ಮಾನ್ಯ ಭಾರತದ ಮುಖ್ಯ ನ್ಯಾಯಮೂರ್ತಿಗಳೇ,

ಮೊದಲಿಗೆ, “ದುರದೃಷ್ಟವಶಾತ್‌ ತನಿಖಾ ಪತ್ರಿಕೋದ್ಯಮದ ಪರಿಕಲ್ಪನೆಯು ಮಾಧ್ಯಮದ ಕ್ಯಾನ್ವಾಸಿನಿಂದ ಅಳಿಸಿ ಹೋಗುತ್ತಿದೆ… ನಾವು ಚಿಕ್ಕವರಿದ್ದಾಗ, ಪತ್ರಿಕೆಗಳು ಹೊರಗೆಳೆಯಬಹುದಾದ ದೊಡ್ಡ ದೊಡ್ಡ ಹಗರಣಗಳ ಸುದ್ದಿಗೆ ಕಾಯುತ್ತಿದ್ದೆವು. ಆಗಿನ ಪತ್ರಿಕೆಗಳು ಈ ವಿಷಯದಲ್ಲಿ ನಮ್ಮನ್ನು ನಿರಾಶೆ ಮಾಡುತ್ತಿರಲಿಲ್ಲ.” ಎನ್ನುವ ನಿಮ್ಮ ತೀಕ್ಷ್ಣ ಗ್ರಹಿಕೆಗೆ ಧನ್ಯವಾದಗಳು.

ಇತ್ತೀಚಿನ ದಿನಗಳಲ್ಲಿ ಮಾಧ್ಯಮದ ಕುರಿತು ಸತ್ಯವನ್ನು ಹೇಳುವುದು ಅಪರೂಪವಾಗಿದೆ. ನಿಮ್ಮ ಹಳೆಯ ಭ್ರಾತೃತ್ವವನ್ನು ಸಂಕ್ಷಿಪ್ತವಾಗಿ ನೆನಪಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನೀವು 1979ರಲ್ಲಿ ಈನಾಡುವಿಗೆ ಸೇರಿದ ಕೆಲವೇ ತಿಂಗಳುಗಳಲ್ಲಿ ನಾನು ಕೂಡಾ ಪತ್ರಿಕೋದ್ಯಮ ಸೇರಿಕೊಂಡೆ.

ನೀವು ನಿಮ್ಮ ಭಾಷಣದಲ್ಲಿ ನೆನಪಿಸಿಕೊಂಡಿರುವ ಹಾಗೆ ನಾವು ಆ ರೋಮಾಂಚಕ ದಿನಗಳಲ್ಲಿ ನಾವು “ಇಂದು ಯಾವ ಹಗರಣ ಹೊರಬಂದಿರಬಹುದೆನ್ನುವ ಕುತೂಹಲದೊಂದಿಗೆ ಬೆಳಗನ್ನು ಬರಮಾಡಿಕೊಳ್ಳುತ್ತಿದ್ದೆವು.” ಆದರೆ ಇಂದು ಅಂತಹ ದೊಡ್ಡ ದೊಡ್ಡ ಹಗರಣಗಳನ್ನು ಬಯಲಿಗೆಳೆಯುವ ಪತ್ರಕರ್ತರನ್ನೇ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ನಂತಹ ಕಠಿಣ ಕಾನೂನುಗಳ ಅಡಿಯಲ್ಲಿ ಜೈಲಿಗೆ ಹಾಕಲಾದ ಸುದ್ದಿಗಳೊಡನೆ ಬೆಳಗನ್ನು ಎದುರಿಸುತ್ತಿದ್ದೇವೆ. ಸರ್. ಅಥವಾ ನೀವು ಇತ್ತೀಚೆಗೆ ಕಟುವಾಗಿ ಟೀಕಿಸಿರುವ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ಎ) ನಂತಹ ಕಾನೂನುಗಳ ಭಯಾನಕ ದುರುಪಯೋಗವನ್ನು ಸಹ ನೋಡುತ್ತಿದ್ದೇವೆ.

ನಿಮ್ಮ ಭಾಷಣದಲ್ಲಿ ನೀವು ಹೇಳಿದಂತೆ, "ಈ ಹಿಂದೆ, ಹಗರಣಗಳು ಮತ್ತು ದುರ್ನಡತೆಯ ಬಗ್ಗೆ ಪತ್ರಿಕೆಗಳ ವರದಿಗಳು ಗಂಭೀರ ಪರಿಣಾಮಗಳಿಗೆ ಕಾರಣವಾಗುವ ಅಲೆಗಳನ್ನು ಸೃಷ್ಟಿಸುವುದನ್ನು ನಾವು ನೋಡಿದ್ದೇವೆ." ಅಯ್ಯೋ, ಈ ದಿನಗಳಲ್ಲಿ ಗಂಭೀರ ಪರಿಣಾಮಗಳು ಅಂತಹ ವರದಿಗಳನ್ನು ಮಾಡುವ ಪತ್ರಕರ್ತರು ಎದುರಿಸುತ್ತಿದ್ದಾರೆ. ನೇರ ವರದಿ ಮಾಡುವವರಿಗೂ ಸಹ. ಉತ್ತರ ಪ್ರದೇಶದಲ್ಲಿ ನಡೆದ ಆ ಭಯಾನಕ ದೌರ್ಜನ್ಯದಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾದ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಲು ಹತ್ರಾಸ್ ಗೆ ಹೋಗುವಾಗ ಬಂಧಿಸಲ್ಪಟ್ಟ ಸಿದ್ದಿಕ್ ಕಪ್ಪನ್ ಈಗ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾರೆ , ಜಾಮೀನು ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಅವರ ಪ್ರಕರಣ ವು ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಪುಟಿಯುವುದನ್ನು ನೋಡುತ್ತಾ ಜೈಲಿನಲ್ಲಿ ಕುಳಿತಿದ್ದಾರೆ, ಅತ್ತ ಕಪ್ಪನ್ ಆರೋಗ್ಯವು ಹದಗೆಡುತ್ತಲೇ ಸಾಗುತ್ತಿದೆ.

ಉದಾಹರಣೆಗಳನ್ನು ನೋಡುವಾಗ ಖಂಡಿತವಾಗಿಯೂ – ತನಿಖಾ ಮತ್ತು ಇತರ ಮಾದರಿಯ – ಪತ್ರಿಕೋದ್ಯಮವೂ ಇಲ್ಲವಾಗಲಿದೆ.

ನ್ಯಾಯಮೂರ್ತಿ ರಮಣ ಅವರೇ, ಹಿಂದಿನ ಹಗರಣ ಮತ್ತು ಹಗರಣಗಳ ಹೊರಗೆಡವುವಿಕೆಗೆ ಹೋಲಿಸಿದರೆ, ನಿಮಗೆ "ಇತ್ತೀಚಿನ ವರ್ಷಗಳಲ್ಲಿ ಅಂತಹ ದೊಡ್ಡ ವರದಿಗಳು ನೆನಪಿಗೆ ಬರುವುದಿಲ್ಲ" ಎಂದು ನೀವು ಸರಿಯಾಗಿಯೇ ಹೇಳುತ್ತೀರಿ. ನಮ್ಮ ತೋಟದಲ್ಲಿನ ಎಲ್ಲ ಹೂಗಳೂ ನಮಗೆ ಗುಲಾಬಿಯಂತೆಯೇ ತೋರುತ್ತದೆ. ನಿಮ್ಮ ತೋಟದಲ್ಲಿರುವ ಹೂವುಗಳಾವುವು ಎಂದು ತೀರ್ಮಾನಿಸುವ ಹಕ್ಕನ್ನು ನಾನು ನಿಮಗೇ ಬಿಡುತ್ತೇನೆ."

ಕಾನೂನು ಮತ್ತು ಮಾಧ್ಯಮಗಳೆರಡರ ಬಗ್ಗೆ ನಿಮ್ಮ ಆಳವಾದ ಜ್ಞಾನ ಮತ್ತು ನೀವು ಭಾರತೀಯ ಸಮಾಜದ ತೀಕ್ಷ್ಣ ವೀಕ್ಷಕರಾಗಿರುವರಿಂದಾಗಿ- ಸರ್, ನೀವು ಇನ್ನೂ ಸ್ವಲ್ಪ ಮುಂದೆ ಹೋಗಿ ಕೇವಲ ತನಿಖಾ ಮಾತ್ರವಲ್ಲ, ಹೆಚ್ಚಿನ ಭಾರತೀಯ ಪತ್ರಿಕೋದ್ಯಮವನ್ನು ಮುಳುಗಿಸಿದ ಅಂಶಗಳನ್ನು ಸಹ ನೀವು ನೋಡಬೇಕೆಂದು ನಾನು ಬಯಸುತ್ತೇನೆ. ಇದಕ್ಕೆ ಕಾರಣವೇನೆಂದು ನಮ್ಮದೇ ಸ್ವಂತ ತೀರ್ಮಾನಗಳಿಗೆ ಬರಲು ನೀವು ನಮ್ಮನ್ನು ಆಹ್ವಾನಿಸಿರುವುದರಿಂದ, ನಿಮ್ಮ ಪರಿಗಣನೆಗೆ ನಾನು ಕಂಡುಕೊಂಡ ಮೂರು ಕಾರಣಗಳನ್ನು ನೀಡಬಹುದೇ?

ಮೊದಲನೆಯದಾಗಿ, ಮಾಧ್ಯಮ ಮಾಲೀಕತ್ವದ ರಚನಾತ್ಮಕ ವಾಸ್ತವಗಳು ಬೃಹತ್ ಲಾಭದ ಬೆನ್ನುಬಿದ್ದಿರುವ ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಕೇಂದ್ರೀಕೃತವಾಗಿವೆ.

ಎರಡನೆಯದಾಗಿ, ಸ್ವತಂತ್ರ ಪತ್ರಿಕೋದ್ಯಮದ ಮೇಲೆ ಪ್ರಭುತ್ವದ ಆಕ್ರಮಣ ಮತ್ತು ನಿರ್ದಯ ದಬ್ಬಾಳಿಕೆಯ ಅಭೂತಪೂರ್ವ ಮಟ್ಟಗಳು.

ಮೂರನೆಯದಾಗಿ, ನೈತಿಕತೆಯ ಬೇರು ಕೊಳೆಯುತ್ತಿರುವುದು ಮತ್ತು ಹಲವಾರು ಹಿರಿಯ ವೃತ್ತಿಪರರು ಪ್ರಭುತ್ವದ ಶೀಘ್ರಲಿಪಿಗಾರರಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದಾರೆ.

ಸುದ್ದಿಗಾರಿಕೆಯ ಕಸುಬುದಾರಿಕೆಯನ್ನು ಕಲಿಸುವವನಾಗಿ, ನಾನೂ ಈಗ ನನ್ನ ವಿದ್ಯಾರ್ಥಿಗಳನ್ನು ನೀವು ಸ್ಟೆನೋಗ್ರಾಫರ್‌ ಆಗಲು ಬಯಸುತ್ತೀರೋ, ಪತ್ರಕರ್ತರಾಗಲು ಬಯಸುತ್ತೀರೋ? ಎನ್ನುವುದನ್ನು ಕೇಳಲು ಮರೆಯುವುದಿಲ್ಲ.

ಸುಮಾರು 30 ವರ್ಷಗಳ ಕಾಲ ನಾನು ಭಾರತೀಯ ಮಾಧ್ಯಮಗಳು ರಾಜಕೀಯವಾಗಿ ಸ್ವತಂತ್ರವಾಗಿವೆ ಆದರೆ ಲಾಭದಾಸೆಯ ಸೆರೆವಾಸದಲ್ಲಿವೆ ಎಂದು ವಾದಿಸಿದ್ದೆ. ಇಂದು ಕೂಡಾ ಅವು ಲಾಭದಾಸೆಯ ಸೆರೆಮನೆಯಲ್ಲಿಉಳಿದಿವೆ, ಆದರೆ ಅವುಗಳಲ್ಲಿನ ಕೆಲವು ಸ್ವತಂತ್ರ ಧ್ವನಿಗಳು ಇಂದಿನ ದಿನಗಳಲ್ಲಿ ರಾಜಕೀಯವಾಗಿ ಹೆಚ್ಚು ಹೆಚ್ಚು ಸೆರೆವಾಸಕ್ಕೆ ಒಳಗಾಗುತ್ತಿವೆ.

ಮಾಧ್ಯಮ ಸ್ವಾತಂತ್ರ್ಯದ ಹೀನಾಯ ಸ್ಥಿತಿಯ ಬಗ್ಗೆ ಮಾಧ್ಯಮಗಳಲ್ಲಿ ಕಡಿಮೆ ಚರ್ಚೆಯಾಗುತ್ತಿರುವುದು ಗಮನಿಸಬೇಕಾದ ಸಂಗತಿ. ನಾಲ್ವರು ಪ್ರಮುಖ ಬುದ್ಧಿಜೀವಿಗಳು, ಅವರೆಲ್ಲರೂ ಪತ್ರಕರ್ತರಾಗಿದ್ದರು, ಕಳೆದ ಕೆಲವು ವರ್ಷಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ. ಅವರಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರು ಪೂರ್ಣಾವಧಿ ಮಾಧ್ಯಮದ ವ್ಯಕ್ತಿಯಾಗಿದ್ದರು. (ಹಾಗೆಯೇ, ರೈಸಿಂಗ್ ಕಾಶ್ಮೀರ ಪತ್ರಿಕೆಯ ಸಂಪಾದಕಿ ಸುಜಾತಾ ಬುಖಾರಿಯವರನ್ನೂ ಗುಂಡಿಕ್ಕಿ ಕೊಲ್ಲಲಾಯಿತು). ಆದರೆ ಉಳಿದ ಮೂವರು ಮಾಧ್ಯಮಗಳಲ್ಲಿ ಖಾಯಂ ಬರಹಗಾರರು ಮತ್ತು ಅಂಕಣಕಾರರಾಗಿದ್ದರು. ನರೇಂದ್ರ ದಾಬೋಲ್ಕರ್ ಅವರು ಸುಮಾರು 25 ವರ್ಷಗಳಿಂದ ಮೂಢನಂಬಿಕೆ ವಿರುದ್ಧ ಹೋರಾಡುತ್ತಿರುವ ಪತ್ರಿಕೆಯ ಸಂಸ್ಥಾಪಕ ಮತ್ತು ಸಂಪಾದಕರಾಗಿದ್ದರು. ಗೋವಿಂದ ಪನ್ಶಾರೆ ಮತ್ತು ಎಂಎಂ ಎಂ ಕಲಬುರ್ಗಿ ಹಿರಿಯ ಲೇಖಕರು ಮತ್ತು ಅಂಕಣಕಾರರು.

ಈ ನಾಲ್ವರಲ್ಲಿ ಒಂದು ಸಮಾನ ಅಂಶವಿತ್ತು: ಅವರೆಲ್ಲರೂ ವಿಚಾರವಾದಿಗಳಾಗಿದ್ದರು ಮತ್ತು ಭಾರತೀಯ ಭಾಷೆಯಲ್ಲಿ ಬರೆಯುವ ಪತ್ರಕರ್ತರಾಗಿದ್ದರು. ಇದುವೇ ಅವರಿಗೆ ಕೊಲೆಗಾರರ ಬೆದರಿಕೆ ಹೆಚ್ಚಾಗಲು ಕಾರಣವಾದ ವಿಷಯವೂ ಹೌದು. ಈ ಹತ್ಯೆಗಳನ್ನು ಸರ್ಕಾರಕ್ಕೆ ಸೇರದ ಜನರು ನಡೆಸಿದ್ದು, ಅವರು ಉನ್ನತ ಮಟ್ಟದ ಸರ್ಕಾರಿ ಸವಲತ್ತುಗಳನ್ನು ಅನುಭವಿಸುತ್ತಿದ್ದರು. ಈ ಪಟ್ಟಿಯು ಹಲವಾರು ಇತರ ಸ್ವತಂತ್ರ ಪತ್ರಕರ್ತರ ಹೆಸರನ್ನು ಸಹ ಒಳಗೊಂಡಿದೆ.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮಾಧ್ಯಮದ ಸ್ವಾತಂತ್ರ್ಯ ಅತ್ಯಂತ ಕೆಳಮಟ್ಟದಲ್ಲಿದೆ ಎಂಬ ವಾಸ್ತವವನ್ನು ನ್ಯಾಯಾಂಗವು ಎದುರಿಸಿದರೆ, ಬಹುಶಃ ಪತ್ರಿಕೋದ್ಯಮದ ಅತ್ಯಂತ ಶೋಚನೀಯ ಮತ್ತು ಖಿನ್ನತೆಯ ಸ್ಥಿತಿಯನ್ನು ಸ್ವಲ್ಪ ಸುಧಾರಿಸಬಹುದು. ಸರಕಾರಗಳ ಆಧುನಿಕ ತಾಂತ್ರಿಕ ಸ್ಥಿತಿಯ ದಮನಕಾರಿ ಸಾಮರ್ಥ್ಯಗಳು - ನೀವು ನಿಸ್ಸಂದೇಹವಾಗಿ ಪೆಗಾಸಸ್ ಪ್ರಕರಣದ ವಿಚಾರಣೆಯಲ್ಲಿ ನೋಡಿದಂತೆ - ಬಿಕ್ಕಟ್ಟಿನ ದುಃಸ್ವಪ್ನಗಳನ್ನು ಸಹ ಕುಬ್ಜಗೊಳಿಸುತ್ತವೆ.

ಫ್ರಾನ್ಸ್ ಮೂಲದ ರಿಪೋರ್ಟರ್ಸ್ ವಿತೌಟ್ ಬಾರ್ಡರ್ಸ್ 2020ರಲ್ಲಿ ಹೊರಡಿಸಿದ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 142ನೇ ಸ್ಥಾನಕ್ಕೆ ಕುಸಿಯಿತು .

ಈ ಸರ್ಕಾರದ ಮಾಧ್ಯಮ ಸ್ವಾತಂತ್ರ್ಯದ ಬಗೆಗಿನ ನನ್ನ ನೇರ ಅನುಭವವನ್ನು ಹೇಳುತ್ತೇನೆ. ಅಪಮಾನಕರ 142ನೇ ರ‍್ಯಾಂಕ್‌ನಿಂದ ಕೆರಳಿದ ಕೇಂದ್ರ ಸಂಪುಟ ಕಾರ್ಯದರ್ಶಿ ಸೂಚ್ಯಂಕ ಮಾನಿಟರಿಂಗ್ ಸಮಿತಿ ರಚನೆಗೆ ಆದೇಶ ನೀಡಿದ್ದು, ಇದು ಭಾರತದಲ್ಲಿ ಮಾಧ್ಯಮಗಳ ಸ್ವಾತಂತ್ರ್ಯದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ನಿವಾರಿಸುತ್ತದೆ. ಸದಸ್ಯನಾಗುವಂತೆ ನನ್ನನ್ನು ಕೇಳಿದಾಗ, ʼಡಬ್ಲ್ಯೂಪಿಎಫ್ಐʼಯ ಶ್ರೇಯಾಂಕಗಳನ್ನು ತಿರಸ್ಕರಿಸುವ ಬದಲು ಭಾರತದಲ್ಲಿ ಮಾಧ್ಯಮ ಸ್ವಾತಂತ್ರ್ಯದ ನೈಜ ಸ್ಥಿತಿಯ ಮೇಲೆ ನಾವು ಹೆಚ್ಚು ಗಮನಹರಿಸುತ್ತೇವೆ ಎಂಬ ಭರವಸೆಯನ್ನು ನೀಡಿದ್ದರಿಂದ ಆಹ್ವಾನವನ್ನು ನಾನು ಒಪ್ಪಿಕೊಂಡೆ.

13 ಸದಸ್ಯರ ಸಮಿತಿಯಲ್ಲಿ 11 ಅಧಿಕಾರಿಗಳು ಮತ್ತು ಸರ್ಕಾರಿ ನಿಯಂತ್ರಿತ ಸಂಸ್ಥೆಗಳ ಸಂಶೋಧಕರು ಇದ್ದರು. ಪತ್ರಿಕಾ ಸ್ವಾತಂತ್ರ್ಯ ಸಮಿತಿಯಲ್ಲಿ ಇಬ್ಬರೇ ಇಬ್ಬರು ಪತ್ರಕರ್ತರನ್ನು ಮಾತ್ರ ಸೇರಿಸಲಾಗಿತ್ತು! ಮತ್ತು ಅವರಲ್ಲಿ ಒಬ್ಬರು ಯಾವುದೇ ಸಭೆಗಳಲ್ಲಿ ಏನನ್ನೂ ಹೇಳಲಿಲ್ಲ. ಸಭೆಗಳು ಚೆನ್ನಾಗಿ ನಡೆದವು, ಆದರೆ ಅಲ್ಲಿ ನಾನೊಬ್ಬನೇ ಮಾತನಾಡಿದ್ದು ಅಥವಾ ಪ್ರಶ್ನೆಗಳನ್ನು ಕೇಳಿದ್ದು. ನಂತರ, ಕಾರ್ಯಕಾರಿ ಸಮಿತಿಯು ಕರಡು ವರದಿಯನ್ನು ಸಿದ್ಧಪಡಿಸಿತು, ಅದರಲ್ಲಿ ಕರಡು ಎಂಬ ಪದದ ಉಪಸ್ಥಿತಿ ಎಲ್ಲಿಯೂ ಕಂಡುಬರಲಿಲ್ಲ. ಈ ವರದಿಯಲ್ಲಿ, ಸಭೆಗಳಲ್ಲಿ ಪ್ರಸ್ತಾಪಿಸಲಾದ ಗಂಭೀರ ವಿಷಯಗಳ ಬಗ್ಗೆ ಏನನ್ನೂ ಬರೆಯಲಾಗಿರಲಿಲ್ಲ. ಕೊನೆಗೆ, ಈ ವರದಿಯೊಡನೆ ನಾನು ಸ್ವತಂತ್ರ ಅಥವಾ  ಭಿನ್ನಾಭಿಪ್ರಾಯಗಳಿಂದ ಕೂಡಿದ ಪತ್ರವೊಂದನ್ನು ಬರೆದು ಸೇರಿಸಿದೆ.

ನಂತರ ಒಮ್ಮೆಲೇ, ಸಮಿತಿ ಎಲ್ಲವೂ ಮಾಯವಾಯಿತು. ಭಾರತದ ಇಬ್ಬರು ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಿಗೆ ಮಾತ್ರ ಉತ್ತರದಾಯಿತ್ವ ಹೊಂದಿರುವ ದೇಶದ ದೊಡ್ಡ ಅಧಿಕಾರಶಾಹಿಗಳ ಸೂಚನೆಯ ಮೇರೆಗೆ ರಚಿಸಲಾದ ಸಮಿತಿಯು ಕಣ್ಮರೆಯಾಯಿತು. ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಮಾಡಲಾದ ಈ ವರದಿಯ ಬಗ್ಗೆ ಆರ್ ಟಿಐ ತನಿಖೆಯಲ್ಲೂ ಪತ್ತೆಯಾಗಿಲ್ಲ! ಆದರೆ, ನನ್ನ ಬಳಿ ಆ ಕರಡು ಪ್ರತಿ ಇದೆ. ಈ ಸಮಿತಿಯ ಮುಖ್ಯ ಕಾರ್ಯ ತನಿಖಾ ಪತ್ರಿಕೋದ್ಯಮವಾಗಿರಲಿಲ್ಲ, ಪತ್ರಿಕೋದ್ಯಮದ ತನಿಖೆಯಾಗಿತ್ತು; ಭಾರತದಲ್ಲಿ ನಡೆಯುತ್ತಿರುವಂತೆ. ಮತ್ತು ನಾನು ಅಸಮ್ಮತಿ ಟಿಪ್ಪಣಿ ಬರೆದ ತಕ್ಷಣ, ವರದಿ ಸಂಪೂರ್ಣವಾಗಿ ಕಣ್ಮರೆಯಾಯಿತು.

ನಿಮ್ಮ ಭಾಷಣದಲ್ಲಿ ನೀವು ಹೇಳಿದ ರೀತಿಯ ತನಿಖಾ ಪತ್ರಿಕೋದ್ಯಮವನ್ನು ಮಾಡಲು ಬಯಸುವ ಅನೇಕ ಜನರು ಪತ್ರಿಕಾ ರಂಗದಲ್ಲಿದ್ದಾರೆ. ಅಂದರೆ, ದೊಡ್ಡ ಸಂಸ್ಥೆಗಳಿಗೆ ಸಂಬಂಧಿಸಿದ ತನಿಖಾ ಪತ್ರಿಕೋದ್ಯಮ, ಅದರಲ್ಲೂ ವಿಶೇಷವಾಗಿ ಸರ್ಕಾರದ ಹಗರಣಗಳು ಮತ್ತು ಭ್ರಷ್ಟಾಚಾರಗಳು. ಇಂದು ಇಂತಹ ಪ್ರಯತ್ನಗಳನ್ನು ಮಾಡುವ ಹೆಚ್ಚಿನ ಪತ್ರಕರ್ತರು ಎದುರಿಸುತ್ತಿರುವ ಮೊದಲ ಅಡಚಣೆಯೆಂದರೆ ಕಾರ್ಪೊರೇಟ್ ಮಾಧ್ಯಮದಲ್ಲಿ ಸ್ಥಾನಗಳನ್ನು ಹೊಂದಿರುವ ಮತ್ತು ಸರ್ಕಾರಿ ಗುತ್ತಿಗೆಗಳು ಮತ್ತು ಉನ್ನತ ಸ್ಥಾನದಲ್ಲಿರುವ ಪ್ರಬಲ ವ್ಯಕ್ತಿಗಳೊಂದಿಗೆ ಆಳವಾಗಿ ತೊಡಗಿಸಿಕೊಂಡಿರುವ ಅವರ ಮೇಲಧಿಕಾರಿಗಳು.

ಪೇಯ್ಡ್ ನ್ಯೂಸ್‌ನಿಂದ ಸಾಕಷ್ಟು ಹಣ ಗಳಿಸುವ, ಸಾರ್ವಜನಿಕ ಸಂಪನ್ಮೂಲಗಳನ್ನು ಅವ್ಯಾಹತವಾಗಿ ಬಳಸಿಕೊಳ್ಳುವ, ಸಾರ್ವಜನಿಕ ಖಾಸಗೀಕರಣದ ಸಂಸ್ಥೆಗಳು ಸಾವಿರಾರು ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಗಳಿಸುವ ದೊಡ್ಡ ಮಾಧ್ಯಮ ಕಂಪನಿಗಳ ಮಾಲೀಕರು ಮತ್ತು ಆಡಳಿತ ಪಕ್ಷಗಳ ಚುನಾವಣಾ ಪ್ರಚಾರಗಳಿಗೆ ಅದ್ದೂರಿಯಾಗಿ ಖರ್ಚು ಮಾಡುತ್ತಾರೆ. ಇವರು ಅಧಿಕಾರದಲ್ಲಿರುವ ತಮ್ಮ ಮಿತ್ರರಿಗೆ ಕಿರುಕುಳ ನೀಡಲು ಪತ್ರಕರ್ತರಿಗೆ ಅವಕಾಶ ನೀಡುವುದಿಲ್ಲ. ಒಂದು ಕಾಲದಲ್ಲಿ ಹೆಮ್ಮೆಪಡಲು ಕಾರಣವಾಗಿದ್ದ ಈ ಭಾರತೀಯ ವೃತ್ತಿಯು ಸ್ಥಿರವಾದ ಅವನತಿಗೆ ಸಾಕ್ಷಿಯಾಗಿದೆ ಮತ್ತು ಹಣ ಮಾಡುವ ಯಂತ್ರವಾಗಿ ಮಾರ್ಪಟ್ಟಿದೆ. ನಾಲ್ಕನೇ ಎಸ್ಟೇಟ್ (ನಾಲ್ಕನೇ ಸ್ಥಂಭ) ಮತ್ತು ರಿಯಲ್ ಎಸ್ಟೇಟ್ ನಡುವಿನ ವ್ಯತ್ಯಾಸವನ್ನು ಇಲ್ಲವಾಗಿಸಲಾಗಿದೆ. ಈಗ ಅಧಿಕಾರದಲ್ಲಿರುವವರ ಬಗ್ಗೆ ಸತ್ಯವನ್ನು ಹೇಳುವ ಇಂತಹ ಪತ್ರಿಕೋದ್ಯಮದ ಹಸಿವು ಅವರಿಗೆ ಇಲ್ಲ.

ಸರ್, ಈ ಸಾಂಕ್ರಾಮಿಕ ಪಿಡುಗಿನ ಸಮಯದಲ್ಲಿ ಈ ದೇಶದ ಜನರಿಗೆ ಎಂದಿಗೂ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಬೇಕಾಗಿರಲಿಲ್ಲ ಎಂದು ನಾನು ನಿಮಗೆ ಹೇಳಿದರೆ ನೀವು ನನ್ನ ಮಾತನ್ನು ಒಪ್ಪುತ್ತೀರರೆಂದು ನಾನು ಭಾವಿಸುತ್ತೇನೆ. ಪ್ರಬಲ ಮಾಧ್ಯಮ ಸಂಸ್ಥೆಗಳ ಮಾಲೀಕರು ತಮ್ಮ ಓದುಗರು ಮತ್ತು ವೀಕ್ಷಕರು ಸೇರಿದಂತೆ ಜನಸಾಮಾನ್ಯರ ಈ ಅಗತ್ಯವನ್ನು ಹೇಗೆ ಪೂರೈಸಿದರು? 2,000-2,500 ಪತ್ರಕರ್ತರನ್ನು ಮತ್ತು ಹಲವು ಪಟ್ಟು ಹೆಚ್ಚು ಪತ್ರಕರ್ತರಲ್ಲದ ಮಾಧ್ಯಮ ವ್ಯಕ್ತಿಗಳನ್ನು ವಜಾ ಮಾಡುವ ಮೂಲಕ.

PHOTO • Courtesy: TMMK
PHOTO • Shraddha Agarwal

ಕೋವಿಡ್-19 ದುರಾಡಳಿತದ ಕಥೆಗಳನ್ನು ಇಂದು ಮಾಧ್ಯಮದ ದೊಡ್ಡ ವಿಭಾಗಗಳು ನೆನಪಿಸಿಕೊಳ್ಳುವುದಿಲ್ಲ ಮತ್ತು ಕೋವಿಡ್-19 ಪಿಡುಗಿನ ವಿರುದ್ಧ ಹೋರಾಡುವಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ ಸರ್ಕಾರ ಈ ವಿಷಯದಲ್ಲಿ ಜಗತ್ತನ್ನೂ ಮುನ್ನಡೆಸಿದೆ ಎಂದು ಹೇಳುತ್ತದೆ

ಸಾರ್ವಜನಿಕ ಸೇವೆಯೆನ್ನುವ ಆದರ್ಶ ಇಂದು ಸಂಪೂರ್ಣ ಕಣ್ಮರೆಯಾಗಿದೆ. 2020ರ ಆರ್ಥಿಕ ಕುಸಿತವು ಮಾಧ್ಯಮವನ್ನು ಸರ್ಕಾರಿ ಜಾಹೀರಾತುಗಳ ಮೇಲೆ ಎಂದಿಗಿಂತಲೂ ಹೆಚ್ಚು ಅವಲಂಬಿತವಾಗಿಸಿದೆ. ಆದ್ದರಿಂದ, ಇಂದು ನಾವು ಮಾಧ್ಯಮದ ದೊಡ್ಡ ವಿಭಾಗವನ್ನು ನೋಡಿದರೆ, ಅದು ಕೋವಿಡ್‌ -19ರ ದುರುಪಯೋಗದ ಕಥೆಗಳನ್ನು ಮರೆತಿದೆ ಮತ್ತು ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಡುವಲ್ಲಿ ಅದು ಅತ್ಯುತ್ತಮ ಕೆಲಸ ಮಾಡಿದೆ ಎಂದು ಭಾರತ ಸರ್ಕಾರದ ಕುರಿತಾದ ಪುರಾಣಗಳನ್ನು ಮಾತ್ರ ತೋರಿಸುತ್ತದೆ. ಪ್ರತಿಯೊಂದು ವಿಷಯದಲ್ಲೂ ಭಾರತ ವಿಶ್ವ ನಾಯಕ ಎಂದು ಹೇಳಿಕೊಳ್ಳುತ್ತದೆ.

ಈ ಸಮಯದಲ್ಲಿ ನಾವು 'ಪಿಎಂ ಕೇರ್ಸ್ ಫಂಡ್' ರಚನೆಯನ್ನು ನೋಡಿದ್ದೇವೆ, ಅದರಲ್ಲಿ ಯಾವುದೇ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗಿಲ್ಲ. ಅದರ ಅದು ಹೆಸರು ಸ್ವತಃ 'ಪ್ರಧಾನಿ' ಪದವನ್ನು ಹೊಂದಿದೆ, ಮತ್ತು ಅದರ ವೆಬ್‌ಸೈಟ್ ಅವರ ಮುಖವನ್ನು ಸಹ ತೋರಿಸುತ್ತದೆ, ಆದರೆ ಇದು 'ಸಾರ್ವಜನಿಕ ಪ್ರಾಧಿಕಾರ' ಅಲ್ಲ ಮತ್ತು ಆರ್‌ಟಿಐ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಹೇಳಲಾಗುತ್ತದೆ; ಮತ್ತು ಸಹಜವಾಗಿ ಇದು "ಭಾರತ ಸರ್ಕಾರದ ನಿಧಿ" ಅಲ್ಲ. ಈ ನಿಧಿಯು ಯಾವುದೇ ಸರ್ಕಾರದ ಯಾವುದೇ ಘಟಕಕ್ಕೆ ಸಾಂಸ್ಥಿಕ ಆಡಿಟ್ ವರದಿಯನ್ನು ನೀಡಲು ಬಾಧ್ಯತೆ ಹೊಂದಿಲ್ಲ.

ಸರ್, ಈ ದೇಶದ ಸ್ವತಂತ್ರ ಇತಿಹಾಸದಲ್ಲಿ ಅತ್ಯಂತ ಪ್ರತಿಗಾಮಿ ಕಾರ್ಮಿಕ ಕಾನೂನುಗಳನ್ನು ಮೊದಲು ರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆಗಳ ರೂಪದಲ್ಲಿ, ನಂತರ ಕೇಂದ್ರ ಸರ್ಕಾರವು 'ಕೋಡ್'ಗಳ ರೂಪದಲ್ಲಿ ಘೋಷಿಸಿದ ಅವಧಿಯಿದು . ಈ ಕೆಲವು ಸುಗ್ರೀವಾಜ್ಞೆಯ ಘೋಷಣೆಗಳು ದೇಶದ ಕಾರ್ಮಿಕರನ್ನು ಒಂದು ಶತಮಾನದಷ್ಟು ಹಿಂದಕ್ಕೆ ತಳ್ಳಿದವು , ಅವರು ಕಾರ್ಮಿಕ ಹಕ್ಕುಗಳ ನಿಯಮಗಳನ್ನು ಉಲ್ಲಂಘಿಸಿ ದಿನಕ್ಕೆ ಎಂಟು ಗಂಟೆಗಳ ಕಾನೂನನ್ನು ಅಮಾನತುಗೊಳಿಸಿದರು. ಅನುಮಾನವೇ ಬೇಡ, ಕಾರ್ಪೊರೇಟ್-ಮಾಲೀಕತ್ವದ ಮಾಧ್ಯಮದಲ್ಲಿ, ಅನೇಕ ಉದ್ಯೋಗಿಗಳು ಉದ್ಯೋಗದಲ್ಲಿದ್ದಾರೆ, ಈ ಕಾನೂನುಗಳ ಆಧಾರದ ಮೇಲೆ ತನಿಖೆಗಳು ತುಂಬಾ ಕಷ್ಟಕರವಾಗಿರುತ್ತವೆ. ಮತ್ತು ಇದನ್ನು ತನಿಖೆ ಮಾಡಲು ಬಯಸಿದ ಅನೇಕ ಪತ್ರಕರ್ತರನ್ನು ಅವರ ಮಾಧ್ಯಮದ ಮುಖ್ಯಸ್ಥರು ವಜಾ ಮಾಡಿದ್ದಾರೆ.

ಸರ್, ಈ ಅನಾಹುತಗಳನ್ನು ತಡೆಯಲು ನ್ಯಾಯಾಂಗವು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾನು ನೋಡಿಲ್ಲವೆನ್ನುವ ವಿಷಯ ನನ್ನನ್ನು ಅಷ್ಟೇ ಕಾಡುತ್ತಿದೆ; ಸರ್ಕಾರದ ಭ್ರಷ್ಟಾಚಾರ, ಹೆಚ್ಚಿನ ಸಂಖ್ಯೆಯ ಪತ್ರಕರ್ತರ ಹಿಂಬಡ್ತಿ, ಕಾರ್ಮಿಕ ಹಕ್ಕುಗಳ ಉಲ್ಲಂಘನೆ ಅಥವಾ ಯಾವುದೇ ಪಾರದರ್ಶಕತೆಯನ್ನು ಅಳವಡಿಸಿಕೊಳ್ಳದೆ ಪ್ರಧಾನಿ ಹುದ್ದೆಯನ್ನು ದುರುಪಯೋಗಪಡಿಸಿಕೊಳ್ಳುವುದು, ಜನರಿಂದ ಹಣ ಸಂಗ್ರಹಿಸುವುದು ಇದೆಲ್ಲದರ ವಿರುದ್ಧ ನ್ಯಾಯಾಲವೂ ಮಾತನಾಡಿಲ್ಲ. ಮಾಧ್ಯಮದಲ್ಲಿನ ಆಂತರಿಕ ಮತ್ತು ರಚನಾತ್ಮಕ ನ್ಯೂನತೆಗಳನ್ನು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ, ಈ ಕಾರಣದಿಂದಾಗಿ ಮಾಧ್ಯಮವು ಸಂಧಾನಕಾರನಾಗಿ ಮಾರ್ಪಟ್ಟಿದೆ ಮತ್ತು ಅದು ತನಗೆ ಹಣ ನೀಡುವವರ ಪರವಾಗಿ ಕೆಲಸ ಮಾಡುವ ಘಟಕವಾಗಿದೆ. ಆದರೆ ಈ ಕೆಲವು ಪ್ರಕರಣಗಳಲ್ಲಿ ನ್ಯಾಯಾಂಗದ ಮಧ್ಯಪ್ರವೇಶದಿಂದ ಪತ್ರಕರ್ತರು ನಿಟ್ಟುಸಿರು ಬಿಡುವುದು ಖಂಡಿತವಾಗಿತ್ತು ಅಲ್ಲವೆ?

ಸ್ವತಂತ್ರ ಮಾಧ್ಯಮ ಕಚೇರಿಗಳ ಮೇಲೆ ದಾಳಿಗಳು, ಅವುಗಳ ಮಾಲೀಕರು ಮತ್ತು ಪತ್ರಕರ್ತರನ್ನು 'ಮನಿ ಲಾಂಡರಿಂಗ್ ಕ್ರಿಮಿನಲ್‌ಗಳು' ಎಂದು ಬೆದರಿಸುವುದು ಮತ್ತು ಈ ಸಂಸ್ಥೆಗಳ ಮೇಲೆ ನಿರಂತರ ಕಿರುಕುಳಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಸರ್ಕಾರದ ತೀರ್ಪನ್ನು ಅನುಸರಿಸುವ ಏಜೆನ್ಸಿಗಳಿಗೂ ಈ ಪ್ರಕರಣಗಳಲ್ಲಿ ಹೆಚ್ಚಿನವು ನ್ಯಾಯಾಲಯದಲ್ಲಿ ಸುಳ್ಳು ಎಂದು ತಿಳಿಯುತ್ತದೆ. ಆದರೆ ಆ ಸ್ವತಂತ್ರ ಮಾಧ್ಯಮ ಕಛೇರಿಗಳನ್ನು ಮತ್ತು ಅವುಗಳ ಮಾಲೀಕರನ್ನು ಬೆದರಿಸಲು ಅವರು ಈ ಪ್ರಕ್ರಿಯೆಯನ್ನು ಶಿಕ್ಷೆಯಾಗಿ ಬಳಸುತ್ತಾರೆ. ಈ ಪ್ರಕರಣಗಳು ಇತ್ಯರ್ಥವಾಗಲು ವರ್ಷಗಳೇ ಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ. ಅಲ್ಲದೆ, ವಕೀಲರ ದುಬಾರಿ ಶುಲ್ಕಗಳು ಆ ಸ್ವತಂತ್ರ ಧ್ವನಿಗಳನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ. ದೊಡ್ಡ ದೊಡ್ಡ ಮಾಧ್ಯಮ ಕಂಪನಿಗಳ ನಡುವೆ ಸ್ವತಂತ್ರ ಧ್ವನಿಯಾಗಿದ್ದ ದೈನಿಕ್ ಭಾಸ್ಕರ್ ಕೂಡ ಭೂಗತಲೋಕದ ಅಡಗುದಾಣ ಎಂಬಂತೆ ಅದರ ಮೇಲೆ ದಾಳಿ ನಡೆಸಿದ್ದರು . ಆದರೆ, ಬೇರೆ ಯಾವುದೇ ದೊಡ್ಡ ಮಾಧ್ಯಮ ಸಂಸ್ಥೆ ಈ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ.

ಸರ್, ಬಹುಶಃ ನ್ಯಾಯಾಂಗವು ಕಾನೂನಿನ ಈ ದುರುಪಯೋಗವನ್ನು ತಡೆಯಲು ಏನಾದರೂ ಮಾಡಬಹುದಲ್ಲವೆ?

PHOTO • Shraddha Agarwal
PHOTO • Parth M.N.

ಯಾವುದೇ ' ಮುಖ್ಯವಾಹಿನಿಯ' ಮಾಧ್ಯಮವು ತನ್ನ ಓದುಗರಿಗೆ ಅಥವಾ ವೀಕ್ಷಕರಿಗೆ ರೈತರು ತಮ್ಮ ಘೋಷಣೆಗಳಲ್ಲಿ ಹೆಸರಿಸುತ್ತಿರುವ ಎರಡು ಕಾರ್ಪೊರೇಟ್ ಸಂಸ್ಥೆಗಳ ಒಟ್ಟು ಸಂಪತ್ತು ಪಂಜಾಬ್ ಅಥವಾ ಹರಿಯಾಣದ ಜಿಡಿಪಿ ( ಒಟ್ಟು ರಾಜ್ಯದ ಆಂತರಿಕ ಉತ್ಪನ್ನ) ಗಿಂತ ಹೆಚ್ಚು ಎಂದು ಹೇಳುತ್ತದೆಯೇ?

ಇತ್ತೀಚೆಗೆ ರದ್ದುಪಡಿಸಿದ ಕೃಷಿ ಕಾನೂನುಗಳ ಸಮಸ್ಯೆಯಿಂದ ನ್ಯಾಯಾಂಗವು ಹಿಂದೆ ಸರಿಯಬಾರದಿತ್ತು ಎನ್ನುವುದು ನನ್ನ ಬಯಕೆಯಾಗಿತ್ತು. ನಾನು ಕಾನೂನನ್ನು ಅಧ್ಯಯನ ಮಾಡಿದವನಲ್ಲ, ಆದರೆ ಅಂತಹ ವಿವಾದಾತ್ಮಕ ಕಾನೂನುಗಳ ಸಾಂವಿಧಾನಿಕ ಸಿಂಧುತ್ವವನ್ನು ಪರಿಶೀಲಿಸುವುದು ಅತಿದೊಡ್ಡ ಸಾಂವಿಧಾನಿಕ ನ್ಯಾಯಾಲಯದ ಪ್ರಮುಖ ಕರ್ತವ್ಯ ಎನ್ನುವ ತಿಳುವಳಿಕೆ ನನಗಿದೆ. ಆದರೆ ನ್ಯಾಯಾಲವು ಒಂದು ಸಮಿತಿಯನ್ನು ಸ್ಥಾಪಿಸಿತು ಮತ್ತು ಕೃಷಿ ಕಾನೂನುಗಳಿಂದ ಉಂಟಾಗುವ ಬಿಕ್ಕಟ್ಟಿಗೆ ಪರಿಹಾರಗಳೊಂದಿಗೆ ವರದಿಯನ್ನು ಸಲ್ಲಿಸಲು ಆದೇಶಿಸಿತು – ಮತ್ತು ಈಗ ಆ ವರದಿ ಹಾಗೂ ಸಮಿತಿ ಎರಡೂ ಮರೆತುಹೋಗಿವೆ.

‘ಸಮಿತಿ ಸ್ಥಾಪನೆಗೆ ಪೂರ್ಣವಿರಾಮʼ ಎಂದು ಬಣ್ಣಿಸಲಾಗಿದ್ದ ತೀರ್ಪನ್ನು ‘ಸಮಿತಿಗೆ ಪೂರ್ಣವಿರಾಮ’ ಎಂದು ಸೇರಿಸಲಾಯಿತು.

'ಮುಖ್ಯವಾಹಿನಿ' ಮಾಧ್ಯಮಗಳಿಗೆ, ಕೃಷಿ ಕಾನೂನುಗಳ ಮೇಲಿನ ಹಿತಾಸಕ್ತಿ ಸಂಘರ್ಷವು ತುಂಬಾ ದೊಡ್ಡ ಸಂಗತಿಯಾಗಿದೆ. ಈ ಕಾನೂನುಗಳ ಹೆಚ್ಚಿನ ಪ್ರಯೋಜನವನ್ನು ಪಡೆಯಲು ಸಿದ್ಧರಾಗಿರುವ ಕಾರ್ಪೊರೇಟ್ ನಾಯಕ , ದೇಶದ ಮಾಧ್ಯಮ ಕಂಪನಿಗಳ ದೊಡ್ಡ ಮಾಲೀಕರೂ ಆಗಿದ್ದಾರೆ. ಅವರು ಮಾಲಿಕರಲ್ಲದ ಮಾಧ್ಯಮ ಕಂಪನಿಗಳಿಗೆ ದೊಡ್ಡ ಜಾಹೀರಾತುದಾರರಾಗಿದ್ದಾರೆ. ಆದ್ದರಿಂದ, ತಮ್ಮ ಸಂಪಾದಕೀಯಗಳಲ್ಲಿ 'ಮುಖ್ಯವಾಹಿನಿಯ' ಮಾಧ್ಯಮಗಳು ಕಾನೂನಿನ ಕಾಲಾಳುಗಳಂತೆ ಮತ್ತು ಪ್ರಚಾರಕರಂತೆ ವರ್ತಿಸುವುದರಲ್ಲಿ ಆಶ್ಚರ್ಯವೇನಿಲ್ಲ.

ಯಾವುದೇ 'ಮುಖ್ಯವಾಹಿನಿಯ' ಮಾಧ್ಯಮವು ತನ್ನ ಓದುಗರಿಗೆ ಅಥವಾ ವೀಕ್ಷಕರಿಗೆ ರೈತರು ತಮ್ಮ ಘೋಷಣೆಗಳಲ್ಲಿ ಹೆಸರಿಸುತ್ತಿರುವ ಎರಡು ಕಾರ್ಪೊರೇಟ್ ಸಂಸ್ಥೆಗಳ ಒಟ್ಟು ಸಂಪತ್ತು ಪಂಜಾಬ್ ಅಥವಾ ಹರಿಯಾಣದ GDP (ಒಟ್ಟು ರಾಜ್ಯದ ಆಂತರಿಕ ಉತ್ಪನ್ನ) ಗಿಂತ ಹೆಚ್ಚು ಎಂದು ಹೇಳುತ್ತದೆಯೇ? ಮತ್ತು ಫೋರ್ಬ್ಸ್ ನಿಯತಕಾಲಿಕದ ಪ್ರಕಾರ, ಅವರಲ್ಲಿ ಒಬ್ಬರು ಮಾತ್ರ ಪಂಜಾಬ್‌ನ ಜಿಎಸ್‌ಡಿಪಿಗೆ ಸಮನಾದ ಸಂಪತ್ತನ್ನು ಗಳಿಸಿದ್ದಾರೆಂದು ಹೇಳುತ್ತಾರೆಯೇ? ಈ ಮಾಹಿತಿಯು ಅವರ ಓದುಗರಿಗೆ ಉತ್ತಮ ದೃಷ್ಟಿಕೋನವನ್ನು ಹೊಂದಲು ಅವಕಾಶವನ್ನು ನೀಡುವುದಿಲ್ಲವೇ?

ಈಗ ಕೆಲವೇ ಕೆಲವು ಮಾಧ್ಯಮ ಕಂಪನಿಗಳು ನಿಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದ ಆಶಯದಂತಹ ರೀತಿಯ ತನಿಖಾ ಪತ್ರಿಕೋದ್ಯಮವನ್ನು ಮಾಡುವ ಸಾಮರ್ಥ್ಯ ಹೊಂದಿರುವ ಕೆಲವೇ ಕೆಲವು ಪತ್ರಕರ್ತರನ್ನು ಹೊಂದಿವೆ. ಲಕ್ಷಾಂತರ ಸಾಮಾನ್ಯ ಭಾರತೀಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಈಗಲೂ ವರದಿ ಮಾಡುವವರು ಕೆಲವೇ ಜನರಿದ್ದಾರೆ - ನಾವು ಅದನ್ನು ಮಾನವ ಜೀವನ ಸ್ಥಿತಿಯ ತನಿಖಾ ವರದಿಗಾರಿಕೆ ಎಂದು ಕರೆಯುತ್ತೇವೆ. ಇದನ್ನು ಕೇಂದ್ರದಲ್ಲಿ ಇಟ್ಟುಕೊಂಡು 41 ವರ್ಷಗಳ ಕಾಲ ಕೆಲಸ ಮಾಡಿದವರಲ್ಲಿ ನಾನೂ ಒಬ್ಬ.

ಜೊತೆಗೆ ಕೆಲವರು ಪತ್ರಕರ್ತರಲ್ಲದಿದ್ದರೂ, ಮಾನವ ಬದುಕಿನ ಸ್ಥಿತಿಯನ್ನು ತನಿಖೆ ಮಾಡುತ್ತಾರೆ ಮತ್ತು ಅದನ್ನು ಸುಧಾರಿಸಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಾರೆ. ಅದೇ ಲಾಭೋದ್ದೇಶವಿಲ್ಲದ ಮತ್ತು ನಾಗರಿಕ-ಸಾಮಾಜಿಕ ಸಂಸ್ಥೆಗಳ ವಿರುದ್ಧ ಭಾರತ ಸರ್ಕಾರವು ಯುದ್ಧ ಮಾಡಿದೆ. ಎಫ್.ಸಿ.ಆರ್.ಎ.ಗಳನ್ನು ರದ್ದುಗೊಳಿಸಲಾಗಿದೆ , ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ, ಖಾತೆಗಳನ್ನು ಮುಚ್ಚಲಾಗಿದೆ, ಹಣ ವರ್ಗಾವಣೆ ಆರೋಪಗಳನ್ನು ಮಾಡಲಾಗಿದೆ; ಅವರು ಧ್ವಂಸಗೊಂಡು ದಿವಾಳಿಯಾಗುವವರೆಗೆ ಅಥವಾ ಆ ಹಂತವನ್ನು ತಲುಪುವವರೆಗೆ ಇದೆಲ್ಲವನ್ನೂ ಮಾಡಲಾಗುತ್ತದೆ. ಅವರು ನಿರ್ದಿಷ್ಟವಾಗಿ ಹವಾಮಾನ ಬದಲಾವಣೆ, ಬಾಲ ಕಾರ್ಮಿಕರು, ಕೃಷಿ ಮತ್ತು ಮಾನವ ಹಕ್ಕುಗಳ ಸಮಸ್ಯೆಗಳ ಮೇಲೆ ಕೆಲಸ ಮಾಡುವ ಗುಂಪುಗಳನ್ನು ಗುರಿಯಾಗಿಸಿಕೊಂಡಿದ್ದಾರೆ.

ಸರ್,‌ ಇವೆಲ್ಲ ಕಾರಣಗಳಿಂದಲೇ ಇಂದು ನಾವು ಅಂತಹ ತಿರುವಿನ ಹಂತದಲ್ಲಿ ನಿಂತಿದ್ದೇವೆ. ಮಾಧ್ಯಮಗಳ ಸ್ಥಿತಿ ಚಿಂತಾಜನಕವಾಗಿದೆ ಆದರೆ ಅವರನ್ನು ಬೆಂಬಲಿಸುವ ಸಂಘಟನೆಗಳೂ ಇಂದು ಬೆನ್ನು ಮುರಿದುಕೊಂಡು ಬಿದ್ದಿವೆ. ನಿಮ್ಮ ಭಾಷಣದಲ್ಲಿನ ಸಂಕ್ಷಿಪ್ತವಾದ ಆದರೆ ತೀವ್ರವಾದ ಆಲೋಚನೆಗಳು ಇಂದು ನಿಮಗೆ ಈ ಪತ್ರವನ್ನು ಬರೆಯಲು ಪ್ರೇರೇಪಿಸಿತು. ಮಾಧ್ಯಮಗಳು ತನ್ನ ಕೆಲಸವನ್ನು ಉತ್ತಮವಾಗಿ ಮಾಡಬೇಕು ಎಂಬ ಬಗ್ಗೆ ನನಗೆ ಯಾವುದೇ ಬಗೆಯ ತಕರಾರಿಲ್ಲ. ಆದರೆ ಈ ಕೆಲಸದಲ್ಲಿ ಅವರಿಗೆ ಸಹಾಯ ಮಾಡಬಲ್ಲ ನ್ಯಾಯಾಂಗ ತನ್ನದೇ ಕಾರ್ಯಕ್ಷಮತೆಯನ್ನು ಸುಧಾರಿಸಿಕೊಳ್ಳಬೇಕಾಗಿದೆ, ಅಲ್ಲವೇ? ಸಿದ್ದಿಕ್ ಕಪ್ಪನ್ ಜೈಲಿನಲ್ಲಿ ಇರುವ ತನಕವೂ ಪ್ರತಿ ದಿನ ನಮ್ಮನ್ನು ಜನರು ಕೆಟ್ಟದಾಗಿಯೇ ನೋಡಲಿದ್ದಾರೆ.

ನಿಮ್ಮ ವಿಶ್ವಾಸಿ,
ಪಿ. ಸಾಯಿನಾಥ್

ಚಿತ್ರ: ಪರಿಪ್ಲಬ್ ಚಕ್ರವರ್ತಿ, ಸೌಜನ್ಯ ದಿ ವೈರ್.

ಲೇಖನವನ್ನು ಮೊದಲು ದಿ ವೈರ್ ನಲ್ಲಿ ಪ್ರಕಟಿಸಲಾಗಿತ್ತು

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru