“ಹೇಗಿದ್ದೀಯ? ಏನು ಮಾಡುತ್ತಿದ್ದೀಯ? ಇನ್ನೂ ಎಷ್ಟು ದಿನಗಳವರೆಗೂ ಇದು ಮುಂದುವರಿಯುತ್ತದೆ? ಇದು ಅಷ್ಟೊಂದು ತೀವ್ರವಾಗಿದೆಯೇ? ನಮ್ಮ ಸ್ಥಳದಲ್ಲೂ ಪೋಲೀಸರಿದ್ದಾರೆಯೇ? ಜನರು (ಕೃಷಿ ಕಾರ್ಮಿಕರು) ಕೆಲಸಕ್ಕೆಂದು ಹೊರಗೆ ಹೋಗುತ್ತಿದ್ದಾರೆಯೇ?” ಎಂಬುದಾಗಿ ಚೆನಕೊಂಡ ಬಾಲಾಸಾಮಿ, ತನ್ನ ಮಗನೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದರು.

ಬಾಲಾಸಾಮಿ ಹಾಗೂ ಇತರೆ ನಾಲ್ಕು ಪಶುಪಾಲಕರು ದೀಪಾವಳಿಯ ನಂತರ, ನವೆಂಬರ್‌ನಲ್ಲಿ, ತೆಲಂಗಾಣದ ವನಪರ್ತಿ ಜಿಲ್ಲೆಯ ತಮ್ಮ ಹಳ್ಳಿಯಾದ ಕೆಥೆಪಲ್ಲೆಯಿಂದ ಹೊರಟರು. ಸುಮಾರು ಒಂದು ಸಾವಿರ ಮೇಕೆ ಹಾಗೂ ಕುರಿಗಳ ಉಸ್ತುವಾರಿ ವಹಿಸಿರುವ ಇವರು, ಪ್ರಾಣಿಗಳಿಗೆ ಮೇವನ್ನು ಅರಸುತ್ತಾ ಅಂದಿನಿಂದಲೂ ಪ್ರಯಾಣವನ್ನು ಮುಂದುರಿಸುತ್ತಲೇ ಇದ್ದಾರೆ .

ಯಾದವ ಸಮುದಾಯದ ಈ ಪಶುಪಾಲಕರು. ತೆಲಂಗಾಣದಲ್ಲಿ ಇತರೆ ಹಿಂದುಳಿದ ವರ್ಗದ ಪಟ್ಟಿಯಲ್ಲಿದ್ದಾರೆ. ಕೋವಿಡ್‌-19 ಹರಡುವಿಕೆಯನ್ನು ತಡೆಗಟ್ಟಲಿಕ್ಕಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ಎರಡು ದಿನಗಳ ಮೊದಲು, ಮಾರ್ಚ್‌ 23ರಂದು, ಕೆಥೆಪಲ್ಲೆಯಿಂದ ಸುಮಾರು 160 ಕಿ.ಮೀ. ದೂರದ ಕೊಪ್ಪೊಲೆ ಎನ್ನುವ ಹಳ್ಳಿಯನ್ನು ಇವರು ತಲುಪಿದರು.

ನಲ್ಗೊಂಡ ಜಿಲ್ಲೆಯ ಗುರ್ರುಂಪೊಡೆ ಮಂಡಲ್‌ನ ಕೊಪ್ಪೊಲೆಯಲ್ಲಿ, ಅಲ್ಪ ಪ್ರಮಾಣದಲ್ಲಿ ಆಗಾಗ್ಗೆ ಇವರು ಕೊಳ್ಳುತ್ತಿದ್ದ ಅಕ್ಕಿ, ಬೇಳೆ, ತರಕಾರಿ, ಎಣ್ಣೆ ಹಾಗೂ ಇತರೆ ದಿನಸಿ ವಸ್ತುಗಳನ್ನು ಖರೀದಿಸುವುದು ಲಾಕ್‌ಡೌನ್‌ ನಂತರದಲ್ಲಿ ಕಷ್ಟವಾಯಿತು.

ಸಾರ್ವಜನಿಕ ಸಾರಿಗೆ ಸೇವೆಗಳು ಮತ್ತು ಲಾಕ್‌ಡೌನ್‌ ಕುರಿತ ಅನಿಶ್ಚಿತತೆಯಿಂದಾಗಿ, ಜಾನುವಾರುಗಳಿಗೆ ಔಷಧಗಳ ಖರೀದಿ, ತಮ್ಮ ಸ್ವಂತ ಹಳ್ಳಿಗಳಿಗೆ ಹಾಗೂ ಕುಟುಂಬಗಳಿಗೆ ಆಗಾಗ ನೀಡುವ ಭೇಟಿ, ಮೊಬೈಲ್‌ಗಳ ರೀಚಾರ್ಜ್ ಹಾಗೂ ಜಾನುವಾರುಗಳ ಹಿಂಡಿಗೆ ಹೊಸ ಮೇವಿನ ತಾಣವನ್ನು ಕಂಡುಕೊಳ್ಳುವುದು ಕ್ಲಿಷ್ಟಕರವಷ್ಟೇ ಅಲ್ಲ, ಅಸಾಧ್ಯವಾಗುತ್ತಿದೆ.

Chenakonda Balasami (left), his brother Chenakonda Tirupatiah (right) and other herdsmen have been on the move since November, in search of fodder for the animals – that search cannot stop, neither can they move during the lockdown, nor can they return home
PHOTO • Harinath Rao Nagulavancha
Chenakonda Balasami (left), his brother Chenakonda Tirupatiah (right) and other herdsmen have been on the move since November, in search of fodder for the animals – that search cannot stop, neither can they move during the lockdown, nor can they return home
PHOTO • Harinath Rao Nagulavancha

ಚೆನಕೊಂಡ ಬಾಲಾಸಾಮಿ (ಎಡಕ್ಕೆ), ಅವರ ಸಹೋದರ ಚೆನಕೊಂಡ ತಿರುಪತಯ್ಯ (ಬಲಕ್ಕೆ) ಹಾಗೂ ಇತರೆ ಪಶುಪಾಲಕರು, ಜಾನುವಾರುಗಳಿಗೆ ಮೇವನ್ನು ಹುಡುಕುತ್ತಾ, ನವೆಂಬರ್‌ನಿಂದಲೂ ತಮ್ಮ ಪಯಣವನ್ನು ಮುಂದುವರಿಸುತ್ತಲೇ ಇದ್ದಾರೆ. ಈ ಹುಡುಕಾಟವು ನಿಲ್ಲುವುದಿಲ್ಲ. ಲಾಕ್‌ಡೌನ್‌ ಸಮಯದಲ್ಲಿ ಈ ಪಯಣವು ಸಾಧ್ಯವಾಗುತ್ತಿಲ್ಲವಷ್ಟೇ ಅಲ್ಲ, ಅವರು ಮನೆಗೆ ಮರಳುವುದೂ ದುಸ್ಸಾಧ್ಯವೆನಿಸಿದೆ.

“ಹಳ್ಳಿಯಲ್ಲಿರುವವರು ಇದನ್ನು ನಿಭಾಯಿಸಬಹುದು (ಪ್ರತ್ಯೇಕವಾಗಿರುವವರು). ನಮ್ಮಂತೆ ಸುತ್ತಾಟದಲ್ಲಿರುವವರು ಇಂತಹ ಪರಿಸ್ಥಿತಿಯನ್ನು ನಿಭಾಯಿಸುವುದಾದರೂ ಹೇಗೆ? ಎನ್ನುತ್ತಾರೆ ಬಹುಶಃ 40ರ ಅಂಚಿನಲ್ಲಿರುವ ಬಾಲಾಸಾಮಿ.”

“ಹಳ್ಳಿಯಲ್ಲಿ ತರಕಾರಿಗಳನ್ನು ಖರೀದಿಸಲು ನಮಗೆ ಅವಕಾಶವೀಯುತ್ತಿಲ್ಲ” ಎನ್ನುತ್ತಾರೆ ಮತ್ತೊಬ್ಬ ಪಶುಪಾಲಕರಾದ ಬಾಲಾಸಾಮಿಯ ಸಹೋದರ, ಚೆನಕೊಂಡ ತಿರುಪತಯ್ಯ.

ಅದೃಷ್ಟವಶಾತ್‌, ಅವರ ಜಾನುವಾರುಗಳು ಬೀಡುಬಿಟ್ಟು, ಮೇಯಲು ತೊಡಗಿರುವ ಭೂಮಿಯ ಮಾಲೀಕರು ಅವರಿಗೆ ಅಕ್ಕಿ, ಬೇಳೆ ಮತ್ತು ಕೆಲವು ತರಕಾರಿಗಳನ್ನು ನೀಡಿ ನೆರವಾಗುತ್ತಿದ್ದಾರೆ.

ಆದರೆ ಅವರು ಶೀಘ್ರದಲ್ಲೇ ಮತ್ತೊಂದು ಮೇವಿನ ತಾಣವನ್ನು ಹುಡುಕಬೇಕು. “ನಾಲ್ಕು ದಿನಗಳ ಹಿಂದೆ ನಾವಿಲ್ಲಿಗೆ ಬಂದೆವು. ಇಲ್ಲಿ ಹೆಚ್ಚಿನ ಮೇವು ದೊರೆಯುತ್ತಿಲ್ಲ. ಹೊಸ ಜಾಗವನ್ನು ನಾವು ಹುಡುಕಬೇಕಿದೆ” ಎಂದರು ತಿರುಪತಯ್ಯ.

ಪಶುಪಾಲಕರ ಕಾಲ್ನಡಿಗೆಯ ದೀರ್ಘ ಪ್ರಯಾಣವು ಸದಾ ತೊಡಕಿನದಾಗಿದ್ದು, ಈಗ ಅದು ಮತ್ತಷ್ಟು ತ್ರಾಸದಾಯಕವಾಗಿದೆ. ಸೂಕ್ತ ಮೇವಿನ ತಾಣವನ್ನು ಅರಸುತ್ತಾ ಅವರು ಹಲವಾರು ಕಿ.ಮೀ. ನಡೆದು, ನಂತರದಲ್ಲಿ ಭೂಮಾಲೀಕನೊಂದಿಗೆ ವ್ಯವಹಾರವನ್ನು ಕುದುರಿಸಬೇಕಾಗುತ್ತದೆ. ರೈತರು ತಮ್ಮ ಸ್ವಂತ ಮೇಕೆ ಹಾಗೂ ಕುರಿಗಳಿಗೆ ಮೀಸಲಿಟ್ಟಿರುವ ಸೀಮಿತ ಬಯಲು ಪ್ರದೇಶಗಳಲ್ಲಿ ಈ ಕೆಲಸ ಮತ್ತಷ್ಟು ಕಠಿಣ. ಈಗ ಸಾಗಣೆ ಹಾಗೂ ಪ್ರಯಾಣದ ನಿರ್ಬಂಧಗಳಿಂದಾಗಿ, ಪಶುಪಾಲಕರ ಮೇವಿನ ಹುಡುಕಾಟವು ಹೆಚ್ಚು ಕಷ್ಟಕರವೆನಿಸಿದೆ.

Left: Avula Mallesh and the other herders are not being allowed into the village to buy vegetables. Right: Tirupatiah preparing a meal with the rice, dal and vegetables given by the owner of the land where the flock was grazing
PHOTO • Harinath Rao Nagulavancha
Left: Avula Mallesh and the other herders are not being allowed into the village to buy vegetables. Right: Tirupatiah preparing a meal with the rice, dal and vegetables given by the owner of the land where the flock was grazing
PHOTO • Harinath Rao Nagulavancha

ಎಡಕ್ಕೆ: ಅರುಲ ಮಲ್ಲೇಶ್‌ ಮತ್ತು ಇತರೆ ಪಶುಪಾಕರಿಗೆ ತರಕಾರಿಗಳನ್ನು ಖರೀದಿಸಲು ಹಳ್ಳಿಗಳೊಳಗೆ ಪ್ರವೇಶವನ್ನು ನೀಡುತ್ತಿಲ್ಲ. ಬಲಕ್ಕೆ: ಜಾನುವಾರುಗಳು ಮೇಯುತ್ತಿದ್ದ ಭೂಮಿಯ ಮಾಲೀಕರು ನೀಡಿದ ಅಕ್ಕಿ, ಬೇಳೆ ಮತ್ತು ತರಕಾರಿಗಳಲ್ಲಿ ಊಟವನ್ನು ತಯಾರಿಸುತ್ತಿರುವ ತಿರುಪತಯ್ಯ.

“ನಾವು ಬೈಕಿನಲ್ಲೂ ತೆರಳಲು ಸಾಧ್ಯವಾಗುತ್ತಿಲ್ಲ” ಎನ್ನುತ್ತಾರೆ ಬಾಲಾಸಾಮಿ. ಕೆಲಮೊಮ್ಮೆ, ಅವರ ಹಳ್ಳಿಯ ಜನರು ತಮ್ಮ ಬೈಕಿನಲ್ಲಿ ಪಶುಪಾಲಕರಿದ್ದಲ್ಲಿಗೆ ಬಂದು, ಅವರನ್ನು ವಾಪಸ್ಸು ಹಳ್ಳಿಗೆ ಸಾಗಿಸುತ್ತಾರೆ ಅಥವಾ ಮೇವಿನ ಬಯಲು ಪ್ರದೇಶಗಳನ್ನು ಹುಡುಕಲು ಕೆಲವು ಕಿ.ಮೀ.ಗಳಾದ್ಯಂತ ಕರೆದೊಯ್ಯುತ್ತಾರೆ. “ತಮ್ಮ ಮೊಬೈಲ್‌ ಫೋನಿನಲ್ಲಿ ನೋಡಿದ ವೀಡಿಯೋಗಳನ್ನು ಪ್ರಸ್ತಾಪಿಸುತ್ತ, “ಅವರು (ಪೋಲೀಸರು) ಬೈಕಿನಲ್ಲಿರುವ ಜನರನ್ನು ಹಿಗ್ಗಾಮುಗ್ಗ ಹೊಡೆಯುತ್ತಿದ್ದಾರಂತೆ” ಎಂದರು ಬಾಲಾಸಾಮಿ.

ಬಾಲಾಸಾಮಿ, ಈ ವಾರ ಪಂಗಲ್‌ ಮಂಡಲ್‌ನ ಅವರ ಹಳ್ಳಿಯಾದ ಕೆಥೆಪೆಲ್ಲೆಯಲ್ಲಿನ ಮನೆಗೆ ಹೋಗುವ ಯೋಜನೆಯಲ್ಲಿದ್ದರು. ಪಶುಪಾಲಕನ ಕೆಲಸದ ನಿರ್ವಹಣೆಗಾಗಿ, ಜಾನುವಾರುಗಳ ಮಾಲೀಕರಿಂದ ಇವರು ವರ್ಷಂಪ್ರತಿ 120,000 ರೂ.ಗಳ ವೇತನವನ್ನು ಪಡೆಯುತ್ತಾರೆ. ತನ್ನ ಕುಟುಂಬವನ್ನು ಭೇಟಿಮಾಡುವುದಕ್ಕಷ್ಟೇ ಅಲ್ಲದೆ, ತಮ್ಮ ವೇತನದ ಭಾಗಶಃ ಹಣವನ್ನು ಪಡೆಯಲೂ ಸಹ ಇವರು ಮನೆಗೆ ಮರಳುವುದು ಮುಖ್ಯವೆನಿಸಿದೆ. ವಾಪಸ್ಸು ಪ್ರಯಾಣವನ್ನು ಕೈಗೊಳ್ಳಲು ಸಾಧ್ಯವಾಗದ ಬಾಲಾಸಾಮಿ ಹಾಗೂ ಇತರರ ಬಳಿ, ಶೀಘ್ರದಲ್ಲೇ ಹಣವೂ ಖಾಲಿಯಾಗುತ್ತದೆ. “ನನ್ನ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ನಾನು ಭೇಟಿಮಾಡುವುದಾದರೂ ಹೇಗೆ? ಉಪ್ಪು ಮತ್ತು ಬೇಳೆ ಕೊಳ್ಳುವುದಾದರೂ ಹೇಗೆ? ನಿಮ್ಮ ಪ್ರಕಾರ ಬಸ್ಸುಗಳ ವ್ಯವಸ್ಥೆಯು ಯಾವಾಗ ಪ್ರಾರಂಭವಾಗುತ್ತದೆ?” ಎಂದು ಪ್ರಶ್ನಿಸುತ್ತಾರೆ ಬಾಲಾಸಾಮಿ.

ಕೆಲವೊಮ್ಮೆ ಪಶುಪಾಲಕರು ಒಂದು ಅಥವಾ ಎರಡು ಮೇಕೆ ಅಥವಾ ಕುರಿಗಳನ್ನು ಮಾರಿ, ನಗದನ್ನು ಪಡೆಯುತ್ತಾರಾದರೂ, ಒಂದು ವಾರದಿಂದಲೂ ಯಾರೂ ಖರೀದಿಗಾಗಿ ಅವರಲ್ಲಿಗೆ ಬಂದಿರುವುದಿಲ್ಲ.

Left: The flock being herded away after a farm family wouldn't allow them to graze in their fields. Right: A harvested cotton field, with barely any fodder. The travel restrictions under the lockdown are making the herders’ search for fodder even more difficult
PHOTO • Harinath Rao Nagulavancha
Left: The flock being herded away after a farm family wouldn't allow them to graze in their fields. Right: A harvested cotton field, with barely any fodder. The travel restrictions under the lockdown are making the herders’ search for fodder even more difficult
PHOTO • Harinath Rao Nagulavancha

ಎಡಕ್ಕೆ: ರೈತ ಕುಟುಂಬವೊಂದು ತಮ್ಮ ಭೂಮಿಯಲ್ಲಿ, ಜಾನುವಾರುಗಳನ್ನು ಮೇಯಿಸಲು ಅವಕಾಶ ನೀಡದ ಕಾರಣ, ಅವನ್ನು ಹೊರಗೆ ಕರೆದೊಯ್ಯಲಾಗುತ್ತಿದೆ. ಬಲಕ್ಕೆ: ಕಟಾವುಮಾಡಿದ ಹತ್ತಿಯ ಹೊಲದಲ್ಲಿ, ಮೇವು ಸಾಕಷ್ಟಿಲ್ಲ. ಲಾಕ್‌ಡೌನ್‌ ಕಾರಣದಿಂದಾಗಿ ಪ್ರಯಾಣವನ್ನು ಕುರಿತ ನಿರ್ಬಂಧಗಳು ಪಶುಪಾಲಕರ ಮೇವಿನ ಹುಡುಕಾಟವನ್ನು ಮತ್ತಷ್ಟು ತ್ರಾಸದಾಯಕವಾಗಿಸಿವೆ.

ಸಾಮಾನ್ಯವಾಗಿ, ಪಶುಪಾಲಕರು ತಮ್ಮ ಹಳ್ಳಿಗೆ ವಾಪಸ್ಸಾಗುವ ಮೊದಲು, ಅವರು ಈಗ ಬೀಡುಬಿಟ್ಟಿರುವ ಕೊಪ್ಪೊಲೆ ಹಳ್ಳಿಯಿಂದ ಸುಮಾರು 60 ಕಿ.ಮೀ. ದೂರದ ಮಿರ್ಯಲಗುಡ ಊರನ್ನು ತಲುಪುತ್ತಾರೆ. ಊರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭತ್ತದ ಕಟಾವಿನ ಅವಧಿಯ ಏಪ್ರಿಲ್‌ನಲ್ಲಿ ಸಾಕಷ್ಟು ಮೇವು ದೊರೆಯುತ್ತದೆ. ಪ್ರಯಾಣದ ನಿರ್ಬಂಧಗಳು ಮತ್ತು ಆಹಾರವು ಲಭ್ಯವಾಗದ ಕಾರಣ, ಪಶುಪಾಲಕರಿಗೆ ತಮ್ಮ ಪ್ರಯಾಣದ ಹಾದಿಯಲ್ಲಿನ ಕೊನೆಯ ತಂಗುದಾಣವನ್ನು ತಲುಪುವ ಭರವಸೆಯಿಲ್ಲವಾಗಿದೆ.

ಜಾನುವಾರುಗಳಿಗೆ ಮೇವನ್ನು ಒದಗಿಸಬೇಕಿರುವುದರಿಂದ, ಮೇವಿನ ಹುಡುಕಾಟವನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಜೂನ್‌ನಲ್ಲಿ ಮಳೆಗಾಲವು ಪ್ರಾರಂಭವಾಗುವ ಮೊದಲು ನಮ್ಮ ಹಳ್ಳಿಗೆ ತಲುಪುವುದು ಸಹ ಸೂಕ್ತವಲ್ಲ. ಏಕೆಂದರೆ, ಅಲ್ಲಿ ಜಾನುವಾರುಗಳ ಮೇವುಮಾಳಗಳ ಸಂಖ್ಯೆ ಕಡಿಮೆ. “ನಮ್ಮ ಪ್ರದೇಶದಲ್ಲಿ ಅನೇಕ ಬೆಟ್ಟಗುಡ್ಡಗಳಿವೆ (ಅವು, ಅಕ್ಟೋಬರ್‌ ಕೊನೆಯ ವೇಳೆಗೆ ಒಣಗಿಹೋಗುತ್ತವೆ). ನಮ್ಮ ಹಳ್ಳಿಯಲ್ಲಿ ಅತ್ಯಂತ ಹೆಚ್ಚಿನ ಅಂದರೆ, ಸುಮಾರು 20,000 ಮೇಕೆ ಹಾಗೂ ಕುರಿಗಳಿದ್ದು, ನಾವು ಈ ಪ್ರಯಾಣವನ್ನು ತಪ್ಪಿಸುವಂತಿಲ್ಲ” ಎನ್ನುತ್ತಾರೆ ತಿರುಪತಯ್ಯ.

ಬಾಲಾಸಾಮಿ, ತಾವು ಕ್ಷೇಮದಿಂದಿರುವ ಬಗ್ಗೆ ತಮ್ಮ ಪರಿವಾರಕ್ಕೆ ತಿಳಿಸಲು ಹರಸಾಹಸಪಡುತ್ತಿದ್ದಾರೆ. “ಅವರು ಫೋನುಗಳನ್ನೂ ನಿಲ್ಲಿಸುತ್ತಾರೆಯೇ? ಆಗ, ನಮಗೆ ಜನರು ಸತ್ತಿರುವರೋ ಬದುಕಿರುವರೋ ಎಂಬ ಮಾಹಿತಿಯೂ ತಿಳಿಯುವುದಿಲ್ಲ. ಮತ್ತೆ ಮೂರು ತಿಂಗಳವರೆಗೆ ಇದು (ಲಾಕ್‌ಡೌನ್‌) ಮುಂದುವರಿಯುತ್ತದೆಂದು ಜನರು ಹೇಳುತ್ತಿದ್ದಾರೆ. ಹಾಗಾದಲ್ಲಿ, ಈ ಖಾಯಿಲೆಗಿಂತಲೂ ಲಾಕ್‌ಡೌನ್‌ನಿಂದಾಗಿಯೇ ಹೆಚ್ಚಿನ ಜನರು ಸಾವಿಗೀಡಾಗುತ್ತಾರೆ” ಎಂದರು ತಿರುಪತಯ್ಯ.

ಅನುವಾದ : ಶೈಲಜ ಜಿ . ಪಿ .

Harinath Rao Nagulavancha

ہری ناتھ راؤ ناگُل ونچا لیموں کے ایک کسان اور نلگونڈہ، تلنگانہ میں مقیم ایک آزاد صحافی ہیں۔

کے ذریعہ دیگر اسٹوریز Harinath Rao Nagulavancha
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

کے ذریعہ دیگر اسٹوریز Shailaja G. P.