ನೌಕರ್‌ ಹೋ ಯಾ ಮಾಲಿಕ್‌, ಲೀಡರ್‌ ಹೋ ಯಾ ಪಬ್ಲಿಕ್‌
ಅಪ್ನೆ ಆಗೆ ಸಭೀ ಝುಕೆ ಹೈ, ಕ್ಯಾ ರಾಜಾ ಕ್ಯಾ ಸೈನಿಕ್‌
(‘ನೌಕರನಿರಲಿ ಅಥವಾ ಮಾಲೀಕನಿರಲಿ, ನಾಯಕನೇ ಆಗಲಿ, ಜನಗಳೇ ಆಗಲಿ
ಆತ ರಾಜನಾಗಿರಬಹುದು ಅಥವಾ ಸೈನಿಕನಿರಬಹುದು ನನ್ನ ಮುಂದೆ, ಎಲ್ಲರೂ ತಲೆ ತಗ್ಗಿಸುವವರೇ)

೧೯೫೭ರ ಪ್ಯಾಸಾ ಚಲನಚಿತ್ರದ ‘ತೇಲ್‌ ಮಾಲಿಶ್‌ʼ ಹಾಡಿನ ಸಾಹಿರ್‌ ಲೂಧಿಯಾನ್ವಿಯವರ ಈ ಅಮೋಘ ಸಾಲುಗಳು ನಿರ್ಲಕ್ಷಿತ ಹಾಗೂ ಅತ್ಯಂತ ಹೆಚ್ಚಿನ ತಾರತಮ್ಯಕ್ಕೀಡಾದ ಕ್ಷೌರಿಕರ ಸಮುದಾಯಕ್ಕೆ ಸ್ವಲ್ಪಮಟ್ಟಿನ ಆತ್ಮಾಭಿಮಾನವನ್ನು ನೀಡಿತು.

ಲಾತೂರ್‌ನಲ್ಲಿ ಮಾತ್ರವಲ್ಲದೆ, ಮಹಾರಾಷ್ಟ್ರದಾದ್ಯಂತ ಹಾಗೂ ಇಡೀ ಭಾರತದಲ್ಲಿ, ಲಾಕ್‌ಡೌನ್‌ನಲ್ಲಿನ ಇವರ ಪ್ರಸ್ತುತ ಪರಿಸ್ಥಿತಿಯಿಂದಾಗಿ, ಈ ಆತ್ಮಾಭಿಮಾನದ ಲವಲೇಶವೂ ಈಗ ಉಳಿದಿಲ್ಲ. ದಿನದ ಸಂಪಾದನೆಯನ್ನೇ ಆಶ್ರಯಿಸಿದ್ದು, ತಮ್ಮ ಗ್ರಾಹಕರಿಂದ ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ವಿಚಾರವನ್ನು ಊಹಿಸಲೂ ಆಗದ ಇವರಿಗೆ ದುಪ್ಪಟ್ಟು ಹೊಡೆತವನ್ನು ನೀಡಿದಂತಾಗಿದೆ.

“ಲಾಕ್‌ಡೌನ್‌, ನಮ್ಮ ಉಳಿವಿಗೇ ಸಂಚಕಾರವನ್ನು ತಂದಿದೆ. ಮುಂದಿನ 10-15 ದಿನಗಳು ನನ್ನ ಕುಟುಂಬಕ್ಕೆ ಹೇಗೆ ಊಟದ ವ್ಯವಸ್ಥೆ ಮಾಡಬೇಕೆಂಬುದೇ ತಿಳಿಯದಾಗಿದೆ” ಎನ್ನುತ್ತಾರೆ 40ರ ವಯಸ್ಸಿನ ಉತ್ತಮ್‌ ಸೂರ್ಯವಂಶಿ (ಮೇಲಿನ ಮುಖಪುಟ ಚಿತ್ರದಲ್ಲಿ, ಸೋದರಳಿಯ ಅರುಷ್‌ನೊಂದಿಗೆ ಎಡಭಾಗದಲ್ಲಿರುವವರು). ಇವರು, ಲಾತೂರ್‌ ಜಿಲ್ಲೆಯ 11 ಕಿ. ಮೀ. ದೂರದ ಗಂಗಾಪುರ್‌ ಹಳ್ಳಿಯಲ್ಲಿನ ಕ್ಷೌರಿಕರು.

ಲಾಕ್‌ಡೌನ್‌ ಸಮಯದಲ್ಲಿನ ತಮ್ಮ ಅಸಹಾಯಕತೆಯನ್ನು ವಿವರಿಸುತ್ತ, “ನನ್ನ ಹಳ್ಳಿಯಲ್ಲಿ 12 ಕುಟುಂಬಗಳು ಈ ಉದ್ಯಮವನ್ನೇ ಸಂಪೂರ್ಣವಾಗಿ ಅವಲಂಬಿಸಿವೆ. ನಮಗೆ ಈ ಸಂಪಾದನೆಯಿಲ್ಲದಿದ್ದಲ್ಲಿ, ಊಟವೂ ದೊರೆಯುವುದಿಲ್ಲ” ಎನ್ನುತ್ತಾರೆ ಉತ್ತಮ್‌. ಇವರ ಸಲೂನಿನಲ್ಲಿ ಮೂರು ಕುರ್ಚಿಗಳಿದ್ದು, ಇತರೆ ಎರಡು ಕುರ್ಚಿಗಳಲ್ಲಿ ಅವರ ಸಹೋದರರಾದ 36 ವರ್ಷದ ಶ್ಯಾಮ್‌ ಮತ್ತು 31ರ ವಯಸ್ಸಿನ ಕೃಷ್ಣ (ಮೇಲಿನ ಮುಖಪುಟ ಚಿತ್ರದಲ್ಲಿನ ಮಧ್ಯಭಾಗದಲ್ಲಿ ಮತ್ತು ಬಲಭಾಗದಲ್ಲಿರುವವರು) ಕೆಲಸವನ್ನು ನಿರ್ವಹಿಸುತ್ತಾರೆ. ಸೂರ್ಯವಂಶಿ ಹೇರ್‌ ಕಟ್‌ ಸಲೂನಿನಲ್ಲಿ ಕೂದಲನ್ನು ಕತ್ತರಿಸಿಕೊಳ್ಳಲು 50 ರೂ.ಗಳನ್ನು ಪಾವತಿಸಬೇಕು. ತಲೆಯ ಮಸಾಜಿಗೆ 10 ರೂ.ಗಳು ಹಾಗೂ ಮುಖದ ಸೌಂದರ್ಯದ ಉಪಚಾರಕ್ಕೆ 50 ರೂ.ಗಳ ದರವಿದೆ. ಮಾರ್ಚ್‌ 25ರಂದು ಲಾಕ್‌ಡೌನ್‌ ಪ್ರಾರಂಭಗೊಂಡ ಹಿಂದಿನ ದಿನದಂದು ಮೂರು ಸಹೋದರರಲ್ಲಿ ಪ್ರತಿಯೊಬ್ಬರೂ ಸುಮಾರು 300-400 ರೂ.ಗಳನ್ನು ಸಂಪಾದಿಸಿದ್ದರು.

Left: Policemen outside a salon in Jalna town, Jalna district. It isn't only Latur that's affected by the lockdown. Right: A pre-locked-down photo of Mauli Gents Parlour in Udgir town of Latur district
PHOTO • Kalyan Dale
Left: Policemen outside a salon in Jalna town, Jalna district. It isn't only Latur that's affected by the lockdown. Right: A pre-locked-down photo of Mauli Gents Parlour in Udgir town of Latur district
PHOTO • Awais Sayed

ಎಡಕ್ಕೆ: ಮಹಾರಾಷ್ಟ್ರದ ಜಲ್ನ ಎಂಬ ಊರಿನಲ್ಲಿ ಕ್ಷೌರದಂಗಡಿಯ ಹೊರಗೆ ನಿಂತಿರುವ ಪೊಲೀಸರು. ಬಲಕ್ಕೆ: ಲಾಕ್‌ಡೌನ್‌ಗಿಂತಲೂ ಮೊದಲು, ಲಾತೂರ್‌ ಜಿಲ್ಲೆಯ ಉದ್ಗರ್‌ ಊರಿನ ಮೌಳಿ ಜೆಂಟ್ಸ್‌ ಪಾರ್ಲರ್

ಉದ್ಯೋಗವು ಸಂಪೂರ್ಣವಾಗಿ ನಿಲುಗಡೆಯಾದ ಸಂದರ್ಭದಲ್ಲಿ ೪ ಜನರ ಕುಟುಂಬವನ್ನು ಸಲಹುವುದು ಉತ್ತಮ್‌ ಅವರಿಗೆ ನಿಜವಾದ ಸವಾಲೇ ಸರಿ. “ಅಪಾರ ಬೇಡಿಕೆಯಿರುವ ಈ ಅವಧಿಯಲ್ಲಿ, ಅಂಗಡಿಯನ್ನು ಮುಚ್ಚುವುದಕ್ಕಿಂತ ದುಃಖಕರ ವಿಷಯ ಮತ್ತಾವುದಿದೆ?” ಎಂದು ಆತ ಪ್ರಶ್ನಿಸುತ್ತಾರೆ. ಬೇಸಿಗೆಯು ವಿವಾಹಗಳು ಜರುಗುವ ಕಾಲವೆಂಬುದಾಗಿ ಅವರು ವಿವರಿಸುತ್ತಾರೆ. ಈ ಸಂದರ್ಭವು, ಕ್ಷೌರಿಕರಿಗೆ ಉತ್ತಮ ಸಂಪಾದನೆಯನ್ನು ಒದಗಿಸಿ, ಸಾಲದ ಸುಳಿಯಲ್ಲಿ ಸಿಲುಕಿರುವ ಅವರಲ್ಲಿನ ಹಲವರಿಗೆ ಅದನ್ನು ತೀರಿಸುವ ಅವಕಾಶವನ್ನು ಒದಗಿಸುತ್ತದೆ.

“ನಮ್ಮ ಪ್ರದೇಶದಲ್ಲಿ, 2018ರಿಂದಲೂ ಬರಗಾಲದ ಪರಿಸ್ಥಿತಿಯೇ ಮುಂದುವರಿದಿದ್ದು, ನಮ್ಮ ಕೆಲಸಕ್ಕೆ  ವಿಧಿಸುವ ದರವನ್ನು ಹೆಚ್ಚಿಸದಂತೆ ನಿರ್ಬಂಧಿಸಿದೆ,” ಎನ್ನುತ್ತಾರೆ, ಲಾತೂರ್‌ ಜಿಲ್ಲೆಯ ಕೇಶಕರ್ತನಾಲಯ್‌ ಸಂಘಟನೆಯ (ಕ್ಷೌರದಂಗಡಿಗಳ ಸಂಘಟನೆ) ಅಧ್ಯಕ್ಷರಾದ ಭಹುಸಾಹೇಬ್‌ ಶೆಂದ್ರೆ. “ನಮ್ಮಲ್ಲಿನ ಬಹುತೇಕ 80% ಜನರು ಭೂರಹಿತರು. ಅವರಿಗೆ ಮನೆಯೂ ಇಲ್ಲ. ಇದೇ ಸಮಯದಲ್ಲಿ ಮನೆ ಹಾಗೂ ಸಲೂನಿನ ಬಾಡಿಗೆಯಲ್ಲಿ 15% ಏರಿಕೆಯಾಗಿದ್ದು, ಇದರ ಹೊರೆಯನ್ನು ನಾವು ಹೊರುವಂತಾಗಿದೆ. ಜೀವನ ವೆಚ್ಚವು ಏರುಗತಿಯಲ್ಲಿದ್ದು, ನಮ್ಮ ಆದಾಯವು ಕ್ಷೀಣಿಸುತ್ತಿದೆ. ನಮಗೆ ನಷ್ಟಗಳು ನಿಶ್ಚಿತ. ಜೀವನೋಪಾಯವು ಅನಿಶ್ಚಿತ”ಎಂದರವರು.

ರಾಜ್ಯದಲ್ಲಿನ ನಭಿಕ್‌ (ಕ್ಷೌರಿಕ) ಇತರೆ ಹಿಂದುಳಿದ ಸಮುದಾಯದವರನ್ನು (OBC) ಸಂಪರ್ಕಿಸುವ ರಾಜ್ಯ-ಮಟ್ಟದ ಮಹಾರಾಷ್ಟ್ರ ನಭಿಕ್‌ ಮಹಾಮಂಡಲದೊಂದಿಗೆ ಶೆಂದ್ರೆಯವರ ಸಂಘವು ಸಂಯೋಜಿತಗೊಂಡಿದೆ. ದೃಢೀಕೃತ ಸರ್ಕಾರಿ ದತ್ತಾಂಶಗಳಿಲ್ಲದಾಗ್ಯೂ, ಮಹಾರಾಷ್ಟ್ರದಲ್ಲಿ ೪ ದಶಲಕ್ಷಕ್ಕಿಂತಲೂ ಹೆಚ್ಚು ಕ್ಷೌರಿಕರಿದ್ದಾರೆನ್ನುತ್ತಾರೆ, ಮಹಾಮಂಡಲದ ಮುಖ್ಯಸ್ಥರಾದ ಕಲ್ಯಾಣ್‌ ದಲೆ. ಆದರೆ ಅಂದಾಜಿನ ಲೆಕ್ಕದಂತೆ ಇವರ ಸಂಖ್ಯೆಯು ಹಲವು ಲಕ್ಷಗಳಷ್ಟಿದೆಯೆಂಬುದಾಗಿ ತಿಳಿದುಬರುತ್ತದೆ.

ಜಿಲ್ಲೆಯ 6,000 ಕ್ಷೌರದಂಗಡಿಗಳಲ್ಲಿ 800 ಅಂಗಡಿಗಳು ಲಾತೂರಿನಲ್ಲಿಯೇ ಇದ್ದು, ಸುಮಾರು 20,000 ಜನರು ಈ ಉದ್ಯೋಗದಲ್ಲಿದ್ದಾರೆ. ಪ್ರತಿಯೊಂದು ಕ್ಷೌರದಂಗಡಿಯಲ್ಲಿ ಸರಾಸರಿ 3ರಿಂದ 4 ಕುರ್ಚಿಗಳಿದ್ದು, ಪ್ರತಿಯೊಂದು ಕುರ್ಚಿಯೂ ದಿನಂಪ್ರತಿ 400-500 ರೂ.ಗಳನ್ನು ಗಳಿಸುತ್ತದೆಯೆಂಬುದಾಗಿ ಸಂಘಟನೆಯು ತಿಳಿಸುತ್ತದೆ. ಅಂದರೆ, ದಿನನಿತ್ಯದ ಇವರ ಒಟ್ಟಾರೆ ಉದ್ಯಮದ ವ್ಯವಹಾರವು 12ರಿಂದ 13 ಲಕ್ಷಗಳಷ್ಟಿದೆ.

ಜಿಲ್ಲೆಯ ಉಳಿದ 5,200 ಕ್ಷೌರದಂಗಡಿಗಳಲ್ಲಿ ಪ್ರತಿಯೊಂದರಲ್ಲೂ ಸರಾಸರಿ 2ರಿಂದ 3 ಕುರ್ಚಿಗಳಿದ್ದು, ಒಂದು ಕುರ್ಚಿಯಿಂದ ದಿನಂಪ್ರತಿ 200ರಿಂದ 300 ರೂ.ಗಳನ್ನು ಗಳಿಸಲಾಗುತ್ತದೆ. ಪ್ರತಿದಿನದ ಉದ್ಯಮ ವ್ಯವಾಹರವು ಸುಮಾರು 47 ಲಕ್ಷದಷ್ಟಿದೆ.

21 ದಿನಗಳವರೆಗೂ ಈ ಎಲ್ಲ ಕ್ಷೌರದಂಗಡಿಗಳು ಮುಚ್ಚಿದ್ದ ಕಾರಣ, ಬಡ ಹಾಗೂ ತುಳಿತಕ್ಕೊಳಗಾದ ಈ ಸಮುದಾಯಕ್ಕೆ ಕೇವಲ ಲಾತೂರ್‌ ಜಿಲ್ಲೆಯೊಂದರಲ್ಲೇ 12.5 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ನಷ್ಟವಾಗಿದೆಯೆಂದು ಅರ್ಥೈಸಬಹುದು.

A forlorn hoarding in Udgir advertising Shri Ganesh Gents Parlour
PHOTO • Awais Sayed

ಉದ್ಗಿರ್‌ ಎಂಬಲ್ಲಿನ ಶ್ರೀ ಗಣೇಶ್‌ ಜೆಂಟ್ಸ್‌ ಪಾರ್ಲರ್‌ನ ಅಸಹಾಯಕ ವಿಜ್ಞಾಪನೆಯು ಹೀಗಿದೆ

ಕ್ಷೌರಿಕರು, ಆಯಾ ದಿನದ ದುಡಿಮೆಯನ್ನೇ ಸಂಪೂರ್ಣವಾಗಿ ಅವಲಂಬಿಸಿದ್ದಾರೆ. ದಿನನಿತ್ಯವೂ ತಮಲ್ಲಿಗೆ ಬರುವ ಗ್ರಾಹಕರ ಸಂಖ್ಯೆಗನುಗುಣವಾಗಿ, ಇವರ ಸಂಪಾದನೆಯೂ ಬದಲಾಗುತ್ತಿರುತ್ತದೆ…  ಯಾರ ಬಳಿಯೂ ಉಳಿತಾಯದ ಹಣವಿಲ್ಲ. ಅನೇಕರು ಸಾಲದಲ್ಲಿ ಮುಳುಗಿದ್ದಾರೆ. ಇದೀಗ, ಲಾಕ್‌ಡೌನ್‌ನಿಂದಾಗಿ, ಇವರ ಬದುಕಿನ ಅನಿಶ್ಚಿತತೆ ಮತ್ತಷ್ಟು ಹೆಚ್ಚಾಗಿದೆ

ʼಕ್ಷೌರಿಕರ ಸ್ಥಿತಿಯು ಒಂದು ಹೊತ್ತಿನ ಊಟವನ್ನೂ ನಿಭಾಯಿಸಲಾಗದ ಸ್ಥಿತಿಯನ್ನು ತಲುಪಿದೆ’ ಎನ್ನುತ್ತಾರೆ, ಶೆಂದ್ರೆ. “ಆದ್ದರಿಂದ, ನಾವು 50,000 ರೂ.ಗಳನ್ನು ಸಂಗ್ರಹಿಸಿ, ಜಿಲ್ಲೆಯಲ್ಲಿ, ಅಸಹಾಯಕ ಸ್ಥಿತಿಯಲ್ಲಿರುವ 50 ಕುಟುಂಬಗಳಿಗೆ ನೆರವಾಗುವಂತಹ 1,000 ರೂ. ಮೌಲ್ಯದ ವಸ್ತುಗಳನ್ನುಳ್ಳ ಕಿಟ್‌ ಅನ್ನು ಅವರಿಗೆ ನೀಡಿದ್ದೇವೆ. ಇದು, 10 ಕೆ.ಜಿ ಗೋಧಿ, 5 ಕೆ.ಜಿ ಅಕ್ಕಿ, 2 ಕೆ.ಜಿ ಎಣ್ಣೆ, ಒಂದು ಕೆ.ಜಿ ಕೆಂಪು ಬೇಳೆ, ಸಕ್ಕರೆ ಮತ್ತು ಕಡಲೆಬೀಜ ಹಾಗೂ ಒಂದು ಡೆಟಾಲ್‌ ಸಾಬೂನನ್ನೊಳಗೊಂಡಿದೆ.” ಸರ್ಕಾರವು ಘೋಷಿಸಿದ 3 ತಿಂಗಳ ಉಚಿತ ಪಡಿತರದ ಅನಿಶ್ಚಿತತೆಯನ್ನು ನಾವು ಅವಲಂಬಿಸಲಾಗದು ಎಂಬುದಾಗಿ ಅವರು ನಿರಾಸೆಯಿಂದ ನುಡಿಯುತ್ತಾರೆ.

ಕ್ಷೌರಿಕರು ಸಂಪೂರ್ಣವಾಗಿ ತಮ್ಮ ದಿನನಿತ್ಯದ ಆದಾಯವನ್ನು ಅವಲಂಬಿಸಿದ್ದು, ದಿನವೊಂದಕ್ಕೆ ಇವರ ಕ್ಷೌರದಂಗಡಿಗೆ ಬರುವ ಗ್ರಾಹಕರ ಸಂಖ್ಯೆಯೊಂದಿಗೆ ಇವರ ಆದಾಯವೂ ಬದಲಾಗುತ್ತಿರುತ್ತದೆ. ಅನೇಕ ಬಾರಿ ಈ ಬಡ ಕಾರ್ಮಿಕರು, ಯುವ ಪೀಳಿಗೆಯ ಕೇಶ ವಿನ್ಯಾಸದ ಆಕಾಂಕ್ಷೆಗಳಿಗೆ ಅತಿ ಕಡಿಮೆ ದರದಲ್ಲಿ ಸ್ಪಂದಿಸುತ್ತಾರೆ. ಇವರಲ್ಲಿ ಯಾರಿಗೂ ಉಳಿತಾಯವಿಲ್ಲದೆ, ಸಾಲದಲ್ಲಿ ಸಿಲುಕಿದ್ದಾರೆ.

ಈಗ ಲಾಕ್‌ಡೌನ್‌ನಿಂದಾಗಿ, ಇವರ ಅಸುರಕ್ಷತೆಯು ಮತ್ತಷ್ಟು ಹೆಚ್ಚಿದೆ. ಕೇವಲ ಎರಡು ಮೂಲಗಳಿಂದ ಇವರು ಸಾಲಗಳನ್ನು ಪಡೆಯಬಹುದು: ಅವೆಂದರೆ, ವಾರ್ಷಿಕವಾಗಿ ಶೇ. 15ರಂತೆ ಬಡ್ಡಿಯನ್ನು ವಿಧಿಸುವ ಹೊಸ ಯುಗದ ಹಣಕಾಸಿನ ಕಂಪನಿಗಳು (ಅಂತಿಮವಾಗಿ ಪಾವತಿಸಬೇಕಾದ ಹಣದ ಹೊರೆಯು ಇದಕ್ಕಿಂತಲೂ ಹೆಚ್ಚಾಗಿರುತ್ತದೆ) ಅಥವಾ ಮಾಹೆಯಾನ, ಶೇ. 3ರಿಂದ 5ರವರೆಗೆ ಬಡ್ಡಿಯನ್ನು ವಸೂಲುಮಾಡುವ ಖಾಸಗಿ ಸಾಲದಾತರು.

ಲಾತೂರ್‌ ಜಿಲ್ಲೆಯ ಹೊರವಲಯದಲ್ಲಿನ ಖಡ್ಗಾಂವ್‌ನಲ್ಲಿ ವಾಸಿಸುವ ಸುಧಾಕರ್‌ ಸೂರ್ಯವಂಶಿಯೆಂಬ ಕ್ಷೌರಿಕರು ಸಾಲದ ದೆಸೆಯಿಂದಾಗಿ ಹೆಣಗಾಡುತ್ತಿದ್ದಾರೆ. ನನ್ನ ಸಂಪಾದನೆಯ ಬಹುಪಾಲು ಭಾಗವು, ನನ್ನ ಮಕ್ಕಳ ಶಿಕ್ಷಣದ ಶುಲ್ಕಕ್ಕೆ ಖರ್ಚಾಗುತ್ತದೆ ಎಂದು ಅವರು ತಿಳಿಸುತ್ತಾರೆ (ಲಾಕ್‌ಡೌನ್‌ಗೂ ಮೊದಲು ಇವರು ದಿನಂಪ್ರತಿ ಸುಮಾರು 300 ರೂ.ಗಳನ್ನು ಸಂಪಾದಿಸುತ್ತಿದ್ದರು). ಈ ಜನವರಿಯಲ್ಲಿ ಅವರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ, ಸಾಲದಾತರಿಂದ ಮಾಹೆಯಾನ ಶೇ. 3ರ ಬಡ್ಡಿಯಂತೆ, ಒಂದು ಲಕ್ಷ ರೂ.ಗಳನ್ನು ಪಡೆದಿದ್ದರು. ಮಾರ್ಚ್‌ನಲ್ಲಿ 3,000 ರೂ.ಗಳ ಮೊದಲ ಕಂತನ್ನು ಸಹ ಪಾವತಿಸಿದ್ದರು. ಅವರ ಸಮಸ್ಯೆಯು ಇದಕ್ಕೂ ಮೊದಲೇ ಆರಂಭವಾಗಿತ್ತು.

Left: Rutu’s Beauty Zone is one of many salons in Latur city Right: Deserted main thoroughfare of Latur city
PHOTO • Vilas Gawali
Left: Rutu’s Beauty Zone is one of many salons in Latur city Right: Deserted main thoroughfare of Latur city
PHOTO • Vilas Gawali

ಎಡಕ್ಕೆ: ರುತು ಅವರ ಕ್ಷೌರದಂಗಡಿಯು, ಲಾತೂರಿನ 800 ಕ್ಷೌರದಂಗಡಿಗಳಲ್ಲೊಂದು. ಬಲಕ್ಕೆ: ಜಿಲ್ಲೆಯಲ್ಲಿನ ನಿರ್ಜನ ಪ್ರಧಾನ ಬೀದಿ

ಡಿಸೆಂಬರ್‌ 2019ರಲ್ಲಿ “ಬ್ಯಾಂಕಿನವರು ನನ್ನ ಜನ್‌ಧನ್‌ ಖಾತೆಯನ್ನು ರದ್ದುಗೊಳಿಸಲಾಗಿದೆಯೆಂದು ಕರೆಮಾಡಿದ್ದರು” ಎಂದು ಆತ ತಿಳಿಸಿದರು. ಇದು ಎರಡು ರೀತಿಯಲ್ಲಿ ವಿಚಿತ್ರವೆನಿಸಿದೆ. ಮೊದಲನೆಯದು: ಇವರು ಪಾನ್‌ ಕಾರ್ಡ್‌, ಆಧಾರ್‌, ‘ಕಿತ್ತಳೆ’ಬಣ್ಣದ ಪಡಿತರ ಚೀಟಿ ಮುಂತಾಗಿ ಅಗತ್ಯವಿರುವ ಎಲ್ಲವನ್ನೂ ಸಲ್ಲಿಸಿದ್ದರು. ಎರಡನೆಯದು: ಇವರು ಆ ಖಾತೆಯಿಂದ ಎಂದಿಗೂ ಹಣವನ್ನು ಪಡೆದಿರಲಿಲ್ಲ. ಮಹಾರಾಷ್ಟ್ರದ ನಗರ ಪ್ರದೇಶದಲ್ಲಿ, 59,000 ರೂ.ಗಳಿಂದ ಒಂದು ಲಕ್ಷದವರೆಗೆ ವಾರ್ಷಿಕ ಆದಾಯವುಳ್ಳವರಿಗೆ ‘ಕಿತ್ತಳೆ’ಬಣ್ಣದ ಪಡಿತರ ಚೀಟಿಯು ದೊರೆಯುತ್ತದೆ. ಇವರ ಕುಟುಂಬದ ಪಡಿತರ ಚೀಟಿಯು ಪ್ರಾಧಾನ್ಯ ಕುಟುಂಬ್‌ ಎಂಬ ಮುದ್ರೆಯನ್ನು ಹೊಂದಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಸೌಲಭ್ಯಗಳಿಗೆ ಇವರು ಅರ್ಹರಾಗಿದ್ದಾರೆ.

“ನನ್ನಲ್ಲಿ, ಆ ಪಡಿತರ ಚೀಟಿಯಿದ್ದಾಗ್ಯೂ, ಈ ತಿಂಗಳು ನನಗೇನೂ ದೊರೆಯಲಿಲ್ಲ. ಕಿರಾಣಿ ಅಂಗಡಿಯ ಮಾಲೀಕನೂ ಸಹ ಯಾವುದೇ ದಾಸ್ತಾನು ಎಂದು ತಲುಪುತ್ತದೆಂದು ತಿಳಿದಿಲ್ಲವೆಂಬುದಾಗಿ ತಿಳಿಸಿದ”ಎಂಬುದಾಗಿ ಸುಧಾಕರ್‌ ದೂರುತ್ತಾರೆ. ಈ ಅವಧಿಯಲ್ಲಿ ಬಾಡಿಗೆಯನ್ನು ಹೇಗೆ ಪಾವತಿಸುವುದೆಂಬ ಬಗ್ಗೆ ಇವರು ದಾರಿಕಾಣದಾಗಿದ್ದಾರೆ. ಈ ವರ್ಷದ ಜನವರಿಯಲ್ಲಿ, ಮನೆಯೊಡತಿಯು ಬಾಡಿಗೆಯನ್ನು 2,500ರಿಂದ 3,000 ರೂ.ಗಳಿಗೆ ಏರಿಸಿದ್ದಾರೆ. ಭಾರವು ದಿನದಿನಕ್ಕೆ ಹೆಚ್ಚಾಗುತ್ತಲೇ ಇದೆ.

ಕೊರೊನಾ ವೈರಸ್‌ ಕುರಿತ ಮಾಧ್ಯಮಗಳಲ್ಲಿನ ಹೋರಾಟವನ್ನು ಇವರು ಗಂಭೀರವಾಗಿ ಪರಿಗಣಿಸಿಲ್ಲ. “ಒಂದು ಹೊತ್ತಿನ ಊಟಕ್ಕೇ ನಾವು ಪರದಾಡುತ್ತಿರುವಾಗ, ಸುರಕ್ಷತಾ ಮುಖಗವಸುಗಳ ಬಗ್ಗೆ ನಾವು ಯೋಚಿಸುವುದಾದರೂ ಹೇಗೆ?” ಎಂದು ಅವರು ಅಲವತ್ತುಕೊಳ್ಳುತ್ತಾರೆ.

ನಮಗೆ ಸಮಸ್ಯೆಗಳು ನಿರಂತರ. ನಿನ್ನೆ, ಇಂದು ಹಾಗೂ ನಾಳೆ.”

ಮುಖಪುಟ ಚಿತ್ರ: ಕುಮಾರ್‌ ಸೂರ್ಯವಂಶಿ

ಅನುವಾದ: ಶೈಲಜಾ ಜಿ.ಪಿ.

Ira Deulgaonkar

ایرا دیئُل گاؤنکر ۲۰۲۰ کی پاری انٹرن ہیں؛ وہ سمبایوسس اسکول آف اکنامکس، پونہ میں اقتصادیات سے گریجویشن کی دوسری سال کی طالبہ ہیں۔

کے ذریعہ دیگر اسٹوریز Ira Deulgaonkar
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

کے ذریعہ دیگر اسٹوریز Shailaja G. P.