ಅನೋಪರಾಮ್ ಸುತಾರ್ ಎಂದೂ ಸಂಗೀತ ವಾದ್ಯಗಳನ್ನು ನುಡಿಸಿದವರಲ್ಲ, ಆದರೆ ಅವರಿಗೆ ಯಾವ ಮರ ಉತ್ತಮ ಸ್ವರ ಹೊರಡಿಸುತ್ತದೆ ಎನ್ನುವುದನ್ನು ತನ್ನ ಅನುಭವದಿಂದಲೇ ಕಂಡುಕೊಳ್ಳಬಲ್ಲರು. “ಒಂದು ಮರದ ತುಂಡನ್ನು ನೋಡಿಯೇ ಅದರಿಂದ ಒಂದು ಒಳ್ಳೆಯ ಸಂಗೀತ ವಾದ್ಯವನ್ನು ತಯಾರಿಸಲು ಸಾಧ್ಯವೋ ಇಲ್ಲವೋ ಎನ್ನುವುದನ್ನು ಹೇಳಬಲ್ಲೆ” ಈ ಎಂಟನೇ ತಲೆಮಾರಿನ ಅನುಭವಿ ಖರ್ತಾಲ್ ತಯಾರಕ ಹೇಳುತ್ತಾರೆ.
ರಾಜಸ್ಥಾನದ ಜಾನಪದ ಮತ್ತು ಭಕ್ತಿ ಸಂಗೀತದಲ್ಲಿ ಬಳಸಲಾಗುವ ಸಂಗೀತ ಉಪಕರಣವಾದ ಖರ್ತಾಲನ್ನು ನಾಲ್ಕು ಮರದ ತುಂಡುಗಳನ್ನು ಬಳಸಿ ತಯಾರಿಸಲಾಗುತ್ತದೆ. ಅವುಗಳಲ್ಲಿ ಒಂದು ತುಂಡನ್ನು ಹೆಬ್ಬೆರಳಿಗೆ ಸಿಕ್ಕಿಸಿಕೊಂಡರೆ, ಇನ್ನೊಂದನ್ನು ಉಳಿದ ಬೆರಳುಗಳಿಗೆ ಸಿಕ್ಕಿಸಿಕೊಳ್ಳಲಾಗುತ್ತದೆ. ಅವುಗಳನ್ನು ಪರಸ್ಪರ ತಾಕಿಸಿದಾಗ ಟಕ್ ಟಕ್ ಎನ್ನುವ ಸದ್ದು ಹೊರಡುತ್ತದೆ. ಈ ವಾದ್ಯದಲ್ಲಿ ಕೇವಲ ತ ಮತ್ತು ಕ ಎನ್ನುವ ಸ್ವರಗಳನ್ನಷ್ಟೇ ಬಳಸಲಾಗುತ್ತದೆ. “ಕಲಾಕಾರ್ ಬನವಾತೇ ಹೈ [ಸಂಗೀತಗಾರರು ಖರ್ತಾಲ್ ಮಾಡಿಸುತ್ತಾರೆ]" ಎಂದು 57 ವರ್ಷದ ಅವರು ಹೇಳುತ್ತಾರೆ.
ರಾಜಸ್ಥಾನಿ ಖರ್ತಾಲ್‌ಗಳಲ್ಲಿ ಮಂಜೀರಾ ಅಥವಾ ಕರತಾಳಗಳಲ್ಲಿ ಇರುವಂತೆ ಗೆಜ್ಜೆಗಳು ಇರುವುದಿಲ್ಲ.
ನುರಿತ ಕುಶಲಕರ್ಮಿ ಕೇವ ಎರಡು ಗಂಟೆಗಳಲ್ಲಿ ನಾಲ್ಕು ಜೋಡಿ ಖರ್ತಾಲ್ ತಯಾರಿಸಬಲ್ಲರು. “ಮೊದಲಿಗೆ ಒಂದಿಡೀ ದಿನ ಬೇಕಾಗುತ್ತಿತ್ತು” ಎಂದು ಅವರು ತಮ್ಮ ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನಪಿಸಿಕೊಂಡು ಹೇಳುತ್ತಾರೆ. ಅನೋಪರಾಮ್ ಅವರ ಕುಟುಂಬವು ಸುಮಾರು ಎರಡು ಶತಮಾನಗಳಿಂದ ಖರ್ತಾಲ್ ತಯಾರಿಸುವ ವೃತ್ತಿಯಲ್ಲಿ ತೊಡಗಿಸಿಕೊಂಡಿದೆ. “ಬಚಪನ್ ಸೇ ಯಹೀ ಕಾಮ್ ಹೇ ಹಮಾರಾ [ಬಾಲ್ಯದಿಂದಲೂ ಇದೇ ಕೆಲಸ ಮಾಡುತ್ತಿರುವುದು].”
ತನ್ನ ತಂದೆ ಉಸ್ಲಾರಾಮ್ ಅವರು ಬಹಳ ಸಹನಶೀಲ ಗುರುಗಳಾಗಿದ್ದರು, ಬಹಳ ತಾಳ್ಮೆಯಿಂದ ಕೆಲಸ ಕಲಿಸುತ್ತಿದ್ದರು ಎಂದು ಅವರು ಹೇಳುತ್ತಾರೆ. “ನಾನು ಬಹಳಷ್ಟು ತಪ್ಪು ಮಾಡುತ್ತಿದ್ದೆ. ಆದರೆ ಎಂದೂ ಅವರು ನನ್ನ ಮೇಲೆ ಕೂಗಾಡಿದವರಲ್ಲ. ಯಾವಾಗಲೂ ಪ್ರೀತಿಯಿಂದ ಕೆಲಸ ಕಲಿಸುತ್ತಿದ್ದರು.” ಖರ್ತಾಲ್ ತಯಾರಿಕೆಯೆನ್ನುವುದು ಸುತಾರ್ ಸಮುದಾಯದವರು ಮಾತ್ರವೇ ಅಭ್ಯಾಸ ಮಾಡುವ ಕರಕುಶಲ ಕಲೆ.
ಬಾರ್ಮರ್ ಜಿಲ್ಲೆಯ ಹರ್ಸಾನಿ ಗ್ರಾಮದವರಾದ ಅನೋಪರಾಮ್ 1981ರಲ್ಲಿ ಕೆಲಸ ಹುಡುಕಿಕೊಂಡು ಜೈಸಲ್ಮೇರ್ ನಗರಕ್ಕೆ ಬಂದರು. “ಊರಿನಲ್ಲಿ ನಮಗೆ ಸಾಕಷ್ಟು ಮರಗೆಲಸ ಸಿಗುತ್ತಿರಲಿಲ್ಲ” ಎಂದು ಅವರು ಹೇಳುತ್ತಾರೆ. ಈ ಅನುಭವಿ ಮರಗೆಲಸಗಾರ ಹಾರ್ಮೋನಿಯಂ, ಕಮೈಚಾ, ಸಾರಂಗಿ ಮತ್ತು ವೀಣೆಯನ್ನು ಸಹ ತಯಾರಿಸುತ್ತಾರೆ. “ಆದರೆ ಅವುಗಳಿಗೆ ಬೇಡಿಕೆ ಬರುವುದು ಅಪರೂಪ.” ಕ್ರಮವಾಗಿ 8,000 ಮತ್ತು 4,000 ರೂಪಾಯಿಗಳಿಗೆ ಮಾರಾಟವಾಗುವ ಕಮೈಚಾ ಮತ್ತು ಸಾರಂಗಿಯನ್ನು ತಯಾರಿಸಲು ಅವರಿಗೆ ಒಂದು ವಾರಕ್ಕಿಂತಲೂ ಹೆಚ್ಚು ಸಮಯ ಹಿಡಿಯುತ್ತದೆ.
ಸಂಗೀತ ಉಪಕರಣಗಳ ಜೊತೆಗೆ ಅವರು ಬಾಗಿಲು ಕೆತ್ತನೆಯ ಕೆಲಸವನ್ನೂ ಕರಗತ ಮಾಡಿಕೊಂಡಿದ್ದಾರೆ. ಅವರು ಬಾಗಿಲುಗಳ ಮೇಲೆ ವಿಶಿಷ್ಟ ರೀತಿಯ ಹೂವಿನ ಚಿತ್ರಗಳನ್ನು ಕೆತ್ತುವುದರಲ್ಲಿ ನಿಪುಣ. ತಮ್ಮ ಕೆಲಸದ ಭಾಗವಾಗಿ ಅವರು ವಾರ್ಡ್ ರೋಬ್, ಕುರ್ಚಿ, ಡ್ರೆಸ್ಸಿಂಗ್ ಯೂನಿಟ್ ರೀತಿಯ ಮನೆಗೆ ಬೇಕಾಗುವ ವಸ್ತುಗಳನ್ನೂ ತಯಾರಿಸುತ್ತಾರೆ.
ರಾಜಸ್ಥಾನದ ಜೈಸಲ್ಮೇರ್ ಮತ್ತು ಜೋಧಪುರ ಜಿಲ್ಲೆಗಳಲ್ಲಿನ ಖರ್ತಾಲಗಳನ್ನು ಶೀಶಮ್ ಅಥವಾ ಸಫೇದಾ (ನೀಲಗಿರಿ) ಮರ ಬಳಸಿ ತಯಾರಿಸಲಾಗುತ್ತದೆ. ಸರಿಯಾದ ಮರವನ್ನು ಆಯ್ಕೆ ಮಾಡುವುದು ಈ ಕೆಲಸದ ಮೊದಲ ಮತ್ತು ಬಹಳ ಮುಖ್ಯ ಹಂತ. “ದೇಖ್ ಕೇ ಲೇನಾ ಪಡ್ತಾ ಹೈ [ಎಚ್ಚರಿಕೆಯಿಂದ ಗಮನಿಸಿ ಖರೀದಿಸಬೇಕು]” ಎನ್ನುವ ಅವರು “ಯುವ ಪೀಳಿಗೆಗೆ ಖರ್ತಾಲ್ ರೀತಿಯ ಉಪಕರಣ ತಯಾರಿಕೆಗೆ ಎಂತಹ ಮರ ಬೇಕು ಎನ್ನುವುದು ಸಹ ತಿಳಿದಿಲ್ಲ” ಎಂದು ಹೇಳುತ್ತಾರೆ.
ಜೈಸಲ್ಮೇರ್ ನಗರದಲ್ಲಿ ಮರ ಖರೀದಿಸುವ ಅನೋಪರಾಮ್ ಖರ್ತಾಲ್ ತಯಾರಿಸಲು ಶೀಶಮ್ ಮತ್ತು ಸಫೇದಾ ಮರಗಳನ್ನು ಬಳಸುತ್ತಾರೆ. ಆದರೆ ಈಗ ಉತ್ತಮ ಮರವನ್ನು ಹುಡುಕುವುದು ಸವಾಲಾಗಿ ಪರಿಣಮಿಸಿದೆ ಎಂದು ಅವರು ಹೇಳುತ್ತಾರೆ.
ಎರಡು ಜೋಡಿ ಖರ್ತಾಲ್ ತಯಾರಿಸಲು ಅವರು 2.5 ಅಡಿ ಉದ್ದದ ಮರದ ತುಂಡನ್ನು ಬಳಸುತ್ತಾರೆ, ಅದರ ಬೆಲೆ ಸುಮಾರು 150 ರೂಪಾಯಿ. ನಂತರ ಅವರು, 7.25 ಇಂಚು ಉದ್ದ, 2.25 ಇಂಚು ಅಗಲ ಮತ್ತು 6 ಮಿಲಿಮೀಟರ್ ಆಳಕ್ಕೆ ಅಳತೆ ಮಾಡಿ ಗರಗಸದಿಂದ ಮರವನ್ನು ಕತ್ತರಿಸುತ್ತಾರೆ.
"ಬುರಾದಾ ಉಡ್ತಾ ಹೆ ಔರ್ ನಾಕ್, ಆಂಖ್ ಮೇ ಚಲಾ ಜಾತಾ ಹೇ [ಮರದ ಪುಡಿ ಅಗಾಗ ಕಣ್ಣು ಮತ್ತು ಕಿವಿಗಳಿಗೆ ಹೋಗುತ್ತದೆ” ಎಂದು ಅವರು ಹೇಳುತ್ತಾರೆ. ಇದರಿಂದಾ ಅವರನ್ನು ಕೆಮ್ಮು ಕೂಡಾ ಕಾಡುತ್ತದೆ. ಮಾಸ್ಕ್ ಧರಿಸುವುದರಿಂದ ಯಾವುದೇ ಪ್ರಯೋಜನವಿಲ್ಲ, ಏಕೆಂದರೆ ದಿನಕ್ಕೆ ಎಂಟು ಗಂಟೆಗಳಿಗಿಂತ ಹೆಚ್ಚು ಕಾಲ ಮಾಸ್ಕ್ ಧರಿಸುವುದು ಉಸಿರುಗಟ್ಟಿದಂತಾಗುತ್ತದೆ. “ಜೈಸಲ್ಮೇರ್ ಬಿಸಿಲಿಗೆ ಅದೆಲ್ಲ ಇನ್ನೂ ಕಷ್ಟ” ಎಂದು ಅವರು ಹೇಳುತ್ತಾರೆ. ಜೈಸಲ್ಮೇರ್ ಪ್ರದೇಶದಲ್ಲಿ ತಾಪಮಾನವು 45 ಡಿಗ್ರಿಯವರೆಗೆ ತಲುಪುತ್ತದೆ.
ಮರವನ್ನು ಕತ್ತರಿಸಿದ ನಂತರ ಅವರು ಅದರ ಮೇಲ್ಮೈ ನಯಗೊಳಿಸಲು ರಂದಾ (ಹ್ಯಾಂಡ್ ಪ್ಲೇನ್) ಕೈಗೆತ್ತಿಕೊಳ್ಳುತ್ತಾರೆ. “ಇದನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಮರ ವ್ಯರ್ಥ. ಇನ್ನೊಂದು ತುಂಡು ತೆಗೆದುಕೊಂಡು ಮತ್ತೆ ಕೆಲಸ ಮಾಡಬೇಕಾಗುತ್ತದೆ” ಎಂದು ಅವರು ಹೇಳುತ್ತಾರೆ. ಸಂಗೀತದ ಸ್ವರವನ್ನು ಹುಟ್ಟಿಸುವ ಸಲುವಾಗಿ ಖರ್ತಾಲ್‌ಗಳನ್ನು ಪರಸ್ಪರ ಬಾರಿಸಲಾಗುತ್ತದೆ. ಹೀಗಾಗಿ ಅದರ ಮೇಲ್ಮೈ ಏರುಪೇರಾದರೆ ಅದರಿಂದ ಹೊರಡುವ ಸ್ವರ ಮತ್ತು ಧ್ವನಿ ಬದಲಾಗಬಹುದು.
ಕೆಲವೊಮ್ಮೆ ಗರಗಸದಿಂದ ಅವರ ಕೈಗಳಿಗೆ ಗಾಯವಾಗುತ್ತದೆ. ಜೊತೆಗೆ ಸುತ್ತಿ ಬಳಸಿ ಹೊಡೆಯುವುದರಿಂದಲೂ ಅವರಿಗೆ ಕೈ ನೋವು ಬರುತ್ತದೆ. ಆದರೆ ಕೆಲಸದಲ್ಲಿ ಅದೆಲ್ಲ ಮಾಮೂಲಿ ಎನ್ನುತ್ತಾ ಅವರು ಆ ಮಾತನ್ನು ತಳ್ಳಿ ಹಾಕುತಾರೆ. ನನ್ನ ತಂದೆ ಉಸ್ಲಾರಾಮ್ ಕೂಡಾ ಆಗಾಗ ಕೈಗೆ ಗಾಯ ಮಾಡಿಕೊಳ್ಳುತ್ತಿದ್ದ ಬಗ್ಗೆ ಅವರು ಹೇಳಿದರು.
ಮರದ ತುಂಡಿನ ಮೇಲ್ಮೈ ನಯಗೊಳಿಸಲು ಅವರಿಗೆ ಅವರಿಗೆ ಸುಮಾರು ಒಂದು ಗಂಟೆ ಬೇಕಾಗುತ್ತದೆ. ನಂತರ ಅವರು ಇನ್ನೊಂದು ಸಣ್ಣ ಗರಗಸ (ಆಕ್ಸರ್ ಬ್ಲೇಡ್) ಬಳಸಿ ಮರದ ಮೂಲೆಗಳನ್ನು ಅರೆ ವೃತ್ತಾಕರಕ್ಕೆ ತರುತ್ತಾರೆ. ಹಾಗೆ ಕತ್ತರಿಸಿದ ಮೂಲೆಗಳನ್ನು ಎಚ್ಚರಿಕೆಯಿಂದ ಗಮನಿಸಿದ ನಂತರ ಅನೋಪರಾಮ್ ಮರಳಿನ ಉಜ್ಜು ಕಾಗದ ಬಳಸಿ ಮರವನ್ನು ಕನ್ನಡಿಯಂತೆ ಹೊಳೆಯುವ ಹಾಗೆ ಮಾಡುತ್ತಾರೆ.
ಖರ್ತಾಲ್ ಖರೀದಿಸಿದ ನಂತರ ಸಂಗೀತಗಾರ ಉಪಕರಣದ ಸ್ವರವನ್ನು ಇನ್ನಷ್ಟು ಉತ್ತಮಗೊಳಿಸಲು ಮತ್ತೆ ಸ್ಯಾಂಡ್ ಪೇಪರ್ ಬಳಸುತ್ತಾನೆ. ಉಪಕರಣ ಸಿದ್ಧವಾದ ನಂತರ ಅದಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚಿ ಕಂದು ಬಣ್ಣಕ್ಕೆ ತರಲಾಗುತ್ತದೆ.
ಅವರು ಎರಡು ಜೋಡಿ ಸಫೇದಾ ಖರ್ತಾಲ್‌ಗಳನ್ನು 350 ರೂಪಾಯಿಗೆ ಮಾರಿದರೆ, ಶೀಶಮ್ ಮರದಿಂದ ತಯಾರಿಸಿದ ಖರ್ತಾಲ್‌ಗಳನ್ನು 450 ರೂಪಾಯಿಗಳಿಗೆ ಮಾರುತ್ತಾರೆ. “ಶೀಶಮ್ ಮರದಿಂದ ತಯಾರಿಸಿದ ಖರ್ತಾಲ್ ಉತ್ತಮ ಧ್ವನಿ ಮತ್ತು ಸ್ವರಗಳಿಗೆ ಹೆಸರುವಾಸಿ” ಎಂದು ಅವರು ಹೇಳುತ್ತಾರೆ.
ಅನೋಪರಾಮ್ ಅವರಿಗೆ ತಿಂಗಳಿಗೆ 5-10 ಜೋಡಿ ಖರ್ತಾಲ್ ತಯಾರಿಕೆಯ ಬೇಡಿಕೆಯನ್ನು ಪಡೆಯುತ್ತಾರೆ. ಆರಂಭದಲ್ಲಿ ಈ ಸಂಖ್ಯೆ ಎರಡರಿಂದ ನಾಲ್ಕರ ನಡುವೆ ಇರುತ್ತಿತ್ತು. ರಾಜಸ್ಥಾನಕ್ಕೆ ಭೇಟಿ ನೀಡುವ ಅನೇಕ ವಿದೇಶಿ ಪ್ರವಾಸಿಗರ ಕಾರಣದಿಂದಾಗಿ ಈ ಉಪಕರಣಕ್ಕೆ ಬೇಡಿಕೆ ಹೆಚ್ಚಾಗಿದೆ, ಆದರೆ ಅದನ್ನು ತಯಾರಿಸುವ ಜನರ ಸಂಖ್ಯೆ ಕಡಿಮೆಯಾಗಿದೆ. ಎರಡು ದಶಕಗಳ ಹಿಂದೆ, ಈ ಉಪಕರಣವನ್ನು ತಯಾರಿಸಬಲ್ಲ 15ಕ್ಕೂ ಹೆಚ್ಚು ಬಡಗಿಗಳು ಇದ್ದರು. ಆದರೆ ಇಂದಿನ ಯುವಕರು ಉತ್ತಮ ಸಂಪಾದನೆ ಹುಡುಕಿಕೊಂಡು ನಗರಗಳಿಗೆ ಹೋಗಿ ಅಲ್ಲಿ ಪೀಠೋಪಕರಣ ತಯಾರಿಸುವ ಕೆಲಸ ಮಾಡುತ್ತಾರೆ. ಇದು ಒಳ್ಳೆಯ ಸಂಪಾದನೆಯನ್ನು ತರುತ್ತದೆ.
ಪ್ರವಾಸಿಗರಿಗೆ ಖರ್ತಾಲ್ ಮಾರುವ ಕೆಲವು ಕುಶಲಕರ್ಮಿಗಳು ವಿದೇಶಿಗರೊಂದಿಗೆ ಆನ್ಲೈನ್ ಸೆಷನ್ನುಗಳನ್ನು ಸಹ ನಡೆಸುತ್ತಾರೆ. ಅವರು ವಿವಿಧ ಭಾಷೆಗಳನ್ನು ಸಹ ಈ ಸಂದರ್ಭದಲ್ಲಿ ನಿಭಾಯಿಸುತ್ತಾರೆ.
“ಇದು ಬಹಳ ಹಳೆಯ ಕಲೆ ಆದರೆ ಯುವ ಪೀಳಿಗೆ ಖರ್ತಾಲ್ ತಯಾರಿಕೆ ಕಲಿಯಲು ಆಸಕ್ತಿಯಿಲ್ಲ” ಕಳೆದ 30 ವರ್ಷಗಳಲ್ಲಿ, ಈ ವಾದ್ಯಗಳನ್ನು ತಯಾರಿಸಲು ಸುಮಾರು ಏಳು ಜನರಿಗೆ ಕಲಿಸಿದ್ದೇನೆ ಎಂದು ಅನೋಪರಾಮ್ ಹೇಳುತ್ತಾರೆ. “ಅವರು ಎಲ್ಲೇ ಇದ್ದರೂ ಖರ್ತಾಲ್ ತಯಾರಿಕೆಯನ್ನು ಮುಂದುವರೆಸಿದ್ದಾರೆ ಎಂದು ನಾನು ನಂಬಿಕೊಂಡಿದ್ದೇನೆ.”
ಅವರ ಮಕ್ಕಳಾದ 28 ವರ್ಷದ ಪ್ರಕಾಶ್ ಮತ್ತು 24 ವರ್ಷದ ಕೈಲಾಶ್ ಖರ್ತಾಲ್ ತಯಾರಿಸುವುದನ್ನು ಕಲಿತಿಲ್ಲ. ಅವರು ಬೇರೆ ರಾಜ್ಯಗಳಲ್ಲಿ ಬಡಗಿಗಳಾಗಿ ಕೆಲಸ ಮಾಡುತ್ತಾರೆ, ಮನೆಗಳು ಮತ್ತು ಕಚೇರಿಗಳಲ್ಲಿ ಪೀಠೋಪಕರಣಗಳನ್ನು ತಯಾರಿಸುತ್ತಾರೆ. ಅವರ ಮಗಳು ಸಂತೋಷ್ ಬದುಕಿನ 20ರ ದಶಕದ ಮಧ್ಯದಲ್ಲಿದ್ದು, ಮದುವೆಯಾಗಿ ಗೃಹಿಣಿ. ಅವರ ಮಕ್ಕಳು ಎಂದಾದರೂ ಕೆಲಸ ಕಲಿಯುತ್ತಾರೆಯೇ ಎಂದು ಕೇಳಿದಾಗ, ಅವರು ಹೇಳುತ್ತಾರೆ, "ಕೋಯಿ ಭರೋಸಾ ನಹೀ ಅವರು [ಯಾವುದೇ ಭರವಸೆ ಇಲ್ಲ].”
ನಮ್ಮ ಮಾತುಕತೆ ಕೇಳುತ್ತಿದ್ದ ಗ್ರಾಹಕರೊಬ್ಬರು ನಡುವೆ ಪ್ರವೇಶಿಸಿ ಅನೋಪರಾಮ್ ಅವರ ಬಳಿ “ನೀವೇಕೆ ಹಣ ಸಂಪಾದಿಸಲು ದೊಡ್ಡ ನಗರಗಳತ್ತ ಹೋಗಿಲ್ಲ? ಎಂದು ಕೇಳಿದರು” ಅದಕ್ಕೆ ಅವರು “ಹಮ ಇಸ್ಮೆ ಖಷ್ ಹೈ [ನನಗೆ ಇದರಲ್ಲೇ ಖುಷಿಯಿದೆ]” ಎಂದು ಉತ್ತರಿಸಿದರು.
ಈ ಕಥಾನಕವು ಸಂಕೇತ್ ಜೈನ್ ಅವರ ಗ್ರಾಮೀಣ ಕುಶಲಕರ್ಮಿಗಳ ಕುರಿತಾದ ಸರಣಿಯ ಭಾಗವಾಗಿದೆ ಮತ್ತು ಇದಕ್ಕೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ ಬೆಂಬಲ ದೊರೆತಿದೆ.
ಅನುವಾದ: ಶಂಕರ. ಎನ್. ಕೆಂಚನೂರು