ಅಶೋಕ್ ಭಟ್ ಅವಸರವಾಗಿ ತಮ್ಮ ಗೊಂಬೆಗಳನ್ನು, ಮರದಿಂದ ಮಾಡಿದ ಪುಟಾಣಿ ಪುಟಾಣಿ ಆಟಿಕೆ ಆನೆ ಮತ್ತು ಕುದುರೆಗಳನ್ನು ಸೇರಿಸಿ ಗಂಟು ಕಟ್ಟುತ್ತಿದ್ದಾರೆ. ಅವುಗಳನ್ನು ಮಾರಾಟಕ್ಕೆಂದು ಹರಡಿದ ಬಿಳೀ ಹಾಳೆಯಲ್ಲಿಯೇ ಅವುಗಳನ್ನು ಮೂಟೆಕಟ್ಟುತ್ತಿದ್ದಾರೆ. ಅವರು ತಡಮಾಡುವಂತಿಲ್ಲ, ಏಕೆಂದರೆ ಅವರು ತಮ್ಮ ಗೊಂಬೆಗಳನ್ನು ಮಾರಾಟಕ್ಕೆಂದು ಇಟ್ಟಿರುವ ದಕ್ಷಿಣ ದೆಹಲಿಯ ಸರಕಾರೀ ಮಾರುಕಟ್ಟೆ ʼದೆಹಲಿ ಹಾಥ್ʼ ನ ಹೊರಗಡೆ ಅನಧಿಕೃತ ವ್ಯಾಪರಿಗಳ ಮೇಲೆ ಪೋಲೀಸರು ಹಠಾತ್ ಧಾಳಿ ಆರಂಭಿಸಿದ್ದಾರೆ. ಅಶೋಕ್ ಮುಂದೇನು ಮಾಡಬೇಕು ಎಂಬುದೇ ಅನಿಶ್ಚಿತವಾಗಿದೆ.
ದೆಹಲಿ ಹಾಥ್ ಎಂಬುದು ಕುಶಲಕರ್ಮಿಗಳು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಸ್ಥಳೀಯ ಮುನ್ಸಿಪಾಲಿಟಿಯಿಂದ ಗುರುತಿಸಲಾದ ತೆರೆದ ಮಾರುಕಟ್ಟೆ ಜಾಗ. ಈ ಜಾಗದಲ್ಲಿ ಕುಶಲಕರ್ಮಿಗಳು ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಅವರಿಗೆ ಅಲ್ಪ ಅವಧಿಯವರೆಗೆ ಸ್ಟಾಲ್ ಗಳನ್ನು ನೀಡಲಾಗುತ್ತದೆ. ಆದರೆ ಅಶೋಕ್ ಮತ್ತು ತಮ್ಮ ಸರದಿಗಾಗಿ ಕಾಯುತ್ತಿರುವ ಇನ್ನೂ ಕೆಲವರು ತಮ್ಮ ನಿಗದಿತ ಜಾಗದಿಂದ ಹೊರಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದ್ದರಿಂದಲೇ ʼಅನಧಿಕೃತʼ ಮಾರಾಟ ಎಂದು ಪರಿಗಣಿಸಿ ಅವರ ಮೇಲೆ ಪೊಲೀಸರು ಧಾಳಿ ಮಾಡುತ್ತಿದ್ದಾರೆ.
“ದೆಹಲಿ ಹಾಥ್ ನ ಹೊರಗಡೆ ಇದೆಲ್ಲಾ ಮಾಮೂಲಿ” ಎನ್ನುತ್ತಾರೆ 40 ವರ್ಷದ ಅಶೋಕ್ ಭಟ್. “ ಸಂಪಾದನೆ ಮಾಡಬೇಕಾದ ಅನಿವಾರ್ಯತೆಯಿಂದಾಗಿ ನಾನಿಲ್ಲಿ ನನ್ನಗೊಂಬೆಗಳನ್ನು ಮಾರಾಟ ಮಾಡುತ್ತಿದ್ದೇನೆ”. ಪೋಲೀಸರು ಹೊರಟುಹೋದ ಮೇಲೆ ಅಶೋಕ್ ಮಾರುಕಟ್ಟೆಯ ಪ್ರವೇಶ ದ್ವಾರದ ಬಳಿ ತಮ್ಮ ಜಾಗಕ್ಕೆ ಮತ್ತೆ ಮರಳುತ್ತಾರೆ. ಮತ್ತೊಮ್ಮೆ ಬಿಳೀ ಬಟ್ಟೆಯನ್ನು ಹರಡಿ ಗೊಂಬೆಗಳನ್ನು ತಮ್ಮ ಮಡದಿಯ ಸಹಾಯದಿಂದ ಮತ್ತೆ ಮಾರಾಟಕ್ಕೆ ಜೋಡಿಸುತ್ತಾರೆ (ಅವರ ಮಡದಿ ತಮ್ಮ ಹೆಸರು ಹೇಳಲು ಇಚ್ಛೆಪಡಲಿಲ್ಲ). ಆಕರ್ಷಕ ಕೆಂಪು ಮತ್ತು ಕೇಸರಿ ಬಣ್ಣದ ಬಂಧೇಜ್ ಪ್ರಿಂಟ್ ವಿನ್ಯಾಸದಿಂದ ಕಂಗೊಳಿಸುವ ಸುಂದರ ಗೊಂಬೆಗಳನ್ನು ಮಾರಾಟಕ್ಕೆ ಒಪ್ಪವಾಗಿ ಜೋಡಿಸಿ ತಮ್ಮ ದಿನವನ್ನು ಮತ್ತೊಮ್ಮೆ ಪ್ರಾರಂಭಿಸುತ್ತಾರೆ.







