“ಕುಂಚೂರಲ್ಲಿ ಮೂರ್ ವರ್ಷ, ಕುರಗುಂದದಲ್ಲಿ ಒಂದು ವರ್ಷ ಆಮೇಲೆ ಕೋಣನತಲೆ” ಮಂಗಳ ಹರಿಜನ ಕೆಲಸಕ್ಕೆಂದು ತಿರುಗಾಡಿದ ಊರುಗಳ ಹೆಸರನ್ನು ನೆನಪಿಸಿಕೊಳ್ಳುತ್ತಿದ್ದರು. ಇವೆಲ್ಲವೂ ಕರ್ನಾಟಕದ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಊರುಗಳು. ಕೃಷಿ ಕೂಲಿಯಾಗಿರುವ ಮಂಗಳಾ ದಿನವೊಂದಕ್ಕೆ ದಿನಗೂಲಿ ಕೆಲಸಕ್ಕಾಗಿ 17 – 20 ಕೊಲೋಮೀಟರುಗಳಷ್ಟು ಪ್ರಯಾಣ ಮಾಡುತ್ತಾರೆ.
“ಎರಡು ವರ್ಷದಿಂದ ಕೋಣನತಲಿಗೆ ಹೋಗ್ತಿದ್ದೀನಿ,” ಎಂದು ನನ್ನೊಂದಿಗೆ ಹೇಳಿದರು. ಕೋಣನತಲಿ ಮತ್ತು ಮಂಗಳಾರ ಊರು ಮೆಣಸಿನಹಾಳ ಎರಡೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿವೆ. ಹಿರೇಕೆರೂರಿಗೆ ಅಲ್ಲಿಂದ 35 ಕಿಲೋಮೀಟರ್ ದೂರವಿದೆ. ಮಂಗಳಾ ಮತ್ತು ಅವರ ನೆರೆಹೊರೆಯ ಮಹಿಳೆಯರು 8 – 10ಜನರ ತಂಡವಾಗಿ ಅವರ ಮನೆಯಿರುವ ಮೆಣಸಿನ ಹಾಳದ ಮಾದಿಗರ ಕೇರಿಯಿಂದ (ಮಂಗಳಾ ಅದೇ ಸಮುದಾಯಕ್ಕೆ ಸೇರಿದವರು) ಹಾವೇರಿಯ ಸುತ್ತಮುತ್ತಲ ಊರುಗಳಲ್ಲಿ ಕೆಲಸ ಮಾಡಲೆಂದು ತೆರಳುತ್ತಾರೆ.
ಅವರು ಹೀಗೆ ಕೆಲಸ ಮಾಡುವ ಮೂಲಕ ದಿನವೊಂದಕ್ಕೆ 150 ರೂಪಾಯಿಗಳನ್ನು ಗಳಿಸುತ್ತಾರೆ, ಆದರೆ ವರ್ಷದ ಕೆಲವು ತಿಂಗಳು ಕೈ ಪರಾಗಸ್ಪರ್ಶ ನಡೆಸುವ ಕೆಲಸ ಮಾಡುವ ಮೂಲಕ 90 ರೂಪಾಯಿಗಳಷ್ಟು ಹೆಚ್ಚು ಗಳಿಸುತ್ತಾರೆ. ಅವರು ಈ ಕೆಲಸಕ್ಕಾಗಿ ಜಿಲ್ಲೆಯಾದ್ಯಂತ ಪ್ರಾಯಾಣಿಸುತ್ತಾರೆ. ಈ ಕೆಲಸಕ್ಕೆ ಹೊಲಗಳ ಮಾಲಿಕರು ಕೆಲಸಕ್ಕೆ ಹೋಗಿ ಬರಲು ಆಟೋರಿಕ್ಷಾ ವ್ಯವಸ್ಥೆ ಮಾಡಿಸುತ್ತಾರೆ. “ರಿಕ್ಷಾದಂವ ದಿನಕ್ಕ 800-900 ಚಾರ್ಜ್ ಮಾಡ್ತಾನೆ, ಅದಕ್ಕ ಮಾಲಿಕ್ರು ನಮ್ ಪಗಾರಾದಾಗ 10 ರೂಪಾಯಿ ಹಿಡ್ಕೊತಾರ, ಆಗ ಆಟೊ – ಪಾಟೋ ಏನಿಲ್ಲ ಹಂಗೆ ನಡ್ಕೊಂಡು ಹೋಗ್ತಿದ್ವಿ,” ಎನ್ನುತ್ತಾರೆ ಮಂಗಳಾ.
ಸಣ್ಣ ದೇಹದ, ತೂಕದ ಕೊರತೆ ಎದ್ದುಕಾಣಿಸುವ, 30 ವರ್ಷದ ಮಂಗಳಾ ತನ್ನ ಹುಲ್ಲಿನ ಗುಡಿಸಲಿನಲ್ಲಿ ಕೂಲಿ ಕಾರ್ಮಿಕರಾಗಿರುವ ಪತಿ ಮತ್ತು ನಾಲ್ವರು ಮಕ್ಕಳ ಜೊತೆ ಬದುಕು ನಡೆಸುತ್ತಿದ್ದಾರೆ. ಇಡೀ ಮನೆಗೆ ಒಂದು ಬುರುಡೆ (incandescent) ಬಲ್ಬ್ ಉರಿಯುತ್ತಿರುತ್ತದೆ. ಮನೆಯ ಒಂದು ಮೂಲೆ ಅವರ ಅಡುಗೆಮನೆಯಾದರೆ, ಇನ್ನೊಂದು ಮೂಲೆಯಲ್ಲಿ ಬಟ್ಟೆಗಳನ್ನು ಜೋಡಿಸಿಡಲಾಗಿದೆ. ಅಲ್ಲೇ ಗೋಡೆಗೆ ಒಂದು ಮುರಿದ ಕಬ್ಬಿಣದ ಬೀರುವನ್ನು ಒರಗಿಸಿಡಲಾಗಿದೆ. ಇಷ್ಟೆಲ್ಲ ವಸ್ತುಗಳ ನಂತರ ಕೋಣೆಯ ಉಳಿದ ಜಾಗವು ಅವರ ಮಲಗುವ ಕೋಣೆ ಮತ್ತು ಊಟದ ಕೋಣೆಯಾಗಿ ಕೆಲಸ ನಿರ್ವಹಿಸುತ್ತದೆ. ಮನೆಯ ಹೊರಗೆ ಎತ್ತರದ ಸ್ಥಳದಲ್ಲಿ ಕಲ್ಲುಗಳನ್ನು ಜೋಡಿಸಿರುವಲ್ಲಿ ಬಟ್ಟೆ ಒಗೆಯುವುದು, ಪಾತ್ರ ತೊಳೆಯುವ ಕೆಲಸಗಳನ್ನು ಮಾಡುತ್ತಾರೆ.
“ಈ ವರ್ಷ ಅಷ್ಟೇ ಹತ್ತು ರೂಪಾಯಿ ಜಾಸ್ತಿ ಕೊಟ್ರು, ಹೋದ್ವರ್ಷದ ತನ್ಕ ಕ್ರಾಸಿಂಗ್ ಕೆಲಸಕ್ಕೆ 230 ಕೊಡ್ತಿದ್ರು.” ಎನ್ನುತ್ತಾರೆ ಮಂಗಳಾ. ಅವರಂತಹ ಅನೇಕ ಮಹಿಳೆಯರು ಕೃತಕ ಪರಾಗಸ್ಪರ್ಶದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ( ಹಾವೇರಿ: ಬದುಕಿನ ಸಂಕಷ್ಟದ ಹೊಲದಲ್ಲಿ ಭರವಸೆಯ ಹೂವರಳಿಸುವ ಯತ್ನದಲ್ಲಿರುವ ರತ್ನವ್ವ ) ಈ ಕೃತಕ ಪರಾಗಸ್ಪರ್ಶ ಪ್ರಕ್ರಿಯೆಯನ್ನು ಅವರು ಕ್ರಾಸಿಂಗ್ ಎಂದು ಕರೆಯುತ್ತಾರೆ.
ಈ ಕ್ರಾಸಿಂಗ್ ಕೆಲಸ ಲಭ್ಯವಿರುವ ಚಳಿಗಾಲ ಮತ್ತು ಮಾನ್ಸೂನ್ ಋತುಗಳಲ್ಲಿ ಮಂಗಳಾ ಕನಿಷ್ಟ 15-20 ದಿನಗಳ ಕೆಲಸವನ್ನು ಪಡೆಯುತ್ತಾರೆ. ಅವರು ರೈತರು ಕಂಪನಿಗಳಿಗೆ ಉತ್ಪಾದಿಸಿ ಕೊಡುವ ಬೆಂಡೆ, ಟೊಮ್ಯಾಟೊ, ಸೋರೆಯಂತಹ ಹೈಬ್ರೀಡ್ ತರಕಾರಿ ಬೀಜಗಳ ಉತ್ಪಾದನೆಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾರೆ. ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾ (NSAI) ಪ್ರಕಾರ, ಭಾರತದಲ್ಲಿ ಹೈಬ್ರಿಡ್ ತರಕಾರಿ ಬೀಜ ಉದ್ಯಮವು ರೂ 2,600 ಕೋಟಿ ($349 ಮಿಲಿಯನ್) ಮೌಲ್ಯದ್ದಾಗಿದೆ, ಇದಕ್ಕಾಗಿ ಮಂಗಳಾ ಮೊದಲ ಹಂತದಲ್ಲಿ ಸಸ್ಯಗಳ ಹೂವುಗಳಿಗೆ ಪರಾಗಸ್ಪರ್ಶ ಮಾಡಿಸುತ್ತಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕವು ದೇಶದಲ್ಲಿ ತರಕಾರಿ ಬೀಜಗಳನ್ನು ಹೆಚ್ಚು ಉತ್ಪಾದಿಸುತ್ತದೆ ಮತ್ತು ಕರ್ನಾಟಕದಲ್ಲಿ ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳು ತರಕಾರಿ-ಬೀಜ ಉತ್ಪಾದನೆಯ ಕೇಂದ್ರಗಳಾಗಿವೆ.
ಹಾವೇರಿ ಗ್ರಾಮೀಣ ಪ್ರದೇಶದ ಮಹಿಳೆಯರು ತಮ್ಮ ಹಳ್ಳಿಗಳ ಹೊಲಗಳಲ್ಲಿ ದುಡಿಯುವುದಕ್ಕಿಂತ ಒಂದಿಷ್ಟು ಹೆಚ್ಚು ದುಡಿಯಲೆಂದು ಹೆಚ್ಚು ದೂರ ಪ್ರಯಾಣಿಸಲು ಸಿದ್ಧರಿದ್ದಾರೆ. 28 ವರ್ಷದ ರಜಿಯಾ ಅಲ್ಲಾದ್ದೀನ್ ಶೇಖ್ ಸನ್ನದಿ ಮದುವೆಯ ನಂತರದ ನಾಲ್ಕು ವರ್ಷಗಳ ಕಿರುಕುಳ ಸಹಿಸಿ ಕೊನೆಗೆ ತನ್ನ ಅತ್ತೆಯ ಮನೆಯಿಂದ ಓಡಿಹೋಗಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಪೋಷಿಸಲು ಕೆಲಸ ಹುಡುಕಲು ಹಿರೇಕೆರೂರಿನ ತನ್ನ ಹುಟ್ಟೂರಾದ ಕುಡಪಲಿ ಗ್ರಾಮಕ್ಕೆ ಮರಳಿದರು.
ಅವರ ಊರಿನ ರೈತರು ಜೋಳ, ಹತ್ತಿ, ಶೇಂಗಾ, ಮತ್ತು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. "ಇಲ್ಲಿ ದಿನಕ್ಕೆ 150 ಕೊಡ್ತಾರ [ಕೃಷಿ ಕೂಲಿಗಾಗಿ] ಅದು ಒಂದು ಕೇಜಿ ಎಣ್ಣಿಗೂ ಸಾಲುವಲ್ದ್ರೀ," ಎಂದು ರಜಿಯಾ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಅವರು ಇನ್ನೇನೂ ಯೋಚಿಸದೆ ಕ್ರಾಸಿಂಗ್ ಕೆಲಸಕ್ಕೆ ಹೋಗುವ ಮಹಿಳೆಯರ ಗುಂಪನ್ನು ಸೇರಿಕೊಳ್ಳಲು ನಿರ್ಧರಿಸಿದರು. “ಅವ್ರು.. ಮತ್ತೆ ಮನೆಯಾಗೇ ಇಡೀ ದಿನ ಕೇಳಿದ್ರ ಏನ್ ಮಾಡ್ತಿ ಅಂತ ಕೇಳಿ ನಡಿ ಕೆಲಸಕ್ ಹೋಗೋಣು ಅಂದ್ರ ರೀ… ಮತ್ತ ಅವ್ರೇ ಕರ್ಕೊಂಡು ಹೋದ್ರು… ಈಗ ದಿನಕ್ಕ 240 ಕೊಡ್ತಾರ…”
ಎತ್ತರಕ್ಕೆ ಸಣ್ಣಗಿನ ಆಳಾದ ರಜಿಯಾರನ್ನು ಅವರು 20 ವರ್ಷದವರಿರುವಾಗ ಕುಡಿತದ ವ್ಯಸನಿಯೊಬ್ಬನಿಗೆ ಮದುವೆ ಮಾಡಿಕೊಡಲಾಯಿತು. ಮದುವೆಯ ನಂತರ ಅವರು ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿರುವ ತನ್ನ ಅತ್ತೆಯ ಮನೆಯಲ್ಲಿ ಸಂಸಾರ ಮಾಡಲಾರಂಭಿಸಿದರು. ರಜಿಯಾರ ಕುಟುಂಬವು ತಮ್ಮ ಕೈಯಿಂದ ಸಾಧ್ಯವಿರುವಷ್ಟು ವರದಕ್ಷಿಣೆ ಕೊಟ್ಟಿದ್ದಾಗ್ಯೂ ವರದಕ್ಷಿಣೆ ಕಿರುಕುಳದಿಂದ ತಪ್ಪಿಸಿಕೊಳ್ಳಲಾಗಲಿಲ್ಲ. “ವರದಕ್ಷಿಣೆ ಎಲ್ಲಾ ಕೊಟ್ಟಾರ ರೀ, ಮೂರು ತೊಲ ಬಂಗಾರ [24 ಗ್ರಾಂ] ಆಮೇಲೆ ಜನದಾಗ ಪಾತ್ರೆ ಸಾಮಾನ್ ಎಲ್ಲಾ ಜಗ್ಗಿ ಕೊಡ್ತಾರ್ ರೀ ಅದೂ ಕೊಟ್ಟೇವಿ.. ಮತ್ತ ಬಟ್ಟಿ ಬರಿ ಅಂತ… ಹೀಗೆ ಎಲ್ಲ ಕೊಟ್ಟಾರ ರೀ, ಯಾವ್ದೂ ಬಾಕಿಯಿಟ್ಟಿಲ್ರೀ…” ಎನ್ನುತ್ತಾರೆ ರಜಿಯಾ.
ರಜಿಯಾ ತನ್ನ ಹುಟ್ಟೂರಿಗೆ ಮರಳಿದ ನಂತರ ಅವರ ಗಂಡ ತಾನು ವಿಧುರನೆಂದು ಹೇಳಿಕೊಂಡು ಇನ್ನೊಂದು ಮದುವೆಯಾಗಿದ್ದಾನೆ. ರಜಿಯಾ ತನ್ನ ಪತಿಯ ವಿರುದ್ಧ ಪ್ರಕರಣ ದಾಖಲಿಸಿದ್ದು ತನಗೂ ಹಾಗೂ ತನ್ನ ಮಗುವಿಗೆ ಜೀವನಾಂಶ ಕೊಡಬೇಕೆಂದು ಆಗ್ರಹಿಸಿದ್ದಾರೆ. “ಅವತ್ನಿಂದ ಅವ್ನು ಮಕ್ಳನ್ನ ನೋಡೋದಕ್ಕೂ ಬಂದಿಲ್ರೀ.” ಎನ್ನುತ್ತಾರವರು. ಅವರು ಸಹಾಯ ಪಡೆಯಬಹುದುದಾಂತಹ ಮಹಿಳಾ ಆಯೋಗ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಂತಹ ಸಂಸ್ಥೆಗಳ ಬಗ್ಗೆ ರಜಿಯಾಗೆ ತಿಳಿದಿಲ್ಲ. ಕೃಷಿ ಕಾರ್ಮಿಕರಿಗಾಗಿ ಸರ್ಕಾರವು ನೀಡುವ ಸೌಲಭ್ಯಗಳನ್ನು ಕೊಡಿಸಬಲ್ಲವರು ಅವರ ಊರಿನಲ್ಲಿ ಯಾರೂ ಇಲ್ಲ. ಅವರು ರೈತರಿಗೆ ಸಿಗುವ ಸೌಲಭ್ಯಗಳನ್ನೂ ಬಳಸಿಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಅವರನ್ನು ರೈತರೆಂದು ಪರಿಗಣಿಸಲಾಗುವುದಿಲ್ಲ.
“ನಂಗೆ ಅಡುಗೆ ಕೆಲಸ ಚಲೋ ರೀ, ಪಗಾರ್ ಬರ್ತೈತ್ರಿ, ಆದ್ರ ಪರಿಚಯ ಇದ್ದವರಿಗಷ್ಟ ಕೆಲಸ ಸಿಗ್ತೈತಿ. ಗುರ್ತು ಇರೋ ಮಂದಿಗಷ್ಟ ಸಿಗ್ತವ, ನಂಗ ಯಾರ್ದೂ ಗುರ್ತ್ ಇಲ್ರಿ. ಎಲ್ರೂ ಮುಂದಕ್ಕ ಸರಿ ಹೋಗ್ತದ, ಎಲ್ಲಾ ಚಲೋ ಆಗ್ತದಾ ಅಂತಾರ್ರೀ.. ಆದ್ರ ಎಲ್ಲ ಒಬ್ಳೇ ಮಾಡ್ಬೇಕ್ರೀ... ಸಹಾಯ ಮಾಡ್ಳಾಕಾ ನಂಗ್ಯಾರೂ ಇಲ್ರೀ ಒಬ್ಳ ಎಲ್ಲ ಮಾಡ್ಬೇಕು..” ಎಂದು ಬೇಸರಿಸುತ್ತಾರೆ ರಜಿಯಾ.
ರಜಿಯಾ ಪ್ರಸ್ತುತ ಕೆಲಸ ಮಾಡುತ್ತಿರುವ ಹೊಲದ ರೈತ ಮಾಲಿಕ ತಾನು ಬೆಳೆದ ಬೀಜಗಳನ್ನು ಬಹುರಾಷ್ಟ್ರೀಯ ಬೀಜಕಂಪನಿಯೊಂದಕ್ಕೆ ಕೊಡುತ್ತಾರೆ. ಅದರ ವಾರ್ಷಿಕ ಆದಾಯ 200ರಿಂದ 500 ಕೋಟಿ ರೂಪಾಯಿಗಳ ತನಕ ಇದೆ. ಆದರೆ ಇದರಲ್ಲಿ ರಜಿಯಾರಿಗೆ ಸಿಗುವುದು ಅದರ ಆದಾಯದ ಒಂದು ಹನಿಯಷ್ಟು ಮಾತ್ರ. "ಇಲ್ಲಿ (ಹಾವೇರಿ ಜಿಲ್ಲೆಯಲ್ಲಿ) ಉತ್ಪಾದಿಸಲಾದ ಬೀಜಗಳನ್ನು ನೈಜೀರಿಯಾ, ಥೈಲ್ಯಾಂಡ್, ಪಾಕಿಸ್ತಾನ, ಆಸ್ಟ್ರೇಲಿಯಾ, ಯುಎಸ್ ಗೆ ರಫ್ತು ಮಾಡಲಾಗುತ್ತದೆ" ಎಂದು ರಾಣಿಬೆನ್ನೂರು ತಾಲೂಕಿನ 13 ಹಳ್ಳಿಗಳಲ್ಲಿ ಬೀಜ ಉತ್ಪಾದನೆಯ ಮೇಲ್ವಿಚಾರಣೆ ನಡೆಸುತ್ತಿರುವ ಆ ಬೀಜ ಕಂಪನಿಯ ಉದ್ಯೋಗಿಯೊಬ್ಬರು ಹೇಳುತ್ತಾರೆ.
ಮಂಗಳರಂತಹ ಆಂತರಿಕ ವಲಸೆ ಮಹಿಳಾ ಕಾರ್ಮಿಕರು ಭಾರತದ ಬೀಜ ಉತ್ಪಾದನಾ ಕಾರ್ಯಪಡೆಯ ಅನಿವಾರ್ಯ ಭಾಗವಾಗಿದ್ದಾರೆ. ದೇಶದ ಬೀಜ ಉದ್ಯಮದ ಮೌಲ್ಯವು ಕನಿಷ್ಠ 22,500 ಕೋಟಿ ರೂ.ಗಳು (3 ಬಿಲಿಯನ್ ಡಾಲರ್) ಎಂದು ಎನ್ಎಸ್ಎಐ ಅಂದಾಜಿಸಿದೆ - ಇದು ಜಾಗತಿಕವಾಗಿ ಐದನೇ ದೊಡ್ಡ ಮೌಲ್ಯ. ಮೆಕ್ಕೆಜೋಳ, ಕಿರುಧಾನ್ಯಗಳು, ಹತ್ತಿ, ತರಕಾರಿ ಬೆಳೆಗಳು, ಹೈಬ್ರಿಡ್ ಅಕ್ಕಿ ಮತ್ತು ಎಣ್ಣೆಕಾಳುಗಳ ಬೀಜಗಳನ್ನು ಒಳಗೊಂಡಿರುವ ಹೈಬ್ರಿಡ್ ಬೀಜ ಉದ್ಯಮದ ಒಟ್ಟು ಪಾಲು 10,000 ಕೋಟಿ ರೂ.ಗಳು ($1.33 ಬಿಲಿಯನ್ ಡಾಲರ್).
ಸರ್ಕಾರದ ನೀತಿಗಳ ಸಹಾಯದಿಂದ ಖಾಸಗಿ ವಲಯವು ಕಳೆದ ಕೆಲವು ವರ್ಷಗಳಲ್ಲಿ ಬೀಜ ಉದ್ಯಮದಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿದೆ. ಭಾರತದ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ವರ್ಷದ ಮಾರ್ಚ್ ನಲ್ಲಿ ಲೋಕಸಭೆಗೆ ಸಲ್ಲಿಸಿದ ವರದಿಯ ಪ್ರಕಾರ, ದೇಶದಲ್ಲಿ 540 ಖಾಸಗಿ ಬೀಜ ಕಂಪನಿಗಳಿವೆ. ಇವುಗಳಲ್ಲಿ 80 ಕಂಪನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಸಾಮರ್ಥ್ಯಗಳನ್ನು ಹೊಂದಿವೆ. ಭಾರತದಲ್ಲಿ ಬೀಜ ಉತ್ಪಾದನೆಯಲ್ಲಿ ಖಾಸಗಿ ವಲಯದ ಪಾಲು 2017-18ರಲ್ಲಿ ಶೇ.57.28ರಷ್ಟಿದ್ದು, 2020-21ರಲ್ಲಿ ಶೇ.64.46ಕ್ಕೆ ಏರಿದೆ ಎಂದು ಸಚಿವಾಲಯ ಹೇಳಿದೆ.
ಶತಕೋಟಿ ಡಾಲರ್ ಬೀಜ ವಲಯದ ಬೆಳವಣಿಗೆಯು ಹಾವೇರಿಯ ಮಂಗಳಾ ಮತ್ತು ಇತರ ಮಹಿಳಾ ಕೃಷಿ ಕಾರ್ಮಿಕರ ಜೀವನ ಮಟ್ಟವನ್ನು ಸುಧಾರಿಸಿಲ್ಲ. ಮಂಗಳಾರ ನೆರೆಯವರಾದ 28 ವರ್ಷದ ದೀಪಾ ದೊಣ್ಣೆಪ್ಪ ಪೂಜಾರ್ ಹೇಳುವುದು: "ಅವ್ರಿಗಿ ಒಂದು ಕೇಜಿಗೆ 10,000 ದಿಂದ 20,000 ತನಕ ಸಿಗ್ತದ ರೀ... 2010ನೇ ಇಸ್ವಿಯಾಗ ಕೇಜಿಗ್ 6000 ಇತ್ರಿ ಆಗ ಸ್ಟಾರ್ಟಿಂಗ್, ಈಗ ಎಷ್ಟೈತಿ ಅಂತ ನಮಗೆ ಅವ್ರು ಹೇಳಂಗಿಲ್ರೀ.. ಈಗ್ಲೂ ಅಷ್ಟೇ ಐತಿ ಅಂತಾರ..." ತಮ್ಮಂತಹ ಕೆಲಸಗಾರರಿಗೆ ಸಂಬಳ ಹೆಚ್ಚು ಮಾಡಬೇಕೆಂದು ಅವರು ಆಗ್ರಹಿಸುತ್ತಾರೆ.
ಈ ಕ್ರಾಸಿಂಗ್ ಕೆಲಸ ತನ್ನದೇ ಆದ ಸಮಸ್ಯೆಗಳನ್ನೂ ಹೊಂದಿದೆ. ದೀಪಾ ವಿವರಿಸುವಂತೆ, “ಭಾಳ ಕೆಲ್ಸ್ ಇರ್ತೈತ್ರೀ, ನಾವ ಅಡಿಗಿ ಮಾಡ್ಬೇಕು, ಕಸ ಗುಡಿಸ್ಬೇಕ, ಮನಿ ಬಾಕ್ಲಾ ತೊಳಿಬೇಕ, ಮುಸ್ರಿ ತಿಕ್ಬೇಕು… ಹಿಂಗ ಎಲ್ಲ ಕೆಲಸ ನಾವೇ ಮಾಡ್ಕೊಬೇಕು ನೋಡ್ರಿ…”
“ನಾವು ಕ್ರಾಸಿಂಗ್ಗೆ ಹೋದ್ರ ಅವ್ರು ಬರೇ ಟೈಮ್ ನೋಡ್ತಾರ್ರೀ… ನೀವ್ ಈಗ್ ಬಂದೀರಲ್ಲ ನಾವ್ ಹೆಂಗ 240 ಕೊಡ್ಬೇಕು… ಸಂಜೆ 5.30ಕ್ಕೆ ಬಿಡ್ತಾರ್ರೀ… ಮನೀಗ್ ಬರೋದ್ರೊಳಗ ಏಳೂವರೆ ಆಗ್ತೈತಿ. ಬಂದ ಮ್ಯಾಲ ಕಸ ಮುಸರಿ ಹೊಡ್ದು, ಚಾ ಕುಡ್ದು ಮತ್ತ ಅಡಗಿ ಮಾಡಿ ಅವ್ರಿಗೆಲ್ಲ ಊಟಕ್ಕೆ ಕೊಟ್ಟು ಮಲಗೋದ್ರೊಳಗ 12 ಗಂಟೆ ಆಗ್ತೇತಿ… ನಮ್ಗಿಲ್ಲಿ ಕೆಲ್ಸ ಸಿಗಂಗಿಲ್ರಿ ಹಂಗಾಗಿ ಅಲ್ಲಿ ತನ ಹೋಗ್ಬೇಕಾಗ್ತದ.” ಎಂದು ತಮ್ಮ ಸಂಕಷ್ಟಗಳನ್ನು ವಿವರಿಸುತ್ತಾರವರು. ಅದರ ಶಲಕಾಗ್ರಳನ್ನು ನೋಡುತ್ತಾ ಅವರ ಕಣ್ಣುಗಳಿಗೆ ಬಹಳ ದಣಿವಾಗುತ್ತದೆ. “ಅದ್ರ ಸ್ಟಿಗ್ಮಾ ಕೂದಲಷ್ಟ ಇರ್ತೈತ್ರಿ
ಈ ಕ್ರಾಸಿಂಗ್ ಕೆಲಸ ಸೀಮಿತ ಅವಧಿಯಲ್ಲಷ್ಟೇ ಸಿಗುವುದರಿಂದಾಗಿ ಈ ಕೆಲಸ ಮಾಡುವ ಮಹಿಳೆಯರು ಬೇರೆ ಸಮಯದಲ್ಲಿ ಕಡಿಮೆ ಸಂಬಳದ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುತ್ತದೆ. “ಕ್ರಾಸ್ ತಿಂಗ್ಳು ಎರಡು ಮೂರು ಸಿಗ್ತಾವು, ಮತ್ತೆ ನಮಗೆ 150 ರೂಪಾಯಿನೇ ಗತಿ,” ಎನ್ನುತ್ತಾರೆ ದೀಪಾ. “ಅದ್ರಲ್ಲಿ ಏನೂ ಬರಂಗಿಲ್ರಿ, ಒಂದ್ ಕೇಜಿ ಹಣ್ಣು 120 ರೂಪಾಯ್ ಐತಿ. ನಾವು ದಿನಸಿ ತಗೊಬೇಕು, ಮಕ್ಳಿಗಿ ತಿಂಡಿ ತಗೊಬೇಕು, ನೆಂಟ್ರು ಬಂದ್ರ ನೋಡ್ಕೋಬೇಕು. ವಾರದ ಸಂತೆ ತಪ್ಪಿ ಹೋತಂದ್ರ ಏನೂ ಸಿಗಂಗಿಲ್ರಿ. ಅದಕ್ಕ ನಾವು ಬುಧವಾರ ಕೆಲಸಕ್ಕೆ ಹೋಗಂಗಿಲ್ರಿ. ತುಮ್ಮಿನ ಕಟ್ಟಿ [2.5 ಕಿಮೀ ದೂರ]ಗೆ ನಡ್ಕೊಂಡು ಹೋಗಿ ವಾರಕ್ಕಾಗೋಷ್ಟು ದಿನಸಿ ತರ್ತೀವ್ರಿ.”
ಕಾರ್ಮಿಕರ ಕೆಲಸದ ವೇಳಾಪಟ್ಟಿಯೂ ಅನಿಯಮಿತವಾಗಿರುತ್ತದೆ. ಇದು ರೈತರು ಬೆಳೆಯುತ್ತಿರುವ ಬೆಳೆಯನ್ನು ಅವಲಂಬಿಸಿರುತ್ತದೆ. “[ಜೋಳದ] ತೆನೆ ಕೀಳೋಕೆ ಹೋದ್ರೆ… ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ಅಡುಗೆ ಮಾಡಿ ಐದು ಗಂಟೆಗೆ ಹೊಲದಲ್ಲಿರ್ತೀವ್ರೀ… ಮಧ್ಯಾಹ್ನ ಒಂದ್ ಗಂಟೆಗೆ ಮನೆಗ್ ಬರ್ತೀವಿ. ಕೆಲವು ಸಲ ರೋಡ್ ಕಚ್ಚಾ ಇರ್ತಾವ್.. ರಿಕ್ಷಾದವ್ರು ಬರಂಗಿಲ್ಲ… ನಡ್ಕೊಂಡೇ ಹೋಗ್ತೀವಿ.. ಮೊಬೈಲ್ ಬ್ಯಾಟರಿ ಹಾಕ್ಕೊಂಡು ಹೋಗ್ತೀವಿ.” ಅವರು ಕಡಲೆಕಾಯಿ ಗಿಡ ಕೀಳಲು ಬೆಳಗಿನ ಜಾವ ಮೂರು ಗಂಟೆಗೆ ಹೋಗಿ ಮಧ್ಯಾಹ್ನದ ಒಳಗೆ ಬರುತ್ತಾರೆ. “ಕಡ್ಲಿ ಕೀಳೋದ್ಕ 200 ರೂಪಾಯ್ ಕೊಡ್ತಾರ ರೀ ಆದ್ರ ಅದು ಒಂದ್ ತಿಂಗ್ಳ್ ಮಾತ್ರ ಸಿಗೋದು ರೀ.” ಕೆಲವೊಮ್ಮೆ ರೈತರು ಅವರನ್ನು ಕರೆದುಕೊಂಡು ಹೋಗಲು ರಿಕ್ಷಾ ಕಳುಹಿಸುತ್ತಾರೆ. “ಕೆಲವರು ನೀವೇ ವ್ಯವಸ್ಥಾ ಮಾಡ್ಕೊರೀ ಅಂತಾರೆ.” ಎನ್ನುತ್ತಾರೆ ದೀಪಾ.
ಇವೆಲ್ಲ ಸಮಸ್ಯೆಗಳ ನಡುವೆ, ಅವರಿಗೆ ಕೆಲಸದ ಸ್ಥಳದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯೂ ಕಾಡುತ್ತದೆ. “ಎಲ್ ಕೆಲಸ ಮಾಡ್ತೀವೋ ಅಲ್ಲೇ ಪಕ್ದಲ್ಲಿ ಹೋಗ್ತೀವಿ ರೀ… ಜನ ಇಲ್ದಿರೋ ಕಡೆ ನೋಡ್ಕೊಂಡು…” ಎಂದು ತನ್ನ ಮಾತುಗಳನ್ನು ಸೇರಿಸುತ್ತಾರೆ ದೀಪಾ. “ಅಲ್ಲಿ ಹೊಲದಾಗ ಹೋಗಂಗಿಲ್ರಿ… ಕಂಡೀಷನ್ ಮಾಡ್ತಾರ, ಮನೆಯಲ್ಲೇ ಎಲ್ಲ ಮುಗಿಸ್ಕ್ಯಂಡ ಬರ್ಬೇಕ್ರವ್ವ ಅಂತಾರ. ಅವ್ರು ನಾವು ಟೈಮ್ ವೇಸ್ಟ್ ಅಂತ ತಿಳಿತಾರ…” ಮುಟ್ಟಿನ ಸಮಯದಲ್ಲಂತೂ ಬಹಳ ಕಷ್ಟವಾಗುತ್ತದೆ. “ತಿಂಗಳಾಗ್ವಾಗ ಒಂದು ದಪ್ಪಂದು ಬಟ್ಟೆ ತಗೊಂಡ್ ಹೋಗ್ತೀವ್ ರೀ… ಹೊರ್ಗಡೆ ಹೋದಾಗ ಪ್ಯಾಡ್ ಹಾಕ್ಕೊಂಡ್ ಹೋಗ್ತೀವ್ ರೀ… ನೋವ್ ಇಡೀ ದಿನ ಆಗ್ತೈತ್ರಿ… ನಿಂತ್ಕೊಂಡ್ ಕೆಲಸ ಮಾಡೋವಾಗ…”
ತಪ್ಪು ತಮ್ಮ ಪರಿಸ್ಥಿತಿಯಲ್ಲೇ ಇದೆಯೆಂದು ದೀಪಾ ಹೇಳುತ್ತಾರೆ “ನಮ್ಮ ಹಳ್ಳಿದಾಗ ಎಲ್ಲಾ ಕೆಲ್ಸಾನೂ ಹೆಣ್ಮಕ್ಳೇ ಮಾಡ್ಬೇಕು… ಈ ಊರಂತೂ ಭಾಳ ಹಿಂದೈತ್ರೀ… ಯಾವ್ದರಲ್ಲೂ ಮುಂದಿಲ್ರೀ…ಇಲ್ಲಂದಿದ್ರ ನಾವೆಲ್ಲ ಯಾಕ ಹೊರಗಿನ ಕೆಲಸಕ್ಕ ಹೋಗ್ಬೇಕಿತ್ತು ಹೇಳ್ರೀ…”
ಅನುವಾದ: ಶಂಕರ. ಎನ್. ಕೆಂಚನೂರು