ಹರ್ಮನ್‌ದೀಪ್ ಸಿಂಗ್ ಬಣ್ಣಬಣ್ಣದ ಗಾಳಿಪಟಗಳೊಂದಿಗೆ ನಿಂತಿದ್ದಾರೆ. ಅವರ ಮುಂದೆ ಪಂಜಾಬ್ ಮತ್ತು ಹರ್ಯಾಣದ ನಡುವೆ ಇರುವ ಶಂಭು ಗಡಿಯಲ್ಲಿ ದೆಹಲಿಗೆ ಮೆರವಣಿಗೆ ಹೊರಟಿರುವ ರೈತರನ್ನು ತಡೆಯಲು ಹಾಕಿರುವ ದೊಡ್ಡ ದೊಡ್ಡ ಪೊಲೀಸ್ ಬ್ಯಾರಿಕೇಡ್‌ಗಳಿವೆ.
17 ವರ್ಷ ಪ್ರಾಯದ ಅಮೃತಸರದ ಈ ಯುವಕ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಅಶ್ರುವಾಯು ಶೆಲ್‌ಗಳಿಂದ ದಾಳಿ ಮಾಡಲು ಬಳಸುತ್ತಿದ್ದ ಡ್ರೋನ್‌ಗಳನ್ನು ಉರುಳಿಸಲು ಗಾಳಿಪಟಗಳನ್ನು ಹಾರಿಸುತ್ತಿದ್ದನು. ಡ್ರೋನ್ ಮೂಲಕ ಅಶ್ರುವಾಯು ಶೆಲ್‌ಗಳನ್ನು ಎಸೆಯುವುದು ಪ್ರತಿಭಟನೆಯನ್ನು ಹತ್ತಿಕ್ಕಲು ಕಂಡುಕೊಂಡಿರುವ ಹೊಸ ಮಾರ್ಗವಾಗಿದೆ. “ಅಶ್ರುವಾಯುವಿನಿಂದ ಯಾವುದೇ ಪರಿಣಾಮಗಳಾಗದಂತೆ ತಡೆಯಲು ನಾನು ನನ್ನ ಕಣ್ಣುಗಳ ಸುತ್ತ ಟೂತ್‌ಪೇಸ್ಟ್ ಹಚ್ಚಿದ್ದೇನೆ. ನಾವು ಮುಂದೆ ಸಾಗುತ್ತೇವೆ ಮತ್ತು ಈ ಯುದ್ಧವನ್ನು ಗೆದ್ದೇ ಗೆಲ್ಲುತ್ತೇವೆ,” ಎಂದು ಅವನು ಹೇಳುತ್ತಾನೆ.
ಫೆಬ್ರವರಿ 13, 2024 ರಂದು ದೆಹಲಿ ಕಡೆಗೆ ಶಾಂತಿಯುತವಾಗಿ ಮೆರವಣಿಗೆ ಹೊರಟಿದ್ದ ಪಂಜಾಬ್‌ನ ಸಾವಿರಾರು ರೈತರು ಮತ್ತು ಕಾರ್ಮಿಕರಲ್ಲಿ ಹರ್ಮನ್‌ದೀಪ್ ಕೂಡ ಒಬ್ಬ. ಶಂಭು ಗಡಿಯಲ್ಲಿ ಇವರು ಪ್ಯಾರಾಮಿಲಿಟರಿ, ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಸಿಬ್ಬಂದಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಮುಖಾಮುಖಿಯಾದರು. ದೆಹಲಿಯ ಪ್ರತಿಭಟನಾ ಸ್ಥಳಕ್ಕೆ ಈ ರೈತರು ತಲುಪದಂತೆ ತಡೆಯಲು ರಸ್ತೆಯ ಮೇಲೆ ಕಬ್ಬಿಣದ ಮೊಳೆಗಳು ಮತ್ತು ಕಾಂಕ್ರೀಟ್ ಗೋಡೆಗಳನ್ನು ಹಾಕಲಾಗಿತ್ತು.
ಮೊದಲ ಬ್ಯಾರಿಕೇಡ್‌ನಲ್ಲಿ ಗುರ್ಜಂದ್ ಸಿಂಗ್ ಖಾಲ್ಸಾ ಅವರು ಸಭೆಯನ್ನು ಉದ್ದೇಶಿಸಿ ಹೋರಾಟದ ಐದು ಪ್ರಮುಖ ಬೇಡಿಕೆಗಳನ್ನು ಪುನರುಚ್ಚಿಸಿದರು. ಅವೆಂದರೆ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದು, ರೈತರು ಮತ್ತು ರೈತ ಕಾರ್ಮಿಕರ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದು, ಲಖೀಂಪುರ ಖೇರಿ ಹತ್ಯಾಕಾಂಡದಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ನೀಡುವುದು ಮತ್ತು ಅಪರಾಧಿಗಳನ್ನು ಬಂಧಿಸುವುದು, ರೈತರು ಮತ್ತು ಕಾರ್ಮಿಕರಿಗೆ ಪಿಂಚಣಿ ನೀಡುವುದು ಹಾಗೂ 2020-2021 ರ ಪ್ರತಿಭಟನೆಯಲ್ಲಿ ಹುತಾತ್ಮರಾದ ರೈತರ ಕುಟುಂಬಗಳಿಗೆ ಪರಿಹಾರವನ್ನು ನೀಡುವುದು.
ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಖಾತರಿ ಒಪ್ಪಂದ, ಕೃಷಿ ಸೇವೆಗಳ ಕಾಯ್ದೆ, 2020 , ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಹಾಗೂ ಸವಲತ್ತು) ಕಾಯ್ದೆ, 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020 – ಈ ಮೂರು ಮೂರು ಕೃಷಿ ಕಾಯ್ದೆಗಳನ್ನು ಸೆಪ್ಟೆಂಬರ್ 2020 ರಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. 2020-21 ರಲ್ಲಿ, ದೇಶದಾದ್ಯಂತ ರೈತರು ಈ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಿದರು. ನವೆಂಬರ್ 2021 ರಲ್ಲಿ ಸರ್ಕಾರವು ಕಾನೂನುಗಳನ್ನು ರದ್ದುಗೊಳಿಸಲು ಒಪ್ಪಿಕೊಂಡಿತು. ರೈತ ಚಳುವಳಿಯ ಕುರಿತು ಪರಿಯ ವರದಿಗಳನ್ನು ಓದಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆಗಳು: ಸಂಪೂರ್ಣ ವರದಿ
"ನಾವು ಎಂದಿಗೂ ಪ್ರತಿಭಟನೆಯನ್ನು ನಿಲ್ಲಿಸಲಿಲ್ಲ," ಎಂದು ಕರ್ನಾಲ್‌ನ 22 ವರ್ಷ ಪ್ರಾಯದ ಖಾಲ್ಸಾ ಹೇಳುತ್ತಾರೆ. “ನಾವು ಕೇಂದ್ರ ಸರ್ಕಾರದೊಂದಿಗೆ ಸಭೆ ನಡೆಸಿದ ನಂತರ ಪ್ರತಿಭಟನೆಗೆ ವಿರಾಮ ನೀಡಿದೆವು, ಆ ಸಭೆಯಲ್ಲಿ ಕೇಂದ್ರ ಸಚಿವರು ನಮ್ಮ ಎಲ್ಲಾ ಬೇಡಿಕೆಗಳನ್ನೂ ಒಪ್ಪಿಕೊಂಡರು ಮತ್ತು ಅವುಗಳನ್ನು ಈಡೇರಿಸುವ ಭರವಸೆ ಕೂಡ ನೀಡಿದರು. ಸರ್ಕಾರ ರಚಿಸಿರುವ ಸಮಿತಿಯೊಂದಿಗೆ ಮಾತುಕತೆ ನಡೆಯುತ್ತಲೇ ಇದ್ದರಿಂದ ಇಲ್ಲಿಯ ವರೆಗೆ ಕಾದೆವು. ಆದರೆ ಎರಡು ವರ್ಷಗಳ ನಂತರ ಸಭೆಗಳನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಯಿತು ಮತ್ತು ಸಮಿತಿಯನ್ನು ವಿಸರ್ಜನೆ ಮಾಡಿದರು. ನಾವು ಮರಳಿ ಹೋಗುವಂತೆ ಒತ್ತಾಯಿಸಲಾಯಿತು.”
ರೈತರು ಮತ್ತು ಕಾರ್ಮಿಕರ ದೊಡ್ಡ ಗುಂಪೊಂದು ರಸ್ತೆ ಪಕ್ಕದ ಹೊಲಗಳಲ್ಲಿ ಜಮಾಯಿಸಿತ್ತು ಮತ್ತು ಪ್ರತಿಭಟನಾಕಾರರು ಗಡಿ ದಾಟುತ್ತೇವೆ ಎಂದು ಅಧಿಕಾರಿಗಳಿಗೆ ಸವಾಲು ಹಾಕುತ್ತಾ, ಅವರನ್ನು ಕಂಗೆಡಿಸಿದರು.
ಪ್ರತಿಭಟನಾಕಾರರು ಶಂಬುವಿನಲ್ಲಿ ಬ್ಯಾರಿಕೇಡ್‌ಗಳನ್ನು ಮುರಿಯಲು ಆರಂಭಿಸುವಾಗ, ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಹಾರಿಸಿದರು. ಇದರ ಪರಿಣಾಮವಾಗಿ ಅನೇಕರು ಗಾಯಗೊಂಡರು. ಗುಂಪನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಜನರ ಮೇಲೆ ಅಶ್ರುವಾಯು ಶೆಲ್‌ಗಳನ್ನು ಬಳಸಿ ದಾಳಿ ಮಾಡಿದ್ದಾರೆ ಎಂದು ಇದನ್ನು ಕಣ್ಣಲ್ಲಿ ಕಂಡವರು ವರದಿ ಮಾಡಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಯನ್ನೂ ಬಳಸಿದರು. ಅನೇಕ ಹಿರಿಯ ರೈತರು ಮತ್ತು ಕಾರ್ಮಿಕರು ಅಶ್ರುವಾಯು ಶೆಲ್‌ಗಳನ್ನು ದ್ವಂಸ ಮಾಡಲು ಕೋಲುಗಳನ್ನು ತಂದರು. ಪ್ರತಿ ಶೆಲ್ಲನ್ನು ಕೋಲುಗಳನ್ನು ಬಳಸಿ ನಿಷ್ಕ್ರಿಯಗೊಳಿಸಿದಾಗ, ಜನರು ಹರ್ಷೋದ್ಗಾರ ಮಾಡಿ ಸಂಭ್ರಮಿಸಿದರು.
ಅಶ್ರುವಾಯು ಶೆಲ್‌ಗಳನ್ನು ದ್ವಂಸ ಮಾಡಿದ ರೈತರಲ್ಲಿ ಅಮೃತಸರದ ತಿರ್ಪಾಲ್ ಸಿಂಗ್ ಕೂಡ ಒಬ್ಬರು. "ನಮ್ಮಲ್ಲಿ ಯಾವುದೇ ಆಯುಧಗಳಿಲ್ಲ, ಆದರೂ ಅವರು ನಮ್ಮ ಮೇಲೆ ರಬ್ಬರ್ ಬುಲೆಟ್, ಪೆಲೆಟ್, ಪೆಟ್ರೋಲ್ ಬಾಂಬ್ ಮತ್ತು ಅಶ್ರುವಾಯುಗಳಂತಹ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ," ಎಂದು ಅವರು ಹೇಳುತ್ತಾರೆ. “ಈ ದಾರಿ ಇಡೀ ಜಗತ್ತಿಗೆ ಸೇರಿದ್ದು, ನಾವು ಮುಂದೆ ಸಾಗಲು ಪ್ರಯತ್ನಿಸುತ್ತಿದ್ದೇವೆ. ಶಾಂತಿಯುತವಾಗಿ ನಡೆದುಕೊಂಡರೂ ನಮ್ಮ ಮೇಲೆ ದಾಳಿ ನಡೆಯುತ್ತಿದೆ. ಈಗ ನಾನು ಶಂಭು ಗಡಿಯಲ್ಲಿ ಸೆರೆಯಾಳಾಗಿದ್ದೇನೆ.”
50 ವರ್ಷ ವಯಸ್ಸಿನ ಇವರು ಸರ್ಕಾರ ತಮಗೆ ದ್ರೋಹ ಬಗೆದಿದೆ ಎಂದು ನಂಬಿದ್ದಾರೆ. "ಸರ್ಕಾರವು ಎಂಎಸ್‌ಪಿಯನ್ನು ಖಾತರಿಪಡಿಸುತ್ತಿಲ್ಲ, ಏಕೆಂದರೆ ಅವರು ತಮ್ಮ ಪಕ್ಷಕ್ಕೆ ದೇಣಿಗೆ ಹಣವನ್ನು ನೀಡುವ ಶ್ರೀಮಂತ ಕಾರ್ಪೊರೇಟ್‌ಗಳನ್ನು ಸಂತೋಷವಾಗಿರಬೇಕು," ಅವರು ಹೇಳುತ್ತಾರೆ. “ಎಂಎಸ್‌ಪಿಯ ಖಾತರಿಯಿಲ್ಲದೆ, ದೊಡ್ಡ ಉದ್ಯಮಗಳು ನಮ್ಮನ್ನು ಬಳಸಿಕೊಳ್ಳಬಹುದು. ಅವರು ಯಾವುದೇ ಸಮಯದಲ್ಲಿ ಬರಬಹುದು, ನಮ್ಮ ಬೆಳೆಗಳನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಬಹುದು. ಸರ್ಕಾರಕ್ಕೆ ದೊಡ್ಡ ದೊಡ್ಡ ಕಾರ್ಪೊರೇಟ್‌ಗಳ ನೂರಾರು ಕೋಟಿ ರುಪಾಯಿಯ ಸಾಲವನ್ನು ಮನ್ನಾ ಮಾಡಲು ಸಾಧ್ಯವಾದರೆ, ಕೆಲವೇ ಲಕ್ಷ ಅಥವಾ ಅದಕ್ಕಿಂತಲೂ ಕಡಿಮೆ ಇರುವ ರೈತರು ಮತ್ತು ಕಾರ್ಮಿಕರ ಸಾಲಗಳನ್ನು ಸಹ ಮನ್ನಾ ಮಾಡಲು ಸಾಧ್ಯವಿದೆ ಎಂದು ತಿರ್ಪಾಲ್ ಸಿಂಗ್ ನಂಬುತ್ತಾರೆ.
ಅಶ್ರುವಾಯುವಿನ ಹೊಗೆ ಮತ್ತು ಜಲಫಿರಂಗಿಗಳನ್ನು ಧೈರ್ಯದಿಂದ ಎದುರಿಸಿದ ನಂತರ, ಅನೇಕ ಪ್ರತಿಭಟನಾಕಾರರು ಎರಡನೇ ಬ್ಯಾರಿಕೇಡನ್ನು ಕಿತ್ತೊಗೆಯಲು ಪ್ರಯತ್ನಿಸಿದರು. ಆ ಸಮಯದಲ್ಲಿ ಪೊಲೀಸರು ಗುಂಪಿನ ಮೇಲೆ ರಬ್ಬರ್ ಗುಂಡುಗಳನ್ನು ಹಾರಿಸುತ್ತಿರುವುದು ಕಂಡುಬಂದಿದೆ. ಪ್ರತಿಭಟನಕಾರರ ಕಾಲುಗಳಿಗೆ ಗುಂಡು ಹಾರಿಸಿ ಅವರನ್ನು ಹಿಮ್ಮೆಟ್ಟಲು ಪ್ರಯತ್ನಿಸಲಾಗಿದೆ.
ಕೆಲವೇ ನಿಮಿಷಗಳಲ್ಲಿ, ಗಾಯಗೊಂಡು ರಕ್ತಸಿಕ್ತರಾಗಿದ್ದ ಹಲವಾರು ರೈತರು ಮತ್ತು ಕಾರ್ಮಿಕರನ್ನು ವೈದ್ಯರು ಸ್ಥಾಪಿಸಿದ್ದ ವೈದ್ಯಕೀಯ ಶಿಬಿರಕ್ಕೆ ಕರೆದೊಯ್ಯಲಾಯ್ತು.
"ಕಳೆದ ಒಂದು ಗಂಟೆಯಲ್ಲಿ ನಾನು 50 ಜನರಿಗೆ ಚಿಕಿತ್ಸೆ ನೀಡಿದೆ," ಎಂದು ವೈದ್ಯಕೀಯ ಶಿಬಿರದ ಉಸ್ತುವಾರಿ ಡಾ. ಮಂದೀಪ್ ಸಿಂಗ್ ಹೇಳುತ್ತಾರೆ. "ನಾನು ಶಂಭು ಗಡಿಗೆ ಬಂದಾಗಿನಿಂದ ನಾನು ನೋಡಿದ ಗಾಯಗೊಂಡವರಿಗೆ ಲೆಕ್ಕವಿಲ್ಲ,” ಎಂದು ಅವರು ಹೇಳುತ್ತಾರೆ. "ಹೊಶಿಯಾರ್‌ಪುರ ಎಂಬ ಹಳ್ಳಿಯೊಂದರಿಂದ ಬಂದಿರುವ 28 ವರ್ಷ ಪ್ರಾಯದ ವೈದ್ಯ ಮಂದೀಪ್ ತಾವು ಬಾಬಾ ಶ್ರೀ ಚಂದ್ ಜಿ ಎಂಬ ಹೆಸರಿನ ಆಸ್ಪತ್ರೆಯನ್ನು ನಡೆಸುತ್ತಿರುವುದಾಗಿ ಹೇಳುತ್ತಾರೆ. ಈ ಯುವ ವೈದ್ಯರೂ ರೈತ ಕುಟುಂಬದಿಂದ ಬಂದವರು ಮತ್ತು 2020 ರ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು. ಅಲ್ಲದೇ, ಆ ಸಂದರ್ಭದಲ್ಲಿ ಯುನೈಟೆಡ್ ಸಿಖ್ ಎಂಬ ವಿಶ್ವಸಂಸ್ಥೆಯೊಂದಿಗೆ ಸಹಭಾಗಿತ್ವ ಹೊಂದಿರುವ ಕಾನೂನು ಮತ್ತು ಮಾನವೀಯ ಪರಿಹಾರ ಸಂಸ್ಥೆಯೊಂದಿಗೆ ಸೇರಿಕೊಂಡು ಶಿಬಿರವನ್ನೂ ಸ್ಥಾಪಿಸಿದ್ದರು.
"ಜನರು ಕತ್ತರಿಸಲ್ಪಟ್ಟ ಗಾಯಗಳು, ಉಸಿರಾಟದ ತೊಂದರೆಗಳಿಂದ ಹಿಡಿದು ಬೇರೆ ರೀತಿಯ ಹಲವಾರು ಸಮಸ್ಯೆಗಳೊಂದಿಗೆ ಬಂದಿದ್ದಾರೆ. ನಮ್ಮ ರೈತರ ಯೋಗಕ್ಷೇಮದ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕು. ಅದಕ್ಕಾಗಿಯೇ ನಾವು ಅವರನ್ನು ಆರಿಸಿ ಅಧಿಕಾರಕ್ಕೆ ತಂದಿದ್ದೇವೆ, " ಎಂದು ಅವರು ಹೇಳುತ್ತಾರೆ.
ದೀಪಿಕಾ, ಪ್ರತಿಭಟನಾ ಕಳದಲ್ಲಿರುವ ವೈದ್ಯಕೀಯ ಶಿಬರದಲ್ಲಿ ಸೇವೆ ಮಾಡಲು ಹಿಮಾಚಲ ಪ್ರದೇಶದ ಶಿಮ್ಲಾದಿಂದ ಬಂದಿರುವ ಮತ್ತೊಬ್ಬ ವೈದ್ಯೆ. 25 ವರ್ಷ ವಯಸ್ಸಿನ ಇವರು, “ಉಸಿರಾಟದ ತೊಂದರೆಗಳು ಸೇರಿದಂತೆ, ಜನರು ಆತಂಕ ಮತ್ತು ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ. ಸುಮಾರು ಗಂಟೆಗಳ ನಿರಂತರ ಅಶ್ರುವಾಯು ದಾಳಿಯ ಹೊಗೆಯಿಂದಾಗಿ ಅವರಿಗೆ ಹೊಟ್ಟೆಯ ಸಮಸ್ಯೆಗಳೂ ಶುರುವಾಗಿವೆ,” ಎಂದು ಹೇಳುತ್ತಾರೆ.
ವೈದ್ಯರು ಮಾತ್ರ ನೆರವಾಗುತ್ತಿಲ್ಲ, ಬ್ಯಾರಿಕೇಡ್‌ಗಳಿಂದ ಕೆಲವೇ ಮೀಟರ್‌ಗಳ ದೂರದಲ್ಲಿ, ಜನರು ತಮ್ಮ ಟ್ರಾಲಿಗಳನ್ನು ಹೊಂದಿಸಲು ಮತ್ತು ಎಲ್ಲರಿಗೂ ಊಟವನ್ನು ತಯಾರಿಸುವುದರಲ್ಲಿ ನಿರತರಾಗಿದ್ದಾರೆ. ಹಲವು ಜನ ತಮ್ಮ ಕುಟುಂಬ ಸಮೇತ ಬಂದಿದ್ದರು. ಗುರುಪ್ರೀತ್ ಸಿಂಗ್ ತಮ್ಮ ಮಗ ತೇಜಸ್ವೀರ್‌ನೊಂದಿಗೆ ಬಂದಿದ್ದರು. ಪಟಿಯಾಲದಿಂದ ಬಂದಿರುವ ಗುರುಪ್ರೀತ್, "ನಮ್ಮ ಹೋರಾಟವನ್ನು ನೋಡಲಿ ಎಂದು ನಾನು ನನ್ನ ಮಗನನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ," ಎಂದು ಹೇಳುತ್ತಾರೆ. "ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ಯಾಕೆ ಮುಖ್ಯ ಎಂಬುದನ್ನು ನಾನು ಅವನಿಗೆ ಕಲಿಸಬೇಕು, ಏಕೆಂದರೆ ರೈತರು ಮತ್ತು ಕಾರ್ಮಿಕರು ತಮ್ಮ ಮೇಲೆ ದಬ್ಬಾಳಿಕೆ ಮಾಡುವ ಸರ್ಕಾರಗಳ ವಿರುದ್ಧ ಹೋರಾಡಲೇ ಬೇಕು" ಎಂದು ಅವರು ಹೇಳುತ್ತಾರೆ.
ಪ್ರತಿಭಟನಾ ಸ್ಥಳದಲ್ಲಿ ಕ್ರಾಂತಿಗೀತೆಗಳನ್ನು ಹಾಡಲಾಯಿತು, ಘೋಷಣೆಗಳು ಮೊಳಗಿದವು. “ಇಕ್ಕಿ ದುಕ್ಕಿ ಚಕ್ ದೇಯಾಂಗೆ, ಧೌನ್ ತೆ ಗೋದಾ ರಖ್ ದೇಯಾಂಗೆ” [ನಾವು ಟಾಮ್, ಡಿಕ್ ಮತ್ತು ಹ್ಯಾರಿ, ಎಲ್ಲರನ್ನೂ ಸೋಲಿಸುತ್ತೇವೆ, ಅವರ ಕುತ್ತಿಗೆಗಳು ನಮ್ಮ ಪಾದಗಳ ಕೆಳಗೆ ಇರುತ್ತವೆ], ಇದು ಮೆರವಣಿಗೆಗೆ ಹೆಚ್ಚಿನ ಜನರನ್ನು ಸಜ್ಜುಗೊಳಿಸುವಂತೆ ನೀಡಿದ ಕರೆಯಾಗಿತ್ತು.
"ನಾನು ಪ್ರತಿಭಟನೆ ಮಾಡುತ್ತೇನೆ, ಏಕೆಂದರೆ ಇದು ರೈತರು ತಮ್ಮ ಮೂಲಭೂತ ಹಕ್ಕುಗಳಿಗಾಗಿ ಮಾಡುತ್ತಿರುವ ಹೋರಾಟ," ಎಂದು ರಾಜ್ ಕೌರ್ ಗಿಲ್ ಹೇಳುತ್ತಾರೆ. 40 ವರ್ಷ ವಯಸ್ಸಿನ ಚಂಡೀಗಢದ ಇವರು 2021ರಲ್ಲಿ ರೈತ ಹೋರಾಟದ ಕೇಂದ್ರವಾಗಿದ್ದ ಮಟ್ಕಾ ಚೌಕ್‌ನಲ್ಲಿ ಎಲ್ಲರಿಗೂ ಪರಿಚಿತ ವ್ಯಕ್ತಿಯಾಗಿದ್ದರು.
“ಎಂಎಸ್‌ಪಿ ನೀಡದೆ ಸರ್ಕಾರವು ರೈತನ ಬದುಕನ್ನು ತುಂಬಾ ಕಷ್ಟಕ್ಕೆ ಸಿಲುಕಿಸಿದೆ. ಇವರು ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳನ್ನು ಅಭಿವೃದ್ಧಿ ಮಾಡಿ, ದೇಶಕ್ಕೆ ಅನ್ನ ನೀಡುವವರನ್ನು ಶೋಷಿಸುತ್ತಿದ್ದಾರೆ,” ಎಂದು ಅವರು ಹೇಳುತ್ತಾರೆ.
"ಅವರು ಎಂದಿಗೂ ಗೆಲ್ಲುವುದಿಲ್ಲ."
ಅನುವಾದ: ಚರಣ್ ಐವರ್ನಾಡು