“ಹುರ್ರ್…
ಹೆಹೆಹೆಹೇ… ಹೋ… ಹೆಹೆಹೇ… ಹೋ…”
ಈ ದನಿ ಕೇಳುತ್ತಿದ್ದಂತೆ ತೋಟದ ಭಾಗದ ಆಕಾಶ ಹಕ್ಕಿಗಳ ಕೂಗಿನೊಂದಿಗೆ ತುಂಬಿಕೊಂಡು ರೆಕ್ಕೆಗಳ ಪಟಪಟಿಸುವಿಕೆಯೂ ಅದರೊಡನೆ ಸೇರಿಕೊಂಡಿತು. ಅವುಗಳನ್ನು ಹಾರುವಂತೆ ದನಿ ಎತ್ತರಿಸಿ ಕೂಗಿದವನು ಸೂರಜ್. ಇವನ ಕೆಲಸ ಈ ಹಕ್ಕಿಗಳು ಕುಳಿತಿದ್ದ ಜಾಗವಾದ ಪೇರಳೆ ತೋಟವನ್ನು ಕಾಯುವುದು. ಹಕ್ಕಿಗಳು ಹಣ್ಣುಗಳನ್ನು ತಿಂದು ಹಾಕದಂತೆ ರಕ್ಷಿಸುವುದು ಇವನ ಪಾಲಿನ ಜವಬ್ದಾರಿ. ಅವುಗಳನ್ನು ಬೆದರಿಸಿ ಓಡಿಸುವ ಸಲುವಾಗಿ ಅವನು ಆಗಾಗ ದೊಡ್ಡ ದನಿಯಲ್ಲಿ ಕೂಗುವುದರ ಜೊತೆಗೆ ಕಮಾನ್ ಅಥವಾ ಗುಲೆಲ್ (ಕವಣೆ) ಬಳಸಿ ರೋಡಾಗಳನ್ನು (ಮಣ್ಣಿನ ಹೆಂಟೆ) ಅವುಗಳೆಡೆಗೆ ಗುರಿಯಿಡುತ್ತಿರುತ್ತಾನೆ.
ವಾಯುವ್ಯ ಪಂಜಾಬಿನ ತರನ್ ತಾರನ್ ಜಿಲ್ಲೆಯ ಅಂಚಿನಲ್ಲಿರುವ ಪಟ್ಟಿ ಎನ್ನುವ ಈ ಊರು ಹಣ್ಣಿನ ತೋಟಗಳಿಗೆ ಹೆಸರುವಾಸಿಯಾಗಿದೆ. ಪೇರಳೆ ಮತ್ತು ಪೀಚ್ ಮರಗಳನ್ನು ನೋಡಿಕೊಳ್ಳಲು ವಲಸೆ ಕಾರ್ಮಿಕರು ವಾರ್ಷಿಕವಾಗಿ ಇಲ್ಲಿಗೆ ಬರುತ್ತಾರೆ. ಯಾವುದೇ ಸಮಯದಲ್ಲಿ ಉದುರಬಹುದಾದ ಮತ್ತು ಮಾಗಿದ ಹಣ್ಣನ್ನು ಹಕ್ಕಿಗಳು ಕುಕ್ಕದಂತೆ ಮತ್ತು ಕೀಳದಂತೆ ನೋಡಿಕೊಳ್ಳುವುದು ಇವರ ಕೆಲಸ. ಈ ಹಣ್ಣಿನ ತೋಟಗಳನ್ನು ಕಾಯುವ ಸೂರಜ್‌ನಂತಹ ಕಾರ್ಮಿಕರನ್ನು ರಾ ಖೇಂ ಎಂದು ಕರೆಯಲಾಗುತ್ತದೆ.
ಸೂರಜ್ ಬಹಾರ್ದಾರ್ ಕಾವಲು ಕಾಯುವ ತೋಟದಲ್ಲಿ, ಸರಿಸುಮಾರು ಎರಡು ಎಕರೆ ಭೂಮಿಯಲ್ಲಿ ಹರಡಿರುವ ಸುಮಾರು 144 ಪೇರಳೆ ಮರಗಳಿವೆ. ಏಪ್ರಿಲ್ ತಿಂಗಳಿನಿಂದ ಆಗಸ್ಟ್ ತನಕದ ಹಣ್ಣಿನ ಋತುವಿನಲ್ಲಿ 15 ವರ್ಷದ ಈ ಹುಡುಗ ಒಬ್ಬನೇ ಇಡೀ ತೋಟವನ್ನು ನೋಡಿಕೊಳ್ಳಬೇಕು. ಅವನಿಗೆ ಮಾಲೀಕರು ತಿಂಗಳಿಗೆ 8,000 ರೂ.ಗಳ ವೇತನವನ್ನು ನೀಡುತ್ತಾರೆ.
"ಮರಗಳು ಹೂ ಬಿಡಲು ಆರಂಭಿಸಿದ ತಕ್ಷಣ, ಭೂಮಾಲೀಕರು ತಮ್ಮ ತೋಟಗಳನ್ನು ಗುತ್ತಿಗೆಗೆ ನೀಡುತ್ತಾರೆ. ಅವುಗಳನ್ನು ಗುತ್ತಿಗೆಗೆ ತೆಗೆದುಕೊಳ್ಳುವ ಠೇಕೇ ದಾ ರರು ತೋಟದ ಕಾವಲಿಗೆ ರಾಖೇಗಳನ್ನು ನೇಮಿಸುತ್ತಾರೆ ” ಎಂದು ಸೂರಜ್ ನಮಗೆ ಮಾಹಿತಿ ನೀಡಿದ. ಹೆಚ್ಚಿನ ರಾ ಖೇಗಳು ಉತ್ತರ ಪ್ರದೇಶ ಮತ್ತು ಬಿಹಾರದ ವಲಸೆ ಕಾರ್ಮಿಕರು.
ಸೂರಜ್ ಬಿಹಾರ ಮೂಲದವನಾಗಿದ್ದು, ಈ ಹಣ್ಣಿನ ತೋಟಗಳಲ್ಲಿ ಕೆಲಸ ಹುಡುಕಲು ಸುಮಾರು 2,000 ಕಿಲೋಮೀಟರ್ ಪ್ರಯಾಣಿಸಿದ್ದಾನೆ. ಬಿಹಾರದ ಅರಾರಿಯಾ ಜಿಲ್ಲೆಯಲ್ಲಿನ ತನ್ನ ಗ್ರಾಮ ಭಾಗಪರ್ವಾಹದಿಂದ ಸಹರ್ಸಾ ಎಂಬ ದೊಡ್ಡ ಪಟ್ಟಣವನ್ನು ತಲುಪುವ ಪ್ರಯಾಣದೊಂದಿಗೆ ಇಲ್ಲಿಗೆ ಬರಲು ಅವನ ಪ್ರಯಾಣವು ಪ್ರಾರಂಭವಾಯಿತು. ನಂತರ ಅವನು 1,732 ಕಿಲೋಮೀಟರ್ ದೂರವನ್ನು ಕ್ರಮಿಸಿ ಪಂಜಾಬಿನ ಅಮೃತಸರವನ್ನು ತಲುಪಿದ. ಠೇ ಕೇದಾ ರರು ಅವನಂತಹ ಕಾರ್ಮಿಕರನ್ನು ಒಂದು ಗಂಟೆಯ ದೂರದಲ್ಲಿರುವ ಪಟ್ಟಿಗೆ ಕರೆತರಲು ಬಸ್ ವ್ಯವಸ್ಥೆ ಮಾಡಿದರು.
*****
ಸೂರಜ್ ಬಿಹಾರದಲ್ಲಿ ಅತ್ಯಂತ ಹಿಂದುಳಿದ ವರ್ಗ (ಇಬಿಸಿ) ಎಂದು ಪಟ್ಟಿ ಮಾಡಲಾದ ಬಹಾರ್ದಾರ್ ಸಮುದಾಯಕ್ಕೆ ಸೇರಿದವನು. ಅವನು 8ನೇ ತರಗತಿಯಲ್ಲಿ ಓದುತ್ತಿದ್ದಾಗ ಕುಟುಂಬದ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯು ಅವನನ್ನು ಶಾಲೆಯಿಂದ ಹೊರಗುಳಿಯುವಂತೆ ಮಾಡಿತು. ಅವನು ಹೇಳುತ್ತಾನೆ, "ನನಗೆ ಬೇರೆ ಆಯ್ಕೆ ಇರಲಿಲ್ಲ. ಆದರೆ ನಾನು ಮನೆಗೆ ಮರಳಿದ ನಂತರ, ನನ್ನ ಸಂಪಾದನೆಯೊಂದಿಗೆ ನಾನು ಶಾಲೆಗೆ ಮರಳುತ್ತೇನೆ."
ಪಂಜಾಬಿನ ಮಾಜಾ ಕ್ಷೇತ್ರ ಪ್ರದೇಶದಲ್ಲಿರುವ ಪಟ್ಟಿ ಪಟ್ಟಣವು ತರನ್ ತಾರನ್ ನಗರದಿಂದ ಸುಮಾರು 22 ಕಿ.ಮೀ ದೂರದಲ್ಲಿದೆ. ಪಾಕಿಸ್ತಾನದ ಲಾಹೋರ್ ಒಂದು ಗಂಟೆ ಪ್ರಯಾಣದ ದೂರದಲ್ಲಿದೆ. ಈ ಪ್ರದೇಶದ ಹೆಚ್ಚಿನ ಹಣ್ಣಿನ ತೋಟಗಳು ಜಟ್ಟಾ (ಜಾಟ್ ) ರೀತಿಯ ಪ್ರಬಲ ಜಾತಿ ಸಮುದಾಯಗಳ ಒಡೆತನದಲ್ಲಿದೆ. ಅವರು ಹಣ್ಣಿನ ತೋಟಗಳಲ್ಲದೆ ಆಹಾರ ಬೆಳೆಗಳನ್ನು ಬೆಳೆಯುವ ಭೂಮಿಯನ್ನು ಸಹ ಹೊಂದಿದ್ದಾರೆ.
ಪೇರು ಮತ್ತು ಪೀಚ್ ಹಣ್ಣಿನ ತೋಟಗಳಲ್ಲದೆ, ಪೇರಳೆ ಹಣ್ಣಿನ ತೋಟಗಳಿಗೆ ವರ್ಷಕ್ಕೆ ಎರಡು ಬಾರಿ ರಾಖೆಗಳನ್ನು ಬಳಸಬೇಕಾಗುತ್ತದೆ. ಕೆಲವೊಮ್ಮೆ ಮರಗಳನ್ನು ಕಾಯಲು ಸ್ಥಳೀಯರನ್ನು ಸಹ ನೇಮಿಸಿಕೊಳ್ಳಲಾಗುತ್ತದೆ ಅಥವಾ ಈ ಪ್ರದೇಶದಲ್ಲಿ ನೆಲೆಸಿರುವ ವಲಸೆ ಕಾರ್ಮಿಕರನ್ನು ಠೇಕೆದಾರ್‌ಗಳು ನೇಮಿಸಿಕೊಳ್ಳುತ್ತಾರೆ.
ಈ ಕೆಲಸಕ್ಕಾಗಿ ಬಿಹಾರದಿಂದ ಬರುವ ಹೆಚ್ಚಿನ ಕಾರ್ಮಿಕರು ಸೂರಜ್‌ಗಿಂತ ಹಿರಿಯರಿರುತ್ತಾರೆ. ಮತ್ತು ಇಂತಹ ಚಿಕ್ಕ ಮಕ್ಕಳು ಹಣ್ಣಿನ ತೋಟದಲ್ಲಿ ರಾಖೆಯಾಗಿ ಕೆಲಸ ಮಾಡುವುದು ಅಪರೂಪ. ಈ ಹುಡುಗ ಪಕ್ಷಿಗಳನ್ನು ಹೆದರಿಸುವುದನ್ನು ಮತ್ತು ಇತರ ಸಮಯದಲ್ಲಿ ಅಡುಗೆ ಮಾಡುವುದು, ಬಟ್ಟೆಗಳನ್ನು ಒಣಗಿಸುವುದು ಮತ್ತು ಇತರ ಮನೆಕೆಲಸಗಳನ್ನು ಮಾಡುವುದನ್ನು ಕಾಣಬಹುದು. ಹುಡುಗನ ಮಾಲೀಕ ಅವರ ಮನೆಯನ್ನು ಸ್ವಚ್ಚಗೊಳಿಸಲು ಹೇಳುವುದು ಮತ್ತು ದಿನಸಿ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಖರೀಸುವದರಂತಹ ಸಣ್ಣ ಕೆಲಸಗಳಿಗೆ ಕಳುಹಿಸುತ್ತಾರೆ ಎಂದು ಸೂರಜ್ ಹೇಳಿದ. "ತೋಟವನ್ನು ನೋಡಿಕೊಳ್ಳುವ ಹೆಸರಿನಲ್ಲಿ ಇಷ್ಟು ಕೆಲಸ ಮಾಡಿಸುತ್ತಾರೆ ಎಂದು ನನಗೆ ತಿಳಿದಿದ್ದರೆ, ನಾನು ಅಲ್ಲಿಗೆ ಹೋಗುತ್ತಿರಲಿಲ್ಲ," ಎಂದು ಅವನು ಬಿಹಾರಕ್ಕೆ ಮರಳಿದ ನಂತರ ಫೋನಿನಲ್ಲಿ ಹೇಳಿದನು.
ಪಟ್ಟಿಯ ತೋಟಗಳಿಗೆ ಕಾರ್ಮಿಕರು ಏಪ್ರಿಲ್ ನಲ್ಲಿ ಹೂಬಿಡುವ ಸಮಯದಲ್ಲಿ ಬರುತ್ತಾರೆ ಮತ್ತು ಆಗಸ್ಟ್ ನಲ್ಲಿ ಹಣ್ಣು ಕೊಯ್ಲು ಮಾಡುವವರೆಗೂ ಇಲ್ಲಿಯೇ ಇರುತ್ತಾರೆ. ಈ 5 ತಿಂಗಳುಗಳಲ್ಲಿ, ಅವರ ಎಲ್ಲಾ ಸಮಯ ತೋಟದಲ್ಲಿ ಕಳೆದುಹೋತ್ತದೆ, ಮತ್ತು ಈ ಸಮಯದಲ್ಲಿ ಅವರಿಗೆ ಉಳಿಯಲು ಯಾವುದೇ ನಿಗದಿತ ಸ್ಥಳವಿಲ್ಲ. ವಿಷಕಾರಿ ಪ್ರಾಣಿಗಳ ಅಪಾಯಗಳನ್ನು ತಿಳಿದಿದ್ದರೂ ಅನಿವಾರ್ಯವಾಗಿ ಅವರು ತೋಟದ ಮಧ್ಯದಲ್ಲಿ ಗುಡಿಸಲುಗಳಲ್ಲಿ ವಾಸಿಸಬೇಕಾಗುತ್ತದೆ. ಈ ತೆರೆದ ಗುಡಿಸಲುಗಳನ್ನು ಬಿದಿರಿನಿಂದ ಮಾಡಲಾಗಿದ್ದು, ಅದರ ಮೇಲೆ ಛಾವಣಿಯ ಹೆಸರಿನಲ್ಲಿ ಟಾರ್ಪಾಲಿನ್ ಮಾತ್ರ ಹೊದೆಸಲಾಗುತ್ತದೆ. ಶಾಖ ಮತ್ತು ತೇವಾಂಶದಿಂದಾಗಿ, ಹಾವುಗಳಂತಹ ವಿಷಕಾರಿ ಜೀವಿಗಳು ಇಲ್ಲಿ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ.
"ಸಂಪಾದನೆಯ ಅಗತ್ಯದ ಮುಂದೆ ಈ ಮಾರಣಾಂತಿಕ ಜೀವಿಗಳ ಭಯವೂ ಏನೂ ಅನ್ನಿಸುವುದಿಲ್ಲ," ಎಂದು ಸೂರಜ್ ಹೇಳುತ್ತಾನೆ.
*****
ಪಟ್ಟಿಯ ಶಿಂಗಾರ ಸಿಂಗ್ ಮೂರು ಎಕರೆ ಪ್ರದೇಶದಲ್ಲಿದ್ದ ಪೇರಲ ತೋಟವನ್ನು ಗುತ್ತಿಗೆ ಪಡೆದು ಕೊಂಡಿದ್ದಾರೆ. ಅವರು ಮತ್ತು ಅವರ ಪತ್ನಿ ಪರಮ್ಜೀತ್ ಕೌರ್ ಒಟ್ಟಾಗಿ ಈ ಉದ್ಯಾನದ ರಾಖೀ ಕೆಲಸವನ್ನು ಮಾಡುತ್ತಾರೆ. ಶಿಂಗಾರ ಸಿಂಗ್ (49 ವರ್ಷ) ಮೆಹ್ರಾ ಸಿಖ್ ಸಮುದಾಯಕ್ಕೆ ಸೇರಿದವರು, ಈ ಸಮುದಾಯವನ್ನು ಪಂಜಾಬ್‌ನಲ್ಲಿ ಹಿಂದುಳಿದ ವರ್ಗ ಎಂದು ಪಟ್ಟಿ ಮಾಡಲಾಗಿದೆ. ಈ ತೋಟವನ್ನು 1 ಲಕ್ಷ 10 ಸಾವಿರ ರೂ. ಬೆಲೆಗೆ ಎರಡು ವರ್ಷಗಳ ಗುತ್ತಿಗೆ ಪಡೆದಿದ್ದಾರೆ. ಪ್ರತಿಯಾಗಿ ಶಿಂಗಾರ ಸಿಂಗ್ ಪ್ರಕಾರ, "ನನಗೆ ಈ ತೋಟ ಅತ್ಯಂತ ಕಡಿಮೆ ಬೆಲೆಗೆ ದೊರಕಿದೆ, ಏಕೆಂದರೆ ಮಾಲೀಕರು ಒಪ್ಪಂದದ ಮೊತ್ತವನ್ನು ಮರಗಳಿಗೆ ಅನುಗುಣವಾಗಿ ನಿಗದಿಪಡಿಸಿದ್ದಾರೆ, ಭೂಮಿಯ ಲೆಕ್ಕದಲ್ಲಲ್ಲ."
ಸಾಮಾನ್ಯವಾಗಿ ಒಂದು ಎಕರೆ ತೋಟದಲ್ಲಿ ಸಾಮಾನ್ಯವಾಗಿ ಸುಮಾರು 55-56 ಪೇರಲ ಮರಗಳನ್ನು ನೆಡಲಾಗುತ್ತದೆ ಎಂದು ಅವರು ಹೇಳುತ್ತಾರೆ, ಆದರೆ ಅವರು ಗುತ್ತಿಗೆ ಪಡೆದ ತೋಟದಲ್ಲಿ ಕೇವಲ 60 ಪೇರಲ ಮರಗಳಿವೆ. ಈ ಮರಗಳ ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ ವರ್ಷಕ್ಕೆ 50-55 ಸಾವಿರ ರೂ. ಸಂಪಾದಿಸಬಹುದು. "ಇಷ್ಟು ಕಡಿಮೆ ಆದಾಯದಲ್ಲಿ ರಾಖೆಯನ್ನು ಕೆಲಸಕ್ಕೆ ಇರಿಸಿಕೊಳ್ಳುವ ಬಗ್ಗೆ ನಾವು ಹೇಗೆ ಯೋಚಿಸಬಹುದು," ಎಂದು ಅವರು ಕೇಳುತ್ತಾರೆ.
ಶಿಂಗಾರ ಸಿಂಗ್ ಹೇಳುವಂತೆ, "ಈ ಭೂಮಿ ಈಗ ಎರಡು ವರ್ಷಗಳಿಂದ ನಮ್ಮದಾಗಿದೆ. ಚಳಿಗಾಲದಲ್ಲಿ, ನಾವು ಇಲ್ಲಿ ಪೇರಳೆ ಮರಗಳೊಂದಿಗೆ ಖಾಲಿ ಭೂಮಿಯಲ್ಲಿ ತರಕಾರಿಗಳನ್ನು ಬಿತ್ತುತ್ತೇವೆ ಮತ್ತು ಅವುಗಳನ್ನು ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತೇವೆ. ಆದರೆ ಬೇಸಿಗೆಯಲ್ಲಿ, ನಮ್ಮ ಆದಾಯವು ಹಣ್ಣುಗಳ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ."
ತೋಟವನ್ನು ಕಾಯುವ ಸವಾಲುಗಳ ಬಗ್ಗೆ ಅವರು ಹೇಳುತ್ತಾರೆ, "ಪಕ್ಷಿಗಳಲ್ಲಿ, ಗಿಳಿಗಳು ನಮ್ಮನ್ನು ಹೆಚ್ಚು ಕಾಡುತ್ತವೆ. ಪೇರಳೆ ಅವುಗಳ ನೆಚ್ಚಿನ ಹಣ್ಣು. ಹೌದು, ಅವು ಇಡೀ ಹಣ್ಣು ತಿನ್ನುವಂತಿದ್ದರೆ ಪರವಾಗಿಲ್ಲ, ಆದರೆ ಅವು ಬೀಜಗಳನ್ನು ಮಾತ್ರ ತಿನ್ನುತ್ತವೆ ಮತ್ತು ಉಳಿದ ಹಣ್ಣನ್ನು ಕತ್ತರಿಸಿ ಕೆಳಗೆ ಎಸೆಯುತ್ತಲೇ ಇರುತ್ತವೆ."
ಗಿಳಿಗಳಲ್ಲಿಯೂ ಸಹ, ಕೆಲವು ವಿಧದ ಗಿಳಿಗಳು ಹೆಚ್ಚು ಚೇಷ್ಟೆಯಿರುತ್ತವೆ. ಶಿಂಗರಾ ಸಿಂಗ್ ವಿವರಿಸುತ್ತಾರೆ, “ಗಿಳಿಗಳಲ್ಲಿ ಅಲೆಕ್ಸಾಂಡ್ರಿನ್ ಜಾತಿಗಳು ಹೆಚ್ಚು ಹಾನಿಯನ್ನುಂಟುಮಾಡುತ್ತವೆ. ಅವುಗಳ ಇಡೀ ಗುಂಪು ಹಣ್ಣು ತಿನ್ನುವ ಉದ್ದೇಶದಿಂದ ತೋಟಕ್ಕೆ ಬಂದರೆ, ಇಡೀ ತೋಟ ಹೋಯ್ತು ಅಂದ್ಕೊಳ್ಳಿ." ಅಂತಹ ಸಂದರ್ಭಗಳಲ್ಲಿ, ಕಾವಲುಗಾರರು ಸೂರಜ್ ಬಳಸುವಂತಹ ಭಯಾನಕ ಶಬ್ದಗಳನ್ನು ಮತ್ತು ಕವಣೆಯಂತ್ರಗಳನ್ನು ಆಶ್ರಯಿಸಬೇಕಾಗುತ್ತದೆ.
ಸೂರಜ್‌ನಂತಹ ವಲಸೆ ಕಾರ್ಮಿಕರಿಗೆ ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ವೇತನವನ್ನು ನೀಡಲಾಗುತ್ತದೆ. ಶಿಂಗಾರ ಸಿಂಗ್ ಹೇಳುತ್ತಾರೆ, "ಯುಪಿ-ಬಿಹಾರದ ಕಾರ್ಮಿಕರು ಕಡಿಮೆ ವೇತನಕ್ಕೆ ತೋಟಗಳಲ್ಲಿ ರಾಖೇ ಕೆಲಸ ಮಾಡಲು ಒಪ್ಪುತ್ತಾರೆ ಮತ್ತು ಗುತ್ತಿಗೆದಾರರು ಕೆಲಸಗಾರರ ನೋಂದಣಿ ಇತ್ಯಾದಿಗಳ ಜಂಜಡದಿಂದ ಮುಕ್ತರಾಗುತ್ತಾರೆ."
2011ರ ಜನಗಣತಿಯ ಪ್ರಕಾರ, ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಕೆಲಸ ಹುಡುಕಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗಿದ್ದಾರೆ. ಅವರಲ್ಲಿ ಹೆಚ್ಚಿನವರು ವಂಚಿತ ಸಮುದಾಯಗಳಿಗೆ ಸೇರಿದವರು ಮತ್ತು ಕಾರ್ಖಾನೆಗಳು, ಹೊಲಗಳು, ಇಟ್ಟಿಗೆ ಗೂಡುಗಳು ಮತ್ತು ತೋಟಗಳಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಈ ಕಾರ್ಮಿಕರ ಬಗ್ಗೆ ಯಾವುದೇ ಸರ್ಕಾರಿ ಸಂಸ್ಥೆಯಲ್ಲಿ ದಾಖಲೆಗಳಿಲ್ಲ. ಅದೇ ಸಮಯದಲ್ಲಿ, ಕಾರ್ಮಿಕರ ನಡುವೆ ಕೆಲಸ ಮಾಡುವ ಯಾವುದೇ ಟ್ರೇಡ್-ಯೂನಿಯನ್ ಅಥವಾ ಸಂಸ್ಥೆಯು ಈ ಕಾರ್ಮಿಕರ ಅಂಕಿಅಂಶಗಳನ್ನು ಇರಿಸಿಕೊಳ್ಳಲು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ.ಸ
ಸಾಮಾಜಿಕ ಕಾರ್ಯಕರ್ತ ಕಂವಲ್ಜಿತ್ ಸಿಂಗ್ ಪ್ರಕಾರ, “ವಲಸೆ ಕಾರ್ಮಿಕರು ಎರಡು ತೊಂದರೆಗಳನ್ನು ಎದುರಿಸುತ್ತಾರೆ. ಅಂತರ-ರಾಜ್ಯ ವಲಸೆ ಕಾರ್ಮಿಕರ ಕಾಯಿದೆಯು ಈ ಕಾರ್ಮಿಕರ ಮತ್ತು ಅವರನ್ನು ನೇಮಿಸಿಕೊಳ್ಳುವವರ ನೋಂದಣಿಯನ್ನು ಕಡ್ಡಾಯಗೊಳಿಸುತ್ತದೆ, ಆದರೂ ಈ ಕಾನೂನನ್ನು ಎಲ್ಲಿಯೂ ಅನುಸರಿಸಲಾಗುವುದಿಲ್ಲ. ಕಂವಲ್ಜಿತ್ ಸಿಂಗ್ ಅವರು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನಿಸ್ಟ್) ಲಿಬರೇಶನ್‌ನ ಕೇಂದ್ರ ಸಮಿತಿಯ ಸದಸ್ಯರೂ ಆಗಿದ್ದಾರೆ. ಅವರು ಮುಂದುವರೆದು ಹೇಳುತ್ತಾರೆ, “ಇದರ ಪರಿಣಾಮವಾಗಿ, ಇಲ್ಲಿಯ ವಲಸೆ ಕಾರ್ಮಿಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇದರಿಂದಾಗಿ, ಅವರು ತಮಗಾಗಿ ಮೀಸಲಾದ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ."
*****
ಸುಮಾರು ಎರಡು ಎಕರೆ ವಿಸ್ತೀರ್ಣದ ಈ ತೋಟದಲ್ಲಿ ಸುಮಾರು 144 ಪೇರಳೆ ಮರಗಳನ್ನು ನೆಡಲಾಗಿದೆ. ಕೇವಲ 15 ವರ್ಷ ವಯಸ್ಸಿನ ಸೂರಜ್, ಏಪ್ರಿಲ್ ತಿಂಗಳಿನಿಂದ ಆಗಸ್ಟ್ ವರೆಗಿನ ಹಣ್ಣಿನ ಹಂಗಾಮಿನಲ್ಲಿ ಇದನ್ನು ಏಕಾಂಗಿಯಾಗಿ ಕಾಪಾಡುತ್ತಾನೆ. ತೋಟದ ಮಾಲೀಕರು ಅವನಿಗೆ ತಿಂಗಳಿಗೆ 8 ಸಾವಿರ ಸಂಬಳ ನೀಡುತ್ತಾರೆ
ಅರಾರಿಯಾ ಜಿಲ್ಲೆಯ ಭಾಗಪರ್ವಾಹ ಗ್ರಾಮದಲ್ಲಿ ಸೂರಜ್ ತಂದೆ ಅನಿರುದ್ಧ್ ಬಹರ್ದಾರ್ (37) ಪಟ್ವಾರಿಯ (ಮೇಸ್ತ್ರಿ) ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಕೆಲಸಕ್ಕೆ ತಿಂಗಳಿಗೆ 12,000 ರೂಪಾಯಿ ಪಡೆಯುತ್ತಿದ್ದು, ಇದು ಈ ಭೂರಹಿತ ಕುಟುಂಬದ ಏಕೈಕ ಸ್ಥಿರ ಆದಾಯವಾಗಿದೆ. ಸೂರಜ್ ಪ್ರಕಾರ, ತನ್ನ ತಂದೆಗೆ ಮಗ ಕೆಲಸಕ್ಕೆ ಹೋಗುವುದು ಇಷ್ಟವಿರಲಿಲ್ಲ, ಆದರೆ ಕುಟುಂಬಕ್ಕೆ ಬೇರೆ ದಾರಿ ಇರಲಿಲ್ಲ. "ನನ್ನ ಸಂಬಂಧಿಯೊಬ್ಬರಿಂದ ಅಲ್ಲಿ ಸಾಕಷ್ಟು ಹಣ ಸಿಗುತ್ತದೆ ಎಂದು ಕೇಳಲ್ಪಟ್ಟಿದ್ದೆ," ಎನ್ನುತ್ತಾನೆ ಸೂರಜ್. ಹಾಗಾಗಿ ಅವನು ಪಂಜಾಬಿಗೆ ಹೋಗಲು ನಿರ್ಧರಿಸಿದ್ದ.
ಸೂರಜ್ ಕುಟುಂಬಕ್ಕೆ ಸೇರಿದ ಮನೆ ಕಚ್ಚಾ ಮನೆಯಾಗಿದ್ದು, ಹೆಂಚಿನ ಚಾವಣಿಯನ್ನು ಹೊಂದಿದೆ. ಅವನ ತಾಯಿ ಸೂರ್ತಿ ದೇವಿ ಹೇಳುತ್ತಾರೆ, “ಮಳೆಗಾಲದಲ್ಲಿ ನೀರು ಒಳಗೆ ಪ್ರವೇಶಿಸುತ್ತದೆ. ನಮ್ಮ ಹಳ್ಳಿಯಲ್ಲಿ ಹೆಚ್ಚಿನ ಮನೆಗಳು ಕಚ್ಚಾ ಮನೆಗಳು, ಎಲ್ಲೋ ಕೆಲವು ಮನೆಗಳಿಗಷ್ಟೇ ಟಿನ್ ಶೀಟಿನ ಮಾಡನ್ನು ಹೊದೆಸಲಾಗಿದೆ. ”ಸೂರಜ್ ಪಂಜಾಬ್‌ನಲ್ಲಿ ದುಡಿದ ಹಣವನ್ನು ಕುಟುಂಬವು ಮನೆ ದುರಸ್ತಿಗೆ ಖರ್ಚು ಮಾಡಿತು ಮತ್ತು ಅವನು ಯೋಜಿಸಿದಂತೆ ತನ್ನ ಓದನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಅವನು ಹೇಳುತ್ತಾನೆ, "ನನ್ನ ಇಚ್ಛೆಗೆ ವಿರುದ್ಧವಾಗಿ ನಾನು ಮತ್ತೆ ಪಂಜಾಬ್‌ಗೆ ಹಿಂತಿರುಗಬೇಕಾಗುತ್ತದೆ ಎನ್ನಿಸುತ್ತಿದೆ."
ಸೂರ್ತಿ ದೇವಿ (35) ಮನೆಕೆಲಸಗಳನ್ನು ನೋಡಿಕೊಳ್ಳುತ್ತಾರೆ ಮತ್ತು ಅಗತ್ಯವಿದ್ದಾಗ ಕೂಲಿಯಾಗಿಯೂ ಕೆಲಸ ಮಾಡುತ್ತಾರೆ. ಸೂರಜ್‌ನ ಮೂವರು ತಮ್ಮಂದಿರು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ - ನೀರಜ್ (13) 6 ನೇ ತರಗತಿ, ವಿಪಿನ್ (11) 4 ನೇ ತರಗತಿ, ಮತ್ತು ಕಿರಿಯವ ಆಶಿಶ್ (6) ಇನ್ನೂ ನರ್ಸರಿಯಲ್ಲಿದ್ದಾನೆ. ಈ ಕುಟುಂಬಕ್ಕೆ ಸ್ವಂತ ಜಮೀನು ಇಲ್ಲದ ಕಾರಣ ಸುಮಾರು 2.5 ಎಕರೆ ಜಮೀನನ್ನು ಬಾಡಿಗೆಗೆ ಪಡೆದಿದ್ದು, ಅದರಲ್ಲಿ 1.5 ಎಕರೆ ಜಮೀನಿನಲ್ಲಿ ಕೆರೆ ನಿರ್ಮಿಸಿ ಮೀನು ಸಾಕಾಣಿಕೆ ಮಾಡುತ್ತಿದ್ದಾರೆ. ಉಳಿದ ಒಂದು ಎಕರೆ ಜಮೀನಿನಲ್ಲಿ ಭತ್ತ, ತರಕಾರಿ ಬೆಳೆಯುತ್ತಾರೆ. ಸೂರಜ್ ಮನೆಯಲ್ಲಿಯೇ ಇರುವಾಗ, ಹೊಲದಲ್ಲಿ ಬೆಳೆದ ತರಕಾರಿಗಳನ್ನು ಮಾರುಕಟ್ಟೆಗೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಾನೆ. ಇಷ್ಟೆಲ್ಲಾ ಮಾಡುವುದರಿಂದ ಅವರ ಕುಟುಂಬ ವರ್ಷಕ್ಕೆ ಸುಮಾರು 20,000 ರೂ.ಗಳನ್ನು ಗಳಿಸುತ್ತದೆ, ಆದರೆ ಇದು ಸ್ಥಿರ ಆದಾಯವಲ್ಲ.
ಸೂರಜ್ ಪ್ರಸ್ತುತ ತನ್ನ ಹಳ್ಳಿಯಲ್ಲಿಯೇ ಇದ್ದು ಅವನ ಭವಿಷ್ಯದ ಸುತ್ತ ಅನಿಶ್ಚಿತತೆಯ ಕಾರ್ಮೋಡ ಕವಿದಿದೆ. ಅವನು ಮತ್ತೊಮ್ಮೆ ಪಂಜಾಬಿಗೆ ಮರಳಬೇಕಾಗುವ ಸಾಧ್ಯತೆಯಿತೆ. ಅದಾಗ್ಯೂ ಅವನಲ್ಲಿ ಇನ್ನೂ ಓದುವ ಕನಸು ಜೀವಂತವಿದೆ. ಅನು ಹೇಳುತ್ತಾನೆ: "ಬೇರೆ ಮಕ್ಕಳು ಶಾಲೆಗೆ ಹೋಗೋದನ್ನ ನೋಡೋವಾಗ, ನನಗೂ ಶಾಲೆಗೆ ಹೋಗಬೇಕೆನ್ನಿಸುತ್ತದೆ."
ಅನುವಾದ: ಶಂಕರ. ಎನ್. ಕೆಂಚನೂರು