ಕೋವಿಡ್-19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಹರಿಯಾಣದಿಂದ ಉತ್ತರ ಪ್ರದೇಶದಲ್ಲಿರುವ ತಮ್ಮ ಊರು ಮಹಾರಾಜ್‌ಗಂಜ್‌ಗೆ ಒಬ್ಬಂಟಿಯಾಗಿ ತಾವು ಹೇಗೆ ಪ್ರಯಾಣಿಸಬೇಕಾಯ್ತು ಎಂಬುದನ್ನು ಸುನೀತಾ ನಿಶಾದ್ ನೆನಪಿಸಿಕೊಳ್ಳುತ್ತಾರೆ.

ಇಡೀ ದೇಶದಲ್ಲಿ ದಿಢೀರನೇ ಲಾಕ್‌ಡೌನ್‌ ಘೋಷಣೆಯಾದಾಗ ಆ ಸಂಕಷ್ಟವನ್ನು ಎದುರಿಸಿದ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಸುನೀತಾ ಕೂಡ ಒಬ್ಬರು. ಹಾಗಾಗಿ ಕೇಂದ್ರದ ಬಜೆಟ್‌ ಇರಲಿ ಅಥವಾ ಸರ್ಕಾರ ಘೋಷಿಸುವ ಹೊಸ ಯೋಜನೆಗಳಿರಲಿ, ಇವರಿಗೆ ಅವುಗಳ ಬಗ್ಗೆ ಯಾವುದೇ ಆಸಕ್ತಿ ಇಲ್ಲ.

"ನೀವು ಬಜೆಟ್ ಬಗ್ಗೆ ನನ್ನನ್ನು ಕೇಳುತ್ತಿದ್ದೀರಿ. ಇದರ ಬದಲು ಕೊರೋನಾ (ಕೋವಿಡ್-19 ಸಾಂಕ್ರಾಮಿಕ) ಸಮಯದಲ್ಲಿ ನಮ್ಮನ್ನು ನಮ್ಮ ಮನೆಗೆ ಕಳುಹಿಸಲು ಅವರಲ್ಲಿ ಹಣ ಯಾಕಿರಲಿಲ್ಲ ಅಂತ ನೀವು ಹೋಗಿ ಸರ್ಕಾರವನ್ನು ಕೇಳಿ," ಎಂದು ಅವರು ಈ ವರದಿಗಾರರನ್ನು ಕೇಳುತ್ತಾರೆ.

ಸದ್ಯ 35 ವರ್ಷ ಪ್ರಾಯದ ಈ ಮಹಿಳೆ ಹರಿಯಾಣಕ್ಕೆ ವಾಪಾಸ್‌ ಬಂದು  ರೋಹ್ಟಕ್‌ನ ಲಾಧೋಟ್ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಿಸುವ ಕೆಲಸ ಮಾಡುತ್ತಿದ್ದಾರೆ. "ಮಜ್‌ಬೂರ್ ಹೂ [ಅಸಹಾಯಕಳಾಗಿದ್ದೇನೆ]. ಅದಕ್ಕಾಗಿ ನಾನು ಇಲ್ಲಿಗೆ ಮರಳಿ ಬರಬೇಕಾಯ್ತು," ಎಂದು ಅವರು ಹೇಳುತ್ತಾರೆ.

ಮರುಬಳಕೆಗಾಗಿ ಸುಗಂಧ ದ್ರವ್ಯದ ಡಬ್ಬಿಗಳನ್ನು ತೂತು ಮಾಡುತ್ತಾ, "ಮೇರೆ ಪಾಸ್ ಬಡಾ ಮೊಬೈಲ್ ನಹೀಂ ಹೈ, ಚೋಟಾ ಮೊಬೈಲ್ ಹೈ [ನನ್ನ ಬಳಿ ದೊಡ್ಡ ಮೊಬೈಲ್ ಇಲ್ಲ, ಸಣ್ಣದೊಂದಿದೆ]. ಬಜೆಟ್ ಅಂದ್ರೆ ಏನು ಅಂತ ನಂಗೆ ಹೇಗೆ ಗೊತ್ತಾಗಬೇಕು?" ಎಂದು ಅವರು ಕೇಳುತ್ತಾರೆ. ಡಿಜಿಟಲೀಕರಣ ಹೆಚ್ಚಿದಂತೆ ಸರ್ಕಾರಿ ಯೋಜನೆಗಳು ಜನರಿಗೆ ಸಿಗಬೇಕಾದರೆ ಸ್ಮಾರ್ಟ್‌ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವುದು ಅಗತ್ಯ. ಆದರೆ ಗ್ರಾಮೀಣ ಭಾರತದಲ್ಲಿ ಅನೇಕರಲ್ಲಿ ಇನ್ನೂ ಅಂತಹ ಸೌಲಭ್ಯಗಳಿಲ್ಲ.

PHOTO • Amir Malik

ರೋಹ್ಟಕ್‌ನ ಲಾಧೋಟ್ ಗ್ರಾಮದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ವಿಂಗಡಿಸುವ ಕೆಲಸ ಮಾಡುತ್ತಿರುವ ಸುನೀತಾ ನಿಶಾದ್

PHOTO • Amir Malik
PHOTO • Amir Malik

ಹರಿಯಾಣದ ರೋಹ್ಟಕ್‌ನ ಭಯ್ಯಾನ್ ಪುರ್ ಗ್ರಾಮದ ಕೌಸಲ್ಯ ದೇವಿಯವರು ಎಮ್ಮೆ ಮೇಯಿಸುತ್ತಾರೆ. ಕೇಂದ್ರ ಬಜೆಟ್ ಬಗ್ಗೆ ಅವರಲ್ಲಿ ಕೇಳಿದಾಗ, ಅವರು "ಬಜೆಟ್? ನಂಗೂ ಅದಕ್ಕೂ ಏನು ಸಂಬಂಧ?" ಎಂದು ಮರುಪ್ರಶ್ನಿಸುತ್ತಾರೆ

ಪಕ್ಕದ ಗ್ರಾಮ ಭಯ್ಯಾನ್ ಪುರ್‌ನಲ್ಲಿ ಎಮ್ಮೆ ಕಾಯುವ ಕೆಲಸ ಮಾಡವ ಕೌಸಲ್ಯ ದೇವಿಯವರಿಗೂ (45) ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಯಾವುದೇ ಆಸಕ್ತಿ ಇಲ್ಲ.

“ಬಜೆಟ್? ಉಸ್ಸೆ ಕ್ಯಾ ಲೆನಾ-ದೇನಾ? [ನನಗೂ ಅದಕ್ಕೂ ಏನು ಸಂಬಂಧ?] ನಾನು ಬೆರಣಿ ತಟ್ಟುವ, ಎಮ್ಮೆಗಳನ್ನು ಸಾಕುವ ಹೆಂಗಸು. ರಾಮನಿಗೆ ಜೈ!” ಎಂದು ತಮ್ಮ ಮಾತನ್ನು ಮುಗಿಸುತ್ತಾರೆ.

ಕೌಸಲ್ಯ ದೇವಿಯವರಿಗೆ ಚಿಂತೆ ಇರುವುದು ಸರ್ಕಾರ ಹಾಲಿನಂತಹ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡುತ್ತಿರುವುದು. ಎಮ್ಮೆಯ ಸಗಣಿ ಎತ್ತಲು ಇರುವ ಎರಡು ಭಾರವಾದ ಪಾತ್ರೆಗಳಲ್ಲಿ ಒಂದನ್ನು ಎತ್ತಿಕೊಳ್ಳುತ್ತಾ, "ನಾನು ಇವೆರಡನ್ನೂ ಎತ್ತಬಲ್ಲೆ, ಹಾಲಿಗೆ ಒಳ್ಳೆಯ ರೇಟು ಕೊಡಿ," ಎಂದು ತಮಾಷೆ ಮಾಡುತ್ತಾರೆ.

"ಸರ್ಕಾರ ಹಾಲಿಗೆ ಬೆಲೆಯೇ ಕೊಡದಿದ್ದರೆ, ಅದರ ಬೇರೆ ಯೋಜನೆಗಳು ನಮಗೆ ಹೇಗೆ ಬೆಲೆ ಕೊಡುತ್ತವೆ?" ಎಂದು ಅವರು ಕೇಳುತ್ತಾರೆ.

ಕನ್ನಡ ಅನುವಾದ: ಚರಣ್‌ ಐವರ್ನಾಡು

Amir Malik

عامر ملک ایک آزاد صحافی، اور ۲۰۲۲ کے پاری فیلو ہیں۔

کے ذریعہ دیگر اسٹوریز Amir Malik
Editor : Swadesha Sharma

سودیشا شرما، پیپلز آرکائیو آف رورل انڈیا (پاری) میں ریسرچر اور کانٹینٹ ایڈیٹر ہیں۔ وہ رضاکاروں کے ساتھ مل کر پاری کی لائبریری کے لیے بھی کام کرتی ہیں۔

کے ذریعہ دیگر اسٹوریز Swadesha Sharma
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad