ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
"ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ನಾವು ಬೆಂಕಿಯನ್ನು ಹೊತ್ತಿಸಿ, ವಾತಾವರಣವು ಬೆಚ್ಚಗಿರುವಂತೆ ನೋಡಿಕೊಳ್ಳುವುದು ಅನಿವಾರ್ಯವೆನಿಸುತ್ತಿತ್ತು", ಎನ್ನುತ್ತಾರೆ ಕೇರಳದ ಬೆಟ್ಟಗುಡ್ಡಗಳಿಂದಾವೃತವಾದ ವಯನಾಡ್ ಜಿಲ್ಲೆಯ ಅಗಸ್ಟೇನ್ ವಡಕಿಲ್. "ಆದರೆ ಅದೇನಿದ್ದರೂ 30 ವರ್ಷಗಳ ಹಿಂದೆ. ಹಿಂದೆ ಇದ್ದ ಮಂಜಿನಿಂದ ಕೂಡಿದ ತಂಪು ವಾತಾವರಣ ಈಗಿಲ್ಲ". ಮಾರ್ಚ್ ಆರಂಭದಲ್ಲಿ 25 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತಿದ್ದ ತಾಪಮಾನ, ವರ್ಷದ ಆ ಅವಧಿಯಲ್ಲೀಗ ನಿರಾಯಾಸವಾಗಿ 30 ಡಿಗ್ರಿಯನ್ನು ಮೀರುತ್ತಿದೆ.
ವಡಕಿಲ್ ಅವರ ಜೀವಾವಧಿಯಲ್ಲಿನ ಬೇಸಿಗೆಯ ದಿನಗಳ ಸಂಖ್ಯೆ ಎರಡು ಪಟ್ಟಿಗಿಂತಲೂ ಹೆಚ್ಚಾಗಿದೆ. ಹವಾಗುಣ ಮತ್ತು ಜಾಗತಿಕ ತಾಪಮಾನವನ್ನು ಕುರಿತ ಅಂತಃಕ್ರಿಯ ಉಪಕರಣದ (ಇಂಟರ್ಆ್ಯಕ್ಟಿವ್ ಟೂಲ್) ಲೆಕ್ಕಾಚಾರವನ್ನು ಈ ಜುಲೈ ತಿಂಗಳಿನಲ್ಲಿ ನ್ಯೂಯಾರ್ಕ್ ಟೈಮ್ಸ್ ಮೂಲಕ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದ್ದು, ಅದರ ಅನುಸಾರ; ವಡಕಿಲ್ ಅವರು ಹುಟ್ಟಿದ 1960 ರಲ್ಲಿ, ವಯನಾಡ್ ಪ್ರದೇಶವು ಪ್ರತಿ ವರ್ಷ ಸುಮಾರು 29 ದಿನಗಳಲ್ಲಿ 32 ಡಿಗ್ರಿ (ಸೆಲ್ಸಿಯಸ್) ತಾಪಮಾನವನ್ನು ತಲುಪುತ್ತಿತ್ತು. "ಈಗ ಸದರಿ ಪ್ರದೇಶವು 59 ದಿನಗಳಲ್ಲಿ ಪ್ರತಿ ವರ್ಷವೂ ಸರಾಸರಿ 32 ಡಿಗ್ರಿ ಅಥವ ಅದಕ್ಕೂ ಹೆಚ್ಚಿನ ತಾಪವಾನವನ್ನು ತಲುಪುತ್ತಿದೆ".
ಈ ಜಿಲ್ಲೆಯ ಡೆಕ್ಕನ್ ಪ್ರಸ್ಥಭೂಮಿಯ ಪಶ್ಚಿಮ ಘಟ್ಟಗಳ ಅಂಚಿನಲ್ಲಿ ಹಿಂದೊಮ್ಮೆ ಯಥೇಚ್ಛವಾಗಿದ್ದ ಮೆಣಸು ಹಾಗೂ ಕಿತ್ತಳೆ ಮರಗಳು ಉಷ್ಣತೆಯೆಡೆಗಿನ ತಮ್ಮ ಸಂವೇದನಾಶೀಲ ಗುಣದಿಂದಾಗಿ; ಬದಲಾಗುತ್ತಿರುವ ಹವಾಗುಣದಿಂದ ಸಾಕಷ್ಟು ಹಾನಿಗೀಡಾಗುತ್ತಿವೆ.
ವಡಕಿಲ್ ಮತ್ತು ಆತನ ಪತ್ನಿ ವಲ್ಸ, ಮನಂಥವಡಿ ತಾಲ್ಲೂಕಿನ ಛೆರುಕೊಟ್ಟೂರ್ ಹಳ್ಳಿಯಲ್ಲಿ 4 ಎಕರೆ ಭೂಮಿಯನ್ನು ಹೊಂದಿದೆ. ವಯನಾಡಿನ ವಾಣಿಜ್ಯ ಬೆಳೆಯ ಅರ್ಥವ್ಯವಸ್ಥೆಯು ಈ ಹಿಂದೆ ಉಚ್ಛ್ರಾಯ ಸ್ಥಿತಿಯಲ್ಲಿದ್ದು; ಆತನ ಕುಟುಂಬವು ತಮ್ಮ ಅದೃಷ್ಟವನ್ನು ಪರೀಕ್ಷಿಸಲು 80 ವರ್ಷಗಳ ಹಿಂದೆ ಕೊಟ್ಟಾಯಂ ಅನ್ನು ತೊರೆದು ವಯನಾಡಿಗೆ ಆಗಮಿಸಿತು. ಆ ಅವಧಿಯಲ್ಲಿ ಸಾವಿರಾರು ಚಿಕ್ಕ ಹಾಗೂ ಅಂಚಿನಲ್ಲಿರುವ ರೈತರು ಕೇರಳದ ಮಧ್ಯ ಭಾಗದಿಂದ ಬೃಹತ್ ಸಂಖ್ಯೆಯಲ್ಲಿ ವಲಸೆ ಬಂದು ರಾಜ್ಯದ ಈಶಾನ್ಯ ಭಾಗದ ಈ ಜಿಲ್ಲೆಯಲ್ಲಿ ನೆಲೆಸಿದರು.
ಆದರೆ ಸಮಯ ಸರಿದಂತೆ, ಅರ್ಥವ್ಯವಸ್ಥೆಯು ಛಿದ್ರಗೊಂಡಿತು. "ಕಳೆದ ವರ್ಷದಂತೆ, ಮಳೆಯು ಅನಿಯಮಿತವಾಗಿಯೇ ಮುಂದುವರಿದಲ್ಲಿ, ನಾವು ಬೆಳೆದ ಕಾಫಿಯು (organic Robusta) ನಾಶವಾಗುತ್ತದೆ", ಎನ್ನುತ್ತಾರೆ ವಡಕಿಲ್. "ಕಾಫಿಯು ಲಾಭದಾಯಕವೇ ಆದರೂ, ಅದರ ಬೆಳೆಗೆ ಪ್ರತಿಕೂಲ ಹವಾಮಾನವು ಬಹಳ ತೊಂದರೆದಾಯಕ. ಉಷ್ಣತೆ ಹಾಗೂ ಮಳೆಯಿಂದಾಗಿ ಅದಕ್ಕೆ ಹಾನಿಯುಂಟಾಗುತ್ತದೆ", ಎನ್ನುತ್ತಾರೆ ವಲ್ಸ. ಇಲ್ಲಿಯ ಜನರ ಪ್ರಕಾರ; 23-28 ಡಿಗ್ರಿ ಸೆಲ್ಸಿಯಸ್ ತಾಪಮಾನವು ಕಾಫಿ ಬೆಳೆಗೆ ಸೂಕ್ತವಾದುದು.
ವಯನಾಡಿನಾದ್ಯಂತ ಇರುವ ಉತ್ಕøಷ್ಟ ಗುಣಮಟ್ಟದ ರೊಬಸ್ಟ ಸಸ್ಯವರ್ಗಕ್ಕೆ ಸೇರಿದ ಕಾಫಿಯ ಕೃಷಿಯನ್ನು ( ಉಷ್ಣವಲಯದ ನಿತ್ಯಹರಿದ್ವರ್ಣದ ಪೊದೆ) ಡಿಸೆಂಬರ್ ಮತ್ತು ಮಾರ್ಚ್ ತಿಂಗಳ ಉತ್ತರಾರ್ಧದಲ್ಲಿ ಕೈಗೊಳ್ಳಲಾಗುತ್ತದೆ. ಕಾಫಿ ಸಸ್ಯಕ್ಕೆ ಫೆಬ್ರವರಿಯ ಉತ್ತರಾರ್ಧದಲ್ಲಿ ಅಥವ ಮಾರ್ಚ್ ತಿಂಗಳ ಪೂರ್ವಾರ್ಧದಲ್ಲಿ ಮೊದಲ ಮಳೆಯು ಅವಶ್ಯವಿದ್ದು, ಒಂದು ವಾರದ ನಂತರ ಇದು ಹೂ ಬಿಡಲು ಪ್ರಾರಂಭಿಸುತ್ತದೆ. ಮೊದಲ ಮಳೆಯ ನಂತರ ಒಂದು ವಾರದಲ್ಲಿ ಮಳೆಯು ಸುರಿದಲ್ಲಿ ಕಾಫಿಯ ನಾಜೂಕಾದ ಹೂಗಳು ನಾಶವಾಗುತ್ತವೆ. ಮೊದಲ ಮಳೆಯ ನಂತರ ಒಂದು ವಾರದ ನಂತರ ಕಾಫಿಯ ಹಣ್ಣಿಗೆ ಎರಡನೆಯ ಮಳೆಯ ಅವಶ್ಯಕತೆಯಿದೆ. ಹೂಗಳು ಅರಳಿ ಮರದಿಂದ ಉದುರುತ್ತಿದ್ದಂತೆಯೇ ಬೀಜವನ್ನೊಳಗೊಂಡ ಹಣ್ಣುಗಳು ಮಾಗತೊಡಗುತ್ತವೆ.
ವಡಕಿಲ್ ಅವರ ಮಾತಿನಲ್ಲಿ ಹೇಳುವುದಾದರೆ, ಸೂಕ್ತ ಸಮಯದಲ್ಲಿ ಮಳೆಯಾದಲ್ಲಿ, ಶೇ. 85 ರಷ್ಟು ಇಳುವರಿಯು ಖಾತರಿಯಾಗಿ ದೊರೆಯುತ್ತದೆ. ಮಾರ್ಚ್ ತಿಂಗಳ ಪೂರ್ವಾರ್ಧದಲ್ಲಿನ ನಮ್ಮ ಭೇಟಿಯಲ್ಲಿ, ಸದರಿ ಇಳುವರಿಯ ಬಗ್ಗೆ ಅವರಿಗೆ ಭರವಸೆಯಿತ್ತಾದರೂ, ಆತಂಕವೂ ಇತ್ತು. ಆದರೆ ಅವರ ಭರವಸೆಯು ಫಲಿಸಲಿಲ್ಲ.
ಕೇರಳದಲ್ಲಿ ತೀಕ್ಷ್ಣ ಬೇಸಿಗೆಯು ಪ್ರಾರಂಭವಾಗುವ ಮಾರ್ಚ್ ತಿಂಗಳ ಪೂರ್ವಾರ್ಧದ ತಾಪಮಾನವು ಈಗಾಗಲೇ 37 ಡಿಗ್ರಿಗಳವರೆಗೂ ಏರಿಕೆಯಾಗಿದೆ. "ಈ ವರ್ಷ ಎರಡನೆ ಮಳೆಯು (ರಂದಮಥ ಮಜ) ಬಹಳ ಬೇಗನೆ ಸುರಿಯಿತಲ್ಲದೆ, ಎಲ್ಲವನ್ನೂ ನಾಶಗೊಳಿಸಿತು", ಎಂಬ ವಿಷಯವನ್ನು ಮಾರ್ಚ್ ಕೊನೆಯ ಭಾಗದಲ್ಲಿ ವಡಕಿಲ್ ಅವರು ನಮಗೆ ತಿಳಿಸಿದರು.
ವಡಕಿಲ್ ಅವರು ಎರಡು ಎಕರೆಯಲ್ಲಿ ಈ ಬೆಳೆಯನ್ನು ಬೆಳೆದಿದ್ದು, ಈ ವರ್ಷ 70,000 ರೂ.ಗಳಷ್ಟು ನಷ್ಟವುಂಟಾಯಿತು. ಸ್ಥಳೀಯ ರೈತರಿಂದ ಕಾಫಿಯನ್ನು ಕೊಳ್ಳುವ ವಯನಾಡ್ ಸೋಶಿಯಲ್ ಸರ್ವಿಸ್ ಸೊಸೈಟಿ ಎಂಬ ಸಹಕಾರಿ ಸಂಸ್ಥೆಯು, ಒಂದು ಕೆ. ಜಿ. ಸಂಸ್ಕರಿಸದ ಸಾವಯವ (ಆರ್ಗ್ಯಾನಿಕ್) ಕಾಫಿಗೆ 88 ರೂ. ಗಳನ್ನು ಹಾಗೂ ಸಾವಯವರಹಿತ (ಆರ್ಗ್ಯಾನಿಕ್ ರಹಿತ) ಕಾಫಿಗೆ 65 ರೂ. ಗಳನ್ನು ನೀಡುತ್ತದೆ.
2017-18 ರಲ್ಲಿ 55,525 ಟನ್ಗಳಷ್ಟಿದ್ದ ಕಾಫಿ ಉತ್ಪಾದನೆಯು ವಯನಾಡಿನಲ್ಲಿ ಈ ವರ್ಷದಲ್ಲಿ ಶೇ. 40 ರಷ್ಟು ಕಡಿಮೆಯಾಗಿದೆಯೆಂದು ವಯನಾಡ್ ಸೋಶಿಯಲ್ ಸರ್ವಿಸ್ ಸೊಸೈಟಿಯ ನಿರ್ದೇಶಕರಾದ ಫಾದರ್ ಚೂರಪುಜಯಿಲ್ ಅವರು ದೂರವಾಣಿಯ ಮೂಲಕ ನನಗೆ ತಿಳಿಸಿದರು. ಈ ಬಗ್ಗೆ ಇನ್ನೂ ಅಧಿಕೃತ ಅಂಕಿ ಸಂಖ್ಯೆಗಳು ದೊರೆತಿಲ್ಲ. ಈ ನಷ್ಟವನ್ನು ಗಮನಿಸಿದಾಗ, ಹವಾಗುಣದಲ್ಲಿನ ಬದಲಾವಣೆಯು ವಯನಾಡಿನ ಕಾಫಿಗೆ ಹೆಚ್ಚು ಅಪಾಯಕಾರಿಯೆಂಬುದು ತಿಳಿದುಬರುತ್ತದೆ ಎಂಬುದಾಗಿ ಫಾದರ್ ಜಾನ್ ಅವರು ತಿಳಿಸುತ್ತಾರೆ. ಜಿಲ್ಲೆಯಾದ್ಯಂತ ನಾವು ಭೇಟಿಮಾಡಿದ ರೈತರು, ವಿವಿಧ ವರ್ಷಗಳಲ್ಲಿನ ಹೆಚ್ಚುವರಿ ಮಳೆ ಮತ್ತು ಮಳೆಯ ಅಭಾವದಿಂದಾಗಿ ಬೆಳೆಯಲ್ಲಿನ ಅಪಾರ ವ್ಯತ್ಯಾಸಗಳು ತಲೆದೋರುತ್ತಿವೆಯೆಂದು ತಿಳಿಸಿದರು.
ಮಳೆಯ ಏರುಪೇರಿನಿಂದಾಗಿ ಜಮೀನುಗಳಲ್ಲಿ ನೀರಿನ ಅಭಾವವುಂಟಾಗಿದೆ. ವಯನಾಡಿನ ಕೇವಲ ಶೇ. 10 ರಷ್ಟು ರೈತರು ಮಾತ್ರವೇ ಬೋರ್ವೆಲ್ ಮತ್ತು ನೀರಾವರಿ ವ್ಯವಸ್ಥೆಗಳನ್ನು ಹೊಂದಿದ್ದು, ಬರಗಾಲದಲ್ಲಿ ಅಥವ ಅನಿಯಮಿತ ಮಳೆಯಲ್ಲಿ ತಮ್ಮ ಕೆಲಸದಲ್ಲಿ ತೊಡಗಬಲ್ಲರು.
ಕೆಲವರು ಮಾತ್ರವೇ ಅದೃಷ್ಟವಂತರಾಗಿದ್ದರು. ವಡಕಿಲ್ ನ ದುರಾದೃಷ್ಟದಿಂದಾಗಿ, 2018 ರ ಆಗಸ್ಟ್ನಲ್ಲಿ ವಯನಾಡು ಹಾಗೂ ಕೇರಳದ ಇತರೆ ಭಾಗಗಳನ್ನು ಹಾಳುಗೆಡವಿದ ಪ್ರವಾಹವು, ಆತನ ನೀರಾವರಿ ಪಂಪ್ ಅನ್ನೂ ಹಾಳುಗೆಡವಿತು. ಅದರ ರಿಪೇರಿಗೆ 15,000 ರೂ. ಗಳನ್ನು ಖರ್ಚುಮಾಡಬೇಕಿದ್ದು, ಇದು ಇಂದಿನ ವಿಪತ್ತಿನ ಸಮಯದಲ್ಲಿ ಬಹುದೊಡ್ಡ ಮೊತ್ತವಾಗಿದೆ.
ತಮ್ಮ ಉಳಿದ ಎರಡು ಎಕರೆ ಭೂಮಿಯಲ್ಲಿ ವಡಕಿಲ್ ಹಾಗೂ ವಲ್ಸ, ರಬ್ಬರ್, ಮೆಣಸು, ಬಾಳೆ, ಭತ್ತ ಹಾಗೂ ಅಡಿಕೆಯನ್ನು ಬೆಳೆಯುತ್ತಾರೆ. ಹೆಚ್ಚುತ್ತಿರುವ ತಾಪಮಾನವು ಈ ಎಲ್ಲ ಬೆಳೆಗಳನ್ನೂ ಪ್ರಭಾವಿಸುತ್ತಿದೆ. "ಹದಿನೈದು ವರ್ಷಗಳ ಹಿಂದೆ, ಕೇವಲ ಮೆಣಸಿನಿಂದ ನಾವು ಜೀವನ ನಿರ್ವಹಿಸಬಹುದಿತ್ತು. ಆದರೆ ಆಗಿನಿಂದಲೂ, ಥ್ರುಥವಟ್ಟಂ (ಶೀಘ್ರ ಒಣಗುವಿಕೆ) ರೋಗವು ಜಿಲ್ಲೆಯಾದ್ಯಂತ ಎಕರೆಗಟ್ಟಲೆ ಬೆಳೆಯನ್ನು ನಾಶಮಾಡಿದೆ." ಮೆಣಸು, ಬಹುವಾರ್ಷಿಕ ಬೆಳೆಯಾದ್ದರಿಂದ ರೈತರ ಹಾನಿಯು ವಿನಾಶಕಾರಿಯಾಗಿದೆ.
"ಸಮಯ ಸರಿದಂತೆ, ಕೃಷಿಗೆ ತೊಡಗುವ ಏಕೈಕ ಕಾರಣವೆಂದರೆ, ಅದು ನಮ್ಮ ಹವ್ಯಾಸ ಎಂದು ಹೇಳುವಂತಾಗಿದೆ. ನನಗೆ ಇಷ್ಟೆಲ್ಲ ಭೂಮಿಯಿದ್ದರೂ, ನನ್ನ ಪರಿಸ್ಥಿತಿಯನ್ನು ನೋಡಿ...", ಎನ್ನುತ್ತಾರೆ ವಡಕಿಲ್. ಸ್ವಲ್ಪ ಹೆಚ್ಚಿನ ಮೆಣಸಿನಕಾಯಿಯನ್ನು ಅರೆದು ಅನ್ನದ ಜೊತೆ ತಿನ್ನಲಷ್ಟೇ ನಾವು ಸಮರ್ಥರು”ಎಂದು ಅವರು ನಗುತ್ತಾ ನುಡಿಯುತ್ತಾರೆ.
"15 ವರ್ಷಗಳ ಹಿಂದೆ ಇದು ಪ್ರಾರಂಭಗೊಂಡಿತು. ಕಾಲಾವಸ್ಥೆಯು ಹೀಗೇಕೆ ಬದಲಾಗುತ್ತಿದೆ?", ಮಲಯಾಳಂನಲ್ಲಿ ಕಾಲಾವಸ್ಥ ಎಂದರೆ ಹವಾಗುಣವೆಂಬ ಅರ್ಥವೇ ಹೊರತು ತಾಪಮಾನ ಅಥವ ಹವಾಮಾನವೆಂಬುದು ಇದರ ಅರ್ಥವಲ್ಲ. ವಯನಾಡಿನಾದ್ಯಂತ ಅನೇಕ ಬಾರಿ ರೈತರು ನಮಗೆ ಈ ಪ್ರಶ್ನೆಯನ್ನು ಕೇಳಿದರು.
ದಶಕಗಳಿಂದಲೂ ರೈತರು ಅಳವಡಿಸಿಕೊಂಡ ಕೃಷಿಯ ಪ್ರಕಾರಗಳಲ್ಲಿಯೇ ಇದಕ್ಕೆ ಭಾಗಶಃ ಉತ್ತರವಿದೆ.
ವಯನಾಡಿನ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ನ ವಿಜ್ಞಾನಿಯಾದ ಸುಮ ಟಿ. ಆರ್. ಅವರು "ಪ್ರತಿಯೊಂದು ಸಣ್ಣ ಜಮೀನಿನಲ್ಲೂ, ಈಗಿನ ಏಕ ಬೆಳೆಯ ಪದ್ಧತಿಗಿಂತಲೂ ವಿವಿಧ ಬೆಳೆಗಳನ್ನು ಬೆಳೆಯುವ ಪದ್ಧತಿಯು ಆರೋಗ್ಯದಾಯಕವಾದುದು", ಎಂದು ಹೇಳುತ್ತಾರೆ. ಇವರು ಕಳೆದ 10 ವರ್ಷಗಳಿಂದಲೂ ಭೂಮಿಯ ಬಳಕೆಯಿಂದಾಗಿ ಉಂಟಾಗುತ್ತಿರುವ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಏಕ ಪ್ರಕಾರದ ಬೆಳೆಯನ್ನು ಬೆಳೆಯುವುದರಿಂದ ವಿನಾಶಕಾರಿ ಕೀಟಗಳು ಮತ್ತು ರೋಗಗಳು ಹರಡುತ್ತವೆಯಲ್ಲದೆ ಇವುಗಳ ನಿಯಂತ್ರಣಕ್ಕೆ ರಾಸಾಯನಿಕ ಕೀಟನಾಶಕಗಳು ಮತ್ತು ಗೊಬ್ಬರಗಳನ್ನು ಬಳಸಲಾಗುತ್ತದೆ. ಇವು ಭೂಮಿಯ ಅಂತರ್ಜಲ ಅಥವ ವಾಯುವಿನೊಂದಿಗೆ ಮಿಳಿತಗೊಂಡು ಸೋಂಕು ಮತ್ತು ಮಾಲಿನ್ಯವನ್ನು ಉಂಟುಮಾಡುವುದರಿಂದಾಗಿ ದಿನಕಳೆದಂತೆ ಪರಿಸರಕ್ಕೆ ತೀವ್ರ ಸ್ವರೂಪದ ಹಾನಿಯೊದಗುತ್ತದೆ.
ಬ್ರಿಟಿಷರಿಂದ ಆರಂಭವಾದ ಅರಣ್ಯ ನಾಶದಿಂದ ಇದು ಪ್ರಾರಂಭಗೊಂಡಿತು ಎನ್ನುತ್ತಾರೆ ಸುಮ. "ಅವರು ಮರಮಟ್ಟುಗಳಿಗಾಗಿ ಕಾಡುಗಳನ್ನು ಕಡಿದು ಅನೇಕ ಎತ್ತರದ ಪರ್ವತಗಳನ್ನು ನೆಡು ತೋಪುಗಳಾಗಿ (ಪ್ಲಾಂಟೇಷನ್) ಪರಿವರ್ತಿಸಿದರು." ಇದರಿಂದಾಗಿ ಹವಾಗುಣದಲ್ಲಿಯೂ ಬದಲಾವಣೆಯಾಗುತ್ತಿದೆ. 1940 ರಿಂದ ಈ ಜಿಲ್ಲೆಗೆ ಬೃಹತ್ ಪ್ರಮಾಣದಲ್ಲಿ ವಲಸೆಯು ಪ್ರಾರಂಭವಾದಾಗಿನಿಂದ ಇಲ್ಲಿನ ಪ್ರಾಕೃತಿಕ ದೃಶ್ಯವೂ ಸಹ ಬದಲಾಗುತ್ತಿದೆ. ಇದಕ್ಕೂ ಮೊದಲು ವಯನಾಡಿನ ರೈತರು, ಸ್ಥಾನಾಂತರಣ ಕೃಷಿ (ಶಿಫ್ಟಿಂಗ್ ಕಲ್ಟಿವೇಶನ್) ನಡೆಸುತ್ತಿದ್ದರು.
ಅಂದಿನ ದಶಕಗಳಲ್ಲಿ ತರಿ ಭೂಮಿ ಭತ್ತವು ಪ್ರಮುಖ ಬೆಳೆಯಾಗಿತ್ತೇ ಹೊರತು ಕಾಫಿ ಮತ್ತು ಮೆಣಸುಗಳಲ್ಲ. ‘ವಯನಾಡು’ ಎಂಬ ಪದವೂ ಸಹ ‘ವಯಲ್ ನಾಡು’ ಅಥವ ಭತ್ತದ ಗದ್ದೆಗಳ ಪ್ರದೇಶ ಎಂಬುದರಿಂದ ವ್ಯುತ್ಪತ್ತಿಯಾಗಿದೆ. ಆ ಜಮೀನುಗಳು ಈ ಪ್ರದೇಶದ ಅಂದರೆ ಕೇರಳದ ವಾತಾವರಣ ಹಾಗೂ ಪರಿಸರ ವ್ಯವಸ್ಥೆಗೆ ಬಹಳ ಮುಖ್ಯವಾದವು. ಆದರೆ 1960 ರಲ್ಲಿ ಭತ್ತದ ಕೃಷಿಯನ್ನು ನಡೆಸಲಾಗುತ್ತಿದ್ದ ಸುಮಾರು 40,000 ಹೆಕ್ಟೇರ್ ಭೂಮಿಯು ಈಗ 8,000 ಹೆಕ್ಟೇರ್ಗೆ ಸೀಮಿತಗೊಂಡಿದೆ. ಅಂದರೆ 2017-18 ರ ಸರ್ಕಾರಿ ಅಂಕಿ ಅಂಶಗಳಂತೆ, ಇದು ಜಿಲ್ಲೆಯ ಒಟ್ಟು ಕೃಷಿನಿರತ ಭೂಮಿಯ ಶೇ. 5 ರಷ್ಟಿದೆ. ವಯನಾಡಿನಲ್ಲಿ ಸುಮಾರು 68,000 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಪ್ಲಾಂಟೇಶನ್ಗಳಿವೆ. ಅಂದರೆ ಕೇರಳದ ಒಟ್ಟಾರೆ ಕಾಫಿ ಪ್ರದೇಶದ ಶೇ. 79 ರಷ್ಟು ಭಾಗದಲ್ಲಿ ಕಾಫಿಯ ಕೃಷಿಯನ್ನು ಕೈಗೊಳ್ಳಲಾಗಿದೆ. ವಡಕಿಲ್ ಹುಟ್ಟಿದ 1960 ರಲ್ಲಿ ಇಡೀ ದೇಶದಲ್ಲಿದ್ದ ರೊಬಸ್ಟ ಕೃಷಿಯ ಪ್ರದೇಶಕ್ಕಿಂತಲೂ ಶೇ. 36 ರಷ್ಟು ಹೆಚ್ಚಿನ ಪ್ರದೇಶದಲ್ಲಿ ಇದರ ಕೃಷಿ ನಡೆಸಲಾಗಿದೆ.
"ವಾಣಿಜ್ಯಬೆಳೆಯನ್ನು ತೆರವು ಮಾಡದೆಯೇ ರೈತರು ರಾಗಿಯಂತಹ ಬೆಳೆಗಳನ್ನು ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಬೆಳೆಯುತ್ತಿದ್ದರು", ಎನ್ನುತ್ತಾರೆ ಸುಮ. ಈ ಹೊಲಗಳಿಂದಾಗಿ ಪರಿಸರ ವ್ಯವಸ್ಥೆಯು ಪೋಷಿಸಲ್ಪಡುತ್ತಿತ್ತು. ಆದರೆ ವಲಸೆಯು ಹೆಚ್ಚಾದ ಕಾರಣ, ಆಹಾರದ ಬೆಳೆಗಿಂತಲೂ ವಾಣಿಜ್ಯಬೆಳೆಗೆ ಪ್ರಾಶಸ್ತ್ಯವನ್ನು ನೀಡಲಾಯಿತು. 1990 ರ ಜಾಗತೀಕರಣದಿಂದಾಗಿ, ಮೆಣಸಿನಂತಹ ವಾಣಿಜ್ಯ ಬೆಳೆಗಳ ಮೇಲೆ ಹೆಚ್ಚಿನ ಜನರು ಸಂಪೂರ್ಣವಾಗಿ ಅವಲಂಬಿತರಾಗತೊಡಗಿದರು.
ಹವಾಗುಣದ ಬದಲಾವಣೆಯು ವಯನಾಡಿನ ಕಾಫಿಗೆ ಬಹು ದೊಡ್ಡ ಅಪಾಯವಾಗಿ ಪರಿಣಮಿಸಿದ ಕಾರಣ, ಉತ್ಪನ್ನದಲ್ಲಿ ಕುಸಿತವುಂಟಾಯಿತು. ಜಿಲ್ಲೆಯಾದ್ಯಂತ ನಾವು ಭೇಟಿಮಾಡಿದ ರೈತರು ಈ ತೀವ್ರ ಬದಲಾವಣೆಗಳ ಬಗ್ಗೆ ತಿಳಿಸಿದರು.
"ರೈತರು ಇಂದು ಒಂದು ಕೆ. ಜಿ. ಭತ್ತಕ್ಕೆ 12 ರೂ. ಗಳನ್ನು ಹಾಗೂ ಕಾಫಿಗೆ 67 ರೂ.ಗಳನ್ನು ಗಳಿಸುತ್ತಿದ್ದಾರೆ. ಒಂದು ಕೆ. ಜಿ. ಮೆಣಸಿಗೆ ಅವರು 360 ರಿಂದ 365 ರೂ.ಗಳನ್ನು ಗಳಿಸುತ್ತಾರೆ", ಎಂದು WSSS ನಲ್ಲಿ ಈ ಹಿಂದೆ ಕೆಲಸವನ್ನು ನಿರ್ವನಿಸುತ್ತಿದ್ದ ಪ್ರಾಜೆಕ್ಟ್ ಮ್ಯಾನೇಜರ್ ಇ. ಜೆ. ಜೋಸ್ ತಿಳಿಸುತ್ತಾರೆ. ಇವರು ಮನಂಥವಡಿಯ ಸಾವಯವ ಕೃಷಿಕರೂ ಹೌದು. ಗಳಿಕೆಯಲ್ಲಿನ ಈ ಬೃಹತ್ ವ್ಯತ್ಯಾಸದಿಂದಾಗಿ ರೈತರು ಭತ್ತದ ಬದಲಾಗಿ ಕಾಫಿ ಹಾಗೂ ಮೆಣಸಿನ ಕೃಷಿಗೆ ತೊಡಗುತ್ತಾರೆ. ಈಗಿನ ಪ್ರತಿಯೊಬ್ಬರೂ ಯಾವುದರ ಅವಶ್ಯಕತೆ ಇದೆಯೋ ಅದರ ಬದಲಿಗೆ ಯಾವುದು ಹೆಚ್ಚು ಲಾಭಕರವೋ ಅದನ್ನು ಬೆಳೆಯುತ್ತಿದ್ದಾರೆ. ನಾವು ಭತ್ತವನ್ನು ಕಳೆದುಕೊಳ್ಳುತ್ತಿದ್ದೇವೆ. ಭತ್ತವು ಮಳೆಯಾದಾಗ ನೀರನ್ನು ಹೀರಲು ಸಹಾಯಮಾಡುವುದಲ್ಲದೆ, ನೀರಿನ ಸೆಲೆಗಳನ್ನು ಪೂರ್ವಸ್ಥಿತಿಗೆ ತರುತ್ತವೆ.
ಅನೇಕ ಭತ್ತದ ಗದ್ದೆಗಳನ್ನು ರಿಯಲ್ ಎಸ್ಟೇಟ್ ನಿವೇಶನಗಳಾಗಿ ಪರಿವರ್ತಿಸಲಾಗಿದ್ದು, ಸದರಿ ಕೃಷಿಯಲ್ಲಿ ಪರಿಣಿತರಾದ ರೈತರ ಕೆಲಸದ ದಿನಗಳು ಕುಂಠಿತಗೊಂಡಿವೆ.
"ಈ ಎಲ್ಲಾ ಬದಲಾವಣೆಗಳು ವಯನಾಡಿನ ಪ್ರಕೃತಿಯ ಮೇಲೆ ನಿರಂತರ ಪರಿಣಾಮವನ್ನು ಬೀರುತ್ತಿವೆ", ಎನ್ನುತ್ತಾರೆ ಸುಮ. "ಏಕ ಪ್ರಕಾರದ ಬೆಳೆಯನ್ನು ಬೆಳೆಯುವುದರಿಂದಾಗಿ ಮಣ್ಣಿನ ಫಲವತ್ತತೆಯನ್ನು ಹಾಳುಗೆಡವಲಾಗಿದೆ. ಏರುತ್ತಿರುವ ಜನಸಂಖ್ಯೆ (1931 ರ ಜನಗಣತಿಯಲ್ಲಿ 100,000 ಇದ್ದ ಜನಸಂಖ್ಯೆಯು 2011 ರ ಜನಗಣತಿಯಲ್ಲಿ 817,420 ರಷ್ಟಾಯಿತು.) ಹಾಗೂ ಭೂಮಿಯನ್ನು ತುಂಡು ಭೂಮಿಗಳಾಗಿ ವಿಭಾಗಿಸುತ್ತಿರುವುದು ಸಹ ತೀವ್ರ ಪರಿಣಾಮಗಳಿಗೆ ಕಾರಣವಾಗಿದೆ. ಹೀಗಾಗಿ ವಯನಾಡಿನ ತಾಪಮಾನವು ಏರುಗತಿಯಲ್ಲಿ ಸಾಗುತ್ತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ."
ಕೃಷಿಯಲ್ಲಿನ ಬದಲಾವಣೆಗಳಿಂದಾಗಿ ತಾಪಮಾನದಲ್ಲಿ ಏರಿಕೆಯುಂಟಾಗುತ್ತಿದೆಯಲ್ಲದೆ, "ಈ ಬದಲಾವಣೆಗಳು ಮಳೆಸುರಿತದ ಮೇಲೂ ಪ್ರಭಾವವನ್ನು ಬೀರುತ್ತಿವೆಯೆಂಬುದು" ಜೋಸ್ ಅವರ ಅಭಿಪ್ರಾಯವಾಗಿದೆ.
"ನೆರೆಯ ಥಮಿನ್ಹಾಲ್ ಪಂಚಾಯತ್ನಲ್ಲಿನ ತಮ್ಮ 12 ಎಕರೆ ಜಮೀನಿಗೆ ನಮ್ಮನ್ನು ಕರೆದೊಯ್ದ 70 ರ ಎಂ. ಜೆ. ಜಾರ್ಜ್, ಹಿಂದೊಮ್ಮೆ ಈ ಭೂಮಿಯು ಮೆಣಸಿನಿಂದ ಆವೃತವಾಗಿದ್ದು, ಮರಗಳೆಡೆಯಿಂದ ಸೂರ್ಯನ ಬೆಳಕು ತೂರಲಾರದಷ್ಟು ಇಲ್ಲಿನ ಮರಗಳು ದಟ್ಟೈಸಿದ್ದವು. ಕಳೆದ ಕೆಲ ವರ್ಷಗಳಿಂದ ಟನ್ ಗಟ್ಟಲೆ ಮೆಣಸು ನಷ್ಟವಾಗಿದೆ. ಹವಾಗುಣದ ಬದಲಾವಣೆಯಿಂದಾಗಿ ಸಸ್ಯಗಳನ್ನು ಶೀಘ್ರವಾಗಿ ಒಣಗುವ ರೋಗವು ಬಾಧಿಸುತ್ತಿದೆ” ಎಂದರು.
ಫೈಟೊಪ್ಥೋರ ಎಂಬ ಫಂಗಸ್ನಿಂದಾಗಿ ಸಸ್ಯಗಳು ಶೀಘ್ರವಾಗಿ ಒಣಗುವ ರೋಗವು ಹರಡಿದ ಕಾರಣ, ಜಿಲ್ಲೆಯಾದ್ಯಂತ ಸಾವಿರಾರು ಜನರ ಬದುಕು ಸಂಕಷ್ಟಕ್ಕೀಡಾಯಿತು. ಹೆಚ್ಚಿನ ಮಟ್ಟದ ತೇವಾಂಶದಲ್ಲಿ ವೃದ್ಧಿಯಾಗುವ ಇವು; "ಕಳೆದ ಹತ್ತು ವರ್ಷಗಳಲ್ಲಿ ವಯನಾಡಿನಲ್ಲಿ ಗಮನಾರ್ಹವಾಗಿ ವೃದ್ಧಿಸಿವೆ" ಎನ್ನುತ್ತಾರೆ ಜೋಸ್. "ಮಳೆಯು ಈಗ ಅನಿಯಮಿತವಾಗಿದೆ. ರಾಸಾಯನಿಕ ಗೊಬ್ಬರದ ಅತೀವ ಬಳಕೆಯೂ ಸಹ ರೋಗವು ವೃದ್ಧಿಯಾಗಲು ಕಾರಣವಾಗಿದ್ದು, ಟ್ರೈಖೊಡರ್ಮ ಎಂಬ ಫಂಗಸ್ ನ ವಿರುದ್ಧ ಹೋರಾಟಕ್ಕೆ ನೆರವಾಗುವ ಉತ್ತಮ ಬ್ಯಾಕ್ಟೀರಿಯವನ್ನು ಸಹ ಇದು ಅವಿರತವಾಗಿ ಕೊಲ್ಲುತ್ತಿದೆ."
"ಈ ಹಿಂದೆ ವಯನಾಡಿನಲ್ಲಿ ಹವಾನಿಯಂತ್ರಿತ ಹವಾಗುಣವಿರುತ್ತಿತ್ತಾದರೂ ಈಗ ಆ ಪರಿಸ್ಥಿತಿಯಿಲ್ಲ. ಋತುವಿನಾದ್ಯಂತ ಸ್ಥಿರವಾಗಿರುತ್ತಿದ್ದ ಮಳೆಯು ಕಳೆದ 15 ವರ್ಷಗಳಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ನಮ್ಮಲ್ಲಿನ ಮಳೆಯು ಬಹಳ ಪ್ರಸಿದ್ಧಿಯನ್ನು ಪಡೆದಿತ್ತು...", ಎನ್ನುತ್ತಾರೆ ಜಾರ್ಜ್.
ತಿರುವನಂತಪುರದ ಭಾರತ ಪವನಶಾಸ್ತ್ರ ಇಲಾಖೆಯು, 2019 ರಲ್ಲಿ ಜೂನ್ 1 ರಿಂದ ಜುಲೈ 28 ರವರೆಗಿನ ಮಳೆಯ ಪ್ರಮಾಣವು; ಈ ಅವಧಿಯಲ್ಲಿನ ಸಾಮಾನ್ಯ ಸರಾಸರಿಗಿಂತಲೂ ಶೇ. 54 ರಷ್ಟು ಕಡಿಮೆಯಿದೆಂದು ತಿಳಿಸುತ್ತದೆ.
ಸಾಮಾನ್ಯವಾಗಿ ವಯನಾಡಿನ ಹೆಚ್ಚು ಮಳೆ ಬೀಳುವ ಪ್ರದೇಶಗಳ ಹಲವು ಭಾಗಗಳಲ್ಲಿ ಇನ್ನು ಕೆಲವು ವರ್ಷಗಳಲ್ಲಿ 4,000 ಮಿ.ಮೀ ಮಳೆಯಾಗುತ್ತದೆ. ಆದರೆ ಜಿಲ್ಲೆಯ ಸರಾಸರಿ ಮಳೆಯು ಕೆಲವು ವರ್ಷಗಳಿಂದಲೂ ಏರುಪೇರಾಗುತ್ತಿದೆ. 2014 ರಲ್ಲಿ 3,260 ಮಿ. ಮೀ.ನಷ್ಟಿದ್ದ ಮಳೆಯು ಮುಂದಿನ ಎರಡು ವರ್ಷಗಳಲ್ಲಿ 2,283 ಮಿ.ಮೀ ಹಾಗೂ 1,328 ಮಿ.ಮೀ. ನಷ್ಟು ತೀವ್ರ ಕುಸಿತವನ್ನು ಕಂಡಿತು. ನಂತರ 2017 ರಲ್ಲಿ ಮಳೆಯ ಪ್ರಮಾಣವು 2,125 ರಷ್ಟಿದ್ದು, ಕೇರಳದಲ್ಲಿ ಪ್ರವಾಹವು ಕಾಣಿಸಿಕೊಂಡ 2018 ರಲ್ಲಿ 3,832 ಮಿ.ಮೀ.ನಷ್ಟು ಏರಿಕೆ ಕಂಡಿತು.
"ಮಳೆಯ ಅಂತರ್ ವಾರ್ಷಿಕ ಪರಿವರ್ತನಶೀಲತೆಯು ಇತ್ತೀಚಿನ ದಶಕಗಳಲ್ಲಿ ಬದಲಾಗಿದ್ದು, ಅದರಲ್ಲೂ 1980 ರಲ್ಲಿ ಇದು ಗಮನಾರ್ಹವಾಗಿದ್ದು, 90 ರಲ್ಲಿ ಏರುಗತಿಯತ್ತ ಸಾಗಿದೆ", ಎನ್ನುತ್ತಾರೆ ತ್ರಿಶ್ಶೂರಿನ ಕೇರಳ ಅಗ್ರಿಕಲ್ಚರ್ ಯೂನಿವರ್ಸಿಟಿಯ ಹವಾಮಾನ ಬದಲಾವಣೆಯ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಲ್ಲಿ ವೈಜ್ಞಾನಿಕ ಅಧಿಕಾರಿಯಾಗಿರುವ ಗೋಪಕುಮಾರ್ ಛೋಲಯಿಲ್. "ಮಾನ್ಸೂನ್ ಹಾಗೂ ಮಾನ್ಸೂನ್ ನಂತರದ ಅವಧಿಯಲ್ಲಿ ಅತ್ಯಧಿಕ ಮಳೆ ಸುರಿದ ಪ್ರಸಂಗಗಳು ಕೇರಳದಾದ್ಯಂತ ಹೆಚ್ಚಾಗುತ್ತಿದ್ದು, ವಯನಾಡು ಸಹ ಈ ಪ್ರವೃತ್ತಿಯಿಂದ ಹೊರತಾಗಿಲ್ಲ."
ಇದು ವಡಕಿಲ್, ಜಾರ್ಜ್ ಮತ್ತು ಇತರೆ ರೈತರ ಅವಲೋಕನವನ್ನು ಸಮರ್ಥಿಸುತ್ತದೆ. ಜುಲೈ; ಮಾನ್ಸೂನಿನ ಪ್ರಮುಖ ತಿಂಗಳೆನಿಸಿದಾಗ್ಯೂ, ವಯನಾಡಿನಲ್ಲಿ ಆಗಸ್ಟ್-ಸೆಪ್ಟೆಂಬರ್ನಲ್ಲಿ ಮಳೆ ಸುರಿಯುತ್ತಿದೆ. (ಭಾರತ ಪವನಶಾಸ್ತ್ರ ಇಲಾಖೆಯು, ಜುಲೈ 29 ರಲ್ಲಿ ‘ಭಾರಿ ಮಳೆಯ’ ಹಾಗೂ ‘ಅತ್ಯಂತ ಹೆಚ್ಚಿನ ಭಾರಿ ಮಳೆಯ’ ಸಾಧ್ಯತೆಯ ಬಗ್ಗೆ ಆರೆಂಜ್ ಅಲರ್ಟ್ ಮುನ್ನೆಚ್ಚರಿಕೆಯನ್ನು ನೀಡಿದೆ.)
"ಕೃಷಿಯ ಪ್ರಕಾರಗಳಲ್ಲಿನ ಬದಲಾವಣೆ, ಅರಣ್ಯ ಪ್ರದೇಶಗಳ ಭೂಸವೆತ, ಭೂ ಬಳಕೆಯ ಸ್ವರೂಪಗಳು ಹಾಗೂ ಇನ್ನಿತರೆ ಅಂಶಗಳು ಪರಿಸರ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮವನ್ನು ಉಂಟುಮಾಡಿವೆ", ಎನ್ನುತ್ತಾರೆ ಡಾ. ಛೋಲಯಿಲ್.
ಮನಂಥವಡಿಯಲ್ಲಿ "ಟೀಚರ್" ಎಂದು ಪ್ರೀತಿಯಿಂದ ಕರೆಯಲಾಗುವ ಸುಭದ್ರ, "ಹಿಂದಿನ ವರ್ಷದ ಪ್ರವಾಹದಿಂದಾಗಿ, ನನ್ನೆಲ್ಲ ಕಾಫಿ ಬೆಳೆಯೂ ಹಾನಿಗೀಡಾಯಿತು. ವಯನಾಡಿನಾದ್ಯಂತ ಕಾಫಿ ಉತ್ಪನ್ನವು ಈ ವರ್ಷ ಕನಿಷ್ಠ ಮಟ್ಟದಲ್ಲಿದೆ", ಎನ್ನುತ್ತಾರೆ. 75 ವರ್ಷದ ಕೃಷಿಕರಾದ ಇವರು, (ಸುಭದ್ರ ಬಾಲಕೃಷ್ಣನ್) ಎಡವಕ ಪಂಚಾಯತ್ನಲ್ಲಿನ ತನ್ನ ಕುಟುಂಬದ 24 ಎಕರೆಯ ಮೇಲ್ವಚಾರಣೆ ನಡೆಸುತ್ತ; ಇತರೆ ಬೆಳೆಗಳೊಂದಿಗೆ, ಕಾಫಿ, ಭತ್ತ ಮತ್ತು ತೆಂಗಿನಕಾಯಿಗಳನ್ನು ಬೆಳೆಯುತ್ತಾರೆ. "ವಯನಾಡಿನ ಅನೇಕ ಕಾಫಿ ಬೆಳೆಗಾರರು ಈಗ ಆದಾಯಕ್ಕಾಗಿ ತಮ್ಮ ಜಾನುವಾರುಗಳನ್ನು ಅವಲಂಬಿಸಿದ್ದಾರೆ."
ಅವರು ‘ಹವಾಗುಣದ ಬದಲಾವಣೆ’ ಎಂಬ ಪದವನ್ನು ಬಳಸದಿರಬಹುದು. ಆದರೆ ನಾವು ಭೇಟಿಮಾಡಿದ ಎಲ್ಲ ಕೃಷಿಕರೂ ಇದರ ಪರಿಣಾಮದ ಬಗ್ಗೆ ಚಿಂತಿತರಾಗಿದ್ದಾರೆ.
ನಾವು ಕೊನೆಯಲ್ಲಿ ಭೇಟಿಯಿತ್ತ ಸುಲ್ತಾನ್ ಬತೇರಿ ತಾಲ್ಲೂಕಿನ ಪೂಥಡಿ ಪಂಚಾಯತ್ನ 80 ಎಕರೆಯ ಏಡೆನ್ ವ್ಯಾಲಿಯಲ್ಲಿ, ಕಳೆದ 40 ವರ್ಷಗಳಿಂದಲೂ ಕೃಷಿ ಕಾರ್ಮಿಕರಾಗಿರುವ ಗಿರಿಜನ್ ಗೋಪಿ ಎಂಬುವರನ್ನು ಸಂಧಿಸಿದೆವು. ಅವರಾಗ ತಮ್ಮ ಕೆಲಸದ ಪಾಳಿಯನ್ನು ಅರ್ಧ ಮುಗಿಸಿದ್ದರು. "ರಾತ್ರಿಯಲ್ಲಿ ಬಹಳ ಚಳಿಯಿದ್ದು, ಹಗಲು ಹೆಚ್ಚು ಬಿಸಿಲಿನಿಂದ ಕೂಡಿರುತ್ತದೆ. ಇಲ್ಲಿ ಏನಾಗುತ್ತಿದೆಯೆಂಬುದು ಯಾರಿಗೆ ಗೊತ್ತು?" ಎಂದ ಅವರು, "ಇದು ದೇವರಿಗೆ ಅರ್ಥವಾಗಬೇಕಷ್ಟೇ. ಇದೆಲ್ಲಾ ನಮಗೆ ಹೇಗೆ ಅರ್ಥವಾಗಬೇಕು?", ಎಂದು ಗೊಣಗುತ್ತಲೇ ಊಟಕ್ಕೆ ತೆರಳಿದರು.
ಮುಖಪುಟ ಚಿತ್ರ: ವಿಶಾಖ ಜಾರ್ಜ್
ಈ ಲೇಖನವನ್ನು ಸಿದ್ಧಪಡಿಸುವಲ್ಲಿ ತಮ್ಮ ಅಮೂಲ್ಯ ಸಮಯವನ್ನು ವಿನಿಯೋಗಿಸಿ, ಉದಾರ ಸಹಾಯವನ್ನಿತ್ತ ಸಂಶೋಧಕ ನೋಯೆಲ್ ಬೆನ್ನೊ ಅವರಿಗೆ ಲೇಖಕಿಯು ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತಾರೆ.
ದೇಶದಾದ್ಯಂತ ಹವಾಮಾನ ವೈಪರೀತ್ಯಗಳ ಬಗೆಗಿನ ಪರಿಯ ವರದಿಗಾರಿಕೆಯು ಪ್ರಾಜೆಕ್ಟ್ ಯು.ಎನ್.ಡಿ.ಪಿ ಯ ಸಹಕಾರದಿಂದ ನಡೆಯಲ್ಪಡುತ್ತಿದ್ದು ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಜನಸಾಮಾನ್ಯರ ಅನುಭವದ ಮಾತುಗಳಲ್ಲಿ ದಾಖಲಿಸುವ ಗುರಿಯನ್ನಿಟ್ಟುಕೊಂಡಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ: [email protected] with a cc to [email protected] .
ಅನುವಾದ: ಶೈಲಜ ಜಿ. ಪಿ.