ಮಾರ್ಚ್ 22ರ “‘ಜನತಾ ಕರ್ಫ್ಯೂ”ವನ್ನು ನಿಭಾಯಿಸಿದ ಬಗ್ಗೆ ದೂರವಾಣಿಯಲ್ಲಿ ತಿಳಿಸುತ್ತಾ, “ನನ್ನ ಚೀಲದಲ್ಲಿ ಇಟ್ಟುಕೊಂಡಿದ್ದ ಬಾಳೆಯ ಹಣ್ಣನ್ನು ತಿಂದು ದಿನವನ್ನು ದೂಡಿದೆ”, ಎಂದರು ಸುರೇಂದ್ರ ರಾಂ. ಅಂದು ಮುಂಬೈನ ಬಹುತೇಕ ಅಂಗಡಿ ಹಾಗೂ ವ್ಯಾಪಾರಗಳು ಮುಚ್ಚಿದ್ದು, ಮನೆಗಳಲ್ಲಿನ ಜನರು ಹೊರಗೆ ಬರದೇ ಒಳಗೇ ಉಳಿದಾಗ, ಸುರೇಂದ್ರನಾಥ್ ಪರೇಲ್‍ನಲ್ಲಿನ ಟಾಟಾ ಮೆಮೊರಿಯಲ್ ಆಸ್ಪತ್ರೆಯ ಬಳಿಯೇ ಕುಳಿತರು.
37 ವರ್ಷದ ಸುರೇಂದ್ರ ಮುಖದ ಕ್ಯಾನ್ಸರಿಗೆ ತುತ್ತಾಗಿದ್ದಾರೆ.
ನಿಷೇಧಾಜ್ಞೆ ಜಾರಿಯಾಗುವುದಕ್ಕೂ ಮೊದಲ ಏಳು ದಿನಗಳಿಂದಲೂ ಕಾಲುದಾರಿಯೇ ಆತನ ‘ಮನೆಯಾಗಿತ್ತು’. ಸರ್ಕಾರದ ಬೆಂಬಲದೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ರಿಯಾಯತಿ ದರದಲ್ಲಿ ಚಿಕಿತ್ಸೆಯನ್ನು ಒದಗಿಸುತ್ತ, ಧರ್ಮಾರ್ಥವಾಗಿ ನಿರ್ವಹಿಸಲ್ಪಡುತ್ತಿರುವ ದಕ್ಷಿಣ-ಮಧ್ಯ ಮುಂಬೈನ ಆಸ್ಪತ್ರೆಯ ಹೊರಗಿನ ಬೀದಿಗಳಲ್ಲಿರುವ ಈತ ಹಾಗೂ ಅನೇಕ ಇತರೆ ರೋಗಿಗಳು ಮನೆಯೊಳಗೇ ಇರಬೇಕೆಂಬ ನಿಷೇಧಾಜ್ಞೆಯನ್ನು ಹೇಗೆ ಪಾಲಿಸಿಯಾರು? ದೇಶಾದ್ಯಂತ ಅನೇಕ ಬಡ ಕುಟುಂಬಗಳು ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ.
“ನನ್ನ ತಪಾಸಣೆ ನಡೆಸಲಾಯಿತು. ವೈದ್ಯರು ನಾಲ್ಕು ತಿಂಗಳ ತರುವಾಯ ಬರುವಂತೆ ತಿಳಿಸಿದ್ದಾರೆ”, ಎಂದರು ಸುರೇಂದ್ರ. ಆದರೆ ರೈಲು ಸೇವೆಗಳನ್ನು ರದ್ದುಗೊಳಿಸಿ, ನಂತರ ರಾಷ್ಟ್ರಾದ್ಯಂತದ ಸಂಪೂರ್ಣ ಲಾಕ್‍ಡೌನ್‍ನಿಂದಾಗಿ ಮಾರ್ಚ್ 25ರಿಂದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣ, ಬಿಹಾರದ ಸಮಷ್ಟಿಪುರ ಜಿಲ್ಲೆಯ ಪೊಟಿಲಿಯ ಗ್ರಾಮದಲ್ಲಿನ ತನ್ನ ಮನೆಗೆ ತೆರಳಲು ಇವರಿಗೆ ಸಾಧ್ಯವಾಗುತ್ತಿಲ್ಲ. “21 ದಿನಗಳವರೆಗೆ ಎಲ್ಲವನ್ನೂ ಬಂದ್ ಮಾಡಲಾಗಿದೆಯೆಂದು ಅವರು ಹೇಳುತ್ತಿದ್ದಾರೆ. ನನಗೆ ಯಾವುದೇ ಸಮಾಚಾರವೂ ದೊರೆಯುತ್ತಿಲ್ಲ. ನನ್ನ ಸುತ್ತಲಿನ ಜನರನ್ನು ಕೇಳಿಯೇ ತಿಳಿದುಕೊಳ್ಳಬೇಕು. ಅಲ್ಲಿಯವರೆಗೂ ನಾನು ಈ ಕಾಲುದಾರಿಯಲ್ಲೇ ಇರಬೇಕೇ?”, ಎಂಬುದಾಗಿ ಸುರೇಂದ್ರ ಪ್ರಶ್ನಿಸಿದರು.
ಮಾರ್ಚ್ 20ರಂದು ನಾನು ಇವರನ್ನು ಸಂಧಿಸಿದಾಗ, ಕಿತ್ತಳೆ ಬಣ್ಣದ ಪ್ಲಾಸ್ಟಿಕ್ ಹಾಳೆಯ ಮೇಲೆ ನೆಲದಲ್ಲಿ ಕುಳಿತಿದ್ದ ಅವರು ತಮ್ಮ ಬಾಯಿಯ ಒಂದು ಪಾರ್ಶ್ವದಿಂದ ಬಾಳೆಹಣ್ಣುಗಳನ್ನು ತಿನ್ನುತ್ತಿದ್ದರು. ಎಡ ಮೂಗಿನ ಹೊಳ್ಳೆಯಲ್ಲಿ ಅವರಿಗೆ ಪೈಪನ್ನು ಅಳವಡಿಸಲಾಗಿತ್ತು. “ಆಹಾರವು ನನ್ನ ಗಂಟಲಿನಲ್ಲಿ ಇಳಿಯುವುದಿಲ್ಲ. ಹೀಗಾಗಿ ನನಗೆ ಪೈಪಿನ ಅವಶ್ಯಕತೆಯಿದೆ”, ಎಂದರವರು. ಹಾಳೆಯ ಮೇಲೆ ಕಪ್ಪು ವರ್ಣದ ಚೀಲವೊಂದಿದ್ದು ಅದರಲ್ಲಿ ತಮ್ಮ ಬಟ್ಟೆಗಳು, ವೈದ್ಯಕೀಯ ವರದಿಗಳು, ಔಷಧಿ ಮತ್ತು ಬಾಳೆಹಣ್ಣುಗಳನ್ನು ಅವರು ತುಂಬಿದ್ದರು.
ಕಾಲುದಾರಿಯ ಸುತ್ತಮುತ್ತ ಹಗಲು ಹೊತ್ತಿನಲ್ಲೂ ಇಲಿಗಳು ಸುಳಿಯುತ್ತಿದ್ದವು. ರೋಗಿಗಳ ಬಳಿ ಕೆಲವು ದಂಶಕ ಪ್ರಾಣಿಗಳು (rodents) ಸತ್ತುಬಿದ್ದಿದ್ದವು. ಸರಸರನೆ ಓಡುವ ಅನೇಕ ದೊಡ್ಡ ಇಲಿಗಳಿಂದಾಗಿ ರಾತ್ರಿಗಳು ದುಸ್ತರವಾಗಿದ್ದವು.
ನಾವು ಸಂಧಿಸುವವರೆಗೂ ಸುರೇಂದ್ರರ ಬಳಿ ತಮ್ಮ ರಕ್ಷಣೆಗಾಗಿ ಮುಖಗವಸು ಇರಲಿಲ್ಲ. ತಮ್ಮ ಮೂಗು ಮತ್ತು ಬಾಯಿಯನ್ನು ಅವರು ಹಸಿರು ವರ್ಣದ ಟವೆಲ್ಲಿನಿಂದ ಮುಚ್ಚಿಕೊಂಡಿದ್ದರು. ಮರುದಿನ ಯಾರೋ ಮುಖಗವಸನ್ನು ಕೊಟ್ಟರು. ಸಾರ್ವಜನಿಕ ಶೌಚಾಲಯ ಹಾಗೂ ಅಲ್ಲಿ ಇಟ್ಟಿರುವ ಸ್ವಲ್ಪ ಪ್ರಮಾಣದ ಸಾಬೂನನ್ನು ಇವರು ಬಳಸುತ್ತಾರೆ.
“ಕೈಗಳನ್ನು ತೊಳೆದುಕೊಂಡು ಸುರಕ್ಷಿತವಾಗಿರಿ ಎಂದು ಅವರು ಜನರಿಗೆ ತಿಳಿಸುತ್ತಿದ್ದಾರೆ. ನಾವೂ ಸಹ ರೋಗಿಗಳೇ. ಅವರು ನಮ್ಮ ಸುರಕ್ಷತೆಗಾಗಿ ಏಕೆ ಏನನ್ನೂ ಮಾಡುತ್ತಿಲ್ಲ?”, ಎಂಬುದು ಅವರ ಪ್ರಶ್ನೆ.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಭಾರತೀಯ ಚಿಕಿತ್ಸಾ ಅನುಸಂಧಾನ ಪರಿಷತ್, ಗಂಭೀರತಮ ಕೋವಿಡ್-19 ಸೋಂಕಿನ ಅಪಾಯವು ಹೆಚ್ಚಾಗಿರುವ ಗುಂಪುಗಳನ್ನು ಪಟ್ಟಿಮಾಡಿದ್ದು, ಪಟ್ಟಿಯು ಕ್ಯಾನ್ಸರ್ ರೋಗಿಗಳನ್ನೂ ಒಳಗೊಂಡಿದೆ. ಅವರು ಸಾಕಷ್ಟು ಅನ್ನ, ನೀರು ಅಥವ ನೈರ್ಮಲ್ಯವಿಲ್ಲದಂತೆ ಬಯಲಿನಲ್ಲಿ ವಾಸಿಸುತ್ತಿದ್ದಲ್ಲಿ ಇವರಿಗೆ ಒದಗಬಹುದಾದ ಅಪಾಯವನ್ನು ಯಾರಾದರೂ ಊಹಿಸಬಹುದು.
ಸಾಮಾಜಿಕ ಸಂಪರ್ಕವನ್ನು ಕನಿಷ್ಠಗೊಳಿಸಿ ಜನರು ಮನೆಯೊಳಗೆ ಉಳಿಯುವುದನ್ನು ಖಾತರಿಪಡಿಸಿಕೊಳ್ಳುವುದು ಲಾಕ್‍ಡೌನ್ ಧ್ಯೇಯವಾಗಿತ್ತು. ಆದರೆ ಸುರೇಂದ್ರ ಅವರಿಗೆ ಮುಂಬೈನಲ್ಲಿ ಬಾಡಿಗೆ ಕೋಣೆಯನ್ನು ಪಡೆಯುವ ಸಾಮರ್ಥ್ಯವಿಲ್ಲ. “ಪ್ರತಿ ಬಾರಿ ನಾನು ಮುಂಬೈಗೆ ಬಂದಾಗಲೂ ಹೈರಾಣಾಗುತ್ತೇನೆ. ನಾನು ಉಳಿದುಕೊಳ್ಳುವ ಜಾಗವನ್ನು ಹುಡುಕುವುದಾದರೂ ಎಲ್ಲಿ?”, ಎಂಬುದು ಅವರ ಪ್ರಶ್ನೆ. ಮುಂಬೈನ ವಿವಿಧ ಭಾಗಗಳಲ್ಲಿರುವ ರಿಯಾಯತಿ ದರದ ಧರ್ಮಶಾಲೆಗಳ (dormitories) ಬಗ್ಗೆ ಅವರಿಗೆ ತಿಳಿದಿಲ್ಲ. “ನನಗೆ ಇಲ್ಲಿ ಯಾರೂ ಪರಿಚಿತರಿಲ್ಲ. ಯಾರನ್ನು ಕೇಳಲಿ?”, ಎಂದು ಅವರು ಪ್ರಶ್ನಿಸುತ್ತಾರೆ.
ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದಲೂ ಸುರೇಂದ್ರ ಮುಂಬೈನ ಟಾಟಾ ಆಸ್ಪತ್ರೆಗೆ ಚಿಕಿತ್ಸೆಗೆಂದು ಒಬ್ಬರೇ ಬರುತ್ತಿದ್ದಾರೆ. ಆತನ ಪತ್ನಿ ಹಾಗೂ ಐದು ಮತ್ತು ಎರಡು ವರ್ಷ ವಯಸ್ಸಿನ ಮಕ್ಕಳು ಹಳ್ಳಿಯಲ್ಲಿದ್ದಾರೆ. “ಒಂದು ವರ್ಷಕ್ಕಿಂತಲೂ ಮೊದಲು ನಾನು ಬೆಂಗಳೂರಿನ ದವಾಖಾನೆಯೊಂದರಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದೆ. ಕ್ಯಾನ್ಸರಿನಿಂದಾಗಿ ಬಲವಂತವಾಗಿ ಕೆಲಸವನ್ನು ತೊರೆಯಬೇಕಾಯಿತು”, ಎಂದು ಅವರು ತಿಳಿಸುತ್ತಾರೆ. ಮಾಹೆಯಾನ 10 ಸಾವಿರ ರೂ.ಗಳನ್ನು ಇವರು ಸಂಪಾದಿಸುತ್ತಿದ್ದರು. ಅದರಲ್ಲಿನ ಸ್ವಲ್ಪ ಭಾಗವನ್ನು ಸ್ವಂತದ ಖರ್ಚಿಗೆ ವಿನಿಯೋಗಿಸಿ, ಉಳಿದುದನ್ನು ಹಳ್ಳಿಯಲ್ಲಿನ ತನ್ನ ಕುಟುಂಬಕ್ಕೆ ಕಳುಹಿಸುತ್ತಿದ್ದರು. ಈಗ ಆದಾಯದ ಯಾವುದೇ ಮೂಲವಿಲ್ಲದೆ ತನ್ನ ಬಂಧುಗಳನ್ನು ಅವಲಂಬಿಸಿದ್ದಾರೆ. “ನನ್ನ ಬಳಿ ಹಣವಿಲ್ಲ. ನಾನು ಮುಂಬೈಗೆ ಬರುವಾಗ ನನ್ನ ಸಾಲಾ (ಪತ್ನಿಯ ಸಹೋದರ) ಹಣಕಾಸಿನ ಸಹಾಯವನ್ನು ಒದಗಿಸುತ್ತಾನೆ”, ಎನ್ನುತ್ತಾರೆ ಸುರೇಂದ್ರ.
ಆಸ್ಪತ್ರೆಯಲ್ಲಿ ಸುರೇಂದ್ರ ಅವರ ಚಿಕಿತ್ಸೆಗೆ ‘ಶುಲ್ಕರಹಿತ’ ರಿಯಾಯತಿಯಿದೆ. “ನನ್ನ ಕೆಮೋ ಮತ್ತು ಇತರೆ ಚಿಕಿತ್ಸೆಯ ಶುಲ್ಕವನ್ನು ಕಡಿಮೆಗೊಳಿಸಿದ್ದು ಇತರೆ ವೆಚ್ಚವನ್ನು ಆಸ್ಪತ್ರೆಯೇ ಭರಿಸುತ್ತದೆ. ಆದರೆ ಮುಂಬೈನಲ್ಲಿ ನೆಲೆಸುವುದು ಪ್ರತಿ ದಿನವೂ ತ್ರಾಸದಾಯಕ”, ಎನ್ನುತ್ತಾರೆ ಸುರೇಂದ್ರ.
ಆಸ್ಪತ್ರೆಯ ಹೊರಗಿನ ಕಾಲುದಾರಿಗಳಲ್ಲಿನ ರೋಗಿಗಳಿಗೆ ಮುಂಜಾನೆ ಬಾಳೆಹಣ್ಣು ಮತ್ತು ರೊಟ್ಟಿ ದೊರೆಯುತ್ತಿದೆ. ಸಂಜೆ ಅವರು ಮಸಾಲೆಯ ಜೊತೆಗೆ ಅನ್ನವನ್ನು ಪಡೆಯುತ್ತಿದ್ದಾರೆ. ನಿನ್ನೆ (ಮಾರ್ಚ್ 29) ಮೊದಲ ಬಾರಿ ಇವರಿಗೆ ಮುಂಜಾನೆ ಸ್ವಯಂಸೇವಕರು ವಿತರಿಸಿದ ಹಾಲು ದೊರೆಯಿತು.
ವೈದ್ಯರು ಸುರೇಂದ್ರ ಅವರಿಗೆ ದ್ರವ ಪದಾರ್ಥಗಳನ್ನು ಸೇವಿಸುತ್ತಲೇ ಇರಬೇಕೆಂದು ಹೇಳಿದ್ದಾರೆ. “ಕೆಲವರು ನಮಗೆ ಆಹಾರವನ್ನು ಒದಗಿಸುತ್ತಾರಾದರೂ ನೀರನ್ನು ಒದಗಿಸುವುದಿಲ್ಲ. ನಿಷೇಧಾಜ್ಞೆಯಲ್ಲಿ ನೀರನ್ನು ಪಡೆಯುವುದು ದುಸ್ತರ”, ಎಂದು ಅವರು ತಿಳಿಸಿದರು.
ಸುರೇಂದ್ರ ಅವರು ಕುಳಿತಿದ್ದ ಕೆಲವು ಹೆಜ್ಜೆಗಳಷ್ಟು ದೂರದಲ್ಲಿ ಸಂಜಯ್ ಕುಮಾರ್ ಅವರ ಕುಟುಂಬವಿತ್ತು. ನಾನು ಮಾರ್ಚ್ 20ರಂದು ಅವರನ್ನು ಸಂಧಿಸಿದಾಗ, ಸಿಮೆಂಟ್ ಬ್ಲಾಕಿನ ಮೇಲೆ ತಲೆಯಿಟ್ಟು ಚಾಪೆಯೊಂದರ ಮೇಲೆ ಸಂಜಯ್ ಮಲಗಿದ್ದರು. 19 ವರ್ಷದ (ಮೇಲಿನ ಮುಖಪುಟ ಚಿತ್ರದಲ್ಲಿರುವ) ಇವರಿಗೆ ಮೂಳೆಯ ಕ್ಯಾನ್ಸರಿನಿಂದಾಗಿ ಬಲಗಾಲನ್ನು ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇವರ ಹಿರಿಯ ಸಹೋದರ ವಿಜಯ್ ಹಾಗೂ ಅತ್ತಿಗೆ ಪ್ರೇಮಲತ, ಒಂದು ತಿಂಗಳಿಗಿಂತಲೂ ಹೆಚ್ಚು ದಿನಗಳಿಂದ ಇವರೊಂದಿಗೆ ಕಾಲುದಾರಿಯಲ್ಲಿ ತಂಗಿದ್ದರು.
ಕೆಲವು ದಿನಗಳ ನಂತರ ದೂರವಾಣಿಯಲ್ಲಿ ಸಂಜಯ್, “ಈ ನಿಷೇಧಾಜ್ಞೆಯು ನಮ್ಮ ಪರಿಸ್ಥಿತಿಯನ್ನು ವಿಷಮಗೊಳಿಸಿದೆ. ಊಟವನ್ನು ಪಡೆಯುವುದು ದುಸ್ತರವಾಗಿದೆ. ಯಾರೂ ಸಹಾಯಕ್ಕಿಲ್ಲದಾಗ ಬ್ರೆಡ್ ಮತ್ತು ಬಿಸ್ಕತ್ ತಿನ್ನುತ್ತೇವೆ", ಎಂದು ತಿಳಿಸಿದರು.
ಸಂಜಯ್‍ಗೆ ಸುಲಭವಾಗಿ ಮೇಲೆದ್ದು ನಡೆದಾಡಲಾಗುವುದಿಲ್ಲ. ಆಸ್ಪತ್ರೆಯ ಬಳಿಯಿರುವ ಸಾರ್ವಜನಿಕ ಶೌಚಾಲಯಕ್ಕೆ ತೆರಳುವುದೂ ಸಹ ಅವರಿಗೆ ದುಸ್ತರವಾಗಿದೆ. “ನನ್ನ ದೇಹವನ್ನು ಚಲಿಸಲಾಗದೆ ಪ್ರತಿ ದಿನ ನಾನು ಇಲ್ಲಿ ಮಲಗಿರುತ್ತೇನೆ. ಆಸ್ಪತ್ರೆಯಿಂದ ದೂರದಲ್ಲಿ ನಾನು ನೆಲೆಸುವಂತಿಲ್ಲ”, ಎಂದು ಅವರು ತಿಳಿಸಿದರು. ಅವರು ನಡೆಯಲು ಪ್ರಾರಂಭಿಸಿದರೆ ಅವರ ಬಲಗಾಲಿನಿಂದ ರಕ್ತ ಸುರಿಯಲಾರಂಭಿಸುತ್ತದೆ. ಮೂರು ದಿನಗಳ ಹಿಂದೆ ವೈದ್ಯರು ಅದರ ಮೇಲೆ ಪ್ಲಾಸ್ಟರ್ ಹಾಕಿದ್ದಾರೆ.
ಈ ಕುಟುಂಬವು ಮೊದಲ ಬಾರಿ ಮುಂಬೈಗೆ ಬಂದಿದೆ. “ಮುಂಬೈನಲ್ಲಿ ಸೌಲಭ್ಯಗಳು ಉತ್ತಮವಾಗಿವೆಯೆಂದು ನನಗೆ ತಿಳಿಸಲಾಗಿತ್ತು. ಆದರೆ ಕಾಲುದಾರಿಯ ಮೇಲೆ ನೆಲೆಸಿ ಒಂದು ಹೊತ್ತಿನ ಊಟಕ್ಕೆ ಕಾದು ಕೂರುವುದಷ್ಟೇ ನಮಗೆ ದೊರೆಯುವ ಸೌಲಭ್ಯ”, ಎನ್ನುತ್ತಾರೆ ವಿಜಯ್. ಇವರಿಗೂ ರಿಯಾಯತಿ ದರದ ವಸತಿಯನ್ನು ಪಡೆಯುವ ಸಾಮರ್ಥ್ಯವಿಲ್ಲ. ತಮಗೆ ಯಾವುದೇ ಧರ್ಮಶಾಲೆಯ ಬಗ್ಗೆಯೂ ತಿಳಿದಿಲ್ಲವೆಂದು ಅವರು ಹೇಳುತ್ತಾರೆ.
“ಕೆಲವು ತಪಾಸಣೆಗಳಿಗಾಗಿ ಪ್ರತಿ ದಿನವೂ ನಾವು ವೈದ್ಯರಿಗೆ ಕಾಯಬೇಕು. ನಾವು ಮನೆಗೆ ವಾಪಸ್ಸಾಗುವಂತಿಲ್ಲ”, ಎಂದು ವಿಜಯ್ ತಿಳಿಸಿದರು. ಮಧ್ಯಪ್ರದೇಶದ ಬಲಘಾಟ್ ಜಿಲ್ಲೆಯ ಬೈಹರ್ ಬ್ಲಾಕ್‍ನಲ್ಲಿ ಅವರ ಮನೆಯಿದೆ.
ಹಳ್ಳಿಯಲ್ಲಿ ಇವರ ಹೆತ್ತವರು ತಮ್ಮ ಮಕ್ಕಳು ಹಾಗೂ ಸೊಸೆ ಸುರಕ್ಷಿತವಾಗಿ ಹಿಂದಿರುಗುವುದನ್ನೇ ಕಾಯುತ್ತಿದ್ದಾರೆ. ಕುಟುಂಬದಲ್ಲಿನ ದುಡಿಯುವ ವ್ಯಕ್ತಿಯೆಂದರೆ ವಿಜಯ್ ಒಬ್ಬರೇ. ಕಟ್ಟಡ ನಿರ್ಮಾಣದ ಸ್ಥಳಗಳಲ್ಲಿ ಅವರು ಕಾರ್ಯ ನಿರ್ವಹಿಸಿ 7,000-10,000 ರೂ.ಗಳನ್ನು ಮಾಹೆಯಾನ ಸಂಪಾದಿಸುತ್ತಾರೆ. ಸಂಜಯ್ ಅವರಿಗೆ ನೆರವಾಗಲು ಮುಂಬೈಗೆ ಬಂದಾಗಿನಿಂದ ಈ ಸಂಪಾದನೆಯು ನಿಂತುಹೋಗಿದೆ. ಕುಟುಂಬದ ಕಿಂಚಿತ್ ಉಳಿತಾಯದಿಂದ ಅವರು ಜೀವನವನ್ನು ಸಾಗಿಸುತ್ತಿದ್ದಾರೆ.
“ಅಂಗಡಿ ಹಾಗೂ ಹೋಟೆಲುಗಳಿಂದ ನಾವು ಪೂರಿ ಭಾಜಿಯನ್ನು ಖರೀದಿಸಿ ತಿನ್ನುತ್ತಿದ್ದೆವು. ಆದರೆ ಎಷ್ಟು ದಿನಗಳು ಹಾಗೆ ತಿನ್ನಲು ಸಾಧ್ಯ? ಅಕ್ಕಿ-ಬೇಳೆ ಇಲ್ಲಿ ದುಬಾರಿ. ಶೌಚಾಲಯವನ್ನು ಬಳಸಲು, ನಮ್ಮ ಫೋನುಗಳನ್ನು ಛಾರ್ಜ್ ಮಾಡಿಸಲು... ಹೀಗೆ ಎಲ್ಲದಕ್ಕೂ ಮುಂಬೈಯಲ್ಲಿ ನಾವು ಹಣವನ್ನು ಪಾವತಿಸಬೇಕು. ನಾನೊಬ್ಬ ಕೂಲಿಯವನು”, ಎನ್ನುತ್ತಾರೆ ವಿಜಯ್. ದಿನವೊಂದಕ್ಕೆ ಈ ಅವಶ್ಯಕತೆಗಳಿಗಾಗಿ ಅವರು ನೂರರಿಂದ ಇನ್ನೂರು ರೂ.ಗಳನ್ನು ಖರ್ಚುಮಾಡುತ್ತಾರೆ. ಔಷಧಿಯನ್ನು ಖರೀದಿಸಿದಲ್ಲಿ ವೆಚ್ಚವು ಮತ್ತಷ್ಟು ಹೆಚ್ಚಾಗುತ್ತದೆ.
ಅನೇಕ ಸಂಘಟನೆಗಳು ಮತ್ತು ವ್ಯಕ್ತಿಗಳು ಆಸ್ಪತ್ರೆಯ ಹೊರಗಿನ ಕಾಲುದಾರಿಯಲ್ಲಿರುವ ರೋಗಿ ಹಾಗೂ ಅವರ ಕುಟುಂಬಗಳಿಗೆ ನಿಯಮಿತವಾಗಿ ಸಹಾಯವನ್ನು ನೀಡುತ್ತ ಅವರಿಗೆ ರೊಟ್ಟಿ, ಬಾಳೆಹಣ್ಣು ಮತ್ತು ಹಾಲನ್ನು ಒದಗಿಸುತ್ತಾರೆ. ಆದರೆ ಲಾಕ್‍ಡೌನ್ ಕಾರಣದಿಂದಾಗಿ ಇದು ಕಠಿಣವೆನಿಸಿದೆ. ಜನತಾ ಕರ್ಫ್ಯೂ ದಿನದಂದು “ನಮಗೆ ರಾತ್ರಿ ಮಾತ್ರವೇ ಊಟವು ದೊರೆತಿದೆ”, ಎಂಬುದಾಗಿ ವಿಜಯ್ ತಿಳಿಸಿದರು. ಬ್ರೆಡ್ ಹಾಗೂ ಹಿಂದಿನ ದಿನ ಮಿಕ್ಕಿದ್ದ ಸಬ್ಜಿಯನ್ನು ತಿಂದು ಅವರು ಕಾಲ ಕಳೆದರು.
ಕೆಲವೊಮ್ಮೆ ಈ ಲಾಕ್‍ಡೌನ್ ದಿನಗಳಲ್ಲಿ, ಹೊರಗೆ ಊಟವನ್ನು ವಿತರಿಸುವಾಗ ಕೆಲವೊಂದು ರೋಗಿಗಳನ್ನು ತಪಾಸಣೆಗೆಂದು ಆಸ್ಪತ್ರೆಯ ಒಳಗೆ ಕರೆಯಲಾಗುತ್ತದೆ. ಹೀಗಾಗಿ ಅವರು ಊಟದಿಂದ ವಂಚಿತರಾಗುತ್ತಾರೆ – ಕರುಣಾ ದೇವಿಗೆ ಹಿಂದಿನ ಸೋಮವಾರ ಇದೇ ಪರಿಸ್ಥಿತಿ ತಲೆದೋರಿತು. ಅವರಿಗೆ ಸ್ತನ ಕ್ಯಾನ್ಸರ್. ಆಸ್ಪತ್ರೆಯಿಂದ ಸುಮಾರು 2 ಕಿ.ಮೀ. ದೂರದ ಧರ್ಮಶಾಲೆದಲ್ಲಿ ಖಾಲಿ ಜಾಗಕ್ಕಾಗಿ ವಾರದಿಂದಲೂ ಇವರು ಕಾಯುತ್ತಿದ್ದಾರೆ. ಕೆಲವು ಧರ್ಮಶಾಲೆಗಳು ದಿನವೊಂದಕ್ಕೆ 50 ರೂ.ಗಳಿಂದ 200 ರೂ.ಗಳವರೆಗೂ ಶುಲ್ಕವನ್ನು ವಸೂಲಿ ಮಾಡುತ್ತವೆ. ಅನೇಕ ರೋಗಿಗಳು ಈ ಹಣವನ್ನು ಭರಿಸಲಾರರು.
ಮಾರ್ಚ್ 20ರಂದು ಕಾಲುದಾರಿಯಲ್ಲಿ ಕುಳಿತವರಲ್ಲಿ, ಪತಿ ಸತೆಂದರ್ ಜೊತೆಗಿದ್ದ ಗೀತ ಸಿಂಗ್ ಸಹ ಒಬ್ಬರು. ಹತ್ತಿರದಲ್ಲೇ ಸತ್ತ ಹೆಗ್ಗಣವೊಂದು ಎರಡು ಕಲ್ಲುಗಳ ನಡುವೆ ಅಪ್ಪಚ್ಚಿಯಾಗಿ ಬಿದ್ದಿತ್ತು. ಸುಮಾರು 6 ತಿಂಗಳ ಹಿಂದೆ ಗೀತ ಅವರಿಗೆ ಹೊಟ್ಟೆಯ ಕ್ಯಾನ್ಸರ್ ರೋಗವಿರುವುದು ಪತ್ತೆಯಾಯಿತು. ನವೆಂಬರಿನಿಂದಲೂ ಅವರು ಮುಂಬೈನಲ್ಲಿದ್ದಾರೆ. ಈಕೆಯು ತನ್ನ ಪತಿಯೊಂದಿಗೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಇಚಲ್ಕರಂಜಿ ಊರಿನಿಂದ ನಗರಕ್ಕೆ ಬಂದಿದ್ದಾರೆ.
ಕಾಲುದಾರಿಯಲ್ಲಿ ನೆಲೆಸಿದ ಕೆಲವು ದಿನಗಳ ಹಿಂದಿನವರೆಗೂ ಅವರು ಸತೆಂದರ್ ಅವರ ಬಂಧುವಿನೊಂದಿಗೆ, ಉತ್ತರ ಮುಂಬೈನ ಗೋರೆಗಾಂವ್‍ನಲ್ಲಿದ್ದರು. ಸಂಬಂಧಿಕರು ಕೊವಿಡ್-19ನ ಭೀತಿಯಿಂದಾಗಿ ಅವರನ್ನು ಅಲ್ಲಿಂದ ತೆರಳುವಂತೆ ಕೋರಿದರು. “ಪದೇಪದೇ ನಾವು ಆಸ್ಪತ್ರೆಗೆ ತೆರಳುವುದರಿಂದ ತನ್ನ ಮಗನಿಗೆ ಸೋಂಕು ತಗುಲಬಹುದೆಂದು ಆಕೆ ಭೀತರಾಗಿದ್ದರು. ಹೀಗಾಗಿ ನಾವು ಅಲ್ಲಿಂದ ತೆರಳುವುದು ಅನಿವಾರ್ಯವಾಯಿತು. ನಾವು ನಿಲ್ದಾಣಗಳಲ್ಲಿ ತಂಗಿದ್ದೆವು. ಈಗ ಕಾಲುದಾರಿಯಲ್ಲಿದ್ದೇವೆ”, ಎಂಬುದಾಗಿ ಗೀತ ತಿಳಿಸಿದರು.
ದೊಂಬಿವಿಲಿಯಲ್ಲಿರುವ ದೂರದ ಸಂಬಂಧಿಕರನ್ನು ಸಂಪರ್ಕಿಸುವಲ್ಲಿ ಸತೆಂದರ್ ಯಶಸ್ವಿಯಾದರು. ಸಂಬಂಧಿಕರನ್ನು ಬಹಳವಾಗಿ ವಿನಂತಿಸಿದ ನಂತರ ಅವರು ಹಾಗೂ ಗೀತ ಅಲ್ಲಿಗೆ ಸ್ಥಳಾಂತರಗೊಂಡು, ತಮ್ಮ ವಾಸಸ್ಥಾನ ಹಾಗೂ ಊಟಕ್ಕೆಂದು ಆ ಕುಟುಂಬಕ್ಕೆ ಹಣವನ್ನು ಪಾವತಿಸುತ್ತಿದ್ದಾರೆ.
ಗೀತ ಅವರ ಮುಂದಿನ ತಪಾಸಣೆಯು ಏಪ್ರಿಲ್ 1ರಂದು ನಿಗದಿಯಾಗಿದ್ದು ನಂತರ, ತಿಂಗಳ ಮೊದಲ ಕೆಲವು ದಿನಗಳಲ್ಲಿ ಕೆಮೊಥೆರಪಿ ಹಾಗೂ ಶಸ್ತ್ರಚಿಕಿತ್ಸೆಯೊಂದನ್ನು ಕೈಗೊಳ್ಳಬೇಕೆಂದು ಯೋಜಿಸಲಾಗಿತ್ತು. ಆದರೆ ವೈದ್ಯರು ಏಪ್ರಿಲ್ 1ರ ಭೇಟಿ ವ್ಯವಸ್ಥೆಯನ್ನು ರದ್ದುಪಡಿಸಲಾಗಿದ್ದು, ಎಂದಿನಂತೆ ಔಷಧಿಯನ್ನು ಸೇವಿಸುತ್ತಿರಬೇಕೆಂದು ಹಾಗೂ ಆಕೆಗೆ ನೀಡಲಾದ ಎಚ್ಚರಿಕೆಗಳನ್ನು ಪಾಲಿಸುವಂತೆಯೂ ಸೂಚಿಸಿದರು. “ನಾವು ಮನೆಯಲ್ಲಿನ ನಮ್ಮ ಮಕ್ಕಳ ಬಳಿಗೆ ಹೋಗುವಂತಿಲ್ಲ. ಇಲ್ಲಿ ಆಸ್ಪತ್ರೆಗೂ ತೆರಳುವಂತಿಲ್ಲ. ನಮಗೆ ಯಾವುದೂ ಲಭ್ಯವಾಗುತ್ತಿಲ್ಲ. ನಾವಿಲ್ಲಿ ಸಿಲುಕಿಕೊಂಡಂತಾಗಿದೆ. ಆಕೆಗೆ ವಾಂತಿಯಾಗುತ್ತಲೇ ಇತ್ತು”, ಎಂದು ತಿಳಿಸಿದ ಸತೆಂದರ್, ಗೀತ ಅವರ ಆರೋಗ್ಯದ ಬಗ್ಗೆ ಹೆಚ್ಚು ವ್ಯಾಕುಲಗೊಂಡಿದ್ದರು.
ಅವರಿಗೆ 12 ಹಾಗೂ 16 ವರ್ಷದ ಇಬ್ಬರು ಮಕ್ಕಳಿದ್ದು, ಇಕಲ್ಕರಂಜಿಯಲ್ಲಿ ಸತೆಂದರ್ ಅವರ ಹಿರಿಯ ಸಹೋದರನ ಜೊತೆಗೆ ವಾಸಿಸುತ್ತಿದ್ದಾರೆ. “ನಾವು ಬೇಗ ಬರುವುದಾಗಿ ಅವರಿಗೆ ಮಾತು ಕೊಟ್ಟಿದ್ದೆವು, ಆದರೆ ಅವರ ಮುಖವನ್ನು ಯಾವಾಗ ನೋಡುತ್ತೇವೆಂಬುದು ನಮಗೆ ತಿಳಿದಿಲ್ಲ”, ಎನ್ನುತ್ತಾರೆ ಗೀತ. ಐದು ತಿಂಗಳ ಹಿಂದೆ ಸತೆಂದರ್ ವಿದ್ಯುಚ್ಚಾಲಿತ ಮಗ್ಗದ ಕಾರ್ಖಾನೆಯಲ್ಲಿ ತಿಂಗಳಿಗೆ 7 ಸಾವಿರ ರೂ.ಗಳನ್ನು ಸಂಪಾದಿಸುತ್ತಿದ್ದರು. ಟಾಟಾ ಮೆಮೊರಿಯಲ್ ಟ್ರಸ್ಟ್ ಇವರ ವೈದ್ಯಕೀಯ ವೆಚ್ಚದ ಅರ್ಧದಷ್ಟನ್ನು ಭರಿಸುತ್ತದೆ. ಉಳಿದುದನ್ನು ತಮ್ಮ ಉಳಿತಾಯದ ಹಣದಿಂದ ನಿಭಾಯಿಸುತ್ತಿದ್ದೇವೆಂದು ಸತೆಂದರ್ ತಿಳಿಸಿದರು.
ಮುಖದ ಕ್ಯಾನ್ಸರಿನಿಂದ ಬಳಲುತ್ತಿರುವ ಜಮೀಲ್ ಖಾನ್ ಅವರೂ ಇದೇ ಭೀತಿಯಲ್ಲಿದ್ದಾರೆ. ಆಸ್ಪತ್ರೆಯ ಹತ್ತಿರದ ಕಾಲುದಾರಿಯಲ್ಲಿ ಅವರು, ತಾಯಿ ಕಮರ್‍ಜಹ, ಸಹೋದರ ಶಕೀಲ್ ಮತ್ತು ಸಹೋದರಿ ನಸ್ರೀನ್ ಅವರೊಂದಿಗೆ ಏಳು ತಿಂಗಳ ಕಾಲ ನೆಲೆಸಿದ್ದರು. ಉತ್ತರ ಪ್ರದೇಶದ ಬಲ್‍ರಾಂಪುರ್ ಜಿಲ್ಲೆಯ ಗೊಂಡವ ಗ್ರಾಮದಿಂದ ಅವರು ಇಲ್ಲಿಗೆ ಬಂದಿದ್ದಾರೆ. ಕುಟುಂಬದ ಬಹುತೇಕ ಸದಸ್ಯರು ಕೃಷಿ ಕಾರ್ಮಿಕರಾಗಿದ್ದು, ಕೆಲಸವು ಲಭ್ಯವಿದ್ದಾಗಲೆಲ್ಲ 200 ರೂ.ಗಳ ದಿನಗೂಲಿಯನ್ನು ಸಂಪಾದಿಸುತ್ತಾರೆ ಅಥವ ಅಕಾಲದಲ್ಲಿ (off-season) ಕೆಲಸವನ್ನು ಅರಸಿ ನಗರಗಳಿಗೆ ವಲಸೆ ಹೋಗುತ್ತಾರೆ.
ಅವರು ಲಾಕ್‍ಡೌನ್ ನಂತರ ಆಸ್ಪತ್ರೆಯಿಂದ 60 ಕಿ. ಮೀ. ದೂರದ ನಲಸೊಪರದಲ್ಲಿನ ದೂರದ ಸಂಬಂಧಿಯೊಬ್ಬರ ಮನೆಗೆ ತೆರಳಿದರು. “ಕೆಲವು ದಿನಗಳ ಮಟ್ಟಿಗೆ ಅವರು ನಮಗೆ ಅಲ್ಲಿ ನೆಲೆಸಲು ಅವಕಾಶ ನೀಡಿದರಾದರೂ, ಲಾಕ್‍ಡೌನ್ ಇಷ್ಟು ದೀರ್ಘಾವಧಿಯವರೆಗೆ ಮುಂದುವರಿಯುತ್ತದೆಂದು ನಾವು ಎಣಿಸಿರಲಿಲ್ಲ...”
ನಲಸೊಪರದಲ್ಲಿನ ಜಮೀಲನ ಸಂಬಂಧಿಕರು ತಮ್ಮೊಂದಿಗೆ ನೆಲೆಸಲು ಬಂದ ಈ ಹೆಚ್ಚುವರಿ ನಾಲ್ಕು ಮಂದಿಯಿಂದಾಗಿ ಕಷ್ಟಕ್ಕೀಡಾಗಿದ್ದಾರೆ. “ಅವರಾಗಲೇ ಐದು ಜನರಿದ್ದರು. ಈಗ ನಾವೂ ಅವರೊಂದಿಗೆ ಸೇರಿದ್ದೇವೆ. ಅಷ್ಟೊಂದು ಊಟವನ್ನು ಶೇಖರಿಸುವುದು ತ್ರಾಸದಾಯಕ. ನಮ್ಮ ಔಷಧಿಯ ಖರ್ಚು ವಾರಕ್ಕೆ 500 ರೂ.ಗಳು. ನಮ್ಮ ಬಳಿಯಿರುವ ಹಣವೆಲ್ಲ ಖಾಲಿಯಾಗುತ್ತಿದೆ", ಎನ್ನುತ್ತಾರೆ ನಸ್ರೀನ್. ಶನಿವಾರದಂದು ಅವರು ಕೆಲವು ಔಷಧಿಗಳನ್ನು ಶೇಖರಿಸಿದ್ದು, ಇದರ ನಂತರ ಹೇಗೆ ನಿಭಾಯಿಸುವುದೆಂಬ ಗೊಂದಲದಲ್ಲಿದ್ದರು. ಜಮೀಲರ ಮುಖದ ಎಡಭಾಗದಲ್ಲಿನ ಹುಣ್ಣನ್ನು ಆಗಾಗ್ಗೆ ಸ್ವಚ್ಛಗೊಳಿಸಿ, ಗಾಯದ ಪಟ್ಟಿಯನ್ನು ಕಟ್ಟುವುದು ಅವಶ್ಯ.
ಕಾಲುದಾರಿಯಲ್ಲಿನ ವಾಸವೇ ಹೆಚ್ಚು ಅನುಕೂಲಕರವಾಗಿತ್ತು ಎಂಬುದಾಗಿ ಜಮೀಲ್ ಭಾವಿಸುತ್ತಾರೆ. “ಕೊನೆಯ ಪಕ್ಷ ಆಸ್ಪತ್ರೆಯಾದರೂ ಹತ್ತಿರದಲ್ಲಿತ್ತು. ರಕ್ತಸ್ರಾವ ಅಥವ ನೋವುಂಟಾದಲ್ಲಿ (ಮುಖದ ಎಡ ಭಾಗದಲ್ಲಿ) ಆಸ್ಪತ್ರೆಗೆ ಧಾವಿಸಬಹುದಿತ್ತು.”
“ಇಲ್ಲಿ (ನಲಸೊಪರ) ನನ್ನ ಸಹೋದರನಿಗೇನಾದರೂ ಆದಲ್ಲಿ ಯಾರು ಜವಾಬ್ದಾರರು? ಆತನಿಗೆ ಏನಾದರೂ ಆದೀತೆಂಬ ಬಗ್ಗೆ ಯಾರಿಗಾದರೂ ಕಾಳಜಿಯಿದೆಯೇ?”, ಎಂಬುದು ನಸ್ರೀನ್ ಅವರ ಪ್ರಶ್ನೆ.
ಟಾಟಾ ಮೆಮೊರಿಯಲ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ತಂಡದಲ್ಲಿರುವ ನೀಲೇಶ್ ಗೊಯೆಂಕ ದೂರವಾಣಿಯಲ್ಲಿ ನನ್ನೊಂದಿಗೆ ಹೀಗೆ ತಿಳಿಸಿದರು: “ರೋಗಿಗಳಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿಲ್ಲದಿದ್ದಲ್ಲಿ ಅವರನ್ನು ಮನೆಗೆ ಮರಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ನಾವು ನಮಗೆ ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲು ಪ್ರಯತ್ನಿಸುತ್ತಿದ್ದೇವೆ.”
ಈ ವರ್ಷ ಜನವರಿಯಲ್ಲಿ ಮುಂಬೈನ ಮಿರರ್, ಆಸ್ಪತ್ರೆಯಿಂದ ಅಷ್ಟೇನೂ ದೂರವಿಲ್ಲದ ಹಿಂದ್‍ಮಾತಾ ಸೇತುವೆಯ ಫ್ಲೈಓವರ್ ಕೆಳಗೆ ನೆಲೆಸಿರುವ ಕ್ಯಾನ್ಸರ್ ರೋಗಿಗಳ ಪರಿಸ್ಥಿತಿಗಳನ್ನು ವರದಿಸಿತ್ತು. ವರದಿಯ ನಂತರ ಅನೇಕ ರೋಗಿಗಳು ಹಾಗೂ ಅವರ ಕುಟುಂಬದವರನ್ನು ತ್ವರಿತವಾಗಿ ಧರ್ಮಶಾಲೆಗಳಿಗೆ ರವಾನಿಸಲಾಗಿತ್ತು. ನಗರದ ಮುನಿಸಿಪಲ್ ಕಾರ್ಪೊರೇಷನ್, ಫ್ಲೈಓವರ್ ಕೆಳಗೆ ಮೊಬೈಲ್ ಶೌಚಾಲಯಗಳನ್ನೊಳಗೊಂಡ ತಾತ್ಕಾಲಿಕ ತಂಗುದಾಣದಂತಹ ಕ್ರಮಗಳನ್ನು ಸೂಚಿಸಿತ್ತು. ಇದರ ತರುವಾಯ ನಾನು ಮಾತನಾಡಿಸಿದ ಕಾಲುದಾರಿಯಲ್ಲಿನ ಯಾರಿಗೂ ಈ ಬಗ್ಗೆ ಮತ್ತೇನೂ ಕೇಳಿಬಂದಿರಲಿಲ್ಲ.
ಅನುವಾದ: ಶೈಲಜ ಜಿ. ಪಿ.