ತಮ್ಮ ಧೋಲಕ್‌ನ ರಿಂಗ್ ಸರಿಪಡಿಸುತ್ತಾ, “ಈಗ ಟಿವಿ ಮತ್ತೆ ಮೊಬೈಲ್ ಬಂದಿವೆ. ಜನರು ಮನರಂಜನೆ ಅದರ ಮೂಲಕ ಪಡೆಯುತ್ತಾರೆ” ಎಂದರು ಮುಸ್ಲಿಂ ಖಲೀಫಾ.
ಮುಸ್ಲಿಂ ಖಲೀಫಾ 12ನೇ ಶತಮಾನದ ಯೋಧರಾದ ಅಲ್ಹಾ ಮತ್ತು ಉದಲ್ ಸಹೋದರರ ವೀರಗಾಥೆಗಳನ್ನು ಹಾಡುತ್ತಾರೆ (ಕೆಲವೊಮ್ಮೆ ಉದಲ್ ಬದಲಿಗೆ ರುದಾಲ್ ಎಂದು ಸಹ ಬರೆಯಲಾಗುತ್ತದೆ). ಈ ಜಾನಪದ ಗಾಯಕ ಬಿಹಾರದ ಸಮಸ್ತಿಪುರ ಜಿಲ್ಲೆಯವರಾಗಿದ್ದು, ಸುಮಾರು ಐದು ದಶಕಗಳಿಂದ ಹಾಡುತ್ತಿದ್ದಾರೆ ಮತ್ತು ಧೋಲಕ್ ನುಡಿಸುತ್ತಿದ್ದಾರೆ; ಅವರ ಧ್ವನಿಯಲ್ಲಿ ತೀಕ್ಷ್ಣತೆಯಿದೆ, ಅದು ಅವರ ಗಾಯನವನ್ನು ವಿಶೇಷಗೊಳಿಸುತ್ತದೆ.
ಏಪ್ರಿಲ್-ಮೇ ತಿಂಗಳಲ್ಲಿ ಭತ್ತ, ಗೋಧಿ ಮತ್ತು ಮೆಕ್ಕೆಜೋಳದ ಕೊಯ್ಲಿನ ಸಮಯದಲ್ಲಿ, ಅವರು ಹೊಲಗಳಲ್ಲಿ ಸುತ್ತಾಡುತ್ತಾ, ಧೋಲಕ್ ಬಾರಿಸುತ್ತಾ ಹಾಡುತ್ತಾರೆ ಮತ್ತು ರೈತರಿಗೆ ವೀರಗಾಥೆಗಳನ್ನು ವಿವರಿಸುತ್ತಾರೆ. ಸುಮಾರು ಎರಡು ಗಂಟೆಗಳ ಕಾಲದ ಪ್ರದರ್ಶನಕ್ಕೆ ಪ್ರತಿಯಾಗಿ, ಅವರು ಸುಮಾರು 10 ಕಿಲೋ ಧಾನ್ಯವನ್ನು ಪಡೆಯುತ್ತಾರೆ. "ಮೂರು ಬೆಳೆಗಳನ್ನು ಕೊಯ್ಲು ಮಾಡಲು ಒಂದು ತಿಂಗಳು ಬೇಕಾಗುತ್ತದೆ, ಆ ತಿಂಗಳಿಡೀ ಹೊಲಗಳಲ್ಲಿ ಅಲೆದಾಡುತ್ತೇನೆ" ಎಂದು ಅವರು ಹೇಳುತ್ತಾರೆ, ಮೂರು ತಿಂಗಳ ಕಾಲ ಮದುವೆಗಳ ಸಮಯದಲ್ಲಿ ಬೇಡಿಕೆ ಹೆಚ್ಚಾಗುತ್ತದೆ, ಆ ಸಮಯದಲ್ಲಿ 10ರಿಂದ 15,000 ರೂ.ಗಳನ್ನು ಗಳಿಸುತ್ತಾರೆ.
ಅಲ್ಹಾ-ಉದಲ್ ವೀರಗಾಥೆಯು ಎಷ್ಟು ಉದ್ದವಾಗಿದೆಯೆಂದರೆ ಅದನ್ನು ಸಂಪೂರ್ಣವಾಗಿ ಹಾಡಲು ಪ್ರಾರಂಭಿಸಿದರೆ ಮುಗಿಯಲು ಹಲವು ದಿನಗಳು ಬೇಕಾಗುತ್ತವೆ. ಮತ್ತು ಇದಕ್ಕೆ ಆಸಕ್ತಿ ಹಾಗೂ ಬದ್ಧತೆಯನ್ನು ಹೊಂದಿರುವ ಕೇಳುಗರು ಬೇಕಾಗುತ್ತಾರೆ. ಖಲೀಫಾ ಹೇಳುತ್ತಾರೆ, "ಇಷ್ಟು ದಿನ ಯಾರು ಕೇಳುತ್ತಾರೆ?" ಈಗ ಈ ವೀರಗಾಥೆಯು ಬೇಡಿಕೆಯಲ್ಲಿ ಕುಸಿತವನ್ನು ಕಾಣುತ್ತಿದ್ದು, ಇದು ಅವರ ಗಳಿಕೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ತನ್ನ ಸ್ವಂತ ಮಕ್ಕಳಿಗೂ ಅಲ್ಹಾ-ಉದಲ್‌ನಲ್ಲಿ ಆಸಕ್ತಿಯಿಲ್ಲ ಎಂದು ಖಲೀಸ್‌ಪುರ ಗ್ರಾಮದ ಈ 60 ವರ್ಷದ ಜಾನಪದ ಗಾಯಕ ವಿಷಾದದಿಂದ ಹೇಳುತ್ತಾರೆ.
ಖಲೀಫಾ ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ, ಆದರೆ ಅವರು ಬಿಹಾರದಲ್ಲಿ ಪರಿಶಿಷ್ಟ ಜಾತಿಯಡಿ ಪಟ್ಟಿಮಾಡಲಾದ ನಾಟ್ ಸಮುದಾಯಕ್ಕೆ ಸೇರಿದವರು. ಬಿಹಾರದಲ್ಲಿ ನಾಟ್ ಸಮುದಾಯದ ಜನಸಂಖ್ಯೆ ಪ್ರಸ್ತುತ 58,819, ಆದರೆ “ಅವರಲ್ಲಿ 10-20 ಹಳ್ಳಿಗಳಲ್ಲಿ ಹುಡುಕಿದರೆ ಒಬ್ಬರು ಅಥವಾ ಇಬ್ಬರು [ಅಲ್ಹಾ - ಉದಲ್] ಗಾಯಕರು ಸಿಗಬಹುದು” ಎಂದು ಮೇ ತಿಂಗಳಲ್ಲಿ ನಮ್ಮೊಡನೆ ಮಾತನಾಡುತ್ತಾ ಹೇಳಿದರು.
ಖಲೀಸ್ಪುರ ಗ್ರಾಮದಲ್ಲಿನ ಅವರ ಗುಡಿಸಲಿನ ಗೋಡೆಯಲ್ಲಿ ಒಂದು ಧೋಲಕ್ ಸದಾ ನೇತಾಡುತ್ತಿರುತ್ತದೆ. ಕೋಣೆಯಲ್ಲಿ ಮಲಗಲು ಹಾಸಿಗೆಯಿದೆ ಮತ್ತು ಕೆಲವು ವಸ್ತುಗಳು ಅಲ್ಲಲ್ಲಿ ಬಿದ್ದಿವೆ. ಮುಸ್ಲಿಂ ಖಲೀಫರ ಪೂರ್ವಜರು ಆರು ತಲೆಮಾರುಗಳಿಂದ ಈ ಗುಡಿಸಲಿನಲ್ಲಿ ವಾಸಿಸುತ್ತಿದ್ದರು; ಈಗ ಅವರು ತಮ್ಮ ಪತ್ನಿ ಮೋಮಿನಾ ಅವರೊಂದಿಗೆ ಇಲ್ಲಿ ವಾಸಿಸುತ್ತಿದ್ದಾರೆ. ಅಲ್ಹಾ-ಉದಲ್ ವೀರಗಾಥೆಯನ್ನು ಹಾಡುವಂತೆ ನಾವು ಅವರನ್ನು ಕೇಳಿದಾಗ, ಸಂಜೆ ಹಾಡಲು ಸೂಕ್ತ ಸಮಯವಲ್ಲ ಎಂದ ಅವರು ಬೆಳಗ್ಗೆ ಬರುವಂತೆ ವಿನಂತಿಸಿದರು, ಮರುದಿನ ಬೆಳಗ್ಗೆ ನಾವು ಅವರ ಮನೆಗೆ ತಲುಪಿದಾಗ, ಸ್ಟೂಲ್ ಮೇಲೆ ಧೋಲ್ ಇರಿಸಲಾಗಿತ್ತು. ಅವರು ತನ್ನ ತೆಳುವಾದ ಮೀಸೆಗೆ ಬಣ್ಣ ಹಚ್ಚಿಕೊಂಡು ಹಾಡಲು ಚೌಕಿಯಲ್ಲಿ ಡೋಲು ಹಿಡಿದು ಕುಳಿತರು.
ಮುಂದಿನ ಐದು ನಿಮಿಷಗಳ ಕಾಲ, ಅವರು ಧೋಲಕ್‌ನ ಎರಡೂ ತುದಿಗಳಲ್ಲಿನ ಚರ್ಮವನ್ನು ಬಿಗಿಗೊಳಿಸಲು ಹಗ್ಗದ ಇನ್ನೊಂದು ಬದಿಯಲ್ಲಿರುವ ಹಿತ್ತಾಳೆ ಉಂಗುರಗಳನ್ನು ಅತ್ತಿತ್ತ ಎಳೆದರು ಮತ್ತು ಸದ್ದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಬೆರಳುಗಳಿಂದ ಧೋಲಕ್ ನುಡಿಸಿದರು. ಮುಂದಿನ ಐದು ನಿಮಿಷಗಳ ಕಾಲ, ಅವರು ಅಲ್ಹಾ-ಉದಲ್, ಬೆಟ್ವಾ ನದಿ, ಯುದ್ಧ, ಅವರ ವೀರತ್ವ ಇತ್ಯಾದಿಗಳನ್ನು ಉಲ್ಲೇಖಿಸುವ ಹಾಡನ್ನು ಹಾಡಿದರು. ಒಂದು ಕಾಲದಲ್ಲಿ ಅಲ್ಹಾ-ಉದಲ್ ಹಾಡಲು ಸುಮಾರು 10 ಕೋಸ್ (31 ಕಿಲೋಮೀಟರಿ)ಗಿಂತಲೂ ಹೆಚ್ಚು ದೂರ ಪ್ರಯಾಣಿಸುತ್ತಿದ್ದೆ ಎಂದು ಅವರು ಹೇಳುತ್ತಾರೆ.
ಹಾಡು ಮುಗಿದ ನಂತರ, ಅವರು ಧೋಲಕ್‌ನ ಉಂಗುರಗಳನ್ನು ಕೆಳಗಿಳಿಸುವ ಮೂಲಕ ಚರ್ಮವನ್ನು ಸಡಿಲಗೊಳಿಸಿ ಅದನ್ನು ಮತ್ತೆ ಗೋಡೆಯಲ್ಲಿ ನೇತುಹಾಕಿದರು. "ಚರ್ಮವನ್ನು ಸಡಿಲಗೊಳಿಸದಿದ್ದರೆ, ಅದು ಹದಗೆಡುತ್ತದೆ ಮತ್ತು ಗುಡುಗು ಬಂದರೆ, ಧೋಲಕ್ ಸ್ಫೋಟಗೊಳ್ಳುತ್ತದೆ" ಎಂದು ಅವರು ಹೇಳುತ್ತಾರೆ. "ಆದರೆ ಏಕೆ ಹಾಗಾಗುತ್ತದೆನ್ನುವುದು, ನನಗೆ ಗೊತ್ತಿಲ್ಲ."
ಧೋಲಕ್‌ನ ಫ್ರೇಮ್ ಮರದಿಂದ ಮಾಡಲ್ಪಟ್ಟಿದ್ದು, ಅದು ಸುಮಾರು 40 ವರ್ಷಗಳಷ್ಟು ಹಳೆಯದು. ಹಗ್ಗಗಳು ಮತ್ತು ಚರ್ಮವನ್ನು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಯಿಸಲಾಗಿದ್ದರೂ, ಉಪಕರಣದ ರಚನೆಯು ಅದೇ ಆಗಿರುತ್ತದೆ. "ಧೋಲಕ್‌ನ ಫ್ರೇಮ್ ಪರಿಪೂರ್ಣವಾಗಿದೆ. ಅದಕ್ಕೆ ಗೆದ್ದಲು ಹಿಡಿಯದಂತೆ ಕಾಪಾಡಿಕೊಳ್ಳಲು ಅದಕ್ಕೆ ಸಾಸಿವೆ ಎಣ್ಣೆ ಹಚ್ಚುತ್ತೇವೆ."
ಮುಸ್ಲಿಂ ಖಲೀಫಾ 20-30 ವರ್ಷಗಳ ಹಿಂದಿನ ಅವಧಿಯನ್ನು ಅಲ್ಹಾ-ಉದಲ್ ಗಾಯಕರ ಸುವರ್ಣ ಯುಗವೆಂದು ಪರಿಗಣಿಸುತ್ತಾರೆ, ಆಗ 'ಬಿದೇಸಿಯಾ ನಾಚ್' ಕಾರ್ಯಕ್ರಮಗಳಲ್ಲಿ ಅಲ್ಹಾ-ಉದಲ್ ಗಾಯಕರಿಗೆ ಬೇಡಿಕೆ ಇತ್ತು. "ದೊಡ್ಡ ಭೂಮಾಲೀಕರು ಸಹ ಈ ವೀರಗಾಥೆಯನ್ನು ಕೇಳಲು ನಮ್ಮನ್ನು ಕರೆಸುತ್ತಿದ್ದರು."
ಅಲ್ಹಾ-ಉದಲ್ ವೀರಗಾಥೆಯು ಎಷ್ಟು ಉದ್ದವಾಗಿದೆ [52 ಸಂಪುಟಗಳು] ಎಂದರೆ ಇಡೀ ಕಥೆಯನ್ನು ನಿರೂಪಿಸಲು ಹಲವು ದಿನಗಳು ಬೇಕಾಗುತ್ತವೆ. ʼಆದರೆ ಇಂದು ಇಷ್ಟು ದಿನ ಕೇಳುವವರು ಯಾರು?ʼ ಎಂದು ಖಲೀಫಾ ಕೇಳುತ್ತಾರೆ
ಬಿದೇಸಿಯಾ ಎನ್ನುವುದು ಪ್ರಸಿದ್ಧ ಭೋಜಪುರಿ ನಾಟಕಕಾರ ದಿವಂಗತ ಭಿಖಾರಿ ಠಾಕೂರ್ ಅವರ ಅತ್ಯಂತ ಪ್ರಸಿದ್ಧ ನಾಟಕವಾಗಿದೆ. ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಹೋಗುವುದನ್ನು ಆಧರಿಸಿ, ಈ ನಾಟಕವನ್ನು ಹಾಡು ಮತ್ತು ನೃತ್ಯ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತದೆ.
ಭೂಮಾಲೀಕರು ತನ್ನಂತಹ ಅಲ್ಹಾ-ಉದಲ್ ಗಾಯಕರನ್ನು ತುಂಬಾ ಇಷ್ಟಪಡುತ್ತಿದ್ದ ಸಮಯವನ್ನು ಖಲೀಫಾ ನೆನಪಿಸಿಕೊಳ್ಳುತ್ತಾರೆ. "ವರ್ಷವಿಡೀ ಹಾಡುಗಳಿಗೆ ಬೇಡಿಕೆಯಿರುತ್ತಿತ್ತು, ವಿರಾಮವೇ ಸಿಗುತ್ತಿರಲಿಲ್ಲ. ಎಷ್ಟು ಹಾಡುತ್ತಿದ್ದೆ ಎಂದರೆ ಹಾಡಿ ಹಾಡಿ ನನಗೆ ಗಂಟಲು ಕಟ್ಟುತ್ತಿತ್ತು. ಹಾಡಲು ಸಾಧ್ಯವಾಗದೆ ಕಾರ್ಯಕ್ರಮಗಳನ್ನು ನಿರಾಕರಿಸುತ್ತಿದ್ದೆ"
*****
ವೀರರ ಕುರಿತಾದ ಮಹಾಕಾವ್ಯ ಅಲ್ಹಾ-ಉದಲ್ ಭಾರತದ ಉತ್ತರದ ರಾಜ್ಯಗಳಲ್ಲಿ ಜನಪ್ರಿಯವಾಗಿದೆ. ಅಲ್ಹಾ ಮತ್ತು ಉದಲ್ ಸಹೋದರರು ಕ್ರಿ.ಶ 12ನೇ ಶತಮಾನದಲ್ಲಿ ಇಂದಿನ ಉತ್ತರ ಪ್ರದೇಶದ ಮಹೋಬಾವನ್ನು ಆಳಿದ ಚಂದೇಲ್ ರಾಜ ಪರ್ಮಲ್ ಎನ್ನುವವನ ಸೇನಾ ನಾಯಕರಾಗಿ ಸೇವೆ ಸಲ್ಲಿಸಿದ್ದರು ಎಂದು ಕರಿನ್ ಸ್ಕೋಮರ್ ಅವರ ದಿ ವರ್ಲ್ಡ್ ಆಫ್ ಮ್ಯೂಸಿಕ್ ಜರ್ನಲ್ನಲ್ಲಿನ ಲೇಖನದಲ್ಲಿ ತಿಳಿಸಲಾಗಿದೆ. ಮಹೋಬಾದ ರಕ್ಷಣೆಯ ಹೊಣೆ ಹೊತ್ತಿದ್ದ ಅಲ್ಹಾ-ಉದಲ್ ನಿರ್ಭೀತ ಮತ್ತು ಅನುಭವಿ ಯೋಧರೆಂದು ಹೆಸರುವಾಸಿಯಾಗಿದ್ದಾರೆ. ಮಹೋಬಾ ಮತ್ತು ದೆಹಲಿ ಸಾಮ್ರಾಜ್ಯಗಳ ನಡುವಿನ ಮಹಾ ಯುದ್ಧದೊಂದಿಗೆ ಅಲ್ಹಾ-ಉದಲ್ ಕಥೆ ಕೊನೆಗೊಳ್ಳುತ್ತದೆ.
ಖಲೀಫಾ ತನ್ನ ಬೇರುಗಳನ್ನು ಮಹೋಬಾದಲ್ಲಿ ಗುರುತಿಸುತ್ತಾರೆ. ತನ್ನ ಪೂರ್ವಜರು ಮಹೋಬಾ ಪ್ರದೇಶದ ನಿವಾಸಿಗಳಾಗಿದ್ದರು ಮತ್ತು ಅವರು ಅಕ್ಬರನ ಆಳ್ವಿಕೆಯಲ್ಲಿ ಪಲಾಯನ ಮಾಡಿ ಬಿಹಾರದಲ್ಲಿ ನೆಲೆಸಿದರು ಎಂದು ಅವರು ಹೇಳುತ್ತಾರೆ. ತಮ್ಮ ಪೂರ್ವಜರು ರಜಪೂತ ಜಾತಿಗೆ ಸೇರಿದವರು ಎಂದು ಅವರು ಹೇಳುತ್ತಾರೆ. ಬಿಹಾರವನ್ನು ತಲುಪಿದ ನಂತರ, ಅವರ ಪೂರ್ವಜರು ಜೀವನೋಪಾಯಕ್ಕಾಗಿ ಅಲ್ಹಾ-ಉದಲ್ ಹಾಡುವ ಕುಟುಂಬ ಸಂಪ್ರದಾಯವನ್ನು ಕೈಗೆತ್ತಿಕೊಂಡರು. ಈ ಕಲೆ ನಂತರ ತಲೆಮಾರುಗಳಿಗೆ ಪರಂಪರೆಯಾಗಿ ಹರಿದುಬಂದಿತು.
ತಂದೆ ಸಿರಾಜುಲ್ ಖಲೀಫಾ ನಿಧನರಾದಾಗ ಖಲೀಫಾರಿಗೆ ಎರಡು ವರ್ಷ. ಅವರ ತಾಯಿಯೇ ಅವರನ್ನು ಬೆಳೆಸಿ ದೊಡ್ಡವರನ್ನಾಗಿಸಿದರು. “ಚಿಕ್ಕವನಿರುವಾಗ ನನಗೆ ಎಲ್ಲಿ ಅಲ್ಹಾ – ಉದಲ್ ಹಾಡುಗಾರಿಕೆ ಇದ್ದರು ಕೇಳಲು ಹೋಗುತ್ತಿದ್ದೆ. ಯಾವುದೇ ಹಾಡನ್ನು ಒಮ್ಮೆ ಕೇಳಿದರೂ, ಸರಸ್ವತಿದೇವಿಯ ಕೃಪೆಯಿಂದಾಗಿ ನೆನಪಿನಲ್ಲಿ ಉಳಿದುಬಿಡುತ್ತಿತ್ತು. ನನಗೆ ಇದರ [ಅಲ್ಹಾ – ಉದಲ್] ಕುರಿತು ಹುಚ್ಚು ಹಿಡಿದಿತ್ತು. ಹಾಗಾಗಿ ಆ ಸಮಯದಲ್ಲಿ ನನಗೆ ಬೇರೆ ಕೆಲಸಗಳ ಕಡೆ ಗಮನವೂ ಹೋಗಲಿಲ್ಲ.” ಎನ್ನುತ್ತಾರೆ ಅವರು.
ಆ ಅವಧಿಯಲ್ಲಿ, ಅವರು ರೆಹಮಾನ್ ಖಲೀಫಾ ಎಂಬ ಗಾಯಕನನ್ನು ಭೇಟಿಯಾದರು, ಅವರನ್ನು ಖಲೀಫಾ 'ಉಸ್ತಾದ್' (ಶಿಕ್ಷಕ) ಎಂದು ಕರೆಯುತ್ತಾರೆ. "ನಾನು ಅವರೊಂದಿಗೆ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದೆ. ಅವರಿಗೆ ಸಹಾಯ ಮಾಡುತ್ತಿದ್ದೆ, ಅವರ ವಸ್ತುಗಳನ್ನು ಸಾಗಿಸುತ್ತಿದ್ದೆ" ಎಂದು ಅವರು ಹೇಳುತ್ತಾರೆ. ರೆಹಮಾನ್ ಕೆಲವೊಮ್ಮೆ ಅವರಿಗೆ ಧೋಲಕ್ ನೀಡಿ ಹಾಡಲು ಹೇಳುತ್ತಿದ್ದರು. "ನಾನು ಅವರೊಂದಿಗೆ ಇದ್ದಾಗ ಅಲ್ಹಾ-ಉದಲ್ ಕಥೆಯ 10-20 ಅಧ್ಯಾಯಗಳನ್ನು ಕಂಠಪಾಠ ಮಾಡಿದ್ದೇನೆ."
ಖಲೀಫಾ ವಿದ್ಯಾವಂತರಲ್ಲ, ಹಾಗೆಂದು ಅವರಿಗೆ ಓದುವುದರಲ್ಲಿ ಆಸಕ್ತಿ ಇರಲಿಲ್ಲ ಎಂದಲ್ಲ. ಅವರು ಸರ್ಕಾರಿ ಶಾಲೆಗೆ ಹೋಗುತ್ತಿದ್ದರು, ಆದರೆ ಒಂದು ದಿನ ಶಿಕ್ಷಕರೊಬ್ಬರು ಹೊಡೆದರು, ಅಂದಿನಿಂದ ಶಾಶ್ವತವಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದರು.
“ಆಗ ನನಗೆ 7- 8 ವರ್ಷವಿದ್ದಿರಬಹುದು. ಸಣ್ಣಂದಿನಿಂದಲೇ ಒಳ್ಳೆಯ ದನಿಯಿತ್ತು. ಶಿಕ್ಷಕರಿಗೆಲ್ಲ ಮೆಚ್ಚಿನ ವಿದ್ಯಾರ್ಥಿಯಾಗಿದ್ದೆ. ಅವರು ಆಗಾಗ ನನ್ನಿಂದ ಹಾಡಿಸುತ್ತಿದ್ದರು. ಒಮ್ಮೆ ಪ್ರಾರ್ಥನೆ ಹಾಡುವಾಗ ತಪ್ಪಾಯಿತೆಂದು ಶಿಕ್ಷಕರೊಬ್ಬರು ಕಪಾಳಕ್ಕೆ ಹೊಡೆದರು. ಇದು ನನಗೆ ಸಿಟ್ಟು ತರಿಸಿತು. ಅಂದಿನಿಂದ ನಾನು ಶಾಲೆಗೆ ಹೋಗುವುದನ್ನು ನಿಲ್ಲಿಸಿದೆ.”
ಹಾಗೆ ನೋಡಿದರೆ ಮುಸ್ಲಿಂ ಖಲೀಫಾ ಅವರ ಬದುಕೇ ಒಂದು ದಂತಕಥೆಯಂತಿದೆ. ಅಲ್ಹಾ – ಉದಲ್ ಹಾಡುಗಾರಿಕೆ ತನ್ನ ಬದುಕನ್ನು ನಿರೂಪಿಸಿದ ರೀತಿಯ ಕುರಿತು ಅವರಿಗೆ ಹೆಮ್ಮೆಯಿದೆ. ಈ ಕಲೆಗೆ ತಾನು ಕೃತಜ್ಞ ಎನ್ನುತ್ತಾರೆ. ಅವರು ತನ್ನ ಹಾಡುಗಾರಿಕೆಯಿಂದಲೇ ಮೂವರು ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿಸಿ ಅವರಿಗೆ ಮದುವೆ ಮಾಡಿಸಿದ್ದಾರೆ. ಇದರಿಂದಲೇ ಬದುಕು ನಡೆಸಿದ್ದಾರೆ. ಆದರೆ ಇನ್ನು ಮುಂದೆ ಹಾಡು ಮತ್ತು ಧೋಲಕ್ ಮೂಲಕ ಕುಟುಂಬ ಸಾಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ. ಅವರಿಗೆ ಈಗ ಕೆಲವು ಮನೆಯಲ್ಲಿ ನಡೆಯುವ ಸಣ್ಣ ಕಾರ್ಯಕ್ರಮಗಳಿಗಷ್ಟೇ ಆಹ್ವಾನ ಬರುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಅವರಿಗೆ 300-500 ರೂಪಾಯಿಗಳಷ್ಟು ಸಂಪಾದನೆ ಹುಟ್ಟುತ್ತದೆ.
ಒಂದು ದಿನ ನನ್ನ ಮಗ ನೀವು ಯಾವ ಆಸ್ತಿ ಮಾಡಿದ್ದೀರಿ? ಎಂದು ಕೇಳಿದಾಗ ಎದೆ ಒಡೆದಂತಾಯಿತು ಎನ್ನುತ್ತಾರೆ ಖಲೀಫಾ. ಹಾಗೆ ಹೇಳುವಾಗ ಅವರ ಮುಖದಲ್ಲಿ ವಿಷಾದದ ಛಾಯೆಯೊಂದು ಹರಿದುಹೋಯಿತು. “[ನನ್ನ ಮಗನ] ಪ್ರಶ್ನೆಗೆ ನನ್ನ ಬಳಿ ಮೌನದ ಹೊರತಾಗಿ ಉತ್ತರವಿರಲಿಲ್ಲ. ಅಲ್ಹಾ – ಉದಲ್ ಗಾಯನದ ಮೂಲಕ ನನಗೆ ಹಣ ಉಳಿತಾಯ ಮಾಡಲು ಸಾಧ್ಯವಾಗಿಲ್ಲವೆನ್ನುವುದು ಆಗ ಅರಿವಿಗೆ ಬಂತು. ಇದರಿಂದ ಮನೆ ಕಟ್ಟುವ ಸಲುವಾಗಿ ಸಣ್ಣ ಭೂಮಿಯ ತುಂಡನ್ನು ಸಹ ಖರೀದಿಸಲಾಗಿಲ್ಲ. ಹೋದಲ್ಲೆಲ್ಲ ಸಿಕ್ಕಿದ್ದು ಬಹಳಷ್ಟು ಗೌರವ, ಜೊತೆಗೆ ಕೇವಲ ಹೊಟ್ಟೆ ತುಂಬಿಸಲು ಸಾಕಾಗುವಷ್ಟು ಹಣ.”
"ನನ್ನ ಕುಟುಂಬದ ತಲೆಮಾರುಗಳು ಇಲ್ಲಿ ವಾಸಿಸಿವೆ, ಆದರೆ ನನ್ನ ಗುಡಿಸಲು ಇರುವ ಭೂಮಿ ಸರ್ಕಾರಿ ಭೂಮಿ, ಇದು ಸರ್ಕಾರಿ ಕೊಳದ ದಡದಲ್ಲಿದೆ."
ನುರಿತ ಹಚ್ಚೆ ಕಲಾವಿದೆಯಾಗಿದ್ದ ಅವರ ಪತ್ನಿ, ಐವತ್ತೈದು ವರ್ಷದ ಮೊಮಿನಾ, ಅಸ್ತಮಾ ಮತ್ತು ಶ್ರವಣ ದೋಷದಿಂದ ಬಳಲುತ್ತಿದ್ದಾರೆ. "ಈ ಮೊದಲು, ನಾವು ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸುತ್ತಿದ್ದೆವು, ನಾನು ಹಚ್ಚೆ ಹಾಕುತ್ತಿದ್ದೆ. ಈಗ, ನನ್ನ ದೇಹದಲ್ಲಿ ಶಕ್ತಿ ಉಳಿದಿಲ್ಲ. ನನ್ನ ಗಂಡನಿಂದಾಗಿ ಇನ್ನೂ ಬದುಕುಳಿದಿದ್ದೇನೆ" ಎಂದು ಅವರು ಹೇಳುತ್ತಾರೆ.
ವೈಯಕ್ತಿಕ ನಷ್ಟಕ್ಕಿಂತಲೂ ಖಲೀಫಾ ಅವರನ್ನು ಹೆಚ್ಚು ಕಾಡುತ್ತಿರುವುದು ಮುಂದಿನ ಪೀಳಿಗೆಗೆ ಈ ಕಲೆಯ ಕುರಿತು ಆಸಕ್ತಿ ಉಳಿದಿಲ್ಲದಿರುವುದು. ತನ್ನ ನಂತರ ಉಲ್ಹಾ ಉದಲ್ ಕಲೆಯನ್ನು ಮುಂದಕ್ಕೆ ಕೊಂಡೊಯ್ಯಬಲ್ಲವರು ಕುಟುಂಬದಲ್ಲಿ ಯಾರೂ ಇಲ್ಲವೆನ್ನುವ ಚಿಂತೆ ಅವರನ್ನು ಕಾಡುತ್ತಿದೆ.
“ನನ್ನಪ್ಪ, ಅಜ್ಜ, ಅವರ ಹಿಂದಿನವರು ಅಲ್ಹಾ – ಉದಲ್ ಹಾಡುವ ಮೂಲಕವೇ ಬದುಕು ನಡೆಸಿದ್ದರು. ಈಗ ಇದನ್ನು ನಾನು ಹಾಡುತ್ತಿದ್ದೇನೆ. ಆದರೆ ನನ್ನ ಮಗ ಇದುವರೆಗೂ ಈ ಹಾಡುಗಾರಿಕೆಯನ್ನು ಕಲಿತಿಲ್ಲ. ನನ್ನ ಮಕ್ಕಳಿಗೆ ಇದರಲ್ಲಿ ಆಸಕ್ತಿಯಿಲ್ಲ” ಎಂದು ಅವರು ವಿಷಾದದಿಂದ ಹೇಳುತ್ತಾರೆ. “ಈ ಹಾಡನ್ನು ನಾವು ಆಗ ಅತ್ಯುತ್ಸಾಹದಿಂದ ಕಲಿತಿದ್ದೆವು. ಆದರೆ ಈಗಿನ ಮಕ್ಕಳಿಗೆ ಇದರ ಕುರಿತು ಆಸಕ್ತಿಯೇ ಇಲ್ಲ.”
"ಈ ಹಿಂದೆ, ಮದುವೆಗಳಲ್ಲಿ ಶೆಹನಾಯಿ ಮತ್ತು ತಬಲಾದಂತಹ ವಾದ್ಯಗಳ ಪಕ್ಕವಾದ್ಯವಾದ ಖುರ್ದಕ್ ಬಾಜಾವನ್ನು ನುಡಿಸಲಾಗುತ್ತಿತ್ತು. ನಂತರ ಇದರ ಬದಲಿಗೆ ಆಂಗ್ರೇಜಿ ಬಾಜಾ ಬಳಸುವುದನ್ನು ಆರಂಭಿಸಲಾಯಿತು, ಅದರಲ್ಲಿ ಡೋಲುಗಳು, ಟ್ರಂಪೆಟ್, ಶೆಹನಾಯಿ, ಕೀಬೋರ್ಡ್ ಮುಂತಾದ ವಾದ್ಯಗಳನ್ನು ಏಕಕಾಲದಲ್ಲಿ ನುಡಿಸಲಾಗುತ್ತದೆ. ಇದಾದ ನಂತರ ಟ್ರಾಲಿ ಸಂಗೀತ ಬಂತು. ಇದರಲ್ಲಿ ಸ್ಥಳೀಯ ಗಾಯಕರು ಇಂಗ್ಲಿಷ್ ಸಂಗೀತಕ್ಕೆ ಹಾಡುತ್ತಿದ್ದರು. ಈಗ ಅದೂ ಹೋಗಿ ಡಿಜೆ ಬಂದಿದೆ. ಎಲ್ಲ ಸಂಗೀತ ಉಪಕರಣಗಳೂ ಮೂಲೆಗೆ ಬಿದ್ದಿವೆ.
“ನನ್ನ ಮರಣದ ನಂತರ [ನನ್ನ ಕುಟುಂಬದಲ್ಲಿ] ಈ ಕಲೆಯ ಯಾವುದೇ ಕುರುಹು ಉಳಿಯುವುದಿಲ್ಲವೆನ್ನುವುದು ನನ್ನನ್ನು ಬಹಳ ಕಾಡುತ್ತದೆ” ಎಂದು ಅವರು ನೋವಿನಿಂದ ಹೇಳುತ್ತಾರೆ.
ಈ ವರದಿಗೆ ರಾಜ್ಯದ ಅಂಚಿನಲ್ಲಿರುವ ಜನರ ಹೋರಾಟಗಳನ್ನು ಮುನ್ನಡೆಸಿದ ಬಿಹಾರದ ಟ್ರೇಡ್ ಯೂನಿಯನ್ ಹೋರಾಟಗಾರರ ಸ್ಮರಣಾರ್ಥ ಫೆಲೋಶಿಪ್ ಸಹಾಯ ಪಡೆಯಲಾಗಿರುತ್ತದೆ .
ಅನುವಾದ: ಶಂಕರ. ಎನ್. ಕೆಂಚನೂರು