“ನಮ್ಮ ಗ್ರಾಮದಲ್ಲಿ ಯಾವ ಹೆಣ್ಣಿಗೂ ರಕ್ಷಣೆ ಇಲ್ಲ. ರಾತ್ರಿ ಎಂಟೊಂಬತ್ತು ಗಂಟೆ ಆದ ಮೇಲೆ ಅವರು ಮನೆಗಳನ್ನು ಬಿಟ್ಟು ಆಚೆ ಬರುವುದೇ ಇಲ್ಲ,” ಎಂದು ಶುಕ್ಲಾ ಘೋಷ್‌ ಹೇಳುತ್ತಾರೆ. ಇವರು ಪಶ್ಚಿಮ್‌ ಮೇದಿನಿಪುರದಲ್ಲಿ ಇರುವ ಕೌಪುರ ಎಂಬ ಗ್ರಾಮದ ಬಗ್ಗೆ ಹೇಳುತ್ತಿದ್ದಾರೆ. “ಹೆಣ್ಣು ಮಕ್ಕಳು ಭಯದಲ್ಲಿ ಬದುಕುತ್ತಿದ್ದಾರೆ. ಆದರೆ ಅವರಿಗೂ ಇದನ್ನು ವಿರೋಧಿಸಿ ಪ್ರತಿಭಟಿಸಬೇಕೆಂದು ಇದೆ,” ಎಂದು ಅವರು ಹೇಳುತ್ತಾರೆ.

ಕೌಪುರದಿಂದ ಬಂದಿರುವ ಘೋಷ್‌ ಮತ್ತು ಇತರ ಹುಡುಗಿಯರು ಪಶ್ಚಿಮ ಬಂಗಾಳದ ಊರು ಊರುಗಳಿಂದ, ಸಣ್ಣ ಸಣ್ಣ ಪಟ್ಟಣಗಳಿಂದ ಬಂದಿರುವ ಸಾವಿರಾರು ರೈತರು, ಕೃಷಿ ಕಾರ್ಮಿಕರು ಮತ್ತು ಕೆಲಸಗಾರರು ಕಳೆದ ವಾರ ರಸ್ತೆಗಳಿಗೆ ಇಳಿದಿದ್ದಾರೆ. ಇವರೆಲ್ಲರೂ ಆರ್‌. ಜಿ. ಕಾರ್‌ ಮೆಡಿಕಲ್‌ ಕಾಲೇಜ್‌ ಮತ್ತು ಆಸ್ಪತ್ರೆಯಲ್ಲಿ ನಡೆದಿರುವ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಘಟನೆ ನಡೆದ 44 ದಿನಗಳ ನಂತರ, ಸೆಪ್ಟೆಂಬರ್‌ 21, 2024 ರಂದು ಮಧ್ಯ ಕೋಲ್ಕತ್ತಾದ ಕಾಲೇಜ್‌ ಸ್ಟ್ರೀಟ್‌ನಿಂದ ಪ್ರತಿಭಟನೆ ಆರಂಭವಾಗಿ ಮೂರ್ನಾಲ್ಕು ಕಿಲೋಮೀಟರ್‌ ದೂರದ ವರೆಗೆ ಶ್ಯಾಮ್‌ಬಜಾರ್‌ ಕಡೆಗೆ ಸಾಗಿತು.

ಪ್ರತಿಭಟನಾಕಾರರ ಪ್ರಮುಖ ಬೇಡಿಕೆಗಳೆಂದರೆ: ಮರಣ ಹೊಂದಿರುವ ವೈದ್ಯೆಗೆ ತಕ್ಷಣ ನ್ಯಾಯ ನೀಡುವುದು, ತಪ್ಪಿತಸ್ಥರಿಗೆ ಕಠಿಣ ಶಕ್ಷೆ ನೀಡುವುದು, ಕೋಲ್ಕತ್ತಾದ ಪೊಲೀಸ್‌ ಆಯುಕ್ತರ ರಾಜೀನಾಮೆ (ವೈದ್ಯರು ನಡೆಸಿದ ಪ್ರತಿಭಟನೆಯಲ್ಲಿ ಮುಂದಿಡಲಾಗಿದ್ದ ಈ ಬೇಡಿಕೆಯನ್ನು ಸರ್ಕಾರ ಸ್ವೀಕರಿಸಿದೆ) ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಗೃಹ ಮತ್ತು ಬೆಟ್ಟಗಾಡು ವ್ಯವಹಾರಗಳ ಖಾತೆಗಳನ್ನು ನಿಬಾಯಿಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ರಾಜೀನಾಮೆ ನೀಡುವುದು.

PHOTO • Sarbajaya Bhattacharya
PHOTO • Sarbajaya Bhattacharya

ಎಡ : ಪಶ್ಚಿಮ ಮೇದಿನಿಪುರದ ಐಸಿಡಿಎಸ್ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶುಕ್ಲಾ ಘೋಷ್ , ತನ್ನ ಊರು ಕುವಾಪುರದ ಹುಡುಗಿಯರು ಸುರಕ್ಷಿತವಾಗಿಲ್ಲ ಎಂದು ಹೇಳುತ್ತಾರೆ . ಬಲ : ಕೃಷಿ ಕಾರ್ಮಿಕ ಮಿತಾ ರೇ ಹೂಗ್ಲಿಯ ನಕುಂಡಾದಿಂದ ಪ್ರತಿಭಟನಾ ಮೆರವಣಿಗೆಗೆ ಬಂದಿದ್ದಾರೆ

“ತಿಲೋತ್ತಮ ತೊಮರ್‌ ನಾಮ್‌, ಜುರ್ಚೆ ಶೋಹೋರ್ ಜುರ್ಚೆ ಗ್ರಾಮ್‌ [ತಿಲೋತ್ತಮ, ನಿಮ್ಮ ಹೆಸರಿನಲ್ಲಿ ನಗರಗಳು, ಹಳ್ಳಿಗಳು ಒಂದಾಗಿವೆ]!” - ಇದು ಪ್ರತಿಭಟನಾ ಮೆರವಣಿಗೆಯಲ್ಲಿ ಕೇಳಿ ಬರುತ್ತಿದ್ದ ಘೋಷಣೆ. ‘ತಿಲೋತ್ತಮʼ ಎಂಬುದು ಮರಣ ಹೊಂದಿರುವ 31 ವರ್ಷ ಪ್ರಾಯದ ಯುವ ವೈದ್ಯೆಗೆ ನಗರ ನೀಡಿರುವ ಹೆಸರು. ಇದು ದೇವಿ ದುರ್ಗೆಗೆ ಇರುವ ಇನ್ನೊಂದು ಹೆಸರು. ಪರಮಶ್ರೇಷ್ಟವಾದ ಕಣಗಳಿಂದ ತುಂಬಿರುವವಳು ಎಂಬುದು ಇದರ ಅರ್ಥ. ಇದು ಕೋಲ್ಕತ್ತ ನಗರಕ್ಕಿರುವ ಒಂದು ವಿಶೇಷಣ.

“ಮಹಿಳೆಯರು ಸುರಕ್ಷತೆಯಿಂದ ಬದುಕಲು ಸಹಾಯ ಮಾಡುವುದು ಪೊಲೀಸರ ಮತ್ತು ಅಧಿಕಾರಿಗಳ ಜವಾಬ್ದಾರಿ,” ಎಂದು ಶುಕ್ಲಾ ಮಾತನ್ನು ಮುಂದುವರಿಸುತ್ತಾರೆ. “ಇವರು ಆರೋಪಿಗಳನ್ನು ರಕ್ಷಿಸಲು ಪ್ರಯತ್ನ ಪಡುತ್ತಿರುವುದನ್ನು ಹೆಣ್ಣು ಮಕ್ಕಳು ನೋಡಿದರೆ, ಅವರಿಗೆ ತಾವು ಸುರಕ್ಷಿತರು ಎಂಬ ನಂಬಿಕೆ ಹೇಗೆ ಬರಬೇಕು?” ಎಂದು ಪಶ್ಚಿಮ ಮೇದಿನಿಪುರದ ಐಸಿಡಿಎಸ್ ಕಾರ್ಯಕರ್ತರ ಜಿಲ್ಲಾ ಕಾರ್ಯದರ್ಶಿಯಾಗಿರುವ ಇವರು ಕೇಳುತ್ತಾರೆ.

“ಕೃಷಿ ಕಾರ್ಮಿಕರಾಗಿರುವ ನಮ್ಮಂತವರ ಸುರಕ್ಷತೆಗಾಗಿ ಅವರು [ಸರ್ಕಾರ] ಏನು ಮಾಡಿದ್ದಾರೆ?” ಎಂದು ಪ್ರತಿಭಟನೆಗೆ ಬಂದಿರುವ ಮಿತಾ ರೇ ಕೇಳುತ್ತಾರೆ. “ಊರಿನಲ್ಲಿ ಹೆಣ್ಣು ಮಕ್ಕಳು ರಾತ್ರಿ ಹೊತ್ತು ಹೊರಗಡೆ ಹೋಗಲು ಹೆದರುತ್ತಿದ್ದಾರೆ. ಈ ಕಾರಣಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ನಾವು ಮಹಿಳೆಯರ ಮತ್ತು ಹೆಣ್ಣು ಮಕ್ಕಳ ರಕ್ಷಣೆಗಾಗಿ ಹೋರಾಡಲೇ ಬೇಕು,” ಎಂದು ಅವರು ಹೇಳುತ್ತಾರೆ. ರೇಯವರು ಹೂಗ್ಲಿ ಜಿಲ್ಲೆಯ ನಕುಂದದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

45 ವರ್ಷ ಪ್ರಾಯದ ಇವರು ಬಯಲಿಗೆ ಮಲವಸರ್ಜನೆ ಮಾಡಲು ಹೋಗುವ ಬದಲಾಗಿ ಪಕ್ಕಾ ಶೌಚಾಲಯ ಹೊಂದಿರಬೇಕು ಎಂದು ಬಯಸುತ್ತಾರೆ. ಮಿತಾ ಅವರ ಬಳಿ ಎರಡು ಬಿಘಾ ಭೂಮಿ ಇದೆ, ಇದರಲ್ಲಿ ಅವರು ಬಟಾಟೆ, ಅಕ್ಕಿ ಮತ್ತು ಎಳ್ಳು ಬೆಳೆಯುತ್ತಾರೆ. ಆದರೆ, ಇತ್ತೀಚಿಗೆ ಪ್ರವಾಹ ಬಂದು ಬೆಳೆಯೆಲ್ಲಾ ಹಾನಿಯಾಯಿತು. “ನಮಗೆ ಇನ್ನೂ ಪರಿಹಾರ ಹಣ ಸಿಕ್ಕಿಲ್ಲ,” ಎಂದು ಕೃಷಿ ಕಾರ್ಮಿಕರಾಗಿ 250 ರುಪಾಯಿ ಸಂಬಳಕ್ಕೆ ದಿನಕ್ಕೆ 14 ಗಂಟೆ ದುಡಿಯುವ ಮಿತಾ ಹೇಳುತ್ತಾರೆ. ತಮ್ಮ ಹೆಗಲಿನ ಮೇಲೆ ಭಾರತೀಯ ಕಮ್ಯುನಿಸ್ಟ್‌ (ಮಾರ್ಕ್ಸ್ ವಾದಿ) ಪಾರ್ಟಿಯ ಕೆಂಪು ಬಾವುಟವನ್ನು ಹೊತ್ತುಕೊಂಡಿದ್ದರು. ಪತಿಯನ್ನು ಕಳೆದುಕೊಂಡಿರುವ ಇವರಿಗೆ ವಿಧವಾ ವೇತನವೂ ಸಿಗುತ್ತಿಲ್ಲ. ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರಮುಖ ಯೋಜನೆಯಾದ ಲಕ್ಷ್ಮೀರ್ ಭಂಡಾರ್‌ ಯೋಜನೆಯಡಿಯಲ್ಲಿ 1,000 ರುಪಾಯಿ ಸಿಕ್ಕಿದರೂ, ಮನೆ ನಡೆಸಲು ಇದು ಸಾಕಾಗುತ್ತಿಲ್ಲ ಎಂದು ಹೇಳುತ್ತಾರೆ.

PHOTO • Sarbajaya Bhattacharya
PHOTO • Sarbajaya Bhattacharya

ಕೋಲ್ಕತ್ತಾದ ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಗೋಡೆ ಬರಹ

PHOTO • Sarbajaya Bhattacharya
PHOTO • Sarbajaya Bhattacharya

ಎಡ : ನ್ಯಾಷನಲ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಗೋಡೆಗಳ ಮೇಲಿನ ಗೋಡೆ ಬರಹವು ' ಸರ್ಕಾರ ಅತ್ಯಾಚಾರಿಗಳನ್ನು ರಕ್ಷಿಸುತ್ತದೆ , ಹೀಗಾಗಿ ಸರ್ಕಾರವೇ ಅತ್ಯಾಚಾರಿ ' ಎಂದು ಹೇಳುತ್ತದೆ . ಬಲ : ' ಪಿತೃಪ್ರಭುತ್ವ ಕೊನೆಗೊಳ್ಳಲಿ '

*****

“ಒಬ್ಬಳು ಹೆಣ್ಣಾಗಿ ನಾನು ಇಲ್ಲಿಗೆ ಬಂದಿದ್ದೇನೆ.”

ಮಾಲ್ಡಾ ಜಿಲ್ಲೆಯ ಚಂಚಲ್ ಗ್ರಾಮದಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವ ಬಾನು ಬೇವಾ ತಮ್ಮ ಇಡೀ ಜೀವನವನ್ನು ದುಡಿಮೆಯಲ್ಲೇ ಕಳೆದಿದ್ದಾರೆ. ಉದ್ಯೋಗಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಲು ನಿರ್ಧಿರಿಸಿರುವ  63 ವರ್ಷ ವಯಸ್ಸಿನ ಇವರು ಪ್ರತಿಭಟನೆಗೆ ಬಂದಿರುವ ತಮ್ಮ ಜಿಲ್ಲೆಯ ಇತರ ಮಹಿಳೆಯರೊಂದಿಗೆ ನಿಂತಿದ್ದಾರೆ.

“ಮಹಿಳೆಯರು ರಾತ್ರಿ ವೇಳೆಯಲ್ಲೂ ಕೆಲಸ ಮಾಡುವಂತೆ ಆಗಬೇಕು,” ಎಂದು ನಮಿತಾ ಮಹತೋರವರು ಹೇಳುತ್ತಾರೆ. ಇವರು ಆಸ್ಪತ್ರೆಗಳಲ್ಲಿ ಮಹಿಳಾ ಸಿಬ್ಬಂದಿಗೆ ರಾತ್ರಿ ಸಮಯದಲ್ಲಿ ಕೆಲಸ ನೀಡದಂದೆ ಸರ್ಕಾರ ನೀಡಿರುವ ನಿರ್ದೇಶನವನ್ನು ಉಲ್ಲೇಖಿಸಿ ಈ ಮಾತನ್ನು ಹೇಳುತ್ತಾರೆ. ಸರ್ಕಾರದ ಈ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಟೀಕೆ ಮಾಡಿತ್ತು.

ಮೂರು ವಿಶ್ವವಿದ್ಯಾಲಯಗಳು, ಶಾಲೆಗಳು, ಅನೇಕ ಪುಸ್ತಕ ಅಂಗಡಿಗಳು, ಮಳಿಗೆಗಳು ಮತ್ತು ಇಂಡಿಯನ್ ಕಾಫಿ ಹೌಸ್ ಇರುವ ಜನನಿಬಿಡ ಪ್ರದೇಶವಾದ ಕಾಲೇಜ್ ಸ್ಕ್ವೇರ್‌ನ ಗೇಟ್‌ಗಳ ಮುಂದೆ ತಮ್ಮ ಐವತ್ತರ ಹರೆಯದಲ್ಲೂ ನಮಿತಾರವರು ಪುರುಲಿಯಾ ಜಿಲ್ಲೆಯ ಮಹಿಳೆಯರ ಗುಂಪಿನೊಂದಿಗೆ ನಿಂತುಕೊಂಡಿದ್ದಾರೆ.

ಗೌರಂಗ್ಡಿ ಗ್ರಾಮದಿಂದ ಪ್ರತಿಭಟನೆಗೆ ಬಂದಿರುವ ನಮಿತಾರವರು ಕುರ್ಮಿ ​​ಸಮುದಾಯಕ್ಕೆ (ರಾಜ್ಯದಲ್ಲಿ ಇತರ ಹಿಂದುಳಿದ ವರ್ಗ ಎಂದು ಪರಿಗಣಿಸಲಾಗಿದೆ) ಸೇರಿದವರು. ಇವರು ಗುತ್ತಿಗೆದಾರರೊಬ್ಬರ ಅಡಿಯಲ್ಲಿ ರಂಗ್ ಮಿಸ್ತಿರಿ (ಪೈಟಂರ್) ಆಗಿ ಕೆಲಸ ಮಾಡುತ್ತಾರೆ. ಇವರಿಗೆ ಈ ಕೆಲಸಕ್ಕೆ ದಿನಕ್ಕೆ 300-350 ರುಪಾಯಿ ಸಂಬಳ. "ನಾನು ಜನರ ಮನೆಗಳಲ್ಲಿ ಕಿಟಕಿ ಮತ್ತು ಬಾಗಿಲು ಮತ್ತು ಗ್ರಿಲ್‌ಗಳಿಗೆ ಪೈಂಟ್‌ ಮಾಡುತ್ತೇನೆ,” ಎಂದು ಅವರು ಹೇಳುತ್ತಾರೆ. ವಿಧವೆಯಾಗಿರುವ ಇವರಿಗೆ ರಾಜ್ಯ ಸರ್ಕಾರ ನೀಡುವ ಪಿಂಚಣಿ ಸಿಗುತ್ತಿದೆ.

PHOTO • Sarbajaya Bhattacharya
PHOTO • Sarbajaya Bhattacharya

ಎಡಕ್ಕೆ : ಮಾಲ್ಡಾ ಮೂಲದ ಕೃಷಿ ಕಾರ್ಮಿಕ ರಾದ ( ಹಸಿರು ಸೀರೆ ) ಬಾನು ಬೇವಾ ಹೇಳುತ್ತಾರೆ , ' ನಾ ನೂ ಒಬ್ಬ ಮಹಿಳೆಯಾಗಿರುವುದರಿಂದ ಇಲ್ಲಿಗೆ ಬಂದಿದ್ದೇನೆ .' ಬಲ : ಪುರುಲಿಯಾದ ದಿನಗೂಲಿ ಕಾರ್ಮಿಕ ರಾದ ನಮಿತಾ ಮಹತೋ ( ಗುಲಾಬಿ ಸೀರೆ ) ತನ್ನ ಕೆಲಸದ ಸ್ಥಳದಲ್ಲಿ ತನ್ನ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಗುತ್ತಿಗೆದಾರನ ಜವಾಬ್ದಾರಿಯಾಗಿದೆ ಎಂದು ಹೇಳುತ್ತಾರೆ

PHOTO • Sarbajaya Bhattacharya
PHOTO • Sarbajaya Bhattacharya

ಎಡ : ಪ್ರತಿಭಟನಾಕಾರನೊಬ್ಬ ನ್ಯಾಯಕ್ಕಾಗಿ ಒತ್ತಾಯಿಸಿ ಹಾಡುಗಳನ್ನು ಹಾಡು ತ್ತಿರುವುದು . ಬಲ : ಪಶ್ಚಿಮ ಬಂಗಾಳದ ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ತುಷಾರ್ ಘೋಷ್ , ' ಆರ್ . ಜಿ . ಕಾ ರ್‌ ಆಸ್ಪತ್ರೆಯ ಲ್ಲಿ ನಡೆದ ಘಟನೆಯ ವಿರುದ್ಧದ ಪ್ರತಿಭಟನೆಗಳು ಕಾರ್ಮಿಕ ವರ್ಗದ ಮಹಿಳೆಯರ ದೈನಂದಿನ ಹೋರಾಟಗಳನ್ನು ಸಹ ಎತ್ತಿ ತೋರಿಸಬೇಕು ' ಎಂದು ಹೇಳುತ್ತಾರೆ

ಕಬ್ಬಿಣದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ ತಮ್ಮ ಮಗ ಮತ್ತು ಸೊಸೆ ಹಾಗು ಮೊಮ್ಮಗಳೊಂದಿಗೆ ನಮಿತಾರವರು ವಾಸಿಸುತ್ತಿದ್ದಾರೆ. ಇವರ ಮಗಳಿಗೆ ಮದುವೆಯಾಗಿದೆ. "ನಿಮಗೆ ಗೊತ್ತಾ, ಅವಳು ಎಲ್ಲಾ ಪರೀಕ್ಷೆಗಳನ್ನೂ ಮತ್ತು ಸಂದರ್ಶನಗಳನ್ನೂ ಪಾಸ್‌ ಮಾಡಿದ್ದಳು, ಆದರೆ ಅವಳಿಗೆ ಕೆಲಸಕ್ಕೆ ಸೇರಲು ಸೇರ್ಪಡೆ ಪತ್ರ ಬರಲೇ ಇಲ್ಲ," ಎಂದು ಅವರು ದೂರುತ್ತಾರೆ. "ಈ ಸರ್ಕಾರವು ನಮಗೆಲ್ಲಾ ಉದ್ಯೋಗಗಳನ್ನೇ ಕೊಡುತ್ತಿಲ್ಲ,” ಎಂದು ಹೇಳುತ್ತಾರೆ. ಇವರ ಕುಟುಂಬವು ವರ್ಷಕ್ಕೊಮ್ಮೆ ತನ್ನ ಒಂದು ಬಿಘಾ ಭೂಮಿಯಲ್ಲಿ ಭತ್ತವನ್ನು ಬೆಳೆಯುತ್ತದೆ. ಇವರು ನೀರಾವರಿಗಾಗಿ ಮಳೆ ನೀರನ್ನು ಅವಲಂಬಿಸಿ ಕೃಷಿ ಮಾಡುತ್ತಾರೆ.

*****

ಕೆಲಸ ಮಾಡುವ ಸ್ಥಳದಲ್ಲೇ ಯುವ ವೈದ್ಯೆ ದೌರ್ಜನ್ಯಕ್ಕೊಳಗಾಗಿ ಕೊಲೆಯಾಗಿರುವ ಆರ್‌. ಜಿ. ಕಾರ್ ಪ್ರಕರಣವು ಕಾರ್ಮಿಕ ವರ್ಗದ ಮಹಿಳೆಯರ ಸಂಕಷ್ಟಗಳನ್ನು ಮುಖ್ಯವಾಹಿನಿಯ ಗಮನಕ್ಕೆ ತಂದಿದೆ. ಇಟ್ಟಿಗೆ ಕಾರ್ಖಾನೆಗಳಲ್ಲಿ ಕಾರ್ಮಿಕ ಮಹಿಳೆಯರು, ಮನರೇಗಾ ಕೆಲಸಗಾರರು ಮತ್ತು ಮೀನುಗಾರ ಮಹಿಳೆಯರಿಗೆ ಶೌಚಾಲಯ, ಶಿಶುವಿಹಾರಗಳು ಇಲ್ಲದಿರುವುದು ಹಾಗೂ ಕಡಿಮೆ ವೇತನದಂತಹ ಕೆಲವು ಸಮಸ್ಯೆಗಳಿವೆ ಎಂದು ಪಶ್ಚಿಮ ಬಂಗಾಳದ ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷ ತುಷಾರ್ ಘೋಷ್ ಮಹಿಳಾ ಉದ್ಯೋಗಿಗಳ ಸಮಸ್ಯೆಗಳ ಬಗ್ಗೆ ಗಮನಸೆಳೆಯುತ್ತಾರೆ. "ಆರ್. ಜಿ. ಕಾರ್‌ನಲ್ಲಿ ನಡೆದಿರುವ ಈ ಘಟನೆಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳು ದುಡಿಯುವ ವರ್ಗದ ಮಹಿಳೆಯರ ದಿನನಿತ್ಯದ ಹೋರಾಟಗಳನ್ನು ಎತ್ತಿ ತೋರಿಸಬೇಕು," ಎಂದು ಅವರು ಹೇಳುತ್ತಾರೆ.

ಆಗಸ್ಟ್ 9, 2024 ರಂದು ನಡೆದಿರುವ ಈ ಘಟನೆಯಿಂದಾಗಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ಸ್ಫೋಟಗೊಂಡಿವೆ. ನಗರ - ಪಟ್ಟಣಗಳಿಂದ ಹಳ್ಳಿಗಳವರೆಗೆ ಸಾಮಾನ್ಯ ಜನರು, ಅದರಲ್ಲೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾತ್ರಿ ಹಗಲು ಎನ್ನದೆ ಸಾರ್ವಜನಿಕ ಸ್ಥಳಗಳಲ್ಲಿ ಬೀದಿಗಿಳಿದಿದ್ದಾರೆ. ರಾಜ್ಯಾದ್ಯಂತ ಇರುವ ಯುವ ವೈದ್ಯರು ನಡೆಸುತ್ತಿರುವ ಪ್ರತಿಭಟನೆಯು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಬೆದರಿಕೆಯ ಸಂಸ್ಕೃತಿಯ ಕಡೆಗೆ ಸಾರ್ವಜನಿಕರ ಗಮನ ಸೆಳೆದಿದೆ. ಘಟನೆ ನಡೆದು ಒಂದು ತಿಂಗಳು ಕಳೆದರೂ ಪ್ರತಿಭಟನೆಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Sarbajaya Bhattacharya

سربجیہ بھٹاچاریہ، پاری کی سینئر اسسٹنٹ ایڈیٹر ہیں۔ وہ ایک تجربہ کار بنگالی مترجم ہیں۔ وہ کولکاتا میں رہتی ہیں اور شہر کی تاریخ اور سیاحتی ادب میں دلچسپی رکھتی ہیں۔

کے ذریعہ دیگر اسٹوریز Sarbajaya Bhattacharya
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad