ಈಗಾಗಲೇ ನಿರ್ಮಿಸಿದ್ದ ವೇದಿಕೆಯತ್ತ ಸಾಗುತ್ತಿದ್ದ ಅವರು ಕೆಂಪು, ಹಳದಿ, ಹಸಿರು, ಬಿಳಿ, ಮತ್ತು ಕಿತ್ತಳೆ ಬಣ್ಣದ ಧ್ವಜಗಳನ್ನು ಎತ್ತರಕ್ಕೆ ಹಿಡಿದಿದ್ದರು. ಇದೇ ವೇಳೆ ಹಸಿರು ದುಪ್ಪಟ್ಟಾವನ್ನು ತಲೆ ಮೇಲೆ ಹೊದ್ದ ಮಹಿಳಾ ರೈತರ ಗುಂಪೊಂದು ಮೆರವಣಿಗೆಯಲ್ಲಿ ಪಾಲ್ಗೊಂಡಿತ್ತು, ಇನ್ನೊಂದೆಡೆಗೆ ಪುರುಷರ ತುಕಡಿಯೊಂದು ಟ್ರಾಕ್ಟರ್ ಗಳ ಮೇಲೆ ಕುಳಿತು ಅದರ ಸವಾರಿ ಮಾಡುತ್ತಿತ್ತು, ಅವರು ಧರಿಸಿದ್ದ ಪೇಟಗಳು ಬಿಳಿ ಮತ್ತು ಕಡುಗೆಂಪು, ಹಳದಿ ಮತ್ತು ಹಸಿರು ಬಣ್ಣಗಳಿಂದ ಕೂಡಿದ್ದವು. ತಮ್ಮ ಭುಜದ ಮೇಲೆ ಧ್ವಜಗಳನ್ನು ಹಿಡಿದಿದ್ದ ವಿವಿದ ತಂಡಗಳು ಇಡೀ ದಿನ ವೇದಿಕೆಯುದ್ದಕ್ಕೂ ಸಾಗುತ್ತಿದ್ದವು- ಇನ್ನು ಅಲ್ಲಿ ಕಂಡು ಬರುತ್ತಿದ್ದ ಪ್ರತಿಬಣ್ಣವು ಸಹಿತ ಮಹಾಕಾವ್ಯದ ಪದಗಳ ಹೆಣಿಕೆಯಂತಿತ್ತು.
ಇದು ನವೆಂಬರ್ 26, 2020ರಿಂದ ಹೀಗೆಯೇ ವರ್ಷ ಪೂರ್ತಿ ನಡೆದಿತ್ತು, ಅವರಲ್ಲಿ ಹಲವರು ಸಂಸತ್ತು ಅಂಗೀಕರಿಸಿದ ಮೂರು ಕಾನೂನುಗಳ ವಿರುದ್ಧ ಪ್ರತಿಭಟಿಸಲು ದೆಹಲಿಯ ಗೇಟ್‌ಗಳನ್ನು ತಲುಪಿದ್ದರು. ಈ ಐತಿಹಾಸಿಕ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ರೈತರು ಮತ್ತು ಬೆಂಬಲಿಗರು ಕಳೆದ ಶುಕ್ರವಾರದಂದು ಸಿಂಘು, ಟಿಕ್ರಿ ಮತ್ತು ಗಾಜಿಪುರದಲ್ಲಿರುವ ಪ್ರತಿಭಟನಾ ಸ್ಥಳಗಳಲ್ಲಿ ಸಮಾವೇಶಗೊಂಡಿದ್ದರು.
ಅದೊಂದು ಗೆಲುವು, ಕಣ್ಣೀರು ಮತ್ತು ಯೋಜನೆಗಳ ಸ್ಮರಣೆಯ ದಿನವಾಗಿತ್ತು. ಇದು ಗೆದ್ದಿರುವಂತಹ ಯುದ್ಧವಾಗಿರಬಹುದು, ಆದರೆ ಇದೇ ಅಂತಿಮ ಗೆಲುವಲ್ಲ ಎಂದು ನವೆಂಬರ್ 19ರಂದು ಪ್ರಧಾನಿ ಮೋದಿ ಮೂರು ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದ ದಿನ ಸಿಂಘುವಿನಲ್ಲಿದ್ದ 33 ವರ್ಷದ ಗುರ್ಜಿತ್ ಸಿಂಗ್ ಅವರು ಹೇಳುತ್ತಿದ್ದರು. ಸಿಂಗ್ ಅವರು ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಝಿರಾ ತೆಹಸಿಲ್‌ನಲ್ಲಿರುವ ಅವರ ಗ್ರಾಮವಾದ ಅರಿಯನ್‌ವಾಲಾದಲ್ಲಿ 25 ಎಕರೆಗಳಲ್ಲಿ ಕೃಷಿ ಮಾಡುತ್ತಿದ್ದಾರೆ.
ಆ ದಿನ ಸಿಂಘುವಿನಲ್ಲಿದ್ದ 45 ವರ್ಷದ ಗುರ್ಜಿತ್ ಸಿಂಗ್ ಆಜಾದ್ ಅವರು ಮಾತನಾಡುತ್ತಾ "ಇದು ಜನರ ಗೆಲುವಾಗಿದೆ, ನಾವು ಹಠಮಾರಿ ಆಡಳಿತಗಾರನನ್ನು ಸೋಲಿಸಿದ್ದೇವೆ ಮತ್ತು ಇದರಿಂದಾಗಿ ನಮಗೆ ಸಂತೋಷವಾಗಿದೆ” ಎಂದು ಹೇಳಿದರು. ಗುರುದಾಸ್‌ಪುರ ಜಿಲ್ಲೆಯ ಕಹ್ನುವಾನ್ ತೆಹಸಿಲ್‌ನಲ್ಲಿರುವ ಭಟ್ಟಿಯಾನ್‌ನ ಆಜಾದ್‌ನ ಹಳ್ಳಿಯಲ್ಲಿ, ಅವರ ಚಿಕ್ಕಪ್ಪನವರು ಹೊಂದಿರುವ ಎರಡು ಎಕರೆಗಳಲ್ಲಿ ಮುಖ್ಯವಾಗಿ ಗೋಧಿ ಮತ್ತು ಭತ್ತವನ್ನು ಬೆಳೆಯುತ್ತಾರೆ. "ಈ ಯುದ್ಧವು ನವೆಂಬರ್ 26ರಂದು ಪ್ರಾರಂಭವಾಗಲಿಲ್ಲ. ಆ ದಿನ ಅದು ದೆಹಲಿಯ ಗಡಿಯನ್ನು ತಲುಪಿತು" ಎಂದು ಅವರು ಹೇಳಿದರು. “ಮಸೂದೆಗಳು ಕಾನೂನಾಗುವ ಮೊದಲೇ ರೈತರು ಪ್ರತಿಭಟನೆ ಆರಂಭಿಸಿದ್ದರು.ಈ ಮೂರು ಕೃಷಿ ಕಾನೂನುಗಳನ್ನು ಸೆಪ್ಟೆಂಬರ್ 2020 ನಲ್ಲಿ ಅಂಗೀಕರಿಸಿದ ನಂತರ, ರೈತರೆಲ್ಲರಿಗೂ ದೆಹಲಿಗೆ ಬರುವಂತೆ ಕರೆ ನೀಡಲಾಯಿತು. ನಾವು ಆ ಕರೆಯನ್ನು ಅನುಸರಿಸಿದೆವು" ಎಂದು ಅವರು ಹೇಳಿದರು.
ಕಳೆದ ವರ್ಷ ನಡೆದ ಘಟನಾವಳಿಯ ಮೆರವಣಿಗೆಯನ್ನು ಅವರು ಸ್ಮರಿಸಿಕೊಳ್ಳುತ್ತಾ: “ನಾವು ನಮ್ಮ ರಾಜಧಾನಿಯತ್ತ ಸಾಗುತ್ತಿದ್ದಂತೆ, ಸರ್ಕಾರವು ಜಲ ಫಿರಂಗಿಗಳನ್ನು ಬಳಸಿತು. ಅವರು ಕಂದಕಗಳನ್ನು ಅಗೆದರು.ಆದರೆ ನಾವಿಲ್ಲಿ ಎತ್ತರದ ಬೇಲಿಗಳು ಮತ್ತು ಮುಳ್ಳುತಂತಿಗಳಿಂದ ತಡೆಯಲು ನಾವೇನು ಉದ್ವೇಗದಿಂದ ಯುದ್ಧಕ್ಕೆ ಬರುತ್ತಿಲ್ಲ. (ಕಳೆದ ವರ್ಷ, 62 ವರ್ಷದ ಜೋಗರಾಜ್ ಸಿಂಗ್ ನನಗೆ ಹೇಳಿದ್ದರು, ಅವರಂತಹ ರೈತರು ಪೊಲೀಸರಿಗೆ ಆಹಾರವನ್ನು ನೀಡುತ್ತಾರೆ, ಮತ್ತು ಪೊಲೀಸರೂ ತಮ್ಮ ಮಕ್ಕಳಿದ್ದ ಹಾಗೆ - ಆದ್ದರಿಂದ ಅವರ ಲಾಠಿಗಳಿಗೂ ಆಹಾರ ಬೇಕೆಂದರೆ ಅದಕ್ಕೂ ಬೆನ್ನೆಲುಬಾಗಿ ನಿಲ್ಲಲೂ ಸಿದ್ಧ ಎನ್ನುತ್ತಾರೆ).
ಪಟಿಯಾಲ ಜಿಲ್ಲೆಯ ದೌನ್ ಕಲಾನ್ ಗ್ರಾಮದ ರಾಜಿಂದರ್ ಕೌರ್ ಕಳೆದ ವಾರ ಸಿಂಘುವಿನಲ್ಲಿದ್ದರು - ಅವರು 26 ಬಾರಿ ಪ್ರತಿಭಟನಾ ಸ್ಥಳಗಳಿಗೆ ಭೇಟಿ ನೀಡಿದ್ದರು. “ಈ ಪ್ರತಿಭಟನೆ ಪ್ರಾರಂಭವಾದಾಗಿನಿಂದ, ನಾನು ಪಟಿಯಾಲಾದ ಟೋಲ್ ಪ್ಲಾಜಾಗಳಲ್ಲಿ ಸ್ವಯಂಸೇವಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ಯಾವುದೇ ರೈತರು ಟೋಲ್ ಪಾವತಿಸದಿರುವಂತೆ ನೋಡಿಕೊಳ್ಳುತ್ತಿದ್ದೇನೆ ಎಂದು 48 ವರ್ಷದ ರಾಜಿಂದರ್ ಹೇಳುತ್ತಿದ್ದರು. ಅವರ ಕುಟುಂಬವು ಐದು ಎಕರೆ ಭೂಮಿಯನ್ನು ಹೊಂದಿದೆ. “ಮೊದಲು, ಅವರು [ಪ್ರಧಾನಿ] ಕಾನೂನುಗಳನ್ನು ಹೇರಿದರು. ನಂತರ ಅವರು ಅವುಗಳನ್ನು ರದ್ದುಗೊಳಿಸಿದರು. ಈ ನಡುವೆ, ನಾವು ಜೀವ ಮತ್ತು ಜೀವನೋಪಾಯಗಳ ದೊಡ್ಡ ನಷ್ಟವನ್ನು ಅನುಭವಿಸಿದ್ದೇವೆ. ಅವರು ಆರಂಭದಲ್ಲಿಯೇ ಈ ಕಾನೂನುಗಳನ್ನು ಜಾರಿಗೊಳಿಸಬಾರದಾಗಿತ್ತು ಮತ್ತು ಒಮ್ಮೆ ಅವುಗಳನ್ನು ಜಾರಿಗೆ ತಂದಿದ್ದರೆ, ಅವುಗಳನ್ನು ಬಹಳ ಹಿಂದೆಯೇ ರದ್ದುಗೊಳಿಸಬೇಕಾಗಿತ್ತು” ಎಂದು ಅವರು ಹೇಳುತ್ತಿದ್ದರು.
ಕಳೆದ 12 ತಿಂಗಳುಗಳಲ್ಲಿ, ಪ್ರಧಾನ ಮಂತ್ರಿಗಳು ಕಾನೂನುಗಳನ್ನು ರದ್ದುಗೊಳಿಸದಿದ್ದಾಗ, ರೈತರು ಚಳಿಗಾಳಿ ಮತ್ತು ಸರ್ಕಾರ ನಿರಾಕರಣಾ ಧೋರಣೆಯನ್ನು ಧೈರ್ಯದಿಂದ ಎದುರಿಸಿದರು.ಅವರು ಸುಡುವ ಸೂರ್ಯನನ್ನು ಧೈರ್ಯದಿಂದ ಎದುರಿಸಿದ್ದಲ್ಲದೆ, ಅವರು ಬಿರುಗಾಳಿಗಳು ಮತ್ತು ಮಳೆಯನ್ನು ಸಹಿತ ಸಹಿಸಿಕೊಂಡರು, ಆದರೆ ಹೆದ್ದಾರಿಗಳಲ್ಲಿದ್ದ ಅವರ ಡೇರೆಗಳು ಇದರಿಂದಾಗಿ ಹಾರಿಕೊಂಡು ಹೋಗಿದ್ದವು. ಅವರಿಗೆ ನೀರು ಮತ್ತು ವಿದ್ಯುತ್ ಸರಬರಾಜುಗಳನ್ನು ಕಡಿತಗೊಳಿಸುವ ಬೆದರಿಕೆಯನ್ನು ಹಾಕಲಾಯಿತು. ಜೊತೆಗೆ ಅವರು ವಾಶ್‌ರೂಮ್‌ಗಳ ಕೊರತೆ ಮತ್ತು ಕೊರೊನಾ ಮಹಾಮಾರಿ ಅಪಾಯಗಳನ್ನು ಸಹಿತ ಸಹಿಸಿಕೊಂಡರು.
“ಸರ್ಕಾರವು ನಮಗೆ ಸುಸ್ತು ಮಾಡಲು ಬಯಸಿತ್ತು ಮತ್ತು ನಾವು ಇಲ್ಲಿಂದ ಹೋಗುತ್ತೇವೆ ಎಂದು ಅದು ತಿಳಿದುಕೊಂಡಿತ್ತು, ಆದರೆ ನಾವು ಇದರಿಂದ ಹಿಂದೆ ಸರಿಯಲಿಲ್ಲ” ಎಂದು ಅಜಾದ್ ಹೇಳಿದರು. ಒಂದೆಡೆ ರೈತರು ತಮ್ಮ ಪ್ರತಿಭಟನೆಯನ್ನು ಧೃಡವಾಗಿ ಮುಂದುವರೆಸಿದಂತೆ, ಮುಖ್ಯವಾಹಿನಿಯ ಹಲವು ಮಾಧ್ಯಮಗಳು ಅವರನ್ನು ನಿಂದಿಸಿದವು. ಆಜಾದ್ ಅವರು ರೈತರಿಗೆ ಮೀಸಲಾಗಿರುವ ಪ್ರಸಿದ್ಧ ಸಾಮಾಜಿಕ ಮಾಧ್ಯಮದ ಹ್ಯಾಂಡಲ್‌ನೊಂದಿಗೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದರು, ಅವರೇ ಹೇಳುವಂತೆ 'ರೈತರನ್ನು ಅವಿದ್ಯಾವಂತರು, ಖಲಿಸ್ತಾನಿಗಳು ಮತ್ತು ಇನ್ನೂ ಹೆಚ್ಚಿನವರು ಎಂದು ಕರೆಯುವ ಮಾಧ್ಯಮದ ನಿರೂಪಣೆಯನ್ನು ಎದುರಿಸಲು ಹೇಳಿದರು.“ನಾವು ಅನಕ್ಷರಸ್ಥರು ಎಂದು ಅವರು ಹೇಳಿದ್ದಾರೆ ಮತ್ತು ನಮಗಾಗಿ ತರ್ಕಿಸುವ ಮತ್ತು ಯೋಚಿಸುವ ನಮ್ಮ ಸಾಮರ್ಥ್ಯದ ಮೇಲೆ ಅವರು ದಾಳಿ ಮಾಡಿದ್ದಾರೆ. ಆದ್ದರಿಂದ ನಾವು ಇದನ್ನು ಸವಾಲಾಗಿ ತೆಗೆದುಕೊಂಡು ಖಂಡಿಸಿದ್ದೇವೆ," ಎಂದು ಅವರು ಹೇಳಿದರು.
"ಈ ಚಳವಳಿಯು ನಮಗೆ ಅನೇಕ ವಿಷಯಗಳನ್ನು ಕಲಿಸಿದೆ, ಮತ್ತು ಅದರಲ್ಲೂ ಅದು ಎಷ್ಟೇ ಕಠಿಣವಾಗಿದ್ದರೂ ಸತ್ಯಕ್ಕಾಗಿ ಹೋರಾಡುವ ಯುದ್ಧವನ್ನು ಗೆಲ್ಲಬಹುದು.ಮತ್ತು ಇದು ದೇಶದ ಆಡಳಿತಗಾರರಿಗೆ “ಅಂತಹ ಯಾವುದೇ ಕಾನೂನನ್ನು ದೇಶದ ಜನರನ್ನು ಮಟ್ಟ ಹಾಕುವ ಮೊದಲು ಸಾವಿರ ಬಾರಿ ಯೋಚಿಸಬೇಕು” ಎನ್ನುವ ಕನಿಷ್ಠ ಒಂದು ಪಾಠವನ್ನು ಕಲಿಸಿದೆ ಎಂದು ಗುರ್ಜಿತ್ ಸಿಂಗ್ ಹೇಳಿದರು.
15 ವರ್ಷಗಳ ಹಿಂದೆ ರಸ್ತೆ ಅಪಘಾತದ ನಂತರ ಅವರ ಎಡಗಾಲು ತುಂಡರಿಸಿದ ಫತೇಘರ್ ಸಾಹಿಬ್ ಜಿಲ್ಲೆಯ ಖಮನಾನ್ ತೆಹಸಿಲ್‌ನ ಮೋಹನ್ ಮಜ್ರಾ ಗ್ರಾಮದ 47 ವರ್ಷದ ರೈತ ಸುಖದೇವ್ ಸಿಂಗ್ ಅವರು "ನಾವು ವಿಜಯಶಾಲಿಯಾಗಲು ಬಂದಿದ್ದೇವೆ, ಮತ್ತು ಗೆಲುವು ನಮ್ಮದಾದಾಗ ಮಾತ್ರ ನಾವು ಇಲ್ಲಿಂದ ಹೊರಡುತ್ತೇವೆ" ಎಂದು ಹೇಳುತ್ತಾರೆ. "ರದ್ದತಿಯ ಘೋಷಣೆ ಮಾಡಿದ ನಂತರ ಗಮನವಿರುವುದು ನಮ್ಮನ್ನು ಮನೆಗೆ ಕಳುಹಿಸುವ ಮೇಲೆ ಇದೆ. ಆದರೆ ನಾವು ಸಂಸತ್ತಿನಲ್ಲಿ ರದ್ದತಿಯ ಕಾರ್ಯವಿಧಾನವು ಪೂರ್ಣಗೊಳ್ಳುವವರೆಗೆ ಮತ್ತು ಮತ್ತು ವಿದ್ಯುತ್ (ತಿದ್ದುಪಡಿ) ಮಸೂದೆ, 2020 ಕಾಯಿದೆಯನ್ನು ಹಿಂತೆಗೆದುಕೊಳ್ಳುವವರೆಗೆ ನಾವು ಹಿಂತಿರುಗುವುದಿಲ್ಲ" ಎಂದು ಹೇಳುತ್ತಾರೆ.
ಕಳೆದ ವರ್ಷದುದ್ದಕ್ಕೂ ಇದ್ದಂತಹ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ರೈತರು ನವೆಂಬರ್ 26ರಂದು ತಮ್ಮ ಆಚರಣೆಯನ್ನು ಶಾಂತಿಯುತವಾಗಿ ಆಚರಿಸಿದರು.ಈ ಸಂದರ್ಭದಲ್ಲಿ ಅವರು ನೃತ್ಯ ಮಾಡಿದರು, ಹಾಡಿದರು, ಅವರು ಸಿಹಿತಿಂಡಿಗಳು ಮತ್ತು ಹಣ್ಣುಗಳನ್ನು ಹಂಚಿದರು - ಬೂಂದಿ ಲಡ್ಡೂ, ಬರ್ಫಿ ಮತ್ತು ಬಾಳೆಹಣ್ಣು, ಲಂಗರ್ ಮತ್ತು ಇತರ ಸೇವೆಗಳು ಹಾಗೆಯೇ ಮುಂದುವರೆದಿವೆ.
ನವೆಂಬರ್ 26ರಂದು, ಸಿಂಘು ಮತ್ತು ಟಿಕ್ರಿ ಗಡಿಯಲ್ಲಿನ ವೇದಿಕೆಗಳು ವಿವಿಧ ಕ್ಷೇತ್ರಗಳು ಮತ್ತು ವೃತ್ತಿಯ ಜನರಿಂದ ತುಂಬಿ ತುಳುಕುತ್ತಿದ್ದವು, ರೈತರನ್ನು ಅಭಿನಂದಿಸಲು ಅಲ್ಲಿಗೆ ಬಂದವರಲ್ಲಿ ಹಲವರು ಕಣ್ಣೀರಿಡುತ್ತಿದ್ದರು.
ಹಲವಾರು ರೈತ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಮತ್ತು ಮುಂದೆ ಕುಳಿತಿದ್ದ ಮತ್ತು ನಿಂತಿದ್ದ ಮಹಿಳೆಯರು ಮತ್ತು ಪುರುಷ ರೈತರು ಪ್ರತಿ ಘೋಷಣೆಗೆ ಉತ್ಸಾಹ ಮತ್ತು ಹೆಮ್ಮೆಯಿಂದ ಪ್ರತಿಕ್ರಿಯಿಸುತ್ತಿದ್ದರು. ವೇದಿಕೆಯಿಂದ ಮಾತನಾಡಿದ ಪ್ರತಿಯೊಬ್ಬರು ಕಳೆದ ವರ್ಷದ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಸುಮಾರು 700 ರೈತರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಒಂದು ವರ್ಷದ ಹೋರಾಟವನ್ನು ಆಚರಿಸಲು ಇಲ್ಲಿಗೆ ವಾಪಸ್ ಬಂದಿರುವ ರೈತರು ಕೇವಲ ವಿಜಯೋತ್ಸವನ್ನು ಆಚರಿಸಲು ಮಾತ್ರ ಬಂದಿಲ್ಲ, ಬದಲಾಗಿದೆ ಈ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ರೈತರಿಗೆ ಗೌರವ ಸಲ್ಲಿಸಲು ಸಹ ಆಗಮಿಸಿದ್ದಾರೆ " ಎಂದು ಆಜಾದ್ ಹೇಳುತ್ತಿದ್ದರು. "ನಾವು ಸಂತೋಷವಾಗಿದ್ದೇವೆಯೇ ಅಥವಾ ದುಃಖಿಸುತ್ತೇವೆಯೇ ಎನ್ನುವುದು ನಮಗೆ ಗೊತ್ತಿಲ್ಲ, ಇದಕ್ಕಾಗಿ ಮೃತಪಟ್ಟ ಆ ಸಹ ಪ್ರತಿಭಟನಾಕಾರರ ಬಗ್ಗೆ ನಮ್ಮ ಕಣ್ಣುಗಳು ಇನ್ನೂ ತೇವವಾಗಿವೆ. ನಾವು ಅವರಿಗೆ ಗೌರವ ಸಲ್ಲಿಸುತ್ತೇವೆ." ಎಂದು ಗುರ್ಜಿತ್ ಹೇಳಿದರು.
ಈ ಐತಿಹಾಸಿಕ ದಿನಕ್ಕೆ ಸಾಕ್ಷಿಯಾಗಲು ನಿರ್ಧರಿಸಿ ಅಮೃತಸರದ ಅಜ್ನಾಲಾ ತಹಸಿಲ್‌ನಲ್ಲಿರುವ ಸೆಹ್ನ್ಸ್ರಾ ಗ್ರಾಮದಲ್ಲಿ ಒಂಬತ್ತು ಎಕರೆ ಜಮೀನನ್ನು ಹೊಂದಿರುವ 87 ವರ್ಷದ ಮುಖ್ತಾರ್ ಸಿಂಗ್ ಅವರು ಸಿಂಘುಗೆ ಆಗಮಿಸಿದ್ದರು. ಅವರಿಗೆ ನಡೆಯಲು ಅಥವಾ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ.ಈ ಸಂದರ್ಭದಲ್ಲಿ ಅವರು ಅರ್ಧ ಬಾಗಿದ ಕೋಲು ಹಿಡಿದು ವೇದಿಕೆಯತ್ತ ಪುಟ್ಟ ಹೆಜ್ಜೆ ಹಾಕಿದರು. ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿದಾಗ, ಅವರು ತಮ್ಮ 36 ವರ್ಷದ ಮಗ ಸುಖದೇವ್ ಸಿಂಗ್ ನಿಗೆ ತಮ್ಮನ್ನು ಪ್ರತಿಭಟನಾ ಸ್ಥಳಕ್ಕೆ ಕರೆದೊಯ್ಯುವಂತೆ ಕೇಳಿಕೊಂಡರು. ಅವರು ತಮ್ಮ ಜೀವನದುದ್ದಕ್ಕೂ ರೈತರಿಗಾಗಿ (ಸಂಘದ ಸದಸ್ಯರಾಗಿ) ಕೆಲಸ ಮಾಡಿದ್ದಾರೆ ಮತ್ತು ಅವರು ಶಾಂತಿಯುತವಾಗಿ ಕಣ್ಮುಚ್ಚಲು ಪ್ರತಿಭಟನಾ ಸ್ಥಳವನ್ನು ಕಾಣಬೇಕೆಂದು ಅವರು ಸುಖದೇವ್‌ಗೆ ತಿಳಿಸಿದರು.
ವರ್ಷವಿಡೀ ಕಾಯ್ದಿರುವ ಇಂತಹ ಕಷ್ಟದ ಸಮಯದಲ್ಲಿ, ಗುರುದಾಸ್‌ಪುರದ ಬಟಾಲಾ ಬ್ಲಾಕ್‌ನ ಹರ್ಚೋವಾಲ್ ಗ್ರಾಮದ 58 ವರ್ಷದ ರೈತ ಕುಲ್ವಂತ್ ಸಿಂಗ್ ಅವರು ಕೆಲವೊಮ್ಮೆ ಕಾನೂನುಗಳನ್ನು ರದ್ದುಗೊಳಿಸಬಹುದೇ ಎನ್ನುವ ವಿಚಾರವಾಗಿ ಅನಿಶ್ಚಿತರಾಗಿದ್ದಾರೆ. "ಇದಾದ ನಂತರವೂ ಮತ್ತೊಮ್ಮೆ ನಾನು ಆಶಾವಾದವನ್ನು ಮರಳಿ ಪಡೆಯುವಲ್ಲಿ ಹೆಣಗಾಡುತ್ತಿದ್ದೇನೆ ಮತ್ತು ಆಶಾವಾದಿಯಾಗಿರಲು ನನಗೆ ನಾನೇ- ಚಾರ್ಡಿ ಕಲಾನ್ (ಸದಾ ಆಶಾವಾದಿಯಾಗಿರಲು ಪಂಜಾಬಿನಲ್ಲಿ ಬಳಸುವ ನುಡಿಗಟ್ಟು) ಎಂದು ಹೇಳುತ್ತಿರುತ್ತೇನೆ" ಎನ್ನುತ್ತಾರೆ.
ರೈತರು ತಮ್ಮ ಬೆಳೆಗಳಿಗೆ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ಕಾನೂನುಬದ್ಧ ಹಕ್ಕು ಮತ್ತು ಲಖೀಂಪುರ ಖೇರಿಯಲ್ಲಿ ಸಾವನ್ನಪ್ಪಿದ ರೈತರಿಗೆ ನ್ಯಾಯ ಸಿಗುವುದು ಸೇರಿದಂತೆ ಇತರ ಬಾಕಿ ಇರುವ ಬೇಡಿಕೆಗಳ ಕುರಿತು ಮಾತನಾಡಿದರು. ಇವು ಮತ್ತು ಇನ್ನಿತರ ಸಮಸ್ಯೆಗಳಿಗಾಗಿನ ಹೋರಾಟವು ಮುಂದುವರಿಯುತ್ತದೆ ಎಂದು ಅವರು ಹೇಳಿದರು. ಅಲ್ಲಿಯವರೆಗೆ, ಮಹತ್ವದ ಒಂದು ವರ್ಷ ಕಳೆದುಹೋಗಿರುತ್ತದೆ, ಈ ಸಂದರ್ಭದಲ್ಲಿ ನನಗೆ ಕವಿ ಇಕ್ಬಾಲ್ ಅವರ ಮಾತುಗಳು ನೆನಪಿಗೆ ಬರುತ್ತವೆ:
"ಜಿಸ್ ಖೇತ್ ಸೆ ದೇಹಕಾನ್ ಕೋ ಮಾಯಾಸ್ಸರ್ ನಹಿಂ ರೋಜಿ
ಉಸ್ ಖೇತ್ ಕೆ ಹರ್ ಖೋಶಾ-ಎ-ಗಂಡುಮ್ ಕೋ ಜಲಾ ದೋ"
(“ಯಾವ ಹೊಲದಲ್ಲಿ ರೈತನಿಗೆ ದಿನದೂಟ ಸಿಗುವುದಿಲ್ಲವೋ
ಅಂತಹ ಹೊಲದಲ್ಲಿರುವ ಎಲ್ಲ ಗೋದಿ ರವದಿಯನ್ನು ಸುಟ್ಟು ಬಿಡು”)
ಅನುವಾದ: ಎನ್.ಮಂಜುನಾಥ್