"ನಮ್ಮಂತಹ ಮಹಿಳೆಯರು ತಮ್ಮ ಮನೆಗಳನ್ನು ಮತ್ತು ಹೊಲಗಳನ್ನು ತೊರೆದು ಪ್ರತಿಭಟಿಸಲು ನಗರಕ್ಕೆ ಬಂದಾಗ, ಅವರು ತಮ್ಮ ಕಾಲುಗಳ ಕೆಳಗಿನ ಮಣ್ಣನ್ನು [ಭೂಮಿಯನ್ನು] ಕಳೆದುಕೊಳ್ಳುತ್ತಿದ್ದಾರೆ ಎಂದರ್ಥ" ಎಂದು ಅರುಣಾ ಮನ್ನಾ ಹೇಳಿದರು. “ಕಳೆದ ಕೆಲವು ತಿಂಗಳುಗಳಲ್ಲಿ, ತಿನ್ನಲು ಏನೂ ಇಲ್ಲದ ದಿನಗಳನ್ನು ನೋಡಿದ್ದೇವೆ. ಉಳಿದ ದಿನಗಳಲ್ಲಿ, ನಾವು ಒಂದು ಊಟಕ್ಕೂ ಪರದಾಡುವಂತಾಗಿತ್ತು. ಪರಿಸ್ಥಿತಿ ಹೀಗಿರುವಾಗ ಈ ಕಾನೂನುಗಳನ್ನು ಜಾರಿ ಮಾಡಬೇಕಿತ್ತೆ? ಈ ಮಹಾಮಮಾರಿ [ಕೋವಿಡ್ -19] ನಮ್ಮ ಜೀವವನ್ನು ತೆಗೆದುಕೊಳ್ಳಲು ಸಾಲದು ಎಂದು ನೀವು ಭಾವಿಸುತ್ತೀರಾ?”

ಅರುಣಾ (42) ಕೇಂದ್ರ ಕೋಲ್ಕತ್ತಾದ ಎಸ್ಪ್ಲನೇಡ್ ವೈ-ಚಾನೆಲ್‌ನಲ್ಲಿ ಮಾತನಾಡುತ್ತಿದ್ದರು. ಜನವರಿ 9ರಿಂದ 22ರವರೆಗೆ ರೈತರು ಮತ್ತು ಕೃಷಿ ಕಾರ್ಮಿಕರು ಒಟ್ಟಾಗಿ ಅಖಿಲ ಭಾರತ ರೈತರ ಹೋರಾಟ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ) ಎನ್ನುವ ವೇದಿಕೆಡಿಯಲ್ಲಿ ಸೇರಿದ್ದರು. 2020ರ ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ ಕೃಷಿ ಕಾಯ್ದೆಯ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ಬೆಂಬಲವಾಗಿ ವಿದ್ಯಾರ್ಥಿಗಳು, ನಾಗರಿಕರು, ಕಾರ್ಮಿಕರು, ಸಾಂಸ್ಕೃತಿಕ ಸಂಸ್ಥೆಗಳು ಎಲ್ಲರೂ ಒಗ್ಗೂಡಿದ್ದರು.

ಅರುಣಾ ರಾಜುವಾಖಾಕಿ ಎನ್ನುವ ಊರಿನಿಂದ ಇಲ್ಲಿಗೆ ಬಂದಿದ್ದರು. ದಕ್ಷಿಣ 24 ಪರಗಣ ಜಿಲ್ಲೆಯ ವಿವಿಧ ಹಳ್ಳಿಗಳಿಂದ ಸುಮಾರು 1500 ಮಹಿಳೆಯರು ಇಲ್ಲಿ ಸೇರಿದ್ದರು.  ರೈತ ಮಹಿಳಾ ದಿನಾಚರಣೆಗಾಗಿ ಜನವರಿ 18ರಂದು ಅವರು ಕೋಲ್ಕತ್ತಾಗೆ ಬಂದಿದ್ದರು, ಈ ದಿನವನ್ನು ರೈತ ಮಹಿಳೆಯರಿಗೆ ಸಮರ್ಪಿಸಲಾಗಿದೆ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಆಚರಿಸಲಾಗುತ್ತದೆ. ಕೆಲವರು ರೈಲಿನಲ್ಲಿ, ಕೆಲವರು ಬಸ್‌ನಲ್ಲಿ ಮತ್ತೆ ಕೆಲವರು ಟೆಂಪೋ ಮೂಲಕ ಪ್ರಯಾಣ ಮಾಡಿ ಬಂದಿದ್ದರು. ರೈತ ಮಹಿಳೆಯರು ಮತ್ತು ಕೃಷಿ ಕಾರ್ಮಿಕರ 40ಕ್ಕೂ ಹೆಚ್ಚು ಒಕ್ಕೂಟಗಳು, ಮಹಿಳಾ ಸಂಸ್ಥೆಗಳು ಮತ್ತು ಎಐಕೆಎಸ್‌ಸಿಸಿ ಈ ಕಾರ್ಯಕ್ರಮದ ಪಶ್ಚಿಮ ಬಂಗಾಳ ಆವೃತ್ತಿಯನ್ನು ಆಯೋಜಿಸಿದ್ದವು.

ತಮ್ಮ ದನಿಯನ್ನು ತಲುಪಿಸುವ ಸಲುವಾಗಿ ದೂರ ಪ್ರಯಾಣ ಮಾಡಿ ದಣಿದಿದ್ದರೂ ಮಹಿಳೆಯರ ಆಕ್ರೋಶವೇನೂ ಕಡಿಮೆಯಾಗಿರಲಿಲ್ಲ. “ಹಾಗಿದ್ರೆ ನಮಗೋಸ್ಕರ ಯಾರು ಹೋರಾಡ್ತಾರೆ? ಕೋರ್ಟ್‌ ಬಾಬುಗಳ? [ಜಡ್ಜ್‌ಗಳು] ನಮಗೆ ನಮ್ಮ ಪಾಲು ದೊರೆಯುವರೆಗೂ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ” ಎಂದು ಶ್ರಮಜೀವಿ ಮಹಿಳಾ ಸಮಿತಿಯ ಸದಸ್ಯರಾದ 38 ವರ್ಷದ ಸುಪರ್ಣಾ ಹಲ್ದಾರ್‌ ಭಾರತದ ಮುಖ್ಯ ನ್ಯಾಯದೀಶರು ಇತ್ತೀಚೆಗೆ ಹೆಂಗಸರು ಮತ್ತು ಹಿರಿಯರನ್ನು ಕೃಷಿ ಕಾನೂನುಗಳ ವಿರುದ್ಧದ ಹೋರಾಟ ಕಣದಿಂದ ತೆರವುಗೊಳಿಸಬೇಕೆಂದು ನೀಡಿದ ಅಭಿಪ್ರಾಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಾ ಹೇಳಿದರು.

ರೈತ ಮಹಿಳೆಯರ ದಿನವನ್ನು ಆಚರಿಸಲು ಜನವರಿ 18ರಂದು ಬೆಳಿಗ್ಗೆ 11.30ರಿಂದ ಸಂಜೆ 4ರವರೆಗೆ ಕೋಲ್ಕತ್ತಾದಲ್ಲಿ ಮಹಿಳಾ ಕಿಸಾನ್ ವಿಧಾನಸಭಾ ಅಧಿವೇಶನ ಆಯೋಜಿಸಲಾಗಿತ್ತು. ಈ ಅಧಿವೇಶನದಲ್ಲಿ ಕೃಷಿಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳು, ಅವರ ಶ್ರಮ, ಭೂಮಿ ಮಾಲಿಕತ್ವ ಹಾಗೂ ಇತರ ಹಕ್ಕುಗಳಿಗಾಗಿ ಅವರು ನಡೆಸಿದ ದೊಡ್ಡ ಹೋರಾಟ ಮತ್ತು ಈ ಹೊಸ ಕಾನೂನುಗಳು ಅವರ ಜೀವನದ ಮೇಲೆ ಬೀರುವ ಪರಿಣಾಮಗಳ ಮೇಲೆ ಚರ್ಚೆಯು ಕೇಂದ್ರಿತವಾಗಿತ್ತು.

On January 18, women from several districts of West Bengal attended the Mahila Kisan Majur Vidhan Sabha session in Kolkata
PHOTO • Smita Khator
On January 18, women from several districts of West Bengal attended the Mahila Kisan Majur Vidhan Sabha session in Kolkata
PHOTO • Smita Khator

ಜನವರಿ 18ರಂದು ಕೋಲ್ಕತ್ತಾದಲ್ಲಿ ನಡೆದ ಮಹಿಳಾ ಕಿಸಾನ್ ಮಜ್ದೂರ್ ವಿಧಾನಸಭಾ ಅಧಿವೇಶನದಲ್ಲಿ ಪಶ್ಚಿಮ ಬಂಗಾಳದ ಹಲವು ಜಿಲ್ಲೆಗಳ ಮಹಿಳೆಯರು ಭಾಗವಹಿಸಿದ್ದರು

ದಕ್ಷಿಣ 24 ಪರಗಣ ಜಿಲ್ಲೆಯ ರೈದಿಘಿ ಗ್ರಾಮ ಪಂಚಾಯಿತಿಯ ಪಕುರ್ತಲಾ ಎನ್ನುವ ಊರಿನವರಾದ ಸುಪರ್ಣ, ಹೆಚ್ಚುತ್ತಿರುವ ಕೃಷಿ ವೆಚ್ಚಗಳು ಮತ್ತು ಮರುಕಳಿಸುವ ಚಂಡಮಾರುತಗಳು ತನ್ನ ಪ್ರದೇಶದ ಜೀವನಾಧಾರವಾಗಿರುವ ಕೃಷಿಯನ್ನು ಹೇಗೆ ಅಸ್ಥಿರಗೊಳಿಸಿದೆಯೆನ್ನುವುದನ್ನು ವಿವರಿಸಿದರು. ಇದರ ಪರಿಣಾಮವಾಗಿ, ಎಂಜಿಎನ್‌ಆರ್‌ಇಜಿಎ ಕೆಲಸ (ಸ್ಥಳೀಯವಾಗಿ ಏಕ್‌ ಸೋ ದಿನಾರ್‌ ಕಾಜ್‌ ಅಥವಾ 100 ದಿನಗಳ ಕೆಲಸ ಎಂದು ಕರೆಯಲಾಗುತ್ತದೆ) ಮತ್ತು ಸರ್ಕಾರಿ ಅನುದಾನಿತ, ಪಂಚಾಯತ್ ನಡೆಸುವ ಇತರ ಕೆಲಸಗಳು ಕೃಷಿ ಕಾರ್ಮಿಕರು ಮತ್ತು ಅತಿ ಕಡಿಮೆ ಭೂಮಿ ಹೊಂದಿರುವ ಸಣ್ಣ ಕೃಷಿ ಕುಟುಂಬಗಳಿಗೆ ಜೀವಸೆಲೆಯಾಗಿವೆ.

ಕೋಲ್ಕತಾ ಸಭೆಯ ಮುಖ್ಯ ಗುರಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವವುದಾದರೂ, ಎಂಜಿಎನ್‌ಆರ್‌ಇಜಿಎ ಮತ್ತು ಸ್ಥಳೀಯ ಪಂಚಾಯಿತಿಗಳ ಅಡಿಯಲ್ಲಿ ಕೆಲಸದ ಕೊರತೆ ಹಾಜರಿದ್ದ ಮಹಿಳೆಯರು ಎದುರಿಸುತ್ತಿರುವ ಪ್ರಮುಖ ಮತ್ತು ಮತ್ತೆ ಮತ್ತೆ ಎದುರಾಗುತ್ತಿರುವ ಸಮಸ್ಯೆಯಾಗಿದೆ.

"ಕೆಲಸಗಳು ಲಭ್ಯವಿರುವುದಿಲ್ಲ. ನಾವೆಲ್ಲರೂ ಮಾನ್ಯ ಜಾಬ್ ಕಾರ್ಡ್‌ಗಳನ್ನು ಹೊಂದಿದ್ದೇವೆ [ಆದರೂ ಸಾಮಾನ್ಯವಾಗಿ ಜಾಬ್ ಕಾರ್ಡ್‌ಗಳನ್ನು ಗಂಡ ಅಥವಾ ತಂದೆಯ ಹೆಸರಿನಲ್ಲಿ ನೀಡಲಾಗುತ್ತದೆ, ಮತ್ತು ಇದನ್ನು ಅನೇಕ ಮಹಿಳೆಯರು ವಿವಾದಾತ್ಮಕ ವಿಷಯವಾಗಿ ನೋಡುತ್ತಾರೆ]. ಆದರೂ ನಮಗೆ ಕೆಲಸ ಸಿಗುತ್ತಿಲ್ಲ” ಎಂದು ಮಥುರಾಪುರ 2ನೇ ಬ್ಲಾಕ್‌ನಲ್ಲಿರುವ ರೈದಿಘಿ ಪಂಚಾಯತ್‌ನ ಬಲರಾಂಪುರದಲ್ಲಿ 100 ದಿನಗಳ ಕೆಲಸದ ಹಂಚಿಕೆಯನ್ನು ನೋಡಿಕೊಳ್ಳುವ 55 ವರ್ಷದ ಸುಚಿತ್ರಾ ಹಲ್ದಾರ್ ಹೇಳಿದರು. “ನಾವು ಇದರ ವಿರುದ್ಧ ಬಹಳ ಸಮಯದಿಂದ ಹೋರಾಡುತ್ತಿದ್ದೇವೆ. ಒಂದು ವೇಳೆ ನಮಗೆ ಕೆಲಸ ಸಿಕ್ಕರೂ ನಮಗೆ ಸಮಯಕ್ಕೆ ಸರಿಯಾಗಿ ಸಂಬಳ ಬರುವುದಿಲ್ಲ. ಇನ್ನೂ ಕೆಲವೊಮ್ಮೆ  ಸಂಬಳ ಬರದೇ ಇರುವುದು ಕೂಡ ಇರುತ್ತದೆ."

"ನಮ್ಮ ಹಳ್ಳಿಯ ಯುವ ಪೀಳಿಗೆ ಸುಮ್ಮನೆ ಕುಳಿತಿದೆ, ಅವರಿಗೆ ಯಾವುದೇ ಕೆಲಸಗಳಿಲ್ಲ" ಎಂದು ರಾಜುವಾಖಾಕಿ ಗ್ರಾಮದ ರಂಜಿತಾ ಸಮಂತಾ (40) ಹೇಳಿದರು. “ಲಾಕ್‌ಡೌನ್ ಸಮಯದಲ್ಲಿ, ಅನೇಕ ಜನರು ತಾವು ಕೆಲಸಕ್ಕೆ ಹೋಗಿದ್ದ ಸ್ಥಳಗಳಿಂದ ಮರಳಿದ್ದಾರೆ. ಪೋಷಕರು ತಿಂಗಳುಗಳಿಂದ ಉದ್ಯೋಗವಿಲ್ಲದೆ ಇದ್ದಾರೆ, ಆದ್ದರಿಂದ ಹೊಸ ತಲೆಮಾರಿನವರೂ ತೊಂದರೆ ಎದುರಿಸುತ್ತಿದ್ದಾರೆ. ನಮಗೆ 100 ದಿನಗಳ ಕೆಲಸ ಸಿಗದಿದ್ದರೆ, ನಾವು ಹೇಗೆ ಜೀವನ ನಡೆಸುವುದು?"

ಅಲ್ಲಿಂದ ಸ್ವಲ್ಪ ದೂರದಲ್ಲಿ ಕುಳಿತಿದ್ದ 80 ವರ್ಷದ ದುರ್ಗಾ ನೈಯಾ ತನ್ನ ಬಿಳಿ ಬಣ್ಣದ ಹತ್ತಿ ಸೀರೆಯ ಅಂಚಿನಿಂದ ತನ್ನ ದಪ್ಪ ಕನ್ನಡಕವನ್ನು  ಒರೆಸುತ್ತಿದ್ದರು. ಮಥುರಾಪುರ 2 ಬ್ಲಾಕ್‌ನ ಗಿಲಾರ್‌ಚಾಟ್ ಗ್ರಾಮದ ವೃದ್ಧ ಮಹಿಳೆಯರ ಗುಂಪಿನೊಂದಿಗೆ ಅವರು ಬಂದಿದ್ದರು. "ನನ್ನ ದೇಹದಲ್ಲಿ ಶಕ್ತಿ ಇರುವವರೆಗೂ ನಾನು ಖೇತ್‌ -‌ ಮಜೂರ್ [ಕೃಷಿ ಕಾರ್ಮಿಕರಾಗಿ] ಕೆಲಸ ಮಾಡುತ್ತಿದ್ದೆ" ಎಂದು ಅವರು ಹೇಳಿದರು. "ನೋಡಿ, ನನಗೆ ಈಗ ತುಂಬಾ ವಯಸ್ಸಾಗಿದೆ ... ನನ್ನ ಪತಿ ಬಹಳ ಹಿಂದೆಯೇ ನಿಧನರಾದರು." ನನಗೆ ಈಗ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವಯಸ್ಸಾದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಪಿಂಚಣಿ ನೀಡುವಂತೆ ಸರ್ಕಾರವನ್ನು ಕೇಳಲು ನಾನು ಇಲ್ಲಿಗೆ ಬಂದಿದ್ದೇನೆ.”

ದುರ್ಗಾ ನೈಯಾ ರೈತ ಹೋರಾಟದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. "ನಾನು ದೇಶದ ಇತರ ರೈತರೊಂದಿಗೆ ಹೋರಾಟದಲ್ಲಿ ಸೇರಲು ನಾನು ಅವರೊಂದಿಗೆ 2018ರಲ್ಲಿ ದೆಹಲಿಗೆ ಹೋಗಿದ್ದೆ" ಎಂದು ಮಥುರಾಪುರ 2 ಬ್ಲಾಕ್‌ನ ರಾಧಕಂತಪುರ ಗ್ರಾಮದ 50 ವರ್ಷದ ಭೂಹೀನ ಕಾರ್ಮಿಕ ಪಾರುಲ್ ಹಲ್ದಾರ್ ಹೇಳಿದರು. ಅವರು 2018 ರ ನವೆಂಬರ್‌ನಲ್ಲಿ ಪ್ರಾರಂಭವಾದ ಕಿಸಾನ್ ಮುಕ್ತಿ ಮೋರ್ಚಾದೊಂದಿಗೆ ನವದೆಹಲಿ ರೈಲ್ವೆ ನಿಲ್ದಾಣದಿಂದ ರಾಮ್‌ಲೀಲಾ ಮೈದಾನಕ್ಕೆ ಕಾಲ್ನಡಿಗೆಯಲ್ಲಿ ಹೋಗಿದ್ದರು.

Ranjita Samanta (left) presented the resolutions passed at the session, covering land rights, PDS, MSP and other concerns of women farmers such as (from left to right) Durga Naiya, Malati Das, Pingala Putkai (in green) and Urmila Naiya
PHOTO • Smita Khator
Ranjita Samanta (left) presented the resolutions passed at the session, covering land rights, PDS, MSP and other concerns of women farmers such as (from left to right) Durga Naiya, Malati Das, Pingala Putkai (in green) and Urmila Naiya
PHOTO • Smita Khator

ರಂಜಿತಾ ಸಮಂತ್ (ಎಡ) ಸಭೆಯಲ್ಲಿ ಅಂಗೀಕರಿಸಿದ ನಿರ್ಣಯವನ್ನು ಮಂಡಿಸಿದರು, ಇದರಲ್ಲಿ ಭೂಮಿ ಹಕ್ಕುಗಳು, ಪಡಿತರ, ಕನಿಷ್ಠ ಬೆಂಬಲ ಬೆಲೆ ಖಾತರಿಗಳು ಮತ್ತು ಮಹಿಳಾ ರೈತರಿಗೆ ಸಂಬಂಧಿಸಿದ ಇತರ ವಿಷಯಗಳು ಸೇರಿವೆ. ಜೊತೆಯಲ್ಲಿ (ಎಡದಿಂದ ಬಲಕ್ಕೆ) ದುರ್ಗಾ ನೈಯಾ, ಮಾಲತಿ ದಾಸ್, ಪಿಂಗಲಾ ಪುಟ್ಕೈ (ಹಸಿರು ಸೀರೆಯಲ್ಲಿ) ಮತ್ತು ಊರ್ಮಿಳಾ ನೈಯ

ಪ್ರತಿಭಟನಾ ಸ್ಥಳದಲ್ಲಿ ವಯಸ್ಸಾದ ಮಹಿಳೆಯರನ್ನು ಏಕೆ ಸೇರಿಸಿಕೊಂಡಿದ್ದೀರಿ ಎಂದು ಕೇಳಿದಾಗ "ನಾವು ಬಹಳ ಕಷ್ಟದಲ್ಲಿ ಬದುಕುಳಿದಿದ್ದೇವೆ" ಎಂದು ಪಾರುಲ್ ಹೇಳಿದರು. “ಹೊಲಗಳಲ್ಲಿ ಹೆಚ್ಚಿನ ಕೆಲಸ ಸಿಗುವುದಿಲ್ಲ. ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ, ಒಂದಿಷ್ಟು ಕೆಲಸ ದೊರೆಯುತ್ತದೆ ಅದರಲ್ಲಿ ದಿನಕ್ಕೆ 270 ರೂಪಾಯಿಗಳ ಕೂಲಿ ದೊರೆಯುತ್ತದೆ. ಆದರೆ ಅದರಿಂದ ಜೀವನ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಬೀಡಿ ಕಟ್ಟುವ ಕೆಲಸ ಮತ್ತು ಇತರ ಕೆಲಸಗಳನ್ನು ಮಾಡುತ್ತೇನೆ. ಮಹಾಮಾರಿ ಸಮಯದಲ್ಲಿ ಮತ್ತು ವಿಶೇಷವಾಗಿ ಅಂಫಾನ್‌ ಚಂಡಮಾರುತದ ಸಮಯದಲ್ಲಿ ನಾವು ಬಹಳ ಕೆಟ್ಟ ಸಮಯಗಳನ್ನು ನೋಡಿದ್ದೇವೆ. [2020ರ ಮೇ 20ರಂದು ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಚಂಡಮಾರುತ] ”

ಈ ಗುಂಪಿನಲ್ಲಿದ್ದ ವೃದ್ಧ ಮಹಿಳೆಯರು ಮಾಸ್ಕ್‌ಗಳನ್ನು ಧರಿಸುವುದರ ಕುರಿತು ಬಹಳ ಜಾಗರೂಕರಾಗಿದ್ದರು. ಮಹಾಮಾರಿಯ ಸಮಯದಲ್ಲಿ ತಾವು ಸುಲಭವಾಗಿ ಖಾಯಿಲೆಗೆ ತುತ್ತಾಗಬಹುದೆನ್ನುವುದರ ಬಗ್ಗೆ ಅವವರಿಗೆ ಅರಿವಿತ್ತು. ಆದರೆ ಈ ಅಪಾಯದ ಅರಿವಿದ್ದರೂ ಅವರು ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದರು.  "ಸುಂದರ್‌ಬನ್ಸ್‌ನ ನಮ್ಮ ಹಳ್ಳಿಗಳಿಂದ ಕೋಲ್ಕತ್ತಾಗೆ ತಲುಪುವುದು ಸುಲಭವಲ್ಲ. ಹೀಗಾಗಿ ನಾವು ಬೆಳಿಗ್ಗೆ ಬೇಗನೆ ಎದ್ದು ಹೊರಟೆವು." ಎಂದು ಗಿಲಾರ್‌ಚಾಟ್ ಎನ್ನುವ ಊರಿನ 75 ವರ್ಷದ ಪಿಂಗಲಾ ಪುಟ್‌ಕೈ ಹೇಳಿದರು. “ನಮ್ಮ ಸಮಿತಿ [ಶ್ರಮಜೀವಿ ಮಹಿಳಾ ಸಮಿತಿ] ನಮಗಾಗಿ ಬಸ್ ವ್ಯವಸ್ಥೆ ಮಾಡಿತ್ತು. ನಮಗೆ ಇಲ್ಲಿ ಆಹಾರವನ್ನು [ಅಕ್ಕಿ, ಆಲೂಗಡ್ಡೆ ಬಾಜಿ, ಲಡ್ಡೂ ಮತ್ತು ಮಾವಿನ ಜ್ಯೂಸ್] ಪ್ಯಾಕ್‌ ಮಾಡಿ ನೀಡಲಾಗಿತ್ತು.‌ ಈ ದಿನ ನಮ್ಮ ಪಾಲಿಗೆ ವಿಶೇಷವಾದುದು.

ಅದೇ ಗುಂಪಿನಲ್ಲಿದ್ದ 65 ವರ್ಷದ ಮಾಲತಿ ದಾಸ್ ವಿಧವೆಯರ ಪಿಂಚಣಿಯಾಗಿ ತಿಂಗಳಿಗೆ ನೀಡಲಾಗುವ 1,000 ರೂಪಾಯಿಗಳಿಗಾಗಿ ಕಾಯುತ್ತಿದ್ದಾರೆ. ಅವರಿಗೆ ಇದುವರೆಗೂ ಒಂದು ತಿಂಗಳ ಹಣನ ಕೂಡ ದೊರಕಿಲ್ಲ. "ವಯಸ್ಸಾದ ಮಹಿಳೆಯರು ಹೋರಾಟದಲ್ಲಿ ಪಾಲ್ಗೊಳ್ಳಬಾರದೆಂದು ನ್ಯಾಯಾಧೀಶರು ಹೇಳುತ್ತಾರೆ" ಎಂದು ಅವರು ಹೇಳುತ್ತಾರೆ.  ಜೆನೊ ಬುರೊ ಆರ್ ಮೆಯೆನಮುಶ್ದರ್ ಪೇಟ್ ಭೋರ್ ರೋಜ್ ಪೋಲೌ ಆರ್ ಮಾಂಗ್ಶೊ ದೀಚೆ ಖೇತೆ [ಅವರು ಹೇಳುವುದು ನೋಡಿದರೆ ಇವರು ಹಿರಿಯರಿಗೆ ದಿನವೂ ಪಲಾವ್‌ ಮತ್ತು ಮಾಂಸ ಬಡಿಸುತ್ತಿದ್ದಾರೇನೊ ಎಂದುಕೊಳ್ಳಬೇಕು]! ”

ಈ ಗುಂಪಿನಲ್ಲಿರುವ ಅನೇಕ ಮಹಿಳೆಯರು, ಈಗ ಕೃಷಿಯಿಂದ ನಿವೃತ್ತರಾಗಿದ್ದಾರೆ, ಅವರು ವಯಸ್ಸಾದ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಗೌರವಯುತ ಪಿಂಚಣಿ ನೀಡಬೇಕೆನ್ನುವ ತಮ್ಮ ಬಹುದಿನಗಳ ಬೇಡಿಕೆಯನ್ನು ಪ್ರತಿಧ್ವನಿಸಿದರು.

ನಾನು ಮಾತನಾಡಿದ ಸುಂದರ್‌ಬನ್ಸ್‌ನ ಬಹುತೇಕ ಮಹಿಳೆಯರು ಪರಿಶಿಷ್ಟ ಜಾತಿಯರಾಗಿದ್ದರೂ ಅಲ್ಲಿ ಇತರ ಅನೇಕ ಬುಡಕಟ್ಟು ಮಹಿಳೆಯರು ಸಹ ಇದ್ದರು. ಅವರಲ್ಲಿ 46 ವರ್ಷದ ಮಂಜು ಸಿಂಗ್ ಕೂಡ ಒಬ್ಬರು. ಜಮಾಲ್‌ಪುರ ತಾಲ್ಲೂಕಿನ ಮೋಹನ್‌ಪುರ ಗ್ರಾಮದ ಮಂಜು ಭೂಮಿಜ್ ಸಮುದಾಯದ ಸದಸ್ಯರಾಗಿರುವ ಅವರು ಭೂರಹಿತ ಕೃಷಿ ಕಾರ್ಮಿಕರು

"ಆ ಬಿಚಾರಪತಿಗೆ [ನ್ಯಾಯಾಧೀಶರಿಗೆ] ನಮ್ಮ ಮಕ್ಕಳಿಗೆ ಆಹಾರ, ಔಷಧಿ ಮತ್ತು ಫೋನ್ ಹೀಗೆ ಎಲ್ಲವನ್ನೂ ಮನೆಗೆ ಕಳುಹಿಸಲು ಹೇಳಿ. ಆಗ ನಾವು ಮನೆಯಲ್ಲಿ ಕುಳಿತುಕೊಳ್ಳುತ್ತೇವೆ,” ಎಂದು ಅವರು ಹೇಳುತ್ತಾರೆ. ನಾವು ಮಾಡುವ ಹರ್ಬಂಗಾ ಖತುನಿ [ಕಷ್ಟಪಟ್ಟು ದುಡಿಯುವುದನ್ನು] ಯಾರೂ ಇಷ್ಟಪಡುವುದಿಲ್ಲ. ಹಾಗಾದರೆ ನಾವು ಪ್ರತಿಭಟಿಸದೆ ಇನ್ನೇನು ಮಾಡಬೇಕು? ”

'The companies only understand profit', said Manju Singh (left), with Sufia Khatun (middle) and children from Bhangar block
PHOTO • Smita Khator
'The companies only understand profit', said Manju Singh (left), with Sufia Khatun (middle) and children from Bhangar block
PHOTO • Smita Khator
'The companies only understand profit', said Manju Singh (left), with Sufia Khatun (middle) and children from Bhangar block
PHOTO • Smita Khator

'ಕಂಪನಿಗಳಿಗೆ ಲಾಭವೊಂದೇ ಅರ್ಥವಾಗುವುದು' ಎಂದು ಮಂಜು ಸಿಂಗ್ ಹೇಳಿದರು (ಎಡ), ಸೂಫಿಯಾ ಖತುನ್ (ಮಧ್ಯಮ) ಮತ್ತು ಭಾಂಗರ್ ಬ್ಲಾಕ್‌ನ ಮಕ್ಕಳು

ಅವರು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಬರ್ಧಮನ್ ಜಿಲ್ಲೆಯ ತನ್ನ ಹಳ್ಳಿಯಲ್ಲಿ, "ನೂರು ದಿನಗಳ ಕೆಲಸದ ಯೋಜನೆಯಡಿ ಹೆಚ್ಚೆಂದರೆ 25 ದಿನಗಳ ಕೆಲಸ [ಒಂದು ವರ್ಷಕ್ಕೆ] ದೊರೆಯುತ್ತದೆ. ದಿನಗೂಲಿ ರೂ. 204. ನಮಗೆ ಕೆಲಸವನ್ನು ಖಾತರಿಪಡಿಸದ ಮೇಲೆ ಜಾಬ್‌ಕಾರ್ಡಿನ ಉಪಯೋಗವೇನು? ಏಕ್ಶೋ ದಿನಾರ್‌ ಶುಧು ನಾಮ್-ಕಾ- ವಾಸ್ತೆ [ಇದನ್ನು ನೂರು ದಿನಗಳ ಕೆಲಸವೆಂದು ಕರೆಯಯಲಾಗುತ್ತದೆ, ಆದರೆ ಆ ಹೆಸರು ಕೇವಲ  ಹೆಸರಿಗೆ ಮಾತ್ರ! ನಾನು ಸಾಮಾನ್ಯವಾಗಿ ಖಾಸಗಿ ಕೃಷಿ ಜಮೀನುಗಳಲ್ಲಿ ಕೆಲಸ ಮಾಡುತ್ತೇನೆ. ನಮ್ಮ ಪ್ರದೇಶದಲ್ಲಿ 180 ಮತ್ತು ಎರಡು ಕಿಲೋ ಅಕ್ಕಿಯನ್ನು ದಿನಗೂಲಿಯಾಗಿ [ಭೂಮಾಲೀಕರಿಂದ] ಪಡೆಯಲು ನಾವು ಸುಧೀರ್ಘ ಹೋರಾಟವವನ್ನೇ ಮಾಡಬೇಕಾಯಿತು.

ತನ್ನ ಮೂವತ್ತರ ದಶಕದ ನಡುವಿನಲ್ಲಿರುವ ಸಂತಾಲ್ ಆದಿವಾಸಿ ಭೂರಹಿತ ಕೃಷಿ ಕಾರ್ಮಿಕರಾದ ಆರತಿ ಸೊರೆನ್ ಕೂಡ ಅದೇ ಗ್ರಾಮದ ಮೋಹನ್‌ಪುರದಿಂದ ಬಂದಿದ್ದರು. "ನಮ್ಮ ಹೋರಾಟವು ಕೇವಲ ವೇತನಕ್ಕೆ ಸಂಬಂಧಿಸಿದ್ದಲ್ಲ. ಇದಕ್ಕೆ ಇನ್ನೂ ಹಲವು ಮಜಲುಗಳಿವೆ." ಎಂದು ಅವರು ಹೇಳಿದರು. "ಇತರರಂತಲ್ಲದೆ, ನಾವು ಪ್ರತಿಯೊಂದಕ್ಕೂ ಹೋರಾಡಬೇಕಿದೆ. ನಮ್ಮ ಸಮುದಾಯದ ಮಹಿಳೆಯರು ಒಗ್ಗೂಡಿಕೊಂಡು ಬಿಡಿಒ ಕಚೇರಿ ಮತ್ತು ಪಂಚಾಯಿತಿಗಳ ಮುಂದೆ ಕೂಗಾಡಿದಾಗ ಮಾತ್ರ ಅವರು ನಮ್ಮ ದನಿಯನ್ನು ಕೇಳಿಸಿಕೊಳ್ಳುತ್ತಾರೆ. ಈ ಕಾನೂನುಗಳು ನಮ್ಮನ್ನು ಹಸಿವಿನಿಂದ ಬಳಲುವಂತೆ ಮಾಡುತ್ತವೆ. ಬಿಚಾರಪತಿಗಳು ನಮ್ಮನ್ನು ಮನೆಗೆ ಹೋಗುವಂತೆ ಕೇಳುವ ಬದಲು ಕಾನೂನುಗಳನ್ನು ರದ್ದುಪಡಿಸಿ ಆದೇಶ ನೀಡಬಹುದಲ್ಲವೆ?"

ಕೋಲ್ಕತದ ಸಣ್ಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಂಜು ಮತ್ತು ಆರತಿಯವರ ಗಂಡಂದಿರು ತಮ್ಮ ಕೆಲಸ ಕಳೆದುಕೊಂಡು ಕಳೆದ ಹತ್ತು ತಿಂಗಳುಗಳಿಂದ ಮನೆಯಲ್ಲಿದ್ದಾರೆ. ಅವರ ಮಕ್ಕಳ ಬಳಿ ಆನ್ಲೈನ್‌ ಕ್ಲಾಸ್‌ಗಳಲ್ಲಿ ಭಾಗವಹಿಸಲು ಸ್ಮಾರ್ಟ್‌ ಫೋನ್‌ ಇಲ್ಲ. ಮನರೇಗಾ ಕೆಲಸದಲ್ಲಿನ ತೀವ್ರ ಕುಸಿತ ಅವರ ಸಮಸ್ಯೆಗಳ ಗಾಯಕ್ಕೆ ಇನ್ನಷ್ಟು ಉಪ್ಪು ಸವರಿದೆ. ಮಹಾಮಾರಿಯ ಹಿಂದೆಯೇ ಆಗಮಿಸಿದ ಲಾಕ್‌ಡೌನ್‌ ಸಾಕಷ್ಟು ಕೃಷಿ ಕಾರ್ಮಿಕ ಮಹಿಳೆಯರಿಗೆ ಜೀವನ ನಡೆಸುವುದಕ್ಕಾಗಿ ಮಹಾಜನ್‌ಗಳ (ಹಣಕಾಸು ವ್ಯವಹಾರಸ್ಥರು) ಬಳಿ ಸಾಲ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಿತು. “ನಾವು ಸರಕಾರ ನೀಡಿದ ಅಕ್ಕಿಯಿಂದ ಹೇಗೋ ಬದುಕುಳಿದೆವು, ಆದರೆ ಬಡವರು ಬದುಕಲು ಅಕ್ಕಿಯೊಂದೇ ಸಾಕೇ?” ಎಂದು ಕೇಳುತ್ತಾರೆ ಮಂಜು.

“ಹಳ್ಳಿಗಳಲ್ಲಿನ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.” ಎಂದು 40 ವರ್ಷದ ನಮಿತಾ ಹಲ್ದರ್‌ ಹೇಳಿದರು. ಇವರು ದಕ್ಷಿಣ 24 ಪರಗಣದ ರಾಯ್ದಿಘಿ ಗ್ರಾಮ ಪಂಚಾಯತ್‌ನ ರಾಯ್ದಿಘಿ ನಿವಾಸಿ ಹಾಗೂ ಪಶ್ಚಿಮ ಬಂಗಾ ಖೇತ್‌ಮಜೂರ್‌ ಸಮಿತಿಯ ಸದಸ್ಯರು. “ನಮಗೆ ಬೇಕಿರುವುದು ಉತ್ತಮ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ. ಏಕೆಂದರೆ ನಮಗೆ ದೊಡ್ಡ ಖಾಸಗಿ ನರ್ಸಿಂಗ್‌ ಹೋಮ್‌ಗಳಲ್ಲಿ ಚಿಕಿತ್ಸೆ ಪಡೆಯುವಷ್ಟು ಶಕ್ತಿಯಿಲ್ಲ. ಈ ಮೂರು ಕಾನೂನನುಗಳನ್ನು ಹಿಂಪಡೆಯದೇ ಹೋದರೆ ಕೃಷಿಯ ವಿಷಯದಲ್ಲೂ ಹೀಗೇ ಆಗುತ್ತದೆ! ಹೀಗೆಯೇ ಸರಕಾರವು ಎಲ್ಲವನ್ನೂ ದೊಡ್ಡ ದೊಡ್ಡ ಕಂಪನಿಗಳಿಗೆ ನೀಡುತ್ತಾ ಹೋದರೆ ಬಡವರು ಈಗ ಸೇವಿಸುತ್ತಿರುವ ಅಲ್ಪಸ್ವಲ್ಪ ಆಹಾರವೂ ಅವರ ಪಾಲಿಗೆ ಇಲ್ಲವಾಗುತ್ತದೆ. ಕಂಪನಿಗಳಿಗೆ ಅರ್ಥವಾಗುವುದು ಲಾಭವೊಂದೇ. ನಾವು ಸತ್ತರೂ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ಆಗ ನಾವೇ ಬೆಳೆಯುವ ಬೆಳೆಯನ್ನು ಕೊಳ್ಳಲು ಸಾಮರ್ಥ್ಯ ನಮ್ಮಲ್ಲಿ ಉಳಿದಿರುವುದಿಲ್ಲ.”

ಇವರಿಗೂ ಕೂಡ ಮಹಿಳೆಯರು ಹೋರಾಟದ ಸ್ಥಳದಲ್ಲಿರಬೇಕೆ ಎನ್ನುವ ಪ್ರಶ್ನೆ ಪ್ರಸ್ತುತವೇ ಅಲ್ಲ. ಅವರ ಪ್ರಕಾರ “ಮಹಿಳೆಯರು ನಾಗರಿಕತೆಯ ಆರಂಭದ ಕಾಲದಿಂದಲೂ ಬೇಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.”

Namita Halder (left) believes that the three laws will very severely impact women farmers, tenant farmers and farm labourers,
PHOTO • Smita Khator
Namita Halder (left) believes that the three laws will very severely impact women farmers, tenant farmers and farm labourers,
PHOTO • Smita Khator

ನಮಿತಾ ಹಲ್ದರ್‌ (ಎಡ) ಅವರ ಪ್ರಕಾರ ಮೂರು ಕೃಷಿ ಕಾನೂನುಗಳು ರೈತ ಮಹಿಳೆಯರು, ಗೇಣಿ ಬೇಸಾಯಗಾರರು ಮತ್ತು ಕೃಷಿ ಕಾರ್ಮಿಕರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿವೆ

ನಮಿತಾ ಅವರ ಪ್ರಕಾರ ಮೂರು ಕೃಷಿ ಕಾನೂನುಗಳು ಅವರಂತಹ ರೈತ ಮಹಿಳೆಯರು, ಗೇಣಿಗೆ ಜಮೀನು ಪಡೆದು ಭತ್ತ, ತರಕಾರಿ ಮತ್ತು ಇತರ ಧಾನ್ಯಗಳನ್ನು ಬೇಸಾಯ ಮಾಡುವವರು ಮತ್ತು ಕೃಷಿ ಕಾರ್ಮಿಕ ಮಹಿಳೆಯರ ಬದುಕಿನ ಮೇಲೆ ತೀವ್ರ ಪರಿಣಾಮ ಬೀರಲಿವೆ. “ನಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರೆಯದೆ ಹೋದರೆ ನಾವು ಮನೆಯಲ್ಲಿರುವ ನಮ್ಮ ಮಕ್ಕಳು, ಅತ್ತೆ-ಮಾವಂದಿರು, ಅಪ್ಪ-ಅಮ್ಮಂದಿರಿಗೆ ಆಹಾರ ನೀಡಲು ಹೇಗೆ ಸಾಧ್ಯ?” ಎಂದು ಕೇಳುತ್ತಾರೆ. “ದೊಡ್ಡ ಕಂಪನಿಯ ಮಾಲಿಕರು ನಮ್ಮಿಂದ ಅತಿ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿ ಮಾಡಿ ಸಂಗ್ರಹಿಸಿಟ್ಟು ಬೆಲೆಯನ್ನು ನಿಯಂತ್ರಿಸುತ್ತಾರೆ.”

ರೈತರು ವಿರೋಧಿಸುತ್ತಿರುವ ಆ ಮೂರು ಕಾನೂನುಗಳೆಂದರೆ: ರೈತ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರೋತ್ಸಾಹ ಮತ್ತು ನೆರವು) ಕಾಯ್ದೆ, 2020 ; ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ 2020ರ ಒಪ್ಪಂದ ಮಸೂದೆ ; ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ, 2020. ಈ ಕಾನೂನುಗಳನ್ನು ಕೇಂದ್ರ ಸರ್ಕಾರವು ಮೊದಲು ಜೂನ್ 5, 2020ರಂದು ಸುಗ್ರೀವಾಜ್ಞೆಗಳಾಗಿ ಹೊರಡಿಸಿ, ನಂತರ ಸೆಪ್ಟೆಂಬರ್ 14ರಂದು ಸಂಸತ್ತಿನಲ್ಲಿ ಕೃಷಿ ಮಸೂದೆಗಳಾಗಿ ಪರಿಚಯಿಸಿ ಅದೇ ತಿಂಗಳ 20ರೊಳಗೆ ಕಾಯಿದೆಗಳನ್ನಾಗಿ ಆತುರದಿಂದ ಜಾರಿಗೆ ತಂದಿದೆ. ಈ ಕಾನೂನುಗಳು ಪ್ರತಿ ಭಾರತೀಯರ ಮೇಲೆ ಪರಿಣಾಮ ಬೀರಲಿರುವುದರಿಂದಲೂ ಅವುಗಳನ್ನು ಟೀಕಿಸಲಾಗುತ್ತಿದೆ. ದೇಶದ ಎಲ್ಲಾ ನಾಗರಿಕರ ಕಾನೂನು ನೆರವು ಪಡೆಯುವ ಹಕ್ಕನ್ನು ಈ ಕಾನೂನುಗಳು ಕಸಿದುಕೊಳ್ಳುತ್ತವೆ, ಇದು ಭಾರತದ ಸಂವಿಧಾನದ 32ನೇ ವಿಧಿಯನ್ನು ದುರ್ಬಲಗೊಳಿಸುತ್ತದೆ.

ಈ ವಿಧಾನಸಭೆಯಲ್ಲಿ ಪಾಸ್‌ ಮಾಡಲಾದ ಹಲವು ಬೇಡಿಕೆಗಳು ರೈತ ಮಹಿಳೆಯರು ಮತ್ತು ಕಾರ್ಮಿಕರ ಸಮಸ್ಯೆಯನ್ನು ಪ್ರತಿಬಿಂಬಿಸುತ್ತಿದ್ದವು. ಈ ಬೇಡಿಕೆಗಳಲ್ಲಿ ತಕ್ಷಣವೇ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು, ಕೃಷಿಯಲ್ಲಿ ಮಹಿಳೆಯರ ಶ್ರಮವನ್ನು ಗುರುತಿಸಿ ಅವರಿಗೆ ರೈತರ ಸ್ಥಾನವನ್ನು ನೀಡಬೇಕು, ಹಾಗೂ ನ್ಯಾಷನಲ್‌ ಕಮಿಷನ್‌ ಆನ್‌ ಫಾರ್ಮರ್ಸ್‌  (ಸ್ವಾಮಿನಾಥನ್‌ ಆಯೋಗ) ನ ಶಿಫಾರಸಿನಂತೆ ಕನಿಷ್ಟ ಬೆಂಬಲ ಬೆಲೆಯನ್ನು ಖಾತರಿಗೊಳಿಸುವ ಕಾನೂನು ಜಾರಿಗೆ ತರಬೇಕು. ಮತ್ತು ಸಾರ್ವಜನಿಕ ಆಹಾರ ಸರಬರಾಜು ವ್ಯವಸ್ತೆಯನ್ನು ಬಲಪಡಿಸಬೇಕು ಎನ್ನುವುದು ಕೂಡ ಸೇರಿತ್ತು.

ದಿನದ ಕೊನೆಯಲ್ಲಿ, ದೀರ್ಘ ಮಶಲ್‌ ಮಿಚ್ಚಿಲ್‌ (ಟಾರ್ಚ್‌ ರ‍್ಯಾಲಿ) ಏರ್ಪಡಿಸಲಾಗಿತ್ತು. ಇದರಲ್ಲಿ ಸುಮಾರು 500 ಮಹಿಳೆಯರು ಭಾಂಗರ್‌ ಬ್ಲಾಕ್‌ ದಕ್ಷಿಣ ಪರಗಣ 24ರ ಮುಸ್ಲಿಮ್‌ ರೈತ ಮಹಿಳೆಯರೊಂದಿಗೆ ಸೇರಿ ಕಪ್ಪು ಆಗಸದೆದರು ಬೆಳಕು ಹಾಯಿಸಿದರು.

ಇಲಸ್ಟ್ರೇಷನ್:‌ ಲಬಾನಿ ಜಂಗಿ, ಮೂಲತಃ ಪಶ್ಚಿಮ ಬಂಗಾಳದ ನದಿಯಾ ಜಿಲ್ಲೆಯ  ಸಣ್ಣ ಪಟ್ಟಣದವರಾದ ಇವರು ಸೆಂಟರ್‌ ಫಾರ್‌ ಸ್ಟಡೀಸ್‌ ಇನ್‌ ಸೋಷಿಯಲ್‌ ಸೈನ್ಸ್‌ ಕೋಲ್ಕತಾ. ಇಲ್ಲಿ ಬೆಂಗಾಲಿ ವಲಸೆ ಕಾರ್ಮಿಕರ ಕುರಿತು ಪಿಎಚ್‌ಡಿ ಮಾಡುತ್ತಿದ್ದಾರೆ. ಅಭಿಜಾತ ಕಲಾವಿದೆಯಾಗಿರುವ ಇವರಿಗೆ ಪ್ರಯಾಣವೆಂದರೆ ಪ್ರೀತಿ .

ಅನುವಾದ - ಶಂಕರ ಎನ್. ಕೆಂಚನೂರು

Smita Khator

اسمِتا کھٹور، پیپلز آرکائیو آف رورل انڈیا (پاری) کے ہندوستانی زبانوں کے پروگرام، پاری بھاشا کی چیف ٹرانسلیشنز ایڈیٹر ہیں۔ ترجمہ، زبان اور آرکائیوز ان کے کام کرنے کے شعبے رہے ہیں۔ وہ خواتین کے مسائل اور محنت و مزدوری سے متعلق امور پر لکھتی ہیں۔

کے ذریعہ دیگر اسٹوریز اسمیتا کھٹور
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru