"ನಮ್ಮ ತಂದೆಯ ಸಾವಿನ ನಂತರ ಅವರ ಅಂತಿಮ ಕ್ರಿಯೆಯನ್ನು ಗೌರವಯುತವಾಗಿ ನಡೆಸಲಾಗುವುದಿಲ್ಲ ಎನ್ನುವ ಕುರಿತು ಚಿಂತೆಗೀಡಾಗಿದ್ದೆವು."

ಪಂಚನಾಥನ್ ಸುಬ್ರಮಣ್ಯಮ್ ಅವರ ನಿಧನದ ಎರಡು ತಿಂಗಳ ನಂತರವೂ ಅವರ ಮಗನಾದ ರಮೇಶ್‌ ತಂದೆಯ ಸಾವಿನ ನೋವಿನಲ್ಲೇ ಇದ್ದರು. “ನಾವು ಅವರನ್ನು ಕೋವಿಡ್‌ -19 ಲಕ್ಷಣಗಳ ಕಾರಣಕ್ಕಾಗಿ ತಂಜಾವೂರಿನ ಆಸ್ಪತ್ರೆಗೆ ಸೇರಿಸಿದಾಗ ಅವರನ್ನು ಆಸ್ಪತ್ರೆಯಿಂದ ಮರಳಿ ನೀರ್ಜೀವವಾಗಿ ಕರೆದೊಯ್ಯುತ್ತೇವೆನ್ನುವ ಕಲ್ಪನೆ ಕೂಡ ನಮಗಿರಲಿಲ್ಲ.” ಎಂದು ಹೇಳುತ್ತಾರೆ.

ಅದಕ್ಕಿಂತ ಹೆಚ್ಚಾಗಿ, ಭಾರತೀಯ ಸೇನೆಯಲ್ಲಿ ಕ್ಲರಿಕಲ್ ಹುದ್ದೆಯಿಂದ ಕೆಲವು ವರ್ಷಗಳ ಹಿಂದೆ ನಿವೃತ್ತರಾಗಿದ್ದ 68 ವರ್ಷದ ಸುಬ್ರಮಣ್ಯಂ  ಅವರಿಗೆ ಯಾವುದೇ ದೊಡ್ಡಮಟ್ಟದ ಆರೋಗ್ಯ ಸಂಬಂಧಿ ಸಮಸ್ಯೆಗಳಿರಲಿಲ್ಲ. ಮಿಲಿಟರಿಯೊಂದಿಗಿನ ತನ್ನ ಒಡನಾಟದ ಬಗ್ಗೆ ಅವರಿಗೆ  ಹೆಮ್ಮೆಯಿತ್ತು “ಮತ್ತು ಅವರ ಫಿಟ್ನೆಸ್ ಕುರಿತು ಬಹಳ ಕಾಳಜಿವಹಿಸುತ್ತಿದ್ದರು. ಅವರು ತಮ್ಮ ದೈನಂದಿನ ವಾಕಿಂಗ್ ಎಂದಿಗೂ ತಪ್ಪಿಸಿಲ್ಲ ಮತ್ತು ಅವರ ಆಹಾರದ ವಿಷಯದಲ್ಲಿಯೂ  ಕಟ್ಟುನಿಟ್ಟಾಗಿದ್ದರು" ಎಂದು ತಮಿಳುನಾಡಿನ ಕುಂಬಕೋಣಂ ಪಟ್ಟಣ ಮೂಲದ ರಮೇಶ್ (40) ವಿವರಿಸುತ್ತಾರೆ. "ಅವರನ್ನು ಆಸ್ಪತ್ರೆಗೆ ದಾಖಲಿಸುವಾಗಲೂ, ಅವರು ಗುಣಮುಖನಾಗುತ್ತಾರೆ ಎಂದೇ ನಾವು ಭಾವಿಸಿದ್ದೆವು."

ಆದರೆ ಆಗಸ್ಟ್ 14ರಂದು ಸುಬ್ರಮಣ್ಯಂ ನಿಧನರಾದಾಗ, ರಮೇಶ್ ಮತ್ತು ಅವರ ಕುಟುಂಬದವರು ವಿಚಲಿತರಾದರು. ಅದಕ್ಕೆ ಕಾರಣ ಕೇವಲ ಸುಬ್ರಮಣ್ಯಂ ಅವರ ಸಾವು ಮಾತ್ರವಲ್ಲದೆ ರಾಜ್ಯದಲ್ಲಿ ನಡೆಯುತ್ತಿದ್ದ ಕೋವಿಡ್ -19 ಸಂತ್ರಸ್ತರ ಅಂತ್ಯಕ್ರಿಯೆಗಳ ರೀತಿ ಮತ್ತು ಅಂತಹ ಶವಗಳನ್ನು ಜನರು ನಡೆಸಿಕೊಳ್ಳುತ್ತಿದ್ದ ರೀತಿ. ಮುಂದೆ ಏನು ಮಾಡಬೇಕೆಂಬುದರ ಬಗ್ಗೆ ಅವರು ಗೊಂದಲಕ್ಕೊಳಗಾಗಿದ್ದರು."ಸಂಬಂಧಿಕರು ಮತ್ತು ಸ್ನೇಹಿತರು ಅಷ್ಟೇನೂ ಬೆಂಬಲ ನೀಡಲಿಲ್ಲ" ಎಂದು ರಮೇಶ್ ಹೇಳುತ್ತಾರೆ. "ಬಹುಶಃ ಇದು ಅರ್ಥ ಮಾಡಿಕೊಳ್ಳುವಂತಹದ್ದೇ ಇಂದು ಕೊರೋನಾ ಸಾವು ಎಲ್ಲರಲ್ಲೂ ದೊಡ್ಡ ಕಳವವಳಕ್ಕೆ ಕಾರಣವಾಗಿದೆ"

ಕೊನೆಗೆ ಅನಿರೀಕ್ಷಿತ ಮೂಲದಿಂದ ಪ್ರಾಯೋಗಿಕ ಸಹಾಯಗಳು ಬಂದವು. ಹಾಗೆ ಸಹಾಯಕ್ಕೆ ಬಂದವರು ತಮಿಳುನಾಡು‌ ಮುಸ್ಲಿಮ್ ಮುನ್ನೇಟ್ರ ಕಳಗಂ. ಇದೊಂದು ಆ ರಾಜ್ಯದಲ್ಲಿನ ಸರ್ಕಾರೇತರ ಸಂಸ್ಥೆ. ಸುಬ್ರಮಣ್ಯಂ ನಿಧನರಾದ ಸ್ವಲ್ಪ ಸಮಯದ ನಂತರ, ಆರು ಟಿಎಂಎಂಕೆ ಸ್ವಯಂಸೇವಕರು ಕುಟುಂಬಕ್ಕೆ ಸಹಾಯ ಮಾಡಲು ಮುಂದೆ ಬಂದರು. ಅವರು ಕುಟುಂಬಕ್ಕೆ ಆಸ್ಪತ್ರೆಯಿಂದ ಶವವನ್ನು ಪಡೆಯುವುದರಿಂದ ಹಿಡಿದು ಗೌರವಯುತವಾದ ಅಂತ್ಯ ಸಂಸ್ಕಾರಕ್ಕಾಗಿ ಶವವನ್ನು ಹೂಳುವ ತನಕ ಸಹಾಯ ಮಾಡಿದರು. (ಕೆಲವು ಹಿಂದೂ ಸಮುದಾಯಗಳು ಕುಂಬಕೋಣಂನಲ್ಲಿ ಸುಡುವ ಬದಲು ಹೂಳುತ್ತಾರೆ).

ಕುಟುಂಬದ ಮಟ್ಟಿಗೆ ಇದೊಂದು ಬಹಳ ದೊಡ್ಡ ಸಹಾಯವಾಗಿದ್ದರೂ, ಟಿಎಂಎಂಕೆ ಮಟ್ಟಿಗೆ ಅವರು ಮಾರ್ಚ್ ಅಂತ್ಯದಿಂದ ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಅವರು ನಡೆಸಿದ 1,100 ಅಂತ್ಯಕ್ರಿಯೆಗಳಲ್ಲಿ ಸುಬ್ರಮಣ್ಯಂ ಅವರ ಅಂತ್ಯಕ್ರಿಯೆಯೂ ಒಂದು. ಸತ್ತವರ ಸಮುದಾಯ ಅಥವಾ ಜಾತಿಯನ್ನು ಲೆಕ್ಕಿಸದೆ ಅಂತ್ಯಕ್ರಿಯೆಗಳನ್ನು ಮಾಡಲಾಗುತ್ತದೆ - ಕುಟುಂಬದ ಧಾರ್ಮಿಕ ಸಂಪ್ರದಾಯಗಳು ಮತ್ತು ಅವರು ಬಯಸಿದಂತೆ ಅಂತಿಮ ವಿಧಿಗಳನ್ನು ನಡೆಸಲಾಗುತ್ತದೆ. ಕೊವಿಡ್‌ -19 ಎಂದು ಖಚಿತಗೊಂಡ ಪ್ರಕರಣಗಳಲ್ಲಿ ಟಿಎಂಎಂಕೆ ಎಂಟು ಅಡಿ ಆಳದ ಹೊಂಡಗಳಲ್ಲಿ ಸಮಾಧಿ ಮಾಡುವ ಮೂಲಕ ಸ್ಥಳೀಯ ಆಡಳಿತ ವಿಧಿಸಿರುವ ಪ್ರೋಟೋಕಾಲ್‌ಗಳನ್ನು ಕೂಡ ಅನುಸರಿಸಿದೆ.

Top left: Two volunteers place a body in their vehicle. Top right: TMMK volunteers stand beside their ambulance vans, readying for the day’s activity. And volunteers in full PPE stand in respect after unloading a body at a burial ground
PHOTO • Courtesy: TMMK

ಮೇಲ್ಭಾಗ(ಎಡ): ಇಬ್ಬರು ಸ್ವಯಂಸೇವಕರು ತಮ್ಮ ವಾಹನದಲ್ಲಿ ಶವವನ್ನು ಇಡುತ್ತಿರುವುದು. ಮೇಲ್ಭಾಗ(ಬಲ): ಟಿಎಂಎಂಕೆ ಸ್ವಯಂಸೇವಕರು ತಮ್ಮ ಆಂಬುಲೆನ್ಸ್ ವ್ಯಾನ್‌ಗಳ ಪಕ್ಕದಲ್ಲಿ ನಿಂತು ದಿನದ ಚಟುವಟಿಕೆಗೆ ಸಿದ್ಧರಾಗಿರುವುದು. ಮತ್ತು ಪೂರ್ಣ ಪಿಪಿಇ ತೊಟ್ಟಿರುವ ಸ್ವಯಂಸೇವಕರು ಶವವನ್ನು ಸ್ಮಶಾನದಲ್ಲಿ ಇಳಿಸಿದ ನಂತರ ನಿಂತು ಗೌರವ ಸಲ್ಲಿಸುತ್ತಿರುವುದು

ವೈರಸ್‌ ಕುರಿತಾದ ಭಯ ಮತ್ತು ಲಾಕ್‌ಡೌನ್‌ ಸಮಯದಲ್ಲಿ ಶವಗಳನ್ನು ಸ್ಥಳಾಂತರಿಸುವುದು ಬಹಳ ತ್ರಾಸದಾಯಕವಾದ ಕೆಲಸ. ಚಿತಾಗಾರ ಮತ್ತು ಸ್ಮಶಾನಗಳಲ್ಲಿ ಕಾರ್ಮಿಕರು ಸಿಗುವುದಿಲ್ಲ. ಆಂಬುಲೆನ್ಸ್‌ನ ಲಭ್ಯತೆ ಕೂಡ ವಿರಳ. ಇದರಿಂದಾಗಿ ದುಃಖಿತ ಕುಟುಂಬಗಳು ಹೆಚ್ಚಿನ ಖರ್ಚು, ಪೂರ್ವಾಗ್ರಹ ಮತ್ತು ಕಿರುಕುಳವನ್ನು ಅನುಭವಿಸಿವೆ. ಏಪ್ರಿಲ್ 19ರಂದು ನಿಧನರಾದ 55 ವರ್ಷದ ನ್ಯೂರೊಸರ್ಜನ್ ಡಾ. ಸೈಮನ್ ಹರ್ಕ್ಯುಲಸ್ ಅವರ ಪ್ರಕರಣವು ಅತ್ಯಂತ ಕುಖ್ಯಾತ ಪ್ರಕರಣಗಳಲ್ಲಿ ಒಂದಾಗಿದೆ - ಪ್ರಾಯಶಃ‌ ಇವರು ಕೋವಿಡ್ -19ಗೆ ಬಲಿಯಾದ ತಮಿಳುನಾಡಿನ ಮೊದಲ ವೈದ್ಯರು.

ಅವರ ಕುಟುಂಬದವರು ಚೆನೈನ ಕೀಳ್ಪಾಕ್‌ ಪ್ರದೇಶದ ಸ್ಮಶಾನಕ್ಕೆ ಶವವನ್ನು ಒಯ್ದಾಗ ಅಲ್ಲಿನ ನೂರಾರು ಜನರು ಅವರನ್ನು ಶವದೊಂದಿಗೆ ಅಲ್ಲಿಂದ ಓಡಿಸಿದರು. ನಂತರ ಅವರ ಶವವನ್ನು ಆರು ಕಿಲೋಮೀಟರ್ ದೂರದಲ್ಲಿರುವ ಅಣ್ಣಾ ನಗರದ ವೇಲಂಗಡು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಜನಸಮೂಹವು ಆಂಬುಲೆನ್ಸ್, ಅದರ ಚಾಲಕ ಮತ್ತು ನೈರ್ಮಲ್ಯ ಕಾರ್ಮಿಕರ ಮೇಲೆ ಕೋಲು ಮತ್ತು ಕಲ್ಲುಗಳಿಂದ ಹಲ್ಲೆ ಮಾಡಿತು. ಕೊನೆಗೆ, ಡಾ. ಸೈಮನ್ ಅವರ ಸ್ನೇಹಿತರು, ಡಾ. ಪ್ರದೀಪ್ ಕುಮಾರ್ ಮತ್ತು ಇನ್ನಿಬ್ಬರು ಮರುದಿನ ಮುಂಜಾನೆ ಅವರನ್ನು ಸದ್ದಿಲ್ಲದೆ ಅವರ ಕುಟುಂಬದ ಒಬ್ಬ ಸದಸ್ಯರಿಲ್ಲದೆ ಜೀವ ಭಯದೊಂದಿಗೆ ಹೂಳುವಲ್ಲಿ ಯಶಸ್ವಿಯಾದರು.

ಇಂತಹ ಭಯಭೀತ ವಾತಾವರಣದಲ್ಲಿ ʼಟಿಎಂಎಂಕೆʼಯ ಮಧ್ಯಪ್ರವೇಶವು ಆ 1,100 ಕುಟುಬಂದ ಪಾಲಿಗೆ ಬಹಳ ಮಹತ್ವಪೂರ್ಣವಾದುದು.

"ಚೆನ್ನೈನ ಸಂಬಂಧಿಯೊಬ್ಬರು ನನಗೆ ನೀಡಿದ ಟಿಎಂಎಂಕೆ ಸಂಖ್ಯೆಗೆ ಕರೆ ಮಾಡುವ ಸಮಯದಲ್ಲಿ ನಾವು ಉದ್ವೇಗ ಮತ್ತು ಹತಾಶ ಸ್ಥಿತಿಯಲ್ಲಿದ್ದೆವು" ಎಂದು ರಮೇಶ್ ಹೇಳುತ್ತಾರೆ.

“ನಮಗೆ ಬೇಕಿದ್ದಿದ್ದು ಒಂದು ಆಂಬ್ಯುಲೆನ್ಸ್ ಮಾತ್ರ, ಆದರೆ ಅವರು ನಿಜವಾಗಿ ಎಲ್ಲವನ್ನೂ ನೋಡಿಕೊಂಡರು. ನಮ್ಮ ತಂದೆಯು ಸಾವಿನಲ್ಲಿ ಅಗೌರವಗೊಳ್ಳುವುದು ನಮಗೆ ಇಷ್ಟವಿರಲಿಲ್ಲ. ಅವರು ಸ್ವಾಭಿಮಾನದ ವ್ಯಕ್ತಿಯಾಗಿದ್ದರು. ಅದೃಷ್ಟವಶಾತ್, ಟಿಎಂಎಂಕೆ ಅದನ್ನು ಹಾಗೆಯೇ ಉಳಿಸಿಕೊಳ್ಳಲು ಸಹಾಯ ಮಾಡಿತು.”

ಗಮನಾರ್ಹವಾಗಿ, ಅವರು ಅಂತ್ಯಕ್ರಿಯೆ ನಡೆಸಿದ ಸುಮಾರು 100 ಕೋವಿಡ್ ಅಲ್ಲದ ಸಾವುಗಳು ಸೇರಿದಂತೆ 1,100 ಅಂತ್ಯಕ್ರಿಯೆಗಳಲ್ಲಿ ಒಂದೂ ಸಹ ಯಾವುದೇ ರೀತಿಯಲ್ಲಿ ಅಗೌರವಪೂರ್ವಕವಾಗಿರಲಿಲ್ಲ.

"ಕಳೆದ ಆರು ವರ್ಷಗಳಿಂದ ಟಿಎಂಎಂಕೆ ಸ್ವಯಂಸೇವಕರೊಂದಿಗೆ ಸಂಪರ್ಕ ಹೊಂದಿರುವ ನನಗೆ ಇದರಲ್ಲಿ ಆಶ್ಚರ್ಯ ತರುವಂತಹದ್ದು ಏನಿಲ್ಲ" ಎಂದು ಟಿಎಂಎಂಕೆ ಸೇವಾ ಮನೋಭಾವದ ಕುರಿತು ಮೊದಲಿನಿಂದಲೂ ತಿಳಿದಿರುವ ಕ್ಯಾನ್ಸರ್ ತಜ್ಞ ಮತ್ತು ಚೆನ್ನೈನ ಶ್ರೀ ಬಾಲಾಜಿ ದಂತ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಎನ್. ಅರವಿಂದ ಬಾಬು ಹೇಳುತ್ತಾರೆ. ಅವರ ಸ್ವಯಂಸೇವಕರು ರಕ್ತದಾನ ಮಾಡಿದ್ದಾರೆ ಮತ್ತು ಅನೇಕ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗಳಿಗಾಗಿ ಹಣವನ್ನು ಸಂಗ್ರಹಿಸಿದ್ದಾರೆ ಎಂದು ಅವರು ಹೇಳುತ್ತಾರೆ. ನಗರದ ಅಡಂಬಾಕ್ಕಂ ಪ್ರದೇಶದಲ್ಲಿ ವಾಸಿಸುವ ಡಾ. ಬಾಬು, ಏಪ್ರಿಲ್‌ ತಿಂಗಳ ಲಾಕ್‌ಡೌನ್‌ ಸಮಯದಲ್ಲಿ "ಅನಾಥ ಮಹಿಳೆಯೊಬ್ಬರು ಸತ್ತಾಗ (ಬಹುಶ ಹಸಿವಿನಿಂದ)" ಟಿಎಂಎಂಕೆ ಈಗ ಮಾಡುತ್ತಿರುವ ಈ ಕೆಲಸವನ್ನು ಕಂಡಿದ್ದೇನೆ ಎಂದು ಹೇಳುತ್ತಾರೆ.

"ಆಗ ನಾನು ಬಹಳ ಬೇಸರಗೊಂಡಿದ್ದೆ ಆಕೆಗೆ ಗೌರವಯುತವಾದ ಅಂತ್ಯಸಂಸ್ಕಾರ ಸಿಗಬೇಕೆನ್ನುವುದು ನನ್ನ ಅಭಿಪ್ರಾಯವಾಗಿತ್ತು." ಎಂದು ಡಾ. ಬಾಬು ನೆನಪಿಸಿಕೊಳ್ಳುತ್ತಾರೆ. ಆಗ ಟಿಎಂಎಂಕೆ ಸ್ವಯಂಸೇವಕರು ಮುಂದೆ ಬಂದು ಆಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆಯನ್ನು ಮುಗಿಸಿ ಆಕೆಯ ಮರಣ ಪ್ರಮಾಣಪತ್ರವನ್ನು ಪಡೆಯುವವರೆಗೆ ಎಲ್ಲವನ್ನೂ ಅನುಸರಿಸಿ ಮಾಡಿ ಮುಗಿಸಿದರು. ಮರಣ ಪ್ರಮಾಣಪತ್ರವನ್ನು ಪಡೆಯುವುದು ಬಹಳ ಮುಖ್ಯವಾಗಿತ್ತು. ಯಾಕೆಂದರೆ "ಇದರಿಂದಾಗಿ ಮರಣವು ಕೊವಿಡ್‌ಗೆ ಸಂಬಂಧಿಸಿಲ್ಲವೆಂದು ಪೋಲಿಸ್‌ ಸ್ಟೇಷನ್‌ನಲ್ಲಿ ಸಾಧಿಸಿ ಪ್ರಮಾಣಪತ್ರವನ್ನು ಪಡೆಯಲು ಸಹಾಯ ಮಾಡಿತು. ನಿಜಕ್ಕೂ ಇದೊಂದು ಒ‍ಳ್ಳೆಯ ನಡವಳಿಕೆ"
PHOTO • Courtesy: TMMK

ಅವರು ಯಾವುದೇ ಸಮಯದಲ್ಲಿಯೂ ಅಂತ್ಯಕ್ರಿಯೆಗಳನ್ನು ನಡೆಸಲು ಸಿದ್ಧವಿರುತ್ತಾರೆ, ಈ ಚಿತ್ರದಲ್ಲಿರುವುದು ತಡರಾತ್ರಿಯ ಅಂತ್ಯಕ್ರಿಯೆ

ಸಂಘಟನೆಯು ಕಳೆದ ಎಂಟು ವರ್ಷಗಳಿಂದ ಅನಾಥ ಮತ್ತು ವಾರಸುದಾರರಿಲ್ಲದ ಶವಗಳಿಗೆ ಘನತೆಯ ಅಂತಿಮ ಸಂಸ್ಕಾರವನ್ನು ನೀಡುತ್ತಿದೆ ಎನ್ನವುದು ಕೂಡಾ ಡಾ. ಬಾಬು ಅವರಿಗೆ ಈ ಸಮಯದಲ್ಲಿ ತಿಳಿದುಬಂತು. "ಇದು ನಿಜಕ್ಕೂ ಬೆರಗುಗೊಳಿಸುವ ವಿಚಾರ, ವ್ಯಕ್ತಿಯ ಹಿನ್ನೆಲೆಯನ್ನು ಲೆಕ್ಕಿಸದೆ, ಸಾವಿನ ನಂತರ ಮನುಷ್ಯನ ಘನತೆಯ ಕುರಿತು ಅವರು ಕಾಳಜಿ ವಹಿಸುತ್ತಾರೆ."

"ಈ ಮೊದಲೂ ನಾವು ಕೋವಿಡ್ -19 ಸಂತ್ರಸ್ತರ ಅಂತ್ಯಕ್ರಿಯೆಗಳನ್ನು ನಿರ್ವಹಿಸಿದ್ದೆವು ಆದರೆ, ಡಾ. ಸೈಮನ್ ಸಾವಿನ ದುರಂತ ಮತ್ತು ಅವರ ಕುಟುಂಬದ ಮೇಲಿನ ದಾಳಿಯ ಘಟನೆ ನಡೆಯುವವರೆಗೂ ನಮಗೆ ಯಾವುದೇ ಯೋಜಿತ ಕಾರ್ಯ ವಿಧಾನವಿರಲಿಲ್ಲ. ಸಮಾಜವು ಕೊವಿಡ್‌ ಸಾವುಗಳನ್ನು ಸಮಾಜ ಭಯ ಮತ್ತು ದ್ವೇಷದಿಂದ ನೋಡುತ್ತಿತ್ತು ಹೀಗಾಗಿ ಈ ಕುರಿತು ನಾವು ಏನಾದರೂ ಮಾಡಲೇಬೇಕಿತ್ತು." ಎಂದು ಮಾಜಿ ಶಾಸಕ ಮತ್ತು ಟಿಎಂಎಂಕೆ ರಾಜ್ಯ ಅಧ್ಯಕ್ಷ ಎಂ. ಹೆಚ್. ಜವಾಹಿರುಲ್ಲಾ ಹೇಳುತ್ತಾರೆ.

ಆಗ ಅವರು ಸಂತ್ರಸ್ತರ ಅಂತ್ಯಕ್ರಿಯೆಗಳನ್ನು ನಡೆಸುವುದೆಂದು ತೀರ್ಮಾನಿಸಿದರು “ಸತ್ತವರನ್ನು ಅವರವರ ಧರ್ಮದ ಪದ್ಧತಿಗಳ ಪ್ರಕಾರ ಗೌರವದಿಂದ ಕಳಿಸಿಕೊಡುವುದು ನಮ್ಮ ಉದ್ದೇಶವಾಗಿತ್ತು. ಅವರ ನಂಬಿಕೆಗಳನ್ನು ಗೌರವಿಸದೆ ಅದನ್ನು ಹೇಗೆ ಸಾಧಿಸಲು ಸಾಧ್ಯ?" ಎಂದು ಜವಾಹಿರುಲ್ಲಾ ಕೇಳುತ್ತಾರೆ.

ಟಿಎಂಎಂಕೆಯ ಬಹುತೇಕ ಸ್ವಯಂಸೇವಕರು 22-40 ವಯಸ್ಸಿನ ಕೆಳವರ್ಗದ ಪುರುಷರು. ಅವರು ಪ್ರಚಾರವನ್ನು ಎದುರು ನೋಡುವುದಿಲ್ಲ ಮತ್ತು ಅದು ಅವರಿಗೆ ಹಿತವನ್ನೂ ಕೊಡುವುದಿಲ್ಲ. ಕೋವಿಡ್ -19 ರೋಗಿಗಳು ಮತ್ತು ಬಲಿಪಶುಗಳೊಂದಿಗೆ ವ್ಯವಹರಿಸುವ ಆರೋಗ್ಯ ಕಾರ್ಯಕರ್ತರ ಬಗ್ಗೆ ಸಾರ್ವಜನಿಕ ಮನಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅವರು ಕೆಲಸ ಮಾಡುತ್ತಾರೆ. ರಾಜ್ಯಾದ್ಯಂತ ಇಂತಹ ಸುಮಾರು 1,000 ಸ್ವಯಂಸೇವಕರಿದ್ದು, ಹೆಚ್ಚಿನವರು, ಬೀದಿ ಬದಿ ವ್ಯಾಪಾರಿಗಳು ಅಥವಾ ತನ್ನಂತೆಯೇ ಸಣ್ಣ ಅಂಗಡಿ ಮಾಲೀಕರು ಎಂದು ಟಿಎಂಎಂಕೆ ವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿರುವ ಚೆನ್ನೈ ಮೂಲದ ಖಲೀಲ್ ರಹಮಾನ್ ಹೇಳುತ್ತಾರೆ.

"ನಮ್ಮಲ್ಲಿ ಹೆಚ್ಚಿನವರು ಅಂದಿನ ಅನ್ನ ಅಂದೇ ದುಡಿದು ತಿನ್ನಬೇಕಾದ ಪರಿಸ್ಥಿತಿಯವರು. ಕೆಲವೇ ಕೆಲವರು ಮಾತ್ರ ಸ್ವಲ್ಪ ಉತ್ತಮ ಹಿನ್ನೆಲೆಯಿಂದ ಬಂದವರಾಗಿರಬಹುದು." ಎಂದು ರಹಮಾನ್ ಹೇಳುತ್ತಾರೆ.

ಅವರ ಸೇವೆಗೆ ಗೌರವವು ಹಲವು ಮೂಲೆಗಳಿಂದ ಬರುತ್ತದೆ. "ಕೇಂದ್ರ ಸಚಿವರೊಬ್ಬರ ಅಂತ್ಯಕ್ರಿಯೆಯ ವೀಡಿಯೊವನ್ನು ನೀವು ನೋಡಿದ್ದೀರಾ?" ಎಂದು ಈರೋಡ್ ಜಿಲ್ಲೆಯ ಗೋಪಿಚೆಟ್ಟಿಪಾಳ್ಯಂ ಪಟ್ಟಣದ ಜಿ.ವಿ. ಅಧಿಯಮಾನ್‌ ಕೇಳುತ್ತಾರೆ. "ಅವರು [ಡಿಎಂಕೆಗೆ] ರಾಜಕೀಯ ಎದುರಾಳಿಯಾಗಿರಬಹುದು, ಆದರೂ ಅವರ ದೇಹವನ್ನು ಗುಂಡಿಗೆ ಎಸೆಯುವ ರೀತಿ, ಮತ್ತು ನಂತರ ಗುಂಡಿಯಲ್ಲಿ ಒಬ್ಬರು ಇಳಿದು ಅದನ್ನು ಸರಿಯಾಗಿ ಇರಿಸುವುದು ಇದನ್ನೆಲ್ಲ ನೋಡಿ ನನಗೆ ಬಹಳ ನೋವಾಗಿತ್ತು." ಅಧಿಯಾಮಾನ್ ಅವರ 86 ವರ್ಷದ ತಂದೆ 1960ರ ದಶಕದ ಹಿಂದಿ ವಿರೋಧಿ ಆಂದೋಲನಗಳಲ್ಲಿ ಭಾಗವಹಿಸಿ ಮಾಜಿ ಡಿಎಂಕೆ ಶಾಸಕರೂ ಆಗಿದ್ದ ಜಿ.ಪಿ. ವೆಂಕಿಟು ಕೂಡ ಸೆಪ್ಟೆಂಬರ್ 23ರಂದು ಕೋವಿಡ್ -19ಕ್ಕೆ ತುತ್ತಾದರು.

ವೀಡಿಯೊ ವೀಕ್ಷಿಸಿ: 1,100 ದೇಹಗಳ ಅಂತಿಮ ಸಂಸ್ಕಾರ ಮತ್ತು ಬಹಳಷ್ಟು ಪೂರ್ವಗ್ರಹಗಳು

‘ನಾನು ಈಗ ಎಂಟು ವರ್ಷಗಳಿಂದ ಈ ವೈದ್ಯಕೀಯ ತಂಡದ ಭಾಗವಾಗಿದ್ದೇನೆ. ಕೊವಿಡ್‌ನಿಂದಾಗಿ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ, ಆದರೆ ಜನರು ಕೃತಜ್ಞತೆಯನ್ನು ವ್ಯಕ್ತಪಡಿಸಿದಾಗ, ಈ ಒತ್ತಡಗಳೆಲ್ಲ ಅಷ್ಟು ಮುಖ್ಯವೆನಿಸುವುದಿಲ್ಲ’

ಆ ದಿನ ಅಂತರ ಜಿಲ್ಲಾ ಪ್ರಯಾಣಕ್ಕೆ ಯಾವುದೇ ಆಂಬುಲೆನ್ಸ್ ಲಭ್ಯವಿಲ್ಲ ಎಂದು ಸರ್ಕಾರಿ ಸೇವೆ ಹೇಳಿದಾಗ ಅವರ ಕುಟುಂಬ ಸಮಸ್ಯೆಗಳಿಗೆ ಈಡಾಯಿತು. "ನನ್ನ ತಂದೆ ಕೊಯಮತ್ತೂರು ಆಸ್ಪತ್ರೆಯಲ್ಲಿದ್ದರು. ನಾವು ಅವರನ್ನು ಗೋಪಿಚೆಟ್ಟಿಪಾಳ್ಯಂಗೆ ಕರೆದುಕೊಂಡು ಬರಬೇಕಿತ್ತು. ಈ ಸಮಯದಲ್ಲಿ ಟಿಎಂಎಂಕೆ ಸಹಾಯಕ್ಕೆ ಮುಂದೆ ಬಂದು ನಮ್ಮ ಕುಟುಂಬದವರಂತೆ  ಎಲ್ಲವನ್ನೂ ನೋಡಿಕೊಂಡರು ಎಂದು ಅಧಿಯಮಾನ್ ಹೇಳುತ್ತಾರೆ.

ಪ್ರತಿ ಅಂತ್ಯಕ್ರಿಯೆಯೂ ವಿಸ್ತಾರವಾದ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಆದರೂ, ಆಸ್ಪತ್ರೆಗಳಲ್ಲಿ ಕಾಗದಪತ್ರಗಳನ್ನು ತಯಾರು ಮಾಡಲು ಪ್ರಾರಂಭಿಸುವುದರಿಂದ ಹಿಡಿದು ಅಂತ್ಯಕ್ರಿಯೆಯನ್ನು ನಡೆಸುವಲ್ಲಿ ಸಂಬಂಧಿಕರೊಂದಿಗೆ ಸಮನ್ವಯ ಸಾಧಿಸುವವರೆಗೆ, ಸ್ವಯಂಸೇವಕರು ಒಂದು ಅಂತ್ಯಕ್ರಿಯೆ ಪೂರ್ಣಗೊಳಿಸಲು ಕೇವಲ 3-4 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. "ನಮ್ಮ ಆಡಳಿತಾತ್ಮಕ ಉದ್ದೇಶಗಳಿಗಾಗಿ ನಾವು ತಮಿಳುನಾಡನ್ನು 56 ಜಿಲ್ಲೆಗಳಾಗಿ ವಿಭಾಗಿಸಿದ್ದೇವೆ [ಅಧಿಕೃತವಾಗಿ, 38 ಇವೆ], ಪ್ರತಿಯೊಂದರಲ್ಲೂ ನಾವು ಕಾರ್ಯದರ್ಶಿಯೊಂದಿಗೆ ವೈದ್ಯಕೀಯ ಸೇವಾ ವಿಭಾಗವನ್ನು ಹೊಂದಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ತಲಾ 6-8 ಸ್ವಯಂಸೇವಕರ 2-3 ತಂಡಗಳಿವೆ ”ಎಂದು ಖಲೀಲ್ ರಹಮಾನ್ ಹೇಳುತ್ತಾರೆ.

"ಮಾನವಕುಲಕ್ಕೆ ಇದೊಂದು ದೊಡ್ಡ ಸೇವೆಯಾಗಿದೆ, ಮತ್ತು ಅದನ್ನು ಮಾಡುವಲ್ಲಿ, ಸ್ವಯಂಸೇವಕರು ಪ್ರತಿಯೊಂದು ಸಂದರ್ಭದಲ್ಲೂ ಪ್ರೋಟೋಕಾಲ್ ಅನ್ನು ಸೂಕ್ಷ್ಮವಾಗಿ ಅನುಸರಿಸುತ್ತಾರೆ" ಎಂದು ತಿರುಪತ್ತೂರು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಿ. ವಿಜಯಕುಮಾರ್ ಹೇಳುತ್ತಾರೆ. “ಉದಾಹರಣೆಗೆ, ಕೋವಿಡ್ ಸಾವಿನ ಸಂದರ್ಭದಲ್ಲಿ ಅವರು ಗುಂಡಿಯು ಎಂಟು ಅಡಿ ಆಳವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುತ್ತಾರೆ ಮತ್ತು ಅಂತ್ಯಕ್ರಿಯೆಯ ಸಮಯದಲ್ಲಿ ಸರಿಯಾದ ಪಿಪಿಇ ಸೂಟ್‌ಗಳನ್ನೂ ಧರಿಸಿರುತ್ತಾರೆ. ನಮ್ಮ ಜಿಲ್ಲೆಯು 100ಕ್ಕೂ ಹೆಚ್ಚು ಸಾವುಗಳನ್ನು ಕಂಡಿದೆ, ಅದರಲ್ಲಿ ಟಿಎಂಎಂಕೆ ಕನಿಷ್ಠ 40 ಶೇಕಡಾ ಶವಗಳ ಅಂತಿಮ ಸಂಸ್ಕಾರವನ್ನು ನಿಭಾಯಿಸಿದೆ.” ನಿಖರವಾದ ಅನುಪಾತಗಳು ಲಭ್ಯವಿಲ್ಲವಾದರೂ, 1,100 ಅಂತ್ಯಕ್ರಿಯೆಗಳಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಇತರ ಧರ್ಮಗಳೂ ಸೇರಿವೆ.

ಅವರು ಸಕ್ರಿಯವಾಗಿರುವ ಪ್ರದೇಶಗಳಲ್ಲಿ, ಈ ಸ್ವಯಂಸೇವಕರ ಪ್ರಯತ್ನವು ವೈರಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡಲು ಸಾಕಷ್ಟು ಸಹಾಯ ಮಾಡಿದೆ.

"ಮೃತ ದೇಹಗಳು ಸೋಂಕನ್ನು ಹರಡುತ್ತವೆ ಎಂಬ ಕಲ್ಪನೆಯಿಂದ ಆ ಭೀತಿ ಉಂಟಾಗುತ್ತದೆ. ಆದರೆ ಮೃತದೇಹದಿಂದ ಸೋಂಕು ಹರಡುವುದಿಲ್ಲ”ಎಂದು ಕೋಲ್ಕತಾ ಮೂಲದ ಆಣ್ವಿಕ ಜೀವಶಾಸ್ತ್ರಜ್ಞ ಮತ್ತು ಶಿಕ್ಷಕ ಡಾ. ಅನಿರ್ಬನ್ ಮಿತ್ರ ಹೇಳುತ್ತಾರೆ. "ಇದು ಜೀವರಾಸಾಯನಿಕ ವಾಸ್ತವವಾಗಿದ್ದು, ಮೃತ ದೇಹವು ಹೊಸ ವೈರಸ್‌ಗಳನ್ನು ಉತ್ಪಾದಿಸಲು ಸಾಧ್ಯವಿಲ್ಲ, ಅದರಲ್ಲೂ ವಿಶೇಷವಾಗಿ ಮರಣದ 4-5 ಗಂಟೆಗಳ ನಂತರ ಆಸ್ಪತ್ರೆಯಿಂದ ಬಿಡುಗಡೆಯಾಗುವ ದೇಹ. ಅಂತಹ ದೇಹಗಳು ಉಸಿರಾಡುವುದಿಲ್ಲವಾದ್ದರಿಂದ, ಸತ್ತವರಿಂದ ಹನಿ ಸೋಂಕಿನ ಸಾಧ್ಯತೆಗಳು ಇರುವುದಿಲ್ಲ. ದೇಹವು ಲಾಲಾರಸ, ಕಫ, ಮತ್ತು ರಕ್ತದಂತಹ ದ್ರವಗಳನ್ನು ಹೊಂದಿರುವಾಗ ಮಾತ್ರ - ಅವು ವೈರಸ್‌ನ ಮೂಲವಾಗಬಹುದು. ಇಂತಹ ಸಮಯದಲ್ಲಿ ಸರಿಯಾದ ರೀತಿಯಲ್ಲಿ ದಹನ ಅಥವಾ ಹೂಳುವಿಕೆಯನ್ನು ವಿಳಂಬವಿಲ್ಲದೆ ಮಾಡುವುದು ಇನ್ನಷ್ಟು ಮುಖ್ಯವಾಗಿರುತ್ತದೆ.
The volunteers lower a body into a pit eight feet deep, cover up the pit and pour a disinfectant powder across the grave
PHOTO • Courtesy: TMMK
The volunteers lower a body into a pit eight feet deep, cover up the pit and pour a disinfectant powder across the grave
PHOTO • Courtesy: TMMK
The volunteers lower a body into a pit eight feet deep, cover up the pit and pour a disinfectant powder across the grave
PHOTO • Courtesy: TMMK

ಸ್ವಯಂಸೇವಕರು ಶವವನ್ನು ಎಂಟು ಅಡಿ ಆಳದ ಗುಂಡಿಯಲ್ಲಿ ಇಳಿಸಿ, ಹಳ್ಳವನ್ನು ಮುಚ್ಚಿ ಸೋಂಕುನಿವಾರಕ ಪುಡಿಯನ್ನು ಸಮಾಧಿಯ ಸುತ್ತಲೂ ಸುರಿಯುತ್ತಾರೆ

"ಸಂತ್ರಸ್ತ ಮನೆಯಲ್ಲಿ ಮೃತಪಟ್ಟಿದ್ದರೆ, ವೈರಸ್ ಮನೆಯಲ್ಲಿ ಇನ್ನೂ ಸಕ್ರಿಯವಾಗಿರಬಹುದು, ಆ ಮನೆಯು ಕಟ್ಟುನಿಟ್ಟಾದ ಸಂಪರ್ಕತಡೆಗೆ ಒಳಪಡಬೇಕಾಗುತ್ತದೆ. ಮತ್ತು ಅಂತ್ಯಕ್ರಿಯೆಯನ್ನು ಯೋಗ್ಯ ಮತ್ತು ಸಮರ್ಥ ರೀತಿಯಲ್ಲಿ ನಿರ್ವಹಿಸಬಲ್ಲವರು ಮಾಡಬೇಕು" ಎಂದು ಡಾ. ಮಿತ್ರಾ ಎಚ್ಚರಿಸುತ್ತಾರೆ.

ಒತ್ತಡಕ್ಕೊಳಗಾಗಿರುವ ಅಧಿಕಾರಿಗಳು ಮತ್ತು ಆಡಳಿತಗಾರರ ಸಹಾಯಕ್ಕೆ ಟಿಎಂಎಂಕೆ ಬರುತ್ತಿರುವಂತೆ ಕಾಣುತ್ತಿದೆ.

ಈ ಅಂತ್ಯಕ್ರಿಯೆಗಳಿಗೆ ಎಷ್ಟು ವೆಚ್ಚವಾಗುತ್ತದೆ? "ಸಂಸ್ಕಾರಕ್ಕಾಗಿ ಅನುಸರಿಸಿದ ಆಚರಣೆಗಳನ್ನು ಅವಲಂಬಿಸಿ ಸುಮಾರು 1,000ದಿಂದ 11,000 ರೂಪಾಯಿಗಳವರೆಗೆ ಖರ್ಚಾಗುತ್ತದೆ, ಗುಂಡಿಯನ್ನು ಅಗೆಯಲು ಜೆಸಿಬಿ ಯಂತ್ರಕ್ಕೆ ಬಾಡಿಗೆ ಮತ್ತು ಹೀಗೆ" ಎಂದು ರಹಮಾನ್ ಹೇಳುತ್ತಾರೆ. "ಕೋವಿಡ್-ಸಾವುಗಳಲ್ಲಿ, ಈ ವೆಚ್ಚಗಳನ್ನು ಭರಿಸಬಹುದಾದ ಕುಟುಂಬಗಳಿಗೆ, ನಾವು ನಮ್ಮ ದೈಹಿಕ ಶ್ರಮವನ್ನು ಸಹಾಯವಾಗಿ ನೀಡುತ್ತೇವೆ. ಒಂದು ವೇಳೆ ಕುಟುಂಬವು ಏನನ್ನೂ ನೀಡಲು ಸಾಧ್ಯವಾಗದಿದ್ದರೆ, ನಾವು ನಮ್ಮ ನಡುವೆ ಹಣವನ್ನು ಸಂಗ್ರಹಿಸಿ ಸಂಸ್ಕಾರವನ್ನು ಮಾಡುತ್ತೇವೆ.” ಪಿಪಿಇ ಕಿಟ್‌ಗಳನ್ನು ಸ್ಥಳೀಯ ಆಡಳಿತಗಳು ಅಥವಾ ದಾನಿಗಳು ಪ್ರಾಯೋಜಿಸುತ್ತಾರೆ.

ಕೊವಿಡ್‌ ಸಂತ್ರಸ್ತರ ಶವದ ನಿರ್ವಹಣೆ ಹೆಚ್ಚಿನ ಮುನ್ನೆಚ್ಚರಿಕೆಗಳನ್ನು ಬಯಸುತ್ತದೆ ಎನ್ನುವುದು ಗುಂಪಿಗೆ ತಿಳಿದಿದೆ. "ಎಲ್ಲಾ ತಂಡದ ಸದಸ್ಯರು ಪಿಪಿಇ ಸೂಟ್‌ಗಳನ್ನು ಧರಿಸುತ್ತಾರೆ ಮತ್ತು ಆವರ್ತಕ ಆಧಾರದ ಮೇಲೆ ಅಂತ್ಯಕ್ರಿಯೆಗಳನ್ನು ನಡೆಸುತ್ತಾರೆ - ಯಾವುದೇ ಒಂದು ತಂಡವು ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಸಂಸ್ಕಾರ ಮಾಡುವುದಿಲ್ಲ. ಅಂತ್ಯಕ್ರಿಯೆಯ ನಂತರ, ಸ್ವಯಂಸೇವಕರು ತಮ್ಮ ಮನೆಗಳಿಗೆ ಹಿಂದಿರುಗುವ ಮೊದಲು ಕೆಲವು ದಿನಗಳವರೆಗೆ ಕ್ವಾರಂಟೈನ್‌ಗೆ ಒಳಗಾಗುತ್ತಾರೆ.” ಅವರಿಗೆ ಇಮ್ಯುನಿಟಿ ಬೂಸ್ಟರ್ ಸಹ ನೀಡಲಾಗುತ್ತದೆ ಮತ್ತು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. "ನಿಸ್ಸಂಶಯವಾಗಿ, ಕೊವಿಡ್‌ ಪಾಸಿಟಿವ್‌ ಬಂದವರಿಗೆ ಈ ಕೆಲಸದಿಂದ ಮುಕ್ತಿ ನೀಡಲಾಗುತ್ತದೆ" ಎಂದು ಜವಾಹಿರುಲ್ಲಾ ಹೇಳುತ್ತಾರೆ.

ಸ್ಥಳೀಯ ಆರೋಗ್ಯ ನಿರೀಕ್ಷಕರು ಅಥವಾ ಆಸ್ಪತ್ರೆಗಳಿಂದ ತೊಂದರೆಗೀಡಾದ ಕುಟುಂಬಗಳ ಬಗ್ಗೆ ತಂಡಗಳು ಹೆಚ್ಚಾಗಿ ಮಾಹಿತಿಯನ್ನು ಪಡೆಯುತ್ತವೆ. ರಾಣಿಪೇಟೆ ಜಿಲ್ಲೆಯ ಅರಕೋಣಂ ಬ್ಲಾಕ್‌ನಲ್ಲಿರುವ ಬಾಣವರಂ ಪಂಚಾಯತ್‌ನ ಮಾಜಿ ಅಧ್ಯಕ್ಷ ಎನ್. ಮಣಿ ಈ ಉದಾಹರಣೆಯನ್ನು ಉದಾಹರಿಸುತ್ತಾರೆ: “ನಮ್ಮ ಗ್ರಾಮದ ಪುಷ್ಪಾ ಎಂಬ ಕ್ರಿಶ್ಚಿಯನ್ ಮಹಿಳೆ ಕೊವಿಡ್‌ನಿಂದ ಮೃತಪಟ್ಟಿದ್ದರು ಆದರೆ ಆ ಕುಟುಂಬವು ಶವ ಸಂಸ್ಕಾರವನ್ನು ಮಾಡಲು ಶಕ್ತವಾಗಿರಲಿಲ್ಲ. ಆಗ ಹೆಲ್ತ್ ಇನ್ಸ್‌ಪೆಕ್ಟರ್ ನನಗೆ ಟಿಎಂಎಂಕೆ ಕುರಿತು ಹೇಳಿದರು. ನಂತರ ತಂಡವು ಒಂದು ಗಂಟೆಯೊಳಗೆ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಅವರು ಧೈರ್ಯಶಾಲಿಗಳು ಮತ್ತು ಜಾಗರೂಕತೆ ಇರುವವರು.”

ಇದಲ್ಲದೆ, "ತಮಿಳುನಾಡಿನ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ನಮ್ಮ ಫೋನ್‌ ನಂಬರ್‌ಗಳಿವೆ, ಅನಾಥ ಶವಗಳು ಕಂಡುಬಂದಲ್ಲಿ ನಮಗೆ ಒಂದು ಕರೆ ಮಾಡುತ್ತಾರೆ ನಂತರ ಉಳಿದದ್ದನ್ನು ನಾವು ನೋಡಿಕೊಳ್ಳುತ್ತೇವೆ" ಎಂದು ರಹಮಾನ್ ಹೇಳುತ್ತಾರೆ.
The TMMK volunteers attend to Hindu, Muslim, and Christian funerals alike, conducting each according to the religious traditions of the family
PHOTO • Courtesy: TMMK
The TMMK volunteers attend to Hindu, Muslim, and Christian funerals alike, conducting each according to the religious traditions of the family
PHOTO • Courtesy: TMMK

ಟಿಎಂಎಂಕೆ ಸ್ವಯಂಸೇವಕರು ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅಂತ್ಯಕ್ರಿಯೆಗಳನ್ನು ಸಮಾನವಾಗಿ ನಿರ್ವಹಿಸುತ್ತಾರೆ,  ಪ್ರತಿಯೊಂದು ಸಂಸ್ಕಾರವನ್ನೂ ಆಯಾ ಕುಟುಂಬದ ಧಾರ್ಮಿಕ ಸಂಪ್ರದಾಯಗಳಿಗೆ ಅನುಗುಣವಾಗಿ ನಡೆಸುತ್ತಾರೆ

ಅವರ ಈ ಎಲ್ಲಾ ಪ್ರಯತ್ನಗಳೂ ವೈಯಕ್ತಿಕ ಅಪಾಯಗಳು ಮತ್ತು ಬೆಲೆಯನ್ನೂ ಒಳಗೊಂಡಿರುತ್ತವೆ. ಮಾರ್ಚ್‌ನಿಂದ ನೆರೆಯ ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಕಾರೈಕ್ಕಲ್ ಜಿಲ್ಲೆಯಲ್ಲಿ ಸುಮಾರು 27 ಕೊವಿಡ್-ಅಂತ್ಯಕ್ರಿಯೆಯ ತಂಡಗಳಲ್ಲಿ ಸದಸ್ಯರಾಗಿರುವ 41 ವರ್ಷದ ಅಬ್ದುಲ್ ರಹೀಂರ ಪಾಲಿಗೆ ಈ ಕೆಲಸಕ್ಕೆ ಅವರು ಬೆಲೆಯಾಗಿ ಅವರ ಆರು ವರ್ಷದ ಮಗನ ಸಾಂಗತ್ಯದಿಂದ ವಂಚಿತರಾಗಿದ್ದಾರೆ. “ನಾನು ಈಗ ಎಂಟು ವರ್ಷಗಳಿಂದ ಈ ವೈದ್ಯಕೀಯ ತಂಡದ ಭಾಗವಾಗಿದ್ದೇನೆ. ಕೊವಿಡ್‌ನಿಂದಾಗಿ ನಮ್ಮ ಮೇಲೆ ಒತ್ತಡ ಹೆಚ್ಚಾಗಿದೆ ಆದರೆ ಜನರು ವ್ಯಕ್ತಪಡಿಸುವ ಕೃತಜ್ಞತೆಯ ಮುಂದೆ ಈ ಒತ್ತಡಗಳು ಏನೂ ಅಲ್ಲವೆನ್ನಿಸಿಬಿಡುತ್ತದೆ. ಪ್ರತಿ ಅಂತ್ಯಕ್ರಿಯೆಯ ನಂತರ ಕನಿಷ್ಠ ಒಂದು ವಾರ ನನ್ನ ಕುಟುಂಬದಿಂದ ದೂರವಿರಬೇಕಾಗುತ್ತದೆ. ಇದರಿಂದ ಅವರು ಅಸಮಾಧಾನಗೊಳ್ಳುತ್ತಾರೆ ಆದರೆ ನಾನು ಅವರ ಆರೋಗ್ಯವನ್ನು ಅಪಾಯಕ್ಕೀಡುಮಾಡಲು ಸಾಧ್ಯವಿಲ್ಲ”

ಟಿಎಂಎಂಕೆ ಸ್ವಯಂಸೇವಕರು ಇದನ್ನು ಯಾವ ಕಾರಣಕ್ಕಾಗಿ ಮಾಡುತ್ತಾರೆ?

ಜವಾಹಿರುಲ್ಲಾ ಇದನ್ನು ಫರ್ದ್ ಕಿಫಯಾ (ಅರೇಬಿಕ್ ಭಾಷೆಯಲ್ಲಿ ಕಡ್ಡಾಯ ವೈಯಕ್ತಿಕ ಕರ್ತವ್ಯ) ಎಂದು ಕರೆಯುತ್ತಾರೆ. “ಇಸ್ಲಾಂನಲ್ಲಿ, ಅಂತ್ಯಕ್ರಿಯೆಯು ಸಮಾಜದ ಕಡ್ಡಾಯ ಬಾಧ್ಯತೆಯಾಗಿದೆ. ಒಬ್ಬ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಅದನ್ನು ಮಾಡಿದರೆ, ಇಡೀ ಸಮಾಜವು ತನ್ನ ಕರ್ತವ್ಯವನ್ನು ಪೂರೈಸಿದೆ ಎಂದರ್ಥ. ಅದನ್ನು ಮಾಡಲು ಯಾರೂ ಮುಂದೆ ಬರದಿದ್ದರೆ, ಎಲ್ಲರೂ ಪಾಪಿಗಳೆನಿಸಿಕೊಳ್ಳುತ್ತಾರೆ. ಜಾತಿ ಅಥವಾ ಧರ್ಮದ ಹೊರತಾಗಿ, ಈ ಅಂತ್ಯಕ್ರಿಯೆಗಳನ್ನು ನಡೆಸುವುದು ನಮ್ಮ ಕರ್ತವ್ಯ ಎಂದು ನಾವು ನಂಬುತ್ತೇವೆ.”

ಅವರ ಸ್ವಯಂಸೇವಕರು 1995ರಲ್ಲಿ ಟಿಎಂಎಂಕೆ ಪ್ರಾರಂಭವಾದಾಗಿನಿಂದ ಇಂತಹ ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳುತ್ತಾರೆ. “ಅವರು ನಿಯಮಿತವಾಗಿ ರಕ್ತದಾನ ಮಾಡುತ್ತಾರೆ ಮತ್ತು ಅಗತ್ಯವಿರುವ ಜನರಿಗೆ ಉಚಿತ ಸೇವೆಗಳನ್ನು ನೀಡುವ ಆಂಬುಲೆನ್ಸ್‌ ಸೌಲಭ್ಯಗಳನ್ನು ನೀಡುತ್ತಾರೆ. ಸುನಾಮಿ ಮತ್ತು ಚೆನ್ನೈ ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿಯೂ ಈ ತಂಡಗಳು ಸಕ್ರಿಯವಾಗಿದ್ದವು.”

ರಾಜಕೀಯ ಪಕ್ಷವಾದ ಮನಿದನಿಯಾ ಮಕ್ಕಳ್ ಕಚ್ಚಿಯ ಅಧ್ಯಕ್ಷರೂ ಆಗಿರುವ ಜವಾಹಿರುಲ್ಲಾ ಹೇಳುತ್ತಾರೆ: “ನಾವು ಇದನ್ನು ತಮಿಳು ಜನರಾಗಿ ಮಾಡುತ್ತೇವೆ; ತೊಂದರೆಯಲ್ಲಿರುವ ಇತರರಿಗೆ ನಾವು ಸಹಾಯ ಮಾಡಬೇಕೆಂದು ನಂಬುತ್ತೇವೆ. ನಮ್ಮ ಪ್ರಯತ್ನಗಳಿಗೆ ತಮಿಳುನಾಡು ಸಾರ್ವಜನಿಕರು ಸಾಕಷ್ಟು ಅನುಮೋದನೆ ನೀಡಿದ್ದಾರೆ.” ದೀರ್ಘವಾದ ಮೌನದ ನಂತರ, ಅವರು ಹೀಗೆ ಹೇಳುತ್ತಾರೆ: “ಖಂಡಿತ, ನೀವು ಅಲ್ಪಸಂಖ್ಯಾತರಾಗಿದ್ದಾಗ, ಈ ಕೆಲಸವನ್ನು ಮಾಡುವುದು ಹೆಚ್ಚುವರಿ ಅಗತ್ಯ ಮತ್ತು ಜವಾಬ್ದಾರಿಯಾಗಿದೆ. ಆದರೆ ನಮ್ಮ ಉದ್ದೇಶವು ಅಗತ್ಯವಿರುವವರಿಗೆ ಸೇವೆ ನೀಡುವುದು ಮಾತ್ರ.”

ಕವಿತಾ ಮುರಳೀಧರನ್ ಠಾಕೂರ್ ಫ್ಯಾಮಿಲಿ ಫೌಂಡೇಶನ್‌ನ ಸ್ವತಂತ್ರ ಪತ್ರಿಕೋದ್ಯಮ ಅನುದಾನದ ಮೂಲಕ ಸಾರ್ವಜನಿಕ ಆರೋಗ್ಯ ಮತ್ತು ನಾಗರಿಕ ಸ್ವಾತಂತ್ರ್ಯಗಳ ಬಗ್ಗೆ ವರದಿ ಮಾಡುತ್ತಾರೆ. ಠಾಕೂರ್ ಫ್ಯಾಮಿಲಿ ಫೌಂಡೇಶನ್ ಈ ವರದಿಯ ವಿಷಯಗಳ ಮೇಲೆ ಯಾವುದೇ ಸಂಪಾದಕೀಯ ನಿಯಂತ್ರಣವನ್ನು ಹೊಂದಿರುವುದಿಲ್ಲ.

ಅನುವಾದ: ಶಂಕರ ಎನ್ ಕೆಂಚನೂರು

Kavitha Muralidharan

کویتا مرلی دھرن چنئی میں مقیم ایک آزادی صحافی اور ترجمہ نگار ہیں۔ وہ پہلے ’انڈیا ٹوڈے‘ (تمل) کی ایڈیٹر تھیں اور اس سے پہلے ’دی ہندو‘ (تمل) کے رپورٹنگ سیکشن کی قیادت کرتی تھیں۔ وہ پاری کے لیے بطور رضاکار (والنٹیئر) کام کرتی ہیں۔

کے ذریعہ دیگر اسٹوریز کویتا مرلی دھرن
Translator : Shankar N Kenchanuru

Shankar N. Kenchanuru is a poet and freelance translator. He can be reached at [email protected].

کے ذریعہ دیگر اسٹوریز Shankar N Kenchanuru