“ಇಲ್ಲಾಲ್ಲಾಹ್‌ ಕೀ ಶರಾಬ್‌ ಸಜರ್‌ ಸೇ ಪಿಲಾ ದಿಯಾ, ಮೇ ಏಕ್‌ ಗುನಾಹ್‌ಗಾರ್‌ ಥಾ, ಸೂಫಿ ಬನಾದಿಯಾ.
ಸೂರತ್‌ ಮೇ ಮೇರೆ ಆ ಗಯೀ ಸೂರತ್‌ ಫಕೀರ್‌ ಕೀ, ಯೇ ನಜರ್‌ ಮೇರೇ ಪೀರ್‌ ಕೀ, ಯೇ ನಜರ್‌ ಮೇರೆ ಪೀರ್‌ ಕೀ…”

[ನನ್ನ ಸಂತ ನನಗೆ ತನ್ನ ಕಣ್ಣಲ್ಲೇ ದೇವನ ಅಮೃತವ ಕುಡಿಸಿದ,
ಪಾಪಿಯಾಗಿದ್ದೆ ನಾನು, ಅವನು ನನ್ನನ್ನು ಸೂಫಿಯಾಗಿಸಿದ
ನನ್ನ ಮುಖದಲ್ಲೀಗ ಸೂಫಿ ಸಂತನ ಮುಖದ ಹೊಳಪು!
ಆಹಾ ಅಲ್ಲಿ ನೋಡಿ! ನನ್ನ ಸೂಫಿಯ ಮುಖದಲ್ಲಿನ ಹೊಳಪು.]

ಮಣಿಕಟ್ಟಿಗೆ ಘುಂಗ್ರೂ ಕಟ್ಟಿಕೊಂಡು, ತೊಡೆಯ ಮೇಲೆ ಮಗುವಿನಂತೆ ಮಲಗಿದ್ದ ಢೋಲಕ್‌ ನುಡಿಸುತ್ತಾ, ಪುಣೆ ನಗರದ ಬಳಿಯ ದರ್ಗಾದಲ್ಲಿ ಖವ್ವಾಲ್‌ ಒಬ್ಬರು ಹಾಡುತ್ತಿದ್ದರು.

ಯಾವುದೇ ಮೈಕ್ರೋಫೋನ್‌ ಅಥವಾ ಸಹ ಗಾಯಕರಿಲ್ಲದೆ ಹಾಡುತ್ತಿದ್ದ ಅವರ ಸ್ಪಷ್ಟ ದೊಡ್ಡ ದನಿ ಗುಮ್ಮಟದ ತುದಿಯವರೆಗೆ ತಲುಪುತ್ತಿತ್ತು. ಅವರು ಎದುರಿಗೆ ಪ್ರೇಕ್ಷಕರೇ ಇಲ್ಲದಿದ್ದರೂ ತಲ್ಲೀನರಾಗಿ ಹಾಡುತ್ತಿದ್ದರು.

ಅವರ ಈ ಹಾಡುಗಾರಿಕೆ ಒಂದು ಹಾಡಿನ ನಂತರ ಇನ್ನೊಂದು ಎಂಬಂತೆ ಮುಂದುವರೆಯುತ್ತಲೇ ಇರುತ್ತದೆ. ಪ್ರಾರ್ಥನೆಯ ಸಮಯದಲ್ಲಿ ಹಾಡುವುದು ಅಥವಾ ಸಂಗೀತ ನುಡಿಸುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿರುವುದರಿಂದ ಅವರು ಜುಹ್ರ್ ಮತ್ತು ಮಗ್ರಿಬ್ ನಮಾಜ್ (ಸಂಜೆ ಪ್ರಾರ್ಥನೆ) ಸಮಯದಲ್ಲಿ ಮಾತ್ರ ವಿಶ್ರಾಂತಿ ಪಡೆಯುತ್ತಾರೆ. ನಮಾಜ್‌ ಮುಗಿದ ನಂತರ ಮತ್ತೆ ಹಾಡಲು ಆರಂಭಿಸುವ ಅವರು ರಾತ್ರಿ ಸುಮಾರು ಎಂಟು ಗಂಟೆಯವರೆಗೆ ಹಾಡುತ್ತಲೇ ಇರುತ್ತಾರೆ.

"ನಾನು ಅಮ್ಜದ್. ಅಮ್ಜದ್ ಮುರಾದ್ ಗೊಂಡ್. ನಾವು ರಾಜಗೊಂಡ್. ಆದಿವಾಸಿಗಳು" ಎಂದು ಅವರು ತನ್ನನ್ನು ತಾನು ಪರಿಚಯಿಸಿಕೊಂಡರು. ಹೆಸರು ಮತ್ತು ನೋಟದಲ್ಲಿ ಮುಸ್ಲಿಮರಂತೆ ಕಾಣುವ, ಆದರೆ ಹುಟ್ಟಿನಿಂದ ಆದಿವಾಸಿಯಾಗಿರುವ ಅಮ್ಜದ್‌ ನಮಗೆ ಹೀಗೆ ಹೇಳಿದರು: “ಖವ್ವಾಲಿ ನಮ್ಮ ಉದ್ಯೋಗ!”

PHOTO • Prashant Khunte

ಅಮ್ಜದ್‌ ಅವರು ಪುಣೆ ನಗರದ ದರ್ಗಾವೊಂದರ ಖವ್ವಾಲಿ ಹಾಡುಗಾರ. ಪ್ರಾರ್ಥನೆಯ ಸಮಯದಲ್ಲಿ ಹಾಡುವುದು ಅಥವಾ ಸಂಗೀತ ನುಡಿಸುವುದು ಸೂಕ್ತವಲ್ಲ ಎಂದು ಪರಿಗಣಿಸಲಾಗಿರುವುದರಿಂದ ಅವರು ಜುಹ್ರ್ ಮತ್ತು ಮಗ್ರಿಬ್ ನಮಾಜ್ ಸಮಯದಲ್ಲಿ ಮಾತ್ರ ವಿಶ್ರಾಂತಿ ಪಡೆಯುತ್ತಾರೆ . ನಮಾಜ್‌ ಮುಗಿದ ನಂತರ ಮತ್ತೆ ಹಾಡಲು ಆರಂಭಿಸುವ ಅವರು ರಾತ್ರಿ ಸುಮಾರು ಎಂಟು ಗಂಟೆಯವರೆಗೆ ಹಾಡುತ್ತಲೇ ಇರುತ್ತಾರೆ

ಎಲೆಯಡಿಕೆ ತಿನ್ನುತ್ತಿದ್ದ ಅವರು, “ಖವ್ವಾಲಿಯನ್ನು ಕೇಳುವುದೆಂದರೆ ಇಷ್ಟವಿಲ್ಲ ಎನ್ನುವವರು ಇದ್ದರೆ ನನಗೆ ತೋರಿಸಿ! ಇದು ಎಲ್ಲರಿಗೂ ಇಷ್ಟವಾಗುವ ಕಲೆ” ಎಂದರು. ನಂತರ ಬಾಯಲ್ಲಿದ್ದ ಎಲೆಯಡಿಕೆ ಕರಗುತ್ತಿದ್ದಂತೆ, ಅವರು ತನ್ನ ಈ ಕಲೆಯ ಕುರಿತಾದ ಆಸಕ್ತಿಯ ಕುರಿತಾಗಿ ಮಾತನಾಡುತ್ತಾ, “ಪಬ್ಲಿಕ್‌ ಕೋ ಖುಷ್‌ ಕರ್ನೇ ಕಾ. ಬಸ್‌ [ಜನರನ್ನು ಖುಷಿಪಡಿಸಬೇಕು, ಅಷ್ಟೇ]” ಎಂದು ಹೇಳಿದರು.

“ಪಾಂವೋ ಮೇ ಬೇಡಿ, ಹಾತೋ ಮೇ ಕಡಾ ರೆಹನೇ ದೋ, ಉಸ್ಕೋ ಸರ್ಕಾರ್‌ ಕೀ ಚೌಕಟ್‌ ಪೇ ಪಡಾ ರಹನೇ ದೋ…” ಎನ್ನುವ ಜನಪ್ರಿಯ ಹಿಂದಿ ಚಿತ್ರದ ಹಾಡೊಂದು ನನಗೆ ನೆನಪಿಗೆ ಬಂತು.

ಈ ದರ್ಗಾಕ್ಕೆ ಬರುವ ಭಕ್ತರು ಅವರು ತಮ್ಮ ಖವ್ವಾಲಿ ಗಾಯನಕ್ಕೆ ಬಾಲಿವುಡ್‌ ಸಿನೆಮಾ ಸಂಗೀತ ಬೆರೆಸುವುದಕ್ಕೆ ವಿರೋಧಿಸುವುದಿಲ್ಲ. ಇನ್ನೂ ಕೆಲವರು ಅವರ ಹಾಡನ್ನು ಮೆಚ್ಚಿ 10, 20 ರೂಪಾಯಿಗಳಷ್ಟು ಮನಸ್ಸಿಗೆ ಬಂದಂತೆ ಹಣವನ್ನು ನೀಡಿ ಮುಂದಕ್ಕೆ ಸಾಗುತ್ತಾರೆ. ಇಲ್ಲಿನ ಸಂತನ ದರ್ಶನಕ್ಕೆ ಬರುವ ಹಾಗೂ ಚಾದರ್‌ ಅರ್ಪಿಸುವ ಭಕ್ತರಿಗೆ ದರ್ಗಾ ನೋಡಿಕೊಳ್ಳುವವರು ತಿಲ್ಗುಲ್ (ಎಳ್ಳು ಮತ್ತು ಬೆಲ್ಲ) ನೀಡುತ್ತಾರೆ. ಒಬ್ಬ ಮುಜಾವರ್‌ ದುಷ್ಟ ಶಕ್ತಿಗಳನ್ನು ಓಡಿಸಲೆಂದು ಭಕ್ತರ (ಸವಾಲಿಗಳು) ಹೆಗಲು ಮತ್ತು ಬೆನ್ನಿನ ಮೇಲೆ ನವಿಲು ಗರಿಯಿಂದ ತಟ್ಟುತ್ತಾರೆ. ಸಂತನಿಗೆ (ಪೀರ್)‌ ಒಂದಷ್ಟು ಹಣವನ್ನು ಹಾಕಿದರೆ ಒಂದಷ್ಟನ್ನು ಗಾಯಕನಿಗೂ (ಖವ್ವಾಲ್)‌ ಮೀಸಲಿಡಲಾಗುತ್ತದೆ.

ದರ್ಗಾಕ್ಕೆ ಅನೇಕ ಶ್ರೀಮಂತರು ಭೇಟಿ ನೀಡುತ್ತಾರೆ ಎಂದು ಅಮ್ಜದ್ ಹೇಳುತ್ತಾರೆ. ಸಮಾಧಿಗೆ ಹೋಗುವ ರಸ್ತೆಯಲ್ಲಿ ಚಾದರ್ ಮತ್ತು ಚುನರಿಯನ್ನು ಮಾರಾಟ ಮಾಡುವ ಅನೇಕ ಸಣ್ಣ ಅಂಗಡಿಗಳಿವೆ. ಪೂಜಾ ಸ್ಥಳವು ಸದಾ ಅನೇಕರಿಗೆ ಆಹಾರ ಮತ್ತು ಉದ್ಯೋಗವನ್ನು ನೀಡುತ್ತದೆ.

ಇಲ್ಲಿ ಹಜರತ್ ಪೀರ್ ಖಮರ್ ಅಲಿ ದರ್ವೇಶ್ ತಾರತಮ್ಯ ಮಾಡುವುದಿಲ್ಲ. ದರ್ಗಾದ ಮೆಟ್ಟಿಲುಗಳ ಮೇಲೆ, ಜನರ ಕರುಣೆ ಮತ್ತು ಹಣವನ್ನು ಬಯಸುವ ದುರ್ಬಲ ಬಿಕ್ಷುಕರನ್ನು (ಫಕೀರ) ಕಾಣಬಹುದು. ಒಂಬತ್ತು ಗಜಗಳ ಸೀರೆಯನ್ನು ಧರಿಸಿದ ವಯಸ್ಸಾದ ಹಿಂದೂ ಮಹಿಳೆಯೊಬ್ಬರು ಹಜರತ್ ಖಮರ್ ಅಲಿ ದರ್ವೇಶಿಯ ಆಶೀರ್ವಾದ ಪಡೆಯಲು ಬಂದಿದ್ದರು. ಅಂಗವಿಕಲರು, ಅನಾಥರು ಮತ್ತು ಖವ್ವಾಲ್ ಗಾಯಕರು ಎಲ್ಲರೂ ಅವನ ಕರುಣೆಯಲ್ಲಿ ಬದುಕು ನಡೆಸುತ್ತಿದ್ದಾರೆ.

ಆದರೆ ಅಮ್ಜದ್‌ ಭಿಕ್ಷುಕರಲ್ಲ. ಅವರೊಬ್ಬ ಕಲಾವಿದ. ಬೆಳಗ್ಗೆ 11 ಗಂಟೆಗೆ ದರ್ಗಾಕ್ಕೆ ಬಂದು ಸಮಾಧಿಯ ಮುಂದೆ ಜಾಗ ಮಾಡಿಕೊಂಡು ತಮ್ಮ ʼವೇದಿಕೆʼಯನ್ನು ಸ್ಥಾಪಿಸುತ್ತಾರೆ. ನಂತರ ಮೆಲ್ಲಗೆ ಆದರೆ ಸ್ಥಿರವಾಗಿ ಭಕ್ತರ ಬರುವಿಕೆ ಶುರುವಾಗುತ್ತದೆ. ಮಧ್ಯಾಹ್ನದ ಹೊತ್ತಿಗೆ, ಸಮಾಧಿಯ ಸುತ್ತಲಿನ ಬಿಳಿ ಅಮೃತಶಿಲೆ ಮತ್ತು ಗ್ರಾನೈಟ್ ನೆಲವು ಬಿಸಿಯಾಗಿರುತ್ತದೆ. ಭಕ್ತರು ಕಲ್ಲಿನ ಸುಡುವ ಬಿಸಿಯಿಂದ ತಮ್ಮ ಪಾದಗಳನ್ನು ರಕ್ಷಿಸಿಕೊಳ್ಳಲು ಜಿಗಿದು ಓಡುತ್ತಾರೆ. ಇಲ್ಲಿಗೆ ಬರುವವರ ಹಿಂದೂಗಳ ಸಂಖ್ಯೆ ಮುಸ್ಲಿಮರ ಸಂಖ್ಯೆಯನ್ನೇ ಮೀರಿಸುತ್ತದೆ.

ಮಹಿಳೆಯರಿಗೆ ಮಜರ್ (ಸಂತನ ಸಮಾಧಿ) ಬಳಿ ಹೋಗಲು ಅನುಮತಿಯಿಲ್ಲ. ಹೀಗಾಗಿ ಇಲ್ಲಿ ಮುಸ್ಲಿಂ ಮಹಿಳೆಯರು ಸೇರಿದಂತೆ ಅನೇಕರು ಜಗಲಿಯಲ್ಲಿ ಕುಳಿತು ಕಣ್ಣು ಮುಚ್ಚಿ ಕುರಾನಿನ ಆಯತ್ ಪಠಿಸುತ್ತಾರೆ. ಅವರ ಪಕ್ಕದಲ್ಲಿ ಹತ್ತಿರದ ಹಳ್ಳಿಯ ಹಿಂದೂ ಮಹಿಳೆಯ ಮೇಲೆ ಆತ್ಮವೊಂದು ಆಹಾವನೆಯಾಗಿತ್ತು. ಇದನ್ನು "ಪೀರಾಚಾ ವಾರಾ [ಪೀರ್ ನ ಆತ್ಮ]" ಎಂದು ಜನರು ಹೇಳುತ್ತಿದ್ದರು.

PHOTO • Prashant Khunte
PHOTO • Prashant Khunte

ಎಡ : ಪುಣೆ ನಗರದ ಬಳಿಯ ಖೇಡ್ ಶಿವಪುರದಲ್ಲಿರುವ ಪೀ ರ್ ಖಮರ್ ಅಲಿ ದುರ್ವೇಶ್ ದರ್ಗಾ ಒಂದು ಜನಪ್ರಿಯ ಧಾರ್ಮಿಕ ಸ್ಥಳವಾಗಿದ್ದು , ಬಡವರು ಮತ್ತು ಶ್ರೀಮಂತರು ಎನ್ನುವ ಭೇದವಿಲ್ಲದೆ ಜನರು ಭೇಟಿ ನೀಡುತ್ತಾರೆ . ಬಲ : ಮಹಿಳೆಯರಿಗೆ ಮಜರ್ ಬಳಿ ಹೋಗಲು ಅನುಮತಿ ಯಿ ಲ್ಲ , ಹೀಗಾಗಿ ಅವರಲ್ಲಿ ಅನೇಕರು ಹೊರಗೆ ನಿಂತು ಪ್ರಾರ್ಥನೆ ಸಲ್ಲಿಸುತ್ತಾರೆ ʼ

PHOTO • Prashant Khunte

ಅಮ್ಜದ್ ಗೊಂಡ್ ಪ್ರತಿ ತಿಂಗಳು ಇಲ್ಲಿಗೆ ಬರುತ್ತಾರೆ. ಅವರು ಹೇಳುತ್ತಾರೆ, 'ಊಪರ್‌ವಾಲಾ ಭೂಖಾ ನಹೀ ಸುಲಾತಾ! [ಮೇಲಿರುವವನು ಉಪವಾಸ ಮಲಗಲು ಬಿಡುವುದಿಲ್ಲ ]

ಈ ದರ್ಗಾದ ಸಮಾಧಿ ಬಳಿಯಿರುವ ದೀಪದ (ಚಿರಾಗ್) ಎಣ್ಣೆಯು ‌ವಿಷಕಾರಿ ಹಾವು ಅಥವಾ ಚೇಳು ಕಡಿತಕ್ಕೆ ಪ್ರತಿವಿಷವಾಗಿ ಕೆಲಸ ಮಾಡುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಇದು ಇಂತಹ ವಿಷಗಳಿಗೆ ಔಷಧಿ ಲಭ್ಯವಿರದ ಕಾಲದ ನಂಬಿಕೆಯಾಗಿರಬಹುದು. ಈಗ ನಮ್ಮಲ್ಲಿ ಕ್ಲಿನಿಕ್ಕುಗಳಿವೆ ಮತ್ತು ಔಷಧಿಯೂ ಲಭ್ಯವಿದೆ. ಆದರೂ ಈಗಲೂ ಈ ಸೌಲಭ್ಯಗಳನ್ನು ಭರಿಸಲಾಗದ ಜನರೂ ಇದ್ದಾರೆ. ಇದಲ್ಲದೆ ಇಲ್ಲಿಗೆ ಚಿಂತೆಯಲ್ಲಿರುವವರು, ಮಕ್ಕಳಿಲ್ಲದವರು, ಅತ್ತೆಯಿಂದ ಕಿರುಕುಳಕ್ಕೆ ಒಳಗಾದವರು ಹೀಗೆ ಹಲವು ಬಗೆಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ಇಲ್ಲಿಗೆ ಬರುತ್ತಾರೆ. ಜೊತೆಗೆ ತಮ್ಮ ಪ್ರೀತಿಪಾತ್ರರು ಕಾಣೆಯಾಗಿದ್ದರೆ ಅವರನ್ನು ಹುಡುಕಿಕೊಡುವಂತೆ ಪ್ರಾರ್ಥಿಸುವುದಕ್ಕೂ ಜನರು ಇಲ್ಲಿಗೆ ಬರುತ್ತಾರೆ.

ಈ ದರ್ಗಾಕ್ಕೆ ಮಾನಸಿಕ ಅಸ್ವಸ್ಥತೆಯನ್ನು ಹೊಂದಿರುವ ಜನರೂ ಪೀರನ ಆಶೀರ್ವಾದ ಬಯಸಿ ಬರುತ್ತಾರೆ. ಅವರು ಇಲ್ಲಿ ಪ್ರಾರ್ಥಿಸುವಾಗ ಅದಕ್ಕೆ ಅಮ್ಜದ್‌ ಅವರ ರಾಗ ಮತ್ತು ತಾಳದ ಜೊತೆಯೂ ಸಿಗುತ್ತದೆ. ಅವರ ಖವ್ವಾಲಿಯಿಂದಾಗಿ ಇತರೆಡೆಯ ಪ್ರಾರ್ಥನೆಗಳಂತೆ ಇಲ್ಲಿನ ಪ್ರಾರ್ಥನೆಯಲ್ಲೂ ಒಂದು ರೀತಿಯ ಉನ್ಮಾದತೆ ಮೈದಾಳುತ್ತದೆ.

ಅವರು ಎಂದಾದರೂ ಹಾಡುವುದನ್ನು ನಿಲ್ಲಿಸಿದ್ದಿದೆಯೇ? ಅವರ ಕಂಠ ದಣಿದ ದಿನಗಳು ಇವೆಯೇ? ಅವರ ಶ್ವಾಸಕೋಶ ಜೋಡಿ ಜೋಡಿ ಹಾರ್ಮೋನಿಯಂ ಇದ್ದಂತೆ, ಅಮ್ಜದ್‌ ಎರಡು ಹಾಡುಗಳ ನಂತರ ವಿರಾಮ ತೆಗೆದುಕೊಂಡರು. ಆಗ ನಾನು ಅವರ ಬಳಿ ಸಂದರ್ಶನಕ್ಕಾಗಿ ಸಮಯ ಕೋರಿದೆ. “ಮೇರೆ ಕು ಕುಚ್‌ ದೇನಾ ಪಡೇಗಾ ಕ್ಯಾ? [ನಾನು ಏನಾದರೂ ಕೊಡಬೇಕಾಗುತ್ತದೆಯೇ?]” ಎಂದು ಅವರು ತನ್ನ ಬೆರಳಿನಲ್ಲಿ ಹಣದ ಸನ್ನೆ ಮಾಡುತ್ತಾ ಕೇಳಿದರು. ನನ್ನ ಬಳಿ ಉತ್ತರವಿರಲಿಲ್ಲ. ನಾನು ಅವರ ಬಳಿ ಮತ್ತೊಮ್ಮೆ ಸಮಯ ಕೇಳುತ್ತಾ ಹಾಡು ಕೇಳುವುದನ್ನು ಮುಂದುವರೆಸಿದೆ.

ಖವ್ವಾಲಿ ಎಂದರೆ ರೂಹಾನಿ - ಆತ್ಮವನ್ನು ಸ್ಪರ್ಶಿಸುವುದು. ಸೂಫಿ ಸಂಪ್ರದಾಯವು ಅದನ್ನು ಪರಮಾತ್ಮನೊಂದಿಗೆ ಜೋಡಿಸಿತು. ರಿಯಾಲಿಟಿ ಟ್ಯಾಲೆಂಟ್ ಶೋಗಳಲ್ಲಿ ನಾವು ಕೇಳುವ ಖವ್ವಾಲಿ ಮತ್ತೊಂದು ರೀತಿಯದು, ರೂಮಾನಿ ಅಥವಾ ರೊಮ್ಯಾಂಟಿಕ್. ಇದಲ್ಲದೆ ಮೂರನೇ ಬಗೆಯೊಂದಿದೆ. ನಾವು ಅದನ್ನು ಖಾನಾಬದೋಶಿ ಎಂದು ಕರೆಯಬಹುದು. ಇದು ಹೊಟ್ಟೆಪಾಡಿಗಾಗಿ ಅಲೆದಾಡುವ ಅಮ್ಜದ್ ಅವರಂತಹವರನ್ನು ತಲುಪಿತು.

ಅಮ್ಜದ್‌ ಅವರ ದನಿ ಗಾಳಿಯಲ್ಲಿ ಅನುರಣಿಸುತ್ತದೆ.

ತಜ್ದಾರ್‌-ಇ–ಹರಾಮ್‌, ಹೋ ನಿಗಾಹ್‌-ಇ-ಕರಮ್
ಹಮ್‌ ಗರೀಬೋಂ ಕೇ ದಿನ್‌ ಭೀ ಸಂವಾರ್‌ ಜಾಯೇಂಗೆ…
ಆಪ್ಕೆ ದರ್‌ ಸೆ ಖಾಲಿ ಅಗರ್‌ ಜಾಯೇಂಗೆ

ಅಮ್ಜದ್ ಕಂಠದಲ್ಲಿ ಮೊಳಗಿದ ಈ ಹಾಡಿನ ಕೊನೆಯ ಸಾಲು ಆಳವಾದ ಅರ್ಥವನ್ನು ಹೊಂದಿತ್ತು. ನಾನು ಈಗ ಅವರೊಂದಿಗೆ ಮಾತನಾಡಲು ಹೆಚ್ಚು ಉತ್ಸುಕನಾಗಿದ್ದೆ. ಅವರಿಗೆ ತೊಂದರೆ ನೀಡಲು ಬಯಸದೆ ಮರುದಿನ ಸಮಯ ಕೇಳಿದೆ. ಮತ್ತೆ ಮರುದಿನ ದರ್ಗಾಕ್ಕೆ ಹೋದೆ. ಪೀರ್ ಖಮರ್ ಅಲಿ ದರ್ವೇಶ್ ಅವರ ಇತಿಹಾಸದ ಹುಡುಕಾಟದಲ್ಲಿ ಮರುದಿನದವರೆಗೆ ನನ್ನನ್ನು ನಾನು ತೊಡಗಿಸಿಕೊಂಡೆ.

ಅಮ್ಜದ್‌ ಗೊಂಡ್‌, ಖವ್ವಾಲಿ ಗಾಯಕ ವಿಡಿಯೋ ನೋಡಿ

ಅಮ್ಜದ್ ಬೆಳಗ್ಗೆ 11 ಗಂಟೆಗೆ ದರ್ಗಾಕ್ಕೆ ಬಂದು ಸಮಾಧಿಯ ಮುಂದೆ ಜಾಗ ಮಾಡಿಕೊಂಡು ತಮ್ಮ ʼವೇದಿಕೆʼಯನ್ನು ಸ್ಥಾಪಿಸುತ್ತಾರೆ. ನಂತರ ಮೆಲ್ಲಗೆ ಆದರೆ ಸ್ಥಿರವಾಗಿ ಭಕ್ತರ ಬರುವಿಕೆ ಶುರುವಾಗುತ್ತದೆ

*****

ಕಥೆಯ ಪ್ರಕಾರ, ಹಜರತ್ ಖಮರ್ ಅಲಿ ಪುಣೆ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಸಿನ್ಹಗಡ್ ಕೋಟೆಯ ತಪ್ಪಲಿನಲ್ಲಿರುವ ಖೇಡ್ ಶಿವಪುರ ಎಂಬ ಸಣ್ಣ ಹಳ್ಳಿಗೆ ಬಂದರು. ಹಳ್ಳಿಯಲ್ಲಿ ದೆವ್ವದ ಕಾಟದಿಂದ ಬೇಸತ್ತ ಗ್ರಾಮಸ್ಥರು ಹಜರತ್ ಖಮರ್ ಅಲಿ ಅವರ ಬಳಿಗೆ ಹೋಗಿ ಸಹಾಯ ಕೇಳಿದರು. ಈ ಸಂತನು ದೆವ್ವವನ್ನು ಒಂದು ಕಲ್ಲಿನಲ್ಲಿ ಬಂಧಿಸಿ ಶಪಿಸಿದನು: "ತಾ ಖಯಾಮತ್, ಮೇರೆ ನಾಮ್ ಸೇ ಲೋಗ್ ತುಜೆ ಉಠಾ ಕೇ ಪಟಾಕ್ತೇ ರಹೇಂಗೆ, ತೂ ಲೋಗೋಂ ಕೋ ಪರೇಶಾನ್ ಕಿಯಾ ಕರ್ತಾ ಥಾ, ಅಬ್ ಜೋ ಸಾವಲಿ ಮೇರೆ ದರ್ಬಾರ್ ಮೇ ಆಯೆಂಗೆ ವೋಹ್ ತುಜೆ ಮೇರೆ ನಾಮ್ ಸೆ ಪಟಾಕೇಂಗೆ! [ಅಂತಿಮ ತೀರ್ಮಾನದ ದಿನದವರೆಗೂ ಜನರು ನಿನ್ನನ್ನು ನೆಲದ ಮೇಲೆ ಕುಕ್ಕುತ್ತಲೇ ಇರುತ್ತಾರೆ. ಇಂದಿನವರೆಗೆ ನೀನು ಜನರಿಗೆ ತೊಂದರೆ ಕೊಡುತ್ತಿದ್ದೆ, ಈಗ ನನ್ನ ಆಶೀರ್ವಾದ ಪಡೆದ ಜನರು ನಿನ್ನನ್ನು ನೆಲಕ್ಕೆ ಹಾಕಿ ಕುಕ್ಕುವರು.]”

ಸಮಾಧಿಯ ಮುಂಭಾಗದಲ್ಲಿರುವ ಕಲ್ಲು 90 ಕಿಲೋಗಿಂತ ಹೆಚ್ಚು ತೂಕವಿದೆ ಮತ್ತು ಸರಿಸುಮಾರು 11 ಜನರ ಗುಂಪು ಅದನ್ನು ಕೇವಲ ಒಂದು ಬೆರಳಿನಿಂದ ಎತ್ತಬಹುದು. ಅವರು 'ಯಾ ಖಮರ್ ಅಲಿ ದರ್ವೇಶ್' ಎಂದು ದೊಡ್ಡ ಧ್ವನಿಯಲ್ಲಿ ಕೂಗುತ್ತಾ, ತಮ್ಮೆಲ್ಲಾ ಶಕ್ತಿ ಬಳಸಿ ಕಲ್ಲಿಗೆ ಹೊಡೆಯುತ್ತಾರೆ.

ಇಲ್ಲಿನ ಅನೇಕ ಊರುಗಳಲ್ಲಿ ದರ್ಗಾಗಳಿವೆ ಆದರೆ ಅವುಗಳಲ್ಲಿ ಕೆಲವೇ ಕೆಲವು ಖೇಡ್ ಶಿವಪುರದಲ್ಲಿನ ಈ ದರ್ಗಾದಷ್ಟು ಜನಸಂದಣಿಯನ್ನು ಹೊಂದಿರುತ್ತವೆ. ಈ ಭಾರವಾದ ಕಲ್ಲಿನ ಅದ್ಭುತವು ಹೆಚ್ಚಿನ ಜನರನ್ನು ಇಲ್ಲಿಗೆ ತರುತ್ತದೆ; ಈ ಜನಸಂದಣಿಯಿಂದಾಗಿ ಅಮ್ಜದ್ ಅವರಂತಹ ಅನೇಕರಿಗೆ ಒಂದಿಷ್ಟು ಹೆಚ್ಚು ಸಂಪಾದಿಸಲು ಉತ್ತಮ ಅವಕಾಶವನ್ನು ಒದಗಿಸುತ್ತದೆ. ಇಲ್ಲಿನ ಔಲಿಯಾ ಮಕ್ಕಳಿಲ್ಲದವರಿಗೆ ಮಗುವಾಗುಂತೆ ಆಶೀರ್ವದಿಸುತ್ತದೆ ಎಂದು ಭಕ್ತರು ನಂಬುತ್ತಾರೆ. "ನಾವು ಗಿಡಮೂಲಿಕೆ ಔಷಧಿಗಳನ್ನು ಸಹ ನೀಡುತ್ತೇವೆ ಮತ್ತು ಮಕ್ಕಳಿಲ್ಲದಿರುವ ಸಮಸ್ಯೆಯನ್ನು ಗುಣಪಡಿಸುತ್ತೇವೆ" ಎಂದು ಅಮ್ಜದ್ ಹೇಳಿದರು.

PHOTO • Prashant Khunte

ಪೀರ್ ಖಮರ್ ಅಲಿ ದರ್ವೇಶ್ ದರ್ಗಾದಲ್ಲಿರುವ ಸುಮಾರು 90 ಕೆಜಿ ತೂಕದ ಕಲ್ಲನ್ನು ಜನರ ಗುಂಪು ಎತ್ತಿ ನೆಲಕ್ಕೆ ಬಡಿಯುತ್ತದೆ. ಇದೊಂದು ಇಲ್ಲಿನ ಅನೇಕ ದರ್ಗಾಗಳಲ್ಲಿ ಕಂಡುಬರುವ ಆಚರಣೆ

*****

ಅದೇ ಆವರಣದಲ್ಲಿ ಮಸೀದಿ ಮತ್ತು ಅದರ ಪಕ್ಕದಲ್ಲಿ ವಜೂಖಾನಾವಿದೆ. ಅಮ್ಜದ್ ಅಲ್ಲಿಗೆ ಹೋಗಿ, ಕೈಕಾಲುಗಳನ್ನು ಚೆನ್ನಾಗಿ ತೊಳೆದು, ತನ್ನ ಕೂದಲನ್ನು ತುರುಬು ಕಟ್ಟಿ, ಕಿತ್ತಳೆ ಬಣ್ಣದ ಸ್ಕಲ್ ಟೋಪಿ ಧರಿಸಿ ಮಾತನಾಡಲು ಪ್ರಾರಂಭಿಸಿದರು. "ನಾನು ಪ್ರತಿ ತಿಂಗಳು ಕನಿಷ್ಠ ಒಂದು ವಾರವಾದರೂ ಇಲ್ಲಿಗೆ ಬಂದು ಇರುತ್ತೇನೆ." ಬಾಲ್ಯದಲ್ಲಿ ಇಲ್ಲಿಗೆ ನಿಯಮಿತವಾಗಿ ಬರುತ್ತಿದ್ದ ತನ್ನ ತಂದೆಯೊಂದಿಗೆ ಅವರು ಬರುತ್ತಿದ್ದರು. "ನನ್ನ ಅಬ್ಬಾ [ತಂದೆ] ನನ್ನನ್ನು ಮೊದಲ ಬಾರಿಗೆ ಇಲ್ಲಿಗೆ ಕರೆತಂದಾಗ ನನಗೆ 10 ಅಥವಾ 15 ವರ್ಷ ವಯಸ್ಸಿರಬಹುದು. ಈಗ ನನಗೆ 30 ವರ್ಷ ದಾಟಿದೆ ಮತ್ತು ಕೆಲವೊಮ್ಮೆ ನಾನು ನನ್ನ ಮಗನನ್ನು ಸಹ ಇಲ್ಲಿಗೆ ಕರೆತರುತ್ತೇನೆ" ಎಂದು ಅವರು ಹೇಳುತ್ತಾರೆ.

ದರ್ವೇಶಿ ಸಮುದಾಯದ ಕೆಲವರು ದರ್ಗಾದ ನೆಲಮಾಳಿಗೆಯಲ್ಲಿ ಚಾಪೆಯ ಮೇಲೆ ಮಲಗಿದ್ದರು. ಅಮ್ಜದ್ ಕೂಡ ತನ್ನ ಚೀಲವನ್ನು ಗೋಡೆಯ ಬಳಿ ಇಟ್ಟಿದ್ದರು. ಅವರು ಅದರಲ್ಲಿದ್ದ ಚಾಪೆಯನ್ನು ಹೊರತೆಗೆದು ನೆಲದ ಮೇಲೆ ಹರಡಿದರು. ಅವರ ಮನೆ ಜಲ್ಗಾಂವ್ ಜಿಲ್ಲೆಯ ಪಚೋರಾದ ಗೊಂಡ್ ಬಸ್ತಿಯಲ್ಲಿದೆ ಎಂದು ಹೇಳಿದರು.

ಅಮ್ಜದ್ ತನ್ನನ್ನು ಹಿಂದೂ ಅಥವಾ ಮುಸ್ಲಿಂ ಎಂದು ಗುರುತಿಸಿಕೊಳ್ಳುವ ವಿಚಾರದಲ್ಲಿ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಅವರ ಕುಟುಂಬದ ಬಗ್ಗೆ ಕೇಳಿದೆ. "ನನ್ನ ತಂದೆ ಮತ್ತು ಇಬ್ಬರು ತಾಯಂದಿರು. ನಾವು ನಾಲ್ವರು ಸಹೋದರರು. ಗಂಡು ಮಕ್ಕಳಲ್ಲಿ ನಾನೇ ಹಿರಿಯವನು. ನನ್ನ ನಂತರ, ಶಾರುಖ್, ಸೇಠ್ ಮತ್ತು ಕಿರಿಯವನು ಬಾಬರ್. ನಾನು ಐದು ಹೆಣ್ಣು ಮಕ್ಕಳ ನಂತರ ಜನಿಸಿದೆ. ನಾನು ಅವರ ಮುಸ್ಲಿಂ ಹೆಸರುಗಳ ಬಗ್ಗೆ ಕೇಳಿದಾಗ, "ನಾವು ಗೊಂಡರು ಹಿಂದೂ ಮತ್ತು ಮುಸ್ಲಿಂ ಹೆಸರುಗಳನ್ನು ಹೊಂದಿದ್ದೇವೆ. ನಮಗೆ ಯಾವುದೇ ಧರ್ಮವಿಲ್ಲ. ನಮಗೆ ಜಾತಿಯಲ್ಲಿ ನಂಬಿಕೆ ಇಲ್ಲ. ಹಮಾರಾ ಧರಮ್ ಕುಚ್ ಅಲ್ಲಾಗಚ್ ಹೈ [ನಮ್ಮ ಧರ್ಮ ಸ್ವಲ್ಪ ಬೇರೆ ರೀತಿಯದು]. ನಾವು ರಾಜಗೊಂಡರು" ಎಂದು ಹೇಳಿದರು.

ಸುಮಾರು 300 ವರ್ಷಗಳ ಹಿಂದೆ, ರಾಜಗೊಂಡ್ ಆದಿವಾಸಿಗಳ ಒಂದು ವಿಭಾಗವು ಇಸ್ಲಾಂಗೆ ಮತಾಂತರಗೊಂಡಿತು ಎಂದು ಸಾರ್ವಜನಿಕ ವಿಭಾಗದಲ್ಲಿರುವ ಮಾಹಿತಿಯು ಹೇಳುತ್ತದೆ. ಅವರನ್ನು ಮುಸಲ್ಮಾನ/ ಮುಸ್ಲಿಂ ಗೊಂಡ್ ಎಂದು ಕರೆಯಲಾಗುತ್ತಿತ್ತು. ಮಹಾರಾಷ್ಟ್ರದ ನಾಗ್ಪುರ ಮತ್ತು ಜಲ್ಗಾಂವ್ ಜಿಲ್ಲೆಗಳಲ್ಲಿ ಈ ಮುಸ್ಲಿಂ ಗೊಂಡ್ ಸಮುದಾಯದ ಕೆಲವು ಸದಸ್ಯರನ್ನು ಭೇಟಿ ಮಾಡಬಹುದು. ಆದರೆ ಅಮ್ಜದ್ ಅವರಿಗೆ ಈ ಇತಿಹಾಸದ ಬಗ್ಗೆ ತಿಳಿದಿಲ್ಲ.

"ನಾವು ಮುಸ್ಲಿಮರನ್ನು ಮದುವೆಯಾಗುವುದಿಲ್ಲ. ಗೊಂಡರಲ್ಲಿ ಮಾತ್ರ ಆಗುತ್ತೇವೆ. ನನ್ನ ಹೆಂಡತಿ ಚಂದಾನಿ ಗೊಂಡ್" ಎಂದು ಅವರು ಮಾತು ಮುಂದುವರಿಸುತ್ತಾರೆ. "ನನ್ನ ಹೆಣ್ಣುಮಕ್ಕಳು ಲಾಜೊ, ಆಲಿಯಾ ಮತ್ತು ಅಲಿಮಾ. ಅವರೆಲ್ಲರೂ ಗೊಂಡ್, ಅಲ್ಲವೇ?" ಹೆಸರುಗಳ ಆಧಾರದ ಮೇಲೆ ಧರ್ಮವನ್ನು ಗುರುತಿಸಬಹುದು ಎನ್ನುವುದನ್ನು ಅಮ್ಜದ್ ಒಪ್ಪುವುದಿಲ್ಲ. ಅವರು ತನ್ನ ಸಹೋದರಿಯರ ಬಗ್ಗೆ ನನಗೆ ಹೇಳತೊಡಗಿದರು. "ನನ್ನ ಹಿರಿಯಕ್ಕ ನಿಶೋರಿ, ನಂತರದವಳು ರೇಷ್ಮಾ. ಸೌಸಲ್ ಮತ್ತು ದಿಡೋಲಿ ರೇಷ್ಮಾಳಿಗಿಂತ ಕಿರಿಯರು. ನೋಡಿ ಇವೆಲ್ಲವೂ ಗೊಂಡ್ ಹೆಸರುಗಳು. ಆದರೆ ಕಿರಿಯವಳು ಮೇರಿ. ಯೇ ನಾಮ್ ತೋ ಕಿರಿಶ್ಚನ್ ಮೇ ಆತಾ ಹೈನ್ [ಇದು ಕ್ರಿಶ್ಚಿಯನ್ ಹೆಸರು]. ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಮಗೆ ಇಷ್ಟವಾದದ್ದನ್ನು ನಾವು ಬಳಸುತ್ತೇವೆ." ನಿಶೋರಿಗೆ 45 ವರ್ಷ, ಮತ್ತು ಕಿರಿಯ ಮೇರಿಗೆ ಈಗ ಮೂವತ್ತರ ಹರೆಯ. ಅವರೆಲ್ಲರೂ ಗೊಂಡ್ ಸಮುದಾಯದ ಹುಡುಗರನ್ನು ಮದುವೆಯಾಗಿದ್ದಾರೆ. ಅವರಲ್ಲಿ ಯಾರೂ ಶಾಲೆಗೆ ಹೋಗಿಲ್ಲ.

ಅಮ್ಜದ್ ಅವರ ಪತ್ನಿ ಚಂದಾನಿಯವರೂ ಅನಕ್ಷರಸ್ಥರು. ಅವರ ಹೆಣ್ಣುಮಕ್ಕಳ ಶಾಲಾ ಶಿಕ್ಷಣದ ಬಗ್ಗೆ ಕೇಳಿದಾಗ, "ನನ್ನ ಹೆಣ್ಣುಮಕ್ಕಳು ಸರ್ಕಾರಿ ಶಾಲೆಗೆ ಹೋಗುತ್ತಾರೆ. ಆದರೆ ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅಷ್ಟು ಪ್ರೋತ್ಸಾಹವಿಲ್ಲ."

PHOTO • Prashant Khunte
PHOTO • Prashant Khunte

ಅಮ್ಜದ್ ಗೊಂಡ್ ಮಹಾರಾಷ್ಟ್ರದ ಪಚೋರಾ ನಿವಾಸಿ. ಮುಸ್ಲಿಂ ಹೆಸರು ಮತ್ತು ನೋಟವನ್ನು ಹೊಂದಿರುವ ರಾಜಗೊಂಡ್ ಆದಿವಾಸಿಯಾದ ಅವರು ಧಾರ್ಮಿಕ ವಿಭಜನೆಗಳನ್ನು ನಂಬುವುದಿಲ್ಲ

"ನನ್ನ ಒಬ್ಬ ಮಗನ ಹೆಸರು ನವಾಜ್ ಮತ್ತು ಇನ್ನೊಬ್ಬನ ಹೆಸರು ಗರೀಬ್!" ಖ್ವಾಜಾ ಮೊಯಿನುದ್ದೀನ್ ಚಿಸ್ತಿಯನ್ನು 'ಗರೀಬ್ ನವಾಜ್' ಎಂದು ಕರೆಯಲಾಗುತ್ತದೆ, ಬಡವರ ರಕ್ಷಕ ಎಂದು ಇದರರ್ಥ. ಅಮ್ಜದ್ ತನ್ನ ಮಕ್ಕಳಿಗೆ ಹೆಸರಿಡಲು ಈ ಎರಡು ಪದಗಳನ್ನು ಬಳಸಿದ್ದಾರೆ. "ನವಾಜ್ ಒಬ್ಬನೇ ಅಲ್ಲ! ಆದರೆ ಗರೀಬ್ ಕೂಡಾ ಚೆನ್ನಾಗಿ ಓದಬೇಕು. ಹಾಗೆ ಓದಿಸುತ್ತೇನೆ. ನಾನು ಅವನನ್ನು ನನ್ನಂತೆ ಅಲೆಮಾರಿಯನ್ನಾಗಿ ಮಾಡುವುದಿಲ್ಲ!" ಎಂಟು ವರ್ಷದ ಗರೀಬ್‌ ಈಗ 3ನೇ ತರಗತಿಯಲ್ಲಿ ಓದುತ್ತಿದ್ದಾನೆ. ಆದರೆ ಈ ಹುಡುಗ ತನ್ನ ಖವ್ವಾಲ್ ತಂದೆಯೊಂದಿಗೆ ಅಲೆದಾಡುತ್ತಾನೆ.

ಅವರ ಕುಟುಂಬದ ಗಂಡಸರೆಲ್ಲರೂ ಖವ್ವಾಲಿಯನ್ನೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ.

“ನಿಮಗೆ ಗೊತ್ತಾ, ನಾವು ಗೊಂಡರು ಯಾವ ವಸ್ತುವನ್ನು ಬೇಕಿದ್ದರೂ ಮಾರಬಲ್ಲೆವು. ಯಾವ ಮಟ್ಟಿಗೆಂದರೆ ಒಂದು ಹಿಡಿ ಜೇಡಿ ಮಣ್ಣನ್ನು ಕೂಡಾ. ನಾವು ಖರ್ಜೂರ ಕೂಡ ಮಾಡುತ್ತೇವೆ. ಘರ್‌ ಸೇ ನಿಕಲ್‌ ಗಯಾ ತೋ ಹಜಾರ್‌ - ಪಾಂಚ್‌ ಸೋ ಕಮಾಕೇಯೀಚ್‌ ಲಾತೇಂ [ನಾವು ಮನೆಯಿಂದ ಹೊರಟೆವು ಎಂದರೆ 1,000 ಅಥವಾ 500 ಸಂಪಾದನೆ ಮಾಡಿಕೊಂಡೇ ಬರುತ್ತೇವೆ]” ಎನ್ನುತ್ತಾರೆ ಅಮ್ಜದ್.‌ “ಜನರು ಹಣವನ್ನು ಹಾಳು ಮಾಡುತ್ತಾರೆ. ಉಳಿತಾಯ ಮಾಡುವುದಿಲ್ಲ ಎಂದು ಅವರು ದೂರುತ್ತಾರೆ. ನಮಗೆ ನಿರ್ದಿಷ್ಟ ಉದ್ಯೋಗವೆಂದಿಲ್ಲ. ನಮ್ಮವರು ಯಾವುದೇ ರೀತಿಯ ಸೇವೆಗಳಲ್ಲಿ ತೊಡಗಿಕೊಂಡಿಲ್ಲ.”

ಸ್ಥಿರವಾದ ಆದಾಯದ ಮೂಲ ಅಥವಾ ಉದ್ಯೋಗದ ಸಂಪೂರ್ಣ ಕೊರತೆಯನ್ನು ನಿಭಾಯಿಸುವ ಸಲುವಾಗಿ ಅಮ್ಜದ್‌ ಅವರ ತಂದೆ ಖವ್ವಾಲಿ ಹಾಡಿಕೆಯತ್ತ ವಾಲಿದರು. “ಅಜ್ಜನ ಹಾಗೆ ಅಪ್ಪನೂ ಗಿಡಮೂಲಿಕೆಗಳು ಹಾಗೂ ಖರ್ಜೂರದ ವ್ಯಾಪಾರ ಮಾಡುತ್ತ ಊರೂರು ಅಲೆಯುತ್ತಿದ್ದರು. ಅವರಿಗೆ ಸಂಗೀತವೆಂದರೆ ಇಷ್ಟ. ಹೀಗಾಗಿ ಅವರು ಖವ್ವಾಲಿಯ ದಾರಿಗೆ ಬಂದರು. ನಾನು ಅಪ್ಪ ಹೋದಲ್ಲೆಲ್ಲ ಹೋಗುತ್ತಿದ್ದೆ. ಅಪ್ಪ ನಿಧಾನವಾಗಿ ಕಾರ್ಯಕ್ರಮಗಳಲ್ಲಿ ಹಾಡತೊಡಗಿದರು, ಅವರನ್ನು ನೋಡಿ ನಾನೂ ಸಹ ಈ ಕಲೆಯನ್ನು ಕಲಿತೆ.”

“ನೀವು ಶಾಲೆಗೆ ಹೋಗಿಲ್ಲವೆ?” ನಾನು ಕೇಳಿದೆ.

ಅಮ್ಜಜ್‌ ಸುಣ್ಣದ (ಚುನಾ) ಪ್ಯಾಕೆಟ್‌ ಒಂದನ್ನು ಹೊರತೆಗೆದು ಅದನ್ನು ಒಂದು ಬೆರಳು ಹೋಗುವಷ್ಟು ಅಗಲಕ್ಕೆ ತೆರೆದು ಒಂದಷ್ಟು ಸುಣ್ಣವನ್ನು ನಾಲಗೆಗೆ ತಾಕಿಸುತ್ತಾ ಮಾತು ಮುಂದುವರೆಸಿದರು, “ನಾನು 2 ಅಥವಾ 3ನೇ ತರಗತಿಯ ತನಕ ಶಾಲೆಗೆ ಹೋಗಿದ್ದೆ. ಅದರ ನಂತರ ಹೋಗಲಿಲ್ಲ. ಆದರೆ ನನಗೆ ಬರೆಯಲು ಮತ್ತು ಓದಲು ಬರುತ್ತದೆ.” ಇನ್ನಷ್ಟು ಓದಿದ್ದರೆ ಬದುಕು ಬೇರೆ ರೀತಿಯಿರುತ್ತಿತ್ತು ಎನ್ನುವ ಭಾವನೆ ಅವರಲ್ಲಿದೆ. ಶಾಲೆ ಬಿಟ್ಟ ಕುರಿತು ಅವರಿಗೆ ವಿಷಾದವಿದೆ. “ಉಸ್ಕೇ ವಜಾಹ್‌ ಸೇ ಹಮ್‌ ಪೀಚೆ ಹೈ [ಅದೇ ಕಾರಣಕ್ಕೆ ನಾನು ಬದುಕಿನಲ್ಲಿ ಹಿಂದುಳಿದೆ]” ಎಂದು ಅವರು ಹೇಳುತ್ತಾರೆ. ಇದು ಅಮ್ಜದ್‌ ಅವರ ಅಣ್ಣ-ತಮ್ಮಂದಿರ ವಿಷಯದಲ್ಲೂ ಸತ್ಯ. ಅವರಲ್ಲಿ ಎಲ್ಲರೂ ಶಾಲೆಗೆ ಓದು ಬರಹ ಕಲಿಯುವಷ್ಟರ ಮಟ್ಟಿಗಷ್ಟೇ ಶಾಲೆಗೆ ಹೋಗಿದ್ದಾರೆ. ಅಷ್ಟೇ ನಂತರ ಕೆಲಸ ಅವರನ್ನು ಓದಿನಿಂದ ದೂರ ಮಾಡಿತು.

PHOTO • Prashant Khunte

ಖವ್ವಾಲಿ ಹಾಡುವ ಅವರ ದನಿ ಬಹಳ ದೊಡ್ಡ ಸ್ತರದಲ್ಲಿದೆ ಮತ್ತು ಸ್ಪಷ್ಟವಾಗಿದೆ. ಯಾವುದೇ ಧ್ವನಿವರ್ದಕದ ಸಹಾಯವಿಲ್ಲದೆ ಅವರ ಹಾಡು ದರ್ಗಾದ ಗುಮ್ಮಟದಲ್ಲಿ ಅನುರಣಿಸುತ್ತದೆ

“ನಮ್ಮ ಊರಿನಲ್ಲಿ 50 ಗೊಂಡ್ ಕುಟುಂಬಗಳಿವೆ. ಉಳಿದವರೆಲ್ಲರೂ ಹಿಂದೂಗಳು, ಮುಸಲ್ಮಾನರು ಮತ್ತು 'ಜೈ ಭೀಮ್' (ದಲಿತರು). ಅವರೆಲ್ಲರೂ ಅಲ್ಲಿದ್ದಾರೆ" ಎಂದು ಅಮ್ಜದ್ ಹೇಳುತ್ತಾರೆ. "ನಮ್ಮನ್ನು ಹೊರತುಪಡಿಸಿ ಈ ಎಲ್ಲಾ ಸಮುದಾಯಗಳಲ್ಲಿ ವಿದ್ಯಾವಂತ ಜನರನ್ನು ನೀವು ಕಾಣಬಹುದು. ಆದರೆ ನನ್ನ ಸೋದರಳಿಯ ಓದಿದ್ದಾನೆ. ಅವನ ಹೆಸರು ಶಿವ." ಶಿವ 15 ಅಥವಾ 16ನೇ ವಯಸ್ಸಿನ ತನಕ ಶಾಲೆಗೆ ಹೋಗಿದ್ದಾರೆ. ಮುಂದೆ ಅವರು ಸೈನ್ಯಕ್ಕೆ ಸೇರಲು ಬಯಸಿದ್ದರು. ಆದರೆ ಆ ಕನಸು ಕೈಗೂಡಲಿಲ್ಲ. ಈಗ ಅವರು ಪೊಲೀಸ್‌ ಉದ್ಯೋಗ ಗಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅಮ್ಜದ್‌ ಅವರ ಕುಟುಂಬದಲ್ಲಿ ಕನಿಷ್ಢ ಒಬ್ಬ ಯುವಕನಾದರೂ ವೃತ್ತಿ ಮತ್ತು ಶಿಕ್ಷಣದ ಬಗ್ಗೆ ಯೋಚಿಸುತ್ತಿದ್ದಾನೆ.

ಅಮ್ಜದ್‌ ಕೂಡಾ ವೃತ್ತಿ ಬದುಕನ್ನು ಹೊಂದಿದ್ದಾರೆ. ನಾವು ಕೆಜಿಎನ್ ಖವ್ವಾಲಿ ಪಾರ್ಟಿ ಎಂಬ ಪಕ್ಷವನ್ನು ಹೊಂದಿದ್ದೇವೆ." ಕೆಜಿಎನ್ ಎಂದರೆ ಖ್ವಾಜಾ ಗರೀಬ್ ನವಾಜ್. ಅವರು ಇದನ್ನು ತಮ್ಮ ಸಹೋದರರೊಂದಿಗೆ ಪ್ರಾರಂಭಿಸಿದ್ದಾರೆ. ಅವರು ಮದುವೆಗಳು ಮತ್ತು ಇತರ ಸಮಾರಂಭಗಳಲ್ಲಿ ಪ್ರದರ್ಶನ ನೀಡುತ್ತಾರೆ. “ನೀವು ಎಷ್ಟು ಸಂಪಾದಿಸುತ್ತೀರಿ?” ಎಂದು ನಾನು ಕೇಳಿದೆ. "ಇದು ಸಂಘಟಕರ ಮೇಲೆ ಅವಲಂಬಿತವಾಗಿರುತ್ತದೆ. ನಾವು 5,000 ರೂಪಾಯಿಯಿಂದ 10,000 ರೂಪಾಯಿಗಳ ತನಕ ಸಿಗುತ್ತದೆ. ಪ್ರೇಕ್ಷಕರು ಸಹ ಸ್ವಲ್ಪ ಹಣವನ್ನು ನೀಡುತ್ತಾರೆ. ಒಟ್ಟಾರೆಯಾಗಿ ನಾವು ಒಂದು ಕಾರ್ಯಕ್ರಮಕ್ಕೆ ಸುಮಾರು 15,000 ದಿಂದ 20,000 ರೂಪಾಯಿಗಳ ತನಕ ಗಳಿಸುತ್ತೇವೆ" ಎಂದು ಅಮ್ಜದ್ ಹೇಳುತ್ತಾರೆ. ಗಳಿಸಿದ ಹಣವನ್ನು ತಂಡದ ಸದಸ್ಯರ ನಡುವೆ ಹಂಚಿಕೊಳ್ಳಲಾಗುತ್ತದೆ. ಒಬ್ಬೊಬ್ಬರಿಗೆ 2,000-3,000 ರೂಪಾಯಿಗಿಂತ ಹೆಚ್ಚು ಸಿಗುವುದಿಲ್ಲ. ಮದುವೆ ಸೀಜನ್‌ ಮುಗಿದರೆ ಕಾರ್ಯಕ್ರಮಗಳು ಸಿಗುವುದಿಲ್ಲ. ಇದರ ನಂತರ ಅಮ್ಜದ್ ಪುಣೆಗೆ ಬರುತ್ತಾನೆ.

ಇಲ್ಲಿನ ಖೇಡ್ ಶಿವಪುರದ ಹಜರತ್ ಖಮರ್ ಅಲಿ ದರ್ವೇಶ್ ದರ್ಗಾದಲ್ಲಿ ಅವರಿಗೆ ಸದಾ ಒಂದಷ್ಟು ಹಣ ಸಿಗುತ್ತದೆ. ಅವರು ರಾತ್ರಿಯನ್ನು ನೆಲ ಮಾಳಿಗೆಯಲ್ಲಿ ಕಳೆಯುತ್ತಾರೆ. ಊಪರ್‌ ವಾಲಾ ಭೂಖಾ ನಹೀ ಸುಲಾತ [ದೇವರು ಖಾಲಿ ಹೊಟ್ಟೆಯಲ್ಲಿ ಮಲಗಿಸುವುದಿಲ್ಲ]” ತಮ್ಮ ಬಯಕೆ ಈಡೇರಿದಾಗ ಹರಕೆ ತೀರಿಸುವ ಸಲುವಾಗಿ ಅನೇಕರು ಇಲ್ಲಿ ಹಬ್ಬದೂಟ ಮಾಡಿಸುತ್ತಾರೆ ಅಥವಾ ಏನಾದರೂ ಆಹಾರವನ್ನು ಹಂಚುತ್ತಾರೆ. ಅವರು ಇಲ್ಲಿ ಒಂದು ವಾರ ಉಳಿದುಕೊಂಡು ಖವ್ವಾಲಿ ಹಾಡುತ್ತಾರೆ. ನಂತರ ಆ ವಾರದ ಗಳಿಕೆಯೊಂದಿಗೆ ಊರಿಗೆ ತೆರಳುತ್ತಾರೆ. ಇದು ಅವರ ದಿನಚರಿ. ಗಳಿಕೆಯ ಕುರಿತಾಗಿ ಕೇಳಿದಾಗ 10,000 - 20,000 ರೂಪಾಯಿಗಳ ನಡುವೆ ಇರುತ್ತದೆ ಎನ್ನುತ್ತಾರೆ ಅಮ್ಜದ್.‌ “ಆದರೆ ದುರಾಸೆ ಇರಬಾರದು. ಹೆಚ್ಚು ಹಣ ಸಂಪಾದಿಸಿ ಎಲ್ಲಿ ಇಡುತ್ತೀರಿ? ಹೀಗಾಗಿ ನಾನು ಏನೇ ಸಂಪಾದನೆ ಸಿಕ್ಕರೂ ಅದರೊಂದಿಗೆ ಊರಿಗೆ ಮರಳುತ್ತೇನೆ” ಎಂದು ಅವರು ಹೇಳುತ್ತಾರೆ.

“ಇದು ಬದುಕು ನಡೆಸಲು ಸಾಕಾಗುತ್ತದೆಯೇ? ಎಂದು ನಾನು ಕೇಳಿದೆ. “ಹಾಂ, ಚಲ್‌ ಜಾತಾ ಹೈ [ಹೇಗೋ ನಡೆಯುತ್ತದೆ]. ನಾನು ಊರಿಗೆ ಹೋದವ ಅಲ್ಲೂ ಕೆಲಸ ಮಾಡುತ್ತೇನೆ” ಎಂದು ಅವರು ಹೇಳಿದರು. ನನಗೆ ಅವರು ಊರಿನಲ್ಲಿ ಏನು ಕೆಲಸ ಮಾಡಬಹುದೆನ್ನುವ ಕುತೂಹಲ ಮೂಡಿತು. ಏಕೆಂದರೆ ಅವರ ಬಳಿ ಸ್ವಂತ ಜಮೀನು ಅಥವಾ ಬೇರೆ ಆಸ್ತಿ ಇಲ್ಲ.

ಅಮ್ಜದ್‌ ನನ್ನ ಅನುಮಾನವನ್ನು ಪರಿಹರಿಸುತ್ತಾ, “ರೇಡಿಯಂ ಕೆಲಸ. ನಾನು ಆರ್‌ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ಕಚೇರಿ ಬಳಿ ಹೋಗಿ ಗಾಡಿಗಳ ಮೇಲೆ ಹೆಸರು ಮತ್ತು ನಂಬರ್‌ ಪ್ಲೇಟ್‌ ಬರೆಯುವ ಕೆಲಸ ಮಾಡುತ್ತೇನೆ” ಎಂದು ವಿವರಿಸಿದರು. “ಖವ್ವಾಲಿ ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ಖಾಲಿ ಕೂರಬೇಕಿತ್ತು. ಹೀಗಾಗಿ ನಾನು ಇನ್ನೇನಾದರೂ ಕೆಲಸ ಮಾಡಲು ತೀರ್ಮಾನಿಸಿದೆ.ಚೀಲದಲ್ಲಿ ಒಂದಷ್ಟು ರೇಡಿಯಂ ಪೇಂಟ್‌ ಇಟ್ಟುಕೊಂಡು ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಅವುಗಳನ್ನು ಮದುಮಗಳಂತೆ ಸಿಂಗರಿಸತೊಡಗಿದೆ.” ಇದು ಅವರ ಉಪ ಉದ್ಯೋಗವಾಗಿದ್ದು, ಬೀದಿಯಲ್ಲಿ ಕಲೆಯನ್ನು ಬಳಸಿ ಒಂದಷ್ಟು ಸಂಪಾದನೆ ಮಾಡುತ್ತಾರೆ.

PHOTO • Prashant Khunte
PHOTO • Prashant Khunte

ಸಣ್ಣವರಿದ್ದಾಗ ತಂದೆಯೊಂದಿಗೆ ಅಲೆಯುತ್ತಿದ್ದ ಕಾರಣ ಅಮ್ಜದ್‌ ಶಾಲೆಯಿಂದ ದೂರವುಳಿದರು

ಕೆಲವೇ ಕೆಲವು ಹೊಟ್ಟೆಪಾಡಿನ ಆಯ್ಕೆಗಳು ಮತ್ತು ಅವರ ಕಲೆಯನ್ನು ಮೆಚ್ಚುವವರು ಸಹ ಕೆಲವೇ ಕೆಲವರು ಇರುವುದರಿಂದಾಗಿ ಅಮ್ಜದ್‌ ಅವರ ಸಮುದಾಯಕ್ಕೆ ನೆಚ್ಚಿಕೊಳ್ಳಲು ಅಂತಹ ಆಯ್ಕೆಗಳೇನೂ ಇಲ್ಲ. ಆದರೆ ಈಗೀಗ ಒಂದಷ್ಟು ಬದಲಾವಣೆ ಕಾಣುತ್ತಿದೆ. ಪ್ರಜಾಪ್ರಭುತ್ವವು ಅವರ ಬದುಕಿನಲ್ಲಿ ಭರವಸೆಯ ಕಿರಣವನ್ನು ತಂದಿದೆ. "ನನ್ನ ತಂದೆ ಸರಪಂಚ್ [ಗ್ರಾಮದ ಮುಖ್ಯಸ್ಥ]" ಎಂದು ಅವರು ಹೇಳುತ್ತಾರೆ. "ಅವರು ಹಳ್ಳಿಗಾಗಿ ಅನೇಕ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಈ ಮೊದಲು ನಮ್ಮಲ್ಲಿ ಕೇವಲ ಮಣ್ಣಿನ ದಾರಿಗಳಿದ್ದವು, ಆದರೆ ಅವರು ರಸ್ತೆಯನ್ನು ನಿರ್ಮಿಸಿದರು."

ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿನ ಆದಿವಾಸಿ ಮೀಸಲಾತಿ ಇದನ್ನು ಸಾಧ್ಯವಾಗಿಸಿದೆ. ಅಮ್ಜದ್ ತನ್ನ ಸ್ವಂತ ಜನರ ಬಗ್ಗೆ ಅಸಮಾಧಾನವನ್ನು ಹೊಂದಿದ್ದಾರೆ. "ಜನರು ಸರಪಂಚರನ್ನು ಮೀರಬೇಕೇ? ನನ್ನ ಜನರು ಅದನ್ನು ಮಾಡುತ್ತಾರೆ. ಕೈಯಲ್ಲಿ ಸ್ವಲ್ಪ ಬಂದರೆ ಸಾಕು, ಕೋಳಿ ಮತ್ತು ಮೀನು ಖರೀದಿಸುತ್ತಾರೆ. ಕೈಯಲ್ಲಿರುವ ಹಣವನ್ನೆಲ್ಲ ಖರ್ಚು ಮಾಡಿ ಮೋಜು ಮಾಡುತ್ತಾರೆ. ಭವಿಷ್ಯದ ಬಗ್ಗೆ ಯಾರೂ ಯೋಚಿಸುವುದಿಲ್ಲ" ಎಂದು ಅವರು ದೂರುತ್ತಾರೆ.

ಮತದಾನ ಎನ್ನುವುದು ಗೌಪ್ಯ ವಿಚಾರವೆನ್ನುವುದನ್ನು ಚೆನ್ನಾಗಿ ತಿಳಿದಿರುವ ನಾನು ಅವರ ಬಳಿ “ನೀವು ಯಾರಿಗೆ ಮತ ಹಾಕುತ್ತೀರಿ?” ಎಂದು ಕೇಳಿದೆ. “ಮೊದಲು ಪಂಜಾ ಚಿಹ್ನೆಗೆ [ಕಾಂಗ್ರೆಸ್‌ ಪಕ್ಷದ ಕೈ ಚಿಹ್ನೆ]ಹಾಕುತ್ತಿದ್ದೆವು. ಈಗ ಎಲ್ಲೆಡೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತಿದೆ. ನಾವು ಜಾತಿಯ ಪಂಚಾಯತ್‌ ಹೇಳಿದಂತೆ ಮತ ಹಾಕಬೇಕು. ಜೋ ಚಲ್‌ ರಹಾ ಹೈ, ವಹೀಂ ಚಲ್‌ ರಹಾ ಹೈ [ನಮ್ಮ ಸುತ್ತ ಏನು ನಡೆಯುತ್ತಿದೆಯೋ ಅದನ್ನೇ ನಾವೂ ಪಾಲಿಸುತ್ತಿದ್ದೇವೆ]. ನನಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ಅವರು ರಾಜಕೀಯ ವಿಚಾವರನ್ನು ಬದಿಗೆ ಸರಿಸುತ್ತಾ ತಿಳಿಸಿದರು.

PHOTO • Prashant Khunte

ಇಲ್ಲಿನ ಅನೇಕ ಹಳ್ಳಿಗಳಲ್ಲಿ ದರ್ಗಾಗಳಿವೆ, ಆದರೆ ಖೇಡ್ ಶಿವಪುರದ ದರ್ಗಾದ ಹಾಗೆ ಕೆಲವೆಡೆ ಮಾತ್ರವೇ ಜನಸಂದಣಿ ಇರುತ್ತದೆ. ಅಮ್ಜದ್ ನಂತಹ ಸಂಗೀತಗಾರರಿಗೆ ಇಲ್ಲಿ ಸಂಪಾದಿಸಲು ಉತ್ತಮ ಅವಕಾಶವಿದೆ

“ನೀವು ಕುಡಿಯುತ್ತೀರಾ?” ಎಂದು ನಾನು ಕೇಳುತ್ತಿದ್ದಂತೆ ಅವರು ಇಲ್ಲವೆಂದು ನಿರಾಕರಿಸಿದರು. “ಇಲ್ಲ, ಇಲ್ಲವೇ ಇಲ್ಲ… ಬೀಡಿ, ಮದ್ಯ ಯಾವುದೇ ಅಭ್ಯಾಸವಿಲ್ಲ. ಮೇರೆ ಭಾಯಿ ಬೀಡಿಯಾ ಪೀತೆ, ಪುಡ್ಯಾ ಖಾತೆ, [ನನ್ನ ಸಹೋದರರು ಬೀಡಿ ಸೇದುತ್ತಾರೆ ಮತ್ತು ತಂಬಾಕು/ಗುಟ್ಖಾ ಸೇವಿಸುತ್ತಾರೆ]. ಆದರೆ ನನಗೆ ಆ ಅಭ್ಯಾಸಗಳಿಲ್ಲ.” ನಾನು ಈ ಅಭ್ಯಾಸಗಳಿಂದ ಏನು ತೊಂದರೆಯಿದೆ ಎನ್ನುವುದನ್ನು ಅವರ ಬಾಯಿಯಿಂದಲೇ ಕೇಳಲು ಬಯಸಿದೆ.

“ನಾನು ಬೇರೆಯದೇ ದಾರಿಯಲ್ಲಿದ್ದೇನೆ! ಕುಡಿದು ಖವ್ವಾಲಿ ಹಾಡಿದರೆ ಅವನಿಗೆ ಘನತೆ ಇರುವುದಿಲ್ಲ. ಅಂತಹ ನಡವಳಿಕೆಯನ್ನು ಏಕೆ ತೋರಿಸಬೇಕು? ಅದಕ್ಕಾಗಿಯೇ ನಾನು ಎಂದಿಗೂ ಈ ಅಭ್ಯಾಸಗಳಿಗೆ ಒಳಗಾಗಲಿಲ್ಲ" ಎಂದು ಅಮ್ಜದ್ ಹೇಳುತ್ತಾರೆ.

ನಿಮಗೆ ಯಾವ ಖವ್ವಾಲಿ ಇಷ್ಟ? "ನನಗೆ ಸಂಸ್ಕೃತದಲ್ಲಿರುವ ಒಂದು ಹಾಡು ಇಷ್ಟ. ಅದನ್ನು ಹಾಡುವುದು ಮತ್ತು ಕೇಳುವುದು ಎರಡೂ ನನಗಿಷ್ಟ" ಎಂದು ಅವರು ಹೇಳುತ್ತಾರೆ. ಸಂಸ್ಕೃತ ಖವ್ವಾಲಿ? ನನಗೆ ಕುತೂಹಲ ಹುಟ್ಟಿತು. "ಅಸ್ಲಾಂ ಸಾಬ್ರಿ 'ಕಿರ್ಪಾ ಕರೋ ಮಹಾರಾಜ್...' ಎಂದು ಹಾಡತೊಡಗಿದರು. ಎಂತಹ ಮಧುರ ಸಂಯೋಜನೆ. ನನ್ನ ಆತ್ಮವನ್ನು ಸ್ಪರ್ಶಿಸುವುದು ಸಂಸ್ಕೃತ. ಖವ್ವಾಲಿ ಭಗವಾನ್ ಕೆ ಲಿಯೆ ಗಾವೊ, ಯಾ ನಬಿ ಕೆ ಲಿಯೆ, ದಿಲ್ ಕೋ ಚೂ ಜಾಯೆ ಬಸ್ [ಖವ್ವಾಲಿಯನ್ನು ದೇವರಿಗೆಂದೋ, ಪ್ರವಾದಿಗೆಂದೋ ಹಾಡಿದರೂ ಅದು ಹೃದಯವನ್ನು ತಟ್ಟುವಂತಿರಬೇಕು]!" ಎಂದು ಅವರು ವಿವರಿಸುತ್ತಾರೆ.

ಅಮ್ಜದ್ ಪ್ರಕಾರ, ಹಿಂದೂ ದೇವರನ್ನು ಸ್ತುತಿಸುವ ಖವ್ವಾಲಿ ಎಂದರೆ 'ಸಂಸ್ಕೃತ'. ಲಿಪಿಗಳು ಮತ್ತು ಭಾಷೆಗಳ ಬಗ್ಗೆ ಹೊಡೆದಾಡುವುದು ನಾವು ಮಾತ್ರ.

ಮಧ್ಯಾಹ್ನ ಸಮೀಪಿಸುತ್ತಿದ್ದಂತೆ, ಜನಸಂದಣಿ ಹೆಚ್ಚಾಗಲು ಶುರುವಾಯಿತು. ಗಂಡಸರ ಗುಂಪು ಸಮಾಧಿಯ ಮುಂದೆ ಒಟ್ಟುಗೂಡುತೊಡಗಿತು. ಕೆಲವರು ಸ್ಕಲ್ ಕ್ಯಾಪ್ ಧರಿಸಿದ್ದರೆ ಇನ್ನೂ ಕೆಲವರು ತಮ್ಮ ತಲೆಯನ್ನು ಕರವಸ್ತ್ರ ಮುಚ್ಚಿಕೊಂಡಿದ್ದರು. 'ಯಾ... ಖಮರ್ ಅಲಿ ದರ್ವೇಶ್...' ಎಂದು ಕೂಗುತ್ತಾ ಅವರೆಲ್ಲರೂ ಭಾರವಾದ ಕಲ್ಲನ್ನು ತಮ್ಮ ಬೆರಳುಗಳಿಂದ ಎತ್ತತೊಡಗಿದರು. ನಂತರ ಅವರು ಅದೇ ಕಲ್ಲನ್ನು ತಮ್ಮೆಲ್ಲ ಶಕ್ತಿ ಬಳಸಿ ನೆಲಕ್ಕೆ ಅಪ್ಪಳಿಸುತ್ತಾರೆ.

ಅಮ್ಜದ್ ಮುರಾದ್ ಗೊಂಡ್ ದೇವರು ಮತ್ತು ಪ್ರವಾದಿಗಳಿಗಾಗಿ ಹಾಡುವುದನ್ನು ಮುಂದುವರಿಸುತ್ತಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Prashant Khunte

پرشانت کھونٹے ایک آزاد صحافی، قلم کار اور سماجی کارکن ہیں، جو حاشیہ کی برادریوں سے جڑے مسائل پر رپورٹنگ کرتے ہیں۔ وہ کسان بھی ہیں۔

کے ذریعہ دیگر اسٹوریز Prashant Khunte
Editor : Medha Kale

میدھا کالے پونے میں رہتی ہیں اور عورتوں اور صحت کے شعبے میں کام کر چکی ہیں۔ وہ پیپلز آرکائیو آف رورل انڈیا (پاری) میں مراٹھی کی ٹرانس لیشنز ایڈیٹر ہیں۔

کے ذریعہ دیگر اسٹوریز میدھا کالے
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru