"ಎರಡಕ್ಕೆ ಎರಡನ್ನು ಕೂಡಿದರೆ ಎಷ್ಟಾಗುತ್ತದೆ? ಪ್ರತೀಕ್, ನಿನಗೆ ಸಂಕಲನ ಮಾಡುವುದು ಹೇಗೆ ಎಂಬುದು ನೆನಪಿದೆಯಾ?”
ಶಿಕ್ಷಕ ಮೋಹನ್ ತಳೇಕರ್ ಸ್ಲೇಟಿನ ಮೇಲೆ ಬರೆದಿರುವ ಸಂಖ್ಯೆಗಳನ್ನು ಪ್ರತೀಕ್ ರಾವುತ್ ಗೆ ತೋರಿಸುತ್ತಾರೆ. 14 ವರ್ಷದ ಪ್ರತೀಕ್‌ಗೆ ಸಂಖ್ಯೆಗಳನ್ನು ಗುರುತಿಸಲು ಹೇಳುತ್ತಾರೆ. ಅವನು ಸ್ಲೇಟನ್ನೇ ದಿಟ್ಟಿಸಿ ನೋಡುತ್ತಾನೆ, ಆದರೆ ಅವನಿಗೆ ಆ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಜೂನ್ 15, 2022, ನಾವು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಕರ್ಮಲಾ ತಾಲ್ಲೂಕಿನಲ್ಲಿರುವ ಪ್ರತೀಕ್ ಓದುವ ಶಾಲೆ ಜ್ಞಾನಪ್ರಬೋಧನ್ ಮತಿಮಂದ್ ನಿವಾಸಿ ವಿದ್ಯಾಲಯದಲ್ಲಿದ್ದೇವೆ. ಅವನು ಎರಡು ವರ್ಷಗಳ ನಂತರ ಶಾಲೆಗೆ ಮರಳಿದ್ದಾನೆ. ಎರಡು ವರ್ಷ ತುಂಬಾ ದೀರ್ಘವಾದ ಅವಧಿ.
“ಪ್ರತೀಕ್‌ಗೆ ಸಂಖ್ಯೆಗಳನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಕೋವಿಡ್-19 ಬರುವ ಮೊದಲು ಅವನಿಗೆ ಕೂಡಿಸುವುದು, ಮರಾಠಿ ಮತ್ತು ಇಂಗ್ಲಿಷ್ ವರ್ಣಮಾಲೆಯನ್ನು ಬರೆಯಲು ತಿಳಿದಿತ್ತು. ನಾವು ಈಗ ಮೊದಲಿನಿಂದಲೇ ಅವನಿಗೆ ಎಲ್ಲವನ್ನೂ ಕಲಿಸಬೇಕಾಗಿದೆ,”ಎಂದು ಅವನ ಶಿಕ್ಷಕರು ಹೇಳುತ್ತಾರೆ.
ಅಕ್ಟೋಬರ್ 2020 ರಲ್ಲಿ ನಾನು ವರದಿ ಮಾಡುವಾಗ ಪ್ರತೀಕ್‌ನನ್ನು ಅಹ್ಮದ್‌ನಗರ ಜಿಲ್ಲೆಯ ರಶಿನ್ ಹಳ್ಳಿಯಲ್ಲಿರುವ ಅವನ ಮನೆಯಲ್ಲಿ ಭೇಟಿಯಾಗಿದ್ದೆ. ಆಗ ಅವನಿಗೆ 13 ವರ್ಷ ವಯಸ್ಸು. ಪ್ರತೀಕ್‌ಗೆ ವರ್ಣಮಾಲೆಯ ಕೆಲವು ಅಕ್ಷರಗಳನ್ನು ಬರೆಯಲು ಬರುತ್ತಿತ್ತು. ಡಿಸೆಂಬರ್ 2020 ರ ಹೊತ್ತಿಗೆ ಅವನು ಬರೆಯುವುದನ್ನೇ ನಿಲ್ಲಿಸಿದ.
ಪ್ರತೀಕ್ ಶಾಲೆಗೆ ಹೋಗಲು ಶುರುಮಾಡಿದ್ದು 2018ರಲ್ಲಿ. ಎರಡು ವರ್ಷ ಸತತ ಅಭ್ಯಾಸವನ್ನು ಮಾಡಿ ಸಂಖ್ಯೆಗಳು ಮತ್ತು ಪದಗಳನ್ನು ಓದಲು ಮತ್ತು ಬರೆಯಲು ಕಲಿತ. ಮಾರ್ಚ್ 2020 ರಲ್ಲಿ ಅವನ ಓದು – ಬರಹ ಸುಧಾರಿಸುತ್ತಿದ್ದಂತೆ ಕೋವಿಡ್ -19 ಬಂತು. ಬೌದ್ಧಿಕವಾಗಿ ಅಸಮರ್ಥರಾಗಿರುವ 6 ರಿಂದ 18 ವರ್ಷ ವಯಸ್ಸಿನ 25 ವಿದ್ಯಾರ್ಥಿಗಳಲ್ಲಿ ಪ್ರತೀಕ್ ಕೂಡ ಒಬ್ಬ. ಅವರ ವಸತಿ ಶಾಲೆ ಎರಡು ವರ್ಷಗಳ ಕಾಲ ಮುಚ್ಚಿದ್ದರಿಂದ ಅವರನ್ನು ಅವರವರ ಮನೆಗೆ ಕಳುಹಿಸಲಾಯ್ತು.
“ಈ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕನಿಷ್ಠ ಎರಡು ಹಂತಗಳಲ್ಲಿ ಕುಂಠಿತವಾಗಿದೆ. ಈಗ ಪ್ರತಿಯೊಂದು ಮಗುವಿನಲ್ಲೂ ಒಂದೊಂದು ರೀತಿಯ ಸವಾಲಿದೆ’ ಎನ್ನುತ್ತಾರೆ ಶಾಲೆಯ ಕಾರ್ಯಕ್ರಮ ಸಂಯೋಜಕ ರೋಹಿತ್ ಬಗಡೆ. ಥಾಣೆ ಮೂಲದ ಎನ್‌ಜಿಒ ಶ್ರಮಿಕ್ ಮಹಿಳಾ ಮಂಡಲ್ ಈ ಶಾಲೆಯನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮತ್ತು ವಸತಿ ಸೌಲಭ್ಯವನ್ನು ನೀಡುತ್ತಿದೆ.
ಕೊರೋನದಿಂದಾಗಿ ಪ್ರತೀಕ್ ಓದುವ ಶಾಲೆ ಸೇರಿದಂತೆ ಅನೇಕ ಶಾಲೆಗಳು ಮುಚ್ಚಿದ್ದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು ಮಹಾರಾಷ್ಟ್ರ ಸರ್ಕಾರ ಶಾಲೆಗಳಿಗೆ ನಿರ್ದೇಶನಗಳನ್ನು ನೀಡಿತ್ತು. ಜೂನ್ 10, 2020 ರಂದು ಸಾಮಾಜಿಕ ನ್ಯಾಯ ಮತ್ತು ವಿಶೇಷ ನೆರವು ಇಲಾಖೆಗೆ ವಿಕಲಚೇತನರ ಕಮಿಷನರೇಟ್ ಬರೆದ ಪತ್ರದಲ್ಲಿ ಹೀಗೆ ಹೇಳಲಾಗಿದೆ: “ಮಕ್ಕಳಿಗೆ ಅವರ ಪೋಷಕರ ಮೂಲಕ ವಿಶೇಷ ಶಿಕ್ಷಣವನ್ನು ನೀಡಲು ಥಾಣೆ ಜಿಲ್ಲೆ ನವೀ ಮುಂಬೈನ ಖಾರ್ಘರ್ ನಲ್ಲಿ ಇರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಫಾರ್ ದಿ ಎಂಪವರ್ ಮೆಂಟ್ ಆಫ್ ಪರ್ಸನ್ಸ್ ವಿದ್ ಇಂಟಲೆಕ್ಚುವಲ್ ಡಿಸೇಬಿಲಿಟಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಶೈಕ್ಷಣಿಕ ಸಾಮಗ್ರಿಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಜೊತೆಗೆ ಪೋಷಕರಿಗೆ ಅಗತ್ಯವಿರುವ ಈ ಶೈಕ್ಷಣಿಕ ಸಾಮಗ್ರಿಗಳನ್ನು ಪೂರೈಸಬೇಕು.
ಹೆಚ್ಚಿನ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಒಂದು ಸವಾಲಾಗಿದ್ದರೂ, ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ಮಕ್ಕಳಿಗೆ ಇದು ಹೆಚ್ಚಿನ ಸಮಸ್ಯೆಗಳನ್ನು ತಂದಿಡುತ್ತದೆ. ಗ್ರಾಮೀಣ ಭಾರತದಲ್ಲಿ 5-19 ವಯಸ್ಸಿನ ಸುಮಾರು 4,00,000 ಬೌದ್ಧಿಕವಿಕಲ ಮಕ್ಕಳಲ್ಲಿ 1,85,086 ಮಾತ್ರ (ಭಾರತದಲ್ಲಿ 5,00,000 ಕ್ಕಿಂತ ಹೆಚ್ಚು ಬೌದ್ಧಿಕನ್ಯೂನ ಮಕ್ಕಳಿದ್ದಾರೆ) ಯಾವುದಾದರೂ ಒಂದು ಶಿಕ್ಷಣ ಸಂಸ್ಥೆಗೆ ಹಾಜರಾಗುತ್ತಿದ್ದಾರೆ. (2011ರ ಜನಗಣತಿ)
ಈ ಸೂಚನೆಯಂತೆ, ಪ್ರತೀಕ್‌ನ ಶಾಲೆ ಜ್ಞಾನಪ್ರಬೋಧನ್ ಮತಿಮಂದ್ ವಿದ್ಯಾಲಯ ಅವನ ಪೋಷಕರಿಗೆ ವರ್ಣಮಾಲೆಗಳ, ಸಂಖ್ಯೆಗಳ ಮತ್ತು ವಸ್ತುಗಳ ಚಾರ್ಟ್‌ಗಳು; ವ್ಯಾಯಾಮಗಳಿಗೆ ಸಂಬಂಧಿಸಿದ ಹಾಡುಗಳು; ಮತ್ತು ಇತರ ಬೋಧನಾ ಸಾಮಗ್ರಿಗಳನ್ನು ಕಳುಹಿಸಿತು. ಈ ಕಲಿಕಾ ಸಾಮಗ್ರಿಯನ್ನು ಬಳಸುವ ಬಗ್ಗೆ ಮಾರ್ಗದರ್ಶನ ನೀಡಲು ಶಾಲಾ ಸಿಬ್ಬಂದಿಗಳು ಅವರ ಪೋಷಕರೊಂದಿಗೆ ಸದಾ ಫೋನ್ ಸಂಪರ್ಕದಲ್ಲಿದ್ದರು.
"ಪೋಷಕರು ಮಗುವಿನೊಂದಿಗೆ ಕುಳಿತುಕೊಳ್ಳಬೇಕು [ಕಲಿಕೆ ಸಾಮಗ್ರಿಗಳನ್ನು ಬಳಸಿ ಕಲಿಯಲು ಅವರಿಗೆ ನೆರವು ನೀಡಲು], ಆದರೆ ಮಗುವನ್ನು ನೋಡಿಕೊಳ್ಳಲು ಅವರು ಮನೆಯಲ್ಲಿಯೇ ಇದ್ದರೆ ಅವರ ದಿನಗೂಲಿಯ ಮೇಲೆ ಪೆಟ್ಟು ಬೀರುತ್ತದೆ" ಎಂದು ಬಗಡೆ ಹೇಳುತ್ತಾರೆ. ಆದರೆ ಪ್ರತೀಕ್ ಸೇರಿದಂತೆ ಎಲ್ಲಾ 25 ವಿದ್ಯಾರ್ಥಿಗಳ ಪೋಷಕರು ಇಟ್ಟಿಗೆ ಗೂಡು ಕಾರ್ಮಿಕರು, ಕೃಷಿ ಕಾರ್ಮಿಕರು, ಇಲ್ಲವೇ ಸಣ್ಣ ರೈತರು.
ಪ್ರತೀಕ್ ನ ತಾಯಿ ಶಾರದ ಮತ್ತು ತಂದೆ ದತ್ತಾತ್ರೇಯ ರಾವುತ್ ಮನೆ ಬಳಕೆಗಾಗಿ ಖಾರಿಫ್ ಋತುವಿನಲ್ಲಿ (ಜೂನ್ ನಿಂದ ನವೆಂಬರ್) ಜೋಳ ಮತ್ತು ಸಜ್ಜೆಯನ್ನು ಬೆಳೆಯುತ್ತಾರೆ. "ನವೆಂಬರ್‌ನಿಂದ ಮೇ ವರೆಗೆ ನಾವು ತಿಂಗಳ 20-25 ದಿನಗಳ ಕಾಲ ಇತರರ ಜಮೀನಿನಲ್ಲಿ ಕೆಲಸ ಮಾಡುತ್ತೇವೆ" ಎಂದು ಶಾರದ ಹೇಳುತ್ತಾರೆ. ಅವರ ಒಟ್ಟು ಮಾಸಿಕ ಆದಾಯ ರೂ. 6,000ಕ್ಕಿಂತ ಹೆಚ್ಚಿಲ್ಲ. ಯಾವ ಪೋಷಕರಿಗೂ ತಮ್ಮ ಮಗುವಿಗೆ ನೆರವು ನೀಡಲು ಮನೆಯಲ್ಲಿಯೇ ಕುಳಿತುಕೊಳ್ಳಲು ಸಾಧ್ಯವಿಲ್ಲ. ಇದರಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ದಿನಗೂಲಿಯ ನಷ್ಟವೂ ಆಗುತ್ತದೆ.
"ಆದ್ದರಿಂದ ಪ್ರತೀಕ್ ಮತ್ತು ಇತರರಿಗೆ ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ" ಎಂದು ಬಗಾಡೆ ಹೇಳುತ್ತಾರೆ. “ಶಾಲೆಯಲ್ಲಿ ದೈನಂದಿನ ಚಟುವಟಿಕೆಗಳು ಮತ್ತು ಆಟಗಳು ಅವರನ್ನು ಸ್ವಾವಲಂಬಿಯನ್ನಾಗಿ ಮಾಡಿತು. ಅವರ ಉಪದ್ರವಕಾರಿ ವರ್ತನೆ ಮತ್ತು ಆಕ್ರಮಣಶೀಲತೆಯನ್ನು ನಿಯಂತ್ರಿಸಿತು. ಆದರೂ ಈ ಮಕ್ಕಳ ವೈಯಕ್ತಿಕ ಗಮನ ನೀಡುವುದು ಅಗತ್ಯವಿರುವುದರಿಂದ ಇಂತಹ ಚಟುವಟಿಕೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದು ಸುಲಭವಲ್ಲ.
ಶಾಲೆಯಲ್ಲಿ ನಾಲ್ಕು ಶಿಕ್ಷಕರು ಸೋಮವಾರದಿಂದ ಶುಕ್ರವಾರದವರೆಗೆ (ಮತ್ತು ಶನಿವಾರದಂದು ಕಡಿಮೆ ಸಮಯ) ಬೆಳಿಗ್ಗೆ 10 ರಿಂದ ಸಂಜೆ 4:30 ರವರೆಗೆ ಈ ಮಕ್ಕಳ ಮೇಲೆ ಗಮನ ನೀಡುತ್ತಾರೆ. ಅವರಿಗೆ ವಾಕ್ ಚಿಕಿತ್ಸೆ, ದೈಹಿಕ ವ್ಯಾಯಾಮ, ಸ್ವಯಂ-ಆರೈಕೆ, ಕಾಗದದಲ್ಲಿ ಮಾಡುವ ಕ್ರಾಫ್ಟ್, ಭಾಷಾ ಕೌಶಲ್ಯ, ಪದಬಳಕೆ, ಸಂಖ್ಯಾಶಾಸ್ತ್ರ, ಕಲೆ ಮತ್ತು ಇತರ ಚಟುವಟಿಕೆಗಳು ತರಬೇತಿ ನೀಡುತ್ತಾರೆ. ಈಗ ಶಾಲೆ ಮುಚ್ಚಿಹೋಗಿ ಇವೆಲ್ಲವೂ ಅವರಿಂದ ದೂರವಾದವು.
ಈಗ ಎರಡು ವರ್ಷಗಳ ನಂತರ ಶಾಲೆಗೆ ಬಂದಿರುವ ಮಕ್ಕಳಿಗೆ ಹಳೆಯ ದಿನಚರಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ. "ನಾವು ಅವರ ದೈನಂದಿನ ಅಭ್ಯಾಸಗಳು, ಸಂವಹನ ಮತ್ತು ಚಟುವಟಿಕೆಗೆ ನೀಡುವ ಗಮನದಲ್ಲಿ ಕುಂಠಿತವಾಗಿರುವುದನ್ನು ಗಮನಿಸಿದ್ದೇವೆ" ಎಂದು ಬಗಡೆ ಹೇಳುತ್ತಾರೆ. "ಕೆಲವು ಮಕ್ಕಳು ಆಕ್ರಮಣಕಾರಿಯಾಗಿ ವರ್ತಿಸುತ್ತಿದ್ದಾರೆ. ಅಸಹನೆ ಮತ್ತು ಹಿಂಸಾತ್ಮಕ ಸ್ವಭಾವ ಬೆಳೆಸಿಕೊಂಡಿದ್ದಾರೆ. ಏಕೆಂದರೆ ಅವರ ದಿನಚರಿಯಲ್ಲಿ ಮತ್ತೆ ಅನಿರೀಕ್ಷಿತ ಬದಲಾಗಿದೆ. ಅವರಿಗೆ ಈ ಬದಲಾವಣೆ ಅರ್ಥವಾಗುತ್ತಿಲ್ಲ.
ಕಲಿಕೆಯ ನಷ್ಟವನ್ನು ಸರಿಪಡಿಸಿಕೊಳ್ಳಲು ಪ್ರತೀಕ್ ಇನ್ನೂ ಕೆಲವು ವರ್ಷಗಳ ಅವಕಾಶವಿದೆ. ಆದರೆ 18 ವರ್ಷದ ವೈಭವ್ ಪೇಟ್ಕರ್‌ಗೆ ಇದು ಶಾಲೆಯ ಕೊನೆಯ ವರ್ಷ. ವಿಕಲಚೇತನರ (ಸಮಾನ ಅವಕಾಶಗಳು, ಹಕ್ಕುಗಳ ರಕ್ಷಣೆ ಮತ್ತು ಸಂಪೂರ್ಣ ಭಾಗವಹಿಸುವಿಕೆ) ಕಾಯಿದೆ, 1995 ಹೀಗೆ ಹೇಳುತ್ತದೆ- ‘ಅಂಗವೈಕಲ್ಯ ಹೊಂದಿರುವ ಪ್ರತಿ ಮಗುವಿಗೆ ಹದಿನೆಂಟು ವರ್ಷ ವಯಸ್ಸಾಗುವವರೆಗೆ ಸೂಕ್ತವಾದ ವಾತಾವರಣದಲ್ಲಿ ಉಚಿತ ಶಿಕ್ಷಣ ಪಡೆಯುವ ಅವಕಾಶವಿದೆ.
"ಅಲ್ಲದೇ, ಅವರ ಮನೆಯವರಿಗೆ ಮಕ್ಕಳನ್ನು ವೃತ್ತಿಪರ ತರಬೇತಿ ಸಂಸ್ಥೆಗಳಿಗೆ ಸೇರಿಸಲು ಸಾಧ್ಯವಾಗದ ಕಾರಣ ಅವರು ಸಾಮಾನ್ಯವಾಗಿ ಮನೆಯಲ್ಲಿಯೇ ಇರುತ್ತಾರೆ" ಎಂದು ಬಗಡೆ ಹೇಳುತ್ತಾರೆ.
ಒಂಬತ್ತನೇ ವಯಸ್ಸಿನಲ್ಲಿ 'ತೀವ್ರವಾದ ಮಾನಸಿಕ ಬೆಳವಣಿಗೆಯ ಕುಂಠಿತಕ್ಕೆ ಒಳಗಾಗಿರುವ ವೈಭವ್‌ಗೆ ವಾಕ್ ದೌರ್ಬಲ್ಯವಿದೆ. ಮತ್ತು ಸದಾ ಔಷಧಿಯನ್ನು ತೆಗೆದುಕೊಳ್ಳಬೇಕಾದ ಆಗಾಗ ಬರುವ ಅಪಸ್ಮಾರದಿಂದ ಬಳಲುತ್ತಿದ್ದಾನೆ. " ಆರಂಭಿಕವಾಗಿ ಅವರ ಮೇಲೆ ಗಮನ ನೀಡುವುದು ಹಾಗೂ 7-8 ನೇ ವಯಸ್ಸಿನಲ್ಲಿ ವಿಶೇಷ ಶಿಕ್ಷಣ ನೀಡುವುದರಿಂದ ಮಗುವಿನ ಬೆಳವಣಿಗೆ ಬಲಗೊಳ್ಳುತ್ತದೆ. ಹೊಸ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಸಾಮರ್ಥ್ಯ, ದೈನಂದಿನ ಜೀವನವನ್ನು ನಿಭಾಯಿಸುವುದು ಮತ್ತು ನಡವಳಿಕೆ ಮೇಲೆ ನಿಯಂತ್ರಣ ಹೆಚ್ಚಾಗುತ್ತದೆ" ಎಂದು ಉತ್ತರ-ಮಧ್ಯ ಮುಂಬೈನಲ್ಲಿರುವ ಸಿಯಾನ್‌ನಲ್ಲಿರುವ ಲೋಕಮಾನ್ಯ ತಿಲಕ್ ಮುನ್ಸಿಪಲ್ ಜನರಲ್ ಆಸ್ಪತ್ರೆಯ ಮಕ್ಕಳ ನರವಿಜ್ಞಾನಿ, ಬೆಳವಣಿಗೆ ಅಸ್ವಸ್ಥತೆಯ ತಜ್ಞ ಮತ್ತು ಪ್ರಾಧ್ಯಾಪಕರಾದ ಡಾ. ಮೋನಾ ಗಜ್ರೆ ಹೇಳುತ್ತಾರೆ.
2017 ರಲ್ಲಿ 13 ನೇ ವಯಸ್ಸಿನಲ್ಲಿ ವೈಭವ್ ಶಾಲೆಗೆ ಹೋಗಲು ಆರಂಭಿಸಿದ. ಸುಮಾರು ಮೂರು ವರ್ಷಗಳ ವರೆಗೆ ಅಭ್ಯಾಸ ಮಾಡಿ ಮತ್ತು ತರಬೇತಿ ಪಡೆದು ಸ್ವ-ಆರೈಕೆ ಅಭ್ಯಾಸಗಳು, ನಡವಳಿಕೆ ನಿಯಂತ್ರಣ ಮತ್ತು ಚಿತ್ರಗಳಿಗೆ ಬಣ್ಣ ಹಚ್ಚುವಂತಹ ಕೆಲವು ಕೌಶಲ್ಯಗಳನ್ನು ಕಲಿತ. "ಆಕ್ಯುಪೇಷನಲ್ ಥೆರಪಿಯಿಂದಾಗಿ ಅವನು ಸಾಕಷ್ಟು ಸುಧಾರಿಸಿದ್ದಾನೆ," ಬಗಾಡೆ ಹೇಳುತ್ತಾರೆ. “ಅವನು ಬಣ್ಣ ಹಚ್ಚುತ್ತಿದ್ದ, ಮಾತನಾಡುತ್ತಿದ್ದ. ಎಲ್ಲಾ ಮಕ್ಕಳಿಗಿಂತ ಮೊದಲು ಅವನೇ ಎಲ್ಲದಕ್ಕೂ ಸಿದ್ಧನಾಗುತ್ತಿದ್ದ,” ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಮಾರ್ಚ್ 2020 ರಲ್ಲಿ ವೈಭವ್ ನನ್ನು ಅವನ ಮನೆಗೆ ಕಳುಹಿಸುವಾಗ ಯಾವುದೇ ಆಕ್ರಮಣಕಾರಿ ವರ್ತನೆಯನ್ನು ತೋರಿಸಲಿಲ್ಲ.
ವೈಭವ್ ನ ತಂದೆ ಶಿವಾಜಿ ಮತ್ತು ತಾಯಿ ಸುಲಕ್ಷಣ ಅವನ ಅಜ್ಜ-ಅಜ್ಜಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ವರ್ಷವಿಡೀ ಕೆಲಸ ಮಾಡುತ್ತಾರೆ. ಅವರು ಮಾನ್ಸೂನ್ ನಲ್ಲಿ ಜೋಳ, ಮೆಕ್ಕೆ ಜೋಳ, ಕೆಲವೊಮ್ಮೆ ಈರುಳ್ಳಿಯನ್ನು ಬೆಳೆಯುತ್ತಾರೆ. ಡಿಸೆಂಬರ್ ನಿಂದ ಮೇ ವರೆಗೆ ರಬಿ ಋತುವಿನಲ್ಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಅಹ್ಮದ್‌ನಗರ ಜಿಲ್ಲೆಯ ಕರ್ಜತ್ ತಾಲೂಕಿನ ಕೋರೆಗಾಂವ್‌ನಲ್ಲಿರುವ ತಮ್ಮ ಮನೆಯ ಕೋಣೆಯೊಂದರಲ್ಲಿ ಒಬ್ಬಂಟಿಯಾಗಿರುವ ವೈಭವ್‌ನನ್ನು ನೋಡಿಕೊಳ್ಳಲು ಅವರಿಗೆ ಸಮಯವೇ ಇಲ್ಲ.
“ಎರಡು ವರ್ಷಗಳ ಕಾಲ ಅವನ ಶಾಲೆ ಮುಚ್ಚಿರುವುದರಿಂದ ಅವನಲ್ಲಿ ಆಕ್ರಮಣಕಾರಿ, ಹಠಮಾರಿ ಸ್ವಭಾವ ಹಚ್ಚಾಗಿದೆ, ನಿದ್ರಾಹೀನತೆಯಿಂದ ಬಳಲುತ್ತಿದ್ದಾನೆ. ಸುತ್ತಮುತ್ತಲಿನ ಜನರನ್ನು ನೋಡುವಾಗ ಅವನಲ್ಲಿ ಉಂಟಾಗುತ್ತಿದ್ದ ಚಡಪಡಿಕೆ ಮತ್ತೆ ಹೆಚ್ಚಾಗಿದೆ. ಅವನಿಗೆ ಇನ್ನು ಮುಂದೆ ಬಣ್ಣಗಳನ್ನು ಗುರುತಿಸಲು ಸಾಧ್ಯವಿಲ್ಲ,” ಎಂದು ಬಗಡೆ ಹೇಳುತ್ತಾರೆ. ಎರಡು ವರ್ಷಗಳಿಂದ ಮನೆಯಲ್ಲೇ ಇದ್ದು ಡಮ್ಮಿ ಸ್ಮಾರ್ಟ್‌ಫೋನ್‌ನೊಂದಿಗೆ ಆಟವಾಡುತ್ತಿರುವ ವೈಭವ್ ಸಾಕಷ್ಟು ಹಿಂದುಳಿದಿದ್ದಾನೆ.
ಜ್ಞಾನಪ್ರಬೋಧನ್ ಮತಿಮಂದ್ ನಿವಾಸಿ ವಿದ್ಯಾಲಯದ ಶಿಕ್ಷಕರು ಈಗ ಮತ್ತೆ ಎಲ್ಲವನ್ನೂ ಆರಂಭದಿಂದಲೇ ಕಲಿಸಲು ಸಿದ್ಧರಾಗಿದ್ದಾರೆ. "ನಮ್ಮ ಈಗಿನ ಆದ್ಯತೆಯೆಂದರೆ ಮಕ್ಕಳನ್ನು ಶಾಲೆಯ ವಾತಾವರಣ ಮತ್ತು ದಿನಚರಿಗೆ ಒಗ್ಗಿಸುವುದು" ಎಂದು ಬಗಡೆ ಹೇಳುತ್ತಾರೆ.
ಪ್ರತೀಕ್ ಮತ್ತು ವೈಭವ್ ಅವರು ಕೊರೋನ ಬರುವ ಮೊದಲು ಕಲಿತ ಕೌಶಲ್ಯ ಮತ್ತು ಜ್ಞಾನವನ್ನು ಈಗ ಮತ್ತೆ ಕಲಿಯಬೇಕಾಗಿದೆ. ಕೊರೋನ ಪ್ರಾರಂಭವಾದ ತಕ್ಷಣ ಅವರನ್ನು ಮನೆಗೆ ಕಳುಹಿಸಲಾಗಿರುವುದರಿಂದ, ಕೋವಿಡ್ -19 ಜೊತೆಗೆ ಹೊಂದಿಕೊಂಡು ಬದುಕುವುದು ಅವರ ಹೊಸ ಕಲಿಕೆಯ ಮುಖ್ಯ ಭಾಗವಾಗಿದೆ.
ಜೂನ್ 15, 2022 ರಂದು ಮಹಾರಾಷ್ಟ್ರದಲ್ಲಿ 4,024 ಹೊಸ ಕೊರೋನ ವೈರಸ್ ಪ್ರಕರಣಗಳನ್ನು ದಾಖಲಾಗಿವೆ, ಇದು ಹಿಂದಿನ ದಿನಕ್ಕಿಂತ 36 ಶೇಕಡಾ ಹೆಚ್ಚು ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವೈರಸ್‌ನಿಂದ ಮಕ್ಕಳನ್ನು ರಕ್ಷಿಸಲು ಜಾರಿಗೊಳಿಸಲಾಗಿರುವ ಸುರಕ್ಷಾ ಕ್ರಮಗಳನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.
“ನಮ್ಮ ಎಲ್ಲಾ ಸಿಬ್ಬಂದಿಗಳಿಗೆ ಲಸಿಕೆ ಹಾಕಲಾಗಿದೆ. ನಮ್ಮ ಮಕ್ಕಳ ಆರೋಗ್ಯ ಪರಿಸ್ಥಿತಿಯ ದೃಷ್ಟಿಯಿಂದ ನಮ್ಮ ಸಹಾಯಕ ಸಿಬ್ಬದಿಗಳು ಮತ್ತು ಶಿಕ್ಷಕರಿಗೆ ನಾವು ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ನೀಡಿದ್ದೇವೆ,” ಎಂದು ಬಗಡೆ ಹೇಳುತ್ತಾರೆ. "ಮಾಸ್ಕ್ ಧರಿಸಿ ಮಕ್ಕಳ ಜೊತೆಗೆ ಮಾತನಾಡಿದರೆ ಅವರಿಗೆ ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಯಾಕೆಂದರೆ, ಅವರು ಮುಖದ ಅಭಿವ್ಯಕ್ತಿಯನ್ನು ನೋಡಿ ಮಾತನ್ನು ಅರ್ಥ ಮಾಡಿಕೊಳ್ಳುತ್ತಾರೆ" ಎಂದು ಅವರು ಹೇಳುತ್ತಾರೆ. ಈ ಮಕ್ಕಳಿಗೆ ಮಾಸ್ಕ್ ಯಾಕೆ ಧರಿಸಬೇಕು, ಹೇಗೆ ಧರಿಸಬೇಕು ಮತ್ತು ಅದನ್ನು ಯಾಕೆ ಮುಟ್ಟಬಾರದು ಎಂಬುದನ್ನು ಕಲಿಸುವುದು ಒಂದು ಸವಾಲಾಗಿದೆ ಎಂದು ಅವರು ಹೇಳುತ್ತಾರೆ.
"ಬೌದ್ಧಿಕ ನ್ಯೂನ ಮಕ್ಕಳಿಗೆ ಏನಾದರೂ ಹೊಸದನ್ನು ಕಲಿಸುವಾಗ ನಾವು ಪ್ರತೀ ಕ್ರಿಯೆಯನ್ನು ಹಂತಹಂತವಾಗಿ, ತುಂಬಾ ತಾಳ್ಮೆಯಿಂದ ಗಮನಿಸುತ್ತೇವೆ ಮತ್ತು ಪದೇ ಪದೇ ಅವರಿಗೆ ಸುಲಭವಾಗಿ ನೆನಪಿಟ್ಟುಕೊಳ್ಳಲು ಆಗುವಂತೆ ಮಾಡುತ್ತೇವೆ" ಎಂದು ಡಾ. ಗಜ್ರೆ ಹೇಳುತ್ತಾರೆ.
ಜ್ಞಾನಪ್ರಬೋಧನ್ ಮತಿಮಂದ್ ನಿವಾಸಿ ವಿದ್ಯಾಲಯದ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗಿ ಕಲಿತ ಮೊದಲ ಸಂಗತಿಯೆಂದರೆ ಕೈ ತೊಳೆಯುವುದು ಹೇಗೆ ಎಂಬುದನ್ನು.
"ಖೈಲಾ...ಖೈಲಾ...ಜೀವನ್... [ತಿನ್ನೋದಕ್ಕೆ... ತಿನ್ನೋದಕ್ಕೆ...ಊಟ]," ಮತ್ತೆ ಹೇಳುತ್ತಾ, ವೈಭವ್ ತಿನ್ನಲು ಕೇಳುತ್ತಾನೆ. "ನಮ್ಮ ಅನೇಕ ಮಕ್ಕಳಿಗೆ, ಕೈ ತೊಳೆಯಲು ಹೇಳಿದರೆ ಇದು ಊಟದ ಸಮಯ ಎಂದು ಭಾವಿಸುತ್ತಾರೆ. ಆದ್ದರಿಂದ, ಈ ಕೋವಿಡ್ ಸಮಯದಲ್ಲಿ ನಾವು ಅವರಿಗೆ ಯಾಕೆ ಆಗಾಗ ಕೈ ತೊಳೆಯಬೇಕು ಎಂಬುದನ್ನು ಅರ್ಥ ಮಾಡಿಸಬೇಕಾಗಿದೆ” " ಎಂದು ಬಗಡೆ ಹೇಳುತ್ತಾರೆ.
ಅನುವಾದಕರು: ಚರಣ್ ಐವರ್ನಾಡು