ಓಢೊ ಜಾಮ್‌ ಮತ್ತು ಹೋಥಲ್ ಪದಮಣಿಯ ಪ್ರೇಮಕತೆ ಕಛ್‌ ಮತ್ತು ಸೌರಾಷ್ಟ್ರ ಪ್ರದೇಶಗಳಲ್ಲಿ ಜನಜನಿತ. ಬಹುಶಃ ಇದು ಜನಪದ ಕತೆಯಾಗಿ ಇಲ್ಲೆಲ್ಲಾ ವ್ಯಾಪಿಸಿರಬಹುದು. ದೇಶ-ಕಾಲಗಳಲ್ಲಿ ಹರಡಿರುವ ಈ ಕತೆಯು ಅನೇಕ ಆವೃತ್ತಿಗಳನ್ನು ಹೊಂದಿದೆ. ಪ್ರತಿ ಕತೆಯೂ ಒಂದು ಸಮುದಾಯದ ಪೂರ್ವಜರ ಕತೆಯನ್ನು ಹೊಂದಿದೆ. ಒಂದು ಕತೆಯಲ್ಲಿ ಓಢೋ ಒಂದು ಬುಡಕಟ್ಟಿನ ನಾಯಕನಾದರೆ ಇನ್ನೊಂದು ಕತೆಯಲ್ಲಿ ಕಿಯೋರ್‌ ಮೂಲದ ಕ್ಷತ್ರಿಯ ಯೋಧ. ಹಾಗೆಯೇ ಹೋಥಲ್ ಕುರಿತಾಗಿಯೂ ಕತೆಗಳಿವೆ. ಅವಳು ಒಂದು ಕತೆಯಲ್ಲಿ ಬುಡಕಟ್ಟು ಜನಾಂಗವೊಂದನ್ನು ಮುನ್ನಡೆಸುವ ಧೈರ್ಯಶಾಲಿ ಮಹಿಳೆ; ಇನ್ನೂ ಅನೇಕ ಆವೃತ್ತಿಗಳಲ್ಲಿ ಅವಳೊಬ್ಬ ಭೂಮಿಯ ಮೇಲೆ ಜನಿಸಿದ ಶಾಪಗೃಸ್ಥ ದೇವತೆ.

ಓಢೋ ತನ್ನ ಅತ್ತಿಗೆ ಮೀನಾವತಿ ತನ್ನ ಮೇಲೆ ಕಾಮದ ದೃಷ್ಟಿಯನ್ನು ಬೀರಿದಾಗ ಅವನು ಅದನ್ನು ನಿರಾಕರಿಸಿ ದೇಶಭೃಷ್ಟನಾಗುತ್ತಾನೆ. ಅವನು ತನ್ನ ತಾಯಿಯ ಕಡೆಯ ಸಂಬಂಧಿಕರಾದ ಪೀರಾನಾ ಪಾಠಾಣ್‌ ಎನ್ನುವ ಊರಿನ ವಿಸಳ್ ದೇವ್‌ ಎನ್ನುವ ವ್ಯಕ್ತಿಯ ಬಳಿ ಆಶ್ರಯ ಪಡೆದಿರುತ್ತಾನೆ. ಈ ವಿಸಳ್ ದೇವನ ಒಂಟೆಗಳನ್ನು ಸಿಂಧ್‌ ಪ್ರಾಂತ್ಯದ ನಗರ್-ಸಮೋಯ್ ಮುಖ್ಯಸ್ಥ ಬಂಭಣಿಯಾಎನ್ನುವವನು ದರೋಡೆ ಮಾಡಿರುತ್ತಾರೆ. ಓಢೋ ಅವುಗಳನ್ನು ಮರಳಿ ತರಲು ನಿರ್ಧರಿಸುತ್ತಾನೆ.

ಪಶುಪಾಲಕ ಬುಡಕಟ್ಟು ಜನಾಂಗವೊಂದಕ್ಕೆ ಸೇರಿದವಳಾದ ಹೋಥಲ್ ಪದಮಣಿ ಬಂಭಣಿಯಾ ವಿರುದ್ಧ ತನ್ನದೇ ಆದ ಸೇಡೊಂದನ್ನು ಹೊಂದಿರುತ್ತಾಳೆ. ಅವನು ಅವಳ ತಂದೆಯ ರಾಜ್ಯವನ್ನು ನಾಶಪಡಿಸಿದ್ದಲ್ಲದೆ ಅವನ ಜಾನುವಾರುಗಳನ್ನು ಸಹ ಹೊತ್ತೊಯ್ದಿರುತ್ತಾನೆ. ಅವಳು ಸಾಯುತ್ತಿರುವ ತನ್ನ ತಂದೆಗೆ ಆ ರಾಜನ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಭಾಷೆ ಕೊಟ್ಟಿರುತ್ತಾಳೆ. ಅವಳು ಓಢೋ ಜಾಮ್‌ನನ್ನು ಭೇಟಿಯಾಗುವ ಸಮಯದಲ್ಲಿ ಪುರುಷ ವೇಷದಲ್ಲಿರುತ್ತಾಳೆ. ಅವಳ ಈ ವೇಷವನ್ನು ಕೆಲವು ಆವೃತ್ತಿಗಳಲ್ಲಿ “ಹೋಥೋ” ಎಂದು ಕರೆಯಲಾಗಿದ್ದರೆ, ಇನ್ನೂ ಕೆಲವುಗಳಲ್ಲಿ “ಎಕ್ಕಲ್ಮಲ್”‌ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಓಢೋ ಅವಳನ್ನು ಓರ್ವ ಧೈರ್ಯಶಾಲಿ ಸೈನಿಕ ಯುವಕ ಎನ್ನುವ ಕಾರಣಕ್ಕೆ ಜೊತೆಗೆ ಕರೆದುಕೊಳ್ಳುತ್ತಾನೆ. ಒಂದೇ ಉದ್ದೇಶಕ್ಕಾಗಿ ಜೊತೆಗೂಡಿದ ಓಢೋ ಜಾಮ್‌ ಮತ್ತು ಹೋಥಲ್ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯುತ್ತದೆ, ಇಬ್ಬರೂ ಸೇರಿ ಬಂಬಣಿಯಾಕಡೆಯವರ ಜೊತೆ ಯುದ್ಧ ಮಾಡಿ ಒಂಟೆಗಳನ್ನು ಮರಳಿ ತರುತ್ತಾರೆ.

ನಗರ್‌ ಸಮೋಯಿಯಿಂದ ಯುದ್ಧ ಮುಗಿಸಿ ಮರಳಿದ ನಂತರ ಓಢೋ ಪೀರಾನಾ ಪಾಟಾಣ್‌ ಕಡೆ ಹೊರಟರೆ, ಹೋಥಾಳ್‌ ಕನಾರಾ ಬೆಟ್ಟಗಳ ಕಡೆ ಹೊರಡುತ್ತಾಳೆ. ತನ್ನ ಹೋಥೋವನ್ನು ಮರೆಯಲಾಗದ ಓಢೋ ಜಾಮ್‌ ತನ್ನ ಗೆಳೆಯನನ್ನು ಹುಡುಕಿಕೊಂಡು ಹೊರಡಲು ತೀರ್ಮಾನಿಸುತ್ತಾನೆ. ಕೆರೆಯೊಂದರ ಬಳಿ ಹೋಥೋ ಪುರುಷ ಸೈನಿಕನ ವೇಷದಲ್ಲಿ ಕಾಣಿಸುತ್ತಾನೆ. ಆದರೆ ನಂತರ ಹೋಥೋ ಸ್ನಾನ ಮಾಡುವುದನ್ನು ನೋಡಿದಾಗ ಅವಳು ಪುರುಷನಲ್ಲ ಮಹಿಳೆಯೆನ್ನುವುದು ಅವನ ಅರಿವಿಗೆ ಬರುತ್ತದೆ.

ಅವಳೊಡನೆ ಪ್ರೇಮದಲ್ಲಿ ಬೀಳುವ ಓಢೋ ತನ್ನನ್ನು ಮದುವೆಯಾಗುವಂತೆ ಬೇಡಿಕೊಳ್ಳುತ್ತಾನೆ. ಹೋಥಳ್‌ ಕೂಡಾ ಅವನನ್ನು ಪ್ರೀತಿಸುತ್ತಿದ್ದ ಕಾರಣ ಒಪ್ಪಿಕೊಳ್ಳುತ್ತಾಳೆ. ಆದರೆ ಅವಳು ಅದಕ್ಕೆ ಒಂದು ಷರತ್ತನ್ನು ವಿಧಿಸುತ್ತಾಳೆ. ತನ್ನ ಗುರುತು ಗುಟ್ಟಾಗಿರುವ ತನಕವಷ್ಟೇ ತಾನು ನಿನ್ನ ಜೊತೆಗಿರುತ್ತೇನೆ ಎನ್ನುತ್ತಾಳೆ. ನಂತರ ಇಬ್ಬರೂ ಮದುವೆಯಾಗಿ ಎರಡು ಗಂಡು ಮಕ್ಕಳನ್ನು ಹೊಂದುತ್ತಾರೆ. ನಂತರ ಒಮ್ಮೆ ಅವನು ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯ ಕುರಿತು ಬಾಯಿ ಬಿಡುತ್ತಾನೆ. ಆದರೆ ಇನ್ನೂ ಕೆಲವು ಆವೃತ್ತಿಗಳ ಪ್ರಕಾರ ತನ್ನ ಗಂಡು ಮಕ್ಕಳಿಬ್ಬರ ಧೈರ್ಯ, ಸಾಹಸದ ಕುರಿತು ಸಾರ್ವಜನಿಕ ಸಭೆಯೊಂದರಲ್ಲಿ ವಿವರಿಸುವಾಗ ಅವನು ಹೋಥಳಳ ಗುರುತನ್ನು ಬಹಿರಂಗಪಡಿಸುತ್ತಾನೆ. ಅಂದು ಅವಳು ಅವನ್ನು ತೊರೆಯುತ್ತಾಳೆ.

ಭದ್ರೇಸರ್ ಎನ್ನುವ ಊರಿನ ಜುಮಾ ವಘೇರ್ ಅವರ ಧ್ವನಿಯಲ್ಲಿರು ಈ ಸಂಚಿಕೆಯಲ್ಲಿನ ಹಾಡಿನಲ್ಲಿ ಓಢೋ ಜಾಮ್‌ ತನ್ನ ಸಂಗಾತಿಯನ್ನು ಕಳೆದುಕೊಂಡ ನೋವಿನಲ್ಲಿರುವ ಸಂದರ್ಭವನ್ನು ವಿವರಿಸುತ್ತದೆ. ಓಢೋಜಾಮ್‌ ಇಲ್ಲಿ ಬಹಳ ನೊಂದಿದ್ದಾನೆ ಮತ್ತು ಕಣ್ಣೀರು ಹರಿಸುತ್ತಿದ್ದಾನೆ. ಅವನು ನೋವು ಮತ್ತು ಅಳು ಎಷ್ಟು ತೀವ್ರವೆಂದರೆ ಅವನ ಕಣ್ಣೀರಿನಿಂದ ಹಜಾಸರ್‌ ಎನ್ನುವ ಸರೋವರ ಉಕ್ಕಿ ಹರಿಯುತ್ತದೆ. ಅವಳಿಗೆ ಬಯಸಿದ್ದನ್ನೆಲ್ಲ ನೀಡುವ ಭರವಸೆಯೊಂದಿಗೆ ಹೋಥಾಳಲನ್ನು ಮರಳಿ ಬರುವಂತೆ ಗೋಗರೆಯುತ್ತಿದ್ದಾನೆ.

ಭದ್ರೇಸರ್ ಗ್ರಾಮದ ಜುಮಾ ವಘೇರ್ ಹಾಡಿದ ಜಾನಪದ ಗೀತೆಯನ್ನು ಕೇಳಿ

કચ્છી

ચકાસર જી પાર મથે ઢોલીડા ધ્રૂસકે (2)
એ ફુલડેં ફોરૂં છડેયોં ઓઢાજામ હાજાસર હૂબકે (2)
ઉતારા ડેસૂ ઓરડા પદમણી (2)
એ ડેસૂ તને મેડીએના મોલ......ઓઢાજામ.
ચકાસર જી પાર મથે ઢોલીડા ધ્રૂસકે
ફુલડેં ફોરૂં છડેયોં ઓઢાજામ હાજાસર હૂબકે
ભોજન ડેસૂ લાડવા પદમણી (2)
એ ડેસૂ તને સીરો,સકર,સેવ.....ઓઢાજામ.
હાજાસર જી પાર મથે ઢોલીડા ધ્રૂસકે
ફુલડેં ફોરૂં છડેયોં ઓઢાજામ હાજાસર હૂબકે
નાવણ ડેસૂ કુંઢીયું પદમણી (2)
એ ડેસૂ તને નદીએના નીર..... ઓઢાજામ
હાજાસર જી પાર મથે ઢોલીડા ધ્રૂસકે
ફુલડેં ફોરૂં છડયોં ઓઢાજામ હાજાસર હૂબકે
ડાતણ ડેસૂ ડાડમી પદમણી (2)
ડેસૂ તને કણીયેલ કામ..... ઓઢાજામ
હાજાસર જી પાર મથે ઢોલીડા ધ્રૂસકે (2)
ફુલડેં ફોરૂં છડ્યોં ઓઢાજામ હાજાસર હૂબકે.

ಕನ್ನಡ

ಹಜಾಸರ್‌ ಸರೋವರದ ತೀರದಲ್ಲಿ ವಾದ್ಯದವರು ಶೋಕಿಸುತ್ತಿದ್ದಾರೆ, ಕಣ್ಣೀರುಗರೆಯುತ್ತಿದ್ದಾರೆ (2)
ಹೂವುಗಳು ತಮ್ಮ ಮಧುರ ಪರಿಮಳವ ತೊರೆದು ನಿಂತಿವೆ
ಹಜಾಸರ್ ಸರೋವರು ಉಕ್ಕೇರುತ್ತಿದೆ ಓಢೋ ಜಾಮ್‌ನ ಎದೆಯ ನೋವಿನಂತೆ
ನಿನಗೆ ದೊಡ್ಡ ಕೋಣೆಯ ಮನೆ ಕೊಡುತ್ತೇವೆ ಬಾರೇ ಪದಮಣಿ (2)
ಹಲವು ಮಹಡಿಗಳ ಅರಮನೆಯ ಕೊಡುತ್ತೇವೆ
ಓಢೋ ಜಾಮ್‌ನ ನೋವಿನಂತೆ ಹಜಾಸರ್ ಸರೋವರು ಉಕ್ಕೇರುತ್ತಿದೆ
ಹಜಾಸರ್‌ ಸರೋವರದ ತೀರದಲ್ಲಿ ವಾದ್ಯದವರು ಶೋಕಿಸುತ್ತಿದ್ದಾರೆ, ಕಣ್ಣೀರುಗರೆಯುತ್ತಿದ್ದಾರೆ.
ಹೂವುಗಳು ತಮ್ಮ ಮಧುರ ಪರಿಮಳವ ತೊರೆದು ನಿಂತಿವೆ
ಹಜಾಸರ್ ಸರೋವರು ಉಕ್ಕೇರುತ್ತಿದೆ ಓಢೋ ಜಾಮ್‌ನ ಎದೆಯ ನೋವಿನಂತೆ
ನಿನಗೆ ಊಟದಲ್ಲಿ ಲಾಡು ಬಡಿಸುತ್ತೇವೆ ಬಾರೇ ಪದಮಣಿ (2)
ನಾವು ನಿನಗೆ ಶೀರೊ, ಸಕ್ಕರ್‌ ಸೇವ್‌ ಕೊಡುವೆವು…
ಓಢೋ ಜಾಮ್‌ನ ನೋವಿನಂತೆ ಹಜಾಸರ್ ಸರೋವರು ಉಕ್ಕೇರುತ್ತಿದೆ
ಹಜಾಸರ್‌ ಸರೋವರದ ತೀರದಲ್ಲಿ ವಾದ್ಯದವರು ಶೋಕಿಸುತ್ತಿದ್ದಾರೆ, ಕಣ್ಣೀರುಗರೆಯುತ್ತಿದ್ದಾರೆ.
ಹೂವುಗಳು ತಮ್ಮ ಮಧುರ ಪರಿಮಳವ ತೊರೆದು ನಿಂತಿವೆ
ಹಜಾಸರ್ ಸರೋವರು ಉಕ್ಕೇರುತ್ತಿದೆ ಓಢೋ ಜಾಮ್‌ನ ಎದೆಯ ನೋವಿನಂತೆ
ನಿನಗೆ ಮೀಯಲೆಂದು ಪುಟ್ಟ ಕೊಳ ಕಟ್ಟಿ ಕೊಡುವೆವು ಬಾರೇ ಪದಮಣಿ (2)
ನದಿಯ ನೀರನ್ನೇ ತಂದು ಕೊಡುವೆವು ನಿನಗೆ…
ಹಜಾಸರ್‌ ಸರೋವರದ ತೀರದಲ್ಲಿ ವಾದ್ಯದವರು ಶೋಕಿಸುತ್ತಿದ್ದಾರೆ, ಕಣ್ಣೀರುಗರೆಯುತ್ತಿದ್ದಾರೆ.
ಹೂವುಗಳು ತಮ್ಮ ಮಧುರ ಪರಿಮಳವ ತೊರೆದು ನಿಂತಿವೆ
ಹಜಾಸರ್ ಸರೋವರು ಉಕ್ಕೇರುತ್ತಿದೆ ಓಢೋ ಜಾಮ್‌ನ ಎದೆಯ ನೋವಿನಂತೆ
ನಿನಗೆ ಹಲ್ಲು ತಿಕ್ಕಲು ದಾಳಿಂಬೆ ಕಡ್ಡಿ ಕೊಡುವೆವು (2)
ಕಣಗಿಲೆಯಂತಹ ಮೆತ್ತನೆ ಕಡ್ಡಿಯ ಕೊಡುವೆವು…
ಹಜಾಸರ್‌ ಸರೋವರದ ತೀರದಲ್ಲಿ ವಾದ್ಯದವರು ಶೋಕಿಸುತ್ತಿದ್ದಾರೆ, ಕಣ್ಣೀರುಗರೆಯುತ್ತಿದ್ದಾರೆ (2)
ಹೂವುಗಳು ತಮ್ಮ ಮಧುರ ಪರಿಮಳವ ತೊರೆದು ನಿಂತಿವೆ
ಹಜಾಸರ್ ಸರೋವರು ಉಕ್ಕೇರುತ್ತಿದೆ ಓಢೋ ಜಾಮ್‌ನ ಎದೆಯ ನೋವಿನಂತೆ.

PHOTO • Priyanka Borar

ಹಾಡಿನ ಪ್ರಕಾರ : ಸಾಂಪ್ರದಾಯಿಕ ಜಾನಪದ ಗೀತೆ

ಕ್ಲಸ್ಟರ್ : ಪ್ರೇಮ ಮತ್ತು ಹಂಬಲದ ಕುರಿತಾದ ಹಾಡು

ಹಾಡು : 10

ಹಾಡಿನ ಶೀರ್ಷಿಕೆ : ಚಕಾಸಾಜಿ ಪಾರ್ ಮಥೆ ಧೋಲಿಡಾ ಧ್ರುಸ್ಕೆ

ಸಂಗೀತ : ದೇವಲ್ ಮೆಹ್ತಾ

ಗಾಯಕರು : ಮುಂದ್ರಾ ತಾಲ್ಲೂಕಿನ ಭದ್ರೇಸರ್ ಗ್ರಾಮದ ಜುಮಾ ವಘೇರ್.

ಬಳಸಿದ ವಾದ್ಯಗಳು : ಹಾರ್ಮೋನಿಯಂ, ಡ್ರಮ್, ಬ್ಯಾಂಜೊ

ರೆಕಾರ್ಡಿಂಗ್ ವರ್ಷ : 2012, ಕೆಎಂವಿಎಸ್ ಸ್ಟುಡಿಯೋ

ಸಮುದಾಯ ಚಾಲಿತ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ. ಇನ್ನಷ್ಟು ಇಂತಹ ಹಾಡುಗಳಿಗಾಗಿ ಈ ಪುಟಕ್ಕೆ ಭೇಟಿ ನೀಡಿ: ರಣ್‌ ಪ್ರದೇಶದ ಹಾಡುಗಳು: ಕಚ್ಛೀ ಜಾನಪದ ಗೀತೆಗಳ ಸಂಗ್ರಹ

ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು.

ಅನುವಾದ: ಶಂಕರ. ಎನ್. ಕೆಂಚನೂರು

Text : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Illustration : Priyanka Borar

پرینکا بورار نئے میڈیا کی ایک آرٹسٹ ہیں جو معنی اور اظہار کی نئی شکلوں کو تلاش کرنے کے لیے تکنیک کا تجربہ کر رہی ہیں۔ وہ سیکھنے اور کھیلنے کے لیے تجربات کو ڈیزائن کرتی ہیں، باہم مربوط میڈیا کے ساتھ ہاتھ آزماتی ہیں، اور روایتی قلم اور کاغذ کے ساتھ بھی آسانی محسوس کرتی ہیں۔

کے ذریعہ دیگر اسٹوریز Priyanka Borar
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru