ಮಹುವಾ (ಮಧುಕಾ ಲಾಂಜಿಫೋಲಿಯಾ) ಸೀಸನ್ ಎರಡರಿಂದ ಮೂರು ತಿಂಗಳವರೆಗೆ ಇದ್ದು ಬೇಗನೇ ಬಂದು ಹೋಗುತ್ತದೆ. ಬೇಸಿಗೆ ಆರಂಭವಾಗುವಾಗ ಮಧ್ಯ ಭಾರತದಾದ್ಯಂತ ಕಂಡುಬರುವ ಎತ್ತರದ ಮರಗಳು ಈ ಸುಂದರ ಹೂವುಗಳನ್ನು ಬಿಡುತ್ತವೆ.
ಈ ತಿಳಿ ಹಳದಿ ಹೂವುಗಳನ್ನು ಸಂಗ್ರಹಿಸುವುದೇ ಒಂದು ಹಬ್ಬ. ಛತ್ತೀಸ್‌ಗಢದಲ್ಲಿ ಚಿಕ್ಕ ಮಕ್ಕಳು ಸೇರಿದಂತೆ ಇಡೀ ಕುಟುಂಬಗಳು ಕಾಡಿನಲ್ಲಿ ಬಿದ್ದಿರುವ ಈ ಹೂಗಳನ್ನು ಹೆಕ್ಕುವುದನ್ನು ಕಾಣಬಹುದು. "ಇದು ತುಂಬಾ ತ್ರಾಸದ ಕೆಲಸ," ಭೂಪಿಂದರ್ ಹೇಳುತ್ತಾರೆ. "ನಾವು ಮುಂಜಾನೆ ಮತ್ತು ಸಂಜೆ ಎರಡೂ ಹೊತ್ತು ಮಹುವಾವನ್ನು ಸಂಗ್ರಹಿಸುತ್ತೇವೆ," ಎನ್ನುತ್ತಾರೆ ಅವರು. ಧಮ್ತಾರಿ ಜಿಲ್ಲೆಯ ಚನಗಾಂವ್‌ನ ಇವರು ತಮ್ಮ ಹೆತ್ತವರಿಗೆ ಈ ಕೆಲಸದಲ್ಲಿ ನೆರವಾಗಲು ಬಂದಿದ್ದಾರೆ. ಸುತ್ತಮುತ್ತಲಿನ ಅನೇಕ ಜನರು ಇದಕ್ಕಾಗಿ ಸೇರುವುದರಿಂದ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.
ಸೀಸನ್‌ನಲ್ಲಿ ಮಹುವಾ ಹೂಗಳು ತಮ್ಮ ಸುವಾಸನೆಯ ಮೂಲಕ ಇಡೀ ಪ್ರದೇಶವನ್ನು ಸುಗಂಧಗೊಳಿಸುತ್ತವೆ. ರಾಯ್‌ಗಢ್ ಜಿಲ್ಲೆಯ ಧರಮ್‌ಜೈಗಢದಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಬರುವ ಗ್ರಾಮಸ್ಥರು ನೂರಾರು ಮಹುವಾ ಮರಗಳ ಅಡಿಯಲ್ಲಿ ಬಿದ್ದಿರುವ ಹೂವುಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಒಣಗಿಸಿ ತೆಗೆದಿಡಲಾಗುತ್ತದೆ.ಇವುಗಳಿಂದ ಹಿಟ್ಟು, ಮದ್ಯ ಮತ್ತು ಇನ್ನೂ ಬೇರೆ ಬೇರೆ ಉತ್ಷನ್ನಗಳನ್ನು ತಯಾರಿಸುತ್ತಾರೆ.
“ಮಹುವಾ ನಾವು ಸಂಗ್ರಹಿಸುವ ಪ್ರಮುಖ ಕಾಡುತ್ಪನ್ನ. ಹಸಿದಾಗ ನಾವು ಇದನ್ನು ಆಹಾರವಾಗಿ ಬಳಸುತ್ತೇವೆ. ಅಗತ್ಯ ಬಿದ್ದಾಗ ಹಣಕ್ಕಾಗಿ ಸ್ವಲ್ಪ ಮಹುವಾವನ್ನು ಮಾರಾಟ ಮಾಡಬಹುದು, ”ಎಂದು ಅಂಬಿಕಾಪುರದ ಸಾಮಾಜಿಕ ಕಾರ್ಯಕರ್ತ ಮತ್ತು ಬುಡಕಟ್ಟು ಮುಖಂಡ ಗಂಗಾರಾಮ್ ಪೈಂಕ್ರಾ ಹೇಳುತ್ತಾರೆ. ಕೂಲಿ ಕೆಲಸ ಸಿಗದೇ ಇದ್ದಾಗ ಜನರು ಬದುಕು ಸಾಗಿಸಲು ಈ ಹೂವುಗಳ ಮೇಲೆ ಅವಲಂಬಿತರಾಗುತ್ತಾರೆ ಎನ್ನುತ್ತಾರೆ ಗಂಗಾರಾಮ್.
ʼಮಹುವಾ ನಾವು ಸಂಗ್ರಹಿಸುವ ಪ್ರಮುಖ ಕಾಡುತ್ಪನ್ನ. ಹಸಿದಾಗ ನಾವು ಇದನ್ನು ಆಹಾರವಾಗಿ ಬಳಸುತ್ತೇವೆ. ಅಗತ್ಯ ಬಿದ್ದಾಗ ಹಣಕ್ಕಾಗಿ ಸ್ವಲ್ಪ ಮಹುವಾವನ್ನು ಮಾರಾಟ ಮಾಡಬಹುದುʼ
"ಬುಡಕಟ್ಟು ಜನರು ಈ ಹೂವುಗಳಿಂದ ತಯಾರಿಸಿದ ಮದ್ಯವನ್ನು ಸವಿಯುತ್ತಾರೆ. ಇದು ನಮ್ಮ ಪೂಜೆ ಮತ್ತಿತರ ಆಚರಣೆಗಳಲ್ಲಿ ಇರಲೇಬೇಕು," ಎಂದು ಗಂಗಾರಾಮ್ ಹೇಳುತ್ತಾರೆ.
ತುಂಬಾ ಗಂಟೆಗಳ ಕಾಲ ಇವನ್ನು ನೆಲದಿಂದ ಹೆಕ್ಕುವುದು ಸುಲಭದ ಕೆಲಸವೇನಲ್ಲ. "ನಮ್ಮ ಬೆನ್ನು, ಕಾಲುಗಳು, ಕೈಗಳು, ಮೊಣಕಾಲುಗಳು ಮತ್ತು ಸೊಂಟ, ಎಲ್ಲಾ ಕಡೆ ನೋವು ಕಾಣಿಸಿಕೊಳ್ಳುತ್ತದೆ" ಎಂದು ಭೂಪಿಂದರ್ ಹೇಳುತ್ತಾರೆ.
ಛತ್ತೀಸ್‌ಗಢ ಸರ್ಕಾರ ಮಹುವಾ ಹೂವಿಗೆ ಒಂದು ಕೆಜಿಗೆ 30 ರುಪಾಯಿ ಅಥವಾ ಕ್ವಿಂಟಲ್‌ಗೆ 3,000 ರುಪಾಯಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.
ಛತ್ತೀಸ್‌ಗಢ ಮಾತ್ರವಲ್ಲ ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲೂ ಈ ಮಹುವಾ ಹೂವುಗಳನ್ನು ಕಾಣಬಹುದು.
ಅನುವಾದ: ಚರಣ್ ಐವರ್ನಾಡು