ಬುಡಕಟ್ಟು ಜನರು ತಮ್ಮೊಳಗೆ ನ್ಯೂನತೆಗಳನ್ನು ಹೊಂದಿದ್ದಾರೆ, ಆದರೆ ಅವರು ಸಮುದಾಯದೊಳಗಿನ ಸಂಸ್ಕೃತಿಗೆ ಹೇಗೆ ಹೊಂದಿಕೊಂಡಿದ್ದಾರೆ ಎಂಬುದನ್ನು ನೋಡುವುದು ಮುಖ್ಯವಾಗಿದೆ. ಉದಾಹರಣೆಗೆ, ಆಧುನಿಕ ಶಿಕ್ಷಣವು ಹೊಸ ಪ್ರವೃತ್ತಿಯನ್ನು ಪ್ರಾರಂಭಿಸಿತು ಮತ್ತು ಇಂದು ನಮ್ಮ ಅನೇಕ ಆಂತರಿಕ ಹೋರಾಟಗಳು ಹೊಸದಾಗಿ ರಚಿಸಲಾದ ವಿದ್ಯಾವಂತ ವರ್ಗದ ಕಾರಣದಿಂದಾಗಿ ಪ್ರಾರಂಭವಾಗಿದೆ. ಇಂದು ನನ್ನ ಗ್ರಾಮದ ಶಿಕ್ಷಕರೊಬ್ಬರು ಗ್ರಾಮದಲ್ಲಿ ಮನೆ ಕಟ್ಟುವುದಿಲ್ಲ. ಅವರು ರಾಜ್ಪಿಪ್ಲಾದಲ್ಲಿ ಭೂಮಿ ಖರೀದಿಸುತ್ತಾರೆ. ಯುವ ಪೀಳಿಗೆ ಅಭಿವೃದ್ಧಿಯ ಹೊಳೆಯುವ ಪರಿಕಲ್ಪನೆಗಳತ್ತ ವಾಲುತ್ತಿದೆ. ತನ್ನ ಬೇರುಗಳಿಂದ ದೂರ ವಿದೇಶಿ ನೆಲದಲ್ಲಿ ಬೆಳೆದ ಅವರು ಸಾಂಪ್ರದಾಯಿಕ ಜೀವನ ವಿಧಾನವನ್ನು ನಡೆಸುವುದಿಲ್ಲ. ಅವರು ಕೆಂಪು ಅನ್ನವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ. ನಗರದ ನೌಕರಿ ತರುವ ಪ್ರತಿಷ್ಠೆಯನ್ನು ಸವಿಯಲು ಬಯಸುತ್ತಾರೆ. ಅಂತಹ ಗುಲಾಮಗಿರಿಯ ಭಾವನೆ ನಮ್ಮ ಸಂಸ್ಕೃತಿಯ ಭಾಗವಾಗಿರಲಿಲ್ಲ. ಈಗ ವಿದ್ಯಾಭ್ಯಾಸ ಮಾಡಿ ನೌಕರಿ ಮಾಡುತ್ತಿರುವ ಅವರಿಗೆ ಇನ್ನೂ ನಗರಗಳಲ್ಲಿ ಸ್ವಂತ ನೆಲೆ ಸಿಗುತ್ತಿಲ್ಲ. ಅವರು ಅಲ್ಲಿನ ಜನರ ನಡುವೆ ಬಹಿಷ್ಕೃತರಾಗಿದ್ದಾರೆ. ಇದರಿಂದಾಗಿ, ಅಂತಹ ಸಂಘರ್ಷಗಳನ್ನು ತಪ್ಪಿಸಲು, ಅವರು ತನ್ನ ಗುರುತನ್ನು ಮರೆಮಾಡಲು ಪ್ರಾರಂಭಿಸುತ್ತಾರೆ. ಇಂದು, ಘರ್ಷಣೆಗಳು ಮತ್ತು ಸಂಘರ್ಷಗಳು ಬುಡಕಟ್ಟು ಗುರುತಿನೊಂದಿಗೆ ಆಳವಾಗಿ ಹೆಣೆದುಕೊಂಡಿವೆ.
ಅನಾಗರಿಕ ಮಹುವಾ
ನನ್ನ ದೇಶದ ಗಣ್ಯರೆಂದು ಕರೆದುಕೊಳ್ಳುವ ಕೆಲವರು
ಮಹುವಾವನ್ನು ಅನಾಗರಿಕವೆಂದು ಕರೆದ ದಿನದಿಂದ
ನನ್ನ ತಾಯಿ ಮಹುವಾ ಹೂಗಳನ್ನು ಮುಟ್ಟಲು ಹೆದರುತ್ತಾರೆ.
ಅಪ್ಪ ಮಹುವಾ ಎನ್ನುವ ಹೆಸರನ್ನು ದ್ವೇಷಿಸುತ್ತಾರೆ.
ತನ್ನನ್ನು ಸುಸಂಸ್ಕೃತನೆಂದುಕೊಳ್ಳುವ ನನ್ನಣ್ಣ
ಅಂಗಳದಲ್ಲಿ ಮಹುವಾಗಿಂತಲೂ
ತುಳಸಿ ಗಿಡವಿರುವುದೇ ಶ್ರೇಷ್ಟವೆಂದು ಹೇಳುತ್ತಾನೆ.
ಈಗೀಗ ನನ್ನ ಜನರೂ
ತಾವು ಅನಾಗರಿಕರೆನ್ನುವ ಭಾವನೆಯಿಂದ ನರಳುತ್ತಿದ್ದಾರೆ.
ಆಧ್ಯಾತ್ಮಿಕರಾಗಿ ಬದುಕುತ್ತಿದ್ದ ನನ್ನ ಜನ
ಈಗೀಗ ಮುಜುಗರಕ್ಕೀಡಾಗುತ್ತಿದ್ದಾರೆ.
ನದಿಯನ್ನು ಪವಿತ್ರವೆಂದು ಪರಿಗಣಿಸಲು,
ಪರ್ವತವನ್ನು ಪೂಜಿಸಲು,
ತಮ್ಮ ಪೂರ್ವಜರನ್ನು ಅನುಸರಿಸಲು,
ತಾವಿರುವ ನೆಲವನ್ನು ತಾಯಿಯೆನ್ನಲು
ಅವರೀಗ ಹಿಂಜರಿಯುತ್ತಿದ್ದಾರೆ.
ತಮ್ಮ ನಿಜವಾದ ಗುರುತುಗಳನ್ನು ಮರೆಮಾಚುತ್ತಾ,
ಅನಾಗರಿಕ ವ್ಯಕ್ತಿತ್ವಗಳಿಂದ ಮುಕ್ತವಾಗಲೆಂದು
ಕೆಲವರು ಕ್ರಿಶ್ಚಿಯನ್ನರಾಗುತ್ತಿದ್ದಾರೆ,
ಇನ್ನೂ ಕೆಲವರು ಹಿಂದೂವಾಗುತ್ತಿದ್ದಾರೆ, ಜೈನರಾಗುತ್ತಿದ್ದಾರೆ
ಏಕೆಂದರೆ, ನನ್ನ ದೇಶದ ಗಣ್ಯರೆಂದು ಕರೆದುಕೊಳ್ಳುವ ಕೆಲವು ಜನ
ಮಹುವಾವನ್ನು ಅನಾಗರಿಕೆವೆಂದು ಕರೆದಿದ್ದಾರೆ.
ಹೀಗಾಗಿಯೇ ನನ್ನ ಜನರು
ತಾವು ಅನಾಗರಿಕರೆಂಬ ಕೀಳರಿಮೆಯಿಂದ ನರಳುತ್ತಿದ್ದಾರೆ.
ಮಾರುಕಟ್ಟೆಗಳ ದ್ವೇಷಿಸುತ್ತಿದ್ದ ಜನರು
ಈಗ ಸಂತೆಯನ್ನೇ ಮನೆ ತರುತ್ತಿದ್ದಾರೆ
ನಾಗರಿಕತೆಯೆಂಬ ಮಾರುಕಟ್ಟೆಯಲ್ಲಿ ಬಿಕರಿಗಿರುವ
ಒಂದು ವಸ್ತುವೂ ತಮ್ಮಲ್ಲಿಲ್ಲದಿರುವುದನ್ನು ಅವರು ಸಹಿಸುತ್ತಿಲ್ಲ.
ಈ ನಾಗರಿಕತೆಯ ದೊಡ್ಡ
ಸಂಶೋಧನೆಯೆಂದರೆ – ವ್ಯಕ್ತಿ ಕೇಂದ್ರಿತ ಬದುಕು
ಸ – ಎಂದರೆ ಸಮಾಜ ಎನ್ನುವುದಿಲ್ಲ ಈಗ
ಸ – ಎಂದರೆ ಸ್ವಯಂ ಎನ್ನುತ್ತಾರೀಗ.
ನನ್ನ ದೇಶದ ಕೆಲವು ಗಣ್ಯರು
ಮಹುವಾವನ್ನು ಅನಾಗರಿಕವೆಂದು ಕರೆದಾಗಿನಿಂದ
ನನ್ನ ಜನರು ತಾವೂ ಅನಾಗರಿಕರೆನ್ನುವ ಭಾವಕ್ಕೊಳಗಾಗಿದ್ದಾರೆ.
ಕಥನಗಳ ಹಾಡುತ್ತಿದ್ದ,
ತಮ್ಮದೇ ಭಾಷೆಗಳಲ್ಲಿ ಮಹಾಕಾವ್ಯಗಳನ್ನು ಬರೆಯುತ್ತಿದ್ದ
ನನ್ನ ಜನರೀಗ ತಮ್ಮ ಭಾಷೆಯನ್ನೇ ಮರೆಯುತ್ತಿದ್ದಾರೆ.
ಇಂಗ್ಲಿಷ್ ಕಲಿಯುತ್ತಿರುವ ಅವರ ಮಕ್ಕಳೀಗ
ಈ ನೆಲದ ಗಿಡ, ಮರ, ನದಿ, ಬೆಟ್ಟಗಳ ಕನಸು ಕಾಣುವುದಿಲ್ಲ
ಅವರ ಕನಸುಗಳೇನಿದ್ದರೂ ಈಗ ಲಂಡನ್ ಅಮೇರಿಕಾ ಕುರಿತಾಗಿರುತ್ತವೆ.
ನಮ್ಮ ದೇಶದ ಕೆಲವು ತಥಾಕಥಿತ ಗಣ್ಯರು
ಮಹುವಾ ಮರಗಳನ್ನು ಅನಾಗರಿಕವೆಂದು ಕರೆದ ದಿನದಿಂದ
ನನ್ನ ಜನರೂ ತಮ್ಮನ್ನು ತಾವು ಅನಾಗರಿಕರೆಂದು ಭಾವಿಸತೊಡಗಿದ್ದಾರೆ.
ಅನುವಾದ: ಶಂಕರ. ಎನ್. ಕೆಂಚನೂರು