"ಈ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ನಾವು ಆಗ್ರಹಿಸುತ್ತೇವೆ" ಎಂದು ಹರಿಯಾಣ-ದೆಹಲಿ ಗಡಿಯಲ್ಲಿರುವ ಸಿಂಘುವಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ವಿಶ್ವಜೋತ್ ಗೆರೆವಾಲ್ ಹೇಳುತ್ತಾರೆ. "ನಾವು ನಮ್ಮ ಜಮೀನುಗಳೊಂದಿಗೆ ಭಾವುಕ ಸಂಬಂಧವನ್ನು ಹೊಂದಿದ್ದೇವೆ ಮತ್ತು ಯಾರಾದರೂ ನಮ್ಮ ಭೂಮಿಯನ್ನು ನಮ್ಮಿಂದ ಕಸಿದುಕೊಳ್ಳುವುದನ್ನು ನಾವು ಸಹಿಸಲಾರೆವು.." ಲುಧಿಯಾನ ಜಿಲ್ಲೆಯ ಪಮಾಲ್ ಎಂಬ ಊರಿನ ರೈತರ ಕುಟುಂಬಕ್ಕೆ ಸೇರಿದ 23 ವರ್ಷದ ಗೆರೆವಾಲ್, ಅವರು ತನ್ನ ಊರಿನಲ್ಲಿ ಮೂರು ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸಲು ಸಹಾಯ ಮಾಡಿದ್ದಾರೆ. ಈ ಕೃಷಿ ಕಾನೂನುಗಳನ್ನು ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು.
ಅವರ ಕುಟುಂಬದ ಮಹಿಳೆಯರು, ಗ್ರಾಮೀಣ ಭಾರತದಲ್ಲಿ ಕನಿಷ್ಠ 65 ಪ್ರತಿಶತದಷ್ಟು ಮಹಿಳೆಯರಂತೆ (ಜನಗಣತಿ 2011ರ ಹೇಳುವಂತೆ) ನೇರವಾಗಿ ಅಥವಾ ಪರೋಕ್ಷವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಹಲವರು ಭೂಮಿಯನ್ನು ಹೊಂದಿಲ್ಲ, ಆದರೆ ಅವರು ಕೃಷಿಯ ಕೇಂದ್ರಬಿಂದುವಾಗಿದ್ದಾರೆ, ಅಲ್ಲಿ ಅವರು ಬಿತ್ತನೆ, ಕಸಿ, ಕೊಯ್ಲು, ಹೊಲದಿಂದ ಮನೆಗೆ ಬೆಳೆ ಸಾಗಣೆ, ಆಹಾರ ಸಂಸ್ಕರಣೆ, ಹೈನುಗಾರಿಕೆ ಹೀಗೆ ಹೆಚ್ಚಿನ ಕೃಷಿ ಸಂಬಂಧಿ ಕೆಲಸವನ್ನು ಮಾಡುತ್ತಾರೆ.
ಜನವರಿ 11ರಂದು, ಭಾರತದ ಸುಪ್ರೀಂ ಕೋರ್ಟ್ ಮೂರು ಕೃಷಿ ಕಾನೂನುಗಳಿಗೆ ತಡೆ ಆದೇಶವನ್ನು ಜಾರಿಗೊಳಿಸಿದಾಗ, ಮುಖ್ಯ ನ್ಯಾಯಮೂರ್ತಿ ಮಹಿಳೆಯರು ಮತ್ತು ವೃದ್ಧರನ್ನು ಪ್ರತಿಭಟನಾ ಸ್ಥಳಗಳಿಂದ ಹಿಂತಿರುಗುವಂತೆ ‘ಮನವೊಲಿಸಬೇಕು’ ಎಂದು ಹೇಳಿದ್ದಾರೆಂದು ವರದಿಯಾಗಿದೆ. ಆದರೆ ಈ ಕಾನೂನುಗಳ ಜಾರಿಗೊಳಿಸುವಿಕೆಯು ಮಹಿಳೆಯರಿಗೆ (ಮತ್ತು ವಯಸ್ಸಾದವರಿಗೆ) ಸಂಬಂಧಿಸಿದೆ ಮತ್ತು ಅದರ ಪರಿಣಾಮ ಅವರ ಮೇಲೂ ಆಗುತ್ತದೆ.
ರೈತರು ವಿರೋಧಿಸುತ್ತಿರುವ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದ ಸಹ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.
ಈ ಮಸೂದೆಗಳನ್ನು ಮೊದಲು 2020ರ ಜೂನ್ 5ರಂದು ಸುಗ್ರೀವಾಜ್ಞೆಯಾಗಿ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14ರಂದು ಕೃಷಿ ಮಸೂದೆಗಳ ಹೆಸರಿನಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾಯಿತು ಮತ್ತು ಅದೇ ತಿಂಗಳ 20ರೊಳಗೆ ಕಾನೂನನ್ನು ಅಂಗೀಕರಿಸಲಾಯಿತು. ರೈತರು ಈ ಕಾನೂನುಗಳನ್ನು (ಕೇಂದ್ರ ಸರ್ಕಾರದಿಂದ) ದೊಡ್ಡ ಕಾರ್ಪೊರೇಟ್ಗಳು ತಮ್ಮ ಗರಿಷ್ಠ ಶಕ್ತಿಯನ್ನು ರೈತರು ಮತ್ತು ಕೃಷಿಯ ಕಡೆಗೆ ಬಳಸಿಕೊಳ್ಳುವ ವೇದಿಕೆಯಾಗಿ ನೋಡುತ್ತಾರೆ. ಈ ಕಾನೂನುಗಳು ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ), ಕೃಷಿ ಉತ್ಪಾದನೆ (ಇಳುವರಿ) ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಮತ್ತು ಸರ್ಕಾರಿ ಖರೀದಿ ಸೇರಿದಂತೆ ರೈತರಿಗೆ ನೀಡುವ ಪ್ರಮುಖ ಬೆಂಬಲ ರೂಪಗಳನ್ನು ಹಾಳುಮಾಡುತ್ತವೆ.
"ಹೊಸ ಕೃಷಿ ಕಾನೂನುಗಳಿಂದ ಮಹಿಳೆಯರು ಹೆಚ್ಚು ತೊಂದರೆಗೀಡಾಗುತ್ತಾರೆ. ಕೃಷಿ ಕೆಲಸದಲ್ಲಿ ಅಷ್ಟೊಂದು ತೊಡಗಿಸಿಕೊಂಡ ನಂತರವೂ ಅವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. [ಉದಾಹರಣೆಗೆ] ಅಗತ್ಯ ಸರಕುಗಳ ಕಾಯ್ದೆಯಲ್ಲಿನ ಬದಲಾವಣೆಯು ಆಹಾರದ ಕೊರತೆಯನ್ನು ಉಂಟುಮಾಡುತ್ತದೆ ಮತ್ತು ಮಹಿಳೆಯರು ಅದರ ಭಾರವನ್ನು ಭರಿಸಬೇಕಾಗುತ್ತದೆ” ಎಂದು ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಮ್ ಧವಾಲೆ ಹೇಳುತ್ತಾರೆ.
ಮತ್ತು ಅವರಲ್ಲಿ ಅನೇಕರು - ಯುವತಿಯರು ಮತ್ತು ಹಿರಿಯರು ದೆಹಲಿಯ ಸುತ್ತಮುತ್ತಲಿನ ಆಂದೋಲನ ನಡೆಯುತ್ತಿರುವ ಸ್ಥಳಗಳಲ್ಲಿ ದೃಢವಾಗಿ ನಿಂತಿದ್ದಾರೆ ಮತ್ತು ರೈತರಲ್ಲದ ಇನ್ನೂ ಅನೇಕರು ತಮ್ಮ ಬೆಂಬಲವನ್ನು ತೋರಿಸಲು ಇಲ್ಲಿಗೆ ಬರುತ್ತಿದ್ದಾರೆ. ಮತ್ತು ಕೆಲವರು ವಸ್ತುಗಳನ್ನು ಮಾರಾಟ ಮಾಡಲು, ಒಂದು ದಿನದ ವೇತನವನ್ನು ಗಳಿಸಲು ಅಥವಾ ಲಂಗರ್ಗಳಲ್ಲಿ ನೀಡಲಾಗುವ ಹೇರಳವಾದ ಊಟಕ್ಕಾಗಿಯೂ ಅನೇಕರು ಬರುತ್ತಾರೆ.
ಅನುವಾದ - ಶಂಕರ ಎನ್. ಕೆಂಚನೂರು