25 ಮೀಟರ್ ಎತ್ತರದಿಂದ ಕೆಳಗೆ ನೋಡುತ್ತಾ ಹುಮಾಯೂನ್ ಶೇಖ್ ಹಿಂದಿಯಲ್ಲಿ ಹೇಳುತ್ತಾರೆ, “ದೂರ ಹೋಗಿ, ತಲೆ ಮೇಲೆ ಕಾಯಿ ಬೀಳುತ್ತೆ!”
ಮರದ ಕೆಳಗೆ ಯಾರೂ ಇಲ್ಲದಿರುವುದನ್ನು ಖಾತರಿಪಡಿಸಿಕೊಂಡ ಅವರು, ತನ್ನ ಹರಿತವಾದ ಕತ್ತಿಯಿಂದ ತೆಂಗಿನ ಗೊನೆಯನ್ನು ಕತ್ತರಿಸುತ್ತಾರೆ. ಮರು ಕ್ಷಣವೇ ದಡ್! ದಡ್! ಸದ್ದಿನೊಂದಿಗೆ ಮರದಿಂದ ತೆಂಗಿನ ಸುರಿಮಳೆಯಾಗುತ್ತದೆ.
ಕೆಲವೇ ನಿಮಿಷಗಳಲ್ಲಿ ಕೆಲಸ ಮುಗಿಸಿದ ಅವರು ಮರವಿಳಿದು ಕೆಳಗೆ ಬರುತ್ತಾರೆ. ಅವರು ಎಷ್ಟು ಅದ್ಭುತವಾಗಿ ಮರ ಹತ್ತುತ್ತಾರೆಂದರೆ, ನಾಲ್ಕು ನಿಮಿಷಗಳಲ್ಲಿ ಮರವನ್ನು ಹತ್ತಿಳಿಯುತ್ತಾರೆ. ಇದಕ್ಕೆ ಕಾರಣ ಹುಮಾಯೂನ್ ಸಾಂಪ್ರದಾಯಿಕ ಕಾಯಿ ಕೊಯ್ಯುವವರಂತೆ ಇವರು ಹಗ್ಗದ ನೆರವಿನಿಂದ ಮರ ಹತ್ತುವ ಬದಲು ಉಪಕರಣವೊಂದನ್ನು ಬಳಸುತ್ತಾರೆ. ಇದನ್ನು ಮರ ಹತ್ತಲು ಮತ್ತು ಇಳಿಯಲು ಅನುಕೂಲವಾಗುವಂತೆ ವಿನ್ಯಾಸ ಮಾಡಲಾಗಿದೆ.
ಉಪಕರಣವು ಎರಡು ಕಾಲಿಡಲು ಸ್ಥಳವನ್ನು ಹೊಂದಿದ್ದು, ಅದರಲ್ಲಿ ಹಗ್ಗವನ್ನು ಮರದ ಸುತ್ತಲೂ ಬರುವಂತೆ ಕಟ್ಟಲಾಗುತ್ತದೆ. ಇದು ಹುಮಾಯೂನ್ ಅವರಿಗೆ ಮರದ ಮೇಲೇರಲು ಸಹಾಯ ಮಾಡುತ್ತದೆ.
"ಒಂದು-ಎರಡು ದಿನಗಳಲ್ಲಿ [ಉಪಕರಣವನ್ನು ಬಳಸಿಕೊಂಡು] ಹೇಗೆ ಏರಬೇಕೆನ್ನುವುದನ್ನು ಕಲಿತೆ" ಎಂದು ಅವರು ಹೇಳುತ್ತಾರೆ.
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಗೋಲ್ಚಂದ್ಪುರ ಗ್ರಾಮದಿಂದ ವಲಸೆ ಬಂದಿರುವ ಹುಮಾಯೂನ್, ಊರಿನಲ್ಲಿ ತೆಂಗಿನ ಮರ ಹತ್ತುವ ಅಭ್ಯಾಸ ಮಾಡಿಕೊಂಡಿದ್ದರು, ಇದರಿಂದಾಗಿ ಅವರಿಗೆ ಕಲಿಯಲು ಸುಲಭವಾಯಿತು.
"ನಾನು ಈ ಉಪಕರಣವನ್ನು 3,000 ರೂ.ಗಳಿಗೆ ಖರೀದಿಸಿದೆ. ಮತ್ತೆ ಕೆಲವು ದಿನಗಳವರೆಗೆ ನನ್ನ ಸ್ನೇಹಿತರೊಂದಿಗೆ ಇಲ್ಲಿಗೆ ಬರತೊಡಗಿದೆ. ಅದಾದ ಮೇಲೆ ಒಬ್ಬನೇ ಬರತೊಡಗಿದೆ" ಎಂದು ಅವರು ಹೇಳುತ್ತಾರೆ.
ಅವರ ದುಡಿಮೆಯಲ್ಲಿ ನಿಶ್ಚಿತ ಆದಾಯವೆನ್ನುವುದು ಇರುವುದಿಲ್ಲ. “ಒಂದು1,000 ರೂಪಾಯಿ ದುಡಿದರೆ, ಇನ್ನೊಂದು ದಿನ 500 ಸಿಗುತ್ತದೆ. ಕೆಲವು ದಿನ ಏನೂ ಸಿಗದಿರುವುದೂ ಇರುತ್ತದೆ” ಎನ್ನುತ್ತಾರವರು. ಅವರು ತಾನು ಹತ್ತಬೇಕಿರುವ ಮರಗಳ ಸಂಖ್ಯೆಯನ್ನು ಅವಲಂಬಿಸಿ ಹಣವನ್ನು ಮಾತಾಡಿಕೊಳ್ಳುತ್ತಾರೆ. “ಕೇವಲ ಎರಡು ಮರವಿದ್ದರೆ ಮರವೊಂದಕ್ಕೆ 50 ರೂಪಾಯಿ ಚಾರ್ಜ್ ಮಾಡುತ್ತೇನೆ. ತುಂಬಾ ಮರ ಇದ್ದ ಕಡೆ 25 ರೂಪಾಯಿಗೆ ಒಂದು ಮರದಂತೆ ಮಾತನಾಡಿ ಕೆಲಸ ಮಾಡುತ್ತೇನೆ” ಎನ್ನುತ್ತಾರೆ ಹುಮಾಯೂನ್. “ನನಗೆ [ಮಲಯಾಳಂ] ಗೊತ್ತಿಲ್ಲ, ಆದರೂ ಹಾಗೋ ಹೀಗೋ ಮಾಡಿ ರೇಟು ಮಾತನಾಡುತ್ತೇನೆ”
“ಊರಿನಲ್ಲಿ [ಬಂಗಾಳದಲ್ಲಿ] ಮರ ಹತ್ತೋದಕ್ಕೆ ಇಂತಹ ಉಪಕರಣಗಳು ಸಿಗಲ್ಲ” ಎನ್ನುವ ಅವರು ಇದು ಕೇರಳದಲ್ಲಿ ಬಹಳ ಜನಪ್ರಿಯ ಎನ್ನುತ್ತಾರೆ.
ಅವರು ಬಳಸುವ ಉಪಕರಣವು ಎರಡು ಫೂಟ್ ರೆಸ್ಟ್ಗಳನ್ನು ಹೊಂದಿದ್ದು ಅದನ್ನು ನೋಡುವಾಗ ಜೋಡಿ ಪಾದಗಳ ನೆನಪು ಬರುತ್ತದೆ. ಅದಕ್ಕೊಂದು ಉದ್ದನೆ ಹಗ್ಗವಿದ್ದು ಅದನ್ನು ಮರವನ್ನು ಬಳಸಿ ಉಪಕರಣದ ಇನ್ನೊಂದು ಬದಿಗೆ ಕಟ್ಟಲಾಗುತ್ತದೆ. ಅವರು ಅದನ್ನು ಬಳಸಿ ಮರ ಏರುವಾಗ ಮೆಟ್ಟಿಲು ಹತ್ತುತ್ತಿರುವಂತೆ ಭಾಸವಾಗುತ್ತದೆ
ಸಾಂಕ್ರಾಮಿಕ ಪಿಡುಗು ಅಪ್ಪಳಿಸುವ ಮೊದಲು, ಹುಮಾಯೂನ್ ಮೂರು ವರ್ಷಗಳ ಹಿಂದೆ [2020ರ ಆರಂಭದಲ್ಲಿ] ಕೇರಳಕ್ಕೆ ವಲಸೆ ಬಂದರು. "ನಾನು ಮೊದಲು ಬಂದಾಗ ಹೊಲಗಳಲ್ಲಿ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
"ಕಾಮ್ ಕಾಜ್ ಕೆ ಲಿಯೇ ಕೇರಳ ಅಚ್ಚಾ ಹೈ [ಕೆಲಸ ಕಾರ್ಯಕ್ಕೆ ಕೇರಳ ಒಳ್ಳೆಯ ಜಾಗ] ಎನ್ನಿಸಿದ ಕಾರಣ ಅವರು ಕೇರಳಕ್ಕೆ ಬಂದರು.
“ಮತ್ತೆ ಆಮೇಲೆ ಕೊರೋನಾ ಬಂತು. ನಾವು ಊರಿಗೆ ಹೋಗಬೇಕಾಯ್ತು” ಎನ್ನುತ್ತಾರೆ.
ಅವರು ಮಾರ್ಚ್ 2020ರಲ್ಲಿ ಕೇರಳ ಸರ್ಕಾರ ಆಯೋಜಿಸಿದ್ದ ಉಚಿತ ರೈಲುಗಳಲ್ಲಿ ಪಶ್ಚಿಮ ಬಂಗಾಳದ ತಮ್ಮ ಮನೆಗೆ ಮರಳಿದರು. ಅದೇ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಕೇರಳಕ್ಕೆ ಮರಳಿದರು. ಆಗಿನಿಂದ ಅವರು ತೆಂಗಿನ ಕಾಯಿ ಕೀಳುವ ಕೆಲಸ ಮಾಡತೊಡಗಿದರು.
ಪ್ರತಿದಿನ 5:30ಕ್ಕೆ ಏಳುವ ಅವರು ಮೊದಲು ಮಾಡುವ ಕೆಲಸ ಅಡುಗೆ. “ನಾನು ಬೆಳಗ್ಗೆ ಊಟ ಮಾಡುವುದಿಲ್ಲ ಸ್ವಲ್ಪ ಛೋಟಾ ನಾಶ್ತಾ [ತಿಂಡಿ] ತಿನ್ನುತ್ತೇನೆ. ಮತ್ತೆ ಕೆಲಸ ಮುಗಿಸಿ ಬಂದ ನಂತರ ಊಟ ಮಾಡುತ್ತೇನೆ.” ಎಂದು ಅವರು ತಮ್ಮ ದಿನಚರಿಯನ್ನು ವಿವರಿಸುತ್ತಾರೆ. ಆದರೆ ಅವರು ಕೆಲಸದಿಂದ ಹಿಂತಿರುಗುವುದಕ್ಕೆ ನಿಗದಿತ ಸಮಯವಿಲ್ಲ
"ಕೆಲವು ದಿನ ಬೆಳಿಗ್ಗೆ 11 ಗಂಟೆಗೆ ಮನೆಗೆ ಮರಳುತ್ತೇನೆ ಮತ್ತು ಕೆಲವು ದಿನಗಳಲ್ಲಿ ಹಿಂತಿರುಗುವಾಗ ಮಧ್ಯಾಹ್ನ 3-4 ಗಂಟೆ ಆಗಿರುತ್ತದೆ" ಎಂದು ಅವರು ಹೇಳುತ್ತಾರೆ.
ಮಳೆಗಾಲದ ಸಮಯದಲ್ಲಿ, ಅವರ ಆದಾಯವು ಏರಿಳಿತಗೊಳ್ಳುತ್ತದೆ ಆದರೆ ಉಪಕರಣ ಹೊಂದಿರುವುದರಿಂದ ಅವರಿಗೆ ಅದರಿಂದ ಒಂದಷ್ಟು ಸಹಾಯವಾಗುತ್ತದೆ.
"ಮಳೆಗಾಲದಲ್ಲಿ ಮರಗಳನ್ನು ಹತ್ತಲು ನನಗೆ ಯಾವುದೇ ಸಮಸ್ಯೆಯಿಲ್ಲ ಏಕೆಂದರೆ ನನ್ನ ಬಳಿ ಯಂತ್ರವಿದೆ" ಎಂದು ಅವರು ಹೇಳುತ್ತಾರೆ. ಆದರೆ ಈ ಋತುವಿನಲ್ಲಿ ಕೆಲವೇ ಜನರು ತೆಂಗಿನಕಾಯಿ ಕೀಳುವವರನ್ನು ಕರೆಯುತ್ತಾರೆ. "ಸಾಮಾನ್ಯವಾಗಿ, ಮಳೆ ಬೀಳಲು ಪ್ರಾರಂಭಿಸಿದಾಗ ನನಗೆ ಕಡಿಮೆ ಕೆಲಸ ಸಿಗುತ್ತದೆ" ಎಂದು ಅವರು ಹೇಳುತ್ತಾರೆ.
ಈ ಕಾರಣಕ್ಕಾಗಿಯೇ ಅವರು ಗೋಲ್ಚಂದ್ಪುರದಲ್ಲಿರುವ ತಮ್ಮ ಪತ್ನಿ ಹಲೀಮಾ ಬೇಗಂ, ತಾಯಿ ಮತ್ತು ಮೂವರು ಮಕ್ಕಳನ್ನು ಭೇಟಿ ಮಾಡಲು ಮಾನ್ಸೂನ್ ತಿಂಗಳುಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಕ್ಕಳಾದ 17 ವರ್ಷದ ಶಾನ್ವರ್ ಶೇಖ್, 11 ವರ್ಷದ ಸಾದಿಕ್ ಶೇಖ್, 9 ವರ್ಷದ ಫರ್ಹಾನ್ ಶೇಖ್ ಎಲ್ಲರೂ ಶಾಲೆಯಲ್ಲಿ ಓದುತ್ತಿದ್ದಾರೆ.
"ನಾನು ಕಾಲೋಚಿತ ವಲಸಿಗನಲ್ಲ. ನಾನು 9-10 ತಿಂಗಳು ಕೇರಳದಲ್ಲಿರುತ್ತೇನೆ ಮತ್ತು ಮನೆಯಲ್ಲಿ [ಪಶ್ಚಿಮ ಬಂಗಾಳದಲ್ಲಿ] ಕೇವಲ ಎರಡು ತಿಂಗಳು ಮಾತ್ರ ಇರುತ್ತೇನೆ" ಎಂದು ಅವರು ಹೇಳುತ್ತಾರೆ. ಆದರೆ ಮನೆಯಿಂದ ದೂರವಿರುವಾಗ ಅವರಿಗೆ ತನ್ನವರ ನೆನಪು ಬಹಳವಾಗಿ ಕಾಡುತ್ತದೆ.
"ನಾನು ದಿನಕ್ಕೆ ಕನಿಷ್ಠ ಮೂರು ಬಾರಿ ಮನೆಗೆ ಫೋನ್ ಮಾಡುತ್ತೇನೆ" ಎಂದು ಹುಮಾಯೂನ್ ಹೇಳುತ್ತಾರೆ. ಅವರು ಮನೆಯ ಊಟದ ನೆನಪು ಸಹ ಕಾಡುತ್ತದೆ. "ಬಂಗಾಳದಲ್ಲಿರುವಂತೆ ಇಲ್ಲಿ ಆಹಾರವನ್ನು ತಯಾರಿಸಲು ನನಗೆ ಸಾಧ್ಯವಾಗುತ್ತಿಲ್ಲ, ಆದರೆ ಹೇಗೋ ದಿನ ದೂಡುತ್ತಿದ್ದೇನೆ" ಎಂದು ಅವರು ಹೇಳುತ್ತಾರೆ.
"ಸದ್ಯಕ್ಕೆ, ನಾನು ನಾಲ್ಕು ತಿಂಗಳಲ್ಲಿ [ಜೂನ್ನಲ್ಲಿ] ಮನೆಗೆ ಹೋಗಲು ಕಾಯುತ್ತಿದ್ದೇನೆ."
ಅನುವಾದ: ಶಂಕರ. ಎನ್. ಕೆಂಚನೂರು