“2020ರ ಲಾಕ್‌ಡೌನ್‌ ಸಮಯದಲ್ಲಿ ನಮಗೆ ಸೇರಿದ 1.20 ಎಕರೆ ಜಾಗಕ್ಕೆ ಬೇಲಿ ಹಾಕಲು ಯಾರೋ ಬಂದಿದ್ದರು” 30 ಫಗುವಾ ಉರಾಂವ್‌ ಹೇಳಿದರು. ಅವರು ಹೀಗೆ ಹೇಳುವಾಗ ನಮಗೆ ತೆರೆದ ಭೂಮಿಯ ಸುತ್ತ ನಿರ್ಮಿಸಲಾಗಿದ್ದ ಇಟ್ಟಿಗೆ ಗೋಡೆಯನ್ನು ತೋರಿಸುತ್ತಿದ್ದರು. ಅಂದು ನಾವು ಖುಂಟಿ ಜಿಲ್ಲೆಯ ದುಮರಿ ಗ್ರಾಮದಲ್ಲಿದ್ದೆವು. ಇಲ್ಲಿನ ಹೆಚ್ಚಿನ ಸಂಖ್ಯೆಯ ಜನರು ಉರಾಂವ್‌ ಆದಿವಾಸಿ ಸಮುದಾಯಕ್ಕೆ ಸೇರಿದವರು. “ನಂತರ ಅವರು ಈ ಭೂಮಿ ಬೇರೊಬ್ಬರಿಗೆ ಸೇರಿದ್ದು, ನಿಮ್ಮದಲ್ಲ ಎಂದು ಅದನ್ನು ಅಳೆಯಲು ಪ್ರಾರಂಭಿಸಿದರು."

"ಈ ಘಟನೆ ನಡೆದ ಸುಮಾರು 15 ದಿನಗಳ ನಂತರ, ನಾವು ಊರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಖುಂಟಿ ನಗರದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಬಳಿಗೆ ಹೋದೆವು. ಅಲ್ಲಿಗೆ ಹೋಗಲು ನಮಗೆ ಪ್ರತಿ ಪ್ರಯಾಣಕ್ಕೆ 200 ರೂಪಾಯಿಗಿಂತಲೂ ಹೆಚ್ಚು ಖರ್ಚಾಗುತ್ತದೆ. ಅಲ್ಲಿಗೆ ಹೋದ ನಮಗೆ ವಕೀಲರೊಬ್ಬರ ಸಹಾಯವನ್ನೂ ಪಡೆಯಬೇಕಾಯಿತು. ಆ ವ್ಯಕ್ತಿ ಈಗಾಗಲೇ ನಮ್ಮಿಂದ 2,500 ರೂ.ಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

“ಇದಕ್ಕೂ ಮೊದಲು ನಾವು ನಮ್ಮ ಬ್ಲಾಕಿಗೆ ಸೇರಿದ ವಲಯ ಕಚೇರಿಯನ್ನು ಸಂಪರ್ಕಿಸಿದ್ದೆವು. ನಂತರ ಪೊಲೀಸ್‌ ಠಾಣೆಗೂ ಈ ವಿಷಯವಾಗಿ ದೂರು ನೀಡಲೆಂದು ಹೋಗಿದ್ದೆವು. ಭೂಮಿಯ ಮೇಲಿನ ನಮ್ಮ ಹಕ್ಕನ್ನು ಬಿಟ್ಟುಕೊಡುವಂತೆ ನಮಗೆ ಬೆದರಿಕೆಗಳು ಬರುತ್ತಿದ್ದವು. ಖುಂಟಿಯ ಕರ್ರಾ ಬ್ಲಾಕ್‌ನ ಬಲಪಂಥೀಯ ಸಂಘಟನೆಯೊಂದರ ಸದಸ್ಯರೊಬ್ಬರು ನಮಗೆ ಬೆದರಿಕೆಯನ್ನೂ ಹಾಕಿದ್ದರು. ಆದರೆ ಇಷ್ಟೆಲ್ಲ ನಡೆದರೂ ಕೋರ್ಟಿನಲ್ಲಿ ಈ ಕುರಿತು ಒಂದು ವಿಚಾರಣೆಯೂ ನಡೆಯಲಿಲ್ಲ. ಈಗ ನಮ್ಮ ಜಾಗದಲ್ಲಿ ಈ ಗೋಡೆ ಎದ್ದು ನಿಂತಿದೆ. ಔರ್‌ ಹಮ್‌ ದೋ ಸಾಲ್‌ ಸೇ ಇಸೀ ತರಹ್‌ ದೌಡ್-ಧೂಪ್‌ ಕರ್‌ ರಹೇ ಹೈ [ಮತ್ತೆ ನಾವು ಕಳೆದ ಎರಡು ವರ್ಷಗಳಿಂದ ಅಲ್ಲಿಂದಿಲ್ಲಿಗೆ ಓಡಾಡಿಕೊಂಡಿದ್ದೇವೆ].

“ಈ ಭೂಮಿಯನ್ನು 1930ರಲ್ಲಿ ನನ್ನ ಅಜ್ಜ ಲೂಸಾ ಉರಾಂವ್‌ ಅವರು ಭೂಮಾಲಿಕ ಬಾಲಚಂದ್‌ ಸಾಹು ಎನ್ನುವವರಿಂದ ಖರೀದಿಸಿದ್ದರು. ಅಂದಿನಿಂದಲೂ ನಾವು ಈ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಬಂದಿದ್ದೇವೆ.ಈ ಜಾಗಕ್ಕೆ ಸಂಬಂಧಿಸಿದಂತೆ ನಮ್ಮ ಬಳಿ 1930ರಿಂದ 2015ರವರೆಗಿನ ತೆರಿಗೆ ರಶೀದಿಗಳಿವೆ. ಅದರ ನಂತರ [2106ರಲ್ಲಿ] ಆನ್ ಲೈನ್ ವ್ಯವಸ್ಥೆಯನ್ನು ಪರಿಚಯಿಸಲಾಯಿತು ಮತ್ತು ಆನ್ ಲೈನ್ ದಾಖಲೆಗಳಲ್ಲಿ ನಮ್ಮ ತುಂಡು ಭೂಮಿ [ಮಾಜಿ] ಮಾಲಿಕರ ವಂಶಸ್ಥರ ಹೆಸರಿನಲ್ಲಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವ ಕುರಿತು ನಮಗೆ ಕಿಂಚಿತ್ತೂ ಮಾಹಿತಿಯಿಲ್ಲ.”

ಕೇಂದ್ರ ಸರ್ಕಾರವು ಡಿಜಿಟಲ್ ಇಂಡಿಯಾ ಲ್ಯಾಂಡ್ ರೆಕಾರ್ಡ್ಸ್ ಮಾಡರ್ನೈಸೇಷನ್‌ ಪ್ರೋಗ್ರಾಮ್ (ಡಿಐಎಲ್‌ಆರ್‌ಎಂಪಿ) ಯೋಜನೆಯನ್ನು ದೇಶದ ಭೂದಾಖಲೆಗಳನ್ನು ಡಿಜಿಟಲೈಸ್ ಮಾಡಿ, ಅವುಗಳ ಕೇಂದ್ರೀಕೃತ ನಿರ್ವಹಣೆಗಾಗಿ ಡೇಟಾ ಬೇಸ್‌ ನಿರ್ಮಿಸುವ ಉದ್ದೇಶದಿಂದ ಪರಿಚಯಿಸಿತ್ತು. ಇದೇ ಯೋಜನೆಯಿಂದಾಗಿ ಈಗ ಫಗುವಾ ಉರಾಂವ್‌ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದಾರೆ. 2016ರಲ್ಲಿ ರಾಜ್ಯ ಸರ್ಕಾರವು ಭೂದಾಖಲೆಗಳನ್ನು ಡಿಜಿಟಲೈಸ್‌ ಮಾಡುವ ಉದ್ದೇಶದಿಂದ ಭೂಮಿಯ ವಿವರಗಳ ಕುರಿತಾದ ಜಿಲ್ಲಾವಾರು ಪಟ್ಟಿಯನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಲ್ಯಾಂಡ್‌ ಬ್ಯಾಂಕ್‌ ಪೋರ್ಟಲ್‌ ಎನ್ನುವ ಯೋಜನೆಯನ್ನು ಉದ್ಘಾಟಿಸಿತು. “ಭೂಮಿ/ಆಸ್ತಿಯ ವಿವಾದಗಳ ಸಾಧ್ಯತೆಯನ್ನು ಕಡಿಮೆ ಮಾಡುವುದು ಮತ್ತು ಭೂ ದಾಖಲೆಗಳ ನಿರ್ವಣೆಯಲ್ಲಿ ಪಾರದರ್ಶಕತೆ ತರುವುದು ಈ ಯೋಜನೆಯ ಉದ್ದೇಶವಾಗಿತ್ತು.”

ಆದರೆ ಫಗುವಾ ಮತ್ತು ಇನ್ನೂ ಹಲವರ ಬಾಳಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸುವಲ್ಲಿ ಮಾತ್ರವೇ ಈ ಯೋಜನೆ ಯಶಸ್ವಿಯಾಯಿತು.

ಆನ್‌ಲೈನಿನಲ್ಲಿ ನಮ್ಮ ಭೂಮಿಯ ಸ್ಥಿತಿಗತಿ ತಿಳಿಯಲೆಂದು ನಾವು ಪ್ರಗ್ಯಾ ಕೇಂದ್ರಕ್ಕೆ ಹೋದೆವು. ಈ ಕೇಂದ್ರವು ಜಾರ್ಖಂಡ್‌ ರಾಜ್ಯ ಸರ್ಕಾರದ ಸಾಮಾನ್ಯ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸುವ ಅಂಗಡಿ. ಇದನ್ನು ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಯೋಜನೆಯಡಿ ರಚಿಸಲಾಗಿದೆ, ಇದು ಗ್ರಾಮ ಪಂಚಾಯಿತಿಯಲ್ಲಿ ಶುಲ್ಕ ಪಡೆದು ಸಾರ್ವಜನಿಕ ಸೇವೆಗಳನ್ನು ಒದಗಿಸುತ್ತದೆ. “ಅಲ್ಲಿದ್ದ ಆನ್ಲೈನ್‌ ದಾಖಲೆಗಳ ಪ್ರಕಾರ ನಾಗೇಂದ್ರ ಸಿಂಗ್‌ ಎನ್ನುವವರು ಭೂಮಿಯ ಪ್ರಸ್ತುತ ಮಾಲಿಕರು. ವರಿಗಿಂತ ಮೊದಲು ಸಂಜಯ್ ಸಿಂಗ್ ಇದರ ಮಾಲೀಕರಾಗಿದ್ದರು. ಅವರು ಭೂಮಿಯನ್ನು ಬಿಂದು ದೇವಿ ಎನ್ನುವ ಮಹಿಳೆಗೆ ಮಾರಾಟ ಮಾಡಿದ್ದರು ಮತ್ತು ಆ ಮಹಿಳೆ ಅದನ್ನು ನಾಗೇಂದ್ರ ಸಿಂಗ್ ಅವರಿಗೆ ಮಾರಾಟ ಮಾಡಿದ್ದರು.

“ನಮಗೆ ಜಾಗವನ್ನು ಮಾರಿದವರ ವಂಶಸ್ಥರು ಎರಡು ಮೂರು ಬಾರಿ ಅದೇ ಭೂಮಿಯನ್ನು ನಮಗೆ ತಿಳಿಯದಂತೆ ಕೊಳ್ಳುವುದು ಹಾಗೂ ಮಾರುವುದನ್ನು ಮಾಡಿದಂತಿದೆ. ಆದರೆ ನಮ್ಮ ಬಳಿ ಆದರೆ 1930 ರಿಂದ 2015 ರವರೆಗೆ ಭೂಮಿಗೆ ಆಫ್ಲೈನ್ ರಸೀದಿಗಳನ್ನು ಹೊಂದಿರುವಾಗ ಇದು ಹೇಗೆ ಸಾಧ್ಯ?” ನಾವು ಇಲ್ಲಿಯವರೆಗೆ 20,000 ರೂಪಾಯಿಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದ್ದೇವೆ. ಈಗಲೂ ಸಮಸ್ಯೆಯ ಪರಿಹಾರಕ್ಕಾಗಿ ಓಡಾಡುತ್ತಿದ್ದೇವೆ.  ಹಣ ಹೊಂದಿಸಲು ಮನೆಯಲ್ಲಿದ್ದ ಆಹಾರ ಧಾನ್ಯಗಳನ್ನು ಮಾರಿದ್ದೇವೆ. “ಈಗ ನಮ್ಮ ಜಾಗದಲ್ಲಿ ಗೋಡೆ ಎದ್ದಿರುವುದನ್ನು ನೋಡಿದರೆ ನಾವು ಎಲ್ಲವನ್ನೂ ಕಳೆದುಕೊಂಡಂತೆ ಭಾಸವಾಗುತ್ತಿದೆ. ಈ ಹೋರಾಟದಲ್ಲಿ ನಮ್ಮ ಸಹಾಯಕ್ಕೆ ಯಾರು ಬರಬಹುದೆನ್ನುವುದು ತಿಳಿಯದೆ ನಾವು ಕಂಗಾಲಾಗಿದ್ದೇವೆ.”

PHOTO • Om Prakash Sanvasi
PHOTO • Jacinta Kerketta

ಭೂ ದಾಖಲೆಗಳ ಡಿಜಿಟಲೀಕರಣದಿಂದಾಗಿ ಕಳೆದ ಕೆಲವು ವರ್ಷಗಳ ಲ್ಲಿ ತಮ್ಮ ಪೂರ್ವಜರು ಖರೀದಿಸಿದ ಭೂಮಿಯನ್ನು ಕಳೆದುಕೊಂಡ ಜಾರ್ಖಂ ಡ್ ರಾಜ್ಯದ ಖುಂಟಿ ಜಿಲ್ಲೆಯ ಅನೇಕ ಬುಡಕಟ್ಟು ಸಮುದಾಯದ ಜನರಲ್ಲಿ ಫಗುವಾ ಉರಾಂವ್ ( ಎಡ ) ಒಬ್ಬರು . ಬಲ : 2015 ತನಕ ಭೂಮಿಗೆ ತೆರಿಗೆ ಕಟ್ಟಿದ ರಶೀದಿ ತಮ್ಮ ಬಳಿಯಿದ್ದರೂ , ಅವರು ತಮ್ಮ ನೆಲದ ಮಾಲಿಕತ್ವವನ್ನು ಸಾಬೀತುಪಡಿಸಲು ತಮ್ಮ ಹಣ ಮತ್ತು ಶಕ್ತಿಯನ್ನು ಖರ್ಚು ಮಾಡುತ್ತಿದ್ದಾರೆ

*****

ಈ ರಾಜ್ಯವು ಭೂಮಿ ಅಧಿಕಾರದ ಒಂದು ದೀರ್ಘ ಹಾಗೂ ಜಟಿಲ ಇತಿಹಾಸವನ್ನು ಹೊಂದಿದೆ. ಕಾಯ್ದೆಗಳು ಮತ್ತು ರಾಜಕೈ ಪಕ್ಷಗಳು ಹೆಚ್ಚಿನ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ಈ ಖನಿಜ ಸಮೃದ್ಧ ಪ್ರದೇಶದಲ್ಲಿ ಬಹಳಷ್ಟು ಕೆಟ್ಟ ಆಟಗಳನ್ನು ಆಡಿವೆ. ಜಾರ್ಖಂಡ್ ಭಾರತದ ಶೇಕಡಾ 40ರಷ್ಟು ಖನಿಜ ನಿಕ್ಷೇಪವನ್ನು ಹೊಂದಿದೆ.

2011ರ ರಾಷ್ಟ್ರೀಯ ಜನಗಣತಿಯ ಪ್ರಕಾರ, ರಾಜ್ಯವು 23,721 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಹರಡಿರುವ ಶೇಕಡಾ 29.76ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ; ಪರಿಶಿಷ್ಟ ಪಂಗಡಗಳಡಿ (ಎಸ್ಟಿ) ಪಟ್ಟಿ ಮಾಡಲಾಗಿರುವ 32 ಸ್ಥಳೀಯ ಸಮುದಾಯಗಳು ರಾಜ್ಯದ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಅಥವಾ ಸುಮಾರು 26 ಪ್ರತಿಶತದಷ್ಟಿವೆ; 13 ಜಿಲ್ಲೆಗಳು ಸಂಪೂರ್ಣವಾಗಿ ಮತ್ತು ಮೂರು ಜಿಲ್ಲೆಗಳು ಭಾಗಶಃ ಐದನೇ ಅನುಸೂಚಿಯ ಅಡಿಯಲ್ಲಿ ಬರುತ್ತವೆ.

ರಾಜ್ಯದ ಆದಿವಾಸಿ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಸಾಮಾಜಿಕ-ಸಾಂಸ್ಕೃತಿಕ ಬದುಕಿನೊಂದಿಗೆ ಸಂಕೀರ್ಣ ಸಂಬಂಧವನ್ನು ಹೊಂದಿರುವ ತಮ್ಮ ಸಂಪನ್ಮೂಲ ಹಕ್ಕುಗಳಿಗಾಗಿ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಡುತ್ತಿವೆ. ಐದು ದಶಕಗಳಿಗೂ ಹೆಚ್ಚು ಕಾಲದ ಅವರ ಒಗ್ಗಟ್ಟಿನ ಹೋರಾಟದ ಪ್ರಯತ್ನಗಳಿಂದಾಗಿ ಅವರು 1833ರಲ್ಲಿ ಹುಕುಕ್-ನಾಮಾ ಎನ್ನುವ ಹಕ್ಕುಗಳ ಮೊದಲ ಅಧಿಕೃತ ದಾಖಲೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದು ಭಾರತ ಸ್ವಾತಂತ್ರ್ಯಗೊಳ್ಳುವುದಕ್ಕೂ ಒಂದು ಶತಮಾನದ ಮೊದಲು ಆದಿವಾಸಿಗಳು ಪಡೆದ ಸಾಮುದಾಯಿಕ ಕೃಷಿ ಹಕ್ಕು ಮತ್ತು ಸ್ಥಳೀಯ ಸ್ವ-ಆಡಳಿತದ ಅಧಿಕೃತ ಮಾನ್ಯತೆಯಾಗಿತ್ತು.

ಐದನೇ ಅನುಸೂಚಿತ ಪ್ರದೇಶಗಳ ಸಾಂವಿಧಾನಿಕ ಮರುಸ್ಥಾಪನೆಗೆ ಬಹಳ ಮುಂಚೆಯೇ, 1908ರ ಚೋಟಾ ನಾಗ್ಪುರ ಹಿಡುವಳಿ ಕಾಯ್ದೆ (ಸಿಎನ್‌ಟಿಎ) ಮತ್ತು ಸಂತಾಲ್ ಪರಗಣ ಹಿಡುವಳಿ ಕಾಯ್ದೆ (ಎಸ್‌ಪಿಟಿಎ) 1876, ಆ ವಿಶೇಷ ವಲಯಗಳಲ್ಲಿ ಆದಿವಾಸಿ (ಎಸ್ಟಿ) ಮತ್ತು ಮೂಲವಾಸಿ (ಎಸ್ಸಿ, ಬಿಸಿ ಮತ್ತು ಇತರರು) ಭೂಮಾಲೀಕರ ಹಕ್ಕನ್ನು ಮಾನ್ಯ ಮಾಡಿದ್ದವು.

*****

ಫಗುವಾ ಉರಾಂವ್‌ ಮತ್ತವರ ಕುಟುಂಬವು ತಮ್ಮ ಹೊಟ್ಟೆಪಾಡಿಗಾಗಿ ಜಮೀನುದಾರರಿಂದ ಖರೀದಿಸಿದ ಭೂಮಿಯನ್ನೇ ಅವಲಂಬಿಸಿದೆ. ಇದರ ಜೊತೆಗೆ ಅವರು ತಮ್ಮ ಉರಾಂವ್‌ ಹಿರಿಯರಿಂದ ಬಂದ 1.50 ಎಕರೆ ಭುಯಿಂಹರಿ ಭೂಮಿಯನ್ನು ಸಹ ಹೊಂದಿದ್ದಾರೆ.

ಹಿಂದೆ ಕಾಡುಗಳನ್ನು ಸವರಿ ಭೂಮಿಯನ್ನು ಭತ್ತದ ಗದ್ದೆಗಳಾಗಿ ಪರಿವರ್ತಿಸಿ ಗ್ರಾಮಗಳನ್ನು ಸ್ಥಾಪಿಸಿದ ಕುಟುಂಬದ ವಂಶಸ್ಥರು ಸಾಮೂಹಿಕ ಭೂ ಮಾಲಿಕತ್ವವನ್ನು ಹೊಂದಿರುತ್ತಾರೆ. ಇಂತಹ ಭೂಮಿಯನ್ನು ಭುಯಿಂಹರಿ ಎಂದು ಕರೆಯಲಾಗುತ್ತದೆ. ಮುಂಡಾ ಬುಡಕಟ್ಟು ಪ್ರದೇಶಗಳಲ್ಲಿ ಇಂತಹ ಭೂಮಿಯನ್ನು ಮುಂಡಾರಿ ಖುಂಟ್ಕಟ್ಟಿ ಎಂದು ಕರೆಯಲಾಗುತ್ತದೆ.

“ನಾವು ಮೂವರು ಅಣ್ಣ ತಮ್ಮಂದಿರು. ಮೂರು ಜನರಿಗೂ ಕುಟುಂಬವಿದೆ. ಹಿರಿಯಣ್ಣ ಮತ್ತು ನಡುವಿನ ಅಣ್ಣ ಇಬ್ಬರಿಗೂ ತಲಾ ಮೂರು ಮಕ್ಕಳಿದ್ದಾರೆ ಮತ್ತು ನನಗೆ ಇಬ್ಬರು ಮಕ್ಕಳಿದ್ದಾರೆ. ಕುಟುಂಬದ ಸದಸ್ಯರು ಹೊಲಗಳು ಮತ್ತು ಗುಡ್ಡಗಾಡು ಭೂಮಿಯಲ್ಲಿ ಕೃಷಿ ಮಾಡುತ್ತಾರೆ. ನಾವು ಭತ್ತ, ಸಜ್ಜೆ ಮತ್ತು ತರಕಾರಿಗಳನ್ನು ಬೆಳೆಯುತ್ತೇವೆ. ಅದರಲ್ಲಿ ಅರ್ಧದಷ್ಟನ್ನು ಮನೆಬಳಕೆಗಾಗಿ ಇಟ್ಟುಕೊಂಡು ಉಳಿದಿದ್ದನ್ನು ನಮಗೆ ಹಣದ ಅಗತ್ಯವಿದ್ದಾಗ ಮಾರಾಟ ಮಾಡುತ್ತೇವೆ" ಎಂದು ಫಗುವಾ ಹೇಳುತ್ತಾರೆ.

ಈ ಪ್ರದೇಶದಲ್ಲಿ ವರ್ಷಕ್ಕೆ ಒಂದು ಬೆಳೆ ಬೆಳೆಯಲು ಮಾತ್ರವೇ ಸಾಧ್ಯವಾಗುತ್ತದೆ. ಉಳಿದಂತೆ ಅವರು ಕರ್ರಾ ಬ್ಲಾಕ್ ಅಥವಾ ಅವರ ಹಳ್ಳಿಯಲ್ಲಿ ಕೂಲಿ ಕೆಲಸ ಮಾಡುತ್ತಾರೆ.

ಡಿಜಿಟಲೀಕರಣ ಮತ್ತು ಅದು ತಂದೊಡ್ಡುವ ಸಮಸ್ಯೆಗಳು ಕುಟುಂಬ ಒಡೆತನದ ಭೂಮಿಯ ಪ್ರಶ್ನೆಯನ್ನು ಮೀರಿದ್ದು.

PHOTO • Jacinta Kerketta

ಖುಂಟಿ ಜಿಲ್ಲೆಯ ಕೊಸಾಂಬಿ ಗ್ರಾಮದಲ್ಲಿ ನಡೆದ ಜಂಟಿ ಡ್ಹಾ ಸಮಿತಿ ಸಭೆಯಲ್ಲಿ ಜನರು ಸೇರಿರುವುದು . 1932 ಭೂ ಸಮೀಕ್ಷೆಯ ಆಧಾರದ ಮೇಲೆ ಸಾಮುದಾಯಿಕ ಮತ್ತು ಖಾಸಗಿ ಭೂ ಮಾಲೀಕತ್ವದ ಹಕ್ಕುಗಳ ದಾಖಲೆಯನ್ನು ತೋರಿಸುವ ಮೂಲಕ ಬುಡಕಟ್ಟು ಜನರಲ್ಲಿ ಅವರ ಭೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಸಮಿತಿಯು ಪ್ರಯತ್ನಿಸುತ್ತಿದೆ

ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೊಸಾಂಬಿ ಎಂಬ ಮತ್ತೊಂದು ಹಳ್ಳಿಯಲ್ಲಿ, ಬಂಧು ಹೋರೊ ತಮ್ಮ ಸಾಮೂಹಿಕ ಮಾಲಿಕತ್ವದ ಭೂಮಿಯ ಕಥೆಯನ್ನು ವಿವರಿಸುತ್ತಾರೆ. "ಜೂನ್ 2022ರಲ್ಲಿ, ಕೆಲವು ಜನರು ಜೆಸಿಬಿಯೊಂದಿಗೆ (ಜೆ.ಸಿ. ಬ್ಯಾಮ್ಫೋರ್ಡ್ ಕಂಪನಿಯ ಅಗೆಯುವ ಯಂತ್ರ) ಬಂದು ನಮ್ಮ ಭೂಮಿಗೆ ಬೇಲಿ ಹಾಕಲು ಪ್ರಯತ್ನಿಸಿದರು. ಕೊನೆಗೆ ಊರಿನ ಜನರೆಲ್ಲ ಒಟ್ಟಾಗಿ ಅವರನ್ನು ಓಡಿಸಿದರು.”

ಅದೇ ಗ್ರಾಮದ 76 ವರ್ಷದ ಫ್ಲೋರಾ ಹೋರೊ ಹೇಳುತ್ತಾರೆ, "ಹಳ್ಳಿಯ ಸುಮಾರು 20-25 ಬುಡಕಟ್ಟು ಜನರು ಬಂದು ಹೊಲಗಳಲ್ಲಿ ಕುಳಿತರು. ಅವರು ಹೊಲಗಳನ್ನು ಉಳುಮೆ ಮಾಡಲು ಪ್ರಾರಂಭಿಸಿದರು. ಭೂಮಿ ಖರೀದಿದಾರರ ತಂಡವು ಪೊಲೀಸರಿಗೆ ಫೋನ್ ಮಾಡಿತು. ಆದರೆ ಗ್ರಾಮಸ್ಥರು ಸಂಜೆಯವರೆಗೂ ಅಲ್ಲಿಯೇ ಕುಳಿತಿದ್ದರು ಮತ್ತು ನಂತರ, ಅದೇ ಹೊಲದಲ್ಲಿ ಸುರ್ಗುಜಾ [ಗುಯಿಜೋಟಿಯಾ ಅಬಿಸಿನಿಕಾ/ಹುಚ್ಚೆಳ್ಳು] ಬೀಜಗಳನ್ನು ಬಿತ್ತನೆ ಮಾಡಲಾಯಿತು."

ಗ್ರಾಮದ ಮುಖ್ಯಸ್ಥ ವಿಕಾಸ್ ಹೋರೊ (36) ವಿವರಿಸುತ್ತಾರೆ, "ಕೊಸಾಂಬಿ ಗ್ರಾಮದಲ್ಲಿ ಮಜಿಹಾಸ್ ಎಂದು ಕರೆಯಲ್ಪಡುವ 83 ಎಕರೆ ಭೂಮಿ ಇದೆ. ಇದು ಹಳ್ಳಿಯ 'ವಿಶೇಷಾಧಿಕಾರದ' ಭೂಮಿಯಾಗಿದ್ದು, ಇದನ್ನು ಬುಡಕಟ್ಟು ಸಮುದಾಯವು ಜಮೀನ್ದಾರರ ಭೂಮಿ ಎಂದು ಬೇರೆಯಾಗಿ ಇರಿಸಿದೆ. ಈ ಭೂಮಿಯಲ್ಲಿ ಗ್ರಾಮಸ್ಥರು ಸಾಮೂಹಿಕವಾಗಿ ಕೃಷಿ ಮಾಡುತ್ತಿದ್ದು, ತಾವು ಬೆಳೆದ ಬೆಳೆಯಲ್ಲಿ ಒಂದು ಭಾಗವನ್ನು ಜಮೀನ್ದಾರರಿಗೆ ಸಲಾಮಿ ಎನ್ನುವ ಹೆಸರಿನಲ್ಲಿ ಗೌರವದಿಂದ ಅರ್ಪಿಸುತ್ತದೆ” ರಾಜ್ಯದಲ್ಲಿ ಜಮೀನ್ದಾರಿ ಭೂ ಹಿಡುವಳಿ ಪದ್ಧತಿಯನ್ನು ರದ್ದುಪಡಿಸಿದ ನಂತರವೂ ಗುಲಾಮಗಿರಿ ಕೊನೆಗೊಂಡಿಲ್ಲ. "ಇಂದಿಗೂ, ಹಳ್ಳಿಗಳಲ್ಲಿನ ಅನೇಕ ಆದಿವಾಸಿಗಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿದಿಲ್ಲ" ಎಂದು ಅವರು ಹೇಳುತ್ತಾರೆ.

ಜೀವನೋಪಾಯಕ್ಕಾಗಿ ತಮ್ಮ 10 ಎಕರೆ ಜಂಟಿ ಒಡೆತನದ ಭೂಮಿಯಲ್ಲಿ ತನ್ನ ಮೂವರು ಸಹೋದರರೊಂದಿಗೆ ಹೊಟ್ಟೆಪಾಡಿಗಾಗಿ ಕೃಷಿ ಮಾಡುವ ರೈತ ಸೆತೆಂಗ್ ಹೋರೊ (35) ಅವರ ಕುಟುಂಬವೂ ಇದೇ ರೀತಿಯ ಕಥೆಯನ್ನು ಹೇಳುತ್ತದೆ. "ಆರಂಭದಲ್ಲಿ, ಜಮೀನ್ದಾರಿ ವ್ಯವಸ್ಥೆಯ ಅಂತ್ಯದೊಂದಿಗೆ, ಮಜಿಯಸ್ ಭೂಮಿಯು ಆ ಹೊಲಗಳನ್ನು ಸಾಮೂಹಿಕವಾಗಿ ಕೃಷಿ ಮಾಡುತ್ತಿದ್ದ ಜನರಿಗೆ ಸೇರುತ್ತದೆ ಎನ್ನುವುದು ನಮಗೆ ತಿಳಿದಿರಲಿಲ್ಲ. ಮತ್ತು ನಮಗೆ ಈ ಕುರಿತು ತಿಳಿದಿಲ್ಲದ ಕಾರಣ, ಕೊಯ್ಲಿನ ನಂತರ ಹಿಂದಿನ ಭೂಮಾಲೀಕನ ವಂಶಸ್ಥರಿಗೆ ಸ್ವಲ್ಪ ಧಾನ್ಯವನ್ನು ನೀಡುತ್ತಿದ್ದೆವು. ಅವರು ಅಂತಹ ಭೂಮಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಪ್ರಾರಂಭಿಸಿದಾಗ ನಾವು ಸಂಘಟಿತರಾಗಿ ಭೂಮಿಯನ್ನು ಉಳಿಸಿಕೊಳ್ಳಲು ಮುಂದೆ ಬಂದೆವು" ಎಂದು ಅವರು ಹೇಳುತ್ತಾರೆ.

ಹಿರಿಯ ವಕೀಲೆ ರಶ್ಮಿ ಕಾತ್ಯಾಯನ್ ಹೇಳುವಂತೆ, "ಬಿಹಾರ ಭೂ ಸುಧಾರಣಾ ಕಾಯ್ದೆಯನ್ನು 1950-55ರ ನಡುವೆ ಜಾರಿಗೆ ತರಲಾಯಿತು. ಇದರಡಿ ಕೃಷಿ ಮಾಡದ ಭೂಮಿಯನ್ನು ಗುತ್ತಿಗೆಗೆ ನೀಡುವ ಹಕ್ಕು, ಬಾಡಿಗೆ ಮತ್ತು ತೆರಿಗೆಗಳನ್ನು ಸಂಗ್ರಹಿಸುವ ಹಕ್ಕು, ಬಂಜರು ಭೂಮಿಯಲ್ಲಿ ಹೊಸ ರೈತರನ್ನು ನೆಲೆಯಾಗಿಸುವ ಹಕ್ಕು, ಗ್ರಾಮದ ಮಾರುಕಟ್ಟೆಗಳು ಮತ್ತು ಗ್ರಾಮದ ಜಾತ್ರೆಗಳಿಂದ ತೆರಿಗೆ ಸಂಗ್ರಹಿಸುವ ಹಕ್ಕು ಮೊದಲಾದ ಭೂಮಿಗೆ ಸಂಬಂಧಿಸಿದಂತೆ ಜಮೀನುದಾರರಿಗೆ ಇದ್ದ ಎಲ್ಲಾ ಹಕ್ಕುಗಳನ್ನು ಸರ್ಕಾರ ತನ್ನ ಕೈಗೆ ತೆಗೆದುಕೊಂಡಿತ್ತು.

“ಹಿಂದಿನ ಜಮೀನುದಾರರಗಳು ಅಂತಹ ಜಮೀನುಗಳು ಮತ್ತು ʼವಿಶೇಷಾಧಿಕಾರದಡಿ ಪ್ರಾಪ್ತಿಯಾಗಿದ್ದʼ ಮಜಿಹಸ್‌ ಎಂದು ಕರೆಯಲ್ಪಡುವ ಭೂಮಿಗೆ ರಿಟರ್ನ್‌ ಫೈಲ್‌ ಮಾಡಬೇಕಿತ್ತು. ಆದರೆ ಅವರು ಅಂತಹ ಭೂಮಿಗಳನ್ನು ತಮ್ಮದೆಂದೇ ಪರಿಗಣಿಸಿ ಯಾವುದೇ ರಿಟರ್ನ್ಸ್‌ ಸಲ್ಲಿಸಲಿಲ್ಲ. ಅಷ್ಟೇ ಅಲ್ಲ, ಜಮೀನ್ದಾರಿ ಪದ್ಧತಿಯನ್ನು ರದ್ದುಪಡಿಸಿದ ನಂತರವೂ ಅವರು ಗ್ರಾಮಸ್ಥರಿಂದ ಅರ್ಧದಷ್ಟು ಪಾಲನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಿದರು. ಕಳೆದ ಐದು ವರ್ಷಗಳಲ್ಲಿ, ಡಿಜಿಟಲೀಕರಣದೊಂದಿಗೆ ಭೂ ಸಂಘರ್ಷಗಳು ಹೆಚ್ಚಾಗಿದೆ" ಎಂದು 72 ವರ್ಷದ ಕಾತ್ಯಾಯನ್ ಹೇಳುತ್ತಾರೆ.

ಖುಂಟಿ ಜಿಲ್ಲೆಯಲ್ಲಿ ಹಳೆಯ ಜಮೀನ್ದಾರ ವಂಶಸ್ಥರು ಮತ್ತು ಬುಡಕಟ್ಟು ಜನಾಂಗದವರ ನಡುವೆ ಹೆಚ್ಚುತ್ತಿರುವ ವಿವಾದಗಳ ಬಗ್ಗೆ ಚರ್ಚಿಸುತ್ತಾ, 45 ವರ್ಷದ ವಕೀಲ ಅನೂಪ್ ಮಿಂಜ್ ಹೇಳುತ್ತಾರೆ, "ಜಮೀನ್ದಾರರ ವಂಶಸ್ಥರ ಬಳಿ ಅಂತಹ ಭೂಮಿಯ ರಸೀದಿಯಾಗಲಿ ಅಥವಾ ಸ್ವಾಧೀನವಾಗಲಿ ಇಲ್ಲ, ಆದರೆ ಅವರು ಅಂತಹ ಭೂಮಿಯನ್ನು ಆನ್ಲೈನ್‌ ಮೂಲಕ ಗುರುತಿಸಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಛೋಟಾನಾಗ್ಪುರ ಹಿಡುವಳಿ ಕಾಯ್ದೆ, 1908ರ ಸ್ವಾಧೀನ ಹಕ್ಕುಗಳ ವಿಭಾಗದ ಪ್ರಕಾರ, 12 ವರ್ಷಗಳಿಗಿಂತ ಹೆಚ್ಚು ಕಾಲ ಭೂಮಿಯನ್ನು ಕೃಷಿ ಮಾಡುತ್ತಿರುವ ತಂತಾನೇ ಮಜಿಹಸ್ ಭೂಮಿಯ ಹಕ್ಕನ್ನು ಪಡೆಯುತ್ತಾನೆ. ಅಂತಹ ಹಕ್ಕು ಭೂಮಿಯಲ್ಲಿ ಕೃಷಿ ಮಾಡುವ ಬುಡಕಟ್ಟು ಜನರಿಗಿದೆ.

PHOTO • Jacinta Kerketta

ಕೊಸಂಬಿ ಗ್ರಾಮದ ಪ್ರಸ್ತುತ ತಾವು ಸಾಮೂಹಿಕವಾಗಿ ಕೃಷಿ ಮಾಡುತ್ತಿರುವ ಭೂಮಿಯನ್ನು ತೋರಿಸುತ್ತಿದ್ದಾರೆ . ಸುದೀರ್ಘ ಮತ್ತು ಸಾಮೂಹಿಕ ಹೋರಾಟದ ನಂತರ ಅವರು ಭೂಮಿಯನ್ನು ಹಿಂದಿನ ಭೂಮಾಲೀಕರ ವಂಶಸ್ಥರಿಂದ ರಕ್ಷಿಸಿದ್ದಾರೆ

ಸಂಯುಕ್ತ ಪಡ್ಹಾ ಸಮಿತಿ ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿದ್ದು, ಈ ಭೂಮಿಯನ್ನು ಕೃಷಿ ಮಾಡುತ್ತಿರುವ ಬುಡಕಟ್ಟು ಜನರನ್ನು ಬುಡಕಟ್ಟು ಸ್ವಯಂ ಆಡಳಿತದ ಸಾಂಪ್ರದಾಯಿಕ ಪ್ರಜಾಸತ್ತಾತ್ಮಕ ಪಡ್ಹಾ ವ್ಯವಸ್ಥೆಯ ಅಡಿಯಲ್ಲಿ ಸಂಘಟಿಸುತ್ತಿದೆ, ಒಂದು ಪಡ್ಹಾ ಸಾಮಾನ್ಯವಾಗಿ 12ರಿಂದ 22 ಹಳ್ಳಿಗಳ ಗುಂಪುಗಳನ್ನು ಒಳಗೊಂಡಿರುತ್ತದೆ.

"ಈ ಹೋರಾಟವು ಖುಂಟಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನಡೆಯುತ್ತಿದೆ" ಎಂದು ಸಮಿತಿಯಲ್ಲಿರುವ 45 ವರ್ಷದ ಸಾಮಾಜಿಕ ಕಾರ್ಯಕರ್ತ ಆಲ್ಫ್ರೆಡ್ ಹೋರೊ ಹೇಳುತ್ತಾರೆ. “ಭೂಮಾಲೀಕರ ವಂಶಸ್ಥರು ಟೋರ್ಪಾ ಬ್ಲಾಕಿನಲ್ಲಿ 300 ಎಕರೆ ಭೂಮಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಜಿಲ್ಲೆಯ ಕರ್ರಾ ಬ್ಲಾಕಿನಲ್ಲಿ, ಟಿಯು ಗ್ರಾಮದಲ್ಲಿ 23 ಎಕರೆ, ಪಡ್ಗಾಂವ್ ಗ್ರಾಮದಲ್ಲಿ 40 ಎಕರೆ, ಕೊಸಂಬಿ ಗ್ರಾಮದಲ್ಲಿ 83 ಎಕರೆ, ಮಧುಗಾಮಾ ಗ್ರಾಮದಲ್ಲಿ 45 ಎಕರೆ, ಮೆಹಾ ಗ್ರಾಮದಲ್ಲಿ 23 ಎಕರೆ, ಛಟಾ ಗ್ರಾಮದಲ್ಲಿ 90 ಎಕರೆ ಭೂಮಿ ಜಂಟಿ ಸಮಿತಿಯ ಬಳಿಯಿದೆ. ಸುಮಾರು 700 ಎಕರೆ ಆದಿವಾಸಿ ಭೂಮಿಯನ್ನು ಉಳಿಸಲಾಗಿದೆ" ಎಂದು ಅವರು ಹೇಳುತ್ತಾರೆ.

1932ರ ಭೂ ಸಮೀಕ್ಷೆಯ ಆಧಾರದ ಮೇಲೆ ಸಾಮುದಾಯಿಕ ಮತ್ತು ಖಾಸಗಿ ಭೂ ಮಾಲೀಕತ್ವದ ಹಕ್ಕುಗಳ ದಾಖಲೆಯಾದ ಖತಿಯಾನ್ ಅನ್ನು ಅವರಿಗೆ ತೋರಿಸುವ ಮೂಲಕ ಬುಡಕಟ್ಟು ಜನರಲ್ಲಿ ಅವರ ಭೂ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಜಂಟಿ ಪಡ್ಹಾ ಸಮಿತಿಯು ಕೆಲಸ ಮಾಡುತ್ತಿದೆ. ಇದರಲ್ಲಿ, ಯಾವ ಭೂಮಿಯ ಮೇಲೆ ಯಾರಿಗೆ ಹಕ್ಕಿದೆ ಎನ್ನುವುದು ಮತ್ತು ಭೂಮಿಯ ಸ್ವರೂಪದ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಗ್ರಾಮಸ್ಥರು ಖತಿಯಾನ್ ದಾಖಲೆಗಳನ್ನು ನೋಡಿದಾಗ, ಅವರು ಸಾಮೂಹಿಕವಾಗಿ ಕೃಷಿ ಮಾಡುತ್ತಿದ್ದ ಭೂಮಿ ಅವರ ಪೂರ್ವಜರ ಒಡೆತನದಲ್ಲಿದೆ ಎನ್ನುವುದು ತಿಳಿಯುತ್ತದೆ. ಇದು ಹಿಂದಿನ ಜಮೀನ್ದಾರರ ಭೂಮಿಯಲ್ಲ ಮತ್ತು ಜಮೀನ್ದಾರಿ ವ್ಯವಸ್ಥೆಯೂ ಕೊನೆಗೊಂಡಿದೆ ಎನ್ನುವುದು ಸಹ ಅವರಿಗೆ ಅರ್ಥವಾಗುತ್ತದೆ.

ಖುಂಟಿಯ ಮೆರ್ಲೆ ಗ್ರಾಮದ ಎಪಿಲ್ ಹೋರೊ ಹೇಳುತ್ತಾರೆ, "ಡಿಜಿಟಲ್ ಇಂಡಿಯಾದ ಮೂಲಕ, ಜನರು ಭೂಮಿಯ ಕುರಿತಾದ ಎಲ್ಲಾ ಮಾಹಿತಿಯನ್ನು ಆನ್ ಲೈನ್ ಮೂಲಕ ನೋಡಲು ಸಾಧ್ಯವಿದೆ. ಇದರಿಂದಾಗಿಯೇ ಸಂಘರ್ಷಗಳು ಹೆಚ್ಚಾಗಿದೆ. ಮೇ 1, 2024ರ ಕಾರ್ಮಿಕ ದಿನದಂದು, ಮಜಿಹಸ್‌ ಭೂಮಿಯ ಸುತ್ತ ಗಡಿ ನಿರ್ಮಿಸಲೆಂದು ಕೆಲವರು ಬಂದರು. ಅವರು ಗ್ರಾಮದಲ್ಲಿ ಭೂಮಿಯನ್ನು ಖರೀದಿಸಿದ್ದಾಗಿ ಹೇಳಿಕೊಂಡರು. ಕೊನೆಗೆ ಊರಿನ 60 ಗಂಡಸರು ಮತ್ತು ಹೆಂಗಸರು ಒಗ್ಗೂಡಿ ಅವರನ್ನು ತಡೆದರು.

"ಹಿಂದಿನ ಜಮೀನ್ದಾರರ ವಂಶಸ್ಥರು ಮಜಿಹಸ್ ಭೂಮಿಯನ್ನು ಆನ್‌ಲೈನ್‌ ಮೂಲಕ ನೋಡಬಹುದು. ಅವರು ಇನ್ನೂ ಅಂತಹ ಭೂಮಿಯನ್ನು ತಮ್ಮ 'ವಿಶೇಷಾಧಿಕಾರದಡಿ' ಸ್ವಾಧೀನವೆಂದು ಪರಿಗಣಿಸಿ ಅವುಗಳನ್ನು ಅನ್ಯಾಯದ ದಾರಿಯಲ್ಲಿ ಮಾರಾಟ ಮಾಡುತ್ತಿದ್ದಾರೆ. ನಮ್ಮ ಸಂಯೋಜಿತ ಬಲದಿಂದ ಭೂಮಿಯನ್ನು ಕಸಿದುಕೊಳ್ಳುವುದನ್ನು ನಾವು ವಿರೋಧಿಸುತ್ತಿದ್ದೇವೆ" ಎಂದು ಅವರು ಹೇಳುತ್ತಾರೆ. ಈ ಮುಂಡಾ ಗ್ರಾಮದ ಒಟ್ಟು ಭೂಮಿ 36 ಎಕರೆ ಮಜಿಹಸ್ ಭೂಮಿಯಾಗಿದ್ದು, ಗ್ರಾಮಸ್ಥರು ತಲೆಮಾರುಗಳಿಂದ ಅದರಲ್ಲಿ ಸಾಮೂಹಿಕ ಕೃಷಿ ಮಾಡುತ್ತಿದ್ದಾರೆ.

"ಹಳ್ಳಿಯ ಜನರು ಹೆಚ್ಚು ವಿದ್ಯಾವಂತರಲ್ಲ" ಎಂದು 30 ವರ್ಷದ ಭರೋಸಿ ಹೋರೊ ಹೇಳುತ್ತಾರೆ. ಈ ದೇಶದಲ್ಲಿ ಯಾವ ನಿಯಮಗಳನ್ನು ಮಾಡಲಾಗಿದೆ ಮತ್ತು ಬದಲಾಯಿಸಲಾಗಿದೆ ಎನ್ನುವುದರ ಬಗ್ಗೆ ನಮಗೆ ಮಾಹಿತಿಯಿರುವುದಿಲ್ಲ. ವಿದ್ಯಾವಂತರಿಗೆ ಅನೇಕ ವಿಷಯಗಳು ತಿಳಿದಿರುತ್ತವೆ. ಆದರೆ ಅವರು ಆ ಜ್ಞಾನವನ್ನು ಬಳಸಿ ಹೆಚ್ಚು ತಿಳುವಳಿಕೆಯಿಲ್ಲದ ಜನರನ್ನು ಲೂಟಿ ಮಾಡುತ್ತಾರೆ. ಕಿರುಕುಳು ನೀಡುತ್ತಾರೆ. ಇದೇ ಕಾರಣಕ್ಕಾಗಿ ಅದಕ್ಕಾಗಿಯೇ ಬುಡಕಟ್ಟು ಜನರು ಪ್ರತಿಭಟಿಸುತ್ತಾರೆ."

ಬಹುನಿರೀಕ್ಷಿತ 'ಡಿಜಿಟಲ್ ಕ್ರಾಂತಿʼ ವಿರಳ ವಿದ್ಯುತ್ ಸರಬರಾಜು ಮತ್ತು ಕಳಪೆ ಇಂಟರ್ನೆಟ್ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ವಾಸಿಸುವ ಅನೇಕ ಫಲಾನುಭವಿಗಳನ್ನು ಇಂದಿಗೂ ತಲುಪಿಲ್ಲ. ಉದಾಹರಣೆಗೆ, ಜಾರ್ಖಂಡ್‌ ರಾಜ್ಯದ ಗ್ರಾಮೀಣ ಪ್ರದೇಶಗಳು ಕೇವಲ 32 ಪ್ರತಿಶತದಷ್ಟು ಇಂಟರ್ನೆಟ್ ಸಂಪರ್ಕವನ್ನು ಕಂಡಿವೆ. ದೇಶದಲ್ಲಿನ ವರ್ಗ, ಲಿಂಗ, ಜಾತಿ ಮತ್ತು ಬುಡಕಟ್ಟು ವಿಭಜನೆಯ ಜೊತೆಗೆ ಇದೀಗ ಡಿಜಿಟಲ್‌ ವಿಭಜನೆಯೂ ಸೇರಿ ಸಮಸ್ಯೆ ಇನ್ನಷ್ಟು ಜಟಿಲಗೊಂಡಿದೆ.

ನ್ಯಾಷನಲ್‌ ಸ್ಯಾಂಪಲ್‌ ಸರ್ವೇ (ಎನ್ಎಸ್ಎಸ್ 75ನೇ ಸುತ್ತು - ಜುಲೈ 2017-ಜೂನ್ 2018) ಜಾರ್ಖಂಡ್ ರಾಜ್ಯದ ಬುಡಕಟ್ಟು ಪ್ರದೇಶಗಳಲ್ಲಿ ಕೇವಲ 11.3 ಪ್ರತಿಶತದಷ್ಟು ಕುಟುಂಬಗಳು ಮಾತ್ರ ಇಂಟರ್ನೆಟ್ ಸೌಲಭ್ಯವನ್ನು ಹೊಂದಿವೆ ಮತ್ತು ಅವರಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೇವಲ 12 ಪ್ರತಿಶತ ಪುರುಷರು ಮತ್ತು 2 ಪ್ರತಿಶತ ಮಹಿಳೆಯರು ಮಾತ್ರವೇ ಇಂಟರ್ನೆಟ್ ಬಳಸುವುದು ಹೇಗೆನ್ನುವುದನ್ನು ತಿಳಿದಿದ್ದಾರೆ ಎಂದು ಹೇಳಿದೆ. ಗ್ರಾಮಸ್ಥರು ಸೇವೆಗಳಿಗಾಗಿ ಪ್ರಗ್ಯಾ ಕೇಂದ್ರಗಳನ್ನು ಅವಲಂಬಿಸಬೇಕಾಗಿದೆ, ಇದನ್ನು ಈಗಾಗಲೇ ಹತ್ತು ಜಿಲ್ಲೆಗಳ ಸಮೀಕ್ಷೆಯೊಂದರಲ್ಲಿ ಚರ್ಚಿಸಲಾಗಿದೆ.

PHOTO • Jacinta Kerketta

ಈಗ ಹಿಂದಿನ ಜಮೀನ್ದಾರರ ವಂಶಸ್ಥರು ಜೆಸಿಬಿ ಯಂತ್ರಗಳೊಂದಿಗೆ ಬಂದು ಭೂಮಿಗೆ ಬೇಲಿ ಹಾಕಲು ಪ್ರಯತ್ನಿಸುವಾಗ ಊರಿನ ಆದಿವಾಸಿ ಜನರು ಒಗ್ಗಟ್ಟಾಗಿ ತಮ್ಮ ಭೂಮಿಯ ಹಕ್ಕಿಗಾಗಿ ಹೋರಾಡುತ್ತಾರೆ.ಅಲ್ಲಿಯೇ ಕುಳಿತು, ಭೂಮಿಯನ್ನು ಉತ್ತು, ರಾತ್ರಿಯೆಲ್ಲ ಕಾಯ್ದು ಕೊನೆಗೆ ಹೊಲದಲ್ಲಿ ಸುರ್ಗುಜಾ ಬಿತ್ತುತ್ತಾರೆ

ಖುಂಟಿ ಜಿಲ್ಲೆಯ ಕರ್ರಾ ಬ್ಲಾಕ್ ಸರ್ಕಲ್ ಆಫೀಸರ್ (ಸಿಒ) ವಂದನಾ ಭಾರತಿ ಒಂದಷ್ಟು ಸಂಕೋಚದೊಂದಿಗೆ ಮಾತನಾಡತೊಡಗಿದರು. "ಹಿಂದಿನ ಜಮೀನ್ದಾರರ ವಂಶಸ್ಥರು ಭೂ ದಾಖಲೆಗಳನ್ನು ಹೊಂದಿದ್ದಾರೆ, ಆದರೆ ಭೂಮಿ ಯಾರ ಸ್ವಾಧೀನದಲ್ಲಿದೆ ಎನ್ನುವುದನ್ನು ನೋಡಬೇಕಾಗಿದೆ" ಎಂದು ಅವರು ಹೇಳುತ್ತಾರೆ. ಈ ಭೂಮಿಯನ್ನು ಬುಡಕಟ್ಟು ಜನಾಂಗದವರು ಆಕ್ರಮಿಸಿಕೊಂಡಿದ್ದಾರೆ ಮತ್ತು ಅವರು ಭೂಮಿಯನ್ನು ಕೃಷಿ ಮಾಡುತ್ತಿದ್ದಾರೆ. ಈಗ ಅದು ಸಂಕೀರ್ಣ ವಿಷಯ. ನಾವು ಸಾಮಾನ್ಯವಾಗಿ ಅಂತಹ ಪ್ರಕರಣಗಳನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುತ್ತೇವೆ. ಕೆಲವೊಮ್ಮೆ ಹಿಂದಿನ ಜಮೀನ್ದಾರನ ವಂಶಸ್ಥರು ಮತ್ತು ಜನರು ಈ ವಿಷಯವನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ."

ಜಾರ್ಖಂಡ್ ಸ್ಥಳೀಯ ನಿವಾಸ ನೀತಿಯ ಬಗ್ಗೆ 2023ರಲ್ಲಿ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ ಪ್ರಕಟವಾದ ಪ್ರಬಂಧವೊಂದು ಹೇಳುವಂತೆ  “…ಡಿಜಿಟಲ್ ಭೂ ದಾಖಲೆಯು ಕಂದಾಯ ಭೂಮಿಯನ್ನು ಖಾಸಗಿ ಆಸ್ತಿಯಾಗಿ ಪರಿವರ್ತಿಸುತ್ತಿದೆ, ಇದು ಸಿಎಎನ್‌ಟಿಎ ಕಾಯ್ದೆಯಡಿ ನೀಡಲಾದ ಸಾಮುದಾಯಿಕ ಭೂ ಹಿಡುವಳಿ ಹಕ್ಕುಗಳನ್ನು ದಾಖಲಿಸುವ ಸಾಂಪ್ರದಾಯಿಕ/ಖಟಿಯಾನಿ ವ್ಯವಸ್ಥೆಯನ್ನು ಕಡೆಗಣಿಸುತ್ತಿದೆ.”

ಖಾತೆ ಅಥವಾ ಪ್ಲಾಟ್ ಸಂಖ್ಯೆಗಳು, ಎಕರೆ ಮತ್ತು ಭೂ ಮಾಲೀಕರ ಹೆಸರುಗಳನ್ನು ಬದಲಾಯಿಸುವುದು ಮತ್ತು ಬುಡಕಟ್ಟುಗಳು/ಜಾತಿಗಳಿಗೆ ಸುಳ್ಳು ನಮೂದುಗಳು ಸೇರಿದಂತೆ ಭೂಮಿಯನ್ನು ಮೋಸದಿಂದ ಮಾರಾಟ ಮಾಡಿರುವುದನ್ನು ಸಂಶೋಧಕರು ಒಪ್ಪಿಕೊಂಡಿದ್ದಾರೆ, ಇದರಿಂದಾಗಿ ದಾಖಲೆಗಳನ್ನು ಸರಿಪಡಿಸಲು ಮತ್ತು ನವೀಕರಿಸಲು ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಗ್ರಾಮಸ್ಥರು ಮೇಜಿನಿಂದ ಮೇಜಿಗೆ ಅಲೆಯಬೇಕಾಗುತ್ತದೆ - ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮತ್ತು ಈಗ ಭೂಮಿ ಬೇರೊಬ್ಬರ ಹೆಸರಿನಲ್ಲಿರುವುದರಿಂದ, ಅವರು ಸಂಬಂಧಿತ ತೆರಿಗೆಗಳನ್ನು ಸಹ ಪಾವತಿಸಲು ಸಾಧ್ಯವಾಗುತ್ತಿಲ್ಲ.

"ಹಾಗಿದ್ದರೆ ಈ ಉಪಕ್ರಮದ ನಿಜವಾದ ಫಲಾನುಭವಿಗಳು ಯಾರು?" ಎಂದು ಏಕ್ತಾ ಪರಿಷತ್ ಎನ್ನುವ ಸಂಘಟನೆಯ ರಾಷ್ಟ್ರೀಯ ಸಂಯೋಜಕ ರಮೇಶ್ ಶರ್ಮಾ ಕೇಳುತ್ತಾರೆ. "ಭೂ ದಾಖಲೆಗಳ ಡಿಜಿಟಲೀಕರಣವು ಪ್ರಜಾಪ್ರಭುತ್ವದ ಪ್ರಕ್ರಿಯೆಯೇ? ನಿಸ್ಸಂದೇಹವಾಗಿ ಸರ್ಕಾರ ಮತ್ತು ಇತರ ಶಕ್ತಿಶಾಲಿ ಜನರು ಇದ ಅತಿದೊಡ್ಡ ಫಲಾನುಭವಿಗಳು. ಜಮೀನ್ದಾರರು, ಭೂ ಮಾಫಿಯಾ ಮತ್ತು ಮಧ್ಯವರ್ತಿಗಳು ಈ ಕಾರ್ಯಾಚರಣೆಯ ಒಟ್ಟು ಫಲಿತಾಂಶಗಳನ್ನು ಆನಂದಿಸುತ್ತಿದ್ದಾರೆ" ಎಂದು ಅವರು ಹೇಳಿದರು, ಸ್ಥಳೀಯ ಆಡಳಿತಗಳು ಸಾಂಪ್ರದಾಯಿಕ ಭೂಮಿ ಮತ್ತು ಗಡಿರೇಖೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮತ್ತು ಗುರುತಿಸುವಲ್ಲಿ ಉದ್ದೇಶಪೂರ್ವಕವಾಗಿ ಸೋತಿವೆ, ಇದು ಅವರನ್ನು ಪ್ರಜಾಪ್ರಭುತ್ವ ವಿರೋಧಿ ಮತ್ತು ಶಕ್ತಿಶಾಲಿಗಳ ಪರವಾಗಿ ನಿಲ್ಲುವಂತೆ ಮಾಡಿದೆ.

ಆದಿವಾಸಿ ಸಮುದಾಯಗಳು ಎದುರಿಸುತ್ತಿರುವ ಭಯವು ಬಸಂತಿ ದೇವಿ (35) ಅವರ ಮಾತುಗಳಲ್ಲಿ ಎದ್ದು ಕಾಣುತ್ತತವೆ. ಈ ಭಯ ಯಾರೂ ಊಹಿಸದಷ್ಟು ಆಳವಾಗಿದೆ.  ಅವರು ಹೇಳುತ್ತಾರೆ, “ಊರಿನ ಸುತ್ತಲೂ ಮಜಿಹಸ್‌ ಭೂಮಿಯಿದೆ. ಇದು 45 ಕುಟುಂಬಗಳು ವಾಸವಿರುವ ಊರು. ಇಲ್ಲಿನ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಪರಸ್ಪರ ಸಹಕಾರ ಸಹಾಯದಿಂದ ನಮ್ಮ ಬದುಕು ನಡೆಯುತ್ತಿದೆ. ಈಗ ಸುತ್ತಲಿನ ನೆಲವನ್ನು ಅಕ್ರಮವಾಗಿ ಮಾರಿ, ಗೋಡೆ ಕಟ್ಟಿದರೆ ನಮ್ಮ ದನ-ಕರುಗಳು, ಆಡುಗಳು ಎಲ್ಲಿ ಮೇಯುವುದು? ಇಡೀ ಗ್ರಾಮಕ್ಕೇ ಬೇಲಿ ಹಾಕಿದಂತಾಗುತ್ತದೆ. ಆಗ ನಮಗೆ ಊರು ಬಿಡುವುದರ ಹೊರತಾಗಿ ಇನ್ನೊಂದು ಆಯ್ಕೆಯೇ ಉಳಿದಿರುವುದಿಲ್ಲ.”

ಚರ್ಚೆ ಹಾಗೂ ಸಾಹಾಯದ ಮೂಲಕ ಬರಹವನ್ನು ಇನ್ನಷ್ಟು ಶ್ರೀಮಂತಗೊಳಿಸಲು ಸಹಾಯ ನೀಡಿದ ರಶ್ಮಿ ಕಥ್ಯಾಯನ್ ಅವರಿಗೆ ಲೇಖಕರು ಆಭಾರಿಯಾಗಿರುತ್ತಾರೆ .

ಅನುವಾದ: ಶಂಕರ. ಎನ್. ಕೆಂಚನೂರು

Jacinta Kerketta

اوراؤں آدیواسی برادری سے تعلق رکھنے والی جیسنتا کیرکیٹا، جھارکھنڈ کے دیہی علاقوں میں سفر کرتی ہیں اور آزاد قلم کار اور نامہ نگار کے طور پر کام کرتی ہیں۔ وہ آدیواسی برادریوں کی جدوجہد کو بیان کرنے والی شاعرہ بھی ہیں اور آدیواسیوں کے خلاف ہونے والی نا انصافیوں کے احتجاج میں آواز اٹھاتی ہیں۔

کے ذریعہ دیگر اسٹوریز Jacinta Kerketta
Editor : Pratishtha Pandya

پرتشٹھا پانڈیہ، پاری میں بطور سینئر ایڈیٹر کام کرتی ہیں، اور پاری کے تخلیقی تحریر والے شعبہ کی سربراہ ہیں۔ وہ پاری بھاشا ٹیم کی رکن ہیں اور گجراتی میں اسٹوریز کا ترجمہ اور ایڈیٹنگ کرتی ہیں۔ پرتشٹھا گجراتی اور انگریزی زبان کی شاعرہ بھی ہیں۔

کے ذریعہ دیگر اسٹوریز Pratishtha Pandya
Translator : Shankar N. Kenchanuru
shankarkenchanur@gmail.com

Shankar N. Kenchanur is a poet and freelance translator. He can be reached at shankarkenchanur@gmail.com.

کے ذریعہ دیگر اسٹوریز Shankar N. Kenchanuru