ಹಲವು ಮೊಮ್ಮಕ್ಕಳ ಅಜ್ಜಿಯಾಗಿರುವ ಬೂಟೆ ಮಾಝಿಯವರಿಗೆ ಈಗ ತನ್ನ ಮಗ ಬಿಟ್ಟು ಹೋಗಿರುವ ಆರು ಹೆಣ್ಣು ಮತ್ತು ಎರಡು ಗಂಡು ಮಕ್ಕಳನ್ನು – ಅವರಲ್ಲಿ ಕೊನೆಯವಳಾದ ಜಾನಕಿ ಆರು ವರ್ಷದವಳು – ನೋಡಿಕೊಳ್ಳುವುದು ಹೇಗೆನ್ನುವ ಚಿಂತೆ ಕಾಡುತ್ತಿದೆ. “ಅವರನ್ನೆಲ್ಲ ಹೇಗೆ ಬೆಳೆಸುವುದೋ ಗೊತ್ತಾಗುತ್ತಿಲ್ಲ” ಎನ್ನುತ್ತಾರೆ ಈ 70 ವರ್ಷದ ಗೊಂಡ್‌ ಆದಿವಾಸಿ ಮಹಿಳೆ. ಇವರು ಒಡಿಶಾದ ಬಾಲಂಗೀರ್‌ ಜಿಲ್ಲೆಯ ಹಿಯಾಲ್‌ ಎನ್ನುವ ಊರಿನವರು.

ಅವರ ಮಗ ನೃಪ ಮಾಝಿ (50) ಮೂತ್ರಪಿಂಡ ವೈಫಲ್ಯದಿಂದ ಎರಡು ವರ್ಷಗಳ ಕೆಳಗೆ ತೀರಿಕೊಂಡರು. ವಲಸೆ ಕಾರ್ಮಿಕರಾಗಿರುವ ಅವರು ಮತ್ತು ಅವರ ಪತ್ನಿ 47 ವರ್ಷದ ನಮನಿ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು.

"ನವೆಂಬರ್ 2019ರಲ್ಲಿ, ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲೆಂದು ನಾವು ಚೆನ್ನೈಗೆ ಹೋದೆವು" ಎಂದು ನಮನಿ ಹೇಳುತ್ತಾರೆ. ಪತಿ ನೃಪ (50), ಅವರ ಹಿರಿಯ ಮಗ ಜುಧಿಷ್ಠಿರ್ (24), ಪತ್ನಿ ಪರ್ಮಿಲಾ (21), ಪೂರ್ನಮಿ (19), ಸಜ್ನೆ (16), ಕುಮಾರಿ (15) ಮತ್ತು ಅವರ ಪತಿ ದಿನೇಶ್ (21) ಸೇರಿದಂತೆ ಕುಟುಂಬದಿಂದ 10 ಜನರು ಹೋಗಿದ್ದಾರೆ. "ನಮ್ಮಲ್ಲಿ ಪ್ರತಿಯೊಬ್ಬರಿಗೂ ಸ್ಥಳೀಯ ಸರ್ದಾರ್ [ಗುತ್ತಿಗೆದಾರರು] 25,000 ರೂಪಾಯಿಗಳನ್ನು ಮುಂಗಡವಾಗಿ ನೀಡಿದ್ದರು." ಎಂದು ಅವರು ಹೇಳುತ್ತಾರೆ. ಕುಟುಂಬದೊಂದಿಗೆ 10 ವರ್ಷದ ಸಾವಿತ್ರಿ ಮತ್ತು 6 ವರ್ಷದ ಜಾನಕಿ ಇದ್ದರು. ಇವರಿಗೆ ಯಾವುದೇ ಮುಂಗಡ ನೀಡಿರಲಿಲ್ಲ.

ಜೂನ್ 2020ರ ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಅವರೆಲ್ಲರೂ ತಮ್ಮ ಗ್ರಾಮಕ್ಕೆ ಮರಳಿದರು. ಒಡಿಶಾ ಸರ್ಕಾರವು ಹಿಂದಿರುಗಿದ ವಲಸಿಗರಿಗೆ ಶಾಲೆಗಳು ಮತ್ತು ಸಮುದಾಯ ಕೇಂದ್ರಗಳಲ್ಲಿ ತಾತ್ಕಾಲಿಕ ವೈದ್ಯಕೀಯ ಮತ್ತು ಕ್ವಾರಂಟೈನ್ ಪ್ರದೇಶಗಳಿಗೆ ವ್ಯವಸ್ಥೆ ಮಾಡಿತ್ತು. "ನಾವು ಹಳ್ಳಿಯ ಶಾಲೆಯಲ್ಲಿ 14 ದಿನಗಳ ಕಾಲ ಇದ್ದೆವು. ಅಲ್ಲಿ ಉಳಿಯಲು ನನ್ನ ಪತಿ ಮತ್ತು ನನಗೆ [ಒಡಿಶಾ ಸರ್ಕಾರದಿಂದ] ತಲಾ 2,000 ರೂಪಾಯಿಗಳು ದೊರೆತವು" ಎಂದು ನಮನಿ ನೆನಪಿಸಿಕೊಳ್ಳುತ್ತಾರೆ.

Namani Majhi sitting with her children in front of their house in Hial village in Balangir district.
PHOTO • Anil Sharma
Her mother-in-law, Bute Majhi
PHOTO • Anil Sharma

ಬಲಂಗೀರ್ ಜಿಲ್ಲೆಯ ಹಿಯಾಲ್ ಗ್ರಾಮದಲ್ಲಿ ನಮನಿ ಮಾಝಿ ತನ್ನ ಮಕ್ಕಳೊಂದಿಗೆ ತಮ್ಮ ಮನೆಯ ಮುಂದೆ ಕುಳಿತಿದ್ದಾರೆ. ಅವ ಅತ್ತೆ, ಬೂಟೆ ಮಾಝಿ

ಆದರೆ ದಿನಗಳು ಕಳೆಯುತ್ತಿದ್ದಂತೆ ಬದುಕಿನ ಪರಿಸ್ಥಿತಿ ಬಿಗಡಾಯಿಸಲು ಪ್ರಾರಂಭವಾಯಿತು. "ಅವರು [ಅವರ ಪತಿ, ನೃಪ] ಚೆನ್ನೈಯಲ್ಲಿಯೇ ಆಗಾಗ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಸೇಠ್ [ಸ್ಥಳೀಯ ಗುತ್ತಿಗೆದಾರ] ಅವರಿಗೆ ಗ್ಲೂಕೋಸ್ ನೀರು ಮತ್ತು ಕೆಲವು ಔಷಧಿಗಳನ್ನು ನೀಡುತ್ತಿದ್ದರು. ನಾವು ನಮ್ಮ ಹಳ್ಳಿಗೆ ಮರಳಿದ ನಂತರವೂ ಅವರ ಆರೋಗ್ಯ ಸಮಸ್ಯೆಗಳು ಮುಂದುವರೆದವು" ಎಂದು ನಮನಿ ನೆನಪಿಸಿಕೊಳ್ಳುತ್ತಾರೆ. ಅವರು ಗಂಡನನ್ನು ಚಿಕಿತ್ಸೆಗಾಗಿ ಕಾಂತಾಬಂಜಿಯ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. "ನನ್ನ ಮಗನಿಗೆ ರಕ್ತ ಜಡಾ (ಮಲದಲ್ಲಿ ರಕ್ತ ಹರಿಯಲು) ಪ್ರಾರಂಭವಾಯಿತು" ಎಂದು ನೃಪ ಅವರ ತಾಯಿ ಹೇಳಿದರು.

ಕುಟುಂಬವು ಅವರನ್ನು ಸಿಂಧೆಕೇಲಾ ಮತ್ತು ರಾಂಪುರದ ಹಲವಾರು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ಯಿತು. ಅಂತಿಮವಾಗಿ, ಕಾಂತಾಬಂಜಿ ಆಸ್ಪತ್ರೆಗೆ ಹಿಂದಿರುಗಿದಾಗ ಅಲ್ಲಿನ ವೈದ್ಯರು ಅವರಿಗೆ ಕಮ್ಜೋರಿ (ದೌರ್ಬಲ್ಯ) ಇದೆ ಎಂದು ಹೇಳಿದರು. "ನಮ್ಮ ಬಳಿ ಹಣವಿರಲಿಲ್ಲ, ಹಿಂತಿರುಗಿ ಬಂದು ಹಣದ ವ್ಯವಸ್ಥೆ ಮಾಡಿದೆವು. ಮತ್ತೆ ನಾವು ಆಸ್ಪತ್ರೆಗೆ ಹೋದಾಗ, ವೈದ್ಯರು ಕೆಲವು ಪರೀಕ್ಷೆಗಳನ್ನು ಮಾಡಿ, ಅವರ ಮೂತ್ರಪಿಂಡಗಳು ವಿಫಲವಾಗುತ್ತಿವೆ ಎಂದು ಹೇಳಿದರು.

ನಮನಿ ಇತರ ಆಯ್ಕೆಗಳನ್ನು ಪ್ರಯತ್ನಿಸಲು ನಿರ್ಧರಿಸಿದರು ಮತ್ತು ಪರ್ಯಾಯ ಔಷಧಿಯನ್ನು ಹುಡುಕತೊಡಗಿದರು. "ಆಯುರ್ವೇದ ಚಿಕಿತ್ಸೆಗಾಗಿ 25 ಕಿಲೋಮೀಟರ್ ದೂರದಲ್ಲಿರುವ ಸಿಂಧೆಕೇಲಾಕ್ಕೆ (25 ಕಿಲೋಮೀಟರ್ ದೂರ) ಕರೆದೊಯ್ಯುವಂತೆ ನನ್ನ ಪೋಷಕರು ಸೂಚಿಸಿದರು. ಅವರು ಒಂದು ತಿಂಗಳಿಗೂ ಹೆಚ್ಚು ಕಾಲ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು, ಆದರೆ ಗುಣಮುಖರಾಗಲಿಲ್ಲ" ಎಂದು ಅವರು ಹೇಳಿದರು. ಪತಿಯ ಆರೋಗ್ಯ ಸ್ಥಿತಿ ಇನ್ನಷ್ಟು ಹದಗೆಟ್ಟಾಗ, 40 ಕಿ.ಮೀ ದೂರದಲ್ಲಿರುವ ಪಟ್ನಾಘರ್ ಬಳಿಯ ರಾಂಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದರು.

ನೃಪ ಮಾರ್ಚ್ 2021ರಲ್ಲಿ ಎಂಟು ಮಕ್ಕಳನ್ನು ಅಗಲಿ ನಿಧನರಾದರು.

Namani holding her eight-month-old granddaughter, Dhartiri.
PHOTO • Anil Sharma
While being photographed, Janaki tries to hide behind her mother Namani
PHOTO • Anil Sharma

ತನ್ನ ಎಂಟು ತಿಂಗಳ ಮೊಮ್ಮಗಳು ಧರ್ತಿರಿ ಯೊಡನೆ ನಮನಿ . ಫೋಟೋ ತೆಗೆಯುವಾಗ, ಜಾನಕಿ ತನ್ನ ತಾಯಿ ಮನಿ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಾಳೆ

ನಮನಿ ವಲಸೆ ಹೋಗುವ ಕುರಿತು ಇನ್ನೂ ಸರಿಯಾಗಿ ಯೋಚಿಸದ ಕಾರಣ ಪತಿಯ ವೈದ್ಯಕೀಯ ಬಿಲ್ಲುಗಳನ್ನು ಪಾವತಿಸಲು ಪರಿಹಾರ ಸಿಕ್ಕರೆ ಆ ಮೂಲಕ ಒಂದಷ್ಟು ದಿನ ದೂಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. “ಈಗ ನಾವು ವಲಸೆ ಹೋಗಲೇಬೇಕಿದೆ. ನನ್ನ ಗಂಡನ ಚಿಕಿತ್ಸೆಗಾಗಿ ಮಾಡಿದ ಸಾಲವನ್ನು ತೀರಿಸಲು ಬೇರೆ ದಾರಿಯಿಲ್ಲ. ಸರಕಾರ ಒಂದಷ್ಟು ಪರಿಹಾರ ನೀಡಿದರೆ ನಾವು ವಲಸೆ ಹೋಗುವುದಿಲ್ಲ.”

ಮೃತ ನೃಪ 2018ರಲ್ಲಿ ಕಲ್ಯಾಣ ಮಂಡಳಿಯಲ್ಲಿ ತಮ್ಮನ್ನು ಫಲಾನುಭವಿಯಾಗಿ ಗುರುತಿಸಿಕೊಂಡಿದ್ದರು. ಇದರಲ್ಲಿ ನೋದಾಯಿಸಕೊಂಡಿರುವ ಸಣ್ಣ ಸಂಖ್ಯೆಯ ಕಾರ್ಮಿಕರಲ್ಲಿ ಇವರೂ ಒಬ್ಬರಾಗಿದ್ದರು. ಆದರೆ ಇದರಡಿ ಅವರಿಗೆ ಯಾವುದೇ ಹಣವನ್ನು ಪಡೆಯಲು ಸಾಧ್ಯವಾಗಿಲ್ಲ. ಒಡಿಶಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಅಡಿಯಲ್ಲಿ ದಿವಂಗತ ಪತಿಗೆ ನೀಡಬೇಕಾದ ಎರಡು ಲಕ್ಷ ರೂ.ಗಳನ್ನು ನಮನಿ ಎದುರು ನೋಡುತ್ತಿದ್ದರು. “ನಾವು ಮೂರು ವರ್ಷಗಳಿಂದ ನವೀಕರಣ ಶುಲ್ಕವನ್ನು ಪಾವತಿಸಿಲ್ಲ, ಹೀಗಾಗಿ ಹಣ ಪಡೆಯಲು ಸಾಧ್ಯವಿಲ್ಲ ಎಂದು ಅವರು [ಕಾರ್ಮಿಕ ಇಲಾಖೆ ಅಧಿಕಾರಿಗಳು] ಹೇಳುತ್ತಾರೆ,” ಎಂದು ಅವರು ಹೇಳುತ್ತಾರೆ.

ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ತನ್ನ ರಾಜ್ಯ ಹಣಕಾಸು ವರದಿಯಲ್ಲಿ ರಾಜ್ಯದ ಬಳಿ ಇರುವ ಹಣವು ಸಾಂವಿಧಾನಿಕ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಒತ್ತಿ ಹೇಳಿದೆ. "2020-21ರಲ್ಲಿ ಸಂಗ್ರಹಿಸಿದ 406.49 ಕೋಟಿ ರೂ.ಗಳ ಕಾರ್ಮಿಕ ಸೆಸ್ ಮೊತ್ತವನ್ನು ಸಾಂವಿಧಾನಿಕ ನಿಬಂಧನೆಗಳನ್ನು ಉಲ್ಲಂಘಿಸಿ ಸರ್ಕಾರಿ ಖಜಾನೆ ಶಾಖೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಥಿರ ಠೇವಣಿ ಮತ್ತು ಫ್ಲೆಕ್ಸಿ ಉಳಿತಾಯ ಖಾತೆಯ ರೂಪದಲ್ಲಿ 'ಸರ್ಕಾರಿ ಖಾತೆ'ಯ ಹೊರಗೆ ಇಡಲಾಗಿದೆ" ಎಂದು ವರದಿ ಹೇಳಿದೆ.

“ನೃಪನಿಗೆ ಆರೋಗ್ಯ ಹದಗೆಟ್ಟಾಗ ಅವನು ಹಣದ ಸಹಾಯ ಕೇಳಲು ತನ್ನ ಸಹೋದರಿ ಉಮೆಯ ಬಳಿ ಹೋದನು [ಅವನ ಏಕೈಕ ಸಹೋದರಿ].” ಎಂದು ಬೂಟೆ ಹೇಳುತ್ತಾರೆ. ವಾಸಿಸುತ್ತಿದ್ದಾರೆ [ಮಾಲ್ಪಾರಾ, ಇದನ್ನು ಮಾಲ್ಪಾಡಾ ಎಂದೂ ಕರೆಯಲಾಗುತ್ತದೆ]. “ಅವಳು ತನ್ನಲ್ಲಿದ್ದ ಆಭರಣವನ್ನೇ ಅವನಿಗೆ ಕೊಟ್ಟಳು. ಅವರಿಬ್ಬರ ಪ್ರೀತಿ ಹಾಗಿತ್ತು.” ಎನ್ನುತ್ತಾರೆ ಬೂಟೆ. ನೃಪ ಅದನ್ನು ಅಡವಿಟ್ಟು ಚಿಕಿತ್ಸೆಗಾಗಿ ಹಣವನ್ನು ತಂದರು.

Left: The two kachha houses in which the family of late Nrupa Majhi live.
PHOTO • Anil Sharma
Right: These stones were purchased by Bute and her husband Gopi Majhi to construct their house under Indira Awaas Yojna, but Gopi's demise has paused that work
PHOTO • Anil Sharma

ಎಡ: ದಿವಂಗತ ನೃಪ ಮಾಝಿ ಅವರ ಕುಟುಂಬ ವಾಸಿಸುವ ಎರಡು ಕ ಚ್ಛಾ ಮನೆಗಳು. ಬಲ: ಈ ಕಲ್ಲುಗಳನ್ನು ಬೂಟೆ ಮತ್ತು ಅವರ ಪತಿ ಗೋಪಿ ಮಾಝಿ ವರು ಇಂದಿರಾ ಆವಾಸ್ ಯೋಜನೆಯಡಿ ತಮ್ಮ ಮನೆಯನ್ನು ನಿರ್ಮಿಸಲು ಖರೀದಿಸಿದರು, ಆದರೆ ಗೋಪಿ ವರ ನಿಧನವು ಆ ಕೆಲಸವನ್ನು ಸ್ಥಗಿತಗೊಳಿಸಿದೆ

ಬೂಟೆ ಮತ್ತು ಅವರ ಮೃತ ಪತಿ ಗೋಪಿ ಮಾಝಿ ಅವರ ಕುಟುಂಬಕ್ಕೆ 2013ರಲ್ಲಿ ಸರ್ಕಾರಿ ಮನೆಯನ್ನು ಮಂಜೂರು ಮಾಡಲಾಗಿತ್ತು. ಗೋಪಿ ಮಾಝಿ 2014ರಲ್ಲಿ ನಿಧನರಾದರು. "ನಾವು ಮೂರು ಕಂತುಗಳಲ್ಲಿ 40,000 ರೂಪಾಯಿಗಳನ್ನು ಸ್ವೀಕರಿಸಿದ್ದೇವೆ - 10,000, 15,000 ಮತ್ತು ಮಾಝಿ ಜೀವಂತವಾಗಿದ್ದಾಗ ಮತ್ತೆ 15,000 ರೂಪಾಯಿಗಳು" ಎಂದು ಬೂಟೆ ಹೇಳಿದರು. ಕುಟುಂಬವು ಮನೆ ನಿರ್ಮಿಸಲು ಕಲ್ಲುಗಳು ಮತ್ತು ಮರಳನ್ನು ಖರೀದಿಸಿತು ಆದರೆ ಹಿರಿಯ ಮಾಝಿ ನಿಧನರಾದಾಗ, ಮನೆ ನಿರ್ಮಾಣ ನಿಂತುಹೋಯಿತು.

“ಹೇಗೋ ಈ ಕಚ್ಛಾ ಮನೆಯಲ್ಲಿಯೇ ಬದುಕುತ್ತಿದ್ದೇವೆ” ಎಂದು ತಾವು ಖರೀದಿಸಿದ ಕಲ್ಲಿನತ್ತ ತೋರಿಸುತ್ತಾ ಬೂಟೆ ಹೇಳುತ್ತಾರೆ.

ತನ್ನ ಮಗ ಮತ್ತು ಸೊಸೆಯಂತೆ ಬೂಟೆ ಎಂದೂ ಕೆಲಸಕ್ಕಾಗಿ ವಲಸೆ ಹೋದವರಲ್ಲ. “ನಾವು ಜೀವನೋಪಾಯಕ್ಕಾಗಿ ನಮ್ಮ ಕುಟುಂಬದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೆವು. ನೃಪ ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ಹೋಗತೊಡಗಿದ” ಎಂದು ಅವರು ಹೇಳಿದರು. ಕುಟುಂಬವು ತಮ್ಮ ಭೂಮಿಯನ್ನು ಅಡವಿಟ್ಟು ಗ್ರಾಮದ ಗೌಂಟಿಯಾ (ಲೇವಾದೇವಿಗಾರ) ನಿಂದ 100,000 ರೂ.ಗಳ ಸಾಲವನ್ನು ತೆಗೆದುಕೊಂಡಿದೆ.

"ಆ ಭೂಮಿಯನ್ನು ಬಿಡಿಸಿಕೊಳ್ಳಲು ಜುಧಿಷ್ಠಿರ್ [ನೃಪ ಅವರ ಮಗ] ವಲಸೆ ಹೋಗಬೇಕಾಗುತ್ತದೆ" ಎಂದು ಬೂಟೆ ಹೇಳಿದರು.

*****

ಮದುವೆಗೆ ಮೊದಲು ನಮನಿ ಕೆಲಸ ಹುಡುಕಿಕೊಂಡು ಹೊರಗೆ ಹೋದವರಲ್ಲ. ಅವರು ಮದುವೆಯಾದ ನಂತರ ಮೊದಲ ಬಾರಿ ಆಂಧ್ರಪ್ರದೇಶದ ಮೆಹಬೂಬ್ ನಗರಕ್ಕೆ ಪತಿಯೊಡನೆ ವಲಸೆ ಹೋದರು. ಅವರ ಹಿರಿಯ ಮಗ ಜುಧಿಷ್ಠೀರ್ ಆಗ ಮೂರನೇ ತರಗತಿಯಲ್ಲಿದ್ದನು. "ಕೆಲಸಕ್ಕೆ ಸಿಕ್ಕ ಮುಂಗಡ ಬಹಳ ಕಡಿಮೆಯಾಗಿತ್ತು - ನಮಗೆ 8,000 ರೂಪಾಯಿಗಳು ಸಿಕ್ಕವು. ಆ ವರ್ಷ ನನಗೆ ನೆನಪಿಲ್ಲ, ಆದರೆ ಸಜ್ನೆ [ಮಗಳು] ಕೆಲವೇ ತಿಂಗಳ ಮಗುವಾಗಿದ್ದಳು, ಹೀಗಾಗಿ ನಾವು ಅವಳನ್ನು ನಮ್ಮೊಂದಿಗೆ ಕರೆದೊಯ್ದಿದ್ದೆವು." ಅಂದಿನಿಂದ - 17 ವರ್ಷಗಳಿಂದ - ಅವರು ಕೆಲಸ ಹುಡುಕಿಕೊಂಡು ಪ್ರತಿವರ್ಷ ವಿವಿಧ ಸ್ಥಳಗಳಿಗೆ ಹೋಗುತ್ತಿರುವುದಾಗಿ ನಮನಿ ಹೇಳುತ್ತಾರೆ.

Left: Bute standing in front of her mud house along with her grandchildren and great grandchildren .
PHOTO • Anil Sharma
Right: Namani's eldest son Judhisthir holding his daughter Dhartiri
PHOTO • Anil Sharma

ಎಡಕ್ಕೆ: ಬೂಟೆ ಮಾಝಿ ತನ್ನ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳೊಂದಿಗೆ ತನ್ನ ಮಣ್ಣಿನ ಮನೆಯ ಮುಂದೆ ನಿಂತಿದ್ದಾ ರೆ . ಬಲ: ತನ್ನ ಮಗಳು ಧರ್ತಿರಿ ಯೊಡನೆ ನಮನಿ ಯವರ ಹಿರಿಯ ಮಗ ಜುಧಿಷ್ಟಿರ್

ಆ ನಂತರ, ಕುಟುಂಬವು ಪ್ರತಿ ವರ್ಷ ವಲಸೆ ಹೋಗಲು ಆರಂಭಿಸಿತು. "ಎರಡು ವರ್ಷಗಳ ಕಾಲ ನಾವು ಮತ್ತೆ ಆಂಧ್ರಪ್ರದೇಶಕ್ಕೆ ಹೋದೆವು. ಆಗ ನಮಗೆ ಸಿಕ್ಕ ಮುಂಗಡ ಸುಮಾರು 9,500 ರೂಪಾಯಿಗಳಾಗಿತ್ತು" ಎಂದು ಅವರು ಹೇಳುತ್ತಾರೆ. ಮುಂದಿನ ನಾಲ್ಕು ವರ್ಷಗಳ ಅವರು ವಲಸೆ ಹೋಗುತ್ತಲೇ ಇದ್ದರು ಮತ್ತು ಇಡೀ ಗುಂಪಿಗೆ ನೀಡುವ ಮುಂಗಡವು ಕ್ರಮೇಣ 15,000 ರೂ.ಗೆ ಏರಿತು.

2019ರಲ್ಲಿ ಅವರು ಚೆನ್ನೈಗೆ ಹೋದಾಗ ಅಲ್ಲಿ 25,000 ರೂ.ಗಳ ಮುಂಗಡ ದೊರಕಿತು. ಚೆನ್ನೈಯಲ್ಲಿ ಪ್ರತಿ 1,000 ಇಟ್ಟಿಗೆಗಳಿಗೆ, ಕಾರ್ಮಿಕರ ಗುಂಪು ಸುಮಾರು 350 ರೂ.ಗಳನ್ನು ಸಂಪಾದಿಸುತ್ತದೆ. ಮತ್ತು ಒಂದು ವಾರದಲ್ಲಿ, ನಾಲ್ಕು ಕಾರ್ಮಿಕರ ಗುಂಪು ತಲಾ 1,000-1,500 ರೂ.ಗಳನ್ನು ನಿರೀಕ್ಷಿಸಬಹುದು.

ಅಲ್ಲಿ ಅವರಿಗೆ ವಾರಕ್ಕೊಮ್ಮೆ ಬಟವಾಡೆ ನೀಡಲಾಗುತ್ತಿತ್ತು. ಮತ್ತು ಈ ಹಣವನ್ನು ಆಹಾರ ಪಡಿತರ, ಸಾಬೂನು, ಶಾಂಪೂ ಮತ್ತು ಹೆಚ್ಚಿನದನ್ನು ಖರೀದಿಸಲು ಬಳಸಲಾಗುತ್ತಿತ್ತು. "ಬಟವಾಡೆ ಮಾಡುವಾಗ, ಮೇಲ್ವಿಚಾರಕರು ಮುಂಗಡ ಹಣದ ಮೊತ್ತಕ್ಕೆ ಸ್ವಲ್ಪ ಹಣವನ್ನು ಕಡಿತಗೊಳಿಸುತ್ತಿದ್ದರು ಮತ್ತು ಉಳಿದ ಕೂಲಿಯನ್ನು ನಮಗೆ ನೀಡುತ್ತಿದ್ದರು" ಎಂದು ನಮನಿ ವಿವರಿಸಿದರು. ಸಂಪೂರ್ಣ ಮುಂಗಡ ಮೊತ್ತ ತೀರುವವರೆಗೂ ಇದು ಮುಂದುವರಿಯುತ್ತದೆ.

ಹೆಚ್ಚಿನ ಕಾರ್ಮಿಕರು ಅಂತಿಮವಾಗಿ 100 ರೂ.ಗಳಿಗಿಂತ ಕಡಿಮೆ ಕೂಲಿಯನ್ನು ಪಡೆಯುತ್ತಾರೆ, ಇದು ನಿರ್ಮಾಣ ಕ್ಷೇತ್ರದ ಕೌಶಲ್ಯರಹಿತ ಕಾರ್ಮಿಕರ ಕನಿಷ್ಠ ವೇತನದ ಅರ್ಧಕ್ಕಿಂತ ಕಡಿಮೆಯಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಮುಖ್ಯ ಕಾರ್ಮಿಕ ಆಯುಕ್ತರ ಕಚೇರಿಯು ಚೆನ್ನೈಯಂತಹ ನಗರ ಪ್ರದೇಶಗಳಲ್ಲಿ ಚೇಂಬರ್ ಇಟ್ಟಿಗೆಗಳನ್ನು ತಯಾರಿಸುವ ಕಾರ್ಮಿಕರಿಗೆ ದಿನಕ್ಕೆ 610 ರೂ.ಗಳನ್ನು (1,000 ಇಟ್ಟಿಗೆಗಳಿಗೆ) ಪಾವತಿಸಬೇಕು ಎಂದು ಸೂಚಿಸುತ್ತದೆ.

ನೃಪ ಮತ್ತು ಅವರ ಕುಟುಂಬವು ಗಳಿಸಿದ ವೇತನವು ಈ ಕಾರ್ಮಿಕ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

Namani holding a labour card issued by the Balangir district labour office. It has been more than a year since her husband died and Namani is struggling to get the death benefits that his family are entitled to under the Odisha Building and other Construction Workers Act, 1996
PHOTO • Anil Sharma
It has been more than a year since her husband died and Namani is struggling to get the death benefits that his family are entitled to under the Odisha Building and other Construction Workers Act, 1996
PHOTO • Anil Sharma

ಬಾ ಲಂಗೀರ್ ಜಿಲ್ಲಾ ಕಾರ್ಮಿಕ ಕಚೇರಿ ನೀಡಿದ ಲೇಬರ್ ಕಾರ್ಡ್ ಪ್ರದರ್ಶಿಸುತ್ತಿರುವ ನಮನಿ . ಪತಿ ಸತ್ತು ಒಂದು ವರ್ಷಕ್ಕೂ ಹೆಚ್ಚು ಸಮಯವಾಗಿದೆ ಮತ್ತು ಒಡಿಶಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, 1996ರ ಅಡಿಯಲ್ಲಿ ತನ್ನ ಕುಟುಂಬಕ್ಕೆ ಅರ್ಹವಾಗಿ ಸಿಗಬೇಕಾದ ಮರಣ ಪ್ರಯೋಜನಗಳನ್ನು ಪಡೆಯಲು ನಮನಿ ಹೆಣಗಾಡುತ್ತಿದ್ದಾರೆ

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಯಗಳಲ್ಲಿ ತೊಡಗಿರುವ ಹೆಚ್ಚಿನ ಒಡಿಯಾ ಅಂತರರಾಜ್ಯ ವಲಸೆ ಕಾರ್ಮಿಕರು ಒಡಿಶಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, 1996ರ ಅಡಿಯಲ್ಲಿ ಫಲಾನುಭವಿಗಳಾಗಿ ನೋಂದಾಯಿಸಲ್ಪಟ್ಟಿಲ್ಲ, ಇದು ಅವರಿಗೆ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸುತ್ತದೆ.

ಅದೇನೇ ಇದ್ದರೂ, ನೃಪ ಈ ಯೋಜನೆಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಆದರೆ ಸಣ್ಣ ಲೋಪ-ದೋಷದ ಕಾರಣಕ್ಕಾಗಿ ಅವರ ಕುಟುಂಬವನ್ನು ದಂಡಿಸಲಾಗುತ್ತಿದೆ. ಕಾರ್ಮಿಕರು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು, ನೋಂದಾಯಿತ ಫಲಾನುಭವಿ ಸತತ ಮೂರು ವರ್ಷಗಳವರೆಗೆ ಅದರ ನಿಧಿಗೆ 50 ರೂ.ಗಳನ್ನು ನೀಡಬೇಕಾಗುತ್ತದೆ. ಬಾಲಂಗೀರ್ ಜಿಲ್ಲೆಯ ಹಿಯಾಲ್ ಗ್ರಾಮದಲ್ಲಿರುವ ಅವರ ಮನೆಯಿಂದ 80 ಕಿಲೋಮೀಟರ್ ದೂರದಲ್ಲಿರುವ ಬಾಲಂಗೀರ್‌ನಲ್ಲಿರುವ ಕಾರ್ಮಿಕ ಇಲಾಖೆಯ ಜಿಲ್ಲಾ ಕಚೇರಿಯಲ್ಲಿ ಈ ಮೊತ್ತವನ್ನು ಪಾವತಿ ಮಾಡಬೇಕು.

2022ರ ಮೇ 1ರ ನಂತರ ಈ ಪ್ರಕ್ರಿಯೆಯನ್ನು ಆನಲೈನ್‌ ಮಾಡಲಾಯಿತು. ನೃಪ ಚೆನ್ನೈಗೆ ಹೋಗುವ ಮೊದಲು ಲೇಬರ್‌ ಕಾರ್ಡ್‌ ಪಡೆದಿದ್ದರು. ಲಾಕ್‌ಡೌನ್‌ ಮತ್ತು ಅನಾರೋಗ್ಯದ ಕಾರಣದಿಂದಾಗಿ ಈ ವಾರ್ಷಿಕ ಮೊತ್ತವನ್ನು ತುಂಬಲು ಜಿಲ್ಲಾ ಕಚೇರಿಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರ ಕುಟುಂಬ ತಾನು ಅರ್ಹವಾಗಿರುವ ಪರಿಹಾರವನ್ನು ಪಡೆಯಲು ಕಷ್ಟಪಡುತ್ತಿದೆ.

ಈ ವರದಿಗಾರರು ಬಲಂಗೀರ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಕಲೆಕ್ಟರ್‌ ಅವರಿಗೆ ಪತ್ರ ಬರೆದು ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಯ ಮೂಲಕ ಅವರನ್ನು ಸಂಪರ್ಕಿಸಿ, ನಮನಿ ಮತ್ತು ಅವರ ಕುಟುಂಬಕ್ಕೆ ಒಡಿಶಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆಯಡಿ ಮರಣ ಭತ್ಯೆಗಳನ್ನು ನೀಡುವಂತೆ ವಿನಂತಿಸಿದ್ದಾರೆ. ಈ ವರದಿ ಪ್ರಕಟವಾಗುವವರೆಗೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ.

ಅನುವಾದ: ಶಂಕರ. ಎನ್. ಕೆಂಚನೂರು

Anil Sharma

انل شرما، اوڈیشہ کے کانٹا بانجی شہر میں مقیم ایک وکیل، اور وزیر اعظم کی دیہی ترقیاتی فیلو اسکیم، وزارت دیہی ترقی، حکومت ہند کے سابق فیلو ہیں۔

کے ذریعہ دیگر اسٹوریز Anil Sharma
Editor : S. Senthalir

ایس سینتلیر، پیپلز آرکائیو آف رورل انڈیا میں بطور رپورٹر اور اسسٹنٹ ایڈیٹر کام کر رہی ہیں۔ وہ سال ۲۰۲۰ کی پاری فیلو بھی رہ چکی ہیں۔

کے ذریعہ دیگر اسٹوریز S. Senthalir
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru