ಈ ವರದಿಯು ಪರಿಸರ ವರದಿಯ ವಿಭಾಗದಲ್ಲಿ 2019ರ ವರ್ಷದ ರಾಮನಾಥ್ಗೋ ಯೆಂಕಾ ಪ್ರಶಸ್ತಿಯನ್ನು ಗೆದ್ದ ಪರಿಯ ಹವಾಮಾನ ಬದಲಾವಣೆ ಕುರಿತ ಸರಣಿಯ ಭಾಗವಾಗಿದೆ.
ಇದು ಮರಳುಗಾಡಿನಲ್ಲಿ ನಡೆಯುತ್ತಿರುವ ಭಾರತೀಯ ಸಿನೆಮಾದ ಒಂದು ಕ್ಲಾಸಿಕ್ ಹೊಡೆದಾಟದ ದೃಶ್ಯ. ದಿಬ್ಬಗಳು ಮತ್ತು ಕುರುಚಲು ಗಿಡಗಂಟಿಗಳನ್ನು ಹೊಂದಿರುವ ಉಬ್ಬುತಗ್ಗುಗಳ ಹಿನ್ನೆಲೆಯಲ್ಲಿ, ಸಿನೆಮಾದ ನಾಯಕ ಬಂಜರಿನ ಮರಳರಾಶಿಯಿಂದ ದುರುಳರನ್ನು ಮಟ್ಟಹಾಕಲು ಧೂಳೆಬ್ಬಿಸಿ ಬರುತ್ತಾನೆ. ಪ್ರಾಕೃತಿಕವಾಗಿಯೇ ನೀಡಲ್ಪಟ್ಟ ಧಗೆ ಮತ್ತು ಧೂಳಿನಿಂದ ಮತ್ತಷ್ಟು ಬಿಸಿಯಾಗುತ್ತಾ ಸಿನೆಮಾದ ನಾಯಕನು ಸಿನೆಮಾಗೊಂದು ಸುಖಾಂತ್ಯವನ್ನು ನೀಡುತ್ತಾನೆ (ಖಂಡಿತವಾಗಿಯೂ ಖಳನಾಯಕರನ್ನು ಹೊರತುಪಡಿಸಿ). ಇಂಥಾ ಅದೆಷ್ಟೋ ದೃಶ್ಯಗಳನ್ನು ಲೆಕ್ಕವಿಲ್ಲದಷ್ಟು ಭಾರತೀಯ ಚಿತ್ರಗಳು ರಾಜಸ್ಥಾನದ ನಿರ್ಜನ ಅರಣ್ಯಪ್ರದೇಶಗಳಲ್ಲಿ ಚಿತ್ರೀಕರಿಸಿವೆ. ಇದು ಮಧ್ಯಪ್ರದೇಶದಲ್ಲಿರುವ ಚಂಬಲ್ ಕಣಿವೆಯ ದುರ್ಗಮ ಕಂದರಗಳಲ್ಲೂ ಕೂಡ ಸತ್ಯ.
ಆದರೆ ಇಲ್ಲಿ ತೋರಿಸಲಾಗಿರುವ (ವೀಡಿಯೋ ಕ್ಲಿಪ್ ನೋಡಿ) ಶುಷ್ಕ ಪ್ರದೇಶದಲ್ಲಿ ಮಾತ್ರ ರಾಜಸ್ಥಾನ ಅಥವಾ ಚಂಬಲ್ ಪ್ರದೇಶದ ಸ್ಥಳಗಳನ್ನು ತೋರಿಸಲಾಗಿಲ್ಲ. ಅಸಲಿಗೆ ಇದನ್ನು ಆಂಧ್ರಪ್ರದೇಶದ ರಾಯಲಸೀಮಾ ಪ್ರದೇಶದಲ್ಲಿರುವ ದಕ್ಷಿಣ ಪೆನಿನ್ಸುಲಾ ಒಂದರಲ್ಲಿ ಚಿತ್ರೀಕರಿಸಲಾಗಿದೆ. ಅನಂತಪುರ ಜಿಲ್ಲೆಯಲ್ಲಿರುವ ಸುಮಾರು 1000 ಎಕರೆ ಪ್ರದೇಶದ ಈ ಭೂಭಾಗವು ಒಂದು ಕಾಲದಲ್ಲಿ ರಾಗಿ ಕೃಷಿಭೂಮಿಯಾಗಿ ಸಮೃದ್ಧವಾಗಿತ್ತು. ಆದರೆ ಕಳೆದ ಕೆಲವು ದಶಕಗಳಿಂದ ಈ ಭೂಭಾಗವು ಮರಳುಗಾಡಿನಂತೆ ಬದಲಾಗುತ್ತಲೇ ಸಾಗಿದೆ. ನಮ್ಮ ನಡುವಿನ ಪರಿಸರದ ವಿರೋಧಾಭಾಸದ ಅಂಶಗಳೇ ಇದಕ್ಕೆ ಕಾರಣವೆಂಬುದಕ್ಕೆ ಸಂದೇಹಗಳಿಲ್ಲ. ಒಟ್ಟಿನಲ್ಲಿ ಹೀಗಾಗುತ್ತಲೇ ಚಿತ್ರನಿರ್ದೇಶಕರು ಸಾಮಾನ್ಯವಾಗಿ ದೃಶ್ಯಗಳ ಚಿತ್ರೀಕರಣಕ್ಕಾಗಿ ತಮ್ಮ ತಂಡಗಳನ್ನು ಕಳಿಸುತ್ತಾ ಸದಾ ತಲಾಶೆಯಲ್ಲಿರುವ ಭೂಭಾಗವೇ ಇಲ್ಲಿ ಸೃಷ್ಟಿಯಾದಂತಾಗಿದೆ.
ಇನ್ನು ದರ್ಗಾ ಹೊನ್ನೂರು ಹಳ್ಳಿಯಲ್ಲಂತೂ ಈ ಭೂಭಾಗದಲ್ಲಿರುವ ಹಲವಾರು ಭೂಮಾಲೀಕರು ನಮ್ಮನ್ನು ಸಿನೆಮಾ ಚಿತ್ರೀಕರಣದ ತಂಡವಲ್ಲವೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ. ''ಇದು ಯಾವ ಚಿತ್ರದ್ದು? ಚಿತ್ರ ಯಾವಾಗ ತೆರೆಗೆ ಬರುತ್ತದೆ?'', ಎಂಬ ಪ್ರಶ್ನೆಗಳೇ ಇವರೆಲ್ಲರ ಮಾತು ಮತ್ತು ಮನಸ್ಸುಗಳಲ್ಲಿ. ಇನ್ನು ನಾವು ಪತ್ರಕರ್ತರೆಂದು ತಿಳಿದ ನಂತರವೂ ಕೆಲವರಲ್ಲಿ ಉಕ್ಕುತ್ತಿದ್ದ ಉತ್ಸಾಹವು ನಿಜಕ್ಕೂ ನೋಡುವಂತಿತ್ತು.
ಅಷ್ಟಕ್ಕೂ ಈ ಸ್ಥಳವನ್ನು ಜನಪ್ರಿಯಗೊಳಿಸಿದ ತೆಲುಗು ಚಿತ್ರವೆಂದರೆ - ಜಯಮ್ ಮಾನಡೆ ರಾ (ವಿಜಯವು ನಮ್ಮದೇ). 1998 ಮತ್ತು 2000 ನೇ ಇಸವಿಗಳ ಮಧ್ಯೆ ಇಲ್ಲಿ ಈ ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸಲಾಗಿತ್ತು. ಇಲ್ಲೂ ಕೂಡ ಯಾವುದೇ ಕಮರ್ಶಿಯಲ್ ಚಿತ್ರಗಳ ಪರಿಶ್ರಮಿ ಚಿತ್ರನಿರ್ದೇಶಕರುಗಳು ಮಾಡುವಂತೆ ದೃಶ್ಯದಲ್ಲಿ ಮರುಭೂಮಿಯ ಪರಿಣಾಮವನ್ನು ಹೆಚ್ಚಿಸುವಂತೆ ಮಾಡಲು ಚಿತ್ರತಂಡವು ತನ್ನ 'ಸೆಟ್' ಗಾಗಿ ಭಾರೀ ಕೈಚಳಕವನ್ನು ತೋರಿತ್ತು. ''ಚಿತ್ರೀಕರಣಕ್ಕಾಗಿ ನಾವು ನಮ್ಮ ಬೆಳೆಗಳನ್ನು ಬುಡಸಮೇತ ತೆಗೆಯಬೇಕಾಯಿತು (ಅವರು ಇದಕ್ಕಾಗಿ ನಮಗೆ ಪರಿಹಾರಧನವನ್ನೂ ಕೂಡ ನೀಡಿದ್ದರು). ಇನ್ನು ಸ್ಥಳವು ಮತ್ತಷ್ಟು ಸಹಜವಾಗಿ ಕಾಣುವಂತಾಗಲು ನಾವು ಕೆಲ ಗಿಡಗಂಟಿಗಳನ್ನೂ, ಚಿಕ್ಕ ಮರಗಳನ್ನೂ ಕೂಡ ಕಡಿದು ಹಾಕಿದೆವು'', ಎನ್ನುತ್ತಾರೆ 34 ಎಕರೆ ಜಮೀನನ್ನು ಹೊಂದಿರುವ 45 ರ ಪ್ರಾಯದ ಪೂಜಾರಿ ಲಿಂಗಣ್ಣ. ಇವರ ಜಮೀನಿನಲ್ಲೇ ಸಿನೆಮಾದ ಹೊಡೆದಾಟದ ಚಿತ್ರೀಕರಣವನ್ನು ನಡೆಸಲಾಗಿತ್ತು. ನುರಿತ ಕ್ಯಾಮೆರಾಮನ್ ಗಳ ಕೈಚಕ ಮತ್ತು ಫಿಲ್ಟರ್ ಗಳ ಅದ್ಭುತ ಬಳಕೆಯು ದೃಶ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸುವಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದವು.
'ಜಯಮ್ ಮಾನಡೇ ರಾ' ಚಿತ್ರತಂಡವು 20 ವರ್ಷಗಳ ನಂತರ ಚಿತ್ರದ ಎರಡನೇ ಭಾಗವನ್ನು ಚಿತ್ರೀಕರಿಸುವುದಾದರೆ ಹಿಂದೆ ಪಟ್ಟಷ್ಟು ಶ್ರಮವನ್ನೇನೂ ಈಗ ಪಡಬೇಕಿಲ್ಲ. ಬದಲಾಗಿರುವ ಸಮಯ, ಕಂಗೆಟ್ಟುಹೋಗಿರುವ ಪ್ರಕೃತಿ ಮತ್ತು ಮಾನವನ ನಿರಂತರ ಹಸ್ತಕ್ಷೇಪಗಳು ಚಿತ್ರತಂಡವೊಂದು ಮರುಭೂಮಿಯ ಚಿತ್ರೀಕರಣಕ್ಕೆಂದು ಬಯಸುವ ಎಲ್ಲಾ ಬದಲಾವಣೆಗಳನ್ನು ಈಗ ತಾನಾಗಿಯೇ ನೀಡಿದೆ.
ಈ ದೃಶ್ಯದಲ್ಲಿ (ವೀಡಿಯೋ ನೋಡಿ) ಕಾಣುತ್ತಿರುವ ಶುಷ್ಕ ಪ್ರದೇಶವು ರಾಜಸ್ಥಾನ ಅಥವಾ ಚಂಬಲ್ ಪ್ರದೇಶದ್ದಲ್ಲ. ಇದನ್ನು ಆಂಧ್ರಪ್ರದೇಶದ ರಾಯಲಸೀಮಾದಲ್ಲಿ ಚಿತ್ರೀಕರಿಸಲಾಗಿದೆ
ಆದರೆ ಇದೊಂದು ಕುತೂಹಲಕಾರಿಯಾದ ಪ್ರದೇಶವಂತೂ ಹೌದು. ಅಂತರ್ಜಲವು ನೆಲಕ್ಕೆ ಬಹಳಷ್ಟು ಹತ್ತಿರದಲ್ಲಿ ಸ್ವಲ್ಪ ಉಳಿದಿರುವುದರಿಂದ ಕೃಷಿಯು ಇನ್ನೂ ಇಲ್ಲಿದೆ. ಲಿಂಗಣ್ಣನ ಮಗನಾಗಿರುವ ಪಿ. ಹೊನ್ನುರೆಡ್ಡಿಯವರು ಹೇಳುವ ಪ್ರಕಾರ ಕೇವಲ ಹದಿನೈದು ಅಡಿ ಆಳದಲ್ಲೇ ಇಲ್ಲಿ ಇವರಿಗೆ ನೀರು ಸಿಗುತ್ತಿದೆಯಂತೆ. ಅನಂತಪುರದ ಬಹಳಷ್ಟು ಭಾಗಗಳಲ್ಲಿ ಸಾಮಾನ್ಯವಾಗಿ 500-600 ಅಡಿಗಳ ಆಳಕ್ಕೆ ಮುನ್ನ ನೀರು ಸಿಗುವುದಿಲ್ಲ. ಜಿಲ್ಲೆಯ ಕೆಲ ಭಾಗಗಳಲ್ಲಿ ಇದು 1000 ಅಡಿ ಆಳದ ಮೈಲಿಗಲ್ಲನ್ನೂ ತಲುಪಿದೆ. ಇಷ್ಟಿದ್ದರೂ ಇಲ್ಲಿ ನಾಲ್ಕಿಂಚಿನ ಕೊಳವೆಬಾಯಿಯ ಪೈಪಿನಲ್ಲಿ ಪ್ರವಾಹದಂತೆ ನೀರು ಹೊರನುಗ್ಗುತ್ತಿದೆ. ಇಂಥಾ ಬಿಸಿ ಮತ್ತು ಮರಳರಾಶಿಯ ನೆಲದಲ್ಲೂ ಸಮತಲಕ್ಕೆ ಇಷ್ಟು ಹತ್ತಿರದಲ್ಲಿ ನೀರು ಸಿಗುವ ಪರಿಗೆ ಏನನ್ನಬೇಕು?
"ಈ ಇಡೀ ಪ್ರದೇಶವು ವಿಸ್ತøತ ನದೀಪಾತ್ರದ ಭೂಮಿಯಾಗಿದೆ", ಎನ್ನುತ್ತಾರೆ ಪಕ್ಕದ ಹಳ್ಳಿಯ ರೈತನಾಗಿರುವ ಪಲ್ತೂರು ಮುಕನ್ನ. ಆದರೆ ನದಿ ಎಲ್ಲಿದೆ? ನಮಗಂತೂ ಕಾಣಿಸುತ್ತಿಲ್ಲ. "ಸುಮಾರು ಐದು ದಶಕಗಳ ಹಿಂದೆ, ಹೊನ್ನೂರಿನಿಂದ ಅಂದಾಜು 25-30 ಕಿಲೋಮೀಟರುಗಳ ದೂರದಲ್ಲಿ, ಇಲ್ಲಿ ಹರಿಯುತ್ತಿದ್ದ ವೇದಾವತಿ ನದಿಗೆ ಅಡ್ಡಲಾಗಿ ಅವರು ಅಣೆಕಟ್ಟೊಂದನ್ನು ಕಟ್ಟಿದ್ದರು. ನಮ್ಮ ಭಾಗಕ್ಕಿರುವ ವೇದಾವತಿಯು (ತುಂಗಭದ್ರಾ ನದಿಯ ಉಪನದಿ - ಅಘರಿ ಎಂದೂ ಕರೆಯಲಾಗುತ್ತದೆ) ಮಾತ್ರ ಕ್ರಮೇಣ ಒಣಗಿ ಹೋಯಿತು."
"ಅಷ್ಟಕ್ಕೂ ಆಗಿದ್ದಿಷ್ಟು. ಇಲ್ಲಿಯ ನದಿಯು ಬತ್ತಿಹೋಗಿರಬಹುದು. ಆದರೆ ಕಳೆದ ಹಲವು ಶತಮಾನಗಳಿಂದ ಅಂತರ್ಜಲದ ದೊಡ್ಡ ಮೂಲವೊಂದನ್ನು ಇಲ್ಲಿ ಸೃಷ್ಟಿಸಲು ಇದು ನೆರವಾಗಿದೆ. ಇಂದು ಮಾತ್ರ ಈ ಅಂತರ್ಜಲವನ್ನು ಬೇಕಾಬಿಟ್ಟಿ ಯಾವುದೇ ಪರಿವೆಯಿಲ್ಲದೆ ಹೊರತೆಗೆಯಲಾಗುತ್ತಿದೆ. ಇದು ಯಾವ ಮಟ್ಟಿಗಿದೆಯೆಂದರೆ ದೊಡ್ಡ ಅಪಾಯವೊಂದಕ್ಕೆ ಮುನ್ಸೂಚನೆ ಕೊಡುತ್ತಿರುವಂತಿದೆ", ಎನ್ನುತ್ತಾರೆ ಪರಿಸರ ವಿಜ್ಞಾನ ಕೇಂದ್ರದ (ಅನಂತಪುರದ ಗ್ರಾಮೀಣ ಅಭಿವೃದ್ಧಿ ಕೇಂದ್ರ) ಮಲ್ಲ ರೆಡ್ಡಿ.
ಈ ಅಪಾಯವು ಬಂದೆರಲು ದೀರ್ಘಕಾಲವೇನೂ ಬೇಕಿಲ್ಲ. "ಇಪ್ಪತ್ತು ವರ್ಷಗಳ ಹಿಂದೆ ಒಂದೇ ಒಂದು ಕೊಳವೆಬಾವಿಯೂ ಇಲ್ಲಿರಲಿಲ್ಲ. ಈ ಪ್ರದೇಶವು ಮಳೆನೀರಿನಿಂದಲೇ ಕೃಷಿಯನ್ನು ನಡೆಸಲಾಗುವ ಭೂಮಿಯಾಗಿತ್ತು. ಸದ್ಯ ಇಲ್ಲಿಯ 1000 ಎಕರೆಯಲ್ಲಿ ಏನಿಲ್ಲವೆಂದರೂ 300-400 ಕೊಳವೆಬಾವಿಗಳಿವೆ. 30-35 ಅಡಿಗಳಷ್ಟಿನ ಆಳದಲ್ಲಿ ಅಥವಾ ಅದಕ್ಕಿಂತಲೂ ಹೆಚ್ಚಿನ ಆಳದಲ್ಲಿ ನಮಗಿಂದು ನೀರು ಸಿಗುತ್ತಿದೆ", ಎನ್ನುತ್ತಿದ್ದಾರೆ 46 ರ ಪ್ರಾಯದ ಕೃಷಿಕನಾಗಿರುವ ವಿ.ಎಲ್. ಹಿಮಾಚಲ್. ಇದರರ್ಥವೇನೆಂದರೆ ಮೂರು ಎಕರೆ ಅಥವಾ ಅದಕ್ಕಿಂತಲೂ ಕಮ್ಮಿ ಪ್ರದೇಶದಲ್ಲಿ ಒಂದು ಕೊಳವೆಬಾವಿಯ ಇರುವಿಕೆ. ಮರಳುಗಾಡಿನ ಈ ಪ್ರದೇಶದಲ್ಲಿ ಇವರಿಗೆ 12.5 ಎಕರೆಯಷ್ಟು ಜಮೀನಿದೆ.
ಕೊಳವೆಬಾವಿಗಳ ಈ ಸಂಖ್ಯೆಯು ನಿಜಕ್ಕೂ ದೊಡ್ಡಮಟ್ಟಿನದ್ದು. ಮಲ್ಲರೆಡ್ಡಿಯವರು ಹೇಳುವ ಪ್ರಕಾರ ಅನಂತಪುರದಲ್ಲೂ ಅಂದಾಜು 270000 ಕೊಳವೆಬಾವಿಗಳಿವೆ. ಆದರೆ ಕೊಳವೆಬಾವಿಗಳನ್ನು ಹೊಂದಲು ಇರುವ ಈ ಸ್ಥಳದ ಸಾಮಥ್ರ್ಯವು 70000 ಮಾತ್ರ. ಇನ್ನು ಈ ವರ್ಷವಂತೂ ಇರುವ ಕೊಳವೆಬಾವಿಗಳಲ್ಲಿ ಅರ್ಧದಷ್ಟು ಒಣಗಿಹೋಗಿವೆ.
ಹಾಗಿದ್ದರೆ ಇಂಥಾ ಬಂಜರುಪ್ರದೇಶಗಳಲ್ಲಿ ಕೊಳವೆಬಾವಿಗಳ ಅಗತ್ಯವಾದರೂ ಏನು? ಯಾವ ಬಗೆಯ ಕೃಷಿಕಾರ್ಯಗಳು ಇಲ್ಲಿ ನಡೆಯುತ್ತಿವೆ? ಹೀಗೆ ಇಲ್ಲಿಯ ತುಂಡುಭೂಮಿಗಳಲ್ಲಿ ಏನು ಬೆಳೆಯುತ್ತದೆಂದು ಹುಡುಕಹೊರಟರೆ ಇಲ್ಲಿ ವ್ಯಾಪಕವಾಗಿ ಸಿಗಬೇಕಿದ್ದ ನೆಲಗಡಲೆಯೂ ಸಿಗುವುದಿಲ್ಲ. ಬದಲಾಗಿ ಸಿಗುವುದು ಬಾಜ್ರಾ ಮಾತ್ರ. ಬೀಜಗಳ ಸಂಖ್ಯೆಯನ್ನು ಹೆಚ್ಚಿಸಲೆಂದೇ ಇಲ್ಲಿ ಬಾಜ್ರಾ ಬೆಳೆಯನ್ನು ಮಾಡಲಾಗುತ್ತದೆ. ಅಂದಹಾಗೆ ಅದು ನಿತ್ಯದ ಬಳಕೆಗೂ ಅಲ್ಲ ಅಥವಾ ಮಾರುಕಟ್ಟೆಗೆಂದೂ ಅಲ್ಲ. ಇವೆಲ್ಲಾ ನಡೆಯುವುದು ಬೀಜಗಳ ನಿಯಮಿತ ಪೂರೈಕೆಗಾಗಿ ಕಾಯುತ್ತಿರುವ ಕಂಪೆನಿಗಳಿಗಾಗಿ ಮಾತ್ರ. ಈ ಕೆಲಸಕ್ಕೆಂದೇ ಕಂಪೆನಿಗಳು ರೈತರಿಗೆ ಹಣವನ್ನು ಸಂದಾಯ ಮಾಡಿವೆ. ನೀವಿಲ್ಲಿ ಗಮನಿಸಿದರೆ ಅಕ್ಕಪಕ್ಕದ ಸಾಲುಗಳಲ್ಲಿ ಮಟ್ಟಸವಾಗಿ ಹಾಕಿರುವ ಗಂಡು ಮತ್ತು ಹೆಣ್ಣು ಬೀಜತಳಿಗಳನ್ನು ಕಾಣಬಹುದು. ಬಾಜ್ರಾದ ಎರಡು ಬಗೆಯ ತಳಿಗಳನ್ನು ಬಳಸಿಕೊಂಡು ಈ ಕಂಪೆನಿಗಳು ಹೈಬ್ರಿಡ್ ಗಳನ್ನು ಸೃಷ್ಟಿಸುತ್ತಿವೆ. ಇದಕ್ಕಾಗಿ ವ್ಯಯವಾಗುತ್ತಿರುವ ನೀರಿನ ಪ್ರಮಾಣವೂ ಹೆಚ್ಚು. ಇನ್ನು ಬೀಜಗಳನ್ನು ತೆಗೆದ ನಂತರ ಉಳಿದ ಗಿಡಗಂಟಿಗಳು ಬಳಕೆಯಾಗುವುದು ಮೇವಿನ ರೂಪದಲ್ಲಿ ಮಾತ್ರ.
"ಬೀಜಗಳ ಈ ಕೆಲಸಕ್ಕಾಗಿ ಪ್ರತೀ ಕ್ವಿಂಟಾಲಿಗೆ 3800 ರೂಪಾಯಿಗಳಷ್ಟು ಹಣವನ್ನು ನಾವು ಸಂಪಾದಿಸುತ್ತೇವೆ", ಎನ್ನುತ್ತಾರೆ ಪೂಜಾರಿ ಲಿಂಗಣ್ಣ. ಇದಕ್ಕೆ ಬೇಕಾಗಿರುವ ಶ್ರಮ ಮತ್ತು ಆರೈಕೆಯನ್ನು ಲೆಕ್ಕಹಾಕಿದರೆ ಈ ಸಂಪಾದನೆಯು ನಿಜಕ್ಕೂ ಕಮ್ಮಿ. ಅದರಲ್ಲೂ ಈ ಕಂಪೆನಿಗಳು ಹೀಗೆ ದೊರೆತ ಬೀಜಗಳನ್ನು ಇವೇ ರೈತರಿಗೆ ದುಬಾರಿ ಬೆಲೆಯಲ್ಲಿ ಮಾರಾಟ ಮಾಡುತ್ತಿವೆ. ಈ ಭಾಗದ ಮತ್ತೋರ್ವ ಕೃಷಿಕರಾಗಿರುವ ವೈ. ಎಸ್. ಶಾಂತಮ್ಮರವರು ಹೇಳುವಂತೆ ಅವರ ಕುಟುಂಬವು 3700 ರೂಪಾಯಿಗಳನ್ನು ಪ್ರತೀ ಕ್ವಿಂಟಾಲಿಗೆ ಸಂಪಾದಿಸುತ್ತಿದೆ.
ಶಾಂತಮ್ಮ ಮತ್ತು ಅವರ ಮಗಳಾದ ವಂದಾಕ್ಷಿಯವರ ಪ್ರಕಾರ ಈ ಭಾಗಗಳಲ್ಲಿ ಕೃಷಿ ಮಾಡಲು ಇರುವ ದೊಡ್ಡ ಸಮಸ್ಯೆಯು ನೀರಿನದ್ದಲ್ಲ. ಈ ಭಾಗದ ಮನೆಗಳಲ್ಲಿ ಕೊಳವೆ ಸೌಲಭ್ಯವು ಇರದಿದ್ದರೂ ಇಲ್ಲಿಯ ಹಳ್ಳಿಗಳಲ್ಲಿ ನೀರಿದೆ. ಬದಲಾಗಿ ದೊಡ್ಡ ಸಮಸ್ಯೆಯೇನೆಂದರೆ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿರುವ ಮರಳಿನ ಹೊರತಾಗಿ ವೇಗವಾಗಿ ಮತ್ತಷ್ಟು ಜಮೆಯಾಗುತ್ತಿರುವ ಮರಳಿನ ರಾಶಿ. ಹಲವು ಅಡಿಗಳಷ್ಟು ಆಳವಿರುವ ಇಲ್ಲಿಯ ಮರಳರಾಶಿಯಲ್ಲಿ ಒಂದಿಷ್ಟು ದೂರ ಹೆಜ್ಜೆಹಾಕುವುದೆಂದರೂ ಅದು ಮಹಾಸುಸ್ತಿನ ದಾರಿ.
"ಅದು ನಮ್ಮ ಶ್ರಮವನ್ನೆಲ್ಲಾ ಒಂದೇ ಏಟಿಗೆ ನಾಶಗೊಳಿಸಬಲ್ಲದು", ಎಂದು ತಾಯಿ-ಮಗಳಿಬ್ಬರೂ ಹೇಳುತ್ತಿದ್ದಾರೆ. ಪಿ. ಹೊನ್ನುರೆಡ್ಡಿ ಕೂಡ ಈ ಮಾತಿಗೆ ಸಮ್ಮತಿಸುತ್ತಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರು ಶ್ರಮಪಟ್ಟು ಗಿಡಗಳಿಗಾಗಿ ಸಾಲುಗಳನ್ನು ಸಿದ್ಧಗೊಳಿಸಿದ್ದರೆ ಸದ್ಯ ಅವುಗಳು ಮರಳಿನ ದಿಬ್ಬವೊಂದರ ದೊಡ್ಡ ರಾಶಿಯ ಅಡಿಯಲ್ಲಿ ಬಹುತೇಕ ಹೂತುಹೋಗಿವೆ. ಈಗ ಅಲ್ಲಿ ಗೋಚರಿಸುತ್ತಿರುವುದು ಮರಳಿನ ಉಬ್ಬುಗಳು ಮಾತ್ರ. ದಿನೇ ದಿನೇ ತನ್ನ ಶುಷ್ಕತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಈ ಪ್ರದೇಶವು ಮರಳಬಿರುಗಾಳಿಯನ್ನೂ ಕೂಡ ಹಳ್ಳಿಯಲ್ಲಿ ಹೊತ್ತು ತರುತ್ತಿವೆ.
"ಈ ಹಳ್ಳಿಯಲ್ಲಿ ವರ್ಷಕ್ಕೆ ಮೂರು ತಿಂಗಳುಗಳ ಕಾಲ ಮರಳ ಮಳೆಯಾಗುತ್ತದೆ. ಅದು ನಮ್ಮ ಮನೆಯೊಳಗೆ, ಆಹಾರದ ಮೇಲೆ... ಹೀಗೆ ಎಲ್ಲೆಂದರಲ್ಲಿ ನುಗ್ಗಿ ಬರುತ್ತಿದೆ", ಎನ್ನುತ್ತಾರೆ ಮತ್ತೋರ್ವ ಕೃಷಿಕ ಎಮ್. ಬಾಶಾ. ದಿಬ್ಬಗಳಿಂದ ಒಂದಷ್ಟು ದೂರಕ್ಕಿರುವ ಮನೆಗಳಿಗೆ ಜೋರಾಗಿ ಬೀಸುವ ಗಾಳಿಯು ಮರಳನ್ನು ಹೊತ್ತು ತರುತ್ತಿದೆ. ಇನ್ನು ಹೆಚ್ಚುವರಿ ಬಾಗಿಲು ಮತ್ತು ನೆಟ್ ವ್ಯವಸ್ಥೆಗಳಂಥಾ ತಂತ್ರಗಳು ಎಲ್ಲಾ ಕಾಲದಲ್ಲೂ ಫಲಿಸುವುದಿಲ್ಲ. "ಇಸಾಕ ವರ್ಷಮ್ (ಮರಳಮಳೆ) ಈಗ ನಮ್ಮ ಜೀವನದ ಒಂದು ಭಾಗವಾಗಿಬಿಟ್ಟಿದೆ. ಈಗ ನಾವು ಇದರೊಂದಿಗೇ ಬದುಕುತ್ತೇವೆ", ಎನ್ನುತ್ತಾರೆ ಇಲ್ಲಿಯ ಸ್ಥಳೀಯರು.
ಡಿ. ಹೊನ್ನೂರು ಹಳ್ಳಿಗೂ ಕೂಡ ಮರಳು ಅಪರಿಚಿತವೇನಲ್ಲ. "ಆದರೆ ಇದರ ತೀವ್ರತೆಯು ಹೆಚ್ಚಾಗಿರುವುದಂತೂ ಸತ್ಯ", ಎನ್ನುತ್ತಿದ್ದಾರೆ ಹಿಮಾಚಲ್. ಬೀಸುವ ಬಿರುಗಾಳಿಗೆ ಸದೃಢ ತಡೆಗೋಡೆಗಳಂತಿದ್ದ ಚಿಕ್ಕ ಮರಗಳು ಮತ್ತು ಪೊದೆಗಳಂತಿದ್ದ ಗಿಡಗಂಟಿಗಳು ಇಂದು ಮಾಯವಾಗಿವೆ. ಜಾಗತೀಕರಣ ಮತ್ತು ಮಾರುಕಟ್ಟೆ ಅರ್ಥಶಾಸ್ತ್ರದ ಪರಿಣಾಮಗಳ ಬಗ್ಗೆ ಸಾಕಷ್ಟು ತಿಳಿದುಕೊಂಡವರಂತೆ ಮಾತನಾಡುವ ಹಿಮಾಚಲ್ "ನಾವೀಗ ಎಲ್ಲವನ್ನೂ ಕೂಡ ನಗದಿನ ರೂಪದಲ್ಲೇ ಲೆಕ್ಕಹಾಕುತ್ತಿದ್ದೇವೆ. ಭೂಮಿಯ ಒಂದೊಂದು ಇಂಚನ್ನೂ ಕೂಡ ವಾಣಿಜ್ಯಕೃಷಿಗಾಗಿ ಬಳಸಿದ ಕಾರಣಕ್ಕಾಗಿಯೇ ಇಂದು ಪೊದೆಗಳು, ಮರಗಳು ಮತ್ತು ಸಸ್ಯವರ್ಗಗಳು ಮಾಯವಾಗಿವೆ", ಎನ್ನುತ್ತಾರೆ. 55 ರ ಪ್ರಾಯದ ಎಮ್. ತಿಪ್ಪಯ್ಯ ಹೇಳುವ ಪ್ರಕಾರ ಬೀಜಗಳು ಮೊಳಕೆಯೊಡೆಯುವ ಸಮಯದಲ್ಲಿ ಮರಳಮಳೆಯು ಉಂಟಾದರೆ ಆಗುವ ನಷ್ಟವು ದೊಡ್ಡ ಮಟ್ಟದ್ದಂತೆ. ನೀರಿನ ಮೂಲವು ಕೈಗೆ ಸಿಗುವಂತಿದ್ದರೂ ಕೂಡ ಉತ್ಪಾದನೆಯ ಪ್ರಮಾಣವು ಕಮ್ಮಿಯಿದೆ. "ಒಂದು ಎಕರೆಗೆ ಮೂರು ಕ್ವಿಂಟಾಲ್. ಹೆಚ್ಚೆಂದರೆ ನಾಲ್ಕು", ಎನ್ನುತ್ತಾರೆ 32 ರ ಪ್ರಾಯದ ಕೃಷಿಕನಾಗಿರುವ ಹೊನ್ನೂರು ಸ್ವಾಮಿ. ಇನ್ನು ಜಿಲ್ಲೆಯ ಸರಾಸರಿ ಇಳುವರಿಯು ಅಂದಾಜು ಐದರಷ್ಟಿದೆ.
ಗಾಳಿಯ ರಭಸಕ್ಕೆ ನೆರವಾಗುವ ನೈಸರ್ಗಿಕ ತಡೆಗೋಡೆಗಳ ಬಗ್ಗೆ ಇವರಿಗೆ ಪರಿವೆಯೇ ಇಲ್ಲವೇ? "ಎಲ್ಲರೂ ಇಲ್ಲಿ ವಾಣಿಜ್ಯ ನೆಲೆಯಲ್ಲಿ ಉಪಯುಕ್ತವಾಗಿರುವ ಮರಗಳನ್ನಷ್ಟೇ ಬೆಳೆಸುತ್ತಾರೆ. ಇನ್ನು ಅಧಿಕಾರಿಗಳಂತೂ ಮರಗಳ ವಿಚಾರದಲ್ಲಿ ನೆರವಾಗುತ್ತೇವೆ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ ಅಂಥದ್ದೇನೂ ಆಗಲಿಲ್ಲ", ಎನ್ನುತ್ತಾರೆ ಹಿಮಾಚಲ್. ಆರ್ಥಿಕ ದೂರದೃಷ್ಟಿಯನ್ನಷ್ಟೇ ಇರಿಸಿಕೊಂಡು ಬೆಳೆಯಲಾಗುವ ಮರಗಳು ಇಲ್ಲಿಯ ಪರಿಸ್ಥಿತಿಗಳಿಗೆ ಸರಿಹೊಂದದೆ ಸಮೃದ್ಧವಾಗಿ ಬೆಳೆಯದಿರುವ ದೃಷ್ಟಾಂತಗಳೇ ಹೆಚ್ಚು.
"ಕೆಲವರ್ಷಗಳ ಹಿಂದೆ ಹಲವು ಸರಕಾರಿ ಅಧಿಕಾರಿಗಳು ಮರಳದಿಬ್ಬಗಳತ್ತ ಪರಿಶೀಲನೆಗೆಂದು ಹೊರಟಿದ್ದರು", ಎಂದು ನೆನಪಿಸಿಕೊಳ್ಳುತ್ತಾರೆ ಪಾಲ್ತೂರು ಮುಕನ್ನ. ಆದರೆ ಇವರ ಮರಳುಗಾಡಿನ ಸಫಾರಿಯು ಹೀನಾಯ ರೀತಿಯಲ್ಲಿ ಸೋಲುಂಡಿತ್ತು. ಇನ್ನು ಮರಳರಾಶಿಯಲ್ಲಿ ಹೂತುಹೋಗಿದ್ದ ಎಸ್.ಯು.ವಿ ವಾಹನವನ್ನಂತೂ ಗ್ರಾಮಸ್ಥರ ಟ್ರ್ಯಾಕ್ಟರ್ ಬಳಸಿಕೊಂಡು ಹೊರತೆಗೆಯಲಾಗಿತ್ತಂತೆ. "ಅಂದೇ ಕೊನೆ. ಮುಂದೆ ಅಂಥಾ ವಾಹನಗಳನ್ನೆಂದೂ ನಾವು ಈ ಭಾಗದಲ್ಲಿ ನೋಡಲಿಲ್ಲ", ಎನ್ನುತ್ತಾರೆ ಮುಕನ್ನ. ಕೃಷಿಕ ಮೋಖಾ ರಮೇಶ್ ಹೇಳುವಂತೆ ಬಸ್ಸುಗಳು ಹಳ್ಳಿಯ ಇಂಥಾ ಪ್ರದೇಶಗಳಿಗೆ ಹೋಗಲಾರದೆ ಇರುತ್ತಿದ್ದ ಕಾಲವೂ ಇತ್ತಂತೆ.
ಪೊದೆಗಳು ಮತ್ತು ಅರಣ್ಯಗಳ ನಾಶವು ಇಡೀ ರಾಯಲಸೀಮಾ ಪ್ರದೇಶದಲ್ಲಿಂದು ದೊಡ್ಡ ಸಮಸ್ಯೆಯಾಗಿ ಬೆಳೆದುಬಿಟ್ಟಿದೆ. ಕೇವಲ ಅನಂತಪುರ ಜಿಲ್ಲೆಯನ್ನಷ್ಟೇ ಪರಿಗಣಿಸಿದರೂ 11 ಪ್ರತಿಶತದಷ್ಟು ಪ್ರದೇಶವನ್ನು "ಕಾಡು" ಎಂದು ವಿಭಾಗಿಸಲಾಗಿದೆ. ಆದರೆ ನೈಜಸ್ಥಿತಿಯೇನೆಂದರೆ ಇಲ್ಲಿರುವ ಅರಣ್ಯಪ್ರದೇಶವು 2 ಪ್ರತಿಶತಕ್ಕೂ ಕಮ್ಮಿ. ಇದು ಇಲ್ಲಿಯ ಮಣ್ಣು, ಗಾಳಿ, ನೀರು ಮತ್ತು ತಾಪಮಾನಗಳಲ್ಲಿ ಭೀಕರ ವೈಪರೀತ್ಯಗಳನ್ನು ತಂದೊಡ್ಡಿದೆ. ಅನಂತಪುರದಲ್ಲಿ ಕಾಣುವ ಒಂದೇ ಒಂದು ದೊಡ್ಡ ಕಾಡೆಂದರೆ ಅದು ಗಾಳಿಯಂತ್ರಗಳದ್ದು. ಮಿನಿ ಮರಳುಗಾಡಿನ ಅಂಚನ್ನೂ ಸೇರಿದಂತೆ ಇಲ್ಲಿಯ ಅಷ್ಟೂ ಪ್ರದೇಶವು ಸಾವಿರಾರು ಸಂಖ್ಯೆಯಲ್ಲಿ ಹೊಂದಿರುವುದು ಈ ದೈತ್ಯಯಂತ್ರಗಳನ್ನು ಮಾತ್ರ. ಗಾಳಿಯಂತ್ರಗಳ ಕಂಪೆನಿಗಳು ಇಲ್ಲಿಯ ಈ ಭೂಭಾಗಗಳನ್ನು ಖರೀದಿಸಿವೆ ಅಥವಾ ದೀರ್ಘಕಾಲದ ಅವಧಿಗೆ ಲೀಸ್ ನಲ್ಲಿ ಪಡೆದುಕೊಂಡಿವೆ.
ಡಿ. ಹೊನ್ನೂರಿನಲ್ಲಿರುವ ಕೆಲ ಕೃಷಿಕರು ಹೇಳುವ ಪ್ರಕಾರ ಇಲ್ಲಿಯ ಪರಿಸ್ಥಿತಿಯು ಮೊದಲಿನಿಂದಲೂ ಹೀಗೆಯೇ ಇತ್ತು. ಆದರೆ ವಿರೋಧಾಭಾಸವೆಂಬಂತಹ ಸಾಕ್ಷಿಗಳನ್ನು ಕೊಡುವವರೂ ಕೂಡ ಇವರೇ. ಮರಳು ಎಂದೆಂದಿಗೂ ಈ ಪ್ರದೇಶದಲ್ಲಿತ್ತು. ಅದರಲ್ಲಿ ಸಂದೇಹವೇನಿಲ್ಲ. ಆದರೆ ಮರಳ ಬಿರುಗಾಳಿಯ ರೂಪವನ್ನು ಪಡೆದುಕೊಳ್ಳುವ ಅವುಗಳ ಶಕ್ತಿಯು ಕಾಲಕ್ರಮೇಣ ಹೆಚ್ಚಾಗಿದೆ. ಹಿಂದೆ ಪೊದೆ, ಗಿಡಗಂಟಿಗಳ ಪ್ರಮಾಣವು ಸಾಕಷ್ಟಿತ್ತು, ಆದರೆ ಈಗ ಅವುಗಳು ಕಮ್ಮಿಯಾಗಿವೆ. ನೀರು ಎಂದೆಂದಿಗೂ ಇಲ್ಲಿತ್ತು ಎನ್ನುವುದು ಹೌದಾದರೂ ಇಲ್ಲಿಯ ನದಿಯ ಅಂತ್ಯದ ಬಗ್ಗೆ ಮಾತ್ರ ನಂತರದ ಭಾಗದಲ್ಲಿ ತಿಳಿದುಬರುತ್ತದೆ. ಎರಡು ದಶಕಗಳ ಹಿಂದೆ ಬೆರಳೆಣಿಕೆಯ ಕೊಳವೆಬಾವಿಗಳಷ್ಟೇ ಇಲ್ಲಿದ್ದವು, ಈಗ ಅವುಗಳ ಸಂಖ್ಯೆಯು ನೂರಾರು ಅನ್ನುವಷ್ಟಿದೆ. ಕಳೆದ ಎರಡು ದಶಕಗಳಲ್ಲಿ ತೀವ್ರ ಅನ್ನಿಸುವಷ್ಟು ಆಗಿರುವ ಹವಾಮಾನ ವೈಪರೀತ್ಯಗಳ ಬಗ್ಗೆ ಇಲ್ಲಿ ಬಹುತೇಕರ ಎಲ್ಲಾ ಮಂದಿಯೂ ಮಾತನಾಡುತ್ತಾರೆ.
ಮಳೆಯ ಮಾದರಿಗಳಲ್ಲಿ ಇಂದು ಬದಲಾವಣೆಗಳಾಗಿವೆ. "ಮಳೆಯ ನಿರೀಕ್ಷೆಯಲ್ಲಿದ್ದಾಗಲೆಲ್ಲಾ 60 ಕ್ಕೂ ಹೆಚ್ಚು ಪ್ರತಿಶತ ಕಮ್ಮಿ ಮಳೆಯಾಗುವ ಸಾಧ್ಯತೆಗಳೇ ಅಧಿಕ. ಕಳೆದ ಕೆಲ ವರ್ಷಗಳಿಂದ ಯುಗಾದಿಯ ಕಾಲದಲ್ಲಿ (ತೆಲುಗರ ಹೊಸ ವರ್ಷದ ದಿನ, ಸಾಮಾನ್ಯವಾಗಿ ಎಪ್ರಿಲ್ ತಿಂಗಳಲ್ಲಿ ಬರುತ್ತದೆ) ಮಳೆಯು ಬಹಳ ಕಮ್ಮಿಯಾಗಿದೆ", ಎನ್ನುತ್ತಾರೆ ಹಿಮಾಚಲ್. ನೈರುತ್ಯ ಮತ್ತು ಈಶಾನ್ಯ ಮಾನ್ಸೂನ್ ಗಳನ್ನು ಅನಂತಪುರ ಪ್ರದೇಶವು ಒಂದಷ್ಟು ಸ್ಪರ್ಶಿಸಿದರೂ ಕೂಡ ಯಾವ ಕಡೆಯಿಂದಲೂ ಸಂಪೂರ್ಣ ಲಾಭವನ್ನು ಪಡೆಯಲು ಈ ಭಾಗಕ್ಕಾಗುತ್ತಿಲ್ಲ ಎನ್ನುವುದು ಸತ್ಯ.
ಜಿಲ್ಲೆಯು 535 ಮಿಮಿ. ವಾರ್ಷಿಕ ಸರಾಸರಿ ಮಳೆಯನ್ನು ಪಡೆದ ವರ್ಷಗಳಲ್ಲೂ ವರ್ಷಧಾರೆಯ ಸಮಯ, ವಿಸ್ತಾರ ಮತ್ತು ಹಂಚಿಕೆಯು ಅಸಮತೋಲನದಿಂದ ಕೂಡಿರುವುದನ್ನು ಕಾಣಬಹುದು. ಕೆಲ ವರ್ಷಗಳಲ್ಲಂತೂ ಮಳೆಯು ನಿರ್ದಿಷ್ಟ ಬೆಳೆಯ ಋತುವಿನಿಂದ ಬೇರೆ ಋತುಗಳಿಗೆ ವರ್ಗವಾಗಿದೆ. ಇನ್ನು ಕೆಲ ಬಾರಿ ಮೊದಲ 24-48 ತಾಸುಗಳಲ್ಲಿ ಭಾರೀ ಮಳೆಯಾದರೆ ನಂತರದ ಅವಧಿಯು ಮಳೆಯನ್ನು ಕಾಣದಂತಾದ ಪರಿಸ್ಥಿತಿಗಳು ಬಂದೊದಗಿವೆ. ಕಳೆದ ವರ್ಷ ಕೆಲ ಮಂಡಲಗಳು ಬೆಳೆಯ ಋತುವಿನಲ್ಲೇ (ಜೂನ್ ನಿಂದ ಅಕ್ಟೋಬರ್) ಸುಮಾರು 75 ದಿನಗಳವರೆಗೆ ಮಳೆಯಿಲ್ಲದ ದಿನಗಳನ್ನು ಎದುರಿಸಬೇಕಾಗಿತ್ತು. ಅನಂತಪುರದ 75 ಪ್ರತಿಶತ ಜನಸಂಖ್ಯೆಯು ಗ್ರಾಮೀಣ ಭಾಗದವರಾದ್ದರಿಂದ ಮತ್ತು 80 ಪ್ರತಿಶತ ಕಾರ್ಮಿಕರು ಕೃಷಿ ಚಟುವಟಿಕೆಯಲ್ಲಷ್ಟೇ ತೊಡಗಿರುವುದರಿಂದ (ರೈತರಾಗಿ ಅಥವಾ ಕೃಷಿ ಕಾರ್ಮಿಕರಾಗಿ) ಇವೆಲ್ಲವೂ ಕೂಡ ವಿನಾಶಕಾರಿಯೆಂಬಷ್ಟರ ಮಟ್ಟಿಗೆ ಸಾಬೀತಾಗಿವೆ.
"ಕಳೆದ ಎರಡು ದಶಕಗಳಲ್ಲಿ ತಲಾ ಒಂದೊಂದು ವರ್ಷಗಳು ಮಾತ್ರ ಅನಂತಪುರಕ್ಕೆ 'ತಕ್ಕಮಟ್ಟಿನ ವರ್ಷ'ಗಳೆಂಬಂತೆ ನಡೆದಿದ್ದವು. ಇನ್ನುಳಿದ ಪ್ರತೀ 16 ವರ್ಷಗಳಲ್ಲಿ ಜಿಲ್ಲೆಯ ಮೂರನೇ ಎರಡರಷ್ಟು ಭಾಗದಿಂದ ಮುಕ್ಕಾಲು ಭಾಗವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು. ಇನ್ನು ಈ ಅವಧಿಯ 20 ವರ್ಷಗಳ ಕಾಲ ಹಿಂದಕ್ಕೆ ನಡೆದರೆ ಪ್ರತೀ ದಶಕವೂ ಮೂರು ಬಾರಿ ಬರವನ್ನು ಕಂಡಿತ್ತು. 1980 ರ ಕೊನೆಯ ಭಾಗದಿಂದ ಶುರುವಾದ ಬಹಳಷ್ಟು ಬದಲಾವಣೆಗಳು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಬಿಗಡಾಯಿಸುತ್ತಾ ಹೋದವು'', ಎನ್ನುತ್ತಾರೆ ಪರಿಸರ ವಿಜ್ಞಾನ ಕೇಂದ್ರದ ಮಲ್ಲ ರೆಡ್ಡಿ.
ರಾಗಿಯಂತಹ ತರಹೇವಾರಿ ಬೆಳೆಗಳ ತವರೂರಾಗಿದ್ದ ಅನಂತಪುರ ಜಿಲ್ಲೆಯು ಕ್ರಮೇಣ ನೆಲಗಡಲೆಯಂಥಾ ವಾಣಿಜ್ಯ ಬೆಳೆಗಳತ್ತ ಹೊರಳಿಕೊಂಡಿತ್ತು. ನಂತರ ಬಂದಿದ್ದು ಇನ್ನಿಲ್ಲದಂತೆ ಹೆಚ್ಚುತ್ತಲೇ ಹೋದ ಕೊಳವೆಬಾವಿಗಳು. (ರಾಷ್ಟ್ರೀಯ ಮಳೆಯಾಶ್ರಿತ ಪ್ರದೇಶ ಪ್ರಾಧಿಕಾರ ಹೇಳುವ ಪ್ರಕಾರ ಜಿಲ್ಲೆಯಲ್ಲಿ ಇಂದು "100 ಪ್ರತಿಶತಕ್ಕೂ ಹೆಚ್ಚು ಅಂತರ್ಜಲ ಮಟ್ಟವನ್ನು ದುರ್ಬಳಕೆ ಮಾಡುತ್ತಿರುವ ಪ್ರದೇಶಗಳಿವೆ'')
"ನಲವತ್ತು ವರ್ಷಗಳ ಹಿಂದೆ ನಮ್ಮಲ್ಲಿ ಸ್ಪಷ್ಟವೆನ್ನಿಸುವಂಥಾ ಮಾದರಿಯಿತ್ತು - 10 ವರ್ಷಗಳಲ್ಲಿ ಮೂರು ಬರ - ಪರಿಸ್ಥಿತಿಯು ಹೀಗಿದ್ದಾಗ ಏನನ್ನು ಬೆಳೆಯಬೇಕೆಂಬುದು ರೈತನಿಗೆ ಸ್ಪಷ್ಟವಾಗಿ ತಿಳಿದಿತ್ತು. ಆ ದಿನಗಳಲ್ಲಿ ಸುಮಾರು 9 ರಿಂದ 12 ಬಗೆಯ ಬೆಳೆಗಳು ಇದ್ದಿದ್ದಲ್ಲದೆ ಸ್ಥಿರವೆನಿಸುವಂತಹ ಕೃಷಿಯ ಚಕ್ರಗಳಿದ್ದವು'', ಎನ್ನುತ್ತಾರೆ ಸಿ. ಕೆ. 'ಬಬ್ಲೂ' ಗಂಗೂಲಿ. ಇವರು ನೇತೃತ್ವ ವಹಿಸಿರುವ ತಿಂಬಕ್ಟು ಕಲೆಕ್ಟಿವ್ ಎಂಬ ಹೆಸರಿನ ಸರ್ಕಾರೇತರ ಸಂಸ್ಥೆಯು ಸುಮಾರು ಮೂರು ದಶಕಗಳಿಂದ ಈ ಪ್ರದೇಶದ ಗ್ರಾಮೀಣ ಭಾಗದ ಬಡವರ ಆರ್ಥಿಕ ಸ್ಥಿತಿಯ ಸುಧಾರಣೆಗಾಗಿ ಕಾರ್ಯನಿರ್ವಹಿಸುತ್ತಿದೆ. ಈ ಪ್ರದೇಶದಲ್ಲಿ ಬರೋಬ್ಬರಿ ನಾಲ್ಕು ದಶಕಗಳಷ್ಟಿರುವ ಅವರ ಅಪಾರ ಅನುಭವವು ಇಲ್ಲಿಯ ಕೃಷಿ ಪರಿಸ್ಥಿತಿಗಳ ಬಗ್ಗೆ ಅವರಿಗೆ ಒಳ್ಳೆಯ ಒಳನೋಟಗಳನ್ನು ಕೊಟ್ಟಿದೆ.
"ಸಹೇಲ್ ಆಫ್ರಿಕಾಗೆ ಮಾಡಿದ್ದನ್ನೇ ನೆಲಗಡಲೆಯು (ಪ್ರಸ್ತುತ ಅನಂತಪುರದಲ್ಲಿ 69 ಪ್ರತಿಶತ ಕೃಷಿಭೂಮಿಯನ್ನು ಆವರಿಸಿಕೊಂಡಿದೆ) ನಮ್ಮಲ್ಲಿ ಮಾಡಿತ್ತು. ಕ್ರಮೇಣ ಒಂದೇ ಬೆಳೆಗೆ ಮೀಸಲಾಗಿಬಿಟ್ಟ ಕೃಷಿವಿಧಾನವು ಇಲ್ಲಿಯ ನೀರಿನ ಪರಿಸ್ಥಿತಿಯನ್ನು ಬದಲಾಯಿಸಿದ್ದಷ್ಟೇ ಅಲ್ಲ. ಅಸಲಿಗೆ ನೆಲಗಡಲೆಯ ಬೆಳೆಗೆ ನೆರಳು ಬೇಕಿಲ್ಲ. ಹೀಗಾಗಿ ಮರಗಳನ್ನು ಕಡಿಯಲಾಯಿತು. ಇದರಿಂದಾಗಿ ನಾಶವಾಗಿದ್ದು ಅನಂತಪುರದ ಮಣ್ಣು. ಜೊತೆಗೇ ಬೆಳೆಗಳೂ ಕೂಡ. ತೇವಾಂಶವು ಮರೆಯಾಗಿರುವುದರಿಂದ ಮತ್ತೆ ಮಳೆಯಾಧಾರಿತ ಕೃಷಿಗೆ ಮರಳುವುದು ಕಷ್ಟ'', ಎನ್ನುತ್ತಾರೆ ಗಂಗೂಲಿ. ಬೆಳೆಗಳಲ್ಲಾದ ಈ ಬದಲಾವಣೆಗಳು ಕೃಷಿಯಲ್ಲಿ ಈ ಭಾಗದ ಮಹಿಳೆಗಿರುವ ಪಾತ್ರವನ್ನೂ ಕೂಡ ತಗ್ಗಿಸಿದಂತಾಗಿತ್ತು. ಸಾಂಪ್ರದಾಯಿಕವಾಗಿ ಈ ಪ್ರದೇಶದಲ್ಲಿ ಬೆಳೆಯಲಾಗುವ ಮಳೆಯಾಧಾರಿತ ಬೆಳೆಗಳಿಗಾಗಿ ಮೀಸಲಾಗಿರುವ ತರಹೇವಾರಿ ಬೀಜಗಳನ್ನು ಸಂರಕ್ಷಿಸುವ ಜವಾಬ್ದಾರಿಯು ಇಲ್ಲಿಯ ಕೃಷಿಕ ಮಹಿಳೆಯರದ್ದಾಗಿತ್ತು. ಕಾಲಕ್ರಮೇಣ ಅನಂತಪುರವನ್ನು ಕಬಳಿಸಿದ ವಾಣಿಜ್ಯಬೆಳೆಗಳ ಬೀಜಗಳನ್ನು ರೈತರು ಮಾರುಕಟ್ಟೆಯಲ್ಲಿ ಬೆನ್ನತ್ತಿ ಹೋಗಲಾರಂಭಿಸಿದ ನಂತರ ಮಹಿಳೆಯರ ಪಾತ್ರವು ಕೃಷಿ ಕಾರ್ಮಿಕರಾಗಿಯಷ್ಟೇ ಸೀಮಿತವಾಗಿಬಿಟ್ಟಿತು. ಅಲ್ಲದೆ ಒಂದೇ ಕೃಷಿ ಭೂಮಿಯಲ್ಲಿ ತರಹೇವಾರಿ ಬೆಳೆಗಳನ್ನು ಏಕಕಾಲದಲ್ಲಿ ಬೆಳೆಸುವ, ಹಲವು ಪೀಳಿಗೆಗಳಿಂದ ಉಳಿಸಿಕೊಂಡು ಬಂದಿದ್ದ ಕೌಶಲವೂ ಕೂಡ ಕಳೆದುಹೋಗಿತ್ತು.
ಮೇವಿಗಾಗಿ ಬಳಸಲಾಗುವ ಬೆಳೆಗಳು ಇಂದು ಕೃಷಿಭೂಮಿಯ 3 ಪ್ರತಿಶತಕ್ಕೂ ಕಮ್ಮಿಯೆನಿಸುವಷ್ಟರ ಮಟ್ಟಿಗೆ ದಿನಗಳು ಬದಲಾಗಿದೆ. "ಒಂದು ಅವಧಿಯಲ್ಲಿ ಅನಂತಪುರವು ಇಡೀ ದೇಶದಲ್ಲೇ ಅತೀ ಹೆಚ್ಚು ರುಮಿನಂಟ್ ಗಳನ್ನು ಹೊಂದಿರುವ ಪ್ರದೇಶವೆಂದು ಹೆಸರಾಗಿತ್ತು. ಇವುಗಳು ನಮ್ಮ ಬಳಿಯಿದ್ದ ಅತ್ಯಮೂಲ್ಯ ಚಲಿಸಬಲ್ಲ ಆಸ್ತಿಯಾಗಿದ್ದವು. ಅದರಲ್ಲೂ ಸಾಂಪ್ರದಾಯಿಕ ಕಸುಬುದಾರರಾದ ಕುರುಬ ಜನಾಂಗದಂತಹ ಸಮುದಾಯಗಳಿಗೆ. ಇವರ ಜಾನುವಾರುಗಳು ಮೂತ್ರ ಮತ್ತು ಸೆಗಣಿಯ ರೂಪದಲ್ಲಿ ನೀಡುತ್ತಿದ್ದ ಗೊಬ್ಬರವು ಇಲ್ಲಿಯ ರೈತರ ಕೃಷಿಗಾಗಿ ಬಳಕೆಯಾಗುತ್ತಿತ್ತು. ಮುಂದೆ ಬೆಳೆ ಮಾದರಿಗಳು ಬದಲಾಗಿ, ರಾಸಾಯನಿಕಮಯವಾಗಿ ಬದಲಾಗಿಬಿಟ್ಟ ಕೃಷಿವಿಧಾನಗಳಿಂದಾಗಿ ಈ ವ್ಯವಸ್ಥೆಯ ರೂಪವೇ ಬದಲಾಗಿಬಿಟ್ಟಿದೆ. ಒಟ್ಟಿನಲ್ಲಿ ಈ ಪ್ರದೇಶಕ್ಕಾಗಿ ಮಾಡಲಾದ ಯೋಜನೆಗಳೆಲ್ಲಾ ಇಲ್ಲಿಯ ಬಡಕುಟುಂಬಗಳನ್ನು ಅಪಾಯದ ಅಂಚಿನತ್ತ ತಂದಿವೆ.
ಹೊನ್ನೂರಿನ ಕೃಷಿಕರಾಗಿರುವ ಹಿಮಾಚಲ್ ರವರಿಗೆ ತನ್ನ ಸುತ್ತ ಸಂಕುಚಿತವಾಗುತ್ತಿರುವ ಕೃಷಿಸಂಬಂಧಿ ಜೀವವೈವಿಧ್ಯ ಮತ್ತು ಪರಿಣಾಮಗಳ ಅರಿವಿದೆ. "ಒಂದು ಕಾಲದಲ್ಲಿ ಬಾಜ್ರಾ, ಅಲಸಂದೆ, ಉದ್ದು, ರಾಗಿ, ನವಣೆ, ಹೆಸರು, ಅವರೆ... ಹೀಗೆ ಬಹಳಷ್ಟು ಬಗೆಯ ಬೆಳೆಗಳನ್ನು ಬೆಳೆಯುತ್ತಿದ್ದೆವು. ಇವುಗಳು ಆರ್ಥಿಕವಾಗಿ ಹೆಚ್ಚಿನ ಲಾಭವನ್ನು ತರುತ್ತಿರಲಿಲ್ಲವಾದರೂ ಬೆಳೆಯುವ ವಿಧಾನಗಳು ಸರಳವಾಗಿದ್ದವು'', ಎನ್ನುತ್ತಾರೆ ಹಿಮಾಚಲ್. ಆದರೆ ಇತ್ತ ನೆಲಗಡಲೆಯು ಆರ್ಥಿಕಲಾಭವನ್ನು ತಂದಿದ್ದು ಹೌದಾದರೂ ಅದು ಒಂದಷ್ಟು ಅವಧಿಗೆ ಮಾತ್ರ.
ನೆಲಗಡಲೆಯ ಬೆಳೆಚಕ್ರವು ಅಂದಾಜು 110 ದಿನಗಳದ್ದಾಗಿರುತ್ತದೆ. ಇದರಲ್ಲಿ 20-70 ದಿನಗಳ ಮಟ್ಟಿಗೆ ಇದು ಮಣ್ಣನ್ನು ಆವರಿಸಿಕೊಂಡು ಮಣ್ಣನ್ನು ಸವೆತದಿಂದ ರಕ್ಷಿಸುತ್ತದೆ. ಆದರೆ ಸುಮಾರು ಒಂಭತ್ತು ಬಗೆಯ ಧಾನ್ಯ ಮತ್ತು ಬೇಳೆಗಳನ್ನು ಬೆಳೆಯುತ್ತಿದ್ದು, ಪ್ರತೀವರ್ಷದ ಜೂನ್ ನಿಂದ ಫೆಬ್ರವರಿಯ ಕಾಲದಲ್ಲಿ ಒಂದಲ್ಲಾ ಒಂದು ಬಗೆಯ ಬೆಳೆಯು ಸಕ್ರಿಯವಾಗಿದ್ದ ಪರಿಣಾಮವಾಗಿ ಮೇಲ್ಮೈಯ ಮಣ್ಣಿನ ಸಂರಕ್ಷಣೆಯಾಗುತ್ತಿತ್ತು.
ಹೊನ್ನೂರಿನಲ್ಲಿ ಹಿಮಾಚಲ್ ಕೂಡ ಸಕ್ರಿಯರಾಗಿದ್ದಾರೆ. ಕೊಳವೆಬಾವಿಗಳು ಮತ್ತು ವಾಣಿಜ್ಯಬೆಳೆಗಳು ರೈತರಿಗೆ ಲಾಭದಾಯಕವೆನ್ನುವುದು ಅವರಿಗೆ ಗೊತ್ತಿದೆ. ಹಾಗೆಯೇ ಇಲ್ಲಿಯ ಕುಸಿದ ಜೀವನಮಟ್ಟದಿಂದಾಗಿ ನಗರಗಳತ್ತ ವಲಸೆಹೋಗುತ್ತಿರುವವರ ಬಗ್ಗೆಯೂ. ಹಿಮಾಚಲ್ ಹೇಳುವ ಪ್ರಕಾರ ಇಲ್ಲಿಯ 200 ಕ್ಕೂ ಹೆಚ್ಚಿನ ಕುಟುಂಬಗಳು ಹಳ್ಳಿಯಾಚೆ ಉದ್ಯೋಗಗಳ ನಿರೀಕ್ಷೆಯಲ್ಲಿವೆ. ಇದು 2011 ರ ಜನಗಣತಿಯಲ್ಲಿ ದಾಖಲಿಸಿರುವಂತೆ ಅನಂತಪುರದ ಬೊಮ್ಮನಹಲ್ ಮಂಡಲದಲ್ಲಿರುವ 1227 ಕುಟುಂಬಗಳ ಆರನೇ ಒಂದು ಭಾಗ. 70-80 ಪ್ರತಿಶತ ಕುಟುಂಬಗಳು ಸಾಲದ ಕೂಪದಲ್ಲೂ ಒದ್ದಾಡುತ್ತಿವೆ ಎಂದು ಒತ್ತಿ ಹೇಳುತ್ತಾರೆ ಹಿಮಾಚಲ್. ಎರಡು ದಶಕಗಳಿಗಿಂತಲೂ ಹೆಚ್ಚಿನ ಅವಧಿಯಲ್ಲಿ ಅನಂತಪುರದ ಕೃಷಿಸಂಬಂಧಿ ಯಾತನೆಗಳು ತೀವ್ರವಾಗಿವೆ - ಇನ್ನು ರೈತರ ಸಮಸ್ಯೆಗಳಿಂದಾಗಿ ಆತ್ಮಹತ್ಯೆಗಳಾಗುತ್ತಿರುವ ಪ್ರಕರಣಗಳು ಇಡೀ ದೇಶದಲ್ಲಿ ಆಂಧ್ರಪ್ರದೇಶದಲ್ಲೇ ಹೆಚ್ಚು.
"ಕೊಳವೆಬಾವಿಗಳ ಸುಗ್ಗಿಕಾಲವು ಮುಗಿದುಹೋಯಿತು. ಹಾಗೆಯೇ ವಾಣಿಜ್ಯ ಬೆಳೆಗಳ ಮತ್ತು ಏಕಬೆಳೆಯನ್ನು ಬೆಳೆಸುವ ರೂಢಿಯದ್ದೂ'', ಎನ್ನುತ್ತಾರೆ ಮಲ್ಲರೆಡ್ಡಿ. ಇಷ್ಟಿದ್ದರೂ ಬಳಕೆಗಾಗಿ ಉತ್ಪಾದನೆಗಾಗಿ ಎಂಬಲ್ಲಿಂದ 'ಅಪರಿಚಿತ ಮಾರುಕಟ್ಟೆಗಾಗಿ ಉತ್ಪನ್ನಗಳನ್ನು ಸೃಷ್ಟಿಸುವ' ಕಡೆಗಾದ ಹೊರಳಿಕೊಳ್ಳುವಿಕೆಯು ಇವೆಲ್ಲವನ್ನು ಇಂದಿಗೂ ವೃದ್ಧಿಸುತ್ತಿವೆ.
ಹವಾಮಾನ ವೈಪರೀತ್ಯವೆಂಬುದು ರೀ-ಸೆಟ್ ಗುಂಡಿಯನ್ನು ಒತ್ತಿ ಎಲ್ಲವನ್ನೂ ಸರಿದಾರಿಗೆ ತರುವ ಪ್ರಕೃತಿಯ ವಿಧಾನವಾಗಿರುವುದೇ ಆದಲ್ಲಿ ಹೊನ್ನೂರಿನಲ್ಲಿ ಮತ್ತು ಅನಂತಪುರದಲ್ಲಿ ನಾವು ನೋಡಿದ್ದಾದರೂ ಏನು? ಹವಾಮಾನ ವೈಪರೀತ್ಯಗಳು ಬಹಳ ವಿಶಾಲವಾದ ನೈಸರ್ಗಿಕ ಪ್ರದೇಶಗಳ ಮತ್ತು ವಲಯಗಳ ಮೇಲೆ ತಮ್ಮ ಪರಿಣಾಮವನ್ನು ಬೀರುತ್ತವೆ ಎನ್ನುತ್ತಾರೆ ವಿಜ್ಞಾನಿಗಳು. ಹಾಗೆ ನೋಡಿದರೆ ಆಡಳಿತಾತ್ಮಕ ವಲಯಗಳಾದ ಹೊನ್ನೂರು ಮತ್ತು ಅನಂತಪುರಗಳು ಒಂದು ಚಿಕ್ಕ ಬಿಂದುವಷ್ಟೇ. ಇದಕ್ಕೆ ಅರ್ಹವಾಗಲಾರದಷ್ಟೂ ಚಿಕ್ಕ ಭೂಭಾಗಗಳು. ಹಾಗಿದ್ದರೆ ಇಲ್ಲಿನ ಉಪವಲಯಗಳಲ್ಲಿ ಈಗಾಗಲೇ ಕಾಣುತ್ತಿರುವ ವಿಚಿತ್ರ ನೈಸರ್ಗಿಕ ಬದಲಾವಣೆಗಳನ್ನು ಇವುಗಳು ದೊಡ್ಡ ಮಟ್ಟಿನಲ್ಲಿ ಹೆಚ್ಚಿಸುವ ಸಾಧ್ಯತೆಗಳಿವೆಯೇ?
ಇಲ್ಲಿ ಆಗಿರುವ ಬಹಳಷ್ಟು ಬದಲಾವಣೆಗಳು ನೈಸರ್ಗಿಕ ಕ್ರಿಯೆಗಳಿಗೆ ಮಾನವನು ತಂದೊಡ್ಡಿದ ಅಡಚಣೆಗಳಿಂದ ಉಂಟಾಗಿವೆಯೇ ಹೊರತು ಬೇರ್ಯಾವ ಕಾರಣಗಳಿಂದಲ್ಲ. 'ಸಾಂಕ್ರಾಮಿಕವಾಗಿಬಿಟ್ಟ ಕೊಳವೆಬಾವಿಗಳು'; ವಾಣಿಜ್ಯಬೆಳೆ ಮತ್ತು ಏಕಬೆಳೆಗಳತ್ತ ಅಚಾನಕ್ಕಾಗಿ ನಡೆದ ಹೊರಳುವಿಕೆ; ಅನಂತಪುರದ ಹವಾಮಾನ ವೈಪರೀತ್ಯಗಳಿಗೆ ಸಡ್ಡು ಹೊಡೆಯಬಲ್ಲಷ್ಟು ತಾಕತ್ತಿದ್ದ ಜೀವವೈವಿಧ್ಯಗಳ ಅಳಿವು; ನಿರಂತರವಾಗಿ ಖಾಲಿಯಾಗುತ್ತಿರುವ ಜಲಚರಗಳ ಸಂಖ್ಯೆ; ಈ ಅರೆಶುಷ್ಕ ಪ್ರದೇಶದಲ್ಲಿದ್ದ ಅಲ್ಪಸ್ವಲ್ಪ ಅರಣ್ಯಭಾಗಗಳ ನಾಶ; ಹುಲ್ಲುಗಳ ಪರಿಸರ ಮತ್ತು ಮಣ್ಣುಗಳ ಗಂಭೀರ ಪ್ರಮಾಣದ ನಾಶ; ಉದ್ಯಮಗಳಿಂದ ಪ್ರೇರಿತವಾಗಿ ತೀವ್ರಮಟ್ಟದಲ್ಲಿ ರಾಸಾಯನಿಕಮಯವಾಗುತ್ತಿರುವ ಕೃಷಿ; ಕೃಷಿ, ಅರಣ್ಯ, ಕುರುಬರು ಮತ್ತು ರೈತರ ನಡುವೆ ಕುಸಿಯುತ್ತಿರುವ ಸಹಜೀವನ - ಕಳೆದುಕೊಳ್ಳುತ್ತಿರುವ ಜೀವನೋಪಾಯಗಳು; ನದಿಗಳ ನಾಶ. ಹೀಗೆ ಇವೆಲ್ಲವೂ ಕೂಡ ಸಹಜವಾಗಿಯೇ ತಾಪಮಾನ ಮತ್ತು ಹವಾಮಾನಗಳ ಮೇಲೆ ತಮ್ಮ ಗಂಭೀರ ಪರಿಣಾಮವನ್ನು ಬೀರಿವೆ - ಅಷ್ಟೇ ಅಲ್ಲದೆ ಈ ಬದಲಾವಣೆಗಳು ಸದ್ಯ ಇರುವ ಸಮಸ್ಯೆಗಳನ್ನು ಮತ್ತಷ್ಟು ತೀವ್ರವಾಗಿಸುವಲ್ಲಿಯೂ ತಮ್ಮ ಪಾತ್ರವನ್ನು ವಹಿಸುತ್ತಿವೆ.
ಅರ್ಥಶಾಸ್ತ್ರ ಮತ್ತು ಅಭಿವೃದ್ಧಿಯಿಂದ ಪ್ರೇರಿತವಾಗಿ ನಡೆಯುತ್ತಾ ಹೀನಾಯವಾಗಿ ವಿಫಲವಾಗುತ್ತಿರುವ ಮಾನವ ಏಜೆನ್ಸಿಯು ಈ ಬದಲಾವಣೆಗಳ ಹಿಂದಿರುವ ದೊಡ್ಡ ಶಕ್ತಿಯಾಗಿದ್ದರೆ ಅನಂತಪುರ ಮತ್ತು ಈ ಬಗೆಯ ಪ್ರದೇಶಗಳನ್ನು ನೋಡಿ ಕಲಿಯುವುದು ನಮಗೆ ಸಾಕಷ್ಟಿದೆ.
''ಕೊಳವೆಬಾವಿಗಳನ್ನು ಮುಚ್ಚಿ ಮತ್ತೆ ಮಳೆಯಾಧಾರಿತ ಕೃಷಿ ಪದ್ಧತಿಗೆ ಮರಳುವುದು ಬಹುಷಃ ಅನಿವಾರ್ಯವೆಂಬಂತೆ ಕಾಣುತ್ತಿದೆ. ಆದರೆ ನಿಜಕ್ಕೂ ಇದು ಕಷ್ಟವಿದೆ'', ಎಂದು ಹತಾಶೆಯಿಂದ ನುಡಿಯುತ್ತಿದ್ದಾರೆ ಹಿಮಾಚಲ್.
ಪಿ. ಸಾಯಿನಾಥ್ "ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ"ದ ಸ್ಥಾಪಕ ಸಂಪಾದಕರು.
ಕವರ್ ಫೋಟೋ: ರಾಹುಲ್ ಎಮ್ / ಪರಿ
ದೇಶದಾದ್ಯಂತ ಹವಾಮಾನ ವೈಪರೀತ್ಯಗಳ ಬಗೆಗಿನ ಪರಿಯ ವರದಿಗಾರಿಕೆಯು ಪ್ರಾಜೆಕ್ಟ್ ಯು.ಎನ್.ಡಿ.ಪಿ ಯ ಸಹಕಾರದಿಂದ ನಡೆಯಲ್ಪಡುತ್ತಿದ್ದು ಹವಾಮಾನ ವೈಪರೀತ್ಯದ ಗಂಭೀರ ಪರಿಣಾಮಗಳನ್ನು ಜನಸಾಮಾನ್ಯರ ಅನುಭವದ ಮಾತುಗಳಲ್ಲಿ ದಾಖಲಿಸುವ ಗುರಿಯನ್ನಿಟ್ಟುಕೊಂಡಿದೆ.
ಈ ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ? ಇದಕ್ಕಾಗಿ ಈ ಇ-ಮೈಲ್ ಗಳನ್ನು ಸಂಪರ್ಕಿಸಿ:
[email protected]
with a cc to
[email protected]
.
ಅನುವಾದ: ಪ್ರಸಾದ್ ನಾಯ್ಕ್