ಕೋಮಲ್ ರೈಲು ಹಿಡಿಯಬೇಕಿತ್ತು. ಅವರು ಅಸ್ಸಾಮಿನ ರಂಗಿಯಾ ಜಂಕ್ಷನ್ ನಿಲ್ದಾಣಕ್ಕೆ ಹೊರಟಿದ್ದರು.
ಆದರೆ ಅದು ಅವರು ತನ್ನ ಬದುಕಿನಲ್ಲೇ ಮತ್ತೆ ಹೋಗಬಾರದು ಎಂದುಕೊಂಡಿದ್ದ ಊರು. ಅಲ್ಲಿರುವ ತನ್ನ ಮಾನಸಿಕ ಅಸ್ವಸ್ಥ ತಾಯಿಯನ್ನು ನೋಡಲು ಸಹ ಹೋಗಬಾರದು ಎಂದು ಅವರು ನಿರ್ಧರಿಸಿದ್ದರು.
ಅವರ ಪಾಲಿಗೆ ದೆಹಲಿಯ ಬ್ರಾಥೆಲ್ ಹೌಸ್‌ಗಳು ಮನೆಗಿಂತಲೂ ನೆಮ್ಮದಿಯ ತಾಣ. ಮನೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವ ಬದಲು ಅವರು ಲೈಂಗಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಲು ಬಯಸುತ್ತಾರೆ. ಇದೀಗ ತಾನು ಮರಳುತ್ತಿರುವ ಮನೆಯಲ್ಲಿ ಕೋಮಲರ ಸೋದರ ಸಂಬಂಧಿಯೊಬ್ಬನಿದ್ದಾನೆ. ಅವನು ಆಕೆಗೆ ಹತ್ತು ವರ್ಷವಿರುವಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. “ನನಗೆ ಅವನ [ಸೋದರಸಂಬಂಧಿ] ಮುಖ ನೋಡಲು ಇಷ್ಟವಿಲ್ಲ. ಅವನನ್ನು ನೋಡಿದರೆ ನನಗೆ ಮೈಯೆಲ್ಲ ಉರಿಯುತ್ತದೆ” ಎಂದು ಕೋಮಲ ಹೇಳುತ್ತಾರೆ. ಅವನು ಆಗಾಗ ಕೋಮಲ್ ಮೇಲೆ ಹಲ್ಲೆ ನಡೆಸುತ್ತಿದ್ದ. ಅವನನ್ನು ತಡೆಯಲು ಪ್ರಯತ್ನಿಸಿದರೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ. ಒಮ್ಮ ಅವನು ಯಾವುದೋ ತೀಕ್ಷ್ಣ ವಸ್ತುವಿನಿಂದ ಹೊಡೆದು ಉಂಟಾದ ಕಲೆ ಈಗಲೂ ಕೋಮಲ್ ಅವರ ಹಣೆಯ ಮೇಲಿದೆ.
“ಹೆಕಾರೊನೆ ಮುರ್ ಘೊರ್ ಜಾಬೊ ಮೊನ್ ನೈ. ಮೋಯಿ ಕಿಮನ್ ಬಾರ್ ಕೊಯಿಸು ಹಿಹೊಟೊಕ್ [ಇದೇ ಕಾರಣಕ್ಕಾಗಿ ನನಗೆ ಮನೆಗೆ ಹೋಗಲು ಇಷ್ಟವಿಲ್ಲ” ಎಂದು ಕೋಮಲ್ ಪೊಲೀಸರೊಂದಿಗಿನ ತನ್ನ ಮಾತುಕತೆಯನ್ನು ಉಲ್ಲೇಖಿಸಿ ಹೇಳುತ್ತಾರೆ. ಇಷ್ಟೆಲ್ಲ ತಿಳಿದಿದ್ದೂ, ಮತ್ತೆ ಮನೆಯಲ್ಲಿ ಹಿಂಸಾಚಾರ ಮುಂದುವರೆಯುವ ಸಾಧ್ಯತೆಯಿದ್ದರೂ ಪೊಲೀಸರು ಆಕೆಯನ್ನು ಮನೆಗೆ ಕಳುಹಿಸುತ್ತಿದ್ದಾರೆ. ಮನೆಗೆ ತಲುಪಿದ ಕುರಿತು ಮಾಹಿತಿ ಪಡೆಯಲು, ಮನೆಯಲ್ಲಿ ಹಿಂಸೆಯಿಂದ ಆಕೆಯನ್ನು ಸುರಕ್ಷಿತಗೊಳಿಸಲು ಯಾವುದೇ ವ್ಯವಸ್ಥೆ ಮಾಡಿಸದೆ ಆಕೆಯನ್ನು 35 ಗಂಟೆಯ ಪ್ರಯಾಣದ ರೈಲಿನಲ್ಲಿ ಕುಳ್ಳಿರಿಸಿದ್ದರು. ಆಕೆಯ ಬಳಿ ಒಂದು ಸಿಮ್ ಕೂಡಾ ಇರಲಿಲ್ಲ.
ಕೋಮಲ್‌ಗೆ ಬೇಕಿದ್ದಿದ್ದು ಕಳ್ಳಸಾಗಣೆಯಾದ ಅಪ್ರಾಪ್ತ ಮತ್ತು ಯುವ ವಯಸ್ಕರ ಅಗತ್ಯಗಳಿಗೆ ಬೇಕಿರುವ ನಿರ್ದಿಷ್ಟ ಬೆಂಬಲ ಸೇವೆಗಳು.
*****
ಕೋಮಲ್ (ಹೆಸರು ಬದಲಾಯಿಸಲಾಗಿದೆ) ಈ ವರ್ಷದ ಆರಂಭದಲ್ಲಿ ತಾನು ಕೆಲಸ ಮಾಡುತ್ತಿದ್ದ ಮತ್ತು ಉಳಿದುಕೊಂಡಿದ್ದ ವೇಶ್ಯಾಗೃಹಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು ಬಂದಾಗ ಸುಮಾರು 4×6 ಚದರ ಅಡಿ ವಿಸ್ತೀರ್ಣದ ತನ್ನ ಬೆಂಕಿಪೆಟ್ಟಿಗೆ ಗಾತ್ರದ ಕೋಣೆಯಿಂದ ಲೋಹದ ಮೆಟ್ಟಿಲು ಏಣಿಯಿಂದ ಇಳಿಯುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ. ಈ ಕೊಠಡಿಗಳು ದಾರಿಹೋಕರಿಗೆ ಗೋಚರಿಸುವುದಿಲ್ಲ; ಲೋಹದ ಏಣಿಗಳು ಮಾತ್ರ ಕಾಣುತ್ತವೆ. ದೆಹಲಿಯ ಕುಖ್ಯಾತ ರೆಡ್ ಲೈಟ್ ಜಿಲ್ಲೆಯಾದ ಶ್ರದ್ಧಾನಂದ್ ಮಾರ್ಗದಲ್ಲಿ ಸೆಕ್ಸ್ ವರ್ಕ್ ನಡೆಸಲಾಗುತ್ತದೆ, ಇದನ್ನು ಆಡುಮಾತಿನಲ್ಲಿ ಜಿಬಿ ರಸ್ತೆ ಎಂದು ಕರೆಯಲಾಗುತ್ತದೆ.
ಅವರು ತನಗೆ 22 ವರ್ಷ ಎಂದು ಹೇಳಿದ ಅವರು, “ಕೊಮ್ ಒ ಹೋಬೊ ಪರೇನ್, ಭಲ್ಕೆ ನಜಾನು ಮೊಯಿ [ಕಡಿಮೆಯೂ ಇರಬಹುದು, ನನಗೆ ಸರಿಯಾಗಿ ಗೊತ್ತಿಲ್ಲ]” ಎನ್ನುತ್ತಾರೆ. ಅಸ್ಸಾಮಿ ಭಾಷೆಯಲ್ಲಿ ಮಾತನಾಡುವ ಅವರು 17 ಅಥವಾ ಹೆಚ್ಚೆಂದರೆ 18 ವಯಸ್ಸಿನವರ ಹಾಗೆ ಕಾಣುತ್ತಿದ್ದರು. ಆಕೆ ಅಪ್ರಾಪ್ತ ವಯಸ್ಕಳು ಎಂದು ಖಾತರಿಯಾದ ನಂತರ ಪೊಲೀಸರು ಅವರನ್ನು ವೇಶ್ಯಾಗೃಹದಿಂದ ʼರಕ್ಷಿಸಿದರುʼ.
ಕೋಮಲ್ ಅವರ ನಿಜವಾದ ವಯಸ್ಸಿನ ಬಗ್ಗೆ ಖಚಿತವಾಗಿ ಗೊತ್ತಿಲ್ಲದ ಕಾರಣ ದೀದಿಗಳು ಸಹ (ವೇಶ್ಯಾವಾಟಿಕೆ ಮಾಲೀಕರು) ಅಧಿಕಾರಿಗಳನ್ನು ತಡೆಯಲಿಲ್ಲ. ಕೇಳಿದರೆ ಅವಳು 20 ವರ್ಷಕ್ಕಿಂತ ದೊಡ್ಡವಳು ಮತ್ತು ಅವಳು "ಅಪ್ನಿ ಮರ್ಜಿ ಸೆ [ತಾನೇ ಇಷ್ಟಪಟ್ಟು] ಲೈಂಗಿಕ ಕಾರ್ಯಕರ್ತೆಯಾಗಿ ಮಾಡುತ್ತಿದ್ದಾಳೆ" ಎಂದು ಹೇಳಲು ಅವರು ಕೋಮಲ್‌ಗೆ ಸೂಚನೆ ನೀಡಿದ್ದರು.
ಮರ್ಜಿ ಸೇ ಎನ್ನುವ ಮಾತು ಕೋಮಲ್ ಅವರಿಗೆ ನಿಜವೆನ್ನಿಸಿದೆ. ಅವರು ತಾನು ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯುವ ದೆಹಲಿಯಲ್ಲಿ ಸ್ವತಂತ್ರವಾಗಿ ಬದುಕುತ್ತಿದ್ದೇನೆ ಎಂದು ಭಾವಿಸಿದರು. ಆದರೆ ಅವರ ಇಚ್ಛೆಯ ʼಆಯ್ಕೆʼ ಹಲವು ಆಘಾತಕಾರಿ ಅನುಭವಗಳನ್ನೂ ಕೊಟ್ಟಿತು. ಇದರಲ್ಲಿ ಸಣ್ಣ ವಯಸ್ಸಿನಲ್ಲೇ ಅತ್ಯಾಚಾರಕ್ಕೆ ಈಡಾಗಿದ್ದು, ಕಳ್ಳಸಾಗಣೆಗೆ ಒಳಗಾಗಿದ್ದು ಮತ್ತು ಪರ್ಯಾಯ ದಾರಿ ಹುಡುಕಿಕೊಳ್ಳಲು ಯಾವುದೇ ಸಹಾಯ ದೊರಕದೇ ಹೋಗಿದ್ದು ಅವುಗಳಲ್ಲಿ ಸೇರಿದೆ.
ಅವರು ತಾನು ಸ್ವಇಚ್ಛೆಯಿಂದ ವೇಶ್ಯಾಗೃಹದಲ್ಲಿ ಇರುವುದಾಗಿ ಹೇಳಿದಾಗ ಪೊಲೀಸರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಕೋಮಲ್ ತನ್ನ ಫೋನಿನಲ್ಲಿದ್ದ ಆಧಾರ ಕಾರ್ಡನ್ನು ತೋರಿಸಿ ತನಗೆ 22 ವರ್ಷವಾಗಿದೆ ಎಂದು ಹೇಳಿದಾಗ ಅವರು ಅದನ್ನು ಒಪ್ಪಿಕೊಳ್ಳಲಿಲ್ಲ. ಅದು ಅವರ ಬಳಿಯಿದ್ದ ಏಕೈಕ ದಾಖಲೆಯಾಗಿತ್ತು. ಆದರೆ ಅದು ಬಹಳ ಸಣ್ಣ ದಾಖಲೆಯಾಗಿತ್ತು. ನಂತರ ಕೋಮಲ್ ಅವರನ್ನು ʼರಕ್ಷಿಸಿʼ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಎರಡು ಗಂಟೆಗಳ ಕಾಲ ಕೌನ್ಸೆಲಿಂಗ್ ಕೂಡಾ ಮಾಡಲಾಯಿತು. ಇದು ಮುಗಿದ ಮೇಲೆ ಆಕೆಯನ್ನು ಅಪ್ರಾಪ್ತ ವಯಸ್ಕರ ಸರ್ಕಾರಿ ಆಶ್ರಯಕ್ಕೆ ಕಳುಹಿಸಲಾಯಿತು, ಅಲ್ಲಿ ಅವರು 18 ದಿನಗಳ ಕಾಲ ಇದ್ದರು. ಕೋಮಲ್ ಅಪ್ರಾಪ್ತ ವಯಸ್ಸಿನವರು ಎಂದು ನಂಬಿದ್ದರಿಂದ, ಸರಿಯಾದ ಪ್ರಕ್ರಿಯೆಯ ಪ್ರಕಾರ ಅವರನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲಾಗುವುದು ಎಂದು ತಿಳಿಸಲಾಯಿತು.
ಆಶ್ರಯ ತಾಣದಲ್ಲಿ ಆಕೆಯ ವಾಸ್ತವ್ಯದ ಸಮಯದಲ್ಲಿ, ಪೊಲೀಸರು ಅವರ ಬಟ್ಟೆಗಳು, ಎರಡು ಫೋನುಗಳು ಮತ್ತು ದೀದಿಗಳು ಹಸ್ತಾಂತರಿಸಿದ 20,000 ರೂಪಾಯಿಗಳ ಗಳಿಕೆ ಸೇರಿದಂತೆ ಅವರ ವಸ್ತುಗಳನ್ನು ವೇಶ್ಯಾಗೃಹದಿಂದ ವಶಪಡಿಸಿಕೊಂಡರು.
ವೇಶ್ಯಾವೃತ್ತಿ ಕೋಮಲ್ ಪಾಲಿಗೆ ಹಲವು ಆಘಾತಕಾರಿ ಅನುಭವಗಳನ್ನೂ ಕೊಟ್ಟಿತು. ಇದರಲ್ಲಿ ಸಣ್ಣ ವಯಸ್ಸಿನಲ್ಲೇ ಅತ್ಯಾಚಾರ, ಕಳ್ಳಸಾಗಣೆಗೆ ಈಡಾಗಿದ್ದು ಮತ್ತು ಪರ್ಯಾಯ ದಾರಿ ಹುಡುಕಿಕೊಳ್ಳಲು ಯಾವುದೇ ಸಹಾಯ ದೊರಕದೇ ಹೋಗಿದ್ದು ಅವುಗಳಲ್ಲಿ ಕೆಲವು
"ಅಪ್ರಾಪ್ತ ವಯಸ್ಕರು ಮತ್ತೆ ಕಳ್ಳಸಾಗಣೆಗೆ ಒಳಗಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಸಂತ್ರಸ್ತ ಅಪ್ರಾಪ್ತ ವಯಸ್ಕರು ಕುಟುಂಬವನ್ನು ಮರಳಿ ಸೇರಲು ಬಯಸುತ್ತಾರೋ ಅಥವಾ ಆಶ್ರಯ ಮನೆಯಲ್ಲಿ ಉಳಿಯಲು ಬಯಸುತ್ತಾರೋ ಎನ್ನುವ ಕುರಿತು ಅವರ ನಿರ್ಧಾರಕ್ಕೆ ಆದ್ಯತೆ ನೀಡಬೇಕು. ಕಸ್ಟಡಿಯನ್ನು ಹಸ್ತಾಂತರಿಸುವ ಮೊದಲು ಸಂತ್ರಸ್ತರ ಕುಟುಂಬಗಳಿಗೆ ಸಾಕಷ್ಟು ಸಲಹೆ ನೀಡುವುದು ಆದ್ಯತೆಯಾಗಿರಬೇಕು" ಎಂದು ದೆಹಲಿ ಮೂಲದ ಮಾನವ ಹಕ್ಕುಗಳ ವಕೀಲ ಉತ್ಕರ್ಷ್ ಸಿಂಗ್ ಹೇಳುತ್ತಾರೆ. ಬಾಲಾಪರಾಧಿ ನ್ಯಾಯ ಕಾಯ್ದೆ, 2015 ರ ಅಡಿಯಲ್ಲಿ ರಚಿಸಲಾದ ಸ್ವಾಯತ್ತ ಸಂಸ್ಥೆಯಾದ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಕೋಮಲ್ ಅವರಂತಹ ಪ್ರಕರಣಗಳಲ್ಲಿ ಪುನರ್ವಸತಿ ಕಾರ್ಯವಿಧಾನಗಳು ಕಾಯ್ದೆಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳುತ್ತಾರೆ.
*****
ಕೋಮಲ್ ಅವರ ಊರು ಅಸ್ಸಾಂನ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ ಬಕ್ಸಾ ಜಿಲ್ಲೆಯಲ್ಲಿದೆ. ಬಿಟಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ರಾಜ್ಯದ ಈ ಪಶ್ಚಿಮ ಪ್ರದೇಶವು ಸ್ವಾಯತ್ತ ವಿಭಾಗ ಮತ್ತು ಪ್ರಸ್ತಾವಿತ ರಾಜ್ಯವಾಗಿದ್ದು, ಭಾರತೀಯ ಸಂವಿಧಾನದ 6ನೇ ಶೆಡ್ಯೂಲ್ ಅಡಿಯಲ್ಲಿ ಇದನ್ನು ರಚಿಸಲಾಗಿದೆ.
ಕೋಮಲ್ ಅವರ ಸಂಬಂಧಿಯೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿ ಅದನ್ನು ವಿಡಿಯೋ ಮಾಡಿ ಪ್ರಸಾರ ಮಾಡಿದ್ದ. ಕೋಮಲ್ ಅವರ ಹಳ್ಳಿಯ ಅನೇಕರು ಆಕೆಯ ಈ ವಿಡಿಯೋವನ್ನು ನೋಡಿದ್ದಾರೆ. "ನನ್ನ ಮಾಮಾ [ತಾಯಿಯ ತಮ್ಮ ಮತ್ತು ಸೋದರಸಂಬಂಧಿಯ ತಂದೆ] ಎಲ್ಲದಕ್ಕೂ ನನ್ನನ್ನು ದೂಷಿಸುತ್ತಿದ್ದರು. ನಾನು ಅವನ ಮಗನನ್ನು ಆಕರ್ಷಿಸಿದ್ದೇನೆ ಎಂದು ಅವರು ಹೇಳಿದರು. ನನ್ನ ತಾಯಿ ಅಳುತ್ತಾ, ನಿಲ್ಲಿಸುವಂತೆ ಬೇಡಿಕೊಳ್ಳುತ್ತಿದ್ದಾಗಲೂ ಅವನು ನನ್ನನ್ನು ನಿರ್ದಯವಾಗಿ ಹೊಡೆಯುತ್ತಿದ್ದ" ಎಂದು ಕೋಮಲ್ ನೆನಪಿಸಿಕೊಳ್ಳುತ್ತಾರೆ. ಈ ಹಿಂಸೆಯ ವಿರುದ್ಧ ಯಾವುದೇ ಸಹಾಯ ಅಥವಾ ಕೊನೆಯಿಲ್ಲದೆ, 10 ವರ್ಷದ ಕೋಮಲ್ ಆಗಾಗ್ಗೆ ಸ್ವಯಂ-ಹಾನಿಯನ್ನು ಆಶ್ರಯಿಸುತ್ತಿದ್ದರು. "ನಾನು ಅನುಭವಿಸುತ್ತಿರುವ ತೀವ್ರ ಕೋಪ ಮತ್ತು ನೋವಿನಿಂದ ಮುಕ್ತಿ ಪಡೆಯಲು ನಾನು ಬ್ಲೇಡಿನಿಂದ ಕೈ ಕುಯ್ದುಕೊಳ್ಳುತ್ತಿದ್ದೆ. ನಾನು ನನ್ನ ಬದುಕನ್ನು ಕೊನೆಗೊಳಿಸಲು ಬಯಸಿದ್ದೆ."
ವೀಡಿಯೊಗಳನ್ನು ನೋಡಿದವರಲ್ಲಿ ಸೋದರಸಂಬಂಧಿಯ ಸ್ನೇಹಿತ ಬಿಕಾಶ್ ಭೈಯಾ (ಸಹೋದರ) ಕೂಡ ಒಬ್ಬರು. ಆತ ತಾನು ಒಂದು ʼಪರಿಹಾರʼ ಹೊಂದಿರುವುದಾಗಿ ಕೋಮಲ್ ಬಳಿ ಹೇಳಿದ್ದ.
"ತನ್ನೊಂದಿಗೆ ಸಿಲಿಗುರಿಗೆ [ಹತ್ತಿರದ ನಗರ] ಬಂದು ವೇಶ್ಯಾವಾಟಿಕೆಗೆ ಸೇರುವಂತೆ ಹೇಳಿದ. ʼಹಳ್ಳಿಯಲ್ಲಿ ಉಳಿದುಕೊಂಡು ಅತ್ಯಾಚಾರಕ್ಕೆ ಒಳಗಾಗಿ ಹೆಸರನ್ನೂ ಹಾಳುಮಾಡಿಕೊಳ್ಳುವುದಕ್ಕಿಂತ ಅಲ್ಲಿಗೆ ಬಂದು ವೇಶ್ಯಾವಾಟಿಕೆಗೆ ಸೇರುವುದು ಒಳ್ಳೆಯದು. ಜೊತೆಗೆ ನಿನ್ನ ತಾಯಿಯನ್ನೂ ನೋಡಿಕೊಳ್ಳಬಹುದುʼ ಎಂದು ಅವನು ಹೇಳಿದ” ಎಂದು ಕೋಮಲ್ ಹೇಳುತ್ತಾರೆ.
ಕೆಲವೇ ದಿನಗಳಲ್ಲಿ ಬಿಕಾಶ್ ಈ ಪುಟ್ಟ ಹುಡುಗಿ ತನ್ನೊಂದಿಗೆ ಓಡಿ ಬರುವಂತೆ ಮಾಡುವಲ್ಲಿ ಯಶಸ್ವಿಯಾದ. ಅಲ್ಲಿಂದ 10 ವರ್ಷದ ಕೋಮಲಳನ್ನು ಪಶ್ಚಿಮ ಬಂಗಾಳದ ಸಿಲಿಗುರಿ ನಗರದ ಖಲ್ಪಾರಾ ಪ್ರದೇಶದ ವೇಶ್ಯಾವಾಟಿಕೆಗೆ ಕಳ್ಳಸಾಗಣೆ ಮಾಡಲಾಗಿತ್ತು. ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 370ರ ಅಡಿಯಲ್ಲಿ, ಮಾನವ ಕಳ್ಳಸಾಗಣೆಯನ್ನು ಬೆದರಿಕೆಗಳು, ಬಲವಂತ, ಬಲಾತ್ಕಾರ, ಅಪಹರಣ, ವಂಚನೆ, ಮೋಸ, ಅಧಿಕಾರದ ದುರುಪಯೋಗ ಅಥವಾ ವೇಶ್ಯಾವಾಟಿಕೆ, ಬಾಲಕಾರ್ಮಿಕತೆ, ಜೀತದಾಳು, ಬಲವಂತದ ದುಡಿಮೆ, ಲೈಂಗಿಕ ಶೋಷಣೆ ಮುಂತಾದ ಏಕೈಕ ಉದ್ದೇಶಕ್ಕಾಗಿ ಇನ್ನೊಬ್ಬ ವ್ಯಕ್ತಿಯನ್ನು ಶೋಷಿಸಲು ಪ್ರಚೋದಿಸುವ ಕಾನೂನುಬಾಹಿರ ಕೃತ್ಯ ಎಂದು ವ್ಯಾಖ್ಯಾನಿಸಲಾಗಿದೆ. ಅನೈತಿಕ ಸಾಗಣೆ (ತಡೆಗಟ್ಟುವಿಕೆ) ಕಾಯ್ದೆ (ಐಟಿಪಿಎ), 1956ರ ಸೆಕ್ಷನ್ 5 ವೇಶ್ಯಾವಾಟಿಕೆ ಉದ್ದೇಶಗಳಿಗಾಗಿ ವ್ಯಕ್ತಿ(ಗಳನ್ನು) ಒಟ್ಟುಗೂಡಿಸುವ, ಪ್ರಚೋದಿಸುವ ಅಥವಾ ತೆಗೆದುಕೊಳ್ಳುವ ವ್ಯಕ್ತಿಗಳಿಗೆ ದಂಡ ವಿಧಿಸುತ್ತದೆ. "ವ್ಯಕ್ತಿಯ ಇಚ್ಛೆಯ ವಿರುದ್ಧ ಅಥವಾ ಮಗುವಿನ ವಿರುದ್ಧದ ಅಪರಾಧಗಳಿಗೆ, ಗರಿಷ್ಠ ಶಿಕ್ಷೆಯು ಹದಿನಾಲ್ಕು ವರ್ಷಗಳು ಅಥವಾ ಜೀವಾವಧಿಯವರೆಗೆ ವಿಸ್ತರಿಸಬಹುದು." ಐಟಿಪಿಎ ಪ್ರಕಾರ, "ಮಗು" ಎಂದರೆ 16 ವರ್ಷ ವಯಸ್ಸನ್ನು ತಲುಪದ ವ್ಯಕ್ತಿ.
ಆಕೆಯನ್ನು ಕಳ್ಳಸಾಗಣೆ ಮಾಡುವಲ್ಲಿ ಬಿಕಾಶನ ಸ್ಪಷ್ಟ ಪಾತ್ರವಿದ್ದರೂ, ಆತನ ವಿರುದ್ಧ ಯಾವುದೇ ದೂರು ದಾಖಲಾಗದ ಕಾರಣ ಅವನು ಕಾನೂನು ಕ್ರಮಗಳನ್ನು ಎದುರಿಸುವ ಸಾಧ್ಯತೆ ಕಡಿಮೆ.
ಸಿಲಿಗುರಿಗೆ ಕರೆದೊಯ್ಯಲಾದ ಸುಮಾರು ಮೂರು ವರ್ಷಗಳ ನಂತರ, ಕೋಮಲ್ ಅವರನ್ನು ಪೊಲೀಸರು ದಾಳಿಯ ಸಮಯದಲ್ಲಿ ಖಲ್ಪಾರಾ ಬಳಿ ರಕ್ಷಿಸಿದರು. ಅಂದು ಆಕೆಯನ್ನು ಸಿಡಬ್ಲ್ಯೂಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು ಮತ್ತು ಸುಮಾರು 15 ದಿನಗಳ ಕಾಲ ಅಪ್ರಾಪ್ತ ವಯಸ್ಕರ ಆಶ್ರಯ ತಾಣದಲ್ಲಿ ಉಳಿಯುವಂತೆ ಮಾಡಲಾಯಿತು ಎಂದು ಅವರು ನೆನಪಿಸಿಕೊಳ್ಳುತ್ತಾರೆ. ನಂತರ ಅವರನ್ನು 2024ರಲ್ಲಿ ಮತ್ತೊಮ್ಮೆ ಒಬ್ಬರನ್ನೇ ಅಸ್ಸಾಂಗೆ ಹೋಗುವ ರೈಲಿನಲ್ಲಿ ಮನೆಗೆ ಕಳುಹಿಸಲಾಯಿತು.
ಕೋಮಲ್ ಅವರಂತಹ ಕಳ್ಳಸಾಗಣೆಗೊಳಗಾದ ಮಕ್ಕಳ ವಿಷಯದಲ್ಲಿ ಅನುಸರಿಸಬೇಕಿದ್ದ ಪ್ರಕ್ರಿಯೆಗಳನ್ನು 2015 ಮತ್ತು 2024 ಎರಡು ಬಾರಿಯೂ ಅನುಸರಿಸಲಾಗಿಲ್ಲ.
' ವಾಣಿಜ್ಯ ಲೈಂಗಿಕ ಶೋಷಣೆ ' ಮತ್ತು 'ಬಲವಂತದ ದುಡಿಮೆ ' ರೀತಿಯ ಕಳ್ಳಸಾಗಣೆ ಅಪರಾಧಗಳ ತನಿಖೆ ನಡೆಸುವ ಸರ್ಕಾರದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಪ್ರಕಾರ, ತನಿಖಾ ಅಧಿಕಾರಿ (ಐಒ/ನ್ವೆಸ್ಟಿಗೇಟಿವ್ ಆಫಿಸರ್) ಸಂತ್ರಸ್ತೆಯ ವಯಸ್ಸನ್ನು ನಿರ್ಧರಿಸಲು ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ, ಪಡಿತರ ಚೀಟಿ ಅಥವಾ ಇತರ ಯಾವುದೇ ಸರ್ಕಾರಿ ದಾಖಲೆಗಳನ್ನು ಪಡೆಯಬೇಕಾಗುತ್ತದೆ. ಅವು ಲಭ್ಯವಿಲ್ಲದಿದ್ದರೆ ಅಥವಾ ಅನಿರ್ದಿಷ್ಟವಾಗಿದ್ದರೆ, ಸಂತ್ರಸ್ತರನ್ನು "ನ್ಯಾಯಾಲಯದ ಆದೇಶದ ಮೇರೆಗೆ ವಯಸ್ಸಿನ ನಿರ್ಣಯ ಪರೀಕ್ಷೆಗೆ" ಕಳುಹಿಸಬಹುದು. ಅಲ್ಲದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೊ), 2012ರ ಸೆಕ್ಷನ್ 34 (2) ವಿಶೇಷ ನ್ಯಾಯಾಲಯವು ಮಗುವಿನ ನಿಜವಾದ ವಯಸ್ಸನ್ನು ನಿರ್ಧರಿಸಬೇಕು ಮತ್ತು "ಅಂತಹ ನಿರ್ಧಾರಕ್ಕೆ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು" ಎಂದು ಹೇಳುತ್ತದೆ.
ದೆಹಲಿಯಲ್ಲಿ ಕೋಮಲ್ ಅವರನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳು ಕೋಮಲ್ ಅವರ ಜನನ ಪ್ರಮಾಣಪತ್ರವನ್ನು ತಿರಸ್ಕರಿಸಿದರು. ಅವರನ್ನು ಅವರ ಶಾಸನಬದ್ಧ ವೈದ್ಯಕೀಯ ಪರೀಕ್ಷೆಗೆ ಮೆಡಿಕೋ-ಲೀಗಲ್ ಕೇಸ್ (ಎಂಎಲ್‌ಸಿ) ಗೆ ಕರೆದೊಯ್ಯಲಾಗಿಲ್ಲ, ಅಥವಾ ಅವರನ್ನು ಡಿಎಂ ಅಥವಾ ಸಿಡಬ್ಲ್ಯೂಸಿ ಮುಂದೆ ಹಾಜರುಪಡಿಸಲಾಗಿಲ್ಲ. ಅವರ ನಿಜವಾದ ವಯಸ್ಸನ್ನು ನಿರ್ಧರಿಸಲು ಬೋನ್-ಆಸಿಫಿಕೇಶನ್ ಪರೀಕ್ಷೆ ಮಾಡಲು ಯಾವುದೇ ಪ್ರಯತ್ನಗಳು ನಡೆದಿಲ್ಲ.
ಸಂತ್ರಸ್ತೆಗೆ ಪುನರ್ವಸತಿ ಕಲ್ಪಿಸಬೇಕು ಅಥವಾ ಆಕೆಯ ಕುಟುಂಬದೊಂದಿಗೆ ಸೇರಿಸಬೇಕು ಎಂದು ಅಧಿಕಾರಿಗಳು ಒಮ್ಮತಕ್ಕೆ ಬಂದಿದ್ದರೆ, "ಮನೆ ಪರಿಶೀಲನೆಯನ್ನು ಮೊದಲೇ ಸೂಕ್ತವಾಗಿ ಮಾಡಲಾಗಿದೆ" ಎನ್ನುವುದನ್ನು ಖಾತರಿಪಡಿಸಿಕೊಳ್ಳುವುದು ತನಿಖಾಧಿಕಾರಿ (ಐಒ) ಅಥವಾ ಸಿಡಬ್ಲ್ಯೂಸಿಯ ಜವಾಬ್ದಾರಿ. "ಸಂತ್ರಸ್ತೆಯನ್ನು ಮನೆಗೆ ಕಳುಹಿಸಿದ ಸಂದರ್ಭದಲ್ಲಿ ಆಕೆಯನ್ನು ಸಮಾಜ ಮತ್ತು ಕುಟುಂಬ ಸ್ವೀಕರಿಸುವ ಸಾಧ್ಯತೆಗಳನ್ನು ಅಧಿಕಾರಿಗಳು ಗುರುತಿಸಬೇಕು ಮತ್ತು ದಾಖಲಿಸಬೇಕು.
ಯಾವುದೇ ಸಂದರ್ಭದಲ್ಲೂ ಸಂತ್ರಸ್ತರು ಅದೇ ಕೆಲಸದ ಸ್ಥಳಕ್ಕೆ ಮರಳಬಾರದು ಅಥವಾ "ಹೆಚ್ಚಿನ ಅಪಾಯದ ಸಂದರ್ಭಗಳಿಗೆ" ಒಡ್ಡಿಕೊಳ್ಳುವಂತಿರಬಾರದು. ಆಕೆಯ ಮೇಲೆ ಅತ್ಯಾಚಾರ ನಡೆದ ಮತ್ತು ಆಕೆ ಕಳ್ಳಸಾಗಣೆಗೆ ಒಳಗಾದ ಅಸ್ಸಾಂಗೆ ವಾಪಸ್ ಕಳುಹಿಸುವುದು ಇದರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂದರ್ಭದಲ್ಲಿ ಯಾವುದೇ ಮನೆ ಪರಿಶೀಲನೆ ನಡೆಸಲಾಗಿಲ್ಲ; ಕೋಮಲ್ ಅವರ ಕುಟುಂಬದ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಲು ಯಾರೂ ಪ್ರಯತ್ನಿಸಲಿಲ್ಲ ಅಥವಾ ಲೈಂಗಿಕ ಕಳ್ಳಸಾಗಣೆಯ ಅಪ್ರಾಪ್ತ ಬಲಿಪಶುವಾಗಿ ಆಕೆಗೆ ಪುನರ್ವಸತಿ ನೀಡಬಹುದು ಎನ್ನಲಾಗುವ ಸರ್ಕಾರೇತರ ಸಂಸ್ಥೆಯನ್ನೂ ಸಂಪರ್ಕಿಸಲಾಗಿಲ್ಲ.
ಇದಲ್ಲದೆ, ಸರ್ಕಾರದ ಉಜ್ವಲ ಯೋಜನೆಯ ಪ್ರಕಾರ, ಕಳ್ಳಸಾಗಣೆ ಮತ್ತು ಲೈಂಗಿಕ ಶೋಷಣೆಯ ಸಂತ್ರಸ್ತರಿಗೆ ಸಮಾಲೋಚನೆ, ಮಾರ್ಗದರ್ಶನ ಮತ್ತು ವೃತ್ತಿಪರ ತರಬೇತಿ ಸೇರಿದಂತೆ "ತಕ್ಷಣದ ಮತ್ತು ದೀರ್ಘಕಾಲೀನ ಪುನರ್ವಸತಿ ಸೇವೆಗಳು ಮತ್ತು ಮೂಲಭೂತ ಸೌಕರ್ಯಗಳು/ಅಗತ್ಯಗಳನ್ನು" ಒದಗಿಸಬೇಕು. ಲೈಂಗಿಕ ಕಳ್ಳಸಾಗಣೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ಅನುಭವ ಹೊಂದಿರುವ ಮಕ್ಕಳ ಸಲಹೆಗಾರರಾದ ಆನ್ನಿ ಥಿಯೋಡರ್, ಸಂತ್ರಸ್ತರ ಜೀವನದಲ್ಲಿ ಮಾನಸಿಕ ಸಾಮಾಜಿಕ ಬೆಂಬಲದ ಮಹತ್ವವನ್ನು ಒತ್ತಿಹೇಳಿದ್ದಾರೆ. "ಸಂತ್ರಸ್ತರನ್ನು ಮತ್ತೆ ಸಮಾಜಕ್ಕೆ ಸೇರಿಸಿದ ನಂತರ ಅಥವಾ ಅವರ ಪೋಷಕರಿಗೆ ಹಸ್ತಾಂತರಿಸಿದ ನಂತರ ಕೌನ್ಸೆಲಿಂಗ್ ಮುಂದುವರಿಸುವುದು ದೊಡ್ಡ ಸವಾಲು" ಎಂದು ಅವರು ಹೇಳುತ್ತಾರೆ.
ದೆಹಲಿಯ ವೇಶ್ಯಾಗೃಹಗಳಿಂದ 'ರಕ್ಷಿಸಿದ' ನಂತರ, ಕೋಮಲ್ ಅವರಿಗೆ ಪುನರ್ವಸತಿ ಕಲ್ಪಿಸುವ ತ್ವರಿತ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಎರಡು ಗಂಟೆಗಳ ಕಾಲ ಸಮಾಲೋಚನೆ ನಡೆಸಲಾಯಿತು. ಕೌನ್ಸೆಲರ್ ಆನ್ನಿ ಕೇಳುತ್ತಾರೆ, "ವರ್ಷಗಳ ಆಘಾತದಿಂದ ಬಳಲುತ್ತಿರುವ ಯಾರಾದರೂ ಕೇವಲ ಎರಡರಿಂದ ಮೂರು ತಿಂಗಳ ಸಮಾಲೋಚನೆ ಸೆಷನ್ನುಗಳಲ್ಲಿ ಅಥವಾ ಕೆಲವು ಸಂದರ್ಭಗಳಲ್ಲಿ ಒಂದೆರಡು ದಿನಗಳಲ್ಲಿ ಹೇಗೆ ಚೇತರಿಸಿಕೊಳ್ಳಬಹುದು?" ಸಂತ್ರಸ್ತರು ಗುಣಮುಖರಾಗಬೇಕು, ಚೇತರಿಸಿಕೊಳ್ಳಬೇಕು ಮತ್ತು ತಮ್ಮ ಅಗ್ನಿಪರೀಕ್ಷೆಯ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂದು ನಿರೀಕ್ಷಿಸುವಲ್ಲಿ ವ್ಯವಸ್ಥೆಯು ಕಠಿಣವಾಗಿದೆ ಎಂದು ಅವರು ಹೇಳುತ್ತಾರೆ, ಮುಖ್ಯವಾಗಿ ಅವರು (ಪ್ರಾಧಿಕಾರಗಳು) ಅದನ್ನು ಬಯಸುತ್ತಾರೆ.
ರಕ್ಷಿಸಲ್ಪಟ್ಟ ಸಂತ್ರಸ್ತರ ದುರ್ಬಲ ಮಾನಸಿಕ ಆರೋಗ್ಯವನ್ನು ಸರ್ಕಾರಿ ಸಂಸ್ಥೆಗಳು ಇನ್ನಷ್ಟು ಹದಗೆಡಿಸುತ್ತವೆ, ಅವರನ್ನು ಮತ್ತೆ ಕಳ್ಳಸಾಗಣೆಗೆ ಬಲಿಯಾಗುವಂತೆ ಅಥವಾ ವಾಣಿಜ್ಯ ಲೈಂಗಿಕ ಕೆಲಸಕ್ಕೆ ಮರಳುವ ಅನಿವಾರ್ಯತೆಗೆ ದೂಡುತ್ತವೆ ಎಂದು ಅನೇಕ ತಜ್ಞರು ನಂಬುತ್ತಾರೆ. "ನಿರಂತರ ಪ್ರಶ್ನೆಗಳು ಮತ್ತು ಔದಾಸೀನ್ಯವು ಸಂತ್ರಸ್ತರಲ್ಲಿ ತಾವು ಅನುಭವಿಸಿದ ಸಂಕಷ್ಟವನ್ನು ಮತ್ತೆ ಅನುಭವಿಸಲು ಇವರು ಒತ್ತಡ ಹೇರುತ್ತಿದ್ದಾರೆ ಎನ್ನುವ ಭಾವನೆಯನ್ನು ಮೂಡಿಸುತ್ತದೆ. ಈ ಹಿಂದೆ, ಕಳ್ಳಸಾಗಣೆದಾರರು, ವೇಶ್ಯಾವಾಟಿಕೆ ಮಾಲೀಕರು, ದಲ್ಲಾಳಿಗಳು ಮತ್ತು ಇತರ ಅಪರಾಧಿಗಳು ಅವರಿಗೆ ಕಿರುಕುಳ ನೀಡುತ್ತಿದ್ದರು, ಆದರೆ ಈಗ ಸರ್ಕಾರಿ ಸಂಸ್ಥೆಗಳು ಸಹ ಅದನ್ನೇ ಮಾಡುತ್ತಿವೆ" ಎಂದು ಆನ್ನಿ ತಮ್ಮ ಮಾತನ್ನು ಮುಕ್ತಾಯಗೊಳಿಸುತ್ತಾರೆ.
*****
ಮೊದಲ ಬಾರಿ ರಕ್ಷಣೆಗೆ ಒಳಗಾದಾಗ, ಕೋಮಲ್ ಅವರಿಗೆ 13 ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿರಲಿಲ್ಲ. ಎರಡನೇ ಬಾರಿ, ಅವರಿಗೆ 22 ವರ್ಷವಾಗಿತ್ತು. ಬಹುಶಃ ಈ ಸಂದರ್ಭದಲ್ಲಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ರಕ್ಷಿಸಲಾಯಿತು. ಕೋಮಲ್ ಮೇ 2024ರಲ್ಲಿ ಅಸ್ಸಾಮ್ ರೈಲನ್ನು ಹತ್ತಿದರು. ಆದರೆ ಅವರು ಸುರಕ್ಷಿತವಾಗಿ ತಮ್ಮ ಊರನ್ನು ತಲುಪಿದರೇ? ಅವರು ಈಗ ತನ್ನ ತಾಯಿಯೊಂದಿಗೆ ಇದ್ದಾರೆಯೇ? ಅಥವಾ ಇನ್ಯವಾವುದೋ ರೆಡ್ ಲೈಟ್ ಏರಿಯಾದಲ್ಲಿ ಬದುಕುತ್ತಿರಬಹುದೇ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳಿಲ್ಲ.
ಈ ಕಥಾನಕವು ಭಾರತದಲ್ಲಿ ಲೈಂಗಿಕ ಮತ್ತು ಲಿಂಗಾಧಾರಿತ ಹಿಂಸಾಚಾರ (ಎಸ್‌ಜಿಬಿವಿ) ಸಂತೃಸ್ತರ ಆರೈಕೆಗೆ ಎದುರಾಗುವ ಸಾಮಾಜಿಕ, ಸಾಂಸ್ಥಿಕ ಮತ್ತು ರಚನಾತ್ಮಕ ಅಡೆತಡೆಗಳನ್ನು ಕೇಂದ್ರವಾಗಿಟ್ಟುಕೊಂಡು ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯ ಭಾಗ. ಇದು ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಇಂಡಿಯಾ ಬೆಂಬಲಿತ ಉಪಕ್ರಮದ ಭಾಗ.
ಸಂತ್ರಸ್ತರು ಮತ್ತು ಅವರ ಕುಟುಂಬ ಸದಸ್ಯರ ಹೆಸರುಗಳನ್ನು ಅವರ ಗುರುತನ್ನು ರಕ್ಷಿಸುವ ಸಲುವಾಗಿ ಬದಲಾಯಿಸಲಾಗಿದೆ.
ಅನುವಾದ: ಶಂಕರ. ಎನ್. ಕೆಂಚನೂರು