ಅಬ್ದುಲ್ ವಹಾಬ್ ಥೋಕರ್ ಚಳಿಗಾಲದಲ್ಲಿ ಗುಲ್ ಮಾರ್ಗ್‌ಗೆ ಬರುವ ಉತ್ಸಾಹಭರಿತ ಪ್ರವಾಸಿಗರನ್ನು ಹಿಮಚ್ಛಾದಿತ ಇಳಿಜಾರುಗಳಲ್ಲಿ ಓಡಾಡಿಸಲು ತಮ್ಮ ಸ್ಲೆಡ್ಜ್ (ಹಿಮ ಯಾ ಮಂಜುಗಡ್ಡೆಯ ಮೇಲೆ ಚಲಿಸಲು ಯಾ ಸಾಮಾನು ಸಾಗಿಸಲು ಉಪಯೋಗಿಸುವ ಗಾಡಿ) ಜೊತೆ ಸಿದ್ಧವಾಗಿದ್ದರು. ಆದರೆ ಈ 2024ರ ಜನವರಿ 14 ಒಂದಿಷ್ಟೂ ಮಂಜು ಬೀಳದ ಕಾರಣ ಥೋಕರ್ ನಿರಾಶಾದಾಯಕ ಮುಖ ಹೊತ್ತು ವಿನಾಶಕ್ಕೆ ವಿನಾಶಕ್ಕೆ ಸಾಕ್ಷಿಯಾಗಿ ನಿಂತಿದ್ದ ಕಂದು ಬಣ್ಣದ ಬೆಟ್ಟದತ್ತ ಕಣ್ಣು ನೆಟ್ಟು ಕುಳಿತಿದ್ದರು.
“ಇದು ಚಿಲಾ-ಇ-ಕಲನ್ [ತೀವ್ರ ಚಳಿಗಾಲ] ಆದರೆ ಗುಲ್ ಮಾರ್ಗ್‌ನಲ್ಲಿ ಒಂದಿಷ್ಟು ಕೂಡಾ ಮಂಜು ಬಿದ್ದಿಲ್ಲ” ಎಂದು 43 ವರ್ಷದ ಅವರು ತಿಳಿಸಿದರು. ಕಳೆದ 25 ವರ್ಷಗಳಿಂದ ಸ್ಲೆಡ್ಜಿಂಗ್ ಎಳೆಯುತ್ತಿರುವ ಥೋಕರ್ ಅವರು ಈ ರೀತಿಯಾಗಿದ್ದನ್ನು ನೋಡುತ್ತಿರುವುದು ಇದೇ ಮೊದಲು. ಹೀಗಾಗಿ ಅವರು ಹೆದರಿದ್ದಾರೆ. “ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾವು ಸ್ವಲ್ಪ ದಿನದಲ್ಲೇ ಸಾಲ ಮಾಡಿ ಬದುಕುಬೇಕಾಗುತ್ತದೆ.”
ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ (ಜೆ & ಕೆ) ಬಾರಾಮುಲ್ಲಾ ಜಿಲ್ಲೆಯ ಪ್ರಸಿದ್ಧ ಗಿರಿಧಾಮವಾದ ಗುಲ್ ಮಾರ್ಗ್ ತನ್ನ ಹಿಮಚ್ಛಾದಿತ ಪರಿಸರಕ್ಕೆ ಜಗತ್ತಿನೆಲ್ಲೆಡೆಯ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಈ ಪ್ರವಾಸೋದ್ಯಮವು ಸುಮಾರು 2,000 ಜನರ ಸ್ಥಳೀಯ ಆರ್ಥಿಕತೆಯನ್ನು ಬೆಂಬಲಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ (ಜನಗಣತಿ 2011), ಮತ್ತು ಕೆಲಸಕ್ಕಾಗಿ ಇಲ್ಲಿಗೆ ಪ್ರಯಾಣಿಸುವ ಥೋಕರ್ ಅವರಂತಹ ಇತರರು ಸಹ ಇದರಿಂದಲೇ ಬದುಕು ಕಟ್ಟಿಕೊಂಡಿದ್ದಾರೆ.
ಬಾರಾಮುಲ್ಲಾದ ಕಲಂತರಾ ಗ್ರಾಮದ ನಿವಾಸಿಯಾದ ಅವರು, ಕೆಲಸ ಹುಡುಕಿಕೊಂಡು ಸ್ಥಳೀಯ ಸಾರಿಗೆಯ ಮೂಲಕ ಪ್ರತಿದಿನ 30 ಕಿಲೋಮೀಟರ್ ದೂರದಲ್ಲಿರುವ ಗಲ್ ಮಾರ್ಗ್ ಪ್ರದೇಶಕ್ಕೆ ಬರುತ್ತಾರೆ. “ಈ ದಿನಗಳಲ್ಲಿ ಗ್ರಾಹಕರೂ ಸಿಕ್ಕರೂ ಹಿಮವಿಲ್ಲದ ಕಾರಣ ಸವಾರಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ಆದಾಯ ಕೇವಲ 150-200 ರೂಪಾಯಿಗಳಿಗೆ ಇಳಿದಿದೆ. ಈಗ ನಾವು ಮಾಡಲು ಸಾಧ್ಯವಿರುವುದೆಂದರೆ ಪ್ರವಾಸಿಗರನ್ನು ಹೆಪ್ಪುಗಟ್ಟಿರುವ ನೀರಿನಲ್ಲಿ [ಈ ಹಿಂದೆ ಕರಗಿದ ಹಿಮದಿಂದ ಆಗಿರುವುದು]” ಎನ್ನುತ್ತಾರೆ.
“ಚಳಿಗಾದಲ್ಲಿ ಗುಲ್ ಮಾರ್ಗ್ ಗಿರಿಧಾಮಕ್ಕೆ ಭೇಟಿ ನೀಡುವುದೆಂದರೆ ಅದ್ಭುತ ಅನುಭವ” ಎಂದು ಜಮ್ಮು ಮತ್ತು ಕಾಶ್ಮೀರದ ಅಧಿಕೃತ ವೆಬ್ಸೈಟ್ ಹೇಳುತ್ತದೆ, “ಇಲ್ಲಿನ ಹಿಮದ ಹಾಸಿಗೆಯ ಮೇಲೆ ಜಾರುವ ಅನುಭವವು ಸ್ಕೀಯರ್‌ಗಳಿಗೆ ಸ್ವರ್ಗದ ಅನುಭವ ಕೊಡುತ್ತದೆ. ಇಲ್ಲಿನ ನೈಸರ್ಗಿಕ ಇಳಿಜಾರುಗಳು ಯಾರು ತಲುಪುದ ಸ್ಥಳಗಳಾಗಿದ್ದು, ಸ್ಕೀಯರ್‌ಗಳಿಗೆ ಸವಾಲು ಎಸೆಯುತ್ತವೆ!” ಎಂದು ವೆಬ್ಸೈಟ್ ಮುಂದುವರೆದು ಹೇಳುತ್ತದೆ.
ಗುಲ್ ಮಾರ್ಗ್ ವಿಷಯದಲ್ಲಿ ವೆಬ್ಸೈಟ್ ಹೇಳುತ್ತಿರುವುದು ಸುಳ್ಳಲ್ಲ. ಆದರೆ ಈಗ ಹವಾಮಾನ ವೈಪರೀತ್ಯವು ಹಿಮಾಲಯದ ಈ ಇಳಿಜಾರುಗಳಲ್ಲಿನ ಜೀವನೋಪಾಯಕ್ಕೆ ಕುತ್ತು ತಂದಿದೆ. ಇಲ್ಲಿ ತಮ್ಮ ಜಾನುವಾರುಗಳನ್ನು ಮೇಯಿಸಲೆಂದು ಕರೆತರುವ ಪಶುಪಾಲಕರ ಮೇಲೂ ಈ ಬದಲಾವಣೆ ಸಾಕಷ್ಟು ಪರಿಣಾಮ ತರಲಿದೆ. ಏಕೆಂದರೆ ಇಲ್ಲಿ ಹಿಮ ಬಿದ್ದರೆ ಮಾತ್ರ ಮುಂದೆ ಈ ಪ್ರದೇಶದಲ್ಲಿ ಹುಲ್ಲು ಚಿಗುರಲು ಸಾಧ್ಯ. "ಹವಾಮಾನ ಪರಿಸ್ಥಿತಿಯು ಜಾಗತಿಕವಾಗಿ ಬದಲಾಗುತ್ತಿದೆ, ಮತ್ತು ಇದು ಕಾಶ್ಮೀರ ಪ್ರದೇಶದ ಮೇಲೂ ಪರಿಣಾಮ ಬೀರುತ್ತಿದೆ" ಎಂದು ಕಾಶ್ಮೀರ ವಿಶ್ವವಿದ್ಯಾಲಯದ ಪರಿಸರ ಮತ್ತು ವಿಜ್ಞಾನ ವಿಭಾಗದ ವಿಜ್ಞಾನಿ ಡಾ. ಮೊಹಮ್ಮದ್ ಮುಸ್ಲಿಮ್ ಹೇಳುತ್ತಾರೆ.
ಈಗ ಥೋಕರ್ ಅವರ ವಿಷಯದಲ್ಲೇ ಹೇಳುವುದಾದರೆ. ಒಳ್ಳೆಯ ಹಿಮ ಬಿದ್ದು ಪ್ರವಾಸಿಗರಿದ್ದ ವರ್ಷಗಳಲ್ಲಿ ಅವರು ದಿನಕ್ಕೆ 1200 ರೂ.ಗಳನ್ನು ಗಳಿಸುತ್ತಿದ್ದರು. ಆದರೆ ಈ ದಿನಗಳಲ್ಲಿ ಅವರ ಸಂಪಾದನೆ ಮನೆ ಖರ್ಚು ಮತ್ತು ಪ್ರಯಾಣದ ವೆಚ್ಚ ನಿಭಾಯಿಸಲು. “ಇಲ್ಲಿ ಈಗ ದಿನಕ್ಕೆ 200 ರೂಪಾಯಿಯಷ್ಟೇ ಗಳಿಸಲು ಸಾಧ್ಯವಾಗುತ್ತಿದೆ. ಆದರೆ ನನಗೆ ದಿನವೊಂದಕ್ಕೆ ಮುನ್ನೂರು ರೂಪಾಯಿಗಳ ಖರ್ಚಿರುತ್ತದೆ” ಎಂದು ಅವರು ವಿಷಾದದಿಂದ ಹೇಳುತ್ತಾರೆ. ಥೋಕರ್ ಮತ್ತು ಅವರ ಪತ್ನಿ ತಮ್ಮ ಇಬ್ಬರು ಹದಿಹರೆಯದ ಮಕ್ಕಳು ಮತ್ತು ತನ್ನ ಬದುಕನ್ನು ದೂಡುವ ಸಲುವಾಗಿ ಇರುವ ಚೂರುಪಾರು ಉಳಿತಾಯದ ಹಣವನ್ನು ಖರ್ಚು ಮಾಡುತ್ತಿದ್ದಾರೆ.
ಈ ವರ್ಷ ಹಿಮದ ಕೊರತೆಯು 'ಪಾಶ್ಚಿಮಾತ್ಯ ಅಡಚಣೆಗಳಲ್ಲಿ'ನ ಬದಲಾವಣೆಗಳಿಂದಾಗಿ ಉಂಟಾಗಿದೆ ಎಂದು ಡಾ. ಮುಸ್ಲಿಮ್ ಹೇಳುತ್ತಾರೆ. ಇದು ಹವಾಮಾನ ಸಂಬಂಧಿ ವಿದ್ಯಮಾನವಾಗಿದ್ದು, ಮೆಡಿಟರೇನಿಯನ್ ಪ್ರದೇಶದಲ್ಲಿ ಉಪೋಷ್ಣವಲಯದ ಬಿರುಗಾಳಿಗಳು ಜೆಟ್ ಸ್ಟ್ರೀಮ್‌ಗಳ (ಬಲವಾದ ಗಾಳಿ) ಮೂಲಕ ಪೂರ್ವಕ್ಕೆ ಚಲಿಸುತ್ತವೆ ಮತ್ತು ಅಂತಿಮವಾಗಿ ಪಾಕಿಸ್ತಾನ ಮತ್ತು ಉತ್ತರ ಭಾರತದ ಮೇಲೆ ಹಿಮ ಮತ್ತು ಮಳೆಗೆ ಕಾರಣವಾಗುತ್ತವೆ. ಪಾಶ್ಚಿಮಾತ್ಯ ಅಡಚಣೆಗಳು ಈ ಪ್ರದೇಶದ ನೀರಿನ ಭದ್ರತೆ, ಕೃಷಿ ಮತ್ತು ಪ್ರವಾಸೋದ್ಯಮಕ್ಕೆ ನಿರ್ಣಾಯಕವಾಗಿವೆ.
ರಾಜಧಾನಿ ಶ್ರೀನಗರದಲ್ಲಿ ಜನವರಿ 13ರಂದು 15 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದ್ದು, ಇದು ಎರಡು ದಶಕಗಳಲ್ಲಿ ಅತಿ ಹೆಚ್ಚು. ಅದೇ ಸಮಯದಲ್ಲಿ ಉತ್ತರ ಭಾರತದ ಉಳಿದ ಭಾಗಗಳು ಬಹಳಷ್ಟು ಕಡಿಮೆ ತಾಪಮಾನವನ್ನು ದಾಖಲಿಸಿದ್ದವು.
“ಇದುವರೆಗೂ ನಾವು ಕಾಶ್ಮೀರದಲ್ಲಿ ಎಲ್ಲಿಯೂ ದೊಡ್ಡ ಮಟ್ಟದ ಹಿಮಪಾತವನ್ನು ಕಂಡಿಲ್ಲ. ಜೊತೆಗೆ ವಾತಾವರಣದಲ್ಲಿ ತಾಪಮಾನ ಹೆಚ್ಚುತ್ತಿದೆ. ಜನವರಿ 15ರಂದು ಪಹಲ್ ಗಾಂವ್ ಎನ್ನುವಲ್ಲಿ ಸಾರ್ವಕಾಲಿಕ ಗರಿಷ್ಠ ತಾಪಮಾನ 14.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. 2018ರಲ್ಲಿ 13.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು ಎಂದು ಶ್ರೀನಗರದ ವಾತಾವರಣ ವಿಜ್ಞಾನ ಕೇಂದ್ರದ ನಿರ್ದೇಶಕ ಡಿ. ಮುಖ್ತಾರ್ ಅಹ್ಮದ್ ತಿಳಿಸಿದ್ದಾರೆ.
ನೋನ್ ಮಾರ್ಗ್ ಮತ್ತು ಪಹಲ್ ಗಾಂವ್‌ಗಳಲ್ಲಿ ಅಷ್ಟೇನೂ ಹಿಮಪಾತವಾಗಿಲ್ಲ. ಇಲ್ಲಿನ ತಾಪಮಾನ ಏರುತ್ತಿದ್ದು ಇಲ್ಲೆಲ್ಲ ಚಳಿಗಾಲದ ಚಳಿ ಕಾಣುತ್ತಿಲ್ಲ. ಕಳೆದ ದಶಕದಲ್ಲಿ, ಹಿಮಾಲಯದಲ್ಲಿ ತಾಪಮಾನ ಏರಿಕೆಯ ಪ್ರಮಾಣವು ಜಾಗತಿಕ ಸರಾಸರಿಗಿಂತ ಹೆಚ್ಚಾಗಿದೆ ಎಂದು ವಿವಿಧ ಅಧ್ಯಯನಗಳು ಹೇಳುತ್ತವೆ, ಇದು ಈ ಸ್ಥಳವನ್ನು ಹವಾಮಾನ ವೈಪರೀತ್ಯಕ್ಕೆ ಬಲಿಯಾದ ಅತ್ಯಂತ ದುರ್ಬಲ ಸ್ಥಳವನ್ನಾಗಿದೆ ಮಾಡಿದೆ.
ಸ್ಥಳೀಯರು ಈ ರೀತಿಯ ಹಿಮವಿಲ್ಲದ ಭೂಮಿಯನ್ನು ʼಮರುಭೂಮಿʼ ಎಂದು ಕರೆಯುತ್ತಿದ್ದಾರೆ. ಇದು ಇಲ್ಲಿನ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವನ್ನು ಕೊಡುತ್ತಿದೆ. ಹೋಟೆಲ್ ಮಾಲಿಕರು, ಗೈಡುಗಳು, ಸ್ಲೆಡ್ಜ್ ಎಳೆಯುವವರು, ಸ್ಕೀ ತರಬೇತುದಾರರು ಮತ್ತು ಎಟಿವಿ (ಎಲ್ಲಾ ರೀತಿಯ ನೆಲದ ಮೇಲೆ ಚಲಿಸಬಲ್ಲ ವಾಹನ) ಚಾಲಕರು ದುಡಿಮೆಯಿಲ್ಲದರೆ ಹೆಣಗಾಡುತ್ತಿದ್ದಾರೆ.
“ಕೇವಲ ಜನವರಿ ತಿಂಗಳೊಂದರಲ್ಲೇ 150 ಬುಕಿಂಗ್ ಕ್ಯಾನ್ಸಲ್ ಆಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಈ ಸಂಖ್ಯೆಯಲ್ಲಿ ಇನ್ನಷ್ಟು ಏರಿಕೆ ಕಂಡುಬರಬಹುದು” ಎಂದು ಗುಲ್ ಮಾರ್ಗ್ ಪ್ರದೇಶದ ಹೋಟಲ್ ಖಲೀಲ್ ಪ್ಯಾಲೇಸ್ ವ್ಯವಸ್ಥಾಪಕರಾದ ಮುದಾಸಿರ್ ಅಹ್ಮದ್ ಹೇಳುತ್ತಾರೆ. ನನ್ನ ಇಡೀ ಜೀವನದಲ್ಲಿ ಇಂತಹ ಕೆಟ್ಟ ಹವಾಮಾನವನ್ನು ನಾನು ನೋಡಿಲ್ಲ" ಎಂದು 29 ವರ್ಷದ ಅವರು ಹೇಳುತ್ತಾರೆ. ಈ ಹಂಗಾಮಿನಲ್ಲಿ ಈಗಾಗಲೇ ಸುಮಾರು 15 ಲಕ್ಷಗಳಷ್ಟು ನಷ್ಟವಾಗಿರಬಹುದು ಎಂದು ಅವರು ಅಂದಾಜಿಸುತ್ತಾರೆ.
ಹಿಲ್‌ಟಾಪ್ ಹೋಟೆಲ್‌ನಲ್ಲಿ, ಸಿಬ್ಬಂದಿ ಅತಿಥಿಗಳು ಬೇಗನೇ ಹಿಂತಿರುಗುತ್ತಿರುವುದನ್ನು ಗಮನಿಸಿದ್ದಾರೆ. ಹಿಮವನ್ನು ನೋಡಲು ಇಲ್ಲಿಗೆ ಬರುವ ಅತಿಥಿಗಳು ನಿರಾಶೆಗೊಂಡಿದ್ದಾರೆ ಎಂದು 90 ಜನರು ಕೆಲಸ ಮಾಡುವ ಹಿಲ್‌ಟಾಪ್ ಕಂಪನಿಯ ವ್ಯವಸ್ಥಾಪಕ ಐಜಾಜ್ ಭಟ್ (35) ಹೇಳುತ್ತಾರೆ. “ಪ್ರತಿ ದಿನವೂ ಅವರು ನಿರೀಕ್ಷೆಗಿಂತ ಮುಂಚೆಯೇ ಹೊರಡುತ್ತಾರೆ.'' ಹಿಲ್‌ಟಾಪ್‌ನಲ್ಲಿ 90 ಜನರು ಕೆಲಸ ಮಾಡುತ್ತಾರೆ. ಗುಲ್ ಮಾರ್ಗದ ಬಹುತೇಕ ಹೋಟೆಲ್‌ಗಳ ಸ್ಥಿತಿಯೂ ಇದೇ ಆಗಿದೆ. ಅವರು ಹೇಳುತ್ತಾರೆ. "ಕಳೆದ ವರ್ಷ, ಈ ಸಮಯದಲ್ಲಿ ಇಲ್ಲಿ ಸುಮಾರು 5-6 ಅಡಿಗಳಷ್ಟು ಹಿಮ ಬಿದ್ದಿತ್ತು, ಆದರೆ ಈ ವರ್ಷ, ಕೆಲವೇ ಇಂಚುಗಳಷ್ಟು ಹಿಮ ಬಿದ್ದಿದೆ."
ಸ್ಕೀ ಮಾರ್ಗದರ್ಶಿಯಾಗಿರುವ ಜಾವೇದ್ ಅಹ್ಮದ್ ರೇಶಿ, ಈ ಅಹಿತಕರ ಪರಿಸರ ಬದಲಾವಣೆಗಳಿಗೆ ಸ್ಥಳೀಯರನ್ನು ದೂಷಿಸುತ್ತಾರೆ "ಗುಲ್ಮಾರ್ಗ್ ಪ್ರದೇಶಕ್ಕೆ ಬಂದು ಅದನ್ನು ನಾಶಪಡಿಸಿದ್ದಕ್ಕಾಗಿ ನಾನು ಪ್ರವಾಸಿಗರನ್ನು ದೂಷಿಸಲು ಸಾಧ್ಯವಿಲ್ಲ" ಎಂದು 41 ವರ್ಷದ ಅವರು ಹೇಳುತ್ತಾರೆ. "ನಾವೇ ನಮ್ಮ ಕೈಯಾರೆ ಗುಲ್ಮಾರ್ಗ್ ಪ್ರದೇಶವನ್ನು ನಾಶಗೊಳಿಸಿದ್ದೇವೆ."
ಎಟಿವಿ ಚಾಲಕರಾಗಿರುವ ಮುಷ್ತಾಕ್ ಅಹ್ಮದ್ ಭಟ್ ಅವರು ಒಂದು ದಶಕದಿಂದ ಆಫ್ ರೋಡ್ ವಾಹನಗಳನ್ನು ಓಡಿಸುತ್ತಿದ್ದಾರೆ. ಚಳಿಗಾಲದಲ್ಲಿ, ಭಾರೀ ಹಿಮಪಾತವಿರುವಾಗ ಇಲ್ಲಿ ATV ವಾಹನಗಳು ಮಾತ್ರವೇ ಲಭ್ಯ ಸಾರಿಗೆ ವಿಧಾನವಾಗಿದೆ. ಒಂದೂವರೆ ಗಂಟೆಗಳ ಕಾಲ ಸವಾರಿಗೆ ಚಾಲಕರು ರೂ. 1,500 ಶುಲ್ಕ ವಿಧಿಸುತ್ತಾರೆ.
ವಾಹನಗಳ ಹೆಚ್ಚಳವು ಈ ಪ್ರದೇಶದ ಸೂಕ್ಷ್ಮ ಹವಾಮಾನವನ್ನು ಕೆಡಿಸುತ್ತಿದೆ ಎನ್ನುವುದು ಮುಷ್ತಾಕ್ ಅಭಿಪ್ರಾಯ. "ಗುಲ್ ಮಾರ್ಗ್ ಬಟ್ಟಲಿನ (ಈ ಸ್ಥಳವು ಎತ್ತರದಿಂದ ನೋಡಿದಾಗ ಬಟ್ಟಲಿನಂತೆ ಕಾಣುತ್ತದೆ) ಒಳಗೆ ವಾಹನಗಳನ್ನು ಅನುಮತಿಸುವುದನ್ನು ಅಧಿಕಾರಿಗಳು ನಿಲ್ಲಿಸಬೇಕು. ಇದು ಸ್ಥಳದ ಹಸಿರನ್ನು ನಾಶಪಡಿಸುತ್ತಿದೆ ಮತ್ತು ಅದೇ ಇಲ್ಲಿ ಹಿಮಪಾತವಾಗದಿರಲು ಕಾರಣವಾಗಿದೆ. ಇದು ನಮ್ಮ ಗಳಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಿದೆ" ಎಂದು 40 ವರ್ಷದ ಅವರು ಹೇಳುತ್ತಾರೆ.
ಅವರ ವಾಹನಕ್ಕೆ ಸವಾರಿ ಸಿಗದೆ ಮೂರು ದಿನಗಳಾಗಿವೆ. 10 ಲಕ್ಷ ರೂಪಾಯಿ ಸಾಲ ಮಾಡಿ ಹೊಸದಾಗಿ ಹೊಸದಾಗಿ ಎಟಿವಿ ವಾಹನವನ್ನು ಖರೀದಿಸಿರುವ ಅವರು ಈ ಬೆಳವಣಿಗೆಯಿಂದಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಮುಷ್ತಾಕ್ ಮುಂದಿನ ವರ್ಷದಲ್ಲಿ ಒಳ್ಳೆಯ ವ್ಯವಹಾರ ನಡೆದು ಸಾಲವನ್ನು ಬೇಗನೇ ತೀರಿಸಬಹುದೆನ್ನುವ ನಿರೀಕ್ಷೆಯೊಂದಿಗೆ ವಾಹನ ಖರೀದಿಸಿದ್ದರು. “ಈಗಿನ ಪರಿಸ್ಥಿತಿಯಲ್ಲಿ ಸಾಲ ತೀರಿಸುವುದು ಕಷ್ಟವೆನ್ನಿಸುತ್ತಿದೆ. ಬಹುಶಃ ಈ ಬೇಸಗೆಯಲ್ಲಿ ನಾನು ಗಾಡಿಯನ್ನು ಮಾರಬೇಕಾಗಿ ಬರಬಹುದು.”
ಇಲ್ಲಿನ ಬಟ್ಟೆ ಬಾಡಿಗೆಗೆ ಕೊಡುವ ಅಂಗಡಿಗಳಲ್ಲೂ ಅಲ್ಲಿನ ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರೆ ಜನರು ಕಾಣುತ್ತಿಲ್ಲ. “ನಾವು ಗುಲ್ ಮಾರ್ಗ್ ಪ್ರದೇಶಕ್ಕೆ ಆಗಮಿಸುವ ಪ್ರವಾಸಿಗಳಿಗೆ ಕೋಟ್ ಮತ್ತು ಸ್ನೋ ಬೂಟುಗಳನ್ನು ಬಾಡಿಗೆಗೆ ಬಿಡುವ ಮೂಲಕ ಜೀವನ ನಡೆಸುತ್ತೇವೆ. ನಮ್ಮ ವ್ಯವಹಾರಕ್ಕೆ ಹಿಮಪಾತ ಬಹಳ ನಿರ್ಣಾಯಕ. ಈಗೀಗ ದಿನಕ್ಕೆ 500-1,000 ರೂಪಾಯಿಗಳನ್ನು ಗಳಿಸುವುದು ಕೂಡಾ ಕಷ್ಟವಾಗುತ್ತಿದೆ” ಎನ್ನುತ್ತಾರೆ 30 ವರ್ಷದ ಫಯಾಝ್ ಅಹಮದ್. ಇವರು ಗುಲ್ ಮಾರ್ಗ್ ಪ್ರದೇಶದಿಂದ ಅರ್ದ ಗಂಟೆ ದಾರಿಯ ದೂರದಲ್ಲಿರುವ ತನ್ ಮಾರ್ಗ್ ಎನ್ನುವಲ್ಲಿ ಸ್ಥಳೀಯವಾಗಿ ಕೋಟ್ ಮತ್ತು ಬೂಟ್ ಅಂಗಡಿಗಳು ಎಂದು ಕರೆಯಲ್ಪಡುವ ಬಟ್ಟೆ ಬಾಡಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಾರೆ.
ದೇಡೆ ಮತ್ತು ಇತರ 11 ಉದ್ಯೋಗಿಗಳು ಹಿಮಪಾತಕ್ಕಾಗಿ ಆಸೆಯಿಂದ ಕಾಯುತ್ತಿದ್ದಾರೆ. ಒಂದು ವೇಳೆ ಬಿದ್ದರೆ ಅವರು ತಲಾ 200 ರೂ.ಗಳ ಬಾಡಿಗೆ ಮೊತ್ತದ 200 ಕೋಟ್ ಮತ್ತು ಜಾಕೇಟುಗಳನ್ನು ಬಾಡಿಗೆ ಹಿಂದಿನ ದಿನಗಳಲ್ಲಿ ಸಂಪಾದಿಸುತ್ತಿದ್ದಂತೆ ದಿನವೊಂದಕ್ಕೆ 40,000 ರೂಪಾಯಿ ಮೊತ್ತದ ವ್ಯವಹಾರದ ನಿರೀಕ್ಷೆಯಲ್ಲಿದ್ದಾರೆ. ಆದರೆ ಈಗಿನ ವಾತಾವಾರಣದಲ್ಲಿ ಪ್ರವಾಸಿಗರಿಗೆ ಈ ಉಡುಪುಗಳ ಅವಶ್ಯಕತೆ ಬೀಳುವುದಿಲ್ಲ.
ಹಿಮದ ಕೊರತೆ ಕೇವಲ ಪ್ರವಾಸಿ ಋತುವಿನ ಮೇಲಷ್ಟೇ ಪರಿಣಾಮ ಬೀರುವುದಿಲ್ಲ, ಆದರೆ ನಂತರವೂ ಅದರ ಪರಿಣಾಮವಿರಲಿದೆ. "ಇಡೀ ಕಣಿವೆಯು ಹಿಮದ ಕೊರತೆಯನ್ನು ಅನುಭವಿಸುತ್ತದೆ. ಕುಡಿಯಲು ಅಥವಾ ಕೃಷಿಗೆ ನೀರು ಇರುವುದಿಲ್ಲ. ತಂಗ್ ಮಾರ್ಗ್ ಪ್ರದೇಶದ ಹಳ್ಳಿಗಳು ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿವೆ" ಎಂದು ಸ್ಕೀ ಮಾರ್ಗದರ್ಶಿ ರೇಶಿ ಹೇಳುತ್ತಾರೆ.
ಚಳಿಗಾಲದ ಹಿಮಪಾತವು ಸಾಮಾನ್ಯವಾಗಿ ಹಿಮನದಿಗಳು ಮತ್ತು ಸಾಗರ ಹಿಮಗಡ್ಡೆಯಂತಹ ಕ್ರಯೋಸ್ಪಿಯರ್ (ನೀರು ಮಂಜುಗಡ್ಡೆ ಅಥವಾ ಹಿಮದ ರೂಪದಲ್ಲಿ ನಿಲ್ಲುವ ಸ್ಥಳ) ಮೀಸಲುಗಳಿಗೆ ನೀರು ಮರುಪೂರಣ ಮಾಡುತ್ತದೆ (ಭೂಮಿಯ ಮೇಲಿನ ಅತಿದೊಡ್ಡ ಸಿಹಿನೀರಿನ ಮೀಸಲು ಎಂದು ಪರಿಗಣಿಸಲಾಗಿದೆ). ಮೀಸಲು ಪ್ರದೇಶಗಳು ಈ ಪ್ರದೇಶದ ನೀರಿನ ಭದ್ರತೆಯನ್ನು ನಿಯಂತ್ರಿಸುತ್ತವೆ. "ಹಿಮನದಿಯ ಮಂಜುಗಡ್ಡೆಯ ಯಾವುದೇ ಕೊರತೆಯು ನಮ್ಮ ನೀರಾವರಿ ಕೃಷಿಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಕಾಶ್ಮೀರದ ಎತ್ತರದ ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ಕರಗುವ ಹಿಮವು ಮುಖ್ಯ ನೀರಿನ ಮೂಲವಾಗಿದೆ" ಎಂದು ಮುಸ್ಲಿಮ್ ಹೇಳುತ್ತಾರೆ, "ಆದರೆ ಇಂದು, ಪರ್ವತಗಳಲ್ಲಿ ಹಿಮವಿಲ್ಲ. ಇದರಿಂದಾಗಿ ಕಣಿವೆಯ ಜನರು ತೊಂದರೆ ಅನುಭವಿಸುತ್ತಾರೆ.”
ಇದರ ನಡುವೆ ತನ್ಮಾರ್ಗ್ ಪ್ರದೇಶದ ಬಟ್ಟೆಯಂಗಡಿಯ ದೇಡ್ ಮತ್ತು ಅವರ ಸಂಗಡಿಗರಿಗೆ ತಮ್ಮ ಚಿಂತೆಯಿಂದ ಹೊರಬರುವ ಮಾರ್ಗ ಕಾಣುತ್ತಿಲ್ಲ. “ಇಲ್ಲಿ ಹನ್ನೆರಡು ಜನ ಕೆಲಸ ಮಾಡುತ್ತಾರೆ. ನಮಗೆಲ್ಲರಿಗೂ 3-4 ಜನರನ್ನು ಹೊಂದಿರುವ ಕುಟಂಬಗಳಿವೆ.” ಪ್ರಸ್ತುತ ಪರಿಸ್ಥಿತಿಯಲ್ಲಿ ಅವರು ದಿನಕ್ಕೆ 1,000 ರೂಪಾಯಿಗಳನ್ನು ಗಳಿಸುತ್ತಿದ್ದು, ಅದರಲ್ಲೇ ಎಲ್ಲರೂ ಹಂಚಿಕೊಳ್ಳುತ್ತಾರೆ.” ಇಷ್ಟು ಸಣ್ಣ ಮೊತ್ತದಲ್ಲಿ ನಾವು ನಮ್ಮ ಕುಟುಂಬವನ್ನು ಹೇಗೆ ಸಲಹುವುದು? ಈ ವಾತಾವರಣ ನಮ್ಮನ್ನು ಕೊಲ್ಲುತ್ತಿದೆ” ಎನ್ನುತ್ತಾರೆ ಈ ಮಾರಾಟಗಾರ.
ಅನುವಾದ: ಶಂಕರ. ಎನ್. ಕೆಂಚನೂರು