುವಂತೆ ಅಲ್ಲಿನ ಪೊಲೀಸರಿಗೆ ನಿರ್ದೇಶನ ನೀಡಿದರು.

ಅಂತಿಮವಾಗಿ, ಜುಲೈ 14ರಂದು, ಭೋಕರ್ದಾನ್ ಪೊಲೀಸರು ದೂರು ದಾಖಲಿಸಿಕೊಂಡರು. ಸುಮಾರು ಎರಡು ತಿಂಗಳ ನಂತರ ಕೇಸು ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು 19 ಜನರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ, ಅವರಲ್ಲಿ ಒಬ್ಬರು ನಿತಿನ್. ಕಾನೂನುಬಾಹಿರ ಸಭೆ, ಗಲಭೆ, ಶಸ್ತ್ರಾಸ್ತ್ರಗಳನ್ನು ಬಳಸುವುದು, ಗಾಯಗೊಳಿಸುವುದು ಮತ್ತು ಸಾವಿಗೆ ಕಾರಣವಾಗುವುದು ಈ ಆರೋಪಗಳಲ್ಲಿ ಸೇರಿವೆ. ಈ ಸೆಕ್ಷನ್ಗಳಲ್ಲಿ ರೂ. 50 ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿಗೆ ಹಾನಿ ಮಾಡುವುದು ಮತ್ತು ಬೆದರಿಕೆ ಉಂಟುಮಾಡುವುದು ಸೇರಿವೆ.

ಇದರ ಹೊರತಾಗಿಯೂ, ಪ್ರಾಥಮಿಕ ಮಾಹಿತಿ ವರದಿಯಲ್ಲಿ ನಗದು ಮತ್ತು ಆಭರಣಗಳ ಕಳ್ಳತನದ ಬಗ್ಗೆ ಒಂದಿಷ್ಟೂ ಉಲ್ಲೇಖಿಸಲಾಗಿಲ್ಲ.

"ಹಾಗೆ ನೋಡಿದರೆ, ದೂರನ್ನು ಸರಿಯಾಗಿ ದಾಖಲಿಸದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಅಜೀಮ್ ಹೇಳುತ್ತಾರೆ. "ಆದರೆ ಇದು ಬಹಳ ದೊಡ್ಡ ನಿರೀಕ್ಷೆಯಾಗಿದೆ. ಅದೇ ಈ ಪ್ರಕರಣದಲ್ಲಿ ಒಬ್ಬ ಮುಸ್ಲಿಮ್ ಆರೋಪಿಯಾಗಿದ್ದಿದ್ದರೆ, ಚಿತ್ರಣವೇ ಬೇರೆಯಾಗಿರುತ್ತಿತ್ತು.

ಭೋಕರ್ದಾನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್‌ ಅವರನ್ನು ಸಂಪರ್ಕಿಸಲು ನಡೆಸಿದ ಹಲವಾರು ಪ್ರಯತ್ನಗಳು ಯಾವುದೇ ಫಲ ನೀಡಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Parth M.N.

پارتھ ایم این ۲۰۱۷ کے پاری فیلو اور ایک آزاد صحافی ہیں جو مختلف نیوز ویب سائٹس کے لیے رپورٹنگ کرتے ہیں۔ انہیں کرکٹ اور سفر کرنا پسند ہے۔

کے ذریعہ دیگر اسٹوریز Parth M.N.
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru