ಬೆಲ್ಡಾಂಗ ಪಟ್ಟಣದಿಂದ ಕೋಲ್ಕತಾಗೆ ಹೋಗುವ ಹಜಾರದ್ವಾರಿ ಎಕ್ಸಪ್ರೆಸ್ ರೈಲು ಪ್ಲಾಸಿ ನಿಲುದಾಣದಿಂದ ನಿಧಾನವಾಗಿ ಹೊರಟದ್ದೇ ತಡ, ಏಕತಾರಿಯ ನಾದವೊಂದು ಬೋಗಿಯ ತುಂಬಾ ತೇಲುತ್ತಾ ತೇಲುತ್ತಾ ಹರಿಯಿತು. ಸಂಜಯ ಬಿಸ್ವಾಸ್ ತಮ್ಮ ಚೀಲದ ತುಂಬ ಮರದಿಂದ ತಾವೇ ತಯಾರಿಸಿದ ಕರಕುಶಲ ವಸ್ತುಗಳನ್ನು ತಂದಿದ್ದರು, ಅದರಲ್ಲಿ ಚರಕ, ಮೇಜು ದೀಪ, ಕಾರು, ಬಸ್ಸು ಮತ್ತು ಒಂದು ತಂತಿಯ ಏಕತಾರಿ ಇದ್ದವು.

ಗೊಂಬೆಗಳು, ಕೀಚೈನುಗಳು, ಕೊಡೆಗಳು, ಟಾರ್ಚುಗಳು ಲೈಟರುಗಳಂತಹ- ಚೀನಾಮಾಲು ಮತ್ತು ಕರ್ಚೀಫು, ಪಾಕೆಟ್ ಕ್ಯಾಲೆಂಡರ್ ಡೈರಿ, ಮೆಹಂದಿ ಡಿಸೈನಿನ ಪುಸ್ತಕಗಳು, ಚುರುಮುರಿ, ಬೇಯಿಸಿದ ಮೊಟ್ಟೆ, ಚಹಾ, ಕಡಲೆಕಾಯಿ, ಸಮೋಸ, ಬಾಟಲಿ ನೀರು ಇನ್ನೂ ಮುಂತಾದವುಗಳಿಗೆ ಹೋಲಿಸಿದರೆ, ಅಚ್ಚುಕಟ್ಟಾಗಿ ತಯಾರಿಸಿದ್ದ ಇವರ ಕಲಾಕೃತಿಗಳು ವಿಶಿಷ್ಟವಾಗಿದ್ದವು. ರೈಲಿನ ಪ್ರತಿಯೊಬ್ಬ ವ್ಯಾಪಾರಿಗೂ ಒಂದು ನಿರ್ದಿಷ್ಟ ಮಾರ್ಗ ಮತ್ತು ಬೋಗಿಗಳನ್ನು ನಿಗದಿ ಮಾಡಲಾಗಿರುತ್ತದೆ.

ಪ್ರಯಾಣಿಕರು ಕಡಿಮೆ ಬೆಲೆಗಾಗಿ ಸಾಕಷ್ಟು ಚೌಕಾಸಿ ಮಾಡುತ್ತಾರೆ. ಮುರ್ಶಿದಾಬಾದ್ ಜಿಲ್ಲೆಯ ಬೆಹರಾಂಪುರ ಉಪವಿಭಾಗದ ಬೆಲ್ಡಾಂಗದಿಂದ ರಾಣಾಘಾಟವರೆಗೆ ರೈಲು ಎರಡು ಗಂಟೆಯಲ್ಲಿ 100 ಕಿಮೀ ಕ್ರಮಿಸುವುದರೊಳಗೆ ಸಾಕಷ್ಟು ವ್ಯಾಪಾರ ನಡೆಯುತ್ತದೆ. ಬಹುಪಾಲು ಮಂದಿ ವ್ಯಾಪಾರಿಗಳು ರಾಣಾಘಾಟಿನಲ್ಲಿ, ಇನ್ನು ಕೆಲವರು ಕೃಷ್ಣಾನಗರದಲ್ಲಿ ಇಳಿದುಕೊಳ್ಳುತ್ತಾರೆ, ಎರಡೂ ಈ ಮಾರ್ಗದ ಮುಖ್ಯ ರೈಲ್ವೆ ಜಂಕ್ಷನ್ನುಗಳು, ಅಲ್ಲಿಂದ ಅವರ ಹಳ್ಳಿಗಳಿಗೆ ಮತ್ತು ಪಟ್ಟಣಗಳಿಗೆ ಲೋಕಲ್ ಟ್ರೈನುಗಳಲ್ಲಿ ಹೋಗುತ್ತಾರೆ.

ಯಾರೋ ಒಬ್ಬರು ಸುಂದರವಾದ ಏಕತಾರಿಯನ್ನು ನೋಡಿ ಬೆಲೆಯೆಷ್ಟು ಎಂದು ಸಂಜಯರನ್ನು ಕೇಳಿದರು. 300 ರೂಪಾಯಿ ಎಂದರು. ಬೆಲೆ ಕೇಳಿದವರಿಗೆ ದುಬಾರಿಯೆನಿಸಿತು, ಮನದಾಸೆಯನ್ನು ಅಡಗಿಸಿ ಮರುಮಾತಾಡದೆ ಸುಮ್ಮನೆ ಕೂತರು. ಸಂಜಯರು ಪ್ರಾರಂಭಿಸಿದರು, “ಇದು ಅಗ್ಗದ ಆಟಿಕೆಯಲ್ಲ, ನಾನಿದನ್ನು ತುಂಬಾ ಕಷ್ಟಪಟ್ಟು, ತಾಳ್ಮೆಯಿಂದ ಮಾಡಿದ್ದೇನೆ. ಇದಕ್ಕಾಗಿ ಒಳ್ಳೆಯ ಗುಣಮಟ್ಟದ ವಸ್ತುಗಳನ್ನು ಬಳಸಿದ್ದೇನೆ. ಈ ಏಕತಾರಿಯ ಕೆಳಗೆ ಕಾಣುತ್ತಿದೆಯಲ್ಲ ಇದು ನಿಜವಾದ ಚರ್ಮದಿಂದ ಮಾಡಿದ್ದು.” ಮತ್ತೊಬ್ಬರು ಪ್ರಶ್ನೆ ಎತ್ತಿದರು: “ನಮಗೆ ಜಾತ್ರೆಯಲ್ಲಿ ಇದಕ್ಕಿಂತಾ ಅಗ್ಗವಾಗಿ ಸಿಗುತ್ತೆ ಬಿಡಿ,” ಸಂಜಯರು ಉತ್ತರಿಸಿದರು, “ಇದು ಜಾತ್ರೇಲಿ ಸಂತೇಲಿ ಮಾರೋ ಅಗ್ಗದ ಸಾಮಾನಲ್ಲ, ನಾನು ವ್ಯಾಪಾರದಲ್ಲಿ ಜನರಿಗೆ ಮೋಸ ದಗಾ ಮಾಡೋದಿಲ್ಲ”

ಸೀಟುಗಳ ನಡುವಿನ ಓಣಿಯಲ್ಲಿ ತಮ್ಮ ಕಲಾಕೃತಿಗಳನ್ನು ತೋರಿಸುತ್ತಾ, ಚಿಕ್ಕ ಪುಟ್ಟ ಕೆಲವನ್ನು ಮಾರುತ್ತಾ ಮುಂದೆ ಮುಂದೆ ಹೋದರು. “ತಗೋಳಿ, ಕೈಯಲ್ಲಿ ಹಿಡಕೊಂಡು ನೋಡಿ, ನೋಡೋಕೆ ದುಡ್ಡಿಲ್ಲ.” ಅಷ್ಟರಲ್ಲಿ ಕುತೂಹಲದಿಂದ ಗಮನಿಸುತ್ತಿದ್ದ ದಂಪತಿಗಳಿಬ್ಬರು ಏಕತಾರಿಯೊಂದನ್ನು ಚೌಕಾಸಿ ಮಾಡದೆ ಹೇಳಿದ ಬೆಲೆಗೆ ಕೊಂಡುಕೊಂಡರು. ಸಂಜಯರ ಮುಖ ಅರಳಿತು. “ಇದನ್ನು ಮಾಡೋಕೆ ತುಂಬಾ ಶ್ರಮ ಬೇಕು – ಕೇಳಿ, ಎಷ್ಟು ಚೆನ್ನಾಗಿದೆ ಇದರ ನಾದ.”

Man selling goods in the train
PHOTO • Smita Khator
Man selling goods in the train
PHOTO • Smita Khator

‘ಇದು ಜಾತ್ರೇಲಿ ಸಂತೇಲಿ ಮಾರೋ ಅಗ್ಗದ ಸಾಮಾನಲ್ಲ, ನಾನು ವ್ಯಾಪಾರದಲ್ಲಿ ಜನರಿಗೆ ಮೋಸ ದಗಾ ಮಾಡೋದಿಲ್ಲ

‘ನೀವು ಇದನ್ನು ಎಲ್ಲಿ ಕಲಿತಿರಿ’ ಎಂದು ಕೇಳಿದೆ. “ಈ ಕಲೆಯನ್ನು ನಾನೇ ಸ್ವಯಂ ಕಲಿತದ್ದು. ನಾನು 8 ನೇ ತರಗತಿಯಲ್ಲಿ ಪರೀಕ್ಷೆ ಬರೆಯಲಾಗದೆ ಓದಿಗೆ ನೀರುಬಿಡಬೇಕಾಯಿತು,” 47 ರ ಪ್ರಾಯದ ಸಂಜಯ್ ಹೇಳುತ್ತಾ ಹೋದರು. “ಒಕ್ಕಾಲು ಶತಮಾನದ ಕಾಲ ಹಾರ್ಮೋನಿಯಮ್ಮುಗಳನ್ನು ರಿಪೇರಿ ಮಾಡಿದೆ. ಕೆಲಸ ಸಾಕೆನಿಸಿತು. ಕಳೆದ ಒಂದೂವರೆ ವರುಶದಿಂದ ಈ ಕೆಲಸವೇ ಗೀಳಾಗಿದೆ. ಕೆಲವೊಮ್ಮೆ ಈಗಲೂ ಜನರು ಹಾರ್ಮೋನಿಯಂ ಹಿಡಿದುಕೊಂಡು ಬರುತ್ತಾರೆ, ಅದರ ರಿಪೇರಿಯನ್ನೂ ಮಾಡುತ್ತೇನೆ, ಆದರೆ ಇದೇ ನನ್ನ ಪೂರ್ಣಸಮಯದ ಉದ್ಯೋಗ. ಇವುಗಳನ್ನು ತಯಾರಿಸಲು ಬೇಕಾದ ಸಲಕರಣೆಗಳನ್ನು ನಾನೇ ಮಾಡಿಕೊಳ್ಳುತ್ತೇನೆ. ನೀವು ನನ್ನ ಮನೆಯಲ್ಲಿ ಮಾಡುವ ಕಲಾ ಕೌಶಲವನ್ನು ನೋಡಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ,” ತಮ್ಮ ಕಲಾ ಕೌಶಲದ ಮೇಲಿನ ಅಪೂರ್ವ ಅಭಿಮಾನದಿಂದ ಹೇಳಿದರು.

ಸಂಜಯರು ಸಾಮಾನ್ಯವಾಗಿ ಪ್ಲಾಸಿ(ಪಲಾಶಿ) ಮತ್ತು ಕೃಷ್ಣಾನಗರದ ರೈಲು ಮಾರ್ಗದಲ್ಲಿ ವ್ಯಾಪಾರ ಮಾಡುತ್ತಾರೆ. “ವಾರದಲ್ಲಿ ಮೂರು ದಿನ ಮಾರಾಟ ಮಾಡುತ್ತೇನೆ, ಮತ್ತೆ ಉಳಿದ ದಿನಗಳು ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಹೋಗುತ್ತದೆ. ಇದು ತುಂಬಾ ಸೂಕ್ಷ್ಮವಾದ ಕೆಲಸ, ಮಾಮೂಲಿ ಕೆಲಸಗಳಂತಲ್ಲ. ಈ ಮರದ ಬಸ್ಸನ್ನು ತಯಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ನೀವು ಕೈಯಲ್ಲಿ ಹಿಡಿದುಕೊಂಡು ಸೂಕ್ಷ್ಮವಾಗಿ ನೋಡಿ, ನಿಮಗೇ ಗೊತ್ತಾಗುತ್ತದೆ ಅದರಲ್ಲಿ ಎಷ್ಟು ಶ್ರಮವಿದೆಯೆಂದು.” ಎನ್ನುತ್ತಾ ಮರದ ಸಣ್ಣ ಬಸ್ಸನ್ನು ನನ್ನ ಕೈಗಿತ್ತರು.

ನೀವು ಇದರಿಂದ ಎಷ್ಟು ಗಳಿಸುತ್ತೀರಿ? “ಇವೊತ್ತು ರೂ. 800 ರಷ್ಟು ಮಾರಾಟ ಮಾಡಿದೆ. ಲಾಭ ತುಂಬಾ ಕಡಿಮೆ. ಇದಕ್ಕೆ ಬೇಕಾಗುವ ಕಚ್ಚಾ ವಸ್ತುಗಳೂ ದುಬಾರಿಯಾಗಿವೆ. ನಾನು ಅಗ್ಗದ ಬೆಲೆಯ ಮರವನ್ನು ಬಳಸುವುದಿಲ್ಲ. ಇವುಗಳಿಗೆ ಬರ್ಮಾ ಟೀಕ್, ತೇಗ ಇಲ್ಲವೆ ಬಾಗೆ ಮರವೇ ಬೇಕು. ನಾನಿವುಗಳನ್ನು ಮರದ ವ್ಯಾಪಾರಿಗಳಿಂದ ಕೊಳ್ಳುತ್ತೇನೆ. ಕೋಲ್ಕತಾದ ಬುರ್ರಾ ಬಜಾರ್ ಅಥವಾ ಚೈನಾ ಬಜಾರಿನಿಂದ ಒಳ್ಳೆಯ ಗುಣಮಟ್ಟದ ಬಣ್ಣ ಮತ್ತು ಸ್ಪಿರಿಟುಗಳನ್ನು ಕೊಳ್ಳುತ್ತೇನೆ. ನಾನು ಮೋಸ ವಂಚನೆ ಮಾಡುವುದನ್ನು ಕಲಿತಿಲ್ಲ… ನಾನು ಪ್ರತಿದಿನವೂ ಕೆಲಸ ಮಾಡುತ್ತೇನೆ. ನೀವು ಬೇಕಾದರೆ ನನ್ನ ಮನೆಗೆ ಬಂದು ನೋಡಿ, ಹಗಲೂ ರಾತ್ರಿ ಕೆಲಸ ಮಾಡುತ್ತಿರುತ್ತೇನೆ. ನಾನು ಮರವನ್ನು ಮಶೀನಿನಲ್ಲಿ ಪಾಲಿಶ್ ಮಾಡುವುದಿಲ್ಲ. ನನ್ನ ಕೈಯಿಂದಲೇ ಮಾಡುತ್ತೇನೆ. ಅದಕ್ಕೇ ಇವು ಇಷ್ಟು ನಯವಾಗಿ ಹೊಳೆಯುತ್ತಿರುವುದು.”

ಸಂಜಯರು ತಾವು ತಯಾರಿಸಿದ ಕಲಾಕೃತಿಗಳನ್ನು ರೂ. 40 ರಿಂದ (ಶಿವಲಿಂಗ) ರೂ. 500 ರವರೆಗೆ (ಮಿನಿಬಸ್ಸು) ಬೇರೆ ಬೇರೆ ಬೆಲೆಗೆ ಮಾರುತ್ತಾರೆ. “ಈ ಬಸ್ಸಿಗೆ ನಿಮ್ಮ ಶಾಪಿಂಗ್ ಮಾಲಿನಲ್ಲಿ ಎಷ್ಟಿರಬಹುದು ಹೇಳಿ ನೋಡೋಣ?” ಎಂದು ಕೇಳಿದರು. ಮುಂದುವರೆದು “ಅನೇಕ ಪ್ರಯಾಣಿಕರು ಕಲಾಪ್ರೀತಿಯ ಈ ಶ್ರಮಕ್ಕೆ ಬೆಲೆ ಕೊಡದೆ ತುಂಬಾ ಚೌಕಾಸಿ ಮಾಡುತ್ತಾರೆ. ಹೇಗೋ ನಾನೂ ಅಲ್ಪಲಾಭದಲ್ಲೇ ಬದುಕುತ್ತಿದ್ದೇನೆ. ಬಹುಶಃ ಅವರೂ ಒಂದಲ್ಲಾ ಒಂದು ದಿನ ನನ್ನ ಕಲೆಯನ್ನು ಮೆಚ್ಚಿಕೊಳ್ಳುತ್ತಾರೆ.”

ರೈಲು ಕೃಷ್ಣಾನಗರಕ್ಕೆ ಬರುತ್ತಿರುವಂತೆ ಸಂಜಯರು ತಮ್ಮ ಬುಟ್ಟಿಯೊಂದಿಗೆ ಇಳಿಯಲು ಸಿದ್ದವಾದರು. ಅಲ್ಲಿಂದ ನಾದಿಯಾ ಜಿಲ್ಲೆಯ ಬಡಕುಲಾ ಪಟ್ಟಣದ ಘೋಶಪಾರ ಬಸ್ತಿಯಲ್ಲಿರುವ ತಮ್ಮ ಮನೆಗೆ ಹೋಗುವರು. ಅವರು ಹೇಗೂ ಹಾರ್ಮೋನಿಯಂ ನುಡಿಸುತ್ತಾರೆ ಮತ್ತು ಅಷ್ಟು ಸುಂದರವಾದ ಏಕತಾರಿಯನ್ನು ತಯಾರಿಸುತ್ತಾರಾದ್ದರಿಂದ, ನಿಮಗೆ ಹಾಡಲು ಬರುತ್ತದೆಯೇ ಎಂದು ಕೇಳಿದೆ. ನಸುನಕ್ಕು ಹೇಳಿದರು, “ಯಾವಾಗಲೋ ಒಮ್ಮೆ, ಹಳ್ಳಿ ಹಾಡುಗಳನ್ನು”

ಅನುವಾದ: ಬಿ.ಎಸ್.‌ ಮಂಜಪ್ಪ

Smita Khator

اسمِتا کھٹور، پیپلز آرکائیو آف رورل انڈیا (پاری) کے ہندوستانی زبانوں کے پروگرام، پاری بھاشا کی چیف ٹرانسلیشنز ایڈیٹر ہیں۔ ترجمہ، زبان اور آرکائیوز ان کے کام کرنے کے شعبے رہے ہیں۔ وہ خواتین کے مسائل اور محنت و مزدوری سے متعلق امور پر لکھتی ہیں۔

کے ذریعہ دیگر اسٹوریز اسمیتا کھٹور
Translator : B.S. Manjappa

Manjappa B. S. is an emerging writer and translator in Kannada.

کے ذریعہ دیگر اسٹوریز B.S. Manjappa