ಸೋಮ ಕದಲಿಯವರ ಕುಟುಂಬವು ಮತ್ತೆ ಮತ್ತೆ ಫೋನ್ ಮಾಡಿ ಅವರ ಯೋಗಕ್ಷೇಮ ವಿಚಾರಿಸುತ್ತಲೇ ಇರತ್ತದೆ. 85 ವರ್ಷದ ಈ ಹಿರಿಯ ಕರೆ ಬಂದಾಗಲೆಲ್ಲ “ನಾನು ಸೌಖ್ಯವಾಗಿರುತ್ತೇನೆ” ಎಂದು ಭರವಸೆ ನೀಡುತ್ತಾರೆ.
ಅಕೋಲೆ (ಅಕೋಲಾ ಎಂದೂ ಕರೆಯಲಾಗುತ್ತದೆ) ತಾಲ್ಲೂಕಿನ ವಾರಂಗುಶಿ ಗ್ರಾಮದ ರೈತರಾಗಿರುವ ಅವರು ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಅಕೋಲೆಯಿಂದ ಲೋನಿವರೆಗೆ ರೈತರು ಮೂರು ದಿನಗಳ ಪ್ರತಿಭಟನಾ ನಡಿಗೆಯಲ್ಲಿ (ಏಪ್ರಿಲ್ 26-28) ಅವರು ಭಾಗವಹಿಸಿದ್ದಾರೆ. “ನನ್ನ ಇಡೀ ಆಯಸ್ಸನ್ನು ಹೊಲದಲ್ಲಿ ಕಳೆದಿದ್ದೇನೆ” ಎನ್ನುವ ಅವರು ಈ ವಯಸ್ಸಿನಲ್ಲಿ ತಾನು ಇಲ್ಲಿಗೆ ಬರಬೇಕಾಗಿ ಬಂದ ಅನಿವಾರ್ಯತೆಯ ಕುರಿತು ನಮ್ಮೊಡನೆ ಮಾತನಾಡಿದರು.
2.5 ಲಕ್ಷ ರೂ.ಗಳ ಸಾಲದ ಹೊರೆಯಿಂದ ಬಳಲುತ್ತಿರುವ ಅವರು ಹೇಳುತ್ತಾರೆ, “70 ವರ್ಷಗಳ ಕಾಲ ಅದನ್ನು ಮಾಡಿಯೂ ಅದರ [ಕೃಷಿಯ] ಬಗ್ಗೆ ನನಗೆ ಏನೂ ತಿಳಿದಿಲ್ಲವೆನ್ನುವುದು ನನಗೆ ತಿಳಿದಿರಲಿಲ್ಲ”. ಕದಲಿ ಮಹಾದೇವ್ ಅವರು ಕೋಲಿ ಆದಿವಾಸಿ ಸಮುದಾಯದ ಸದಸ್ಯ. ಊರಿನಲ್ಲಿ ಅವರಿಗೆ ಐದು ಎಕರೆ ಭೂಮಿಯಿದೆ. ಹವಾಮಾನ ಇಷ್ಟು ಅನಿರೀಕ್ಷಿತವಾಗಿರುವುದನ್ನು ನಾನು ಹಿಂದೆ ನೋಡಿಲ್ಲ.
“ನನಗೆ ಕೀಲು ನೋವಿನ ಸಮಸ್ಯೆಯಿದೆ. ನಡೆಯುವಾಗ ಮೊಣಕಾಲಿನಲ್ಲಿ ನೋವು ಬರುತ್ತದೆ. ಬೆಳಗ್ಗೆ ಏಳುವುದಕ್ಕೂ ಮನಸಾಗುವುದಿಲ್ಲ. ಆದರೂ ನಾನು ನಡೆಯುತ್ತಿದ್ದೇನೆ” ಎಂದು ಅವರು ಮುಂದುವರೆದು ಹೇಳುತ್ತಾರೆ.
ಅಕೋಲೆಯಿಂದ ಪ್ರಾರಂಭವಾಗುವ ಮೂರು ದಿನಗಳ ಪ್ರತಿಭಟನಾ ಮೆರವಣಿಗೆಯನ್ನು ಪ್ರಾರಂಭಿಸಲು ಏಪ್ರಿಲ್ 26, 2023ರಂದು ಸೇರಿದ್ದ ಅಂದಾಜು 8,000 ರೈತರಲ್ಲಿ ಕದಲಿ ಕೂಡ ಒಬ್ಬರು. ಮೆರವಣಿಗೆ ಸಂಗಮ್ನರ್ ಕಡೆಗೆ ಸಾಗುತ್ತಿದ್ದ ಹಾಗೆ ದೊಡ್ಡ ಸಂಖ್ಯೆಯ ರೈತರನ್ನು ಹೊತ್ತು ತಂದ ಟ್ರಕ್ ಮತ್ತು ಬಸ್ಸುಗಳು ಸ್ಥಳಕ್ಕೆ ಬರುತ್ತಲೇ ಇದ್ದವು. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಅಂದಾಜಿನ ಪ್ರಕಾರ, ಅದೇ ದಿನ ಸಂಜೆಯ ವೇಳೆಗೆ ಮೆರವಣಿಗೆ ಅಲ್ಲಿಗೆ ತಲುಪುವ ವೇಳೆಗೆ ಮೆರವಣಿಗೆಯಲ್ಲಿದ್ದವ ಸಂಖ್ಯೆ 15,000ಕ್ಕೆ ಏರಿದೆ.
ಎಐಕೆಎಸ್ ಅಧ್ಯಕ್ಷ ಡಾ.ಅಶೋಕ್ ಧವಳೆ ಮತ್ತು ಇತರ ಪದಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಂಜೆ 4 ಗಂಟೆಗೆ ಅಕೋಲೆಯಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯ ನಂತರ ಮೆರವಣಿಗೆಗೆ ಚಾಲನೆ ನೀಡಲಾಯಿತು. ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರು ಮೂರು ದಿನಗಳ ಕಾಲ ಒಗ್ಗಟ್ಟಿನಿಂದ ರೈತರೊಂದಿಗೆ ಇರಲಿದ್ದಾರೆ. ಖ್ಯಾತ ಅರ್ಥಶಾಸ್ತ್ರಜ್ಞ ಡಾ.ಆರ್.ರಾಮಕುಮಾರ್ ಮತ್ತು ಆಲ್ ಇಂಡಿಯಾ ಡೆಮಾಕ್ರಟಿಕ್ ವುಮೆನ್ಸ್ ಅಸೋಸಿಯೇಷನ್ (ಎಐಡಿಡಬ್ಲ್ಯೂಎ) ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಾಲೆ ಭಾಗವಹಿಸಲಿರುವ ಇತರ ಭಾಷಣಕಾರರು.
“ನಮಗೆ ಭರವಸೆಗಳನ್ನು ಕೇಳಿ ಸಾಕಾಗಿದೆ, ಈಗ ಅದರ ಈಡೇರಿಕೆ ಬೇಕು” ಎನ್ನುತ್ತಾರೆ ಎಐಕೆಎಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ. ಈ ಪ್ರತಿಭಟನೆಗಳಲ್ಲಿ ಹೆಚ್ಚಿನವುಗಳನ್ನು ಈ ಸಂಘಟನೆಯೇ ಆಯೋಜಿಸಿದೆ.
ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರ ನಿವಾಸದೆದುರು ಏಪ್ರಿಲ್ 28ರಂದು ಮೆರವಣಿಗೆ ಕೊನೆಗೊಳ್ಳಲಿದೆ. ತಾಪಮಾನವು 39 ಡಿಗ್ರಿ ಸೆಲ್ಸಿಯಸ್ ಸಮೀಪಿಸುತ್ತಿರುವುದರಿಂದ ಹಲವಾರು ಹಿರಿಯ ನಾಗರಿಕರು ಸುಡುವ ಬಿಸಿಲಿನ ನಡುವೆಯೂ ಭಾಗವಹಿಸಲು ನಿರ್ಧರಿಸಿದ್ದಾರೆ ಎಂಬ ಅಂಶದಲ್ಲಿ ರೈತರಲ್ಲಿ ಸ್ಪಷ್ಟವಾದ ಹತಾಶೆ ಮತ್ತು ಕೋಪ ಸ್ಪಷ್ಟವಾಗಿ ಗೋಚರಿಸುತ್ತದೆ.
'ನಮಗೆ ಭರವಸೆಗಳನ್ನು ಕೇಳಿ ಸಾಕಾಗಿದೆ, ಈಗ ಅದರ ಈಡೇರಿಕೆ ಬೇಕು' ಎನ್ನುತ್ತಾರೆ ಎಐಕೆಎಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಅಜಿತ್ ನವಲೆ. ಈ ಪ್ರತಿಭಟನೆಗಳಲ್ಲಿ ಹೆಚ್ಚಿನವುಗಳನ್ನು ಈ ಸಂಘಟನೆಯೇ ಆಯೋಜಿಸಿದೆ
ಕಂದಾಯ ಸಚಿವರ ನಿವಾಸದ ಕಡೆಗೆ ಸಾವಿರಾರು ರೈತರು ಉತ್ಸಾಹದಿಂದ ಮೆರವಣಿಗೆ ನಡೆಸುತ್ತಿರುವ ದೃಶ್ಯವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ. ಪ್ರಸ್ತುತ ಸರ್ಕಾರದ ಮೂವರು ಸಚಿವರು - ಕಂದಾಯ, ಬುಡಕಟ್ಟು ವ್ಯವಹಾರಗಳು ಮತ್ತು ಕಾರ್ಮಿಕ - ಬೇಡಿಕೆಗಳ ಬಗ್ಗೆ ಮಾತುಕತೆ ನಡೆಸಲು ಸ್ಥಳಕ್ಕೆ ಆಗಮಿಸುವ ನಿರೀಕ್ಷೆಯಿದೆ.
ಆದರೆ ಭಾರತಿ ಮಾಂಗಾ ಅವರಂತಹ ಅನೇಕರನ್ನು ಸುಲಭವಾಗಿ ಸಮಾಧಾನಪಡಿಸಲು ಸಾಧ್ಯವಿಲ್ಲ. "ಇದು ನಮ್ಮ ಹಕ್ಕುಗಳಿಗಾಗಿ. ಇದು ನಮ್ಮ ಮೊಮ್ಮಕ್ಕಳಿಗಾಗಿ" ಎಂದು ರೈತರ ಮೆರವಣಿಗೆಯಲ್ಲಿ ಭಾಗವಹಿಸಲು ಪಾಲ್ಘರ್ ಜಿಲ್ಲೆಯ ತನ್ನ ಗ್ರಾಮ ಇಬಾದ್ಪಾಡಾದಿಂದ 200 ಕಿಲೋಮೀಟರ್ ಪ್ರಯಾಣಿಸಿರುವ ಎಪ್ಪತ್ತರ ಹರೆಯದ ರೈತ ಮಹಿಳೆ ಹೇಳುತ್ತಾರೆ.
ಮಂಗಾ ಅವರ ಕುಟುಂಬವು ವಾರ್ಲಿ ಸಮುದಾಯಕ್ಕೆ ಸೇರಿದ್ದು, ತಲೆಮಾರುಗಳಿಂದ ಎರಡು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದಾರೆ. ಆದರೆ ಭೂಮಿಯನ್ನು ಅರಣ್ಯ ಭೂಮಿ ಎಂದು ವರ್ಗೀಕರಿಸಲಾಗಿದೆ ಮತ್ತು ಅವರಿಗೆ ಅದರ ಮೇಲೆ ಯಾವುದೇ ಹಕ್ಕುಗಳಿಲ್ಲ. "ನಾನು ಸಾಯುವ ಮೊದಲು, ನನ್ನ ಕುಟುಂಬವನ್ನು ಭೂಮಿಯ ಮಾಲೀಕರನ್ನಾಗಿ ನೋಡಲು ನಾನು ಬಯಸುತ್ತೇನೆ" ಎಂದು ಅವರು ಹೇಳುತ್ತಾರೆ.
ಈ ಮೂರು ದಿನಗಳಿಗಾಗಿ ತಾನು ಎಷ್ಟು ರೊಟ್ಟಿ ತಂದಿದ್ದೇನೆ ಎನ್ನುವುದು ಅವರಿಗೆ ತಿಳಿದಿಲ್ಲ” “ನಾನು ಗಡಿಬಿಡಿಯಲ್ಲಿ ಒಂದಷ್ಟು ಕಟ್ಟಿಕೊಂಡೊ ಬಂದೆ” ಎನ್ನುತ್ತಾರವರು. ಅವರಿಗೆ ತಿಳಿದಿದ್ದ ವಿಷಯವೆಂದರೆ ರೈತರು ತಮ್ಮ ಹಕ್ಕುಗಳಿಗಾಗಿ ಮತ್ತೆ ಮೆರವಣಿಗೆ ಹೊರಡಲಿದ್ದಾರೆ ಎನ್ನುವುದು.
ಇಲ್ಲಿ ನೆರೆದಿರುವ ಸಾವಿರಾರು ರೈತರ ಬೇಡಿಕೆಗಳು ಹೊಸದೇನಲ್ಲ. ನಾಸಿಕ್ನಿಂದ ಮುಂಬಯಿಗೆ 2018ರಲ್ಲಿ ರೈತರು ಅದರಲ್ಲೂ ಹೆಚ್ಚಾಗಿ ಆದಿವಾಸಿಗಳು ನಡೆಸಿದ್ದ ದೀರ್ಘ ಮೆರವಣಿಗೆ ನಡೆಸಿದ್ದರು. ಅದರಲ್ಲೂ ಇದೇ ಬೇಡಿಕೆಗಳನ್ನು ಇರಿಸಲಾಗಿತ್ತು. ಅಂದು 180 ಕಿಲೋಮೀಟರ್ ದೂರದ ಮೆರವಣಿಗೆಯನ್ನು ನಡೆಸಲಾಗಿತ್ತು. ಅಂದಿನಿಂದಲೂ ರೈತರು ಸರ್ಕಾರದೊಂದಿಗೆ ನಿರಂತರ ಹೋರಾಟದಲ್ಲಿದ್ದಾರೆ. (ಓದಿ: ಮೆರವಣಿಗೆ ಮುಂದುವರಿಯುತ್ತದೆ...)
ಹೆಚ್ಚುತ್ತಿರುವ ಒಳಸುರಿ ವೆಚ್ಚಗಳು, ಕುಸಿಯುತ್ತಿರುವ ಬೆಳೆ ಬೆಲೆಗಳು ಮತ್ತು ಹವಾಮಾನ ಬದಲಾವಣೆಯ ಮಾರಕ ಹೊಡೆತದಿಂದಾಗಿ ಬೆಳೆದು ನಿಂತಿರುವ ಬೆಳೆ ಸಾಲವನ್ನು ಮನ್ನಾ ಮಾಡಬೇಕೆನ್ನುವುದು ರೈತರ ಬೇಡಿಕೆ. ಬೆಳೆ ಕೊಯ್ಲಿನ ನಂತರವೂ ರೈತರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಎರಡು ಮುಂಗಾರಿನ ಅವಧಿಯಲ್ಲಿ ವಿಪರೀತ ಮಳೆ ಸುರಿದು ಬೆಳೆ ನಷ್ಟ ಉಂಟಾಗಿದ್ದು ಅದರ ನಷ್ಟವನ್ನು ಭರಿಸಲು ಪರಿಹಾರ ಕೊಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ. ರಾಜ್ಯ ಸರ್ಕಾರವೂ ಪರಿಹಾರ ನೀಡುವುದಾಗಿ ಹೇಳಿತ್ತು ಆದರೆ ಆ ಬಗ್ಗೆ ಅದು ಕ್ರಮ ಕೈಗೊಳ್ಳಲೇ ಇಲ್ಲ.
ಮಹಾರಾಷ್ಟ್ರದ ಬುಡಕಟ್ಟು ಜಿಲ್ಲೆಗಳಲ್ಲಿ, ಆದಿವಾಸಿ ರೈತರು ಮಹತ್ವಾಕಾಂಕ್ಷೆಯ ಅರಣ್ಯ ಹಕ್ಕುಗಳ ಕಾಯ್ದೆ (ಎಫ್ಆರ್ಎ), 2006 ಅನ್ನು ಉತ್ತಮವಾಗಿ ಜಾರಿಗೆ ತರಬೇಕೆಂದು ವರ್ಷಗಳಿಂದ ಒತ್ತಾಯಿಸುತ್ತಿದ್ದಾರೆ.
ಕೊವಿಡ್ ನಂತರ ಹಾಲನ್ನು 17 ರೂಪಾಯಿಗಳಿಗೆ ಒಂಧು ಲೀಟರಿನಂತೆ ನೀಡಬೇಕಾಗಿ ಬಂದ ಕಾರಣ ಆದ ನಷ್ಟವನ್ನು ತುಂಬಿಕೊಡಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಕೃಷಿ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ಒಂದು ಕಾಲದಲ್ಲಿ ರೈತರಾಗಿದ್ದ ಅಕೋಲೆ ತಾಲೂಕಿನ ಶೆಲ್ವಿರೆಯ ಗುಲ್ಚಂದ್ ಜಾಂಗ್ಲೆ ಮತ್ತು ಅವರ ಪತ್ನಿ ಕೌಸಾ ಬಾಯಿ ಜಾಂಗ್ಲೆ ತಮ್ಮ ಭೂಮಿಯನ್ನು ಮಾರಬೇಕಾಗಿ ಬಂತು. ಪ್ರಸ್ತುತ 70ರ ವಯಸ್ಸಿನವರಾದ ದಂಪತಿಗಳು ಈಗ ದಿನಗೂಲಿ ರೈತ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಗನನ್ನು ಕೃಷಿ ಕೆಲಸದಿಂದ ಹೊರಗಿಟ್ಟಿದ್ದು, “ಅವನು ಪುಣೆಯಲ್ಲಿ ಕೂಲಿ ಕೆಲಸ ಮಾಡುತ್ತಾನೆ” ಎಂದು ಜಾಂಗ್ಲೆ ಪರಿಗೆ ಹೇಳಿದರು. “ಅವನಿಗೆ ಕೃಷಿ ಮಾಡದಂತೆ ತಿಳಿಸಿದೆವು, ಇದರಲ್ಲಿ ಭವಿಷ್ಯವಿಲ್ಲ.”
ಭೂಮಿ ಮಾರಿದ ಜಾಂಗ್ಲೆ ದಂಪತಿ ಈಗ ಎಮ್ಮೆಗಳನ್ನು ಸಾಕುತ್ತಿದ್ದಾರೆ. ಅದರಿಂದ ಸಿಗುವ ಹಾಲನ್ನು ಮಾರುತ್ತಾರೆ. ಕೋವಿಡ್ -19 ಪ್ರಾರಂಭವಾದಾಗಿನಿಂದ ಅದನ್ನು ಉಳಿಸಿಕೊಳ್ಳುವುದು ಕಷ್ಟಕರವಾಗಿದೆ" ಎಂದು ಅವರು ಹೇಳುತ್ತಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಲೇಬೇಕೆಂದು ತೀರ್ಮಾನಿಸಿದ ಅವರು “ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವ ಸಲುವಾಗಿ ನಾನು ಮೂರು ದಿನಗಳ ಕೂಲಿ ಬಿಟ್ಟು ಬಂದಿದ್ದೇನೆ. ಈ ವಯಸ್ಸಿನಲ್ಲಿ ಮೂರು ದಿನಗಳ ಕಾಲ ನಡೆದರೆ ಹೋದ ಕೂಡಲೇ ಕೆಲಸ ಮಾಡಲು ಸಾಧ್ಯವಿಲ್ಲ. ಮತ್ತೆ ಎರಡು ದಿನ ರಜಾ ಮಾಡಬೇಕು. ಒಟ್ಟಿನಲ್ಲಿ ಐದು ದಿನಗಳ ಕೂಲಿ ಹೋಯಿತು ಎಂದುಕೊಳ್ಳಿ.”
ಆದರೆ ಇಲ್ಲಿ ನೆರೆದಿರುವ ಸಾವಿರಾರು ಜನರ ದನಿಯಂತೆ ತನ್ನ ದನಿಯೂ ಸರಕಾರವನ್ನು ಮುಟ್ಟಬೇಕೆಂದು ಅವರು ಬಯಸುತ್ತಾರೆ. “ಸಾವಿರಾರು ಜನರು ಒಗ್ಗಟ್ಟಾಗಿ ಮೆರವಣಿಗೆ ಹೊರಡುವುದನ್ನು ನೋಡುವಾಗ ನಿಮಗೆ ನಿಮ್ಮ ಕುರಿತು ಹೆಮ್ಮೆಯೆನ್ನಿಸುತ್ತದೆ. ಇದು ನಮ್ಮಲ್ಲಿ ಒಂದು ವಿಶ್ವಾಸ ಮತ್ತು ನಂಬಿಕೆಯನ್ನು ಹುಟ್ಟಿಸುತ್ತದೆ. ಅಂತಹ ಭಾವವನ್ನು ನಾವು ಅನುಭವಿಸುವುದು ಬಹಳ ಅಪರೂಪ.”
ವರದಿಯ ನಂತರದ ಬೆಳವಣಿಗೆ:
ಮೆರವಣಿಗೆಯ ಎರಡನೇ ದಿನವಾದ ಏಪ್ರಿಲ್ 27, 2023ರಂದು, ಮಹಾರಾಷ್ಟ್ರ ಸರ್ಕಾರವು ಮೂರು ಕ್ಯಾಬಿನೆಟ್ ಮಂತ್ರಿಗಳಾದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್, ಕಾರ್ಮಿಕ ಸಚಿವ ಸುರೇಶ್ ಖಾಡೆ ಮತ್ತು ಬುಡಕಟ್ಟು ಅಭಿವೃದ್ಧಿ ಸಚಿವ ವಿಜಯಕುಮಾರ್ ಗಾವಿತ್ ಅವರನ್ನು ಸಂಗಮನೇರ್ನಲ್ಲಿ ರೈತ ಮುಖಂಡರನ್ನು ಭೇಟಿ ಮಾಡಿ ಅವರ ಬೇಡಿಕೆಗಳ ಕುರಿತು ಸುದೀರ್ಘವಾಗಿ ಚರ್ಚಿಸಲು ಕಳುಹಿಸಿತು.
15,000 ಪ್ರಮುಖವಾಗಿ ಆದಿವಾಸಿ ರೈತರು ಲೋಣಿಯಲ್ಲಿರುವ ಕಂದಾಯ ಸಚಿವರ ನಿವಾಸದ ಕಡೆಗೆ ಮೆರವಣಿಗೆ ನಡೆಸುತ್ತಿದ್ದರಿಂದ, ಅವರು ಮೂರು ಗಂಟೆಗಳಲ್ಲಿ ಬಹುತೇಕ ಎಲ್ಲಾ ಬೇಡಿಕೆಗಳನ್ನು ಇತ್ಯರ್ಥಗೊಳಿಸಿದರು. ಈ ಸಾಧನೆಯೊಂದಿಗೆ, ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಮತ್ತು ಇತರರು ಪ್ರತಿಭಟನಾ ಮೆರವಣಿಗೆ ಪ್ರಾರಂಭವಾದ ಒಂದು ದಿನದ ನಂತರ ಹಿಂತೆಗೆದುಕೊಂಡರು.
ಅನುವಾದ: ಶಂಕರ. ಎನ್. ಕೆಂಚನೂರು