"ನಾನು ಹುಟ್ಟಿದಾಗಿನಿಂದಲೂ ಇದಾ ರೀ; ಮೊದಲಿನಿಂದಲೂ ಕೂಲಿ ಮಾಡ್ಕೊಂಡು ಬಂದೀವಿ," ಎಂದು ರತ್ನವ್ವ ಎಸ್. ಹರಿಜನ್ ಹೇಳುತ್ತಾರೆ, ಅವರು ಆಗಸ್ಟ್ ತಿಂಗಳ ಮಂಜು ಮಸುಕಿದ ಬೆಳಗಿನಲ್ಲಿ ತಾನು ಕೆಲಸ ಮಾಡುವ ಹೊಲದೆಡೆಗೆ ಚುರುಕಿನಿಂದ ನಡೆದು ಹೋಗುತ್ತಿದ್ದರು. ವಯಸ್ಸಿನ ಕಾರಣಕ್ಕೆ ಬಾಗಿದ ದೇಹ ಮತ್ತು ಕಾಲಿನ ತೊಂದರೆಯ ನಡುವೆಯೂ ಅವರು ಚುರುಕಾಗಿ ಯುವತಿಯಂತೆ ನಡೆಯುತ್ತಿದ್ದರು.
ಹೊಲ ತಲುಪಿದ ಅವರು ತನ್ನೊಂದಿಗೆ ತಂದಿರುವ ಕೆಲಸದ ಬಟ್ಟೆಗಳನ್ನು ಹೊರತೆಗೆದು ಮೊದಲಿಗೆ ಅದರಲ್ಲಿ ನೀಲಿ ಅಂಗಿಯನ್ನು ಹಾಕಿಕೊಂಡರು. ನಂತರ ತನ್ನ ಸೀರೆಗೆ ಪರಾಗ ಕಣಗಳು ಅಂಟದ ಹಾಗೆ ನೋಡಿಕೊಳ್ಳಲು ಹಳದಿ ಬಣ್ಣದ ಉದ್ದನೆಯ ಪ್ರಿಂಟೆಡ್ ನೈಟಿಯೊಂದನ್ನು ಸೊಂಟಕ್ಕೆ ಕಟ್ಟಿಕೊಂಡರು. ನಂತರ ಒಂದಷ್ಟು ಬೆಂಡೆ ಗಿಡದ ಗಂಡು ಹೂವನ್ನು ತುಂಬಿಕೊಳ್ಳಲು ಹಳದಿ ಬಟ್ಟೆಯೊಂದರಿಂದ ಮಡಿಲುಚೀಲ ಮಾಡಿಕೊಂಡರು. ತಲೆಗೆ ಬಿಳಿ ಶಾಲಿನ ರುಮಾಲು ಕಟ್ಟಿಕೊಂಡ 45 ವರ್ಷದ ರತ್ನವ್ವ ಎಡಗೈಯಲ್ಲಿ ಒಂದಷ್ಟು ದಾರದ ಎಳೆಗಳನ್ನು ಹಿಡಿದು ತಮ್ಮ ಕೆಲಸ ಪ್ರಾರಂಭಿಸಿದರು.
ಹೀಗೆ ಕೆಲಸಕ್ಕೆ ತಯಾರಾದ ನಂತರ ಅವರು ಹೂವಿನ ದಳವೊಂದನ್ನು ನಿಧಾನವಾಗಿ ಬಾಗಿಸಿ ಅದರೊಳಗಿನ ಪ್ರತಿಯೊಂದು ಶಲಾಕೆಗೂ ಗಂಡು ಹೂವಿನ ಕೊಳವೆಯೊಳಗಿನಿಂದ ಪರಾಗ ಕಣಗಳನ್ನು ತೆಗೆದು ಲೇಪಿಸುತ್ತಾರೆ. ಅದರ ಸುತ್ತಲೂ ದಾರವನ್ನು ಅದರಲ್ಲಿರುವ ಶಲಾಕೆಗಳನ್ನು ಗುರುತಿಸುತ್ತಾರೆ. ಇದೇ ಪ್ರಕ್ರಿಯೆಯನ್ನು ಸಾಲಿನಲ್ಲಿರುವ ಪ್ರತಿ ಹೂವಿಗೂ ಮಾಡುತ್ತಾರೆ. ಅವರು ಕೈಯಿಂದ ಪರಾಗ ಸ್ಪರ್ಶ ಮಾಡಿಸುವುದರಲ್ಲಿ ಪರಿಣಿತರು. ಅವರು ಈ ಕೆಲಸವನ್ನು ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಮಾಡುತ್ತಿದ್ದಾರೆ.
ರತ್ನವ್ವ ಕರ್ನಾಟಕದ ಮಾದಿಗ ಸಮುದಾಯಕ್ಕೆ ಸೇರಿದವರು. ಕರ್ನಾಟಕದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಕೋಣನತಲಿ ಗ್ರಾಮದ ಮಾದಿಗರ ಕೇರಿಯಲ್ಲಿ ವಾಸಿಸುತ್ತಿದ್ದಾರೆ.
ರತ್ನವ್ವನ ದಿನವು ಪ್ರತಿದಿನ ಬೆಳಗಿನ ಜಾವದ 4 ಗಂಟೆಗೆ ಪ್ರಾರಂಭಗೊಳ್ಳುತ್ತದೆ. ಅಷ್ಟು ಹೊತ್ತಿಗೆ ಎದ್ದವರೇ ಮನೆಗೆಲಸ ಪ್ರಾರಂಭಿಸುತ್ತಾರೆ. ತನ್ನ ಕುಟುಂಬಕ್ಕೆ ಬೆಳಗಿನ ತಿಂಡಿ ಮತ್ತು ಚಹಾ ತಯಾರಿಸುತ್ತಾರೆ. ನಂತರ ಮಧ್ಯಾಹ್ನದ ಊಟಕ್ಕೂ ಅಡುಗೆ ಮಾಡುತ್ತಾರೆ. ಬೆಳಗಿನ 9 ಗಂಟೆಯ ಸುಮಾರಿಗೆ ಗಡಿಬಿಡಿಯಲ್ಲಿ ತಿಂಡಿ ತಿಂದು ತನ್ನ ಕೆಲಸಕ್ಕ ಹೊರಡುತ್ತಾರೆ.
ದಿನದ ಮೊದಲಾರ್ಧವು ಮೂರೂವರೆ ಎಕರೆ ಪ್ರದೇಶದಲ್ಲಿರುವ ಹೊಲದ ಅರ್ಧದಷ್ಟು ಜಾಗದ, ಎಂದರೆ ಸುಮಾರು 200 ಬೆಂಡೆ ಗಿಡಗಳ ಪರಾಗಸ್ಪರ್ಶ ಮಾಡಲು ಕಳೆದುಹೋಗುತ್ತದೆ. ಇದರ ನಂತರ ಅರ್ಧ ಗಂಟೆಯ ಕಾಲ ಊಟದ ವಿರಾಮ ಪಡೆಯುತ್ತಾರೆ. ಊಟವಾದ ಕೂಡಲೇ ಮತ್ತೆ ಕೆಲಸಕ್ಕೆ ಮರಳುವ ರತ್ನವ್ವ ಮರುದಿನಕ್ಕೆ ಅಗತ್ಯವಿರುವ ಶಲಾಕೆಗಳನ್ನು ಸಂಗ್ರಹಿಸಲು ಬೆಂಡೆ ಮೊಗ್ಗುಗಳ ಪಕಳೆಗಳನ್ನು ಬಿಡಿಸಲು ಪ್ರಾರಂಭಿಸುತ್ತಾರೆ. ಈ ಕೆಲಸಕ್ಕೆ ಹೊಲದ ಮಾಲಿಕರು ನಿಗದಿಪಡಿಸಿರುವ ದಿನಗೂಲಿ 200 ರೂಪಾಯಿಗಳು.
ಕೈಯಿಂದ ಹೂಗಳಿಗೆ ಪರಾಗ ಸ್ಪರ್ಶ ಮಾಡಿಸುವ ಕಲೆಯನ್ನು ಅವರು ಬಹಳ ಸಣ್ಣ ವಯಸ್ಸಿನಲ್ಲಿಯೇ ಕಲಿತಿದ್ದರು. "ನಮ್ಗೆ ಹೊಲಾ ಇಲ್ಲ, ಹೀಗಾಗಿ ಬೇರೆಯವರ ಹೊಲಗಳಲ್ಲಿ ಕೆಲಸ ಮಾಡ್ಕೊಂಡೇ ಬಂದಿದ್ದೀವಿ." ಎಂದು ಅವರು ಹೇಳುತ್ತಾರೆ. "ನಾನು ಸ್ಕೂಲಿಗೆ ಹೋಗಿಲ್ಲ. ದೊಡ್ಡಾಕಿ ಆಗ್ಲಿಕ್ಕ ಮೊದಲೇ ನಾ ಕೂಲಿಗ್ ಹೋಗ್ತಿದ್ನಿ ರೀ. ನಾವು ಬಡವರು ನೋಡಿ, ಹೀಗಾಗಿ ಮನೆ ನಡಿಬೇಕಲ್ಲ. ಆವಾಗ ನಾನು ಹೊಲಗಳಲ್ಲಿ ಕಳೆ ತೆಗೆಯೋದು ಮತ್ತೆ ಟೊಮ್ಯಾಟೊ ಗಿಡಗಳಿಗೆ ಕ್ರಾಸ್ ಮಾಡೋ ಕೆಲಸ ಮಾಡ್ತಿದ್ದೆ." ಅವರು ಕೈಗಳಿಂದ ಪರಾಗಸ್ಪರ್ಶ ಮಾಡಿಸುವುದಕ್ಕೆ ಕ್ರಾಸ್ ಮಾಡಿಸುವುದು ಎನ್ನುವ ಪದವನ್ನು ಬಳಸುತ್ತಾರೆ.
ರತ್ನವ್ವ ರಾಣಿಬೆನ್ನೂರು ತಾಲ್ಲೂಕಿನ ತಿರುಮಲದೇವರಕೊಪ್ಪ ಗ್ರಾಮದಲ್ಲಿ ಭೂರಹಿತ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು. ಹಾವೇರಿಯ ಒಟ್ಟು ಕಾರ್ಮಿಕರಲ್ಲಿ ಕೃಷಿ ಕಾರ್ಮಿಕರು ಶೇಕಡ 42.6ರಷ್ಟಿದ್ದಾರೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ, ಸುಮಾರು 70 ಪ್ರತಿಶತ ಕಾರ್ಮಿಕರು ಮಹಿಳೆಯರಾಗಿದ್ದಾರೆ (ಜನಗಣತಿ 2011). ರತ್ನವ್ವ ಸಣ್ಣ ವಯಸ್ಸಿನಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದ್ದು ಇಲ್ಲಿನ ಮಟ್ಟಿಗೆ ಅಸಹಜ ವಿಷಯವೇನಲ್ಲ.
ಹೆಣ್ಣು ಮಕ್ಕಳೇ ಹೆಚ್ಚಿದ್ದ ಎಂಟು ಮಕ್ಕಳ ಕುಟುಂಬದ ಹಿರಿಯ ಹೆಣ್ಣುಮಗಳಾದ ರತ್ನವ್ವ, ಕೋಣನತಾಲಿಯಲ್ಲಿ ಕೃಷಿ ಕಾರ್ಮಿಕರಾಗಿದ್ದ ಸಣ್ಣಚೌಡಪ್ಪ ಎಂ ಹರಿಜನ ಎನ್ನುವವರೊಡನೆ ಮದುವೆಯಾದರು. "ನಾವ್ ಬಾಳ್ ಮಂದಿ ಹೆಣ್ ಮಕ್ಳ್ ರೀ… ನಾನೇ ದೊಡ್ಡಾಕಿ, ಎಂಟ್ ಜನ ಇದ್ವಿ. ಅಪ್ಪ ಭಾಳ ಕುಡೀತಿದ್ದ. ನಾ ದೊಡ್ಡಾಕಿ ಆಗಿ ಒಂದ್ ವರ್ಷಕ್ಕ ಮದ್ವಿ ಆತು… ಆಗ ನಂಗ ಎಷ್ಟು ವಯಸ್ಸಂತ ಗೊತ್ತಿಲ್ರಿ.” ಎಂದು ಅವರು ಹೇಳುತ್ತಾರೆ.
ತಿರುಮಲದೇವರಕೊಪ್ಪದಲ್ಲಿ ರತ್ನವ್ವ ಪರಾಗಸ್ಪರ್ಶದ ಕೆಲಸಕ್ಕೆ ದಿನವೊಂದಕ್ಕೆ 70 ರೂಪಾಯಿಗಳನ್ನು ಕೂಲಿಯಾಗಿ ಪಡೆಯುತ್ತಿದ್ದರು. 15 ವರ್ಷಗಳ ಹಿಂದೆ ಕೋಣತಾಲಿಯಲ್ಲಿ ಅವರು ಈ ಕೆಲಸ ಮಾಡಲು ಆರಂಭಿಸಿದ ಮೊದಲಿಗೆ ದಿನಕ್ಕೆ 100 ರೂಪಾಯಿಗಳ ಕೂಲಿ ಪಡೆಯುತ್ತಿದ್ದರು. "ಅವರು [ಭೂಮಾಲೀಕರು] ಹಿಂಗೇ ಮಾಡ್ಕೋತಾ ಮಾಡ್ಕೋತಾ ಹತ್ ಹತ್ ರೂಪಾಯಿ ಏರಿಸ್ಕೊಂತಾ ಬಂದಾರ್ರೀ ಈ 200 ರೂಪಾಯಿ ಕೊಡ್ತಾರ್ರೀ."
ಕೋಣನತಲಿಯ ಬೀಜೋತ್ಪಾದನೆ ಕೃಷಿಯಲ್ಲಿ ಕೈಯಿಂದ ಮಾಡಲಾಗುವ ಪರಾಗಸ್ಪರ್ಶವು ಒಂದು ಪ್ರಮುಖ ಪ್ರಕ್ರಿಯೆಯಾಗಿದೆ. ಅಲ್ಲಿ ಬೆಂಡೆ, ಟೊಮ್ಯಾಟೊ, ಸೋರೆಕಾಯಿ ಮತ್ತು ಸೌತೆಕಾಯಿಗಳನ್ನು ಬೆಳೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಮಳೆಗಾಲ ಮತ್ತು ಚಳಿಗಾಲದಲ್ಲಿ ನಡೆಸಲಾಗುತ್ತದೆ. ಇಲ್ಲಿ ಹತ್ತಿಯ ನಂತರ ತರಕಾರಿ ಬೀಜೋತ್ಪಾದನೆ ಎರಡನೇ ಸ್ಥಾನದಲ್ಲಿದೆ. ಅಲ್ಲಿ ನಿವ್ವಳ ಬಿತ್ತನೆಯ ಪ್ರದೇಶ 568 ಹೆಕ್ಟೇರ್ (ಜನಗಣತಿ 2011). ದೇಶದಲ್ಲಿ ತರಕಾರಿ ಬೀಜೋತ್ಪಾದನೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಂಚೂಣಿಯಲ್ಲಿವೆ ಮತ್ತು ಖಾಸಗಿ ವಲಯವು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಾಕಷ್ಟು ಶ್ರಮ ಮತ್ತು ಕೌಶಲವನ್ನು ಬೇಡುವ ಈ ಪರಾಗಸ್ಪರ್ಶದ ಕೆಲಸಕ್ಕೆ ಹೂವಿನ ಸಣ್ಣ ಭಾಗವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲು ಚುರುಕುಬುದ್ಧಿಯ ಕೈಗಳು ಮತ್ತು ಅಪಾರ ತಾಳ್ಮೆ ಮತ್ತು ಏಕಾಗ್ರತೆಯಿಂದ ಕೂಡಿದ ಕೆಲಸದ ಶಕ್ತಿಯ ಅಗತ್ಯವಿರುತ್ತದೆ. ಈ ಕೆಲಸಕ್ಕೆ ಗಂಡಸರಿಗಿಂತಲೂ ಹೆಚ್ಚು ಹೆಂಗಸರನ್ನೇ ನೇಮಿಸಿಕೊಳ್ಳಲು ಆದ್ಯತೆ ನೀಡಲಾಗುತ್ತದೆ. ಕೋಣನತಲಿಗೆ ಅಕ್ಕ-ಪಕ್ಕದ ಹಳ್ಳಿಗಳಿಂದಲೂ ಮಹಿಳಾ ಕೃಷಿ ಕೂಲಿ ಕಾರ್ಮಿಕರನ್ನು ಈ ಕೆಲಸಕ್ಕಾಗಿ ರಿಕ್ಷಾಗಳಲ್ಲಿ ಕರೆಸಲಾಗುತ್ತದೆ.
ರತ್ನವ್ವ ದಿನಾಲೂ, ಅಂಬಿಗ ಸಮುದಾಯಕ್ಕೆ ಸೇರಿದ ಭೂಮಾಲೀಕ ಪರಮೇಶಪ್ಪ ಪಕ್ಕೀರಪ್ಪ ಜಾದರ್ ಅವರ ಜಮೀನಿನಲ್ಲಿ ಕೆಲಸ ಮಾಡುತ್ತಾರೆ (ಇತರ ಹಿಂದುಳಿದ ವರ್ಗಗಳಲ್ಲಿ ಪಟ್ಟಿ ಮಾಡಲಾಗಿದೆ, ಅಥವಾ ಒಬಿಸಿ, ವರ್ಗ). ರತ್ನವ್ವ ತನ್ನ ಮಾಲಿಕರ ಬಳಿ 1.5 ಲಕ್ಷ ರೂ. ಬಡ್ಡಿಯಿಲ್ಲದ ಸಾಲ ಪಡೆದಿದ್ದು ಅದನ್ನು ಅವರ ಕೆಲಸಕ್ಕೆ ಮುಂಗಡ ಪಾವತಿಯೆಂದು ಪರಿಗಣಿಸಲಾಗಿದೆ ಎಂದು ಹೇಳುತ್ತಾರೆ.
"ಇಲ್ಲಿ ಕೈಗೆ ದುಡ್ಡು ಬರಲ್ಲ. ಅವರು ಲೆಕ್ಕ ಇಟ್ಕೊಂಡಿರ್ತಾರೆ ಅದನ್ನ [ಕೆಲಸ ಮಾಡಿದ ದಿನಗಳ ಕೂಲಿ ಹಣ] ಸಾಲಕ್ಕೆ ಮುರ್ಕೋತಾರೆ" ಎಂದು ಅವರು ಹೇಳುತ್ತಾರೆ. "ಹೋದ್ವರ್ಷ ದುಡ್ದು ಮುಟ್ಟಿಸಿರ್ತೀವಿ ಆದ್ರೆ ಈ ವರ್ಷ ಮತ್ತೆ ನಮಗೆ ಯದಕ್ಕಾದರೂ ರೊಕ್ಕ ಬೇಕಿರ್ತೈತಿ. ಮತ್ತೆ ತೊಗೋತೀವಿ, ಇದು ಹೀಗೇ ನಡೀತಾ ಇರ್ತದ"
ರತ್ನವ್ವನ ದಣಿವಿನ ಕೆಲಸ ಕೆಲಸದ ಅವಧಿ ಮುಂಗಾರಿನ ತಿಂಗಳಾದ ಜುಲೈನಿಂದ ಸೆಪ್ಟೆಂಬರ್ ತನಕ ಇರುತ್ತದೆ. ಈ ಸಮಯದಲ್ಲಿ ಬೆಂಡೆ ಮತ್ತು ಸೌತೆಯ ಹೂವಿಗೆ ಪರಾಗಸ್ಪರ್ಶ ಮಾಡಬೇಕಿರುತ್ತದೆ. ಸೌತೆಯ ಹೂಗಳಿಗೆ ಪರಾಗ ಸ್ಪರ್ಶ ಮಾಡಿಸಲು ಕನಿಷ್ಟ ಆರು ಗಂಟೆಗಳ ಸತತವಾಗಿ ಕೆಲಸ ಮಾಡಬೇಕಿರುತ್ತದೆ. ಅಲ್ಲದೆ ಬೆಂಡೆಯ ಮೊಗ್ಗುಗಳು ಚೂಪಾದ ಮುಳ್ಳುಗಳನ್ನು ಹೊಂದಿರುವುದರಿಂದಾಗಿ ಅವುಗಳಿಂದ ಬೆರಳಿಗೆ ಗಾಯವಾಗುವ ಸಂಭವವೂ ಇರುತ್ತದೆ.
ನಾನು ಅಗಸ್ಟ್ ತಿಂಗಳಿನಲ್ಲಿ ರತ್ನವ್ವನನ್ನು ಭೇಟಿಯಾಗಲೆಂದು ಹೋಗಿದ್ದಾಗ ಅವರು ತನ್ನ ಹೆಬ್ಬೆರಳಿಗೆ ತನ್ನ ಮಗನ ಉಗುರಿನ ತುಂಡೊಂದನ್ನು ಅಂಟಿಸಿಕೊಂಡಿದ್ದರು. ಏಕೆಂದರೆ ಬೆಂಡೆಯ ಮೊಗ್ಗುಗಳ ಪದರವನ್ನು ಬಿಡಿಸಲು ಉಗುರು ಚೂಪಾಗಿರಬೇಕಾಗುತ್ತದೆ. ಅವರು ಅಂದು ಪರಮೇಶಪ್ಪನ ಹೊಲಕ್ಕೆ ರಜೆ ಹಾಕಿ ತನ್ನ ಮಗನ ಬದಲಿಯಾಗಿ ಕೆಲಸ ಮಾಡಲು ಇನ್ನೊಂದು ಹೊಲಕ್ಕೆ ಹೋಗಿದ್ದರು. ಅವರ 18 ವರ್ಷದ ಮಗ ಲೊಕೇಶನಿಗೆ ಮೈಯಲ್ಲಿ ಹುಷಾರಿರಲಿಲ್ಲ. ಲೋಕೇಶ ತನ್ನ ತಾಯಿ ಅವನ ಕಾಲೇಜು ಫೀಜಿಗೆಂದು ಮಾಡಿರು 3,000 ಸಾವಿರ ರೂಪಾಯಿಗಳ ಸಾಲ ತೀರಿಸಲು ಸಹಾಯ ಮಾಡುವ ಸಲುವಾಗಿ ಕೆಲಸ ಮಾಡಲು ಆರಂಭಿಸಿದ್ದಾನೆ.
ಅದೇನೇ ಇದ್ದರೂ, ಇಡೀ ಕುಟುಂಬದ ಆರ್ಥಿಕ ಹೊರೆಯನ್ನು ಹೊತ್ತಿರುವುದು ರತ್ನವ್ವನೇ. ಅವರ ಖರ್ಚು ಮತ್ತು ಅತ್ತೆ, ಮೂವರು ಕಾಲೇಜು ಹೋಗುವ ಮಕ್ಕಳು ಮತ್ತು ತನ್ನ ಗಂಡನ ಅತಿ ದುಬಾರಿಯೆನ್ನಿಸುವ ಆಸ್ಪತ್ರೆ ಖರ್ಚು ಇವೆಲ್ಲವನ್ನೂ ಒಬ್ಬರೇ ನೋಡಿಕೊಳ್ಳುತ್ತಾರೆ. ಅವರ ಕುಟುಂಬದಲ್ಲಿ ಒಟ್ಟು ಆರು ಮಂದಿಯಿದ್ದಾರೆ.
ಅವರು ಆಗಸ್ಟ್ ತಿಂಗಳೊಂದರಲ್ಲೇ ಗಂಡನ ಆಸ್ಪತ್ರೆಯ ಖರ್ಚುಗಳಿಗಾಗಿ ತನ್ನ ಸಾಹುಕಾರರಿಂದ 22,000 ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಕಾಮಾಲೆಯಿಂದಾಗಿ ಗಂಡನ ರಕ್ತದಲ್ಲಿನ ಪ್ಲೇಟ್ಲೆಟ್ ಕೌಂಟ್ ತೀವ್ರವಾಗಿ ಕಡಿಮೆಯಾಯಿತು. ಇದರಿಂದಾಗಿ ಅವರಿಗೆ ರಕ್ತದ ಕಣಗಳನ್ನು ಹಾಕಿಸಬೇಕಾಯಿತು. ಈ ಸೌಲಭ್ಯವನ್ನು ಹೊಂದಿರುವ ಹತ್ತಿರದ ಸರ್ಕಾರಿ ಆಸ್ಪತ್ರೆ ಅವರ ಊರಿನಿಂದ 300 ಕಿಲೋಮೀಟರ್ ದೂರದ ಮಂಗಳೂರಿನಲ್ಲಿದೆ.
ರತ್ನವ್ವನ ಹೊಲದ ಮಾಲಿಕರು ಅವರಿಗೆ ಅಗತ್ಯವಿದ್ದಾಗಲೆಲ್ಲ ಹಣ ನೀಡುತ್ತಾರೆ. “ಈವಣ್ಣ ಕೊಡ್ತೈತ್ರೀ.. ಇಲ್ಲಿ ನಾವು ಹೊಟ್ಟೆಪಾಡಿಗೆ ಮುಂದು ಈಸ್ಕೊಂಡಿರ್ತೀವಲ್ರಿ. ಆಸ್ಪತ್ರೆಗೆ, ಸಂತೆಗ ಯದಕ್ಕೇ ಇರ್ಲಿ ರೀ… ಕೇಳ್ದಾಗ ಕೊಡ್ತಾರೆ. ಅವ್ರಿಗೆ ಸ್ವಲ್ಪ ಕಷ್ಟ ಅರ್ಥ ಆಗ್ತೈತಿ. ಅವ್ರೇ ಅಷ್ಟು ರೊಕ್ಕ ಕೊಡೋದು. ನಾನು ಹೋಗೋದೆ ಅಲ್ಲಿ ಬೇರೆಲ್ಲೂ ಹೋಗಂಗಿಲ್ಲ. ಈಗ ಆದಾಯ ಇನ್ನೂ ತೀರಿಲ್ರೀ. ನಾ ಒಬ್ಬಾಕಿ ದುಡ್ದು ಎಷ್ಟಂತ ತೀರ್ತೈತಿ…" ಎನ್ನುತ್ತಾರೆ.
ಕೊನೆಯಿಲ್ಲದ ಆರ್ಥಿಕ ಅಗತ್ಯಗಳ ಕಾರಣಕ್ಕಾಗಿ ಮಾಲಿಕರ ಮೇಲಿನ ಅವಲಂಬನೆಯು ಅವರು ಮಾಲಿಕ ಕರೆದಾಗಲೆಲ್ಲ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆಗೆ ದೂಡಿದೆ. ಇದೇ ಸಾಲದ ಕಾರಣದಿಂದಾಗಿ ಅವರು ತನ್ನ ಕೂಲಿಯ ಹಣದ ವಿಚಾರದಲ್ಲಿಯೂ ಚೌಕಾಶಿ ಮಾಡದಂತಾಗಿದೆ. ಕೋಣತಲಿಗೆ ಬದು ಕೆಲಸ ಮಾಡುವ ಬೇರೆ ಹಳ್ಳಿಗಳ ಮಹಿಳೆಯರು ತಮ್ಮ ದಿನದ ಎಂಟು ಗಂಟೆಗಳ ಕೂಲಿಗೆ 250 ರೂಪಾಯಿಗಳನ್ನು ಪಡೆಯುತ್ತಾರೆ ಆದರೆ ಗಂಟೆಗಳ ಲೆಕ್ಕವಿಲ್ಲದೆ ದುಡಿಯುವ ರತ್ನವ್ವನಿಗೆ ಸಿಗುವುದು 200 ರೂಪಾಯಿಗಳ ದಿನಗೂಲಿ.
"ಅದಕ್ಕೇಅವರು ಯಾವಾಗೆಲ್ಲ ಕೆಲಸಕ್ಕೆ ಕರಿತಾರೋ ಆವಾಗ ಹೋಗ್ಬೇಕಾಗುತ್ತೆ... ಅದು ಬೆಳಗ್ಗೆ ಆರು ಗಂಟೆಗೆ ಹೋಗಿ ಸಂಜೆ ಏಳು ಗಂಟೆ ಆದ್ರೂ ಬರವಾಲ್ಲ ರೀ... ಕ್ರಾಸಿಂಗ್ ಕೆಲಸ ಇಲ್ಲದಾಗ ಕಳೆ ತೆಗೆಯೋ ಕೆಲಸಕ್ಕೆ ಕರಿತಾರ್ರೀ... ಆವಾಗ ಒಂದಿನಕ್ಕೆ ಕೂಲಿ 150 ರೂಪಾಯಿ ಅಷ್ಟೇ ರೀ... ಹಿಂಗೇ ಮುಂಗಡ ಕೊಟ್ರೆ ನಾವು ಎನೂ ಅನ್ನಂಗಿಲ್ರಿ... ಅವ್ರು ಕರ್ದಾಗ ಹೋಗೋದಷ್ಟೇ... ಏನೂ ಹೆಚ್ಚು ಕಡಿಮೆ ಕೂಲಿ ಕೇಳೋದಕ್ಕಾಗಲ್ಲ..." ಎನ್ನುತ್ತಾರೆ ರತ್ನವ್ವ.
ರತ್ನವ್ವನ ಶ್ರಮವನ್ನು ಅಪಮೌಲ್ಯಗೊಳಿಸುತ್ತಿರುವುದು ಸಾಲವೊಂದೇ ಅಲ್ಲ. ವಿವಿಧ ಸಂದರ್ಭಗಳಲ್ಲಿ ರತ್ನವ್ವನನ್ನು ಲಿಂಗಾಯತ ಕುಟುಂಬದವರು ಕೆಲಸ ಮಾಡಿಸಿಕೊಳ್ಳಲೆಂದು ಕರೆಸಿಕೊಳ್ಳುತ್ತಾರೆ. ಒಕ್ಕಲು ಪದ್ಧತಿಯೆಂದು ಕರೆಯಲಾಗುವ (ಬಿಟ್ಟಿ ಚಾಕರಿಯೆಂದೂ ಕರೆಯಲಾಗುತ್ತದೆ) ಹಳೆಯ ಜಾತಿ ಪದ್ಧತಿಯ ಈ ಆಚರಣೆಯು ಕಾನೂನುಬಾಹಿರವಾಗಿದ್ದರೂ, ಕೋಣನ ತಲಿಯಲ್ಲಿ ಈಗಲೂ ಚಾಲ್ತಿಯಲ್ಲಿದೆ. ಈ ಪದ್ಧತಿಯಡಿ ಮಾದಿಗ ಕುಟುಂಬವು ಪ್ರಬಲ ಹಿಂದುಳಿದ ವರ್ಗಕ್ಕೆ ಸೇರಿರುವ ಲಿಂಗಾಯತ ಸಮುದಾಯಕ್ಕೆ ಅಡಿಯಾಳನ್ನಾಗಿ ಮಾಡುತ್ತದೆ. ಈ ಪದ್ಧತಿಯಡಿ ಅವರು ಅವರ ಮನೆಯಲ್ಲಿ ಉಚಿತವಾಗಿ ಕೆಲಸ ಮಾಡಲು ಒತ್ತಾಯಿಸುತ್ತಾರೆ.
“ಲಗ್ನ ಆಗ್ಲಿ ... ಫಂಕ್ಷನ್ ಇದ್ದಾಗ ... ಇಲ್ಲಂದ್ರೆ ಅವ್ರ ಮನೇಲಿ ಯಾರಾದ್ರೂ ಸತ್ತಾಗ ಅವ್ರ ಮನೆ ಕಸ ಹೊಡಿಬೇಕು. ಒಂದಿವಸ ಕೆಲಸ ಇರತ್ತೆ ... ಎಲ್ಲ ಕೆಲಸ ಮಾಡ್ಬೇಕು ... ಮದುವೆ ಅಂದ್ರೆ ಒಂದು ಎಂಟು ದಿನ ಇರುತ್ತೆ. ಅಂದ್ರೆ ಅವ್ರು ಮನೆಯೊಳ್ಗೆ ಬಿಡಂಗಿಲ್ರಿ ... ಹೊರಗಿಟ್ಟು ಒಂದಿಷ್ಟು ಮಂಡಕ್ಕಿ ಚಾ ಕೊಡ್ತಾರೆ ... ಅವ್ರು ತಟ್ಟೆಪಟ್ಟೆ ಕೊಡೋಲ್ಲ, ನಮ್ಮನೇ ತಟ್ಟೆ ತೊಗೊಂಡು ಹೋಗೋದು ... ಅವ್ರ ಮನಿಯಾಗ ಸಣ್ಣ ಆಡು ಇರ್ತೈತ್ರಿ ಅದನ್ನ ಕೊಡ್ತಾರಾ ... ಕರು ಇರ್ತೈತಿ ಅದನ್ನ ಕೊಡ್ತಾರೆ ... ಏನಾದ್ರು ಕೊಡ್ತಾರೆ ... ರೊಕ್ಕ ಕೊಡಂಗಿಲ್ಲ ... ದನ ಕರು ಸತ್ರೆ ಕರೀತಾರೆ ... ಅದನ್ನ ಹೊತ್ಕೊಂಡು ಬರ್ಬೇಕು ವಿಲೇವಾರಿ ಮಾಡೋಕೆ..."
ನಾಲ್ಕು ವರ್ಷಗಳ ಹಿಂದೆ, ಆ ಲಿಂಗಾಯತ ಕುಟುಂಬದ ಸದಸ್ಯನೊಬ್ಬನ ಮದುವೆಯ ಸಂದರ್ಭದಲ್ಲಿ, ರತ್ನವ್ವ ಜಾತಿ ಸಂಪ್ರದಾಯದ ಭಾಗವಾಗಿ ಒಂದು ಜೊತೆ ಹೊಸ ಚಪ್ಪಲಿಯನ್ನು ಖರೀದಿಸಿ, ಅದಕ್ಕೆ ಪೂಜೆ ಸಲ್ಲಿಸಿ ವರನಿಗೆ ಉಡುಗೊರೆಯಾಗಿ ನೀಡಬೇಕಾಯಿತು. ಈಗ್ಗೆ ಕೆಲವು ವರ್ಷಗಳ ಹಿಂದೆ ರತ್ನವ್ವ ತನ್ನ ಕೆಲಸಗಳಿಂದ ಸಂಪಾದಿಸುವ ಹಲವು ವಿಫಲ ಪ್ರಯತ್ನಗಳ ನಂತರ ಅಲ್ಲಿಗೆ ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಲು ನಿರ್ಧರಿಸಿದರು. ಅವರ ಈ ನಿರ್ಧಾರವು ಆ ಲಿಂಗಾಯತ ಕುಟುಂಬವನ್ನು ಕೆರಳಿಸಿದೆಯೆಂದು ಅವರು ಹೇಳುತ್ತಾರೆ.
ಈ ವರ್ಷ ರತ್ನವ್ವ ಪರಮೇಶಪ್ಪನವರ ಸಹಾಯದೊಂದಿಗೆ ತನ್ನ ಗಂಡನಿಗೆ ಸರ್ಕಾರ ಮಂಜೂರು ಮಾಡಿದ ಅರ್ಧ ಎಕರೆ ತುಂಡು ಜಮೀನಿನಲ್ಲಿ ಬೆಂಡೆ ಮತ್ತು ಮೆಕ್ಕೆ ಜೋಳವನ್ನು ನೆಟ್ಟಿದ್ದರು. ಆದರೆ ಜುಲೈ ತಿಂಗಳಲ್ಲಿ ಸುರಿದ ಮಳೆ ಅನಾಹುತವನ್ನೇ ಸೃಷ್ಟಿಸಿತು. ಆ ಮಳೆಯಲ್ಲಿ ಮಾಸೂರು ಮದಗ ಕೆರೆಯ ಉದ್ದಕ್ಕೂ ಇದ್ದ ಮಾದಿಗರಿಗೆ ಮಂಜೂರಾಗಿದ್ದ ಜಮೀನುಗಳು ಮುಳುಗಿ ಹೋಗಿದ್ದವು. "ಈ ವರ್ಷ ಭೆಂಡಿಗೆ ಹಾಕಿದ್ರು ಹರಿಜನ[ಮಾದಿಗರ] ಹೊಲದ್ಯಾಗ, ಅವುಟೂ ಹೊಳಿಗೆ ಹೊಯ್ತಲ್ರೀ.." ಎಂದು ಹೇಳಿದರು.
ರತ್ನವ್ವನ ಬದುಕಿನ ಭಾರವನ್ನು ಹಗುರಗೊಳಿಸಲು ಸರ್ಕಾರದ ಯೋಜನೆಗಳೂ ಒದಗಿಲ್ಲ. ಭೂರಹಿತ ಕೃಷಿ ಕಾರ್ಮಿಕರಾದ ಅವರನ್ನು ರೈತರಿಗೆ ಮೀಸಲಾಗಿರುವ ಯಾವುದೇ ಸರ್ಕಾರಿ ಕಲ್ಯಾಣ ಕಾರ್ಯಕ್ರಮಗಳ ಫಲಾನುಭವಿಯೆಂದು ಪರಿಗಣಿಸಲಾಗುವುದಿಲ್ಲ. ಅವರು ಕಳೆದುಕೊಂಡ ಬೆಳೆಗೂ ಯಾವುದೇ ಪರಿಹಾರ ದೊರೆತಿಲ್ಲ. ಅವರ ಬಳಿ ಅಂಗವಿಕಲರಿಗೆ ನೀಡಲಾಗುವ ಪ್ರಮಾಣಪತ್ರವಿದ್ದೂ ಸರ್ಕಾರದಿಂದ ನೀಡಲಾಗುವ 1,000 ರೂಪಾಯಿಗಳ ಪಿಂಚಣಿ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಿಲ್ಲ.
ಸಮಯದ ಮಿತಿಯಿಲ್ಲದೆ ದುಡಿದರೂ ತನ್ನ ಆರ್ಥಿಕ ಕೊರತೆಯನ್ನು ನೀಗಿಸಿಕೊಳ್ಳಲು ಸಾಧ್ಯವಾಗದ ರತ್ನವ್ವ ತನ್ನ ಹಣಕಾಸಿನ ಅಗತ್ಯಯಗಳಿಗಾಗಿ ಸ್ಥಳೀಯ ಮೈಕ್ರೋ ಫೈನಾನ್ಸ್ ಕಂಪನಿಗಳನ್ನು ಅವಲಂಬಿಸಿದ್ದಾರೆ. ಇದು ಅವರನ್ನು ಕೊನೆಯಿಲ್ಲದ ಸಾಲದ ಸುಳಿಯಲ್ಲಿ ಸಿಲುಕಿಸಿದೆ. ಅವರು ಪರಮೇಶಪ್ಪನಿಗೆ ನೀಡಬೇಕಿರುವ ಸಾಲದ ಜೊತೆಗೆ ಈ ಕಂಪನಿಗಳಿಂದ 2 ಲಕ್ಷ ರೂಪಾಯಿಗಳ ಸಾಲ ಮಾಡಿಕೊಂಡಿದ್ದಾರೆ. ಈ ಮೊತ್ತಕ್ಕೆ 2ರಿಂದ 3 ಪರ್ಸೆಂಟ್ ಬಡ್ಡಿಯಿರುತ್ತದೆ.
ಕಳೆದ ಎರಡು ವರ್ಷಗಳಲ್ಲಿ ಅವರು ತನ್ನ ಮನೆಯಲ್ಲಿ ಒಂದು ಕೋಣೆ ಕಟ್ಟಿಸಲೆಂದು, ಕಾಲೇಜು ಫೀಸು ಮತ್ತು ಆಸ್ಪತ್ರೆಯ ಖರ್ಚುಗಳಿಗೆಂದು ಕನಿಷ್ಠ 10 ವಿವಿಧ ಮೂಲಗಳಿಂದ ಸಾಲ ಪಡೆದಿದ್ದಾರೆ. ದೈನಂದಿನ ಖರ್ಚುಗಳಿಗಾಗಿ ಊರಿನ ಶ್ರೀಮಂತ ಲಿಂಗಾಯತ ಮಹಿಳೆಯರನ್ನು ಅವಲಂಬಿಸಿದ್ದಾರೆ. "ಹೋದ್ವರ್ಷ ನಾನು ತಿಂಗಳ 2650 ರೂಪಾಯಿ ಬಡ್ಡಿ ಪ್ರತಿ ತಿಂಗಳ ಕಟ್ತಿದ್ದೆ. ಲಾಕ್ ಡೌನಿಂದ ಇಲ್ಲಿವರ್ಗೂ ಬಡ್ಡಿ ಕಟ್ಟೋಕೂ ದುಡ್ ಇಲ್ರಿ, ಆದ್ರ ಕರ್ಚಿಗೆ ಸಾಲ ಮಾತ್ರ ತಗೊತಾನೇ ಇದ್ದೀವಿ ರೀ" ಎನ್ನುತ್ತಾರವರು.
ಸಾಲದ ಹೊರೆ ಏರುತ್ತಲೇ ಇದ್ದರೂ, ರತ್ನವ್ವ ಎಷ್ಟೇ ಕಷ್ಟವಾದರೂ ತಮ್ಮ ಮಕ್ಕಳ ಕಾಲೇಜು ಓದನ್ನು ನಿಲ್ಲಿಸದಿರಲು ತೀರ್ಮಾನಿಸಿದ್ದಾರೆ. ತನ್ನ ಮಗಳು ಸುಮಾ ಬಿಟ್ಟಿ ಚಾಕರಿ ಮಾಡದಂತೆ ನೋಡಿಕೊಂಡಿದ್ದಾರೆ. "ನಾನಾಗಲಿ ನನ್ನ ಕಾಲಾಗಲಿ ಎರಡೂ ಗಟ್ಟಿ ಇಲ್ರಿ... ಬಿಡಂಗೂ ಇಲ್ಲ ನಡಿಯಂಗೂ ಇಲ್ಲ... ಇವ್ರನ್ನಾದ್ರೂ ಇದೆಲ್ಲದ್ರಿಂದ [ಬಿಟ್ಟಿ ಚಾಕ್ರಿ] ಬಿಡಿಸ್ಬೇಕ್ರಿ. ಇಲ್ಲಂದ್ರ ಅವ್ರು ಶಾಲಿ ಬಿಡ್ಬೇಕಿತ್ತ ರೀ.. ಹಂಗಾಗಿ ಏನೂ ಆಗಿಲ್ಲ ಅನ್ನೋ ಹಾಂಗ ಕೆಲ್ಸ ಮಾಡತೀನ್ರೀ." ತನ್ನ ಇಷ್ಟೆಲ್ಲ ಸಂಕಷ್ಟಗಳ ನಡುವೆಯೂ ಎದೆಗುಂದ ರತ್ನವ್ವ ಹೇಳುತ್ತಾರೆ, "ಅವ್ರು ಏಷ್ಟು ಓದ್ಬೇಕಂತಾರ ಅಷ್ಟು ಓದಿಸ್ತಿನ್ರೀ,"
ಅನುವಾದ: ಶಂಕರ. ಎನ್. ಕೆಂಚನೂರು