ಕಳೆದ ಡಿಸೆಂಬರ್‌ನಲ್ಲಿ ಮಧ್ಯಾಹ್ನದ ಸಮಯ, ನಮ್ಮ ರೈಲು ನಾಗ್ಪುರ ರೈಲ್ವೇ ಜಂಕ್ಷನಗೆ ತಲುಪಿತ್ತು. ಜೋಧ್‌ಪುರ-ಪುರಿ ಎಕ್ಸ್‌ಪ್ರೆಸ್ ತನ್ನ ಎಂಜಿನ್ ಅನ್ನು ನಾಗ್ಪುರದಲ್ಲಿ ಬದಲಾಯಿಸುತ್ತದೆ, ಹಾಗಾಗಿ ಅದು ಅಲ್ಲಿ ಸ್ವಲ್ಪ ಸಮಯದವರೆಗೆ ನಿಲ್ಲುತ್ತದೆ. ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ತಲೆಯ ಮೇಲೆ ಚೀಲಗಳನ್ನು ಹೊತ್ತ ಪ್ರಯಾಣಿಕರ ಒಂದು ದಂಡಿತ್ತು. ಅವರು ಈ ಸುಗ್ಗಿಯ ಕಾಲದಲ್ಲಿ ಪಶ್ಚಿಮ ಒರಿಸ್ಸಾದಿಂದ ಕೆಲಸಕ್ಕಾಗಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕರಾಗಿದ್ದರು, ಸಿಕಂದರಾಬಾದ್‌ ರೈಲಿಗಾಗಿ ಕಾಯುತ್ತಿದ್ದರು. ಒರಿಸ್ಸಾದಲ್ಲಿ (ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ) ಸುಗ್ಗಿಯ ನಂತರ, ಅನೇಕ ಸಣ್ಣ ರೈತರು ಮತ್ತು ಭೂರಹಿತ ಕೃಷಿ ಕಾರ್ಮಿಕರು ತೆಲಂಗಾಣದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ತಮ್ಮ ಮನೆಗಳನ್ನು ತೊರೆದರು. ಅನೇಕರು ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಿಗೆ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಹೋಗುತ್ತಾರೆ.

ಗುಂಪಿನಲ್ಲಿದ್ದ ರಮೇಶ್ (ಅವರು ತಮ್ಮ ಪೂರ್ಣ ಹೆಸರನ್ನು ಹೇಳಲು ಬಯಸುವುದಿಲ್ಲ), ವಲಸಿಗರಾದ ಬರ್ಗಢ್ ಮತ್ತು ನುವಾಪಾದ ಜಿಲ್ಲೆಗಳಿಂದ ಬಂದವರು ಎಂದು ಹೇಳಿದರು. ಅವರ ದೀರ್ಘ ಪ್ರಯಾಣ ಅವರ ಹಳ್ಳಿಗಳಿಂದ ಕಾಂತಾಬಾಂಜಿ, ಹರಿಶಂಕರ್ ಅಥವಾ ತುರೇಕಲಾ ರೈಲು ನಿಲ್ದಾಣಗಳ ಕಡೆಗೆ ಪ್ರಾರಂಭವಾಗುತ್ತವೆ, ಅಲ್ಲಿಂದ ಅವರು ರೈಲಿನಲ್ಲಿ ನಾಗ್ಪುರಕ್ಕೆ ಪ್ರಯಾಣ ಬೆಳೆಸುತ್ತಾರೆ. ನಂತರ ತೆಲಂಗಾಣದ ಸಿಕಂದರಾಬಾದ್ ತಲುಪಲು ರೈಲುಗಳನ್ನು ಬದಲಾಯಿಸುತ್ತಾರೆ. ಅಲ್ಲಿಂದ ನಾಲ್ಕು ಚಕ್ರದ ವಾಹನಗಳನ್ನು ತೆಗೆದುಕೊಂಡು ಇಟ್ಟಿಗೆ ಗೂಡುಗಳನ್ನು ತಲುಪುತ್ತಾರೆ.

ಕಾರ್ಮಿಕರು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನುವಾಖಾಯ್ ಹಬ್ಬಕ್ಕೆ ಸ್ವಲ್ಪ ಮೊದಲು ಗುತ್ತಿಗೆದಾರರಿಂದ ಮುಂಗಡ ಹಣವನ್ನು ತೆಗೆದುಕೊಳ್ಳುತ್ತಾರೆ (ಮೂರು ವಯಸ್ಕರ ಗುಂಪಿಗೆ ಸುಮಾರು ರೂ. 20,000 ರಿಂದ ರೂ. 60,000ಗಳ ವರೆಗೆ ತೆಗೆದುಕೊಳ್ಳುತ್ತಾರೆ), ಅವರು ಬೆಳೆದ ಹೊಸ ಅಕ್ಕಿಯನ್ನು ಅವರ ಮನೆ ದೇವರಿಗೆ ಅರ್ಪಿಸುವ ಮೂಲಕ ಸುಗ್ಗಿಯನ್ನು ಆಚರಿಸುತ್ತಾರೆ. ನಂತರ, ಸೆಪ್ಟೆಂಬರ್ ಮತ್ತು ಡಿಸೆಂಬರ್ ನಡುವೆ, ಅವರು ಇಟ್ಟಿಗೆ ಗೂಡುಗಳಿಗೆ ಹೋಗಿ, ಆರು ತಿಂಗಳ ಕಾಲ ಅಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ ಮತ್ತು ಮಳೆಗಾಲದ ಮೊದಲು ಅವರವರ ಮನೆಗಳಿಗೆ ಹಿಂತಿರುಗುತ್ತಾರೆ. ಕೆಲವೊಮ್ಮೆ ಅವರು ತಾವು ತೆಗೆದುಕೊಂಡ ಮುಂಗಡ ಹಣವನ್ನು ಮರುಪಾವತಿಸಲು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಇದು ಕರಾರು ಮಾಡಿಕೊಂಡು ಅಥವಾ ಒಪ್ಪಂದ ಮಾಡಿಕೊಂಡು ಕೆಲಸ ಮಾಡುವ ಕಾರ್ಮಿಕರ ಒಂದು ರೂಪವೇ ಆಗುತ್ತದೆ.

People at a railway station
PHOTO • Purusottam Thakur

25 ವರ್ಷಗಳಿಂದ, ಪಶ್ಚಿಮ ಒರಿಸ್ಸಾದ ಬಲಂಗೀರ್, ನುವಾಪಾದ, ಬರ್ಗಢ್ ಮತ್ತು ಕಲಹಂಡಿ ಜಿಲ್ಲೆಗಳಿಂದ ಜನರು ವಲಸೆ ಹೋಗುತ್ತಿರುವ ಬಗ್ಗೆ ನಾನು ವರದಿ ಮಾಡಿದ್ದೇನೆ. ಹಿಂದಿನ ಕಾಲದಲ್ಲಿ ಪಾತ್ರೆ, ಬಟ್ಟೆ ಹೀಗೆ ತಮಗೆ ಬೇಕಾದ ವಸ್ತುಗಳನ್ನು ಸೆಣಬಿನ ಚೀಲಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದರು. ಇದು ಈಗ ಸ್ವಲ್ಪ ಮಟ್ಟಿಗೆ ಬದಲಾಗಿದೆ - ಅವರು ಸಾಗಿಸುವ ಡಫಲ್ ಬ್ಯಾಗ್‌ಗಳು ಈಗ ಪಾಲಿಯೆಸ್ಟರ್‌ನಿಂದ ಮಾಡಲ್ಪಟ್ಟಿದೆ. ಸಂಕಟ ಮತ್ತು ಬಡತನದಲ್ಲಿಯೇ ವಲಸೆ ನಡೆಸುತ್ತಿರುವಾಗ, ಕಾರ್ಮಿಕರು ಮುಂಗಡ ಹಣಕ್ಕಾಗಿ ಗುತ್ತಿಗೆದಾರರೊಂದಿಗೆ ಚೌಕಾಶಿ ಮಾಡಬಹುದು. ಎರಡು ದಶಕಗಳ ಹಿಂದೆ, ನಾನು ಯಾವುದೇ ಬಟ್ಟೆ ಇಲ್ಲದೆ ಅಥವಾ ಕೇವಲ ಕನಿಷ್ಟ ಬಟ್ಟೆ ಇಲ್ಲದೆ ಪ್ರಯಾಣಿಸುವ ಮಕ್ಕಳನ್ನು ನೋಡುತ್ತಿದ್ದೆ ಆದರೆ ಈ ದಿನಗಳಲ್ಲಿ, ಅವರಲ್ಲಿ ಕೆಲವರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ.

ಸರಕಾರ ನಡೆಸುವ ಸಾಮಾಜಿಕ ಪ್ರಯೋಜನ ಯೋಜನೆಗಳು ಬಡವರಿಗೆ ಸ್ವಲ್ಪ ಮಟ್ಟಿಗೆ ಸಹಾಯ ಮಾಡಿದರೂ ಕೆಲವು ವಿಷಯಗಳು ಹಾಗೆಯೇ ಉಳಿದಿವೆ. ಕಿಕ್ಕಿರಿದ ಸಾಮಾನ್ಯ ಕಂಪಾರ್ಟ್‌ಮೆಂಟ್‌ಗಳಲ್ಲಿ ಸೀಟನ್ನು ಕಾಯ್ದಿರಿಸದೆ ಕಾರ್ಮಿಕರು ಇನ್ನೂ ಪ್ರಯಾಣಿಸುತ್ತಾರೆ ಮತ್ತು ಈ ಪ್ರಯಾಣವು ತುಂಬಾ ದಣಿವಿನ ಪ್ರಯಾಣವಾಗಿದ್ದು, ಕಡಿಮೆ ಸಂಬಳ ಸಿಕ್ಕಿದರೂ ಅವರ ಹತಾಶೆ ಮತ್ತು ಬೆನ್ನು ಮುರಿಯುವ ದುಡಿಮೆಯ ಕೆಲಸ ಒಂದೇ ಆಗಿರುತ್ತದೆ.

ಅನುವಾದ: ಅಶ್ವಿನಿ ಬಿ.

Purusottam Thakur

پرشوتم ٹھاکر ۲۰۱۵ کے پاری فیلو ہیں۔ وہ ایک صحافی اور دستاویزی فلم ساز ہیں۔ فی الحال، وہ عظیم پریم جی فاؤنڈیشن کے ساتھ کام کر رہے ہیں اور سماجی تبدیلی پر اسٹوری لکھتے ہیں۔

کے ذریعہ دیگر اسٹوریز پرشوتم ٹھاکر
Translator : Ashwini B. Vaddinagadde

Ashwini B. is a Bengaluru based accountant and translator and writer by passion.

کے ذریعہ دیگر اسٹوریز Ashwini B. Vaddinagadde