ನವಶ್ಯಾ ಕುವ್ರಾ ದಕ್ಷಿಣ ಮುಂಬಯಿಯ ಆಜಾದ್ ಮೈದಾನದಲ್ಲಿ ನೃತ್ಯ ಮಾಡುತ್ತಿದ್ದ 40 ಚಳುವಳಿಗಾರರಿಗಾಗಿ ತಮ್ಮ ಧುಮ್ಸಿ (ಡ್ರಮ್) ನುಡಿಸುತ್ತಿದ್ದರು.ಇನ್ನೇನು ವಿಶ್ರಾಂತಿ ಪಡೆಯಲು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ, ರಾತ್ರಿ 11 ಗಂಟೆಗೆ ಮೂವರು ಜನರು ಅವರ ಬಳಿ ಬಂದರು.

“ಇದು ಮದುವೆ ಕಾರ್ಯವೇ? ಯಾವ ತಾರೀಕಿಗೆ ಇದೆ? ಎಂದು ನವಶ್ಯಾ ಕೇಳಿದರು. ಅವರು ಮಾತುಕತೆ ನಡೆಸಿ ಪೋನ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡ ನಂತರ ಅಲ್ಲಿಂದ ಮೂವರು ಹೊರಟು ಹೋದರು. ಜನವರಿ 25 ರಂದು ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ತಮ್ಮ ಜೊತೆಗಿದ್ದ ರೈತರ ಗುಂಪಿನತ್ತ ತಿರುಗಿ ನವಶ್ಯಾ, “ನನಗೆ ಸುಪಾರಿ ಕೆಲಸ ಸಿಕ್ಕಿತು.” ಎಂದು ಅಚ್ಚರಿಯಿಂದ ಹೇಳಿದರು.

ದಹನು ತಾಲೂಕಿನ ಕಿನ್ಹಾವಲಿ ಗ್ರಾಮದಲ್ಲಿರುವ ತಮ್ಮ ಐದು ಎಕರೆ ಅರಣ್ಯ ಭೂಮಿಯಲ್ಲಿ ನವಶ್ಯಾ ಮತ್ತು ಅವರ ಪತ್ನಿ ಬಿಜ್ಲಿ ಅವರು ಜೋಳ, ಅಕ್ಕಿ ಮತ್ತು ತೊಗರಿ ಬೆಳೆಯುತ್ತಾರೆ. ಒಂದು ವೇಳೆ ಗದ್ದೆ ಕೆಲಸದಲ್ಲಿ ನಿರತರಾಗದೆ ಇದ್ದಲ್ಲಿ 55 ವರ್ಷದ ರೈತರಾಗಿರುವ ನವಶ್ಯಾ ಇಂತಹ ಕಾರ್ಯಕ್ರಮದಲ್ಲಿ ನಿರತರಾಗಿರುತ್ತಾರೆ. ಅವರು ತಿಂಗಳಿಗೆ 10-15 ವಿವಾಹಗಳಲ್ಲಿ ಡೋಲು ನುಡಿಸುತ್ತಾರೆ, ಇದಕ್ಕಾಗಿ ಅವರು ಶುಲ್ಕವನ್ನು ನಿಗದಿಪಡಿಸುತ್ತಾರೆ. ಕಾರ್ಯಕ್ರಮದ ಸಂಘಟಕರು ಅವರಿಗೆ ಪ್ರಯಾಣ, ಆಹಾರ ಮತ್ತು ವಸತಿ ವೆಚ್ಚವನ್ನು ಭರಿಸುತ್ತಾರೆ. ”ಹೆಚ್ಚಾಗಿ ನಾನು ನಾಸಿಕ್‌ನಲ್ಲಿ ಕಾರ್ಯಕ್ರಮ ನೀಡುತ್ತೇನೆ, ಆದರೆ ನಾನು ಥಾಣೆ ಮತ್ತು ಗುಜರಾತ್‌ ಗೂ ಕೂಡ ಹೋಗಿದ್ದೇನೆ” ಎಂದು ನವಶ್ಯಾ ಹೇಳುತ್ತಾರೆ.

ಅವರು 40 ವರ್ಷಗಳಿಂದ ಧುಮ್ಸಿ ನುಡಿಸುತ್ತಿದ್ದಾರೆ. "ನಮ್ಮೂರಿನಲ್ಲಿನ ಇತರ ಸಂಗೀತಗಾರರನ್ನು ನೋಡಿ ನಾನು ನುಡಿಸುವುದನ್ನು ಕಲಿತಿದ್ದೇನೆ” ಎನ್ನುತ್ತಾರೆ.

ವಿಡಿಯೋ ವೀಕ್ಷಿಸಿ - ಸಂಗೀತದ ಧ್ವನಿ: ಆಜಾದ್ ಮೈದಾನದ ರೈತರ ಚಳುವಳಿಯಲ್ಲಿ ಟಾರ್ಪಾ ಮತ್ತು ಧುಮ್ಸಿ.

"ಯಾವುದಾದರೂ ಮದುವೆ ಇದ್ದರೆ, ಹಬ್ಬ ಇದ್ದರೆ, ಈ ನೃತ್ಯವನ್ನು ಮಾಡುತ್ತೇವೆ, ನಾವು ಹಲವು ದಿನಗಳವರೆಗೆ ನೃತ್ಯ ಮಾಡಿದರೂ ಸುಸ್ತಾಗುವುದಿಲ್ಲ." ಎಂದು ಹೇಳುತ್ತಾರೆ. ಈ ಸಮಯದಲ್ಲಿ ಆಚರಣೆಗೆ ಕಾರಣವೆಂದರೆ ಮಹಾರಾಷ್ಟ್ರದಾದ್ಯಂತದ ಸುಮಾರು 15,000 ಚಳುವಳಿಗಾರರು ಕೇಂದ್ರ ಸರ್ಕಾರದ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಜನವರಿ 23 ರ ಸಾಯಂಕಾಲ ಸಂಯುಕ್ತ ಶೆತ್ಕಾರಿ ಕಾಮಗರ್ ಮೋರ್ಚಾ ಆಯೋಜಿಸಿದ್ದ ನಾಸಿಕ್ ನಿಂದ 180 ಕಿಲೋ ಮೀಟರ್ ಗಳವರೆಗೆ ಸಾಗುವ ವಾಹನ ಜಾಥಾಗೆ 21 ಜಿಲ್ಲೆಗಳಿಂದ ರೈತರು ಬಂದಿದ್ದರು.

ಜನವರಿ 25 ರ ದಿನದಾಂತ್ಯದ ವೇಳೆಗೆ, ನವಶ್ಯಾ ಎರಡು ದಿನಗಳ ಕಾಲ ಪ್ರದರ್ಶನ ನೀಡಿದ್ದರು, ಅವರು ಜನವರಿ 23 ರಂದು ಪಾಲ್ಘರ್ ಜಿಲ್ಲೆಯಲ್ಲಿರುವ ತಮ್ಮ ಮನೆಯಿಂದ ಹೊರಟಿದ್ದರು, ಆದರೆ ಇನ್ನೂ ದಣಿದಿಲ್ಲ: “ ನನಗೆ ಅದೂ ರೂಢಿಯಾಗಿದೆ, ಮದುವೆ ಕಾರ್ಯಕ್ರಮಗಳಲ್ಲಿ ರಾತ್ರಿಯಿಡಿ ನಾನು ಪ್ರದರ್ಶನ ನೀಡುತ್ತೇನೆ” ಎಂದು ಅವರು ಹೇಳುತ್ತಾರೆ.

"ನನ್ನ ಸಮುದಾಯದಲ್ಲಿರುವ ಪ್ರತಿಯೊಬ್ಬರಿಗೂ ಈ ನೃತ್ಯ ತಿಳಿದಿದೆ" ಎಂದು ಪರಿಶಿಷ್ಟ ಪಂಗಡದ ವಾರ್ಲಿ (ಅಥವಾ ವರ್ಲಿ) ಆದಿವಾಸಿ ಸಮುದಾಯದ ನವಶ್ಯಾ ಹೇಳುತ್ತಾರೆ. ಅವರ ಪಕ್ಕದಲ್ಲಿ ಕುಳಿತಿದ್ದ ದಹನು ತಾಲ್ಲೂಕಿನ ಧಮನಗಾಂವ್ ಗ್ರಾಮದ 53 ವರ್ಷದ ವಾರ್ಲಿ ಆದಿವಾಸಿ ರೈತ ತೈಕಕ್ಡೆ ಥಪಾಡ್. “ಹಬ್ಬಗಳು ದಸರಾ ಕಾಲದಲ್ಲಿಯೇ ಪ್ರಾರಂಭವಾಗುತ್ತವೆ. ಇನ್ನೊಂದೆಡೆಗೆ ಬಿತ್ತನೆ ಕೂಡ ಅದೇ ಸಮಯಕ್ಕೆ ನಡೆಯುತ್ತದೆ. ನವಂಬರ್ ದಲ್ಲಿನ ದಸರಾ ಹಬ್ಬದಿಂದ ಹಿಡಿದು ದೀಪಾವಳಿಯವರೆಗಿನ ಹಬ್ಬಗಳನ್ನು ನಾವು ಈ ನೃತ್ಯದೊಂದಿಗೆ ಆಚರಿಸುತ್ತೇವೆ. ನಾನು ಕೂಡ ಕಲಿತಿದ್ದು ಹೀಗೆ. ” ಎಂದು ವಿವರಿಸುತ್ತಾರೆ.

ಆಜಾದ್ ಮೈದಾನದಲ್ಲಿ ನೃತ್ಯ-ಚಳುವಳಿಗಾರರು ದಹನು ಮತ್ತು ಹತ್ತಿರದ ತಾಲ್ಲೂಕುಗಳ ವಿವಿಧ ಆದಿವಾಸಿ ಸಮುದಾಯಗಳಿಂದ ಬಂದಿದ್ದಾರೆ. ಅವರು ವಿರೋಧಿಸುತ್ತಿರುವ ಕಾನೂನುಗಳೆಂದರೆ ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಕಾಯ್ದೆ 2020 ; ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಕಾಯ್ದೆ-2020 ,ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020 . ಈ ಮೂರು ಕಾನೂನುಗಳನ್ನು ಮೊದಲು ಜೂನ್ 5, 2020 ರಂದು ಸುಗ್ರೀವಾಜ್ಞೆಗಳ ಮೂಲಕ ಅಂಗೀಕರಿಸಲಾಯಿತು, ನಂತರ ಸೆಪ್ಟೆಂಬರ್ 14 ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳ ರೂಪದಲ್ಲಿ ಪರಿಚಯಿಸಲಾಯಿತು, ಅದೇ ತಿಂಗಳ 20 ರಂದು ಅವುಗಳನ್ನು ಕಾಯ್ದೆ ರೂಪದಲ್ಲಿ ಪ್ರಸ್ತುತ ಸರ್ಕಾರವು ಜಾರಿಗೆ ತಂದಿತು.

Navshya Kuvra (left), along with Taikakde Thapad (in red saree, centre) and other Adivasi women, and Navji Hadal (right) were among the performers at Azad Maidan
PHOTO • Riya Behl
Navshya Kuvra (left), along with Taikakde Thapad (in red saree, centre) and other Adivasi women, and Navji Hadal (right) were among the performers at Azad Maidan
PHOTO • Riya Behl
Navshya Kuvra (left), along with Taikakde Thapad (in red saree, centre) and other Adivasi women, and Navji Hadal (right) were among the performers at Azad Maidan
PHOTO • Riya Behl

ಆಜಾದ್ ಮೈದಾನದಲ್ಲಿ ಪ್ರದರ್ಶನ ನೀಡಿದವರಲ್ಲಿ ನವಶ್ಯಾ ಕುವ್ರಾ (ಎಡಕ್ಕೆ), ತೈಕಕ್ಡೆ ಥಪಾಡ್ (ಮಧ್ಯದಲ್ಲಿ ಕೆಂಪು ಸೀರೆಯಲ್ಲಿರುವವರು) ಮತ್ತು ಇತರ ಆದಿವಾಸಿ ಮಹಿಳೆಯರು, ಮತ್ತು ನವದ್ ಹದಲ್ (ಬಲಕ್ಕೆ) ಇದ್ದಾರೆ.

ರೈತರು ಈ ಕೃಷಿ ಕಾನೂನುಗಳನ್ನು ತಮ್ಮ ಜೀವನೋಪಾಯಕ್ಕೆ ವಿನಾಶಕಾರಿ ಎಂದು ಪರಿಗಣಿಸಿದ್ದಾರೆ.ಏಕೆಂದರೆ ಇದರಿಂದಾಗಿ ಬೃಹತ್ ಕಾರ್ಪೊರೇಟ್‌ ಕಂಪನಿಗಳು ಈಗ ರೈತರು ಹಾಗೂ ಕೃಷಿ ವಲಯದ ಮೇಲೆ ಇನ್ನೂ ಹೆಚ್ಚಿನ ಪ್ರಾಬಲ್ಯವನ್ನು ಸಾಧಿಸುತ್ತವೆ. ಈ ನೂತನ ಕೃಷಿ ಕಾನೂನುಗಳು ರೈತರಿಗೆ ಇರುವ ಪ್ರಮುಖ ಆಧಾರದ ಮೂಲಗಳನ್ನು ನಾಶಪಡಿಸುತ್ತವೆ . ಇವುಗಳಲ್ಲಿ ಪ್ರಮುಖವಾಗಿ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳು (ಎಪಿಎಂಸಿ), ಉತ್ಪನ್ನಗಳನ್ನು ಸರ್ಕಾರವೇ ಖರೀದಿಸುವುದು, ಇಂತಹ ಇನ್ನೂ ಹಲವು ಆಧಾರದ ಮೂಲಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಭಾರತೀಯ ಸಂವಿಧಾನದ 32 ನೇ ವಿಧಿಯನ್ನು ದುರ್ಬಲಗೊಳಿಸಿ, ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ನಿಷ್ಕ್ರಿಯಗೊಳಿಸುವ ನಡೆ ಪ್ರತಿಯೊಬ್ಬ ಭಾರತೀಯನ ಮೇಲೂ ಪರಿಣಾಮ ಬೀರುತ್ತದೆ ಎಂದು ಟೀಕಿಸಲಾಗುತ್ತದೆ.

"ಸರ್ಕಾರದ ಮೂರು ಕಾನೂನುಗಳು ಗದ್ದೆಗಳಲ್ಲಿ ಕೆಲಸ ಮಾಡುವ ರೈತರಿಗೆ ವಿರುದ್ಧವಾಗಿವೆ, ಅದಕ್ಕಾಗಿಯೇ ನಾವು ಇಲ್ಲಿದ್ದೇವೆ” ಎಂದು ನಾರಾಯಣ್ ಗೂರ್ಖಾನಾ ಬೆಳಗ್ಗೆಯಿಂದ ಸ್ವಲ್ಪ ಬಿಡುವು ನೀಡುತ್ತಾ ಸ್ಥಿರ ಮತ್ತು ಕಡಿಮೆ ಶಬ್ದವನ್ನು ಹೊಂದಿರುವ ಗಾಳಿ ಸಾಧನವಾದ ಟಾರ್ಪಾ ನುಡಿಸುತ್ತಾ ವಿವರಿಸುತ್ತಿದ್ದರು. ಪರಿಶಿಷ್ಟ ಪಂಗಡಕ್ಕೆ ಸೇರಿದ ಕೋಲ್ ಮಲ್ಹಾರ್ ಸಮುದಾಯದ ಗೂರ್ಖಾನಾ, ಪಾಲ್ಘರ್‌ನ ಒಸರ್ವಿರಾ ಗ್ರಾಮದಲ್ಲಿ ಒಂದು ಎಕರೆಗಿಂತ ಸ್ವಲ್ಪ ಅಧಿಕವಿರುವ ಅರಣ್ಯ ಭೂಮಿಯಲ್ಲಿ ಭತ್ತ, ನಾಚ್ನಿ, ಜೋಳ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ.

ದಹನುವಿನಿಂದ ಬಂದಿದ್ದ ತರ್ಪಾ ನುಡಿಸುವ 60 ವರ್ಷದ ಮತ್ತೊಬ್ಬ ವ್ಯಕ್ತಿ ನವ್ಜಿ ಹಡಲ್ ಕೂಡ ಆಜಾದ್ ಮೈದಾನದಲ್ಲಿದ್ದರು.ಅವರು ಕಳೆದ 40 ವರ್ಷಗಳಿಂದ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. “ನಾನು ಐದು ಎಕರೆ ಪ್ರದೇಶದಲ್ಲಿ ಕೃಷಿ ಮಾಡುತ್ತೇನೆ. ಆದರೆ ನನಗೆ ಒಂದು ಎಕರೆ ಮಾತ್ರ ದೊರೆತಿದೆ, ”ಎಂದು ಅವರು ಅರಣ್ಯ ಹಕ್ಕುಗಳ ಕಾಯ್ದೆ, 2006 ರ ಅಡಿಯಲ್ಲಿ ತಾವು ಅರ್ಹರಾಗಿರುವ ಕಥೆಯನ್ನು ಉಲ್ಲೇಖಿಸುತ್ತಿದ್ದರು. ಈ ಕಾಯ್ದೆಯಡಿ ಅವರ ಹಕ್ಕುಗಳು ಮಹಾರಾಷ್ಟ್ರದ ಆದಿವಾಸಿ ರೈತರ ಚಳುವಳಿಯಲ್ಲಿ ಪುನರಾವರ್ತಿತ ಬೇಡಿಕೆಗಳಾಗಿವೆ. "ಈ ಮೂರು ಮಸೂದೆಗಳೊಂದಿಗೆ, ಹೆಚ್ಚಿನ ಕಂಪನಿಗಳು ಕೃಷಿ ವಲಯವನ್ನು ಪ್ರವೇಶಿಸುತ್ತವೆ. ಮತ್ತು ಅನಂತರ ಅವರು ನಮ್ಮ ಬೆಳೆಗಳ ಬೆಲೆಗಳನ್ನು ನಿರ್ಧರಿಸುತ್ತಾರೆ. ಆದರೆ ನಮಗೆ ಅದು ಬೇಕಾಗಿಲ್ಲ” ಎನ್ನುತ್ತಾರೆ.

ಮುಖಪುಟ ಚಿತ್ರ : ಓರ್ನಾ ರೌತ್

ಅನುವಾದಕ್ಕಾಗಿ ನೆರವಾದ ನೀಡಿದ ಪಾರ್ಥ್ ಎಂ.ಎನ್ ಗೆ ಧನ್ಯವಾದಗಳು

ಅನುವಾದ - ಎನ್ . ಮಂಜುನಾಥ್

Oorna Raut

Oorna Raut is Research Editor at the People’s Archive of Rural India.

کے ذریعہ دیگر اسٹوریز Oorna Raut
Riya Behl

ریا بہل، پیپلز آرکائیو آف رورل انڈیا (پاری) کی سینئر اسسٹنٹ ایڈیٹر ہیں۔ ملٹی میڈیا جرنلسٹ کا رول نبھاتے ہوئے، وہ صنف اور تعلیم کے موضوع پر لکھتی ہیں۔ ساتھ ہی، وہ پاری کی اسٹوریز کو اسکولی نصاب کا حصہ بنانے کے لیے، پاری کے لیے لکھنے والے طلباء اور اساتذہ کے ساتھ کام کرتی ہیں۔

کے ذریعہ دیگر اسٹوریز Riya Behl
Translator : N. Manjunath