ಗುಡಪುರಿ ಬಾಲರಾಜು, ತಮ್ಮ ಆಟೋರಿಕ್ಷಾದ ಹಿಂದಿನ ಸೀಟನ್ನು ತೆಗೆದು, ಸುಮಾರು 600 ಕೆ.ಜಿ. ಕಲ್ಲಂಗಡಿ ಹಣ್ಣನ್ನು ತುಂಬಿಸಿದರು. ತಮ್ಮ ಸ್ವಂತ ಹಳ್ಳಿಯಾದ ವೆಂಪಹದ್ನಿಂದ ಸುಮಾರು 30 ಕಿ. ಮೀ. ದೂರದ ವೆಲ್ಲಿದಂಡುಪಡು ಪಾಳ್ಯದ ಕೊಪ್ಪೊಲೆ ಹಳ್ಳಿಯ ರೈತನೊಬ್ಬನಿಂದ ಇದೀಗ ಅವರು ಈ ಹಣ್ಣನ್ನು ಖರೀದಿಸಿದ್ದಾರೆ.
ನಲ್ಗೊಂಡ ಜಿಲ್ಲೆಯ ನಿಡಮನುರ್ ಮಂಡಲ್ನ ಅನೇಕ ಹಳ್ಳಿಗಳಲ್ಲಿ ತಮ್ಮ ವಾಹನವನ್ನು ಚಲಾಯಿಸುತ್ತಾ, 1ರಿಂದ 3 ಕೆ.ಜಿ. ತೂಕದ ಕೆಲವು ಹಣ್ಣುಗಳನ್ನು ತಲಾ 10 ರೂ.ಗಳಿಗೆ ಅವರು ಮಾರುತ್ತಾರೆ. ಹಣ್ಣುಗಳ ಮಾರಾಟವಿಲ್ಲದಾಗ, ವಾಹನದಲ್ಲಿ, ಪ್ರಯಾಣಿಕರನ್ನು ಕರೆದೊಯ್ಯುವ ಅವರಿಗೆ ಅಂದು ಮಾರಾಟವು ದುಸ್ಸಾಹಸವೆನಿಸತೊಡಗಿತು. ಹಳ್ಳಿಗರಿಗೆ ಇವರು ಹಳ್ಳಿಗೆ ಬರುವುದು ಬೇಡವಾಗಿತ್ತು. “ಕೆಲವರು ಇದನ್ನು ಕೊರೊನಾ ಕಾಯ (ಕಾಯಿ) ಎಂದು ಕರೆಯುತ್ತಿದ್ದು, ಇಲ್ಲಿಗೆ ಬರಬೇಡಿ. ಹಣ್ಣುಗಳೊಂದಿಗೆ ವೈರಸ್ ಕೂಡ ತರುತ್ತೀರಿ” ಎನ್ನುತ್ತಿದ್ದರೆಂಬುದಾಗಿ 29ರ ವಯಸ್ಸಿನ ಬಾಲರಾಜು ನಮಗೆ ತಿಳಿಸಿದರು.
ಮಾರ್ಚ್ 23ರ ನಂತರ, ತೆಲಂಗಾಣದಲ್ಲಿ ಕೋವಿಡ್-19 ಲಾಕ್ಡೌನ್ ಆರಂಭಗೊಂಡ ತರುವಾಯ, ಹಣ್ಣುಗಳ ಮಾರಾಟದಿಂದ ಇವರ ದಿನಂಪ್ರತಿ ಸಂಪಾದನೆ ಕೇವಲ 600 ರೂ.ಗಳು. ಲಾಕ್ಡೌನ್ಗಿಂತ ಮೊದಲು, ಹಣ್ಣಿನ ಕಟಾವಿನ ಸಮಯದ ಕೆಲವು ವಾರಗಳಲ್ಲಿ ಇವರು, ದಿನಂಪ್ರತಿ ಸುಮಾರು 1,500 ರೂ.ಗಳನ್ನು ಗಳಿಸುತ್ತಿದ್ದರು. ಸಾಮಾನ್ಯವಾಗಿ ಇಲ್ಲಿ, ಜನವರಿ ತಿಂಗಳ ಆರಂಭದಲ್ಲಿ ಕಲ್ಲಂಗಡಿ ಕೃಷಿಯು ಆರಂಭಗೊಂಡು, ಎರಡು ತಿಂಗಳ ತರುವಾಯ ಅದರ ಫಸಲನ್ನು ಪಡೆಯಲಾಗುತ್ತದೆ.
ಮಾರಾಟದಲ್ಲಿನ ಇಳಿಕೆ ಹಾಗೂ ಜನರ ಟೀಕೆಗಳಿಂದಾಗಿ, ಏಪ್ರಿಲ್ 1ರಂದು ಕೊಂಡು ತಂದ ಕಲ್ಲಂಗಡಿ ಹಣ್ಣುಗಳ ಮಾರಾಟವನ್ನು ನಿರ್ವಹಿಸಿದ ನಂತರ, ಹೊರಗೆ ಹೋಗಲು ಇಚ್ಛಿಸಲಿಲ್ಲವೆಂಬುದಾಗಿ ಬಾಲರಾಜು ತಿಳಿಸಿದರು. ಇವರಂತೆಯೇ, ಕಲ್ಲಂಗಡಿ ಹಣ್ಣಿನ ಕೃಷಿ ಹಾಗೂ ಮಾರಾಟದಲ್ಲಿ ತೊಡಗಿದ ಅನೇಕ ರೈತರು, ಕೂಲಿಕಾರರು ಮತ್ತು ವ್ಯಾಪಾರಿಗಳು ಕೋವಿಡ್-19 ಸಂಕಷ್ಟದಿಂದಾಗಿ ತೊಂದರೆಗೀಡಾಗಿದ್ದಾರೆ.
ಹಣ್ಣುಗಳನ್ನು ಕಿತ್ತು, ಟ್ರಕ್ಗಳಿಗೆ ತುಂಬುವ ಕೂಲಿಕಾರರಲ್ಲಿ ಬಹುತೇಕರು ಮಹಿಳೆಯರಾಗಿದ್ದು, ದಿನಗೂಲಿಯನ್ನು ಅವಲಂಬಿಸಿದ್ದಾರೆ. 10 ಟನ್ಗಳ ಟ್ರಕ್ಗೆ ಸರಕನ್ನು ತುಂಬಿಸುವ 7-8 ಮಹಿಳೆಯರು, 4 ಸಾವಿರ ರೂ.ಗಳ ತತ್ಸಂಬಂಧಿತ ಸಂಪಾದನೆಯನ್ನು ಸಮನಾಗಿ ಹಂಚಿಕೊಳ್ಳುತ್ತಾರೆ. ಬಹುಪಾಲು ದಿನಗಳಲ್ಲಿ, ಒಂದು ಗುಂಪು, ಎರಡು ಟ್ರಕ್ಗಳ ಸರಕನ್ನು, ಕೆಲವೊಮ್ಮೆ ಮೂರು ಟ್ರಕ್ಗಳನ್ನು ತುಂಬಿಸುತ್ತದೆ. ಆದಾಗ್ಯೂ, ಲಾಕ್ಡೌನ್ ನಂತರದಲ್ಲಿ, ತೆಲಂಗಾಣದ ನಗರಗಳಿಗೆ ಹಣ್ಣನ್ನು ಸಾಗಿಸುವ ಟ್ರಕ್ಗಳ ಸಂಖ್ಯೆ ಕುಸಿದಿರುವ ಕಾರಣ, ಇವರ ಕೂಲಿಯೂ ಕಡಿಮೆಯಾಗಿದೆ.
ಮಾರ್ಚ್ 29ರಂದು, ಕಲ್ಲಂಗಡಿ ಹಣ್ಣುಗಳ ಕೇವಲ 50 ಟ್ರಕ್ಗಳು ಪೂರ್ವ ಹೈದರಾಬಾದಿನ ಕೊತ್ತಪೇಟ್ ಮಾರುಕಟ್ಟೆಯನ್ನು ತಲುಪಿದವೆಂದು ಸ್ಥಳೀಯ ವರದಿಗಳು ತಿಳಿಸುತ್ತವೆ. ಮಿರ್ಯಲಗುಡ ಊರಿನ ವ್ಯಾಪಾರಿಯಾದ ಮಧು ಕುಮಾರ್ ಅವರ ಅಂದಾಜಿನಂತೆ, ಲಾಕ್ಡೌನ್ಗಿಂತಲೂ ಮೊದಲು, ಕಲ್ಲಂಗಡಿ ಕೊಯ್ಲಿನ ಸಮಯದಲ್ಲಿ, ತೆಲಂಗಾಣದ ವಿವಿಧ ಜಿಲ್ಲೆಗಳಿಂದ ಅದರಲ್ಲೂ ಮುಖ್ಯವಾಗಿ, ನಲ್ಗೊಂಡ ಮತ್ತು ಮಹಬೂಬ್ ನಗರದಿಂದ ದಿನಂಪ್ರತಿ 500-600 ಟ್ರಕ್ಗಳು ಕೊತ್ತಪೇಟ್ಗೆ ಬರುತ್ತಿದ್ದವು. ಪ್ರತಿಯೊಂದು ಟ್ರಕ್, ಸುಮಾರು 10 ಟನ್ಗಳಷ್ಟು ಕಲ್ಲಂಗಡಿ ಹಣ್ಣುಗಳನ್ನು ತರುತ್ತಿತ್ತು. "ಅನೇಕ ಟ್ರಕ್ಗಳು ಚೆನ್ನೈ, ಬೆಂಗಳೂರು ಮತ್ತು ದೆಹಲಿಗೂ ಹೋಗುತ್ತಿದ್ದವು” ಎಂಬುದಾಗಿ, ನಗರಗಳಲ್ಲಿನ ಸಗಟು ವ್ಯಾಪಾರಿಗಳಿಗೆ ಈ ಹಣ್ಣುಗಳನ್ನು ಮಾರುವ ಕುಮಾರ್ ತಿಳಿಸುತ್ತಾರೆ.
ಲಾಕ್ಡೌನ್ ಜೊತೆಗೆ, ಕಲ್ಲಂಗಡಿ ಹಣ್ಣುಗಳ ಸಗಟು ದರವೂ ಕುಸಿಯಿತು. ಲಾಕ್ಡೌನ್ಗಿಂತ ಮೊದಲು ಪ್ರತಿ ಟನ್ಗೆ, 6,000-7,000 ರೂ.ಗಳ ಬೆಲೆಯಿದ್ದು, ಮಾರ್ಚ್ 27ರ ಹೊತ್ತಿಗೆ, ನಲ್ಗೊಂಡದ ಗುರ್ರುಮ್ಪೊಡೆ ಮಂಡಲ್ನ ಕೊಪ್ಪೊಲೆ ಹಳ್ಳಿಯ ಬುಡ್ಡರೆಡ್ಡಿ ಗುಡ ಕೊಪ್ಪಲಿನ ಬೊಲ್ಲಂ ಯಡಯ್ಯ ಎಂಬ ರೈತರಿಗೆ ಪ್ರತಿ ಟನ್ಗೆ 3 ಸಾವಿರ ರೂ.ಗಳ ಪ್ರಸ್ತಾಪವನ್ನಿಟ್ಟ ಕುಮಾರ್. ಅದೇ ಬೆಲೆಗೆ ಅವರ ಹೊಲದಿಂದ ಎರಡು ಟ್ರಕ್ ಹಣ್ಣುಗಳನ್ನು ಕೊಂಡು, ಮಿರ್ಯಲಗುಡದ ಹಣ್ಣಿನ ವ್ಯಾಪಾರಿಗೆ ಕಳುಹಿಸಿದರು.
ರಾಜ್ಯದಲ್ಲಿನ ಕಲ್ಲಂಗಡಿ ಬೆಳೆಗಾರರು ಈಗಾಗಲೇ ಅನುಭವಿಸುತ್ತಿದ್ದ ಅಪಾರ ನಷ್ಟವನ್ನು ಈ ಲಾಕ್ಡೌನ್ ದೆಸೆಯಿಂದಾಗಿ ಒದಗಿದ ಸಂಕಷ್ಟಗಳು ಮತ್ತಷ್ಟು ದುರ್ಭರಗೊಳಿಸಿದವು. ನಲ್ಗೊಂಡ ಜಿಲ್ಲೆಯ ಕಂಗಲ್ ಮಂಡಲ್ನ ತುರ್ಕ ಪಲ್ಲೆ ಹಳ್ಳಿಯ 25ರ ವಯಸ್ಸಿನ ಬೈರು ಗಣೇಶ್ ಕೂಡ ಈ ಸಂಕಷ್ಟಕ್ಕೀಡಾದವಲ್ಲಿ ಒಬ್ಬರು.
ಗಣೇಶ್ ಅವರು ಬೆಳೆಯುವ ಕಲ್ಲಂಗಡಿ ಹಣ್ಣು, ಹೆಚ್ಚು ಬಂಡವಾಳವನ್ನು ಬಯಸುವ ಮಿಶ್ರ ತಳಿಯಾಗಿದ್ದು, ವಾತಾವರಣ ಹಾಗೂ ಹಾನಿಕಾರಕ ಕೀಟಗಳಿಗೆ ಅತ್ಯಂತ ಸಂವೇದನಾಶೀಲವೆನಿಸಿದೆ. ಪ್ರತಿ ಎಕರೆಯ ಬೀಜಗಳು, ಗೊಬ್ಬರಗಳು, ಕ್ರಿಮಿನಾಶಕಗಳು, ಉಳುಮೆ, ಕಳೆ ತೆಗೆಯುವುದು, ಹಸಿಗೊಬ್ಬರ ಮುಂತಾದವುಗಳ ವೆಚ್ಚ ಸುಮಾರು 50 ಸಾವಿರದಿಂದ 60 ಸಾವಿರಗಳು. 2019ರ ಬೇಸಿಗೆಯಲ್ಲಿ, ಟನ್ಗೆ 10 ಸಾವಿರ ರೂ.ಗಳಂತೆ ಮರಾಟಮಾಡಿದ ಗಣೇಶ್, ಸುಮಾರು 150,000 ರೂ.ಗಳ ಲಾಭವನ್ನು ಗಳಿಸಿದ್ದರು.
ಗಣೇಶ್ ಅವರು ಈ ವರ್ಷವೂ ಅದೇ ಲಾಭವನ್ನು ನಿರೀಕ್ಷಿಸಿ, ಮಾರ್ಚ್ ಮತ್ತು ಜೂನ್ ತಿಂಗಳ ಮೂರು ಹಂತಗಳಲ್ಲಿ ಹಣ್ಣುಗಳನ್ನು ಬೆಳೆಯಲು 9 ಎಕರೆಯನ್ನು ಗುತ್ತಿಗೆ ನೀಡಿದ್ದರು. ಸಾಮಾನ್ಯವಾಗಿ, ಒಂದು ಎಕರೆಯು ಸುಮಾರು 15 ಟನ್ ಕಲ್ಲಂಗಡಿಯ ಫಸಲನ್ನು ನೀಡುತ್ತದೆ. ಇದರಲ್ಲಿ ಸರಾಸರಿ 10 ಟನ್ಗಳು ಆಕಾರ, ಗಾತ್ರ ಮತ್ತು ತೂಕದಲ್ಲಿ ಪರಿಪೂರ್ಣವಾಗಿದ್ದು, ಯಾವುದೇ ಗೀರುಗಳಿಲ್ಲದೆ, ನಯವಾಗಿರುತ್ತವೆ. ಇವನ್ನು ಮಧು ಕುಮಾರ್ನಂತಹ ವರ್ತಕರು ದೊಡ್ಡ ಪಟ್ಟಣಗಳಿಗೆ ಕಳುಹಿಸುತ್ತಾರೆ. ಹಣ್ಣುಗಳ ಅರೆಕಾಲಿಕ ಮಾರಾಟಗಾರರಾದ ಬಾಲರಾಜು (ತಮ್ಮ ಆಟೋರಿಕ್ಷದಲ್ಲಿ ಕೊಂಡೊಯ್ಯುವ) ಅವರಂತಹವರು, ‘ಉಳಿಕೆಗಳನ್ನು’ ರೈತರಿಂದ ರಿಯಾಯಿತಿ ದರದಲ್ಲಿ ಖರೀದಿಸಿ, ಚಿಕ್ಕ ಪಟ್ಟಣಗಳು ಹಾಗೂ ಹಳ್ಳಿಗಳಲ್ಲಿ ಮಾರುತ್ತಾರೆ.
ಕಲ್ಲಂಗಡಿ ಹಣ್ಣಿನ ಕೃಷಿಯನ್ನು ಅದೇ ನೆಲದಲ್ಲಿ ಎರಡನೇ ಬಾರಿಗೆ ಅನುಕ್ರಮಿಕವಾಗಿ ಕೈಗೊಂಡಲ್ಲಿ, ಸರಾಸರಿ ಫಸಲಿನ ಪ್ರಮಾಣವು 7 ಟನ್ಗಳಷ್ಟು ಕಡಿಮೆಯಾಗುತ್ತದೆ. ಮೂರನೇ ಬೆಳೆಯನ್ನು ಬೆಳೆದಲ್ಲಿ, ಇಳುವರಿಯು ಮತ್ತಷ್ಟು ಕಡಿಮೆಯಾಗುತ್ತದೆ. ಬಿತ್ತನೆಯ 60ರಿಂದ 65 ದಿನಗಳಲ್ಲಿ, ಫಸಲನ್ನು ಕಟಾವುಮಾಡದಿದ್ದಲ್ಲಿ, ಇಡೀ ಫಸಲು ಅತಿಯಾಗಿ ಪಕ್ವಗೊಳ್ಳುತ್ತದೆ. ಕೀಟನಾಶಕ ಅಥವಾ ಗೊಬ್ಬರಗಳನ್ನು ಸರಿಯಾದ ಸಮಯಕ್ಕೆ ಬಳಸದಿದ್ದಲ್ಲಿ ಹಾಗೂ ಪುನರಾವರ್ತಿಸದಿದ್ದಲ್ಲಿ, ಹಣ್ಣಿನ ಆಕಾರ, ಗಾತ್ರ ಮತ್ತು ತೂಕವು ಪರಿಪೂರ್ಣ ಮಟ್ಟದಲ್ಲಿರುವುದಿಲ್ಲ.
ಈ ಕೀಟನಾಶಕಗಳು ಮತ್ತು ಗೊಬ್ಬರಗಳ ಸಂಪೂರ್ಣ ಹಣವನ್ನು ರೈತನು ನಗದು ರೂಪದಲ್ಲಿ ಪಾವತಿಸಿದರಷ್ಟೇ ಅವನ್ನು ಕೊಳ್ಳಲು ಸಾಧ್ಯ. “ಕಲ್ಲಂಗಡಿ ಹಣ್ಣುಗಳಿಗಾಗಿ ಯಾರೂ ಇವನ್ನು ಸಾಲವಾಗಿ ಕೊಡುವುದಿಲ್ಲ. ಮೂಸಂಬಿ ಹಾಗೂ ಭತ್ತಕ್ಕಾದರೆ ಸಾಲವು ದೊರೆಯುತ್ತದೆ. ಅವರಿಗೆ ಇದರ ಅನಿಶ್ಚಿತತೆಯ ಅರಿವಿದೆ” ಎಂಬುದಾಗಿ 2019ರಲ್ಲಿ, ತುರ್ಕ ಪಲ್ಲೆ ಹಳ್ಳಿಯಲ್ಲಿ ಕಲ್ಲಂಗಡಿ ಕೃಷಿಯನ್ನು ಪ್ರಾರಂಭಿಸಿದ ಚಿಂತಲ ಯಡಮ್ಮ ಎಂಬುವವರು ತಿಳಿಯಪಡಿಸಿದರು. “ಹೆಚ್ಚಿನ ಬಡ್ಡಿಗೆ ಸಾಲವನ್ನು ನೀಡುವ ಖಾಸಗಿ ಸಾಲದಾತರನ್ನು ಉಲ್ಲೇಖಿಸಿದ ಆಕೆ, ಬೇರೆಡೆಯಿಂದ ಹಣವನ್ನು ತರುವುದು ಸುಲಭವೆಂದರು.”
ಕಲ್ಲಂಗಡಿಯ ಕೃಷಿಯಲ್ಲಿನ ಹೆಚ್ಚಳದಿಂದಾಗಿ, ಲಾಕ್ಡೌನ್ಗಿಂತಲೂ ಮೊದಲು, ಬೆಲೆಗಳು ಅದಾಗಲೇ ಕುಸಿಯುತ್ತಿದ್ದವೆಂಬುದಾಗಿ ಇಲ್ಲಿನ ರೈತರು ತಿಳಿಸಿದರು. ಅತಿಯಾದ ಪೂರೈಕೆಯಿಂದಾಗಿ, ಚೌಕಾಸಿಗೆಳೆಸಬಲ್ಲ ವ್ಯಾಪಾರಿಗಳು ಬೆಲೆಯನ್ನು ನಿಗಿಪಡಿಸಿದ್ದೂ ಸಹ, ಮಾರ್ಚ್ ಪ್ರಾರಂಭದಲ್ಲಿನ ಬೆಲೆಯ ಕುಸಿತಕ್ಕೆ ಕಾರಣವೆಂಬುದಾಗಿ ರೈತರು ದೂರುತ್ತಾರೆ.
ನಾನು ಮಾತನಾಡಿಸಿದ ಅನೇಕ ರೈತರು, ಕಲ್ಲಂಗಡಿ ಹಣ್ಣಿನ ಬೆಳೆಯನ್ನು ಜೂಜಿಗೆ, ಇಸ್ಪೀಟ್ ಆಟಕ್ಕೆ ಹೋಲಿಸಿದರು. ಆದರೆ ಈ ಅನಿಶ್ಚಿತತೆಗಳಿಂದಾಗಿ, ಅವರಲ್ಲಿನ ಅನೇಕರು ಇದರ ಕೃಷಿಯನ್ನೇನು ನಿಲ್ಲಿಸಿಲ್ಲ. ಪ್ರತಿಯೊಬ್ಬರೂ ಈ ಬಾರಿಯ ಫಸಲಿನ ಕಟಾವು ತಮಗೆ ಲಾಭವನ್ನು ತರುತ್ತದೆಂಬುದಾಗಿ ಆಶಿಸುತ್ತಿದ್ದಾರೆ.
ಉತ್ತಮ ಬೆಲೆಯ ನಿರೀಕ್ಷೆಯಲ್ಲಿ, ಬೈರು ಗಣೇಶ್, ಮೂರು ಎಕರೆಯ ಮೊದಲ ಫಸಲಿನ ಕಟಾವನ್ನು ಒಂದು ವಾರದಷ್ಟು ನಿಧಾನಿಸಿದರು. ಟನ್ಗಟ್ಟಲೆ ಹಣ್ಣುಗಳನ್ನು ಕಿತ್ತು, ಅವನ್ನು ಸೂಕ್ತವಾಗಿ ದಾಸ್ತಾನುಮಾಡುವ ಅವಕಾಶವಿರಲಿಲ್ಲ. “ಯಾರಾದರೂ ಟನ್ವೊಂದಕ್ಕೆ 6 ಸಾವಿರ ರೂ.ಗಳ ಬೆಲೆಯನ್ನು ಪ್ರಸ್ತಾಪಿಸಬಹುದೆಂಬ ನಿರೀಕ್ಷೆಯಲ್ಲಿ ಸುಮಾರು ಒಂದು ಟ್ರಕ್ನಲ್ಲಿ ಪೇರಿಸಬಹುದಾದಷ್ಟು (10 ಟನ್ಗಳು) ಹಣ್ಣುಗಳು ಕಟಾವಾಗಲಿಲ್ಲ (ಮಾರ್ಚ್ ಆರಂಭದ ಹೊತ್ತಿಗೆ).” ಈ ಮಧ್ಯೆ, ಇವರ ಹಣ್ಣುಗಳು ಅತಿಯಾಗಿ ಪಕ್ವಗೊಂಡು ಅವುಗಳ ಬೆಲೆಯು ಮತ್ತಷ್ಟು ಕುಸಿಯಿತು.
ಮಾರ್ಚ್ ಮೊದಲ ವಾರದಲ್ಲಿ ಇವರ ಹಣ್ಣುಗಳನ್ನು ಕೊಳ್ಳಲು ಬಂದ ವರ್ತಕನು, ಅನೇಕ ಹಣ್ಣುಗಳನ್ನು ತಿರಸ್ಕರಿಸಿದ. ಮೊದಲು ಮತ್ತು ಎರಡನೆಯ ಬಾರಿ ಹಣ್ಣುಗಳು ತಿರಸ್ಕೃತಗೊಂಡಾಗ ಸುಮ್ಮನಿದ್ದ ಗಣೇಶ್, ಮೂರನೆಯ ಹಣ್ಣನ್ನು ತಿರಸ್ಕರಿಸಿದಾಗ, ತಾಳ್ಮೆಯನ್ನು ಕಳೆದುಕೊಂಡು, ಹೊಲದಲ್ಲಿ ಹಣ್ಣುಗಳನ್ನು ಶ್ರೇಣೀಕರಿಸುತ್ತಿದ್ದವನತ್ತ ಕಲ್ಲು ತೂರಿದರು.
“ಮಗುವಿನಂತೆ ಹಣ್ಣುಗಳ ಕಾಳಜಿ ವಹಿಸಿದ್ದೇನೆ. ಇಡೀ ಒಂದು ತಿಂಗಳು ಇಲ್ಲಿಯೇ ಮಲಗಿ, ನರಿಗಳಿಂದ ಅವನ್ನು ರಕ್ಷಿಸಿದ್ದೇನೆ. ಆತನು ಅವನ್ನು ಹೇಗೆ ತಾನೇ ಎಸೆಯಲು ಸಾಧ್ಯ? ನಿಧಾನವಾಗಿ ಅವನ್ನು ನೆಲದ ಮೇಲಿಡಬಹುದಿತ್ತು. ಕಡಿಮೆ ಬೆಲೆಗೆ ಬೇರೆಯವರಿಗೆ ಅವನ್ನು ನಾನು ಮಾರುತ್ತಿದ್ದೆ.” ಎಂದ ಗಣೇಶ್, ತಮ್ಮ ಇಚ್ಛೆಗೆ ವಿರುದ್ಧವಾಗಿ, ಉತ್ತಮವಾಗಿದ್ದ ಹಣ್ಣುಗಳನ್ನು ಆ ವ್ಯಾಪಾರಿಗೆ ಮಾರಿ, ಉಳಿದವನ್ನು ಬಾಲರಾಜುವಿನಂತಹ ವ್ಯಾಪಾರಿಗೆ ಮಾರಿದರು.
ಇವೆಲ್ಲವೂ ನಡೆದದ್ದು, ಕೋವಿಡ್-19ಗಿಂತ ಮೊದಲು.
ವೆಲ್ಲಿದಂಡುಪಡು ಕೊಪ್ಪಲಿನಲ್ಲಿ ಮಾರ್ಚ್ ಮೊದಲ ವಾರದಲ್ಲಿ, ಬೀಜಗಳನ್ನು ಮಾರುವ ಕಂಪನಿಯಲ್ಲಿ ಮಾರಾಟಗಾರರಾದ ಶಂಕರ್ ಅವರನ್ನು ನಾನು ಮಾತನಾಡಿಸಿದಾಗ, “ಈ ವರ್ಷದಲ್ಲಿ, ಸುಮಾರು 5 ಸಾವಿರ ಎಕರೆಗಳಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಬೆಳೆಯಲಾಗುತ್ತದೆ” ಎಂಬುದಾಗಿ ಅವರು ಅಂದಾಜಿಸಿದರು. ಬುಡ್ಡರೆಡ್ಡಿ ಗುಡ ಕೊಪ್ಪಲಿನ ಬೊಲ್ಲಂ ಯಡಯ್ಯ ಅವರಿಂದ ಮಧು ಕುಮಾರ್ ಅವರು ಹಣ್ಣುಗಳನ್ನು ಕೊಂಡುತಂದಂತೆ, ಒಂದು ಟನ್ಗೆ 3 ಸಾವಿರದಷ್ಟೇ ಬೆಲೆಯು, ಈಗಲೂ ಮುಂದುವರಿದಲ್ಲಿ, ಇದರ ಕೃಷಿಯನ್ನು ಹೊಸದಾಗಿ ಪ್ರಾರಂಭಿಸಿದ ರೈತರು, ಎಕರೆಗೆ ಸುಮಾರು 20 ಸಾವಿರ ರೂ.ಗಳನ್ನು ಕಳೆದುಕೊಳ್ಳುತ್ತಾರೆ. ಗಣೇಶ್ ಅವರ ಅಂದಾಜಿನಂತೆ, ತಮ್ಮ ಮೂರು ಎಕರೆಗಳಲ್ಲಿನ ಮೊದಲ ಬೆಳೆಯಲ್ಲಿ, ಕನಿಷ್ಠ ೩೦ ಸಾವಿರ ರೂ.ಗಳ ನಷ್ಟವನ್ನು ಅವರು ಅನುಭವಿಸಿದ್ದಾರೆ. ಲಾಕ್ಡೌನ್ನಿಂದಾಗಿ, ಹೆಚ್ಚಿನ ಸಂಕಷ್ಟಕ್ಕೀಡಾಗಿರುವ ಗಣೇಶ್ ಹಾಗೂ ಇತರೆ ರೈತರು, ಮತ್ತಷ್ಟು ಉತ್ತಮ ಬೆಲೆಗೆ ವ್ಯವಹರಿಸುವ ಸ್ಥಿತಿಯಲ್ಲಿಲ್ಲ.
ಇಷ್ಟೇ ಅಲ್ಲದೆ, ವರ್ತಕರು ಕೆಲವೊಮ್ಮೆ, ಹಣ್ಣುಗಳು ಮಾರುಕಟ್ಟೆಯಲ್ಲಿ ಬಿಕರಿಯಾದ ನಂತರವಷ್ಟೇ ರೈತರಿಗೆ ಹಣವನ್ನು ಪಾವತಿಸುತ್ತಾರೆ. ವಿಳಂಬಿತ ಪಾವತಿಯ ಈ ರೂಢಿಯು, ಲಾಕ್ಡೌನ್ ಅವಧಿಯಲ್ಲಿ ಹೆಚ್ಚು ವ್ಯಾಪಕವಾಗಿದ್ದು, ಅನಿಶ್ಚಿತತೆಯನ್ನು ಮತ್ತಷ್ಟು ಹೆಚ್ಚಿಸಿತು.
ಕೋವಿಡ್-19 ಹಾಗೂ ವಿವಿಧ ಅಡೆತಡೆಗಳ ಹೊರತಾಗಿಯೂ, ಕೆಲವು ರೈತರು, ಬೇಡಿಕೆ ಹಾಗೂ ಬೆಲೆಯು ಬೇಸಿಗೆಯ ತಿಂಗಳುಗಳಲ್ಲಿ ಕ್ರಮೇಣ ಹೆಚ್ಚಾಗುತ್ತದೆಂಬ ವಿಶ್ವಾಸದಲ್ಲಿದ್ದಾರೆ.
ಕಲ್ಲಂಗಡಿಗಳಿಗೆ ನಿಯಮಿತ ಅಂತರಗಳಲ್ಲಿ ಗೊಬ್ಬರಗಳ ಅವಶ್ಯಕತೆಯಿದ್ದಾಗ್ಯೂ, ವೆಚ್ಚವನ್ನು ಕಡಿಮೆಮಾಡಲು ಅನೇಕರು ಅದರ ಪೂರೈಕೆಯನ್ನು ನಿಲ್ಲಿಸಿದ್ದು, ಕನಿಷ್ಠ, ಉತ್ತಮ ಗುಣಮಟ್ಟದ ಸಾಧಾರಣ ಇಳುವರಿಯಾದರೂ ದೊರೆಯುತ್ತದೆಂಬ ನಿರೀಕ್ಷೆಯಲ್ಲಿ, ಕೀಟನಾಶಕಗಳ ಸಿಂಪರಣೆ ಹಾಗೂ ನೀರಿನ ಒದಗಣೆಯನ್ನು ಮುಂದುವರಿಸುತ್ತಿದ್ದಾರೆ.
ಕೋವಿಡ್-19 ಲಾಕ್ಡೌನಿನ ಮಾರ್ಗದರ್ಶನಗಳ ಮೊದಲ ಮತ್ತು ಎರಡನೆಯ ಅನುಬಂಧದಲ್ಲಿ (ಮಾರ್ಚ್ 25 ಮತ್ತು ಮಾರ್ಚ್ 27), ಗೃಹ ವ್ಯವಹಾರಗಳ ಸಚಿವಾಲಯವು ಬೀಜ, ಗೊಬ್ಬರ ಹಾಗೂ ಕೀಟನಾಶಗಳ ಮಾರಾಟದ ಅಂಗಡಿಗಳಿಗೆ ವಿನಾಯಿತಿಯನ್ನು ನೀಡಿದ್ದಾಗ್ಯೂ ಕೆಲವರು, ಪ್ರಯಾಣದ ನಿರ್ಬಂಧಗಳಿಂದಾಗಿ ವಿತರಕರನ್ನು ಸಂಪರ್ಕಿಸಲು ಸಾಧ್ಯವಾಗದ ಕಾರಣ, ಗೊಬ್ಬರಗಳನ್ನು ಕೊಳ್ಳುವುದು ಸಾಧ್ಯವಾಗಲಿಲ್ಲ.
ಮಾರ್ಚ್ ೨೭ರಂದು, ತಮ್ಮ ಮೂರು ಎಕರೆಯ ಬೆಳೆಗೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದ ಬೊಮ್ಮು ಸೈದುಲು ಅವರನ್ನು ನಾನು ಭೇಟಿಯಾದಾಗ, “150,000 ರೂ.ಗಳ ಬಂಡವಾಳವನ್ನು ಹೂಡಿರುವ ನಾನು, ಇದನ್ನು ಈಗ ಹೇಗೆ ತಾನೇ ಬಿಡಲು ಸಾಧ್ಯ?” ಎಂದರು.
ಗಣೇಶ್ ಅವರೂ ಸಹ ತಮ್ಮ ಎರಡನೆಯ ಬಿತ್ತನೆಯ ಭೂಮಿಯಿಂದ ಫಸಲನ್ನು ನಿರೀಕ್ಷಿಸುತ್ತಿದ್ದು, ಮೂರನೆಯ ಬಿತ್ತನೆಗೆ ಭೂಮಿಯನ್ನು ಅಣಿಗೊಳಿಸಿದ್ದಾರೆ.
ಅನುವಾದ: ಶೈಲಜಾ ಜಿ.ಪಿ.