ಅಂದು ಸೆಟ್ಟುವಿನ ಪತ್ನಿ ಅರಯಿ ಸಂಜೆ ಮನೆಗೆ ಬರುವುದು ಐದು ನಿಮಿಷ ತಡವಾಗುತ್ತಿದ್ದರೂ ಇಂದು ಸೆಟ್ಟು ಜೀವಂತವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.  ಅರಯಿ ಮನೆಗೆ ಬಂದು ತಲುಪುವಾಗ ಆತ ಕತ್ತಿಗೆ ನೇಣು ಕುಣಿಕೆಯನ್ನು ಸಿಕ್ಕಿಸಿಕೊಂಡಾಗಿತ್ತು.

“ನಾನು ಸಾವಿನ ಬಾಯಿಗೆ ಹೋಗಿಯಾಗಿತ್ತು”, ಎನ್ನುತ್ತಾರೆ ಮಧ್ಯಮ ವರ್ಗದ ರೈತ ಕೆ. ಲೇಖನ್. ಎಲ್ಲರೂ ಅವರನ್ನು ಕರೆಯುವುದು ಸೆಟ್ಟು ಎಂದೇ. ಇಂದು ಆತ ತನ್ನ ಆ ಗಂಡಾಂತರಕಾರಿ ನಿರ್ಧಾರಕ್ಕಾಗಿ ಬೇಸರ ಪಡುತ್ತಿದ್ದಾರೆ ಮತ್ತು ಆ ಯತ್ನವು ವಿಫಲಗೊಂಡದ್ದರಿಂದಾಗಿ ನಿರಾಳರಾಗಿದ್ದಾರೆ. ಅರಯಿ ಸಹಾಯಕ್ಕಾಗಿ ಮೊರೆಯಿಟ್ಟಾಗ ಅಕ್ಕಪಕ್ಕದವರು ಓಡಿಬಂದು ಸೆಟ್ಟುವನ್ನು ಕುಣಿಕೆಯಿಂದ ತಪ್ಪಿಸಿ ನೆಲದಲ್ಲಿ ಮಲಗಿಸಿದ್ದರು. ಆತಂಕದ ಗಳಿಗೆಯು ಕಳೆದುಹೋಗಿತ್ತು.

ಅದು ನವೆಂಬರ್ 6, 2017.  ತನ್ನ 50 ರ ಹರೆಯದಲ್ಲಿದ್ದ ಸೆಟ್ಟು ಆ ದಿನ ಮಧ್ಯಾಹ್ನ ತನ್ನ ಒಂದೂವರೆ ಎಕರೆ ವಿಸ್ತೀರ್ಣದ ಗದ್ದೆಗೆ ಹೋಗಿದ್ದ. ತನ್ನ ಭತ್ತದ ಬೆಳೆಯನ್ನು ಉಳಿಸಿಕೊಳ್ಳುವ ಕಾತರ, ಆತಂಕಗಳೊಂದಿಗೆ. ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ ತಾಯನ್ನೂರಿನಲ್ಲಿರುವ ಈ ಬಣಗುಡುವ ಗದ್ದೆ ಆತನ ಹೃದಯವನ್ನು ಕಿವುಚಿತ್ತು. ಎರಡನೇ ಬಾರಿಗೆ ಕಷ್ಟಪಟ್ಟು ಹಾಕಿದ್ದ ಬೀಜವೂ ಮೊಳಕೆಯೊಡೆದಿರಲಿಲ್ಲ.

“ಆ ದಿನ ಸಂಜೆ ಮನೆಗೆ ಬಂದೆ. ಹೆಂಡತಿ ಮಕ್ಕಳು ಬೇರೆಯವರ ಗದ್ದೆಯಲ್ಲಿ ಕೆಲಸಕ್ಕೆ ಹೋಗಿದ್ದರು. ಸಾಲ ತೀರಿಸುವುದು ಹೇಗೆ, ನಾವು ಬದುಕುವುದು ಹೇಗೆ ಎಂಬ ಚಿಂತೆ ಕಾಡುತ್ತಿತ್ತು”, ಎನ್ನುತ್ತಾರೆ ಸೆಟ್ಟು. ಜಿಲ್ಲಾ ಸಹಕಾರಿ ಬ್ಯಾಂಕು, ಖಾಸಗಿ ಲೇವಾದೇವಿಗಾರರು, ಕೈಗಡ ಸೇರಿದಂತೆ ಸುಮಾರು ಒಂದೂವರೆ ಲಕ್ಷ ಸಾಲವಾಗಿತ್ತು. “ಈ ಆತಂಕವು ಮಿತಿಮೀರಿದಾಗ ನಾನು ಜೀವತೆಗೆದುಕೊಳ್ಳಲು ತೀರ್ಮಾನಿಸಿದೆ”, ಎಂದಾತ ಘಟನೆಯನ್ನು ಮೆಲುಕು ಹಾಕುತ್ತಾರೆ.

ಸೆಟ್ಟುವಿನ ಆತ್ಮಹತ್ಯೆ ಪ್ರಯತ್ನದ ಕೆಲವು ತಿಂಗಳುಗಳ ಬಳಿಕ, ಎಪ್ರಿಲ್ ಅಂತ್ಯ- ಮೇ 2017 ರ ಹೊತ್ತಿಗೆ, ಒಂದುಕಾಲದಲ್ಲಿ ಫಲವತ್ತಾದ ಭೂಮಿಯಾಗಿದ್ದ  ಕಾವೇರಿ ಕೊಳ್ಳದ ರೈತರು ದಿಲ್ಲಿಯಲ್ಲಿ ಉಗ್ರವಾದ ಪ್ರತಿಭಟನೆ ನಡೆಸಿದ್ದರು. ಅರೆಬೆತ್ತಲಾಗಿ, ಇಲಿಗಳನ್ನು ಬಾಯಿಯಲ್ಲಿ ಕಚ್ಚಿಕೊಂಡು, ತಲೆಬುರುಡೆಗಳನ್ನು ಪ್ರದರ್ಶಿಸುತ್ತಾ, ನೆಲದಲ್ಲಿ ಹೊರಳಾಡುತ್ತಾ ನಡೆಸಿದ ತೀವ್ರ ನಾಟಕೀಯವಾದ ಪ್ರತಿಭಟನೆಯಾಗಿತ್ತದು. ಸಾಲ ಮನ್ನಾ ಅವರ ಬೇಡಿಕೆಯಾಗಿತ್ತು. ಇನ್ನು ಈ ಪ್ರದೇಶಗಳಲ್ಲಿ ಆತಂಕಕ್ಕೀಡಾದ ಹಲವು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇನ್ನು ಕೆಲವರು ಸಾಲದ ಈ ಹೊಡೆತ ತಡೆದುಕೊಳ್ಳಲಾಗದೇ ಹೃದಯಾಘಾತದಿಂದ ತೀರಿಕೊಂಡಿದ್ದರು.

2017, ಜನವರಿಯಲ್ಲಿ, ಪೀಪಲ್ಸ್ ಯುನಿಯನ್ ಆಫ್ ಸಿವಿಲ್ ಲಿಬರ್ಟೀಸ್ ನ ತಂಡವೊಂದು ಕಾವೇರಿ ಕೊಳ್ಳದಲ್ಲಿ ಸಂಭವಿಸಿದ 50 ಕ್ಕೂ ಮಿಕ್ಕಿ ಹಠಾತ್ ಸಾವು ಮತ್ತು ಆತ್ಮಹತ್ಯೆಗಳ ಅಧ್ಯಯನ ನಡೆಸಿತ್ತು. ಈ ತಂಡದಲ್ಲಿ ಕೃಷಿ ಹೋರಾಟಗಾರರು, ಸಾಮಾಜಿಕ ಹೋರಾಟಗಾರರು, ವಿದ್ಯಾರ್ಥಿಗಳು, ವೈದ್ಯರು ಮತ್ತಿತರರಿದ್ದರು. 2017 ರ ಜನವರಿಯಿಂದ ಜೂನ್ ನಡುವೆ ಸುಮಾರು 200 ಹೃದಯಾಘಾತದ ಸಾವುಗಳು ಈ ಪ್ರದೇಶದಲ್ಲಿ ಸಂಭವಿಸಿವೆ ಎನ್ನುತ್ತಾರೆ ಸ್ಥಳೀಯ ರೈತರು. ಜೊತೆಗೆ, ಡಿಸೆಂಬರ್ 2016 ರ ಒಂದೇ ತಿಂಗಳಲ್ಲಿ 106 ಮಂದಿ ಈ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸುತ್ತದೆ, 2017 ಜನವರಿ 5 ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ರಾಜ್ಯಸರಕಾರಕ್ಕೆ ಸಲ್ಲಿಸಿದ ವರದಿ.

ಈ ಸುದ್ದಿಗಳು ತಮಿಳುನಾಡಿನ ಮೇಲೆ ಗಂಡಾಂತರದ ಕಾರ್ಮೋಡವು ದಟ್ಟೈಸಿರುವುದನ್ನು ಬೊಟ್ಟುಮಾಡುತ್ತಿವೆ. ಡೆಲ್ಟಾ ಮತ್ತು ಕಾವೇರಿ ಬೇಸಿನ್ನಿನ ಪ್ರದೇಶದುದ್ದಕ್ಕೂ ಇರುವ ಹಳ್ಳಿಗಳ ಜನರು ನೀರಿನ ಈ ಭಯಂಕರ ಅಭಾವದ ಬಗ್ಗೆಯೇ ನಮಗೆ ಹೇಳುತ್ತಿದ್ದರು. ಹಾಗೆ ನೋಡಿದರೆ ಕಾವೇರಿ ನದಿಯು ಸಮುದ್ರವನ್ನು ಸೇರುವ ಪ್ರದೇಶವಾದ ಈ ಜಾಗವು ಪೂರ್ವ ತಮಿಳುನಾಡಿನ ಇತರ ಭಾಗಗಳಿಗಿಂತ ಕೊಂಚ ವಾಸಿ ಎಂಬಂತಿದೆ. ಆದರೆ ಇಲ್ಲೀಗ ಎದುರಾಗಿರುವುದು ಜಲಗಂಡ. ಅದೂ ಮಾನವ ನಿರ್ಮಿತ ಜಲಗಂಡ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳುವ ಬರಕ್ಕಿಂತಲೂ ಭೀಕರ ಸ್ಥಿತಿಯಿದು ಎನ್ನುತ್ತಿದ್ದಾರೆ ಇಲ್ಲಿನ ಜನತೆ.


PHOTO • Jaideep Hardikar

ತಾಯನ್ನೂರು ಜನತೆ ಅವರು ಎದುರಿಸುತ್ತಿರುವ ಭೀಕರ ಬರದ ಬಗ್ಗೆ ಮಾತನಾಡುತ್ತಿದ್ದಾರೆ .  ಎಡದಿಂದ: ಇನ್ಬರಾಜ್, ಸುಬ್ರಹ್ಮಣಿಯಮ್ ಕುಮಾರ್, ಸೆಟ್ಟು, ಆರೋಕಿಯಸಾಮಿ, ಬಿ. ಮುತ್ತುರಾಜ.

“ನಾವು ಇಲ್ಲಿಯ ತನಕ ಇಂತಹ ಬರವನ್ನು ಕಂಡಿಲ್ಲ” ಎನ್ನುತ್ತಾರೆ ಸೆಟ್ಟುವಿನ ಸ್ನೇಹಿತ ಮತ್ತು ಹಿಡುವಳಿದಾರ ಸುಬ್ರಹ್ಮಣಿಯಮ್ ಕುಮಾರ್. ಕಾವೇರಿಕೊಳ್ಳದಲ್ಲಿ ಹಲವು ರೈತರ ಬಾಯಿಯಲ್ಲಿ ತಾವು ಕೇಳಿದ್ದನ್ನೇ ಅವರೂ ಪುನರುಚ್ಚರಿಸುತ್ತಿದ್ದರು.

ವಿಶಾಲವಾದ ಕಾವೇರಿ ನದಿಯ ಬೆಡ್ ತಮಿಳುನಾಡಿನಲ್ಲಿ ಸುಮಾರು ಒಂದೂವರೆ ಕಿಲೋಮೀಟರ್ ಅಗಲದ್ದಾಗಿದ್ದು, ಮೇ 2017 ರಿಂದೀಚೆಗೆ ಅಲ್ಲಿ ಮತ್ತು ಅದರ ಉಪನದಿಗಳು-ತೊರೆಗಳಲ್ಲಿ ನೀರೇ ಇಲ್ಲದೆ ಅವು ಬರಿದಾಗಿವೆ. ಬೇರೆ ತಿಂಗಳುಗಳಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗುತ್ತಿದೆಯಾದರೂ ಕೊರೆಯುವುದಕ್ಕಿಂತ ವೇಗವಾಗಿ ಅಂತರ್ಜಲದ ಮಟ್ಟ ತಗ್ಗುತ್ತಿದೆ.  ಉದ್ಯೋಗವು ಹಾಗಿರಲಿ, ಸಣ್ಣಪುಟ್ಟ ಕೆಲಸಗಳೂ ಸಿಗುತ್ತಿಲ್ಲ. ಸದ್ಯ ಇಲ್ಲಿನ ಜನರಿಗೆ ಉಳಿದಿರುವ ಏಕೈಕ ಆಯ್ಕೆ ಗುಳೆ ಹೋಗುವುದಾಗಿದ್ದು, ನೂರಾರು ಮಂದಿ ಕೆಲಸ ಹುಡುಕಿಕೊಂಡು ನಗರಗಳಿಗೆ ಗುಳೆಹೊರಡಲಾರಂಭಿಸಿದ್ದಾರೆ. ಅಥವಾ ಹಾರೆ ಪಿಕ್ಕಾಸು ಹಿಡಿದು ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ‘100-ದಿನಗಳ ಕೆಲಸ’ ಪಡೆಯಲು ಆ ಸೈಟುಗಳಲ್ಲಿ ಸಾವಿರಾರು ಮಂದಿಯನ್ನು ಸೇರಿಕೊಂಡಿದ್ದಾರೆ.

ನಾವು ತಿರುಚಿರಾಪಳ್ಳಿಯಿಂದ ಕೇವಲ 25 ಕಿಮೀ ದೂರದಲ್ಲಿರುವ ಶ್ರೀರಂಗಂ ತಾಲೂಕಿನ ತಾಯನ್ನೂರು ಎಂಬ ಸೆಟ್ಟುವಿನ ಹಳ್ಳಿಗೆ ಹೋದಾಗ, ಅವರು, ಸುಬ್ರಹ್ಮಣಿಯಮ್ ಮತ್ತಿತರ ಹಲವರು ಚಿಂತೆಯಿಂದ ಮೂಲೆ ಹಿಡಿದು ಕುಳಿತುಬಿಟ್ಟಿದ್ದರು. ಅವರೆದುರು ಬಂದು ನಿಂತಿರುವುದು ಬೃಹದಾಕಾರದ ಸಮಸ್ಯೆ ಎಂಬ ಅರಿವು ಅವರಿಗಿತ್ತು. ಕಳೆದೆರಡು ಮಳೆಗಾಲ ವಿಫಲವಾಗಿರುವುದು ಮತ್ತದು ಬರವಾಗಿ ಪರಿವರ್ತಿತವಾಗಿರುವುದು ಅವರಿಗೆ ತಿಳಿದಿತ್ತು.

“ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ” ಎನ್ನುವ ಇನ್ಬರಾಜ್ ಬತ್ತ ಬೆಳೆಯುವ ಎರಡೆಕರೆ ಹಿಡುವಳಿದಾರ, “ನದಿಯಲ್ಲಿ ನೀರಿಲ್ಲ, ಅಂತರ್ಜಲ ಮಟ್ಟ ಕುಸಿಯುತ್ತಿದೆ ಮತ್ತು ಮಳೆ ಕೈಕೊಡುತ್ತಿದೆ.” ಎನ್ನುತ್ತಾರಾತ. ಅಂದಹಾಗೆ ಕಾವೇರಿ ನದಿಯ ಉಪನದಿಯಾದ ಕಟ್ಟಾಲೈ ತಟದಲ್ಲಿರುವ ಊರಿದು.


PHOTO • Jaideep Hardikar

ಕಾವೇರಿ ಕೊಳ್ಳದ ಫಲವತ್ತಾಗಿದ್ದ ಜಾಗದಲ್ಲಿ ಎರಡೆಕರೆ ಭತ್ತದ ಗದ್ದೆ ಹಿಡುವಳಿದಾರರಾಗಿರುವ ಇನ್ಬರಾಜ್ ಬರದಿಂದ ಹದಗೆಟ್ಟಿರುವ ಕೃಷಿ ಆರ್ಥಿಕತೆಯನ್ನು ವಿವರಿಸುತ್ತಾರೆ .

ಇನ್ಬರಾಜ್ ಮತ್ತವರ ಸಹೋದರರು ಮೂರು ಜನರಿಗೆ ಅವರ ಗದ್ದೆಯಲ್ಲಿ ಬೋರ್ ವೆಲ್ ತೋಡಿಸುವ ಯೋಚನೆ ಇದೆ. ಅದಕ್ಕೆ ತಲಾ 25,000 ಅಥವಾ ಒಟ್ಟು ಒಂದು ಲಕ್ಷ ಖರ್ಚು ಬರಬಹುದು. “ಈಗ ನೀರು 500 ಅಡಿ ಆಳದಲ್ಲಿದೆ. ಖರ್ಚು ಹೆಚ್ಚಾದರೂ ಆಗಬಹುದು.” ಹಿಂದೆಲ್ಲ 100-150 ಅಡಿಯೊಳಗೆ ಸಿಗುತ್ತಿದ್ದ ನೀರು ಈಗ ಎರಡು ದಶಕಗಳಲ್ಲಿ ಮೂರು ಪಾಲು ತಗ್ಗಿ ಕೆಳಗಿಳಿದಿದೆ ಎನ್ನುತ್ತಾರೆ ಹಳ್ಳಿಯ ರೈತರು.

ಗದ್ದೆಗೆ, ಆಕಳಿಗೆ ನೀರು ಬೇಕು. ಆದರೆ ನಮ್ಮ ನೀರನ್ನು ಕಸಿದು, ತಿರುಚಿರಾಪಳ್ಳಿ ಮತ್ತಿತರ ಆಸುಪಾಸಿನ ನಗರಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. “ರಸ್ತೆಗಳ ಅಂಚಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಬಲಿಯುತ್ತಿದ್ದು, ಹೆಚ್ಚು ನೀರು ಕೇಳಲು ಹೊಸ ಹೊಸ ಜನ ಸೇರಿಕೊಳ್ಳುತ್ತಿದ್ದಾರೆ” ಎಂದು ಆತಂಕ ವ್ಯಕ್ತಪಡಿಸುತ್ತಾರೆ ಇನ್ಬರಾಜ್.

ಇದೇ ವೇಳೆ ಅಂದು ನವೆಂಬರಿನಲ್ಲಿ ಅರಯಿ ಸಕಾಲಕ್ಕೆ ಬಂದು ತನ್ನನ್ನು ನೇಣಿನ ಕುಣಿಕೆಯಿಂದ ತಪ್ಪಿಸಿ ಬದುಕಿಸಿದಲ್ಲಿಂದೀಚೆಗೆ ಏನೂ ಬದಲಾಗಿಲ್ಲ. ಅಲ್ಲಿಂದೀಚೆಗೆ ಪರಿಸ್ಥಿತಿ ಇನ್ನಷ್ಟು ಕೆಡುತ್ತಲೇ ಸಾಗಿದೆ. ಅದರ ದೊಡ್ಡ ಪೆಟ್ಟು ಅನುಭವಿಸಿರುವುದು ಸೆಟ್ಟುವಿನಂತಹ ಸಣ್ಣ ಮತ್ತು ಭೂರಹಿತ ರೈತರು.

ಅಷ್ಟಾಗಿಯೂ, ಜೀವ ಉಳಿಸಿಕೊಂಡಿರುವುದರ ಮಟ್ಟಿಗೆ ಸೆಟ್ಟು ಭಾಗ್ಯವಂತ. ಆ ಭಾಗ್ಯವೂ ಆ ಪ್ರದೇಶದಲ್ಲಿ ಹಲವು ಮಂದಿಗೆ ಸಿಕ್ಕಿಲ್ಲ.

ಕಾವೇರಿ ಕೊಳ್ಳದಲ್ಲಿ 2016 ರಲ್ಲೂ ಮಳೆ ಸೋತಿದೆ. ನದಿಯಲ್ಲಿ ನೀರು ಹರಿಯುತ್ತಿಲ್ಲ. ಸಮೀಪದ ಕರ್ನಾಟಕದಲ್ಲೂ ಬರ ಕಾಡುತ್ತಿದ್ದು, ನೀರಿನ ಸುಳಿವಿಲ್ಲ. ಹಾಗಾಗಿ ಅವರು ಸಂಗ್ರಹಿಸಿಟ್ಟ ನೀರನ್ನು ಬಿಡುಗಡೆ ಮಾಡಲು ಎರಡು ವರ್ಷಗಳಿಂದ ಒಪ್ಪುತ್ತಿಲ್ಲ. ಬೀಜಗಳು ಮೊಳಕೆ ಬಂದಿಲ್ಲ. ಭತ್ತ, ಕಬ್ಬು, ರಾಗಿಗಳಿಗೆ ಭಾರೀ ಹೊಡೆತ ಬಿದ್ದಿದೆ. ನೀರಿಲ್ಲ ಎಂದರೆ ಕೆಲಸವೂ ಇಲ್ಲ; ದುಡ್ಡೂ ಇಲ್ಲ. ಸಾಲದ ಹೊರೆ ಏರುತ್ತಿದ್ದು, ಜನ ಆಸ್ತಿ-ಜಾನುವಾರುಗಳನ್ನು ಮಾರುತ್ತಿದ್ದಾರೆ, ಚಿನ್ನಾಭರಣಗಳನ್ನು ಅಡವಿಡುತ್ತಿದ್ದಾರೆ.

ಆಸೆ ಕಮರಿದಂತೆಲ್ಲ ಆತಂಕವೂ ಹೆಚ್ಚುತ್ತಿದೆ, ಮಾಡಬಯಸಿದ್ದನ್ನು ಮಾಡಲಾಗದೆ ದಿಗಿಲು ಹುಟ್ಟುತ್ತಿದೆ. ಇದು ರೈತರ ಹೃದಯಾಘಾತ ಅಥವಾ ಆತ್ಮಹತ್ಯೆಗಳಿಗೆ ಕಾರಣವಾಗುತ್ತಿದೆ.


PHOTO • Jaideep Hardikar

ಚೋಳರ ಕಾಲದಲ್ಲಿ ನಿರ್ಮಾಣಗೊಂಡ 2000 ವರ್ಷ ಹಳೆಯ ಅಣೆಕಟ್ಟು ಕಾವೇರಿಕೊಳ್ಳದ ಜೀವವಾಗಿದ್ದು, ಈ ಚಳಿಗಾಲದಲ್ಲಿ ಸಂಪೂರ್ಣ ಬರಿದಾಗಿದೆ. ಇತ್ತ ಕಾವೇರಿ ನದಿಯೂ ಕೂಡ ಮೌನಕ್ಕೆ ಜಾರಿದೆ.

ಸೆಟ್ಟು ತನ್ನ ಆತ್ಮಹತ್ಯೆ ಯತ್ನಕ್ಕೆ ಕಾರಣವಾದ ಸಂಗತಿಗಳನ್ನು ನೆನಪಿಸಿಕೊಳ್ಳುತ್ತಾರೆ, ತಾನು ಪರಿಸ್ಥಿತಿಯನ್ನು ಎದುರಿಸದೆ ಹೆಂಡತಿ ಮಕ್ಕಳನ್ನು ನಡುನೀರಲ್ಲಿ ಕೈಬಿಟ್ಟು ಪಲಾಯನವಾದದ ಹಾದಿ ತುಳಿದೆ ಎಂಬ ಅಪರಾಧೀ ಭಾವವೂ ಅವರಲ್ಲಿದೆ. ತಾನು ಬದುಕಿದೆ ಎಂಬ ಕುರಿತು ನಿರಾಳಭಾವ ಹೊಂದಿರುವ ಅವರು, ತಾನು ಮತ್ತು ತನ್ನ ನೆರೆಹೊರೆಯ ಸ್ನೇಹಿತರು ಮತ್ತು ಬಳಗ ತೊಂದರೆಯಲ್ಲಿ ಸಿಲುಕಿದ್ದರೂ ಸೋತಿಲ್ಲ ಎನ್ನುತ್ತಿದ್ದಾರೆ.

ತಾಯನ್ನೂರಿನ ಕೆಲವು ಸಿರಿವಂತ ರೈತರು ಈ ಸಾರಿ ಅವರ ಭತ್ತದ ಬೆಳೆಯನ್ನು ಉಳಿಸಿಕೊಂಡರು ಏಕೆಂದರೆ ಅವರ ಬೋರ್ ವೆಲ್ ಗಳಲ್ಲಿ ಅವರಿಗೆ ನೀರು ಸಿಕ್ಕಿತು ಎನ್ನುತ್ತಾರೆ ಸುಬ್ರಹ್ಮಣಿಯಮ್. ಆದರೆ ಸೆಟ್ಟು ಬಳಿ ಬೋರ್ ವೆಲ್ ಇಲ್ಲ. “ಆ ದಿನ ನನಗೆ ನನ್ನ ಗದ್ದೆಯನ್ನು ನೋಡಿ ತಡೆಯಲಾಗಲಿಲ್ಲ. ನನ್ನ ಬೀಜ ಮೊಳಕೆ ಬಂದಿರಲಿಲ್ಲ; ಮಳೆಯೂ ಕೈಕೊಟ್ಟಿತ್ತು” ಎಂದರು ನವೆಂಬರ್ ಘಟನೆಯನ್ನು ನೆನೆದು ವ್ಯಾಕುಲರಾದ ಸೆಟ್ಟು.

ಆಘಾತ, ಆತಂಕ ಮತ್ತು ನಿರಾಶೆ ಕವಿದಿರುವ ಆತ ಹೇಳುತ್ತಾರೆ – “ನನಗೆ ಕಟ್ಟಲು ಬೆಟ್ಟದಷ್ಟು ಸಾಲ ಬಾಕಿಯಿದೆ. ಆ ಸಾಲವನ್ನು ಸದ್ಯಕ್ಕೆ ತೀರಿಸಲು ಸಾಧ್ಯವಾಗುವ ಯಾವ ದಾರಿಯೂ ನನಗೆ ಕಂಡಿರಲಿಲ್ಲ.”

ನಾವು ಸೆಟ್ಟುವನ್ನು ಭೇಟಿಯಾದ ದಿನ ಆತನ ಪತ್ನಿ ಮತ್ತು ಮಗ ಕೆಲಸಕ್ಕಾಗಿ ಬೇರೆ ಊರಿಗೆ ಹೋಗಿದ್ದರು; ಆತ ತನ್ನ ಮಗಳನ್ನು ಒಂದೆರಡು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದ. ಸಣ್ಣ ಮಗ ಶಾಲೆಗೆ ಹೋಗುವವನು. ಆ ಕುಟುಂಬದಲ್ಲಿ ಈಗ ಉಳಿದಿರುವ ಏಕೈಕ ಆದಾಯ ಎಂದರೆ ದಿನಕ್ಕೆ ಅಂದಾಜು ಮೂರು ಲೀಟರ್ ಹಾಲು ಕೊಡುವ ಜರ್ಸಿ ಆಕಳು – ಅದೂ ಕೂಡ ಮೇವಿಲ್ಲದೆ ಬಡಕಲು ಸ್ಥಿತಿಯಲ್ಲಿತ್ತು.

“ನಮ್ಮಲ್ಲಿರುವುದು ಈಗ ಈ ದನ ಮಾತ್ರ, ಎಷ್ಟು ದಿನ ಇದನ್ನೊಂದನ್ನೇ ಆಧರಿಸಿಕೊಂಡು ಬದುಕಿರುತ್ತೇವೋ ಗೊತ್ತಿಲ್ಲ” ಎನ್ನುತ್ತಾರೆ ಸೆಟ್ಟು.

ಚಿತ್ರಗಳು : ಜೈದೀಪ್ ಹರ್ಡೀಕರ್
Jaideep Hardikar

جے دیپ ہرڈیکر ناگپور میں مقیم صحافی اور قلم کار، اور پاری کے کور ٹیم ممبر ہیں۔

کے ذریعہ دیگر اسٹوریز جے دیپ ہرڈیکر
Translator : Rajaram Tallur

Rajaram Tallur is a freelance journalist and a translator by profession. He has over 25 years of work experience in print and web media. Healthcare, science and developmental journalism are among his areas of interest.

کے ذریعہ دیگر اسٹوریز راجا رام تلّور