ಕಿರಣ್‌ ಅಡುಗೆ, ಮನೆ ಸ್ವಚ್ಛಗೊಳಿಸುವುದು ಮತ್ತು ಮನೆ ನಡೆಸುವುದನ್ನು ಮಾಡುತ್ತಾಳೆ. ಅಲ್ಲದೆ ಅವಳು ಉರುವಲು ಹಾಗೂ ನೀರನ್ನು ಸಹ ಸಂಗ್ರಹಿಸಿ ಮನೆಗೆ ತರುತ್ತಾಳೆ. ಬೇಸಗೆ ತೀವ್ರವಾದಂತೆ ಅವಳು ನೀರು ತರಲು ಹೋಗಬೇಕಾದ ದೂರವೂ ಹೆಚ್ಚಾಗತೊಡುತ್ತದೆ.

ಕೇವಲ 11 ವರ್ಷದ ಬಾಲಕಿಯಾದ ಅವಳಿಗೆ ಇವುಗಳನ್ನೆಲ್ಲ ಮಾಡದೆ ಬೇರೆ ಆಯ್ಕೆಯೇ ಇಲ್ಲ. ಅವಳ ಪೋಷಕರು ಬಾನ್ಸವಾಡಾ ಜಿಲ್ಲೆಯ ಅವಳ ಹಳ್ಳಿಯಲ್ಲಿನ (ಊರಿನ ಹೆಸರನ್ನು ಮರೆಮಾಚಲಾಗಿದೆ) ಮನೆಯಲ್ಲಿ ಮತ್ಯಾರೂ ಇಲ್ಲ. ಅವಳ 18 ವರ್ಷದ ಅಣ್ಣ ವಿಕಾಸ್‌ ಕೂಡಾ ಯಾವುದೇ ಸಮಯದಲ್ಲಿ ವಲಸೆ ಹೋಗಬಹುದು. ಅವನು ಈ ಹಿಂದೆಯೂ ವಲಸೆ ಹೋಗಿದ್ದಾನೆ. ಅವಳ 13 ವರ್ಷದೊಳಗಿನ ಇತರ ಮೂವರು ಒಡಹುಟ್ಟಿದವರು ಗುಜರಾತಿನ ವಡೋದರಾದಲ್ಲಿ ಕಟ್ಟಡ ಕಾರ್ಮಿಕರಾಗಿ ದುಡಿಯುವ ಪೋಷಕರೊಂದಿಗೆ ಇರುತ್ತಾರೆ. ಅವರ್ಯಾರೂ ಶಾಲೆಗೆ ಹೋಗುವುದಿಲ್ಲ, ಆದರೆ ಕಿರಣ್‌ ಶಾಲೆಗೆ ಹೋಗುತ್ತಾಳೆ.

“ನಾನು ಬೆಳಗ್ಗೆ ಏನಾದರೂ ಅಡುಗೆ ಮಾಡಿಕೊಳ್ಳುತ್ತೇನೆ” ಎಂದು ಕಿರಣ್‌ (ಹೆಸರು ಬದಲಾಯಿಸಲಾಗಿದೆ) ಈ ವರದಿಗಾರರಿಗೆ ತನ್ನ ದಿನಚರಿಯನ್ನು ವಿವರಿಸುತ್ತಾ ಹೇಳುತ್ತಾಳೆ. ಒಂದು ಕೋಣೆಯ ಅರ್ಧ ಭಾಗವನ್ನು ಅಡುಗೆ ಮನೆಯೆಂದು ಕರೆಯಲಾಗುತ್ತದೆ. ಮಾಡಿಗೆ ನೇತು ಹಾಕಿದ ಫ್ಲಾಷ್‌ ಬೆಳಕೊಂದು ಸೂರ್ಯ ಮುಳುಗಿದ ನಂತರ ಆ ಮನೆಗೆ ಬೆಳಕಾಗುತ್ತದೆ.

ಕೋಣೆಯ ಒಂದು ಮೂಲೆಯಲ್ಲಿ ಕಟ್ಟಿಗೆ ಒಲೆಯಿದೆ. ಅದರ ಪಕ್ಕದಲ್ಲಿ ಉಳಿದ ಸೌದೆ ಮತ್ತು ಹಳೆಯ ಇಂದನವನ್ನು ಇಡಲಾಗಿತ್ತು. ತರಕಾರಿ, ಮಸಾಲೆ ಮತ್ತು ಇತ್ಯಾದಿ ಪದಾರ್ಥಗಳನ್ನು ಪ್ಲಾಸ್ಟಿಕ್‌ ಕವರುಗಳಲ್ಲಿ ಅಲ್ಲೇ ಕಟ್ಟಿ ಇಡಲಾಗಿತ್ತು. ಕೆಲವನ್ನು ಗೋಡೆಗೆ ನೇತು ಹಾಕಲಾಗಿತ್ತು. ಎಲ್ಲವನ್ನೂ ಅವಳ ಪುಟ್ಟ ತೋಳುಗಳಿಗೆ ಎಟುಕುವಂತೆ ಜೋಡಿಸಿಡಲಾಗಿದೆ. “ಸಂಜೆ ಶಾಲೆಯಿಂದ ಬಂದು ರಾತ್ರಿಗೆ ಅಡುಗೆ ಮಾಡುತ್ತೇನೆ. ಫಿರ್‌ ಮುರ್ಗಿ ಕೋ ಧೇಖನಾ [ನಂತರ ಕೋಳಿ ನೋಡಿಕೊಳ್ಳುತ್ತೇನೆ] ಅದರ ನಂತರ ನಾವು ಮಲಗುತ್ತೇವೆ” ಎನ್ನುತ್ತಾಳೆ ಕಿರಣ್.‌

ಅವಳು ನಾಚಿಕೆಯಿಂದ ನಿರೂಪಿಸಿದ ಅವಳ ಕತೆಯಿಂದ ಇನ್ನೂ ಹಲವು ವಿವರಗಳು ತಪ್ಪಿ ಹೋಗಿವೆ. ಅವುಗಳಲ್ಲಿ ಸ್ಥಳೀಯವಾಗಿ ದಾವ್ದಾ ಅಥವಾ ಬಿಜ್ಲಿಯಾ ಎಂದು ಕರೆಯಲ್ಪಡುವ ಹತ್ತಿರದ ಬೆಟ್ಟಗಳ ತಪ್ಪಲಿನಲ್ಲಿರುವ ಕಾಡುಗಳಿಂದ ಉರುವಲು ಸಂಗ್ರಹಿಸುವುದು ಮತ್ತು ಸಾಗಿಸುವುದು ಸೇರಿವೆ. ಕಿರಣ್‌ ಆ ಕಾಡಿಗೆ ತಲುಪಲು ಒಂದು ಗಂಟೆ ತೆಗೆದುಕೊಳ್ಳುತ್ತಾಳೆ. ಅಲ್ಲಿ ಕಟ್ಟಿಗೆಯನ್ನು ಒಟ್ಟು ಮಾಡಿ, ಕತ್ತರಿಸಿ, ಹೊರೆ ಮಾಡಲು ಮತ್ತೊಂದು ಗಂಟೆ ಬೇಕಾದರೆ, ಕಾಡಿನಿಂದ ಮನೆಗೆ ಮರಳಲು ಇನ್ನೊಂದು ಗಂಟೆ ಹಿಡಿಯುತ್ತದೆ. ಕಿಲೋಗಟ್ಟಲೆ ಭಾರವಿರುವ ಈ ಸೌದೆಯ ಹೊರೆ ಸಾಕಷ್ಟು ದೊಡ್ಡದಿದ್ದು ಬೆಳೆದ ಮಕ್ಕಳ ತೂಕದಷ್ಟು ಇರುತ್ತದೆ.

PHOTO • Swadesha Sharma
PHOTO • Swadesha Sharma

ಹಳ್ಳಿಗೆ ಎದುರಾಗಿರುವ ಬೆಟ್ಟಗಳನ್ನು ಸ್ಥಳೀಯರುಬಿಜ್ಲಿಯಾ ಅಥವಾ ದಾವ್ದಾ ಖೋರಾ ಎಂದು ಕರೆಯುತ್ತಾರೆ. ಈ ಪ್ರದೇಶದ ಮಕ್ಕಳು ಸೌದೆ ಸಂಗ್ರಹಿಸಲು ಮತ್ತು ಜಾನುವಾರುಗಳನ್ನು ಮೇಯಿಸಲು ಈ ಬೆಟ್ಟಗಳಿಗೆ ಹೋಗುತ್ತಾರೆ

PHOTO • Swadesha Sharma
PHOTO • Swadesha Sharma

ಎಡಕ್ಕೆ : ಸಮಯ ಸಿಕ್ಕಾಗಲೆಲ್ಲಾ , ಕಿರಣ್ ಮತ್ತು ಅವಳ ಅಣ್ಣ ಸೌದೆ ಸಂಗ್ರಹಿಸಿ ತಂದು ಭವಿಷ್ಯದ ಬಳಕೆಗಾಗಿ ಮನೆಯ ಪಕ್ಕದಲ್ಲಿ ಜೋಡಿಸುತ್ತಾರೆ . ಕಾಡಿಗೆ ಹೋಗಿ ಬರಲು ಒಟ್ಟು ಮೂರು ಗಂಟೆಯಷ್ಟು ಸಮಯ ಬೇಕಾಗುತ್ತದೆ . ಬಲ : ಅಡುಗೆ ಮನೆಯ ಪದಾರ್ಥಗಳು ಸರ್ಕಾರವು ಒದಗಿಸಿದ ಪಡಿತರ ಮತ್ತು ಬೆಳೆದ ಮತ್ತು ಕಿತ್ತು ತಂದ ಸೊಪ್ಪುಗಳನ್ನು ಮನೆಯ ಗೋಡೆ ಯಲ್ಲಿ ನೇತಾಡುವ ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ

“ನಾನು ನೀರನ್ನು ಸಹ ತರುತ್ತೇನೆ” ಎಂದು ಕಿರಣ ತನ್ನ ಕೆಲಸದ ಪಟ್ಟಿಯನ್ನು ಇನ್ನಷ್ಟು ಹಿಗ್ಗಿಸುತ್ತಾಳೇ. ಎಲ್ಲಿಂದ? “ಹ್ಯಾಂಡ್ ಪಂಪಿನಿಂದ.” ಹ್ಯಾಂಡ್‌ ಪಂಪ್‌ ನೆರೆಯ ಅಸ್ಮಿತಾ ಕುಟುಂಬಕ್ಕೆ ಸೇರಿದ್ದು. “"ನಮ್ಮ ಜಮೀನಿನಲ್ಲಿ ಎರಡು ಹ್ಯಾಂಡ್ ಪಂಪ್ ಗಳಿವೆ. ಈ ಪ್ರದೇಶದ ಪ್ರತಿಯೊಬ್ಬರೂ, ಸುಮಾರು ಎಂಟು ಮನೆಗಳು, ಅವುಗಳಿಂದ ನೀರನ್ನು ತೆಗೆದುಕೊಂಡು ಹೋಗುತ್ತಾರೆ” ಎಂದು 25 ವರ್ಷದ ಅಸ್ಮಿತಾ ಹೇಳುತ್ತಾರೆ. “ಬೇಸಗೆ ಬಂದಾಗ ಈ ಹ್ಯಾಂಡ್‌ ಪಂಪ್‌ ಒಣಗುತ್ತವೆ, ಆಗ ಜನರು ಗಡ್ಢಾ ಬಳಿ (ಬಿಜ್ಲಿಯಾ ಬೆಟ್ಟಗಳ ಬುಡದಲ್ಲಿ ನೈಸರ್ಗಿಕವಾಗಿ ರೂಪುಗೊಳ್ಳುವ ಕೊಳ ಅಥವಾ ಕೊಳ) ಹೋಗುತ್ತಾರೆ." ಗಡ್ಢಾ ಇನ್ನೂ ದೂರದಲ್ಲಿದ್ದು, ಕಿರಣ್‌ ರೀತಿಯ ಮಕ್ಕಳಿಗೆ ಅದು ಎತ್ತರದ ಪ್ರದೇಶವೂ ಹೌದು.

ಚಳಿಗಾಲದ ಚಳಿಯಿಂದ ತಪ್ಪಿಸಿಕೊಳ್ಳಲು ಸಲ್ವಾರ್ ಕುರ್ತಾ ಮತ್ತು ನೇರಳೆ ಸ್ವೆಟರ್ ಧರಿಸಿದ್ದ ಅವಳು ದೊಡ್ಡವಳಂತೆ ಕಾಣುತ್ತಾಳೆ. ಆದರೆ, "ಮಮ್ಮಿ-ಪಾಪಾ ಸೆ ರೋಜ್ ಬಾತ್ ಹೋತಿ ಹೈ... ಫೋನ್ ಪೇ [ನಾವು ಪ್ರತಿದಿನ ನಮ್ಮ ಹೆತ್ತವರೊಂದಿಗೆ ಮಾತನಾಡುತ್ತೇವೆ ... ಫೋನಿನಲ್ಲಿ]“ ಎಂದಾಗ ಅವಳಲ್ಲಿನ ಬಾಲಕಿ ನಿಮಗೆ ಕಾಣುತ್ತಾಳೆ.

ಬಾನ್ಸವಾಡಾ ಜಿಲ್ಲೆ ನೆಲೆಗೊಂಡಿರುವ ದಕ್ಷಿಣ ರಾಜಸ್ಥಾನದ ಅರ್ಧದಷ್ಟು ಕುಟುಂಬಗಳು ವಲಸೆ ಹೋಗುತ್ತವೆ. ಈ ಜಿಲ್ಲೆಯಲ್ಲಿ ಭಿಲ್ ಆದಿವಾಸಿಗಳು ಜನಸಂಖ್ಯೆಯ ಶೇಕಡಾ 95ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಕಿರಣ್‌ ಕುಟುಂಬ ಕೂಡಾ ಇದೇ ಸಮುದಾಯಕ್ಕೆ ಸೇರಿದೆ. ಊರಿನ ಭೂಮಿ ಹಾಗೂ ಮನೆಯನ್ನು ನೋಡಿಕೊಳ್ಳುವ ಸಲುವಾಗಿ ಕುಟುಂಬಸ್ಥರು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಹೋಗುತ್ತಾರೆ. ಇದು ಈ ಮಕ್ಕಳ ಹೆಗಲಿನ ಮೇಲಿನ ವಯಸ್ಸಿಗೂ ಮೀರಿದ ಹೊರೆಯಾಗುವುದಲ್ಲದೆ, ಒಂಟಿಯಾಗಿ ವಾಸಿಸುವ ಅವರ ಅಸಹಾಯಕತೆ, ಇಂತಹ ಮಕ್ಕಳನ್ನು ಬೇಟೆಯಾಡುವವರಿಗೆ ಸುಲಭದ ತುತ್ತಾಗಿ ಕಾಣುತ್ತದೆ.

ಅದು ಜನವರಿ ತಿಂಗಳ ಆರಂಭ. ಅಲ್ಲಿನ ಹೊಲಗಳಲ್ಲಿನ ಬೆಳೆಗಳು ಒಣಗಿ ಹಳದಿ ಬಣ್ಣಕ್ಕೆ ತಿರುಗಿದ್ದವು, ಹತ್ತಿ ಹೊಲಗಳು ಹೂವರಳಿಸಿ ಕಟಾವಿಗೆ ಸಿದ್ಧಗೊಂಡಿದ್ದವು. ಚಳಿಗಾಲದ ರಜಾದಿನಗಳ ಕಾರಣದಿಂದಾಗಿ ಅನೇಕ ಮಕ್ಕಳು ಕುಟುಂಬದ ಜಮೀನಿನಲ್ಲಿ ಕೆಲಸ ಮಾಡುವಲ್ಲಿ, ಉರುವಲು ಸಂಗ್ರಹಿಸುವಲ್ಲಿ ಅಥವಾ ಜಾನುವಾರುಗಳನ್ನು ಮೇಯಿಸುವಲ್ಲಿ ನಿರತರಾಗಿದ್ದರು.

ಕಳೆದ ಬಾರಿ ತನ್ನ ಪೋಷಕರೊಂದಿಗೆ ವಲಸೆ ಹೋಗಿದ್ದ ವಿಕಾಸ್‌ ಈ ಬಾರಿ ಊರಿನಲ್ಲೇ ಉಳಿದಿದ್ದಾರೆ. “ನಾನು [ನಿರ್ಮಾಣ ಸ್ಥಳದಲ್ಲಿ] ಮರಳು ಬಳಸುವ ಯಂತ್ರದೊಂದಿಗೆ ಕೆಲಸ ಮಾಡುತ್ತಿದ್ದೆ” ಎಂದು ಹೊಲದಲ್ಲಿ ಆರಿಸುತ್ತಿದ್ದ ಅವರು ಹೇಳಿದರು. “ಒಂದು ದಿನದ ಕೆಲಸಕ್ಕೆ ನಮಗೆ 500 ರೂಪಾಯಿಗಳನ್ನು ಕೊಡುತ್ತಿದ್ದರು. ಆದರೆ ರಸ್ತೆ ಬದಿಯಲ್ಲೇ ಉಳಿದುಕೊಳ್ಳಬೇಕಿತ್ತು. ಅದು ನನಗೆ ಹಿಡಿಸಿರಲಿಲ್ಲ.” ಹೀಗಾಗಿ ಅವರು ದೀಪಾವಳಿಯ (2023) ಸುಮಾರಿಗೆ ಕಾಲೇಜು ಮತ್ತೆ ಆರಂಭಗೊಂಡಾಗ ಊರಿಗೆ ಮರಳಿದರು.

ವಿಕಾಸ್‌ ಸದ್ಯದಲ್ಲೇ ಪದವಿ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. “ಪೆಹಲೆ ಪೂರಾ ಕಾಮ್‌ ಕರ್ಕೆ, ಫಿರ್‌ ಪಢ್ನೆ ಬೈಟ್ತೇ ಹೈ [ಮೊದಲು ಕೆಲಸ ಮುಗಿಸಿ ನಂತರ ಓದಲು ಕೂರುತ್ತೇವೆ]” ಎಂದು ಅವರು ಪರಿಗೆ ತಿಳಿಸಿದರು.

ಕೂಡಲೇ ಕಿರಣ್‌ ಕೂಡಾ ಶಾಲೆಯಲ್ಲಿ ತನಗೆ ಇಷ್ಟವಾಗುವ ವಿಷಯದ ಕುರಿತು ಹೇಳತೊಡಗಿದಳು: "ನನಗೆ ಹಿಂದಿ ಮತ್ತು ಇಂಗ್ಲಿಷ್ ಇಷ್ಟ. ಸಂಸ್ಕೃತ ಮತ್ತು ಗಣಿತ ಇಷ್ಟವಿಲ್ಲ.”

PHOTO • Swadesha Sharma
PHOTO • Swadesha Sharma

ಎಡ : ಕಿರಣ್ ಕುಟುಂಬದ ಜಮೀನಿನಲ್ಲಿ ಕಡಲೆ ಗಿಡಗಳು ಬೆಳೆಯುತ್ತಿವೆ . ಬಲ : ಅಣ್ಣ-ತಂಗಿ ಸೇರಿ ಒಮ್ಮೆಗೆ 10-12 ಕೋಳಿಗಳನ್ನು ಸಹ ಸಾಕುತ್ತಾರೆ . ಅಂಗಳದ ಛಾವಣಿ ಗೆ ನೇತು ಹಾಕಿದ್ದ ನೇಯ್ದ ಬುಟ್ಟಿಯಲ್ಲಿ ಒಂದು ಕೋಳಿ ತ್ತು , ಅದು ಅದರ ಗಾತ್ರವನ್ನು ಅವಲಂಬಿಸಿ ಸುಮಾರು 300-500 ರೂ . ಗೆ ಮಾರಾಟವಾಗಬಹುದು

PHOTO • Swadesha Sharma
PHOTO • Swadesha Sharma

ಎಡ : ಪಾಪಡ್ ( ಚಪ್ಪ ರದ ಅವರೆ ) ರೀತಿಯ ಬೆಳೆದ ಅಥವಾ ಯ್ದು ತಂದ ಅನೇಕ ಬಗೆಯ ಸೊಪ್ಪುಗಳನ್ನು ಸಂರಕ್ಷಣೆಗಾಗಿ ಛಾವಣಿಗಳ ಮೇಲೆ ಒಣಗಿಸಲಾಗುತ್ತದೆ . ಬಲ : ಶಾಲೆಗೆ ಚಳಿಗಾಲದ ರಜೆ ಸಿಕ್ಕಿರುವ ಕಾರಣ ಮಕ್ಕಳು ತಮ್ಮ ಮನೆಯ ಜಾನುವಾರುಗಳನ್ನು ಹತ್ತಿರದ ಬೆಟ್ಟಗಳಲ್ಲಿ ಮೇಯಿಸಲು ಕರೆದೊಯ್ಯುವುದು ಸೇರಿದಂತೆ ಅನೇಕ ಮನೆಕೆಲಸಗಳನ್ನು ಮಾಡುತ್ತಾರೆ

ಮಧ್ಯಾಹ್ನದ ಊಟದ ಯೋಜನೆಯಡಿ ಕಿರಣ್ ಗೆ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ: "ಕಿಸೀ ದಿನ್ ಸಬ್ಜಿ, ಕಿಸೀ ದಿನ್ ಚಾವಲ್ [ಕೆಲವು ದಿನಗಳಲ್ಲಿ ತರಕಾರಿ, ಕೆಲವು ದಿನಗಳಲ್ಲಿ ಅನ್ನ]", ಎಂದು ಅವಳು ಹೇಳುತ್ತಾಳೆ. ಆದರೆ ಅವರ ಉಳಿದ ಆಹಾರ ಅಗತ್ಯಗಳನ್ನು ಪೂರೈಸಲು ಅಣ್ಣ-ತಂಗಿ ತಮ್ಮ ಭೂಮಿಯಲ್ಲಿ ಪಾಪಡ್ (ಚಪ್ಪರದ ಅವರೆ) ಬೆಳೆದು ಸಂಗ್ರಹಿಸುತ್ತಾರೆ ಮತ್ತು ಸೊಪ್ಪುಗಳನ್ನು ಖರೀದಿಸುತ್ತಾರೆ. ಇತರ ಪದಾರ್ಥಗಳನ್ನು ಸರ್ಕಾರ ಒದಗಿಸಿದ ಪಡಿತರ ಚೀಟಿಯ ಮೂಲಕ ಪಡೆಯುತ್ತಾರೆ.

"25 ಕಿಲೋ ಗೋಧಿ ಸಿಗುತ್ತದೆ" ಎಂದು ವಿಕಾಸ್ ಹೇಳುತ್ತಾರೆ. "ಮತ್ತು ಎಣ್ಣೆ, ಮೆಣಸಿನಕಾಯಿ, ಅರಿಶಿನ ಮತ್ತು ಉಪ್ಪಿನಂತಹ ಇತರ ಪದಾರ್ಥಗಳು. 500 ಗ್ರಾಂ ಹೆಸರು ಕಾಳು ಮತ್ತು ಕಡಲೆ ಬೇಳೆಯನ್ನು ಸಹ ಕೊಡುತ್ತಾರೆ. ನಮ್ಮಿಬ್ಬರಿಗೆ ಅದು ಒಂದು ತಿಂಗಳಿಗೆ ಸಾಕಾಗುತ್ತದೆ." ಆದರೆ ಇಡೀ ಕುಟುಂಬ ಊರಿಗೆ ಬಂದ ನಂತರ ಅದು ಸಾಕಾಗುವುದಿಲ್ಲ.

ಜಮೀನಿನಿಂದ ಬರುವ ಆದಾಯದಿಂದ ಕುಟುಂಬದ ಖರ್ಚುಗಳನ್ನು ಸರಿದೂಗಿಸಲು ಸಾಧ್ಯವಿಲ್ಲ. ಅಣ್ಣ-ತಂಗಿ ತಾವು ಸಾಕುವ ಕೋಳಿಗಳು ಶಾಲಾ ಶುಲ್ಕ ಮತ್ತು ದೈನಂದಿನ ಖರ್ಚುಗಳನ್ನು ಭಾಗಶಃ ಭರಿಸುತ್ತವೆ, ಆದರೆ ಅದು ಮುಗಿದಾಗ ಪೋಷಕರು ಹಣ ಕಳುಹಿಸಬೇಕಾಗುತ್ತದೆ.

ಮನರೇಗಾ ಅಡಿಯಲ್ಲಿ ವೇತನ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ರಾಜಸ್ಥಾನದಲ್ಲಿ ಸೂಚಿಸಲಾದ ದಿನಗೂಲಿ - 266 ರೂ - ವಡೋದರಾದಲ್ಲಿನ ಕಿರಣ್ ಮತ್ತು ವಿಕಾಸ್ ಅವರ ಪೋಷಕರಿಗೆ ಖಾಸಗಿ ಗುತ್ತಿಗೆದಾರರು ನೀಡುವ 500 ರೂಪಾಯಿಗಳ ಅರ್ಧದಷ್ಟು.

ಇಂತಹ ವ್ಯತ್ಯಾಸವುಳ್ಳ ಕೂಲಿಯಿಂದಾಗಿ ಕುಶಾಲಗಢ ಪಟ್ಟಣದ ಬಸ್ ನಿಲ್ದಾಣಗಳು ಸದಾ ವಲಸಿಗರಿಂದ ಗಿಜಿಗುಡುತ್ತಿರುತ್ತದೆ. ಇಲ್ಲಿ ವರ್ಷವಿಡೀ ಪ್ರತಿದಿನ ಸುಮಾರು 40 ಸರ್ಕಾರಿ ಬಸ್ಸುಗಳು 50-100 ಜನರನ್ನು ಒಂದು ಪ್ರಯಾಣದಲ್ಲಿ ಕರೆದೊಯ್ಯುತ್ತವೆ. ಓದಿ: ವಲಸೆಗಾರರು ಈ ಸಂಖ್ಯೆಯನ್ನು ಮರೆಯವುದಿಲ್ಲ…

PHOTO • Swadesha Sharma
PHOTO • Swadesha Sharma

ಬಾನಸವಾಡಾದ ಕುಶಾಲಗಢ ಪಟ್ಟಣದ ಬಸ್ ನಿಲ್ದಾಣಗಳು ಸದಾ ವಲಸಿಗರಿಂದ ಗಿಜಿಗುಡುತ್ತಿರುತ್ತದೆ. ಇಲ್ಲಿ ವರ್ಷವಿಡೀ ಪ್ರತಿದಿನ ಸುಮಾರು 40 ಸರ್ಕಾರಿ ಬಸ್ಸುಗಳು 50-100 ಜನರನ್ನು ನೆರೆಯ ಗುಜರಾತ್‌ ಮತ್ತು ಮಧ್ಯ ಪ್ರದೇಶಕ್ಕೆ ಒಂದು ಪ್ರಯಾಣದಲ್ಲಿ ಕರೆದೊಯ್ಯುತ್ತವೆ

ಮಕ್ಕಳು ದೊಡ್ಡವರಾದಂತೆ ಆಗಾಗ ತಮ್ಮ ಹೆತ್ತವರೊಂದಿಗೆ ಕೂಲಿ ಕೆಲಸಕ್ಕೆಂದು ಹೋಗುತ್ತಾರೆ, ಇದೇ ಕಾರಣದಿಂದಾಗಿ ವಯಸ್ಸಾದಂತೆ ಶಾಲೆಯಿಂದ ಹೊರಗುಳಿಯುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಲ್ಲಿ ಯಾವ ಅಚ್ಚರಿಯೂ ಇಲ್ಲ. ಸಾಮಾಜಿಕ ಕಾರ್ಯಕರ್ತೆಯಾಗಿರುವ ಅಸ್ಮಿತಾ, "ಇಲ್ಲಿ ಬಹಳಷ್ಟು ಮಕ್ಕಳು ಹೆಚ್ಚಾಗಿ 8 ಅಥವಾ 10ನೇ ತರಗತಿಯವರೆಗೆ ಓದುತ್ತಾರೆ" ಎನ್ನುವ ಮೂಲಕ ಔಪಚಾರಿಕ ಶಿಕ್ಷಣದ ಕೊರತೆಯನ್ನು ದೃಢಪಡಿಸುತ್ತಾರೆ. ಈ ಹಿಂದೆ ಸ್ವತಃ ಅವರೇ ಅಹಮದಾಬಾದ್ ಮತ್ತು ರಾಜ್ಕೋಟ್ ನಗರಗಳಿಗೆ ವಲಸೆ ಹೋಗುತ್ತಿದ್ದರು. ಪ್ರಸ್ತುತ ಅವರು ಕುಟುಂಬದ ಹತ್ತಿ ಹೊಲಗಳಲ್ಲಿ ಕೆಲಸ ಮಾಡುವುದರ ಜೊತೆಗೆ, ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಾಗುತ್ತಾ ಉಳಿದವರಿಗೂ ಸಹಾಯ ಮಾಡುತ್ತಿದ್ದಾರೆ.

ಎರಡು ದಿನಗಳ ನಂತರ ಈ ವರದಿಗಾರರು ಕಿರಣಳನ್ನು ಮತ್ತೆ ಭೇಟಿಯಾದಾಗ, ಕುಶಾಲನಗಢ ಮೂಲದ ಸರ್ಕಾರೇತರ ಸಂಸ್ಥೆಯಾದ ಆಜೀವಿಕಾ ಬ್ಯೂರೋದ ಸಹಾಯದಿಂದ ಅಸ್ಮಿತಾ ಸೇರಿದಂತೆ ಈ ಪ್ರದೇಶದ ಯುವ ಸ್ವಯಂಸೇವಕ ಮಹಿಳೆಯರು ನಡೆಸಿದ ಸಮುದಾಯ ಸಂಪರ್ಕ ಸಭೆಯಲ್ಲಿ ಭಾಗವಹಿಸಿದ್ದಳು.  ಯುವತಿಯರಿಗೆ ಅವರು ಹೊಂದಬಹುದಾದ ವಿವಿಧ ರೀತಿಯ ಶಿಕ್ಷಣ, ಉದ್ಯೋಗಗಳು ಮತ್ತು ಭವಿಷ್ಯದ ಬಗ್ಗೆ ಈ ಸಭೆಯಲ್ಲಿ ಅರಿವು ಮೂಡಿಸಲಾಗುತ್ತದೆ. "ನೀವು ಬಯಸಿದ್ದನ್ನೆಲ್ಲಾ ಸಾಧಿಸಬಹುದು" ಎಂದು ಮಾರ್ಗದರ್ಶಕರು ಸಭೆಯ ಉದ್ದಕ್ಕೂ ಮತ್ತೆ ಮತ್ತೆ ಹೇಳುತ್ತಿದ್ದರು.

ಸಭೆಯ ನಂತರ, ಕಿರಣ್ ಮತ್ತೊಂದು ಕೊಡ ನೀರನ್ನು ತರಲು ಮತ್ತು ಸಂಜೆಯ ಅಡುಗೆ ಮಾಡಲು ಮನೆಗೆ ಹಿಂತಿರುಗುತ್ತಾಳೆ. ಆದರೆ ಅವಳು ಮತ್ತೆ ಶಾಲೆಗೆ ಹೋಗಿ ತನ್ನ ಸ್ನೇಹಿತೆಯರನ್ನು ಭೇಟಿಯಾಗಲು, ರಜಾ ದಿನಗಳಲ್ಲಿ ಮಾಡಲು ಸಾಧ್ಯವಾಗದ ಕೆಲಸಗಳನ್ನು ಮಾಡಿ ಮುಗಿಸಲು ಕಾತರಳಾಗಿದ್ದಳು.

ಅನುವಾದ: ಶಂಕರ. ಎನ್. ಕೆಂಚನೂರು

Swadesha Sharma

سودیشا شرما، پیپلز آرکائیو آف رورل انڈیا (پاری) میں ریسرچر اور کانٹینٹ ایڈیٹر ہیں۔ وہ رضاکاروں کے ساتھ مل کر پاری کی لائبریری کے لیے بھی کام کرتی ہیں۔

کے ذریعہ دیگر اسٹوریز Swadesha Sharma
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru