ಸಂಜಯ ಗಾಂಧಿ ನಗರ ಟ್ರಾನ್ಸ್ ಪೋರ್ಟ್ ಡಿಪೋ , ದೆಹಲಿಯ ಹೂರವಲಯದ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿದೆ. ಈ ಪ್ರದೇಶ, ಟ್ರಕ್ ರಿಪೇರಿ ಮತ್ತು ಅದಕ್ಕೆ ಸಂಬಂಧಪಟ್ಟ ಕೆಲಸಗಳಿಗೆ ಕೇಂದ್ರಸ್ಥಾನ. ಪುರುಷರ ಭದ್ರಕೋಟೆಯಂತಿರುವ ಇಲ್ಲಿ, ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದು, ಅವಾಚ್ಯ ಶಬ್ದಗಳನ್ನುಪಯೋಗಿಸಿ ಹರಟೆ ಹೊಡೆಯುವುದು ಸಾಮಾನ್ಯ. ಉಪಕರಣಗಳನ್ನು ಬದಲಿಸುವ, ಟೈರ್ ಬದಲಾಯಿಸುವ ಅಥವಾ ಪಂಚರ್ ಸರಿಪಡಿಸುವ ಮಸಿ ಮೆತ್ತಿಕೊಂಡ ಸಾಕಷ್ಟು ಕೈಗಳ ಮಧ್ಯೆ ಹೊಳೆಯುವ ಬಣ್ಣ ಮೆತ್ತಿಕೊಂಡ ಉಗುರು ಮತ್ತು ಬಳೆಗಳನ್ನು ಹೊಂದಿದ ಕೈಗಳೂ ಸಹ ಅದೇ ಕೆಲಸವನ್ನು ಮಾಡುತ್ತಿವೆ. ಶಾಂತಿ ದೇವಿ (70), ಆ ಡಿಪೋದಲ್ಲಿ ಕೆಲಸ ಮಾಡುತ್ತಿರುವ ಮಹಿಳೆ. ದಶಕಗಳಿಂದಲೂ ಕೆಲಸ ಮಾಡುತ್ತಿರುವ ಈಕೆ, ಬಹುಶಃ ಭಾರತದ ಮೊದಲ ಮಹಿಳಾ ಮೆಕ್ಯಾನಿಕ್ ಇರಬಹುದು. ಇವಳು ತನ್ನ ಗಂಡ ರಾಮ್ ಬಹದ್ದೂರ್ (55) ನ ಜೊತೆ ಕೆಲಸ ಮಾಡುತ್ತಿದ್ದಾಳೆ. ತನ್ನ ಹೆಂಡತಿ ತುಂಬಾ ವರ್ಷಗಳಿಂದ ಸಂಪಾದಿಸುತ್ತಿದ್ದಾಳೆ ಅನ್ನುವ ಬಗ್ಗೆ ಈತನಿಗೆ ಹೆಮ್ಮೆಯಿದೆ.
ಮೂಲತಃ ಗ್ವಾಲಿಯರ್ ದವಳಾದ ದೇವಿಗೆ, ಪುರುಷರ ಭದ್ರಕೋಟೆಯನ್ನು ಭೇದಿಸುವುದು ಹೊಸತೇನಲ್ಲ. 45 ವರ್ಷಗಳ ಹಿಂದೆಯೇ ಈಕೆ ದೆಹಲಿಗೆ ಬಂದು ಸೇರಿದ್ದಾಳೆ. ಹತ್ತಿರದ ಸ್ವರೂಪ ನಗರದಲ್ಲಿ ವಾಸಿಸುತ್ತಿರುವ ಈಕೆ ತನ್ನ ತಾನು ಉಳಿಸಿದ 4,500 ರೂಪಾಯಿಗಳಿಂದ ತನ್ನ ಮೊದಲನೆಯ ಮದುವೆಯ ಖರ್ಚನ್ನು ನಿಭಾಯಿಸಿದ್ದಾಳೆ.“ನಮ್ಮದು ಬಡ ಕುಟುಂಬ, ಸ್ವಾಮಿ. ನಮ್ಮನ್ನೆಲ್ಲ ಬೆಳೆಸಲು ನಮ್ಮ ತಾಯಿ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ನಾನು ಬಟ್ಟೆ ಹೊಲೆಯುವುದು, ಬೀಡಿ ಕಟ್ಟುವುದಂತಹ ಚಿಲ್ಲರೆ ಕೆಲಸಗಳನ್ನು ಮಾಡಿದ್ದೇನೆ. ಅದರಲ್ಲಿಯೇ ಉಳಿತಾಯ ಮಾಡಿ, ಮದುವೆ ಮಾಡಿಕೊಂಡು ಹೊರಬಿದ್ದೆ.”
ಡಿಪೋದ ಅಂಗಡಿ ಸಂಖ್ಯೆ AW-7 ನ ಎದುರಿಗೆ ಟೀ ಅಂಗಡಿ ಇಡುವುದರ ಮೂಲಕ ದೇವಿ ಮತ್ತು ಬಹದ್ದೂರ್ ಜೀವನ ಪ್ರಾರಂಭ ಮಾಡಿದ್ದಾರೆ. ಅವರು ಈಗಲೂ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, 25 ವರ್ಷಗಳ ನಂತರ ಅದೇ ಅಂಗಡಿ ರಿಪೇರಿ ಅಂಗಡಿಯಾಗಿ ರೂಪಾಂತರ ಹೊಂದಿದೆ. ದೇವಿ ಹೇಳುವಂತೆ ಅವಳು ಒಬ್ಬ ಮೇಸ್ತ್ರಿಯ ಕೈ ಕೆಳಗೆ ಟೈರ್ ಬದಲಾಯಿಸುವುದು, ಚಿಕ್ಕ ಪುಟ್ಟ ಎಂಜಿನ್ ರಿಪೇರಿ ಮಾಡುವುದು, ಪಂಚರ್ ಸರಿಮಾಡುವುದನ್ನು ಕಲಿತುಕೊಂಡಿದ್ದಾಳೆ. ಈ ಕೆಲಸಕ್ಕೆಲ್ಲ ಅವಳಿಗೆ ಸಿಕ್ಕಿದ್ದು ಸ್ವಲ್ಪ ಊಟ ಮತ್ತು ಹಣ.“ಪುಕ್ಕಟೆಯಾಗಿ ಕಲಿಯಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ನಾನು ಏನನ್ನಾದರೂ ಹೂಡಿಕೆ ಮಾಡಲೇ ಬೇಕಲ್ಲವೇ” ಅಂತಾ ನಸುನಗುತ್ತಾ ಹೇಳುತ್ತಾಳವಳು.
ತಮ್ಮ ಹಿಂದಿನ ಮದುವೆಯಿಂದಾಗಿ ಇಬ್ಬರಿಗೂ ತಲಾ 3-5 ಮಕ್ಕಳಿವೆ. ಅವುಗಳನ್ನು ಬೆಳೆಸಲು ಟೀ ಅಂಗಡಿಯಲ್ಲಿ ಆಗುವ ಗಳಿಕೆಗಿಂತಲೂ ಜಾಸ್ತಿ ಗಳಿಸುವ ಯೋಜನೆಯಿತ್ತು.“ಅವನ ಹೆಂಡತಿ ಬೇರೆಯವನ ಜೊತೆ ಓಡಿಹೋದಳು. ನನ್ನ ಗಂಡ ಬೇಗನೆ ಸತ್ತುಹೋದ. ಹೇಗಿದ್ದರೂ ಆತ ಅನಾಥ. ನಾನು ಕೂಡಿಸಿಟ್ಟದ್ದನ್ನೆಲ್ಲ ಆತ ಕುಡಿದು, ಜೂಜಾಡಿ ಉಡಾಯಿಸುತ್ತಾನೆ. ನಾನವನಿಗೆ ದುಡ್ಡು ಕೊಡಲು ನಿರಾಕರಿಸಿದರೆ, ಹೊಡೆಯುತ್ತಾನೆ. ರಸ್ತೆ ಅಪಘಾತದಲ್ಲಿ ನನ್ನ ದೊಡ್ಡ ಮಗನನ್ನು ಕೆಲವು ವರ್ಷಗಳ ಹಿಂದೆ ಕಳೆದುಕೊಂಡಿದ್ದೇನೆ. ಆದರೆ, ಜೀವನ ನಡೆಯಲೇ ಬೇಕಲ್ಲವೇ”
ನೇರಳೆ ಬಣ್ಣದ ಸೀರೆ ಮತ್ತದಕ್ಕೆ ಸರಿಹೊಂದುವ, ತಾನೇ ಹೊಲೆದುಕೊಂಡಿರುವ, ಬ್ಲೌಸ್ ತೊಟ್ಟಿರುವ ಈಕೆಯ ಪಾದಗಳು ಹಿತವಾದ ಬೂಟು, ಸಾಕ್ಸ್ ಗಳಿಂದ ಮುಚ್ಚಲ್ಪಟ್ಟಿವೆ. ಸಾಕ್ಸ್ ಮೇಲೆ ಬೆಳ್ಳಿಯ ಕಾಲ್ಗೆಜ್ಜೆ ಇವೆ. ಧೂಳು ಮತ್ತು ಬಿಸಿಲಿನಿಂದ ತಪ್ಪಿಸಿಕೊಳ್ಳಲು ತಲೆ ಮೇಲೆ ಸೆರಗು (ಪಲ್ಲು ) ಸದಾ ಇರುತ್ತದೆ. ಬೆನ್ನು ಮಡಚದೇ ಬಗ್ಗಿ ಟೈರ್ ಬದಲಾಯಿಸುವುದನ್ನು ನೋಡಿ, ಇವಳನ್ನು ಹೊಲದಲ್ಲಿ ಕೆಲಸ ಮಾಡುವ ಮಹಿಳೆ ಅಂತಾ ತಪ್ಪು ತಿಳಿದುಕೊಳ್ಳುವ ಸಾಧ್ಯತೆ ಇಲ್ಲದಿಲ್ಲ. ಥಟ್ಟನೆ ಟ್ಯೂಬ್ ಅನ್ನು ತೆಗೆದು, ಅದರ ಮೇಲೆ ಹೇರಳವಾಗಿ ಪೌಡರ್ ಹಾಕುತ್ತಾಳೆ.“ಟ್ಯೂಬ್ ತುಂಬಾ ಬಿಸಿಯಾದಾಗ ಟೈರ್ ಗೆ ಹತ್ತಿಕೊಳ್ಳದಂತೆ ಇದು ತಡೆಯುತ್ತದೆ,” ಪಂಚರ್ ಹುಡುಕುತ್ತಾ ಅವಳು ವಿವರಿಸುತ್ತಾಳೆ. ಏನು ಕೆಲಸ ಮಾಡಬೇಕು ಅಂತಾ ಅವಳಿಂದ ಕೇಳುವಾಗ ಅವಳ ಗಂಡನಿಗೆ ಒಂಥರಾ ಹೆಮ್ಮೆ.“ನಾವಿಬ್ಬರೂ ಸ್ನೇಹಿತರಿದ್ದಂತೆ,” ಅಂತೆನ್ನುವ ಆತ, “ನಾವಿಬ್ಬರೇ ದುಡಿದು 9 ಗಜದ (450 ಚದರ ಅಡಿ) ಮನೆಯನ್ನು ಕಟ್ಟಿಕೊಂಡಿದ್ದೇವೆ. ಅಲ್ಲದೆ, ನಮ್ಮ ಮಕ್ಕಳನ್ನು ದಡ ಮುಟ್ಟಿಸಿದ್ದೇವೆ.” ಅಂತಾ ಹೇಳುತ್ತಾನೆ.
ಇಲ್ಲಿನ ಜನ ಅವಳನ್ನು ಹೇಗೆ ನೋಡುತ್ತಾರೆ? “ಅದು, ನೀವು ಹೇಗೆ ನಡೆದುಕೊಳ್ಳುತ್ತೀರಿ ಅನ್ನುವುದರ ಮೇಲೆ ಅವಲಂಬಿತವಾಗುತ್ತೆ. ಅವರಿಗೆ ನಾನೂ ಅವರಂತೆಯೇ ಕೆಲಸ ಮಾಡುತ್ತೇನೆ ಅನ್ನುವವುದರ ಬಗ್ಗೆ ಖುಶಿ ಇದೆ. ಅದಕ್ಕಿಂತ ಹೆಚ್ಚಾಗಿ ಸುಮಾರು ವರ್ಷಗಳಿಂದ ನನ್ನ ಬಗ್ಗೆ ಪತ್ರಿಕೆಗಳಲ್ಲಿ ಬರೆಯುತ್ತಿರುವುದು ಅವರಿಗೆ ಖುಶಿ ನೀಡಿದೆ.”
ದೇವಿಗೆ ಬಣ್ಣಗಳೆಂದರೆ ಇಷ್ಟ. ಉಗುರಿಗೆ ಸಾಮಾನ್ಯವಾದ ನೇಲ್ ಪಾಲಿಶ್ ಬಳಿದುಕೊಳ್ಳುವುದರ ಬದಲಾಗಿ, ಆಕೆ ಕಿಟಕಿಗೆ ಹಾಕುವ ಫಿಲ್ಮ್ ಅನ್ನು ಹಚ್ಚಿಕೊಂಡಿದ್ದಾಳೆ. ಅದು ರಾತ್ರಿಯಲ್ಲಿ ಹೊಳೆಯುತ್ತದೆಯಂತೆ. ಸಾಮಾನ್ಯವಾದ ಗಾಜಿನ ಬಳೆಗಳ ಬದಲಾಗಿ ಪ್ಲಾಸ್ಟಿಕ್ ಬಳೆಗಳು ಕೈ ಏರಿವೆ. ಕೆಲಸದಲ್ಲಿನ ಅಪಾಯ (occupational hazard) ತಪ್ಪಿಸಲು ಈ ಕ್ರಮ.“ಒಮ್ಮೆ ಉದ್ದನೆಯ ಟೂಲ್ ಕೊಡಬೇಕಾದರೆ, ನನ್ನ ಗಾಜಿನ ಬಳೆಗಳಲ್ಲಿ ಸಿಕ್ಕಿಕೊಂಡು, ಬಳೆಗಳು ಒಡೆದವು. ಬಳೆ ಚೂರುಗಳು ಚರ್ಮದ ಒಳ ಹೊಕ್ಕಿದ್ದರಿಂದ ಗಾಯ ಆಯಿತು. ನನಗೆ ಬಳೆ ಅಂದರೆ ಇಷ್ಟ, ಸಲೀಸಾಗಿ ಒಡೆಯದ ಬಳೆಗಳನ್ನು ಹಾಕುತ್ತೇನೆ ಅಷ್ಟೇ.”
ಶಾಂತಿದೇವಿ: “...ಜೀವನ ನಡೆಯಲೇಬೇಕಲ್ಲವೇ” (ಚಿತ್ರ: ಅರವಿಂದ್ ಜೈನ್ )
ದೇವಿಯಂತಹ ಎಷ್ಟೋ ಮಹಿಳೆಯರಿಗೆ ಭದ್ರಕೋಟೆಯನ್ನು ಭೇದಿಸುವುದು ಆಯ್ಕೆಯೂ ಅಲ್ಲ, ತಮ್ಮ ಛಾಪನ್ನು ಮೂಡಿಸಬೇಕೆನ್ನುವ ಇಚ್ಛೆಯೂ ಅಲ್ಲ. ಇದಕ್ಕೆ ಕೇವಲ ಲೌಕಿಕತೆ ಮತ್ತು ಅಗತ್ಯ ಕಾರಣ.
ಈ ಲೇಖನ ಈ ಮೊದಲು '
ದಿ ವೀಕ್
' ನಲ್ಲಿ ಮಾರ್ಚ್ 7, 2016 ರಂದು ಪ್ರಕಟವಾಗಿದೆ