ಮಾಧ್ಯಮಗಳ ತುಂಬೆಲ್ಲಾ ಮಹಾನಗರಗಳಿಂದ ನಿರ್ಗಮಿಸುತ್ತಿರುವ ವಲಸಿಗರದೇ ಚಿತ್ರಗಳು. ಚಿಕ್ಕ ಊರುಗಳಷ್ಟೇ ಅಲ್ಲದೆ, ಗ್ರಾಮಗಳ ಒಳನಾಡಿನಿಂದಲೂ ವಾಪಸ್ಸಾಗುತ್ತಿರುವ ಶ್ರಮಿಕರ ಸಂಕಷ್ಟದತ್ತ ಜನರ ಗಮನವನ್ನು ಸೆಳೆಯಲು ಪತ್ರಕರ್ತರು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಬಿಲಾಸ್ಪುರದ ಹಿರಿಯ ಫೋಟೋ ಜರ್ನಲಿಸ್ಟ್ ಸತ್ಯಪ್ರಕಾಶ್ ಪಾಂಡೆ ಸಂಕಷ್ಟದಲ್ಲಿರುವ ವಲಸಿಗರ ಬಹುದೂರದ ಪ್ರಯಾಣವನ್ನು ಕುರಿತಂತೆ ವರದಿ ನೀಡುತ್ತಿದ್ದಾರೆ. ಈ ವರದಿಯಲ್ಲಿನ ಛಾಯಾಚಿತ್ರದಲ್ಲಿರುವ 50 ಶ್ರಮಿಕರು, ಛತ್ತೀಸ್ ಘಡ್ ನ ರಾಯ್ಪುರದಿಂದ ಝಾರ್ಖಂಡ್ ರಾಜ್ಯದ ಗಡ್ವ ಜಿಲ್ಲೆಯ ವಿವಿಧ ಗ್ರಾಮಗಳಿಗೆ ಮರಳುತ್ತಿದ್ದಾರೆ.
ಗಡ್ವ ಹಾಗೂ ರಾಯ್ಪುರ್ ನಡುವಿನ ದೂರ 538 ಕಿಲೋಮೀಟರ್.
"ಅವರು ಕಾಲ್ನಡಿಗೆಯಿಂದಲೇ ಪ್ರಯಾಣವನ್ನು ಕೈಗೊಂಡಿದ್ದು, 2-3 ದಿನಗಳಲ್ಲಿ ಅವರಾಗಲೇ 130 ಕಿಲೋಮೀಟರ್ ದೂರವನ್ನು (ರಾಯ್ಪುರ್ ಮತ್ತು ಬಿಲಾಸ್ಪುರ್ ನಡುವಿನ ದೂರ) ಕ್ರಮಿಸಿದ್ದಾರೆ. ಇನ್ನು 2-3 ದಿನಗಳಲ್ಲಿ ತಾವು ತಲುಪಬೇಕಾದ ಸ್ಥಳವನ್ನು ತಲುಪುತ್ತೇವೆಂಬ ಭರವಸೆಯಲ್ಲಿದ್ದಾರೆ." (ಸತ್ಯಪ್ರಕಾಶ್ ಅವರ ಫೇಸ್ಬುಕ್ ಪೋಸ್ಟ್ ವಲಸಿಗರ ಸಂಕಷ್ಟಗಳತ್ತ ಜನರ ಗಮನವನ್ನು ಸೆಳೆದಿದೆ. ಇದಕ್ಕೆ ಸ್ಪಂದಿಸಿದ ಕಾರ್ಯಕರ್ತರು, ಅಂಬಿಕಾಪುರದಿಂದ ಮುಂದಕ್ಕೆ ಇವರಿಗೆ ಸಾರಿಗೆಯ ವ್ಯವಸ್ಥೆಯನ್ನು ಕಲ್ಪಿಸುವಂತೆ ಜಿಲ್ಲಾಡಳಿತವನ್ನು ಸಂಪರ್ಕಿಸುತ್ತಿದ್ದಾರೆ. ಪ್ರಯಾಣವನ್ನು ಕಾಲ್ನಡಿಗೆಯಿಂದಲೇ ಪೂರೈಸಿದರೂ ಸರಿಯೇ, ನಾವು ನಮ್ಮ ಮನೆಗಳನ್ನು ತಲುಪಲೇಬೇಕೆಂಬುದು ವಲಸಿಗರ ಧೃಢ ನಿಶ್ಚಯವಾಗಿದೆ.)
"ಬಡತನವು ಈ ದೇಶಕ್ಕೆ ಅಂಟಿರುವ ಶಾಪವೇ ಹೌದು", ಎನ್ನುತ್ತಾರೆ ವಾಪಸ್ಸಾಗುತ್ತಿರುವ ಶ್ರಮಿಕರಲ್ಲೊಬ್ಬರಾದ ರಫೀಕ ಮಿಯಾನ್.
ಮುಖಪುಟ ಚಿತ್ರ: ಹಿರಿಯ ಪತ್ರಕರ್ತರಾದ ಸತ್ಯಪ್ರಕಾಶ್ ಪಾಂಡೆ ಬಿಲಾಸ್ಪುರ್ ನಿವಾಸಿಯಾಗಿದ್ದಾರೆ. ಇವರು ವನ್ಯಜೀವಿಗಳ ಛಾಯಾಚಿತ್ರಗ್ರಾಹಕರೂ ಹೌದು.
ಅನುವಾದ: ಶೈಲಜ ಜಿ. ಪಿ.