ಅಂದು ಮಧ್ಯಾಹ್ನವಾಗುವುದರಲ್ಲಿತ್ತು. ನೃತ್ಯಗಾರರಾದ ಗೋಲಾಪಿ ಗೋಯಲಿ ಸಿದ್ಧಗೊಂಡು ತಮ್ಮ ಮನೆಯಲ್ಲಿ ಕಾಯುತ್ತಿದ್ದರು. ಅವರು ತಾನು ತೊಟ್ಟಿದ್ದ ಹಳದಿ ಪಟ್ಟಿಯ ಡೋಖೋನಾವನ್ನು ಸರಿಹೊಂದಿಸುತ್ತಿರುವಾಗ ಶಾಲೆಗೆ ಹೋಗುವ ಎಂಟು ಹುಡುಗಿಯರು ಅಲ್ಲಿಗೆ ಬಂದರು. ಅಸ್ಸಾಂನ ಬೋಡೋ ಸಮುದಾಯಕ್ಕೆ ಸೇರಿದ ಈ ಮಕ್ಕಳು ಸಾಂಪ್ರದಾಯಿಕವಾದ ಡೋಖೋನಾ ಮತ್ತು ಕೆಂಪು ಅರಣೋಯಿ (ಶಾಲು) ಧರಿಸಿದ್ದಾರೆ.

"ನಾನು ಈ ಯುವತಿಯರಿಗೆ ನಮ್ಮ ಬೋಡೋ ನೃತ್ಯಗಳನ್ನು ಕಲಿಸುತ್ತೇನೆ" ಎಂದು ಸ್ವತಃ ಬೋಡೋ ಸಮುದಾಯಕ್ಕೆ ಸೇರಿದ ಬಕ್ಸಾ ಜಿಲ್ಲೆಯ ಗೋಲ್ಗಾಂವ್ ಗ್ರಾಮದ ನಿವಾಸಿ ಗೋಲಾಪಿ ಹೇಳುತ್ತಾರೆ.

ಕೊಕ್ರಜಾರ್, ಉಡಲ್ಗುರಿ, ಚಿರಾಂಗ್ ಹಾಗೂ ಬಕ್ಸಾ ಜಿಲ್ಲೆ ಸೇರಿದರೆ ಬೋಡೋಲ್ಯಾಂಡ್ ರೂಪುಗೊಳ್ಳುತ್ತದೆ - ಅಧಿಕೃತವಾಗಿ ಬೋಡೋಲ್ಯಾಂಡ್ ಪ್ರಾದೇಶಿಕ ಪ್ರಾಂತ್ಯ (ಬಿಟಿಆರ್). ಈ ಸ್ವಾಯತ್ತ ಪ್ರದೇಶದಲ್ಲಿ ಮುಖ್ಯವಾಗಿ ಬೋಡೋ ಜನರು ವಾಸಿಸುತ್ತಿದ್ದಾರೆ, ಅವರನ್ನು ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡದಡಿ ಪಟ್ಟಿ ಮಾಡಲಾಗಿದೆ. ಬಿಟಿಆರ್ ಭೂತಾನ್ ಮತ್ತು ಅರುಣಾಚಲ ಪ್ರದೇಶದ ತಪ್ಪಲಿನ ಕೆಳಗೆ ಬ್ರಹ್ಮಪುತ್ರ ನದಿಯ ದಡದಲ್ಲಿದೆ.

"ಅವರು ಸ್ಥಳೀಯ ಉತ್ಸವಗಳು ಮತ್ತು ಕಾರ್ಯಕ್ರಮಗಳಲ್ಲಿಯೂ ಪ್ರದರ್ಶನ ನೀಡುತ್ತಾರೆ" ಎಂದು ಬದುಕಿನ ಮೂರನೇ ದಶಕದ ಆರಂಭದಲ್ಲಿರುವ ಗೋಲಾಪಿ ಹೇಳುತ್ತಾರೆ. ಉಪೇಂದ್ರ ನಾಥ್ ಬ್ರಹ್ಮ ಟ್ರಸ್ಟ್ (ಯುಎನ್‌ಬಿಟಿ) ನೀಡುವ 19ನೇ ಯುಎನ್ ಬ್ರಹ್ಮ ಸೋಲ್ಜರ್ ಆಫ್ ಹ್ಯುಮಾನಿಟಿ ಪ್ರಶಸ್ತಿಯನ್ನು 2022ರ ನವೆಂಬರ್ ತಿಂಗಳಿನಲ್ಲಿ ಪರಿ ಸ್ಥಾಪಕ ಸಂಪಾದಕ, ಪತ್ರಕರ್ತ ಪಿ ಸಾಯಿನಾಥ್ ಅವರಿಗೆ ನೀಡಲಾಗಿತ್ತು. ಅಂದು ಅವರ ಗೌರವಾರ್ಥವಾಗಿ ಗೋಲಾಪಿ ತಮ್ಮ ಮನೆಯಲ್ಲೇ ನೃತ್ಯ ಪ್ರದರ್ಶನವನ್ನು ಆಯೋಜಿಸಿದ್ದರು.

ಬೋಡೋ ಸಮುದಾಯದ ನೃತ್ಯಗಾರರು ಮತ್ತು ಸ್ಥಳೀಯ ಸಂಗೀತಗಾರರ ಪ್ರತಿಭಾ ಪ್ರದರ್ಶನದ ವಿಡಿಯೋ ನೋಡಿ

ನೃತ್ಯಗಾರರು ಈ ಪ್ರದರ್ಶನಕ್ಕಾಗಿ ತಯಾರಿ ನಡೆಸುತ್ತಿರುವಾಗ, ಗೋಬರ್ಧಾನಾ ಬ್ಲಾಕ್ ಪ್ರದೇಶದ ಸ್ಥಳೀಯ ಸಂಗೀತಗಾರರು ಗೋಲಾಪಿಯವರ ಮನೆಯಲ್ಲಿ ನೆರೆಯಲು ಪ್ರಾರಂಭಿಸಿದರು. ಪ್ರತಿಯೊಬ್ಬರೂ ಖೋಟ್ ಗೋಸ್ಲಾ ಜಾಕೆಟ್ ಜೊತೆಗೆ ಹಸಿರು ಮತ್ತು ಹಳದಿ ಅರೋಣಾಯಿ ಅಥವಾ ಶಾಲುಗಳನ್ನು ತಲೆಗೆ ಕಟ್ಟಿಕೊಂಡಿದ್ದರು. ಈ ಬಟ್ಟೆಗಳನ್ನು ಸಾಮಾನ್ಯವಾಗಿ ಬೋಡೋ ಪುರುಷರು ಸಾಂಸ್ಕೃತಿಕ ಅಥವಾ ಧಾರ್ಮಿಕ ಹಬ್ಬಗಳಲ್ಲಿ ಧರಿಸುತ್ತಾರೆ.

ಬೋಡೋ ಹಬ್ಬಗಳಲ್ಲಿ ಸಾಮಾನ್ಯವಾಗಿ ನುಡಿಸಲಾಗುವ ತಮ್ಮ ವಾದ್ಯಗಳನ್ನು ಅವರು ಹೊರ ತೆಗೆಯುತ್ತಾರೆ: ಸಿಫಂಗ್ (ಉದ್ದವಾದ ಕೊಳಲು), ಖಾಮ್ (ಡ್ರಮ್) ಮತ್ತು ಸೆರ್ಜಾ (ಪಿಟೀಲು). ಪ್ರತಿಯೊಂದು ವಾದ್ಯವನ್ನು ಅರೋಣಾಯಿ ಬಳಸಿ ಅಲಂಕರಿಸಲಾಗಿತ್ತು. ಈ ಅರೋಣಾಯಿಗಳನ್ನು ಸಾಂಪ್ರದಾಯಿಕ "ಬೊಂಡೂರಮ್" ವಿನ್ಯಾಸ ಬಳಸಿ ವಿನ್ಯಾಸಗೊಳಿಸಲಾಗಿದೆ ಮತ್ತು ಸ್ಥಳೀಯವಾಗಿ ನೇಯಲಾಗಿದೆ.

ಖಾಮ್ ನುಡಿಸಲಿರುವ ಸಂಗೀತಗಾರರಲ್ಲಿ ಒಬ್ಬರಾದ ಖುರುಮ್ದಾವೋ ಬಸುಮಾತರಿ, ಸೇರಿಕೊಂಡ ಸ್ಥಳೀಯರ ಸಣ್ಣ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದರು. ಅವರು ಸುಬುನ್‌ಶ್ರೀ ಮತ್ತು ಬಗುರುಂಬಾ ನೃತ್ಯಗಳನ್ನು ಪ್ರದರ್ಶಿಸುವುದಾಗಿ ಜನರಿಗೆ ತಿಳಿಸಿದರು. "ಬಗುರುಂಬವನ್ನು ಸಾಮಾನ್ಯವಾಗಿ ವಸಂತಕಾಲದಲ್ಲಿ ಅಥವಾ ಕೊಯಿಲಿನ ನಂತರ, ಸಾಮಾನ್ಯವಾಗಿ ಬಿಸಾಗು ಹಬ್ಬದ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಇದನ್ನು ಮದುವೆಗಳ ಸಮಯದಲ್ಲಿಯೂ ಸಂಭ್ರಮದಿಂದ ಪ್ರದರ್ಶಿಸಲಾಗುತ್ತದೆ."

ರಂಜಿತ್ ಬಸುಮಾತರಿ ಸೆರ್ಜಾ (ಪಿಟೀಲು) ನುಡಿಸುವುದನ್ನು ನೋಡಿ

ನೃತ್ಯಗಾರರು ವೇದಿಕೆಗೆ ಬಂದ ಕೂಡಲೇ, ರಂಜಿತ್ ಬಸುಮಾತರಿ ಮುಂದೆ ಹೆಜ್ಜೆ ಹಾಕುತ್ತಾರೆ. ಅವರು ಸೆರ್ಜಾ ನುಡಿಸುತ್ತಾ ಏಕವ್ಯಕ್ತಿ ಪ್ರದರ್ಶನದೊಂದಿಗೆ ಪ್ರದರ್ಶನವನ್ನು ಕೊನೆಗೊಳಿಸುತ್ತಾರೆ. ಮದುವೆಗಳಲ್ಲಿ ಆದಾಯದ ಮೂಲವಾಗಿ ಸೆರ್ಜಾ ನುಡಿಸುವ ಇಲ್ಲಿನ ಕೆಲವೇ ಪ್ರದರ್ಶಕರಲ್ಲಿ ರಂಜಿತ್‌ ಕೂಡಾ ಒಬ್ಬರು. ಈ ಸಮಯದಲ್ಲಿ, ಗೋಲಾಪಿ ತಾನು ಬೆಳಗ್ಗೆಯಿಂದ ಶ್ರಮವಹಿಸಿ ತಯಾರಿಸಿದ ಅಡುಗೆಯನ್ನು ಅತಿಥಿಗಳಿಗೆ ಬಡಿಸಲು ಹೊರಟರು.

ಅವರು ಸೋಬಾಯ್ ಜ್ವಾಂಗ್ ಸಮೋ (ಕಪ್ಪು ಕಡಲೆ ಬೆರೆಸಿದ ಬಸವನಹುಳುವಿನ ಖಾದ್ಯ), ಹುರಿದ ಭಂಗುನ್ ಮೀನು, ಒನ್ಲಾ ಜಂಗ್ ದೌ ಬೆಡೋರ್ (ಸ್ಥಳೀಯ ತಳಿಯ ಅಕ್ಕಿಯ ಅನ್ನ ಮತ್ತು ಕೋಳಿ ಸಾರು), ಬಾಳೆ ಹೂವು ಮತ್ತು ಹಂದಿಮಾಂಸ, ಸೆಣಬಿನ ಎಲೆಗಳು, ಅನ್ನದ ವೈನ್ ಮತ್ತು ಚೂರು ಮೆಣಸಿನ ಕಾಯಿ ಮುಂತಾದ ಆಹಾರಗಳನ್ನು ಮೇಜಿನ ಮೇಲೆ ಇಡುತ್ತಾರೆ. ಇದು ಹಿಂದಿನ ದಿನದ ಆಕರ್ಷಕ ಪ್ರದರ್ಶನಗಳ ನೆನಪಿನಲ್ಲಿ ಮಾಡುವ ರಸದೂಟ.

ಅನುವಾದ: ಶಂಕರ. ಎನ್. ಕೆಂಚನೂರು

Himanshu Chutia Saikia

ہمانشو چوٹیا سیکیا، آسام کے جورہاٹ ضلع کے ایک آزاد دستاویزی فلم ساز، میوزک پروڈیوسر، فوٹوگرافر، اور ایک اسٹوڈنٹ ایکٹیوسٹ ہیں۔ وہ سال ۲۰۲۱ کے پاری فیلو ہیں۔

کے ذریعہ دیگر اسٹوریز Himanshu Chutia Saikia
Text Editor : Riya Behl

ریا بہل ملٹی میڈیا جرنلسٹ ہیں اور صنف اور تعلیم سے متعلق امور پر لکھتی ہیں۔ وہ پیپلز آرکائیو آف رورل انڈیا (پاری) کے لیے بطور سینئر اسسٹنٹ ایڈیٹر کام کر چکی ہیں اور پاری کی اسٹوریز کو اسکولی نصاب کا حصہ بنانے کے لیے طلباء اور اساتذہ کے ساتھ کام کرتی ہیں۔

کے ذریعہ دیگر اسٹوریز Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru