ಮಜುಲಿ ದ್ವೀಪದ ಗರಮೂರ್ ಮಾರುಕಟ್ಟೆ ನವೆಂಬರ್ ತಿಂಗಳಿನಲ್ಲಿ ಮೂರು ದಿನಗಳ ಕಾಲ ಬಣ್ಣದ ದೀಪಗಳು ಮತ್ತು ಮಣ್ಣಿನ ದೀಪಗಳಿಂದ ಬೆಳಗತೊಡಗುತ್ತದೆ. ಚಳಿಗಾಲದ ಆರಂಭದ ಸಂಜೆ ಪ್ರಾರಂಭವಾಗುತ್ತಿದ್ದಂತೆ, ಖೋಲ್ ಡೋಲುಗಳ ಬಡಿತ ಮತ್ತು ತಾಳಗಳ ಸದ್ದು ಸುತ್ತಲೂ ಹರಡಿರುವ ಧ್ವನಿವರ್ಧಕಗಳ ಮೂಲಕ ಮೊಳಗುತ್ತದೆ.
ಹೀಗೆ ರಾಸ್ ಮಹೋತ್ಸವ ಆರಂಭವಾಗುತ್ತದೆ.
ಈ ಉತ್ಸವವನ್ನು ಅಸ್ಸಾಮಿ ತಿಂಗಳಾದ ಕಟಿ-ಅಘುನ್ ನ ಪೂರ್ಣಿಮಾ ಅಥವಾ ಹುಣ್ಣಿಮೆಯ ದಿನದಂದು ನಡೆಸಲಾಗುತ್ತದೆ - ಇದು ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಬರುತ್ತದೆ - ಪ್ರತಿವರ್ಷ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರನ್ನು ಈ ದ್ವೀಪಕ್ಕೆ ಆಕರ್ಷಿಸುತ್ತದೆ. ಇದು ಎರಡು ದಿನಗಳವರೆಗೂ ಮುಂದುವರಿಯುತ್ತದೆ.
"ಈ ಹಬ್ಬ ಇಲ್ಲದಿದ್ದರೆ, ನಮಗೆ ಏನನ್ನೋ ಕಳೆದುಕೊಂಡಂತೆ ಭಾಸವಾಗುತ್ತಿತ್ತು. ಇದು [ರಾಸ್ ಮಹೋತ್ಸವ] ನಮ್ಮ ಸಂಸ್ಕೃತಿ" ಎಂದು ಬೋರುನ್ ಚಿಟಾದಾರ್ ಚುಕ್ ಗ್ರಾಮದಲ್ಲಿ ಉತ್ಸವವನ್ನು ಆಯೋಜಿಸುವ ಸಮಿತಿಯ ಕಾರ್ಯದರ್ಶಿ ರಾಜಾ ಪಾಯೆಂಗ್ ಹೇಳುತ್ತಾರೆ. "ಜನರು ವರ್ಷವಿಡೀ ಇದಕ್ಕಾಗಿ ಕುತೂಹಲದಿಂದ ಕಾಯುತ್ತಾರೆ" ಎಂದು ಅವರು ಹೇಳುತ್ತಾರೆ.
ಅಸ್ಸಾಂನ ಹಲವಾರು ವೈಷ್ಣವ ಮಠಗಳಲ್ಲಿ ಒಂದಾದ ಗರಮೂರ್ ಸಾರು ಸತ್ರದ ಬಳಿ ನೂರಾರು ನಿವಾಸಿಗಳು ತಮ್ಮಲ್ಲಿರುವ ಒಳ್ಳೆಯ ಬಟ್ಟೆಯನ್ನು ಧರಿಸಿ ನೆರೆದಿದ್ದಾರೆ.
ರಾಸ್ ಮಹೋತ್ಸವ (ಕೃಷ್ಣನ ನೃತ್ಯದ ಹಬ್ಬ) ನೃತ್ಯ, ನಾಟಕ ಮತ್ತು ಸಂಗೀತ ಪ್ರದರ್ಶನಗಳ ಮೂಲಕ ಶ್ರೀಕೃಷ್ಣನ ಜೀವನವನ್ನು ಆಚರಿಸುತ್ತದೆ. ಉತ್ಸವದ ಒಂದೇ ದಿನದಲ್ಲಿ 100ಕ್ಕೂ ಹೆಚ್ಚು ಪಾತ್ರಗಳನ್ನು ವೇದಿಕೆಯಲ್ಲಿ ಕಾಣಬಹುದು.
ಪ್ರದರ್ಶನಗಳು ಕೃಷ್ಣನ ಬದುಕಿನ ವಿವಿಧ ಹಂತಗಳನ್ನು ಚಿತ್ರಿಸುತ್ತವೆ - ವೃಂದಾವನದಲ್ಲಿ ಬೆಳೆಯುತ್ತಿರುವ ಮಗುವಾಗಿದ್ದಾಗಿನಿಂದ ಹಿಡಿದು ರಾಸ ಲೀಲೆಯ ತನಕ ಅವನು ಗೋಪಿಕೆಯರೊಂದಿಗೆ ನೃತ್ಯ ಮಾಡಿದ್ದಾನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಅಭಿನಯಿಸಲಾಗುವ ಕೆಲವು ನಾಟಕಗಳೆಂದರೆ ಶಂಕರದೇವ ಬರೆದ 'ಕೇಲಿ ಗೋಪಾಲ್' ಮತ್ತು ಅವರ ಶಿಷ್ಯ ಮಾಧವದೇವನಿಗೆ ಸಂಬಂಧಿಸಿದ 'ರಾಸ್ ಜುಮುರಾ' ದ ರೂಪಾಂತರಗಳಾಗಿವೆ.
ಗರಮೂರ್ ಮಹೋತ್ಸವದಲ್ಲಿ ವಿಷ್ಣುವಿನ ಪಾತ್ರವನ್ನು ನಿರ್ವಹಿಸಿದ ಮುಕ್ತಾ ದತ್ತಾ ಒಮ್ಮೆ ಪಾತ್ರವನ್ನು ವಹಿಸಿಕೊಂಡ ನಂತರ, ಅವರು ಕೆಲವು ಸಂಪ್ರದಾಯಗಳನ್ನು ಅನುಸರಿಸಬೇಕಾಗುತ್ತದೆ ಎಂದು ಹೇಳುತ್ತಾರೆ: "ಪಾತ್ರವನ್ನು ನೀಡಿದ ದಿನದಿಂದ, ಕೃಷ್ಣ, ನಾರಾಯಣ ಅಥವಾ ವಿಷ್ಣುವಿನ ಪಾತ್ರಗಳನ್ನು ನಿರ್ವಹಿಸುವ ನಾವು ಸಾಮಾನ್ಯವಾಗಿ ಸಸ್ಯಾಹಾರಿ ಸಾತ್ವಿಕ ಆಹಾರವನ್ನು ಮಾತ್ರ ತಿನ್ನುವ ಆಚರಣೆಯನ್ನು ಆಚರಿಸುತ್ತೇವೆ. ರಾಸ್‌ನ ಮೊದಲ ದಿನದಂದು, ನಾವು ವ್ರತವನ್ನು ಆಚರಿಸುತ್ತೇವೆ. ಮೊದಲ ದಿನದ ಪ್ರದರ್ಶನ ಮುಗಿದ ನಂತರವೇ ನಾವು ಈ ವೃತವನ್ನು ಮುರಿಯುತ್ತೇವೆ.
ಮಜುಲಿ ಬ್ರಹ್ಮಪುತ್ರಾ ನದಿಯ ಒಂದು ದೊಡ್ಡ ದ್ವೀಪವಾಗಿದ್ದು, ಇದು ಅಸ್ಸಾಂ ಮೂಲಕ ಸುಮಾರು 640 ಕಿಲೋಮೀಟರ್ ಹರಿಯುತ್ತದೆ. ದ್ವೀಪದ ಸತ್ರಗಳು (ಮಠಗಳು) ವೈಷ್ಣವ ಧರ್ಮ ಮತ್ತು ಕಲೆ ಮತ್ತು ಸಂಸ್ಕೃತಿಯ ಕೇಂದ್ರಗಳಾಗಿವೆ. 15ನೇ ಶತಮಾನದಲ್ಲಿ ಸಮಾಜ ಸುಧಾರಕ ಮತ್ತು ಸಂತ ಶ್ರೀಮಂತ ಶಂಕರದೇವ ಸ್ಥಾಪಿಸಿದ ಸತ್ರಗಳು ಅಸ್ಸಾಂನಲ್ಲಿ ನವ-ವೈಷ್ಣವ ಭಕ್ತಿ ಚಳುವಳಿಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಮಜುಲಿಯಲ್ಲಿ ಒಂದು ಕಾಲದಲ್ಲಿ ಸ್ಥಾಪಿಸಲ್ಪಟ್ಟ 65 ಅಥವಾ ಅದಕ್ಕಿಂತ ಹೆಚ್ಚು ಸತ್ರಗಳಲ್ಲಿ, ಸುಮಾರು 22 ಮಾತ್ರ ಇಂದು ಕಾರ್ಯನಿರ್ವಹಿಸುತ್ತಿವೆ. ವಿಶ್ವದ ಅತಿದೊಡ್ಡ ನದಿ ವ್ಯವಸ್ಥೆಗಳಲ್ಲಿ ಒಂದಾದ ಬ್ರಹ್ಮಪುತ್ರಾ ನದಿಯ ಪುನರಾವರ್ತಿತ ಪ್ರವಾಹದಿಂದಾಗಿ ಉಳಿದವು ಸವೆತವನ್ನು ಎದುರಿಸಿವೆ. ಹಿಮಾಲಯದ ಹಿಮನದಿಯ ಹಿಮವು ಬೇಸಿಗೆ-ಮಾನ್ಸೂನ್ ತಿಂಗಳುಗಳಲ್ಲಿ ಕರಗುತ್ತದೆ, ಇದು ನದಿ ಜಲಾನಯನ ಪ್ರದೇಶದಲ್ಲಿ ಖಾಲಿಯಾಗುವ ನದಿಗಳಿಗೆ ನೀರನ್ನು ಒದಗಿಸುತ್ತದೆ. ಇದು, ಮಜುಲಿ ಮತ್ತು ಸುತ್ತಮುತ್ತಲಿನ ಮಳೆಯೊಂದಿಗೆ, ಸವೆತಕ್ಕೆ ಮುಖ್ಯ ಕಾರಣವಾಗಿದೆ.
ಸತ್ರಗಳು ರಾಸ್ ಮಹೋತ್ಸವದ ಆಚರಣೆಯ ಸ್ಥಳಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ದ್ವೀಪದಾದ್ಯಂತದ ವಿವಿಧ ಸಮುದಾಯಗಳು ಸಮುದಾಯ ಭವನಗಳಲ್ಲಿ, ತೆರೆದ ಮೈದಾನದಲ್ಲಿ ತಾತ್ಕಾಲಿಕ ವೇದಿಕೆಗಳಲ್ಲಿ ಮತ್ತು ಶಾಲಾ ಮೈದಾನಗಳಲ್ಲಿ ಆಚರಣೆಗಳು ಮತ್ತು ಪ್ರದರ್ಶನಗಳನ್ನು ಆಯೋಜಿಸುತ್ತವೆ.
ಗರಮೂರ್ ಸರು ಸತ್ರದಂತೆ ಉತ್ತರ ಕಮಲಾಬರಿ ಸತ್ರದ ಪ್ರದರ್ಶನಗಳು ಸಾಮಾನ್ಯವಾಗಿ ಮಹಿಳೆಯರನ್ನು ಒಳಗೊಂಡಿರುವುದಿಲ್ಲ. ಇಲ್ಲಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಶಿಕ್ಷಣವನ್ನು ಪಡೆದ ಭಕತ್ಗಳು ಎಂದು ಕರೆಯಲ್ಪಡುವ ಸತ್ರದ ಬ್ರಹ್ಮಚಾರಿ ಸನ್ಯಾಸಿಗಳು ಉಚಿತ ಮತ್ತು ಎಲ್ಲರಿಗೂ ಮುಕ್ತವಾದ ನಾಟಕಗಳಲ್ಲಿ ಪ್ರದರ್ಶನ ನೀಡುತ್ತಾರೆ.
82 ವರ್ಷದ ಇಂದ್ರನೀಲ್ ದತ್ತಾ ಅವರು ಗರಮೂರ್ ಸರು ಸತ್ರದಲ್ಲಿ ನಡೆಯುವ ರಾಸ್ ಮಹೋತ್ಸವದ ಸ್ಥಾಪಕರಲ್ಲಿ ಒಬ್ಬರು. 1950ರಲ್ಲಿ, ಸತ್ರಾಧಿಕಾರಿ (ಸತ್ರದ ಮುಖ್ಯಸ್ಥ) ಪಿತಾಂಬರ ದೇವ್ ಗೋಸ್ವಾಮಿ, ಪುರುಷ ನಟರನ್ನು ಮಾತ್ರ ಹೊಂದುವ ಸಂಪ್ರದಾಯವನ್ನು ಹೇಗೆ ನಿಲ್ಲಿಸಿದರು ಮತ್ತು ಪ್ರದರ್ಶನಗಳಲ್ಲಿ ಮಹಿಳಾ ನಟರನ್ನು ಸ್ವಾಗತಿಸಿದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.
"ಪಿತಾಂಬರ ದೇವ್ ಅವರು ನಾಮ್ಘರ್ [ಪ್ರಾರ್ಥನಾ ಸ್ಥಳ] ದ [ಸಾಂಪ್ರದಾಯಿಕ ಸ್ಥಳ] ಹೊರಗೆ ವೇದಿಕೆಯನ್ನು ನಿರ್ಮಿಸಿದರು. ನಾಮ್ಘರ್ ಪೂಜಾ ಸ್ಥಳವಾಗಿರುವುದರಿಂದ, ನಾವು ವೇದಿಕೆಯನ್ನು ಹೊರಗೆ ಮಾಡಿದ್ದೆವು" ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಈ ಸಂಪ್ರದಾಯ ಇಂದಿಗೂ ಮುಂದುವರೆದಿದೆ. ಮಹೋತ್ಸವವನ್ನು ಆಯೋಜಿಸುವ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಗರಮೂರ್ ಕೂಡ ಒಂದು. ಪ್ರದರ್ಶನಗಳನ್ನು ಟಿಕೆಟ್ ನೀಡಲಾಗುತ್ತದೆ ಮತ್ತು ಸುಮಾರು 1,000 ಜನರಿಗೆ ಆಸನ ವ್ಯವಸ್ಥೆಯೊಂದಿಗೆ ಸಭಾಂಗಣದಲ್ಲಿ ನಡೆಯುತ್ತದೆ.
ಇಲ್ಲಿ ಪ್ರದರ್ಶಿಸಲಾದ ನಾಟಕಗಳು ವೈಷ್ಣವ ಸಂಪ್ರದಾಯದಲ್ಲಿ ಶಂಕರದೇವ ಮತ್ತು ಇತರರು ಬರೆದ ನಾಟಕಗಳ ರೂಪಾಂತರಗಳಾಗಿವೆ, ಇದನ್ನು ಅನುಭವಿ ಕಲಾವಿದರು ಹೊಸದಾಗಿ ಅಳವಡಿಸಿಕೊಂಡಿದ್ದಾರೆ. "ನಾನು ನಾಟಕವನ್ನು ಬರೆಯುವಾಗ, ಲೋಕ ಸಂಸ್ಕೃತಿಯ ಅಂಶಗಳನ್ನು ಅದರಲ್ಲಿ ಪರಿಚಯಿಸುತ್ತೇನೆ. ನಾವು ನಮ್ಮ ಜಾತಿ [ಸಮುದಾಯ] ಮತ್ತು ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡಬೇಕು" ಎಂದು ಇಂದ್ರನೀಲ್ ದತ್ತಾ ಹೇಳುತ್ತಾರೆ.
"ಮುಖ್ಯ ಪೂರ್ವಾಭ್ಯಾಸವು ದೀಪಾವಳಿಯ ಮರುದಿನವೇ ಪ್ರಾರಂಭವಾಗುತ್ತದೆ" ಎಂದು ಮುಕ್ತಾ ದತ್ತಾ ಹೇಳುತ್ತಾರೆ. ಇದು ಪ್ರದರ್ಶಕರಿಗೆ ಸಿದ್ಧರಾಗಲು ಎರಡು ವಾರಗಳಿಗಿಂತ ಕಡಿಮೆ ಸಮಯವನ್ನು ನೀಡುತ್ತದೆ. "ಈ ಹಿಂದೆ ನಟಿಸಿದ ಜನರು ಬೇರೆ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಮರಳಿ ಕರೆತರುವುದು ಅನನುಕೂಲಕರವಾಗಿದೆ" ಎಂದು ದತ್ತಾ ಹೇಳುತ್ತಾರೆ, ಅವರು ನಟನಾಗಿರುವುದರ ಜೊತೆಗೆ ಗರಮೂರ್ ಸಂಸ್ಕೃತ ಶಾಲೆಯಲ್ಲಿ (ಶಾಲೆ) ಇಂಗ್ಲಿಷ್ ಕಲಿಸುತ್ತಾರೆ.
ಕಾಲೇಜು ಮತ್ತು ವಿಶ್ವವಿದ್ಯಾಲಯದ ಪರೀಕ್ಷೆಗಳು ಸಾಮಾನ್ಯವಾಗಿ ಮಹೋತ್ಸವದೊಂದಿಗೆ ಹೊಂದಿಕೆಯಾಗುತ್ತವೆ. "[ವಿದ್ಯಾರ್ಥಿಗಳು] ಈಗಲೂ ಬರುತ್ತಾರೆ, ಒಂದು ದಿನವಾದರೂ. ಅವರು ರಾಸ್ ಪ್ರದರ್ಶನದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ ಮತ್ತು ಮರುದಿನ ತಮ್ಮ ಪರೀಕ್ಷೆಗಳಿಗೆ ಹೊರಡುತ್ತಾರೆ" ಎಂದು ಮುಕ್ತಾ ಹೇಳುತ್ತಾರೆ.
ಉತ್ಸವವನ್ನು ಆಯೋಜಿಸುವ ವೆಚ್ಚವು ಪ್ರತಿವರ್ಷ ಹೆಚ್ಚಾಗುತ್ತದೆ. ಗರಮೂರಿನಲ್ಲಿ, 2022ರಲ್ಲಿ ಸುಮಾರು 4 ಲಕ್ಷ ರೂ. ಖರ್ಚಾಗಿತ್ತು ಮುಕ್ತಾ ಹೇಳುತ್ತಾರೆ, "ನಾವು ತಂತ್ರಜ್ಞರಿಗೆ ಪಾವತಿಸುತ್ತೇವೆ. ನಟರು ಸ್ವಯಿಚ್ಛೆಯಿಂದ ಮಾಡುತ್ತಾರೆ. ಸುಮಾರು 100ರಿಂದ 150 ಜನರು ಸ್ವಯಂಪ್ರೇರಿತರಾಗಿ ಕೆಲಸ ಮಾಡುತ್ತಾರೆ.
ಬೋರುನ್ ಚಿಟಾದಾರ್ ಚುಕ್ನಲ್ಲಿನ ರಾಸ್ ಮಹೋತ್ಸವವನ್ನು ಶಾಲೆಯಲ್ಲಿ ನಡೆಸಲಾಗುತ್ತದೆ ಮತ್ತು ಅಸ್ಸಾಂನ ಪರಿಶಿಷ್ಟ ಪಂಗಡವಾದ ಮಿಸಿಂಗ್ (ಅಥವಾ ಮಿಶಿಂಗ್) ಸಮುದಾಯದ ಸದಸ್ಯರು ಇದನ್ನು ಆಯೋಜಿಸುತ್ತಾರೆ. ಕಳೆದ ಕೆಲವು ವರ್ಷಗಳಲ್ಲಿ, ಯುವ ಪೀಳಿಗೆಯ ಆಸಕ್ತಿಯ ಕೊರತೆ ಮತ್ತು ಈ ಪ್ರದೇಶದಿಂದ ಹೆಚ್ಚಿನ ಮಟ್ಟದ ವಲಸೆಯು ಪ್ರದರ್ಶಕರ ಸಂಖ್ಯೆಯನ್ನು ಕಡಿಮೆ ಮಾಡಿದೆ. ಆದರೂ ಅವರು ಪಟ್ಟುಹಿಡಿದಿದ್ದಾರೆ, "ನಾವು ಅದನ್ನು ಆಯೋಜಿಸದಿದ್ದರೆ, ಹಳ್ಳಿಯಲ್ಲಿ ಏನೋ ಅಶುಭವಾಗಿ ಸಂಭವಿಸಬಹುದು" ಎಂದು ರಾಜಾ ಪಾಯೆಂಗ್ ಹೇಳುತ್ತಾರೆ. "ಇದು ಹಳ್ಳಿಯ ಜನಪ್ರಿಯ ನಂಬಿಕೆಯಾಗಿದೆ."
ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಬೆಂಬ ದೊಂದಿಗೆ ಮಾಡಲಾಗಿದೆ .
ಅನುವಾದ : ಶಂಕರ . ಎನ್ . ಕೆಂಚನೂರು