ಆರ್. ಕೈಲಾಸಂ ಸಾಮಾನ್ಯವಾಗಿ ಬ್ಯಾಂಕ್ ಎಂದರೆ ಗೊಂದಲಕ್ಕೊಳಗಾಗುತ್ತಾರೆ. "ನನ್ನ ಪಾಸ್‌ಬುಕ್ ನವೀಕರಿಸಲು ನಾನು ಹೋದಾಗಲೆಲ್ಲಾ, ಯಂತ್ರವು ದುರಸ್ತಿ ಹಂತದಲ್ಲಿದೆಯೆಂದು ಅವರು ನನ್ನನ್ನು ಕಳುಹಿಸುತ್ತಾರೆ, ಅಥವಾ  ಇನ್ನೊಮ್ಮೆ ಬರುವಂತೆ ಹೇಳುತ್ತಾರೆ" ಎಂದು ಅವರು ಹೇಳುತ್ತಾರೆ.

ಸುಮಾರು ಐದು ಕಿಲೋಮೀಟರ್ ದೂರದಲ್ಲಿರುವ ಕೆ.ಜಿ.ಕಂಡಿಗೈ ಪಟ್ಟಣದ ಬ್ಯಾಂಕ್ ತಲುಪಲು ಅವರು ತಮ್ಮ ಊರಾದ ಬಂಗಲಮೇಡುನಿಂದ ಸುಮಾರು ಎರಡು ಗಂಟೆಗಳ ಕಾಲ ನಡೆಯಬೇಕು. (ಒಂದು ವರ್ಷದ ಹಿಂದೆ, ಅರ್ಧದಷ್ಟು ದೂರದವರೆಗೆ ಬಸ್ ಸೇವೆ ಲಭ್ಯವಿತ್ತು, ಆದರೆ ಈಗ ಅದನ್ನು ನಿಲ್ಲಿಸಲಾಗಿದೆ).

ಅವರ ನಿಜವಾದ , ಹೋರಾಟ ಬ್ಯಾಂಕಿನಲ್ಲಿ ಪ್ರಾರಂಭವಾಗುತ್ತದೆ. ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಕೆನರಾ ಬ್ಯಾಂಕಿನ ಕೆ.ಜಿ.ಕಂಡಿಗೈ ಶಾಖೆಯಲ್ಲಿ ಪಾಸ್‌ಬುಕ್ ನಮೂದನೆಗಳಿಗಾಗಿ ಸ್ವಯಂ ಚಾಲಿತ ಯಂತ್ರವಿದೆ. ಕೈಲಾಸಂ ಅದನ್ನು ಬಳಸಲು ಎಂದಿಗೂ ಸಾಧ್ಯವಾಗಿಲ್ಲ. "ಇದು ನನ್ನ ಮಟ್ಟಿಗೆ ಕೆಲಸ ಮಾಡುವುದಿಲ್ಲ" ಎಂದು ಅವರು ಹೇಳುತ್ತಾರೆ.

ಒಂದು ಬೆಳಿಗ್ಗೆ, ಅವರು ತನ್ನ ಬ್ಯಾಂಕಿಂಗ್ ತೊಂದರೆಗಳ ಬಗ್ಗೆ ನನ್ನೊಂದಿಗೆ ಮಾತನಾಡುವ ಸಮಯದಲ್ಲಿ, ಅಲ್ಲೇ ಪಕ್ಕದಲ್ಲಿ ಹತ್ತಿರದ ವೆಳಿಕಾಥನ್ ಮರದ ವಿರಳ ನೆರಳಿನಲ್ಲಿ ನೆಲದ ಮೇಲೆ ಕುಳಿತಿದ್ದ ಕೆಲವು ಮಹಿಳೆಯರು ನಮ್ಮೊಂದಿಗೆ ಸೇರಿಕೊಂಡರು. “ಪಾಸ್‌ಪುಸ್ತಕದಲ್ಲಿ ಎಂಟ್ರಿಗಳನ್ನು ಮಾಡಿಸಲು ನಿಮ್ಮ ಪುಸ್ತಕದಲ್ಲಿ ಸ್ಟಿಕ್ಕರ್‌ ಇರಬೇಕು ತಾತ” ಎಂದು ಅವರಲ್ಲಿ ಒಬ್ಬರು ಹೇಳಿದರು. ಅವರು ಹೇಳಿದ್ದು ಸರಿಯಿತ್ತು: ಕೈಲಾಸಂ ಅವರ ಪಾಸ್‌ಬುಕ್‌ನಲ್ಲಿ ಬಾರ್‌ಕೋಡ್ ಇದ್ದಿರಲಿಲ್ಲ, ಆದರೆ ಯಂತ್ರವು ಕಾರ್ಯನಿರ್ವಹಿಸಲು ಅದು ಅಗತ್ಯವಾಗಿರುತ್ತದೆ. “ಅವರು ಯಾಕೆ ಸ್ಟಿಕ್ಕರ್ ನೀಡಲಿಲ್ಲ ಎಂದು ನನಗೆ ಗೊತ್ತಿಲ್ಲ. ನನಗೆ ಈ ವಿಷಯಗಳು ಅರ್ಥವಾಗುತ್ತಿಲ್ಲ" ಎಂದು ಅವರು ಹೇಳುತ್ತಾರೆ. ಮಹಿಳೆಯರಿಗೂ ಈ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ ಅವರಲ್ಲಿ ಒಬ್ಬರ ಊಹೆಯ ಪ್ರಕಾರ “ನೀವು [ಎಟಿಎಂ] ಕಾರ್ಡ್ ಪಡೆದರೆ, ನಿಮಗೆ ಸ್ಟಿಕ್ಕರ್ ಸಿಗುತ್ತದೆ.” "ನೀವು 500 ರೂಪಾಯಿಗಳನ್ನು ಪಾವತಿಸಿ ಹೊಸ ಖಾತೆಯನ್ನು ತೆರೆಯಬೇಕು" ಎಂದು ಮತ್ತೊಬ್ಬರು ಹೇಳುತ್ತಾರೆ. "ಝೀರೋ ಬ್ಯಾಲೆನ್ಸ್ ಖಾತೆಯಾಗಿದ್ದರೆ, ನಿಮಗೆ ಸ್ಟಿಕ್ಕರ್‌ ಸಿಗುವುದಿಲ್ಲ" ಎಂದು ಮೂರನೇ ಮಹಿಳೆ ಹೇಳುತ್ತಾರೆ. ಕೈಲಾಸಂ ಗೊಂದಲಕ್ಕೊಳಗಾಗಿದ್ದರು.

ತನ್ನ ಬ್ಯಾಂಕಿಂಗ್ ಹೋರಾಟದಲ್ಲಿ ಅವರು ಒಬ್ಬಂಟಿಯಾಗಿಲ್ಲ. ಬಂಗಲಮೇಡುವಿನ ಅನೇಕರಿಗೆ, ಅವರ ಖಾತೆಗಳನ್ನು ನಿರ್ವಹಿಸುವುದು, ಹಣವನ್ನು ಹಿಂತೆಗೆದುಕೊಳ್ಳುವುದು ಅಥವಾ ಅವರ ಆದಾಯವನ್ನು ತಿಳಿಯುವುದು ಸುಲಭವಲ್ಲ. ಈ ಸಣ್ಣ ಹಳ್ಳಿಯನ್ನು ಅಧಿಕೃತವಾಗಿ ಚೆರುಕ್ಕನೂರ್ ಇರುಳರ್ ಕಾಲೋನಿ ಎಂದು ಕರೆಯಲಾಗುತ್ತದೆ - ಇದು ತಿರುತ್ತನಿ ಬ್ಲಾಕ್‌ನಲ್ಲಿ ತೆರೆದ ಕುರುಚಲು ಪ್ರದೇಶದ ಮಧ್ಯದಲ್ಲಿರುವ ಒಂದೇ ಬೀದಿಯಾಗಿದೆ. ರಸ್ತೆಯ ಎರಡೂ ಬದಿಯಲ್ಲಿ 35 ಇರುಳ ಕುಟುಂಬಗಳ ಸಣ್ಣ ಗುಡಿಸಲುಗಳು ಮತ್ತು ಕೆಲವು ಪಕ್ಕಾ ಮನೆಗಳಿವೆ. (ಸಮುದಾಯದ ಹೆಸರನ್ನು ಈಗ ಸಾಮಾನ್ಯವಾಗಿ ಅಧಿಕೃತ ದಾಖಲೆಗಳಲ್ಲಿ ಇರುಳಾರ್ ಎಂದು ಉಚ್ಚರಿಸಲಾಗುತ್ತದೆ.)

60 ವರ್ಷದ ಕೈಲಾಸಂ ಮತ್ತು ಅವರ ಪತ್ನಿ ಕೆ.ಸಂಜಯಮ್ಮ (45) ಇಲ್ಲಿ ಹುಲ್ಲಿನ ಛಾವಣಿಯಿರುವ ಮಣ್ಣಿನ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಅವರು ನಾಲ್ಕು ಆಡುಗಳನ್ನು ಹೊಂದಿದ್ದು, ಅವುಗಳನ್ನು ಸಂಜಯಮ್ಮ ನೋಡಿಕೊಳ್ಳುತ್ತಾರೆ; ಅವರ ನಾಲ್ಕು ವಯಸ್ಕ ಮಕ್ಕಳು ತಮ್ಮ ಕುಟುಂಬಗಳೊಂದಿಗೆ ಹೊರಹೋಗಿದ್ದಾರೆ. ದಿನಗೂಲಿ ಕೆಲಸ ಮಾಡುವ  ಕೈಲಾಸಂ, “ನಾನು ಹೊಲಗಳಲ್ಲಿ ಕೆಲಸ ಮಾಡಿದರೆ ಇಡೀ ದಿನ ಬಾಗಿಕೊಂಡಿರಬೇಕು. ನನಗೆ ತೀವ್ರ ಬೆನ್ನುನೋವು ಬರುತ್ತದೆ ಮತ್ತು ನನ್ನ ಮೂಳೆಗಳು ಘಾಸಿಗೊಳ್ಳುತ್ತವೆ. ಈ ದಿನಗಳಲ್ಲಿ ನಾನು ಏರಿ ವೇಲೈ [ಕೆರೆ ಕೆಲಸ, ಎಂಜಿಎನ್‌ಆರ್‌ಇಜಿಎ  ಕೆಲಸದ ಸ್ಥಳೀಯ ಹೆಸರು] ಬಯಸುತ್ತೇನೆ.” ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ 2005 ಪ್ರತಿ ಗ್ರಾಮೀಣ ಕುಟುಂಬಕ್ಕೆ ಒಂದು ವರ್ಷದಲ್ಲಿ ಕನಿಷ್ಠ 100 ದಿನಗಳ ಕೂಲಿ ಕೆಲಸಕ್ಕೆ ಅರ್ಹತೆ ನೀಡುತ್ತದೆ - ಬಂಗಲಮೇಡುವಿನ ಇರುಳರಿಗೆ 100 ದಿನಗಳಷ್ಟು ಕೆಲಸ ಅಪರೂಪವಾಗಿ ದೊರೆಯುತ್ತದೆ.

On R. Kailasam'a visits to the bank, attempts to update his passbook are often unsuccessful; the passbook is his only way to keep track of his money
PHOTO • Smitha Tumuluru
On R. Kailasam'a visits to the bank, attempts to update his passbook are often unsuccessful; the passbook is his only way to keep track of his money
PHOTO • Smitha Tumuluru

ಆರ್. ಕೈಲಾಸಮ್ ಅವರು ಬ್ಯಾಂಕ್‌ಗೆ ಭೇಟಿ ನೀಡಿದಾಗ, ಅವರ ಪಾಸ್‌ಬುಕ್ಕನ್ನು ನವೀಕರಿಸುವ ಪ್ರಯತ್ನಗಳು ಹೆಚ್ಚಾಗಿ ವಿಫಲಗೊಳ್ಳುತ್ತವೆ; ಪಾಸ್ ಬುಕ್ ಅವರ ಹಣವನ್ನು ಟ್ರ್ಯಾಕ್ ಮಾಡಲು ಇರುವ ಏಕೈಕ ಮೂಲವಾಗಿದೆ

ಇರುಳ ಜನಾಂಗವನ್ನು ತಮಿಳುನಾಡಿನಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪು ಎಂದು ಪಟ್ಟಿಮಾಡಲಾಗಿದೆ - ಅವರು ಆದಾಯಕ್ಕಾಗಿ ಹೆಚ್ಚಾಗಿ ದಿನಗೂಲಿ ಕೆಲಸದ ಮೇಲೆ ಅವಲಂಬಿತವಾಗಿದ್ದಾರೆ. ಬಂಗಲಮೇಡುವಿನ ಪುರುಷರು ಭತ್ತದ ಗದ್ದೆಗಳಲ್ಲಿ, ಇಟ್ಟಿಗೆ ಗೂಡುಗಳು ಮತ್ತು ನಿರ್ಮಾಣ ಸ್ಥಳಗಳಲ್ಲಿ ಕಾಲ ಕಾಲಕ್ಕೆ ಸಿಕ್ಕಂತಹ ಉದ್ಯೋಗಗಳನ್ನು ಮಾಡುತ್ತಾರೆ, ದಿನಕ್ಕೆ 350-400 ರೂಪಾಯಿಗಳನ್ನು ನಗದು ರೂಪದಲ್ಲಿ ಗಳಿಸುತ್ತಾರೆ. ಅವರಿಗೆ ಕೆಲಸ ಸಿಗದ ದಿನಗಳಲ್ಲಿ, ಅವರು ಹತ್ತಿರದ ಕುರುಚಲು ಕಾಡಿನಲ್ಲಿ ತಿನ್ನಬಹುದಾದ ಹಣ್ಣುಗಳು ಮತ್ತು ಗೆಡ್ಡೆಗಳನ್ನು ಹುಡುಕುತ್ತಾರೆ. ಅವರು ತಮ್ಮ ದೈನಂದಿನ ಆಹಾರಕ್ಕಾಗಿ ಇಲಿಗಳು, ಮೊಲಗಳು, ಅಳಿಲುಗಳು ಮತ್ತು ಪಕ್ಷಿಗಳಂತಹ ಸಣ್ಣ ಪ್ರಾಣಿಗಳನ್ನು ಬೇಟೆಯಾಡುತ್ತಾರೆ. (ನೋಡಿ: Digging up buried treasures in Bangalamedu ಮತ್ತು On a different route with rats in Bangalamedu )

ಈ ಹಾಡಿಯಲ್ಲಿನ ಹೆಚ್ಚಿನ ಮಹಿಳೆಯರಿಗೆ, ಇಟ್ಟಿಗೆ ಗೂಡುಗಳಲ್ಲಿ ಆಯಾ ಹಂಗಾಮಿನ ಕೆಲಸಗಳನ್ನು ಹೊರತುಪಡಿಸಿದರೆ, ಎಂಜಿಎನ್‌ಆರ್‌ಇಜಿಎ (ಮನರೇಗಾ) ಕೆಲಸವು ಆದಾಯದ ಏಕೈಕ ಮೂಲವಾಗಿದೆ, (ನೋಡಿ: ಬಂಗಲಮೇಡು: 'ಮಹಿಳೆಯರಿಗೆ ಉದ್ಯೋಗಗಳು ಎಲ್ಲಿವೆ? ' )

ಕೆರೆ ಹೂಳೆತ್ತುವುದು, ಹೊಂಡಗಳನ್ನು ಅಗೆಯುವುದು ಅಥವಾ ಎಂಜಿಎನ್‌ಆರ್‌ಇಜಿಎ ಕೆಲಸದ ಸ್ಥಳಗಳಲ್ಲಿ ಮರಗಳನ್ನು ನೆಡುವುದು ಇಂತಹ ಕೆಲಸಗಳಿಗೆ ಇರುಳರು ದಿನಕ್ಕೆ ಸರಿಸುಮಾರು  175 ರೂ ವೇತನ ಪಡೆಯುತ್ತಾರೆ. ಈ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

"ನಾನು ಈ ವಾರ ಕೆಲಸ ಮಾಡಿದರೆ, ಮುಂದಿನ ವಾರದ ನಂತರ ಒಂದು ವಾರದಲ್ಲಿ ನಾನು ಹಣವನ್ನು ಪಡೆಯುತ್ತೇನೆ" ಎಂದು ಕೈಲಾಸಂ ಹೇಳುತ್ತಾರೆ. ತಿಂಗಳ ಕೊನೆಯಲ್ಲಿ ಅವರು ಎಷ್ಟು ಉಳಿತಾಯ ಮಾಡುತ್ತಾರೆನ್ನುವುದು ಅವರಿಗೆ ತಿಳಿದಿಲ್ಲ: “ನಮಗೆ ತಿಂಗಳಿಗೆ ಸುಮಾರು 500 ರೂಪಾಯಿಗಳು ಬೇಕಾಗುತ್ತವೆ [ಮನೆಯ ಖರ್ಚುಗಳಿಗಾಗಿ],” ಎಂದು ಅವರು ಹೇಳುತ್ತಾರೆ. “ಉಳಿದಿದ್ದು ಬ್ಯಾಂಕಿನಲ್ಲಿದೆ. ಒಂದು ಬಾರಿ ನಾನು ಬ್ಯಾಂಕಿನಲ್ಲಿ 3,000 ಹೊಂದಿದ್ದೆ, ಅದನ್ನು ನನ್ನ ಮಗನಿಗೆ ಯಾವುದೋ ಖರೀದಿಗಾಗಿ ಕೊಟ್ಟಿದ್ದೆ. "

ಬ್ಯಾಂಕಿನಲ್ಲಿ ಹಣವನ್ನು ಹಿಂಪಡೆಯಲು, ಕೈಲಾಸಂ ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. “ಅವರು ನನ್ನ ಬಳಿ ಚಲನ್ ನೀಡುವಂತೆ ಕೇಳುತ್ತಾರೆ. ಅದನ್ನು ಹೇಗೆ ತುಂಬಿಸಬೇಕೆಂದು ನನಗೆ ತಿಳಿದಿಲ್ಲ" ಎಂದು ಅವರು ಹೇಳುತ್ತಾರೆ. ಅವರು ಮತ್ತು ಸಂಜಯಮ್ಮ ಇಬ್ಬರೂ ಓದಲು ಅಥವಾ ಬರೆಯಲು ಕಲಿತಿಲ್ಲ. "ಬ್ಯಾಂಕ್ ಸಿಬ್ಬಂದಿ ನಮಗೆ ಅದನ್ನು ತುಂಬಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ" ಎಂದು ಅವರು ಹೇಳುತ್ತಾರೆ. "ಯಾರಾದರೂ ಬಂದು ನನಗಾಗಿ ಅದನ್ನು ತುಂಬಿಸಿಕೊಡುವ ತನಕ ನಾನು ಕಾಯುತ್ತೇನೆ. ನಾನು [2-3 ತಿಂಗಳಿಗೊಮ್ಮೆ] ಬ್ಯಾಂಕ್‌ ಹೋದಾಗ 1,000 ರೂಪಾಯಿಗಳಿಗಿಂತ ಹೆಚ್ಚು ಹಣ ಹಿಂಪಡೆಯುವುದಿಲ್ಲ."

ಅವರಿಗೆ ಹೆಚ್ಚಾಗಿ ಸಹಾಯ ಮಾಡುವುದು ಜಿ. ಮಣಿಗಂಡನ್‌. ಅವರು ಕೈಲಾಸಮ್‌ ಅವರಿಗೆ ಬ್ಯಾಂಕ್‌ ಸಂಬಂಧಿ ಕೆಲಸಗಳಲ್ಲಿ ಸಹಾಯ ಮಾಡುವುದಲ್ಲದೆ , ಇತರ ಇರುಳರಿಗೆ ಆಧಾರ್‌ ಕಾರ್ಡ್‌ ಮತ್ತು ಅಥವಾ ಸರ್ಕಾರಿ ಯೋಜನೆಗಳು ಮತ್ತು ಪಿಂಚಣಿ ಸೌಲಭ್ಯಗಳಿಗೆ ಅರ್ಜಿ ಸಲ್ಲಿಸುವಾಗಲೂ ಸಹಾಯ ಮಾಡುತ್ತಾರೆ.

Most of the families in the single-steet Bangalamedu hamlet have accounts in a bank branch in K. G. Kandigai town. Right: Manigandan, who runs after-school classes, helps people in the hamlet with their bank-related work
PHOTO • G. Manigandan
Most of the families in the single-steet Bangalamedu hamlet have accounts in a bank branch in K. G. Kandigai town. Right: Manigandan, who runs after-school classes, helps people in the hamlet with their bank-related work
PHOTO • Smitha Tumuluru

ಒಂದೇ ಬೀದಿಯಿರುವ ಬಂಗಲಮೇಡುವಿನ ಹೆಚ್ಚಿನ ಕುಟುಂಬಗಳು ಕೆ. ಜಿ. ಕಂಡಿಗೈ ಪಟ್ಟಣದ ಬ್ಯಾಂಕ್ ಶಾಖೆಯಲ್ಲಿ ಖಾತೆಗಳನ್ನು ಹೊಂದಿವೆ. ಬಲ: ಶಾಲೆಯ ನಂತರದ ತರಗತಿಗಳನ್ನು ನಡೆಸುತ್ತಿರುವ ಮಣಿಗಂಡನ್, ಹಳ್ಳಿಯಲ್ಲಿರುವ ಜನರಿಗೆ ತಮ್ಮ ಬ್ಯಾಂಕ್ ಸಂಬಂಧಿತ ಕೆಲಸಗಳಿಗೆ ಸಹಾಯ ಮಾಡುತ್ತಾರೆ

“ನಾನು [ಬ್ಯಾಂಕ್‌] ಗೆ ಭೇಟಿ ನೀಡಿದಾಗಲೆಲ್ಲಾ, ಯಾರದ್ದಾದರೂ ಸಹಾಯ ಪಡೆಯಲೆಂದು ಯಾವಾಗಲೂ 5 ಅಥವಾ 6 ಜನರು ಕಾಯುತ್ತಿರುತ್ತಾರೆ. ಚಲನ್‌ಗಳು ಇಂಗ್ಲಿಷ್‌ನಲ್ಲಿರುತ್ತವೆ. 9 ನೇ ತರಗತಿಗೆ ಶಾಲೆಯಿಂದ ಹೊರಗುಳಿದ 36 ವರ್ಷದ ಮಣಿಗಂಡನ್ ಅವರು ಮಕ್ಕಳಿಗಾಗಿ ಶಾಲೆಯ ನಂತರದ ತರಗತಿಗಳನ್ನು ನಡೆಸುವ ಸ್ಥಳೀಯ ಲಾಭರಹಿತ ಸಂಸ್ಥೆಯೊಂದಿಗೆ ಕೆಲಸ ಮಾಡುತ್ತಾರೆ. "ಮೊದಲಿಗೆ ನಾನು ತಪ್ಪುಗಳಾಗಬಹುದೆಂದು ಹೆದರುತ್ತಿದ್ದೆ" ಎಂದು ಅವರು ಹೇಳುತ್ತಾರೆ. "ನಾವು ಏನನ್ನಾದರೂ ಹೊಡೆದು ಹಾಕಿದರೆ ಅಥವಾ ಸರಿಪಡಿಸಿದರೆ, ಅವರು ಅದನ್ನು ಹರಿದು ಹಾಕುತ್ತಾರೆ ಮತ್ತು ನಾವು ಹೊಸ ಹಾಳೆಯಲ್ಲಿ ಮತ್ತೆ ಬರೆಯಬೇಕಾಗುತ್ತದೆ." ಕಳೆದ ಕೆಲವು ತಿಂಗಳುಗಳಿಂದ, ಚಲನ್‌ಗಳು ತಮಿಳಿನಲ್ಲಿಯೂ ಲಭ್ಯವಿದೆ

ಕೈಲಾಸಂ ಅವರ ನೆರೆಯ ಗೋವಿಂದಮ್ಮಾಳ್, 55, ಅನಕ್ಷರಸ್ಥೆ, ತನ್ನ ಎಂಜಿಎನ್‌ಆರ್‌ಇಜಿಎ ವೇತನ ಮತ್ತು ಮಾಸಿಕ ಪಿಂಚಣಿ ರೂ. 1,000 ಪಡೆಯುವಾಗಲೂ ಇದೇ ಸಮಸ್ಯೆ ಎದುರಿಸುತ್ತಾರೆ. ಅವರು ಒಬ್ಬಂಟಿಯಾಗಿ ವಾಸಿಸುವ ವಿಧವೆ; ಅವರ ಮಗಳು ಮತ್ತು ಇಬ್ಬರು ಗಂಡು ಮಕ್ಕಳು ಅದೇ ಹಳ್ಳಿಯಲ್ಲಿ ತಮ್ಮ ಸ್ವಂತ ಮನೆಗಳಲ್ಲಿ ವಾಸಿಸುತ್ತಿದ್ದಾರೆ. “ನಾನು ನನ್ನ ಹೆಬ್ಬೆರಳಿನಿಂದ ಗುರುತು ಹಾಕುತ್ತೇನೆ. ಆದ್ದರಿಂದ ಅವರು [ಬ್ಯಾಂಕ್ ಸಿಬ್ಬಂದಿ] ನನ್ನ ಚಲನ್ ಸಲ್ಲಿಸಲು ಸಾಕ್ಷಿ ಸಹಿ ಪಡೆಯುವಂತೆ ಕೇಳುತ್ತಾರೆ. ಆ ಫಾರ್ಮ್ ಅನ್ನು ಭರ್ತಿ ಮಾಡಿಕೊಡುವ ವ್ಯಕ್ತಿಯನ್ನೇ ಸಹಿ ಹಾಕಬಹುದೇ ಎಂದು ಸಾಮಾನ್ಯವಾಗಿ ಕೇಳುತ್ತೇನೆ,” ಎಂದು ಅವರು ಹೇಳುತ್ತಾರೆ.

ಚಲನ್ ತುಂಬುವ ವ್ಯಕ್ತಿಯು ತನ್ನ ಸ್ವಂತ ಖಾತೆ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ. ಮಣಿಗಂಡನ್ ಒಂದು ಘಟನೆಯನ್ನು ನಗುವಿನೊಂದಿಗೆ ನೆನಪಿಸಿಕೊಳ್ಳುತ್ತಾರೆ: “ನಾನು ಒಮ್ಮೆ ಒಬ್ಬರಿಗೆ ಸಾಕ್ಷಿಯಾಗಿ ಸಹಿ ಮಾಡಿ ನನ್ನ ಖಾತೆ ಸಂಖ್ಯೆಯನ್ನು ಬರೆದಿದ್ದೆ. ಬ್ಯಾಂಕ್ ನನ್ನ ಖಾತೆಯಿಂದ ಹಣವನ್ನು ಕಡಿತಗೊಳಿಸಿತ್ತು. ಅದೃಷ್ಟವಶಾತ್, ಅವರು ದೋಷವನ್ನು ಗಮನಿಸಿದ್ದರಿಂದ ಹಣವನ್ನು ಮರಳಿ ಪಡೆದುಕೊಂಡೆ."

ತನ್ನ ಸ್ವಂತ ಬ್ಯಾಂಕ್ ವಹಿವಾಟಿಗಾಗಿ, ಮಣಿಗಂಡನ್ ಎಟಿಎಂ ಕಾರ್ಡ್ ಬಳಸುತ್ತಾರೆ, ತಮಿಳನ್ನು ಪರದೆಯ ಮೇಲೆ ವಹಿವಾಟಿನ ಭಾಷೆಯಾಗಿ ಆರಿಸಿಕೊಳ್ಳುತ್ತಾರೆ. ಅವರು ಮೂರು ವರ್ಷಗಳ ಹಿಂದೆ ಕಾರ್ಡ್ ಪಡೆದರು, ಆದರೆ ಅದನ್ನು ಬಳಸಿಕೊಳ್ಳಲು ಸ್ವಲ್ಪ ಸಮಯ ಹಿಡಿಯಿತು. "ಹಣವನ್ನು ಹಿಂಪಡೆಯುವುದು ಮತ್ತು ನನ್ನ ಖಾತೆಯ ಬಾಕಿ ಪರಿಶೀಲಿಸುವುದು ಹೇಗೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆರಂಭದಲ್ಲಿ ನನಗೆ 20 ಪ್ರಯತ್ನಗಳು ಬೇಕಾದವು."

ಕೈಲಾಸಂ ಅಥವಾ ಗೋವಿಂದಮ್ಮಾಳ್ ಎಟಿಎಂ ಕಾರ್ಡ್ ಏಕೆ ಬಳಸುವುದಿಲ್ಲ? ಕೈ ನಾಟು – ಹೆಬ್ಬೆಟ್ಟು ಬಳಸುವವರಿಗೆ ಎಟಿಎಂ ಕಾರ್ಡ್‌ಗಳನ್ನು ನೀಡಲಾಗುವುದಿಲ್ಲ ಎಂದು ಮಣಿಗಂಡನ್ ಹೇಳುತ್ತಾರೆ. ಕೆ.ಜಿ. ಕಂಡಿಗೈ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನ ಶಾಖಾ ವ್ಯವಸ್ಥಾಪಕ. ಬಿ. ಲಿಂಗಮಯ್ಯ, ನಿಯಮ ಮೊದಲಿನಂತೆಯೇ ಇದ್ದರೂ, ಬ್ಯಾಂಕ್ ಈಗ ಎಟಿಎಂ ಕಾರ್ಡ್‌ಗಳನ್ನು ಅರ್ಜಿ ಸಲ್ಲಿಸುವ ಯಾರಿಗಾದರೂ ನೀಡುತ್ತದೆ. "ಜನ ಧನ್ [ಖಾತೆ] ಆಗಿದ್ದಲ್ಲಿ ಅಥವಾ ಅವರು ಹೆಬ್ಬೆಟ್ಟು ಬಳಸುತ್ತಿದ್ದಲ್ಲಿ ಪರವಾಗಿಲ್ಲ" ಎಂದು ಅವರು ಹೇಳುತ್ತಾರೆ. ಆದರೆ ಬಂಗಲಮೇಡುವಿನ ಅನೇಕರಿಗೆ ಈ ಸೌಲಭ್ಯದ ಬಗ್ಗೆ ತಿಳಿದಿಲ್ಲ.

The bank has set up a small unit in Cherukkanur panchayat village
PHOTO • Smitha Tumuluru

ಚೆರುಕ್ಕನೂರು ಪಂಚಾಯತ್ ಗ್ರಾಮದಲ್ಲಿ ಬ್ಯಾಂಕ್ ಒಂದು ಸಣ್ಣ ಘಟಕವನ್ನು ಸ್ಥಾಪಿಸಿದೆ

ನಾನು ಸಹಿಗೆ ಬದಲಾಗಿ ಹೆಬ್ಬೆಟ್ಟು ಬಳಸುತ್ತೇನೆ ಹೀಗಾಗಿ ಅವರು [ಬ್ಯಾಂಕ್‌ ನೌಕರರು] ಯಾರಾದರೂ ಸಾಕ್ಷಿಯ ಸಹಿ ಹಾಕಿಸುವಂತೆ ಹೇಳುತ್ತಾರೆ. ಸಾಮಾನ್ಯವಾಗಿ ಚಲನ್‌ ತುಂಬಿಸಿಕೊಟ್ಟವರ ಬಳಿಯೇ ಸಹಿ ಮಾಡುವಂತೆ ಕೇಳಿಕೊಳ್ಳುತ್ತೇನೆ.

ಬ್ಯಾಂಕಿಂಗ್ ಸೌಲಭ್ಯದ ಬಳಕೆ ಸುಲಭಗೊಳಿಸಲು, ಕೆನರಾ ಬ್ಯಾಂಕ್ ಚೆರೂಕ್ಕನೂರಿನಲ್ಲಿ 'ಅಲ್ಟ್ರಾ ಸ್ಮಾಲ್ ಬ್ರಾಂಚ್' ಒಂದನ್ನು ಸ್ಥಾಪಿಸಿದೆ, ಇದು ಬಂಗಲಮೇಡುವಿನಿಂದ ಮೂರು ಕಿಲೋಮೀಟರ್ ನಡಿಗೆಯ ದೂರದಲ್ಲಿದೆ. ಈ 'ಮಿನಿ ಬ್ಯಾಂಕ್', (ಇಲ್ಲಿನ ಜನರು ಕರೆಯುವಂತೆ,) ಮೂಲಭೂತವಾಗಿ ಗುತ್ತಿಗೆ ಮತ್ತು ಕಮಿಷನ್‌ ಆಧಾರದ ಮೇಲೆ ನೇಮಕಗೊಂಡ ಒಬ್ಬ ವ್ಯಕ್ತಿ - ಬಯೋಮೆಟ್ರಿಕ್ ಸಾಧನವನ್ನು ಬಳಸಿಕೊಂಡು ಗ್ರಾಹಕರಿಗೆ ತಮ್ಮ ಖಾತೆಯ ಬಾಕಿ ಪರಿಶೀಲಿಸಲು ಮತ್ತು ಹಣವನ್ನು ಹಿಂಪಡೆಯಲು ಅಥವಾ ಠೇವಣಿ ಇರಿಸಲು ಸಹಾಯ ಮಾಡುವ ಬಿಸ್ನೆಸ್‌ ಕರೆಸ್ಪಾಂಡೆಂಟ್‌  (ಬಿ.ಸಿ) ಅವರನ್ನು ಹೊಂದಿರುತ್ತದೆ.

ಇಲ್ಲಿನ ಬಿ.ಸಿ. 42 ವರ್ಷದ ಇ.ಕೃಷ್ಣದೇವಿ ತನ್ನ ಫೋನ್‌ನೊಂದಿಗೆ ಪೋರ್ಟಬಲ್ ಬಯೋಮೆಟ್ರಿಕ್ ಸಾಧನವನ್ನು ಇಂಟರ್‌ನೆಟ್‌ಗೆ ಸಂಪರ್ಕಿಸುತ್ತಾರೆ. ನಂತರ ಅವರು ಗ್ರಾಹಕರ ಆಧಾರ್ ಸಂಖ್ಯೆಯನ್ನು ಟೈಪ್ ಮಾಡುತ್ತಾರೆ. ಸಾಧನವು ಅವರ ಬೆರಳಚ್ಚನ್ನು ಗುರುತಿಸುತ್ತದೆ ಮತ್ತು ವ್ಯವಹಾರವನ್ನು ಅನುಮೋದಿಸುತ್ತದೆ. ಅವರು ಹೇಳುತ್ತಾರೆ, “ಅವರ ಆಧಾರ್ ಅನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಬೇಕು. ನಾನು ಕೈಯಲ್ಲಿ ಹಣವನ್ನು ಇರಿಸಿಕೊಂಡಿರುತ್ತೇನೆ." ಅವರು ದಿನದ ಲೆಕ್ಕಗಳನ್ನು ಮಧ್ಯಾಹ್ನ 3: 30ರೊಳಗೆ ಬ್ಯಾಂಕಿನಲ್ಲಿ ಸಲ್ಲಿಸಬೇಕು.

ಆದರೆ ಬೆರಳಚ್ಚು ನಮೂದಾಗದಿದ್ದರೆ, ಆಧಾರ್‌ ಕಾರ್ಡ್‌ ಇಲ್ಲದಿದ್ದರೆ, ಅಥವಾ ಪಾಸ್‌ಬುಕ್‌ ಎಂಟ್ಟಿ ಮಾಡಿಸುವುದಿದ್ದಲ್ಲಿ ಅಂತಹ ಜನರು ಕೆ.ಜಿ. ಕಂಡಿಗೈನಲ್ಲಿರುವ ಬ್ಯಾಂಕಿನ ಶಾಖೆಗೇ ಹೋಗಬೇಕಿರುತ್ತದೆ.

“ಕೆಲವೊಮ್ಮೆ ಅವರು [ಬಿ.ಸಿ.] ತನ್ನಲ್ಲಿ ನಗದು ಮುಗಿದಿದೆಯೆಂದು ಹೇಳುತ್ತಾರೆ. ಅಂತಹ ಸಮಯದಲ್ಲಿ ಅವರು ನಮಗೆ ಒಂದು ಸ್ಲಿಪ್ ನೀಡುತ್ತಾರೆ ಮತ್ತು ನಂತರ ಅಥವಾ ಮರುದಿನ ನಮ್ಮ ಹಣವನ್ನು ಸಂಗ್ರಹಿಸಲು ಅವರ ಮನೆಗೆ ಬರುವಂತೆ ಹೇಳುತ್ತಾರೆ. ನಂತರ ನಾವು ಮತ್ತೆ ಹೋಗುತ್ತೇವೆ ” ಎಂದು ಗೋವಿಂದಮ್ಮಾಳ್ ಹೇಳುತ್ತಾರೆ, ಅವರು ಕೆಲವು ಸ್ನೇಹಿತರೊಂದಿಗೆ ಚೆರುಕ್ಕನೂರಿಗೆ ಹೊರಟಿದ್ದರು, ಸ್ಥಳೀಯ ಕೆರೆಯ ಅಂಚಿನಲ್ಲಿ ಮೂರು ಕಿಲೋಮೀಟರ್ ನಡೆದು ಅಲ್ಲಿಗೆ ಹೋಗುತ್ತಾರೆ. “ನಾವು ಕಚೇರಿಯ ಹೊರಗೆ ಕಾಯುತ್ತೇವೆ. ಅವರು ಬರದಿದ್ದರೆ, ನಾವು ಅವರ ಮನೆಗೆ ಹೋಗುತ್ತೇವೆ."

ಸಾಮಾನ್ಯವಾಗಿ, ಬಿ.ಸಿ.ಗಳು ತಮ್ಮ ಮನೆಗಳಿಂದ ಕಾರ್ಯನಿರ್ವಹಿಸುತ್ತಾರೆ. ಆದರೆ ಕೃಷ್ಣದೇವಿ ಬೆಳಿಗ್ಗೆ 10ರಿಂದ 1 ಗಂಟೆಯವರೆಗೆ ಹಳೆಯ ಮತ್ತು ಬಳಕೆಯಾಗದ ಗ್ರಂಥಾಲಯದಲ್ಲಿ ಕುಳಿತುಕೊಳ್ಳುತ್ತಾರೆ. ಎಂಜಿಎನ್‌ಆರ್‌ಇಜಿಎ ಅಥವಾ ಪಿಂಚಣಿಯ ನಗದು ವಿತರಣೆಯಿರುವ ದಿನಗಳಲ್ಲಿ, ಅವರು ಅಲ್ಲಿ ಹೆಚ್ಚು ಕಾಲ ಇರುತ್ತಾರೆ. ಆ ಸಮಯದ ಹೊರತಾಗಿ, ಅವರು ದಿನದ ಯಾವುದೇ ಸಮಯದಲ್ಲಿ ಲಭ್ಯವಿರಬೇಕು ಅನ್ನುವದು ಅವರ ಬಲವಾದ ನಂಬಿಕೆ. "ಕೆಲಸಕ್ಕೆ ಹೋಗುವ ಜನರು ಬಂದು ನನ್ನನ್ನು ಮನೆಯಲ್ಲಿ ಭೇಟಿ ಮಾಡುತ್ತಾರೆ" ಎಂದು ಅವರು ಹೇಳುತ್ತಾರೆ.

ವಾರಕ್ಕೊಮ್ಮೆ, ಮಂಗಳವಾರ, ಕೃಷ್ಣದೇವಿ ತನ್ನ ಬಯೋಮೆಟ್ರಿಕ್ ಸಾಧನವನ್ನು ಕೆ.ಜಿ. ಕಂಡಿಗೈ ಮುಖ್ಯ ಶಾಖೆಗೆ ಕೊಂಡೊಯ್ಯುತ್ತಾರೆ. ಇತರ ನಾಲ್ಕು ಪಂಚಾಯಿತಿಗಳ ಬಿ.ಸಿ.ಗಳು ವಾರದ ಇತರ ದಿನಗಳಲ್ಲಿ ಅದೇ ರೀತಿ ಸರದಿಯಂತೆ ಮಾಡುತ್ತಾರೆ. ಈ ಸಾಧನವು ವಾರದ ಎಲ್ಲಾ ದಿನಗಳಲ್ಲಿ, ಮಧ್ಯಾಹ್ನ 2 ಗಂಟೆಯವರೆಗೆ, ತಮ್ಮ ಆಧಾರ್ ಕಾರ್ಡ್‌ಗಳ ಮೂಲಕ ವ್ಯವಹಾರ ಮಾಡಲು ಬಳಸಲು ಬಯಸುವ ಗ್ರಾಹಕರಿಗೆ ಲಭ್ಯವಿರುತ್ತದೆ. ಆದಾಗ್ಯೂ, ಕೈಲಾಸಂ ಅವರು ಕೆ.ಜಿ. ಕಂಡಿಗೈಯಲ್ಲಿ ಸಾಧನವನ್ನು ಮಂಗಳವಾರ ಮಾತ್ರ  ಬಳಸಬಹುದು ಎಂದು ತಪ್ಪಾಗಿ ಭಾವಿಸುತ್ತಾರೆ." ಚೆರುಕ್ಕನೂರಿನಿಂದ ಬಿ.ಸಿ ಅಲ್ಲಿಗೆ ಬಂದಾಗ ಮಾತ್ರ ಬಳಸಲು ಸಾಧ್ಯವಿದೆ," ಎಂದು ಅವರು ಹೇಳುತ್ತಾರೆ.

The ‘mini bank’ is one person – in Cherukkanur, it's Krishnadevi, who helps customers check their account balance and withdraw or deposit cash, using a biometric device Right: S. Sumathi, who runs a small shop in her one-room house, was stunned when she learnt about the overdraft facility
PHOTO • G. Manigandan
The ‘mini bank’ is one person – in Cherukkanur, it's Krishnadevi, who helps customers check their account balance and withdraw or deposit cash, using a biometric device Right: S. Sumathi, who runs a small shop in her one-room house, was stunned when she learnt about the overdraft facility
PHOTO • G. Manigandan

'ಮಿನಿ ಬ್ಯಾಂಕ್' ಎಂದರೆ ಒಬ್ಬ ವ್ಯಕ್ತಿ - ಚೆರುಕ್ಕನೂರಿನಲ್ಲಿ, ಇದು ಕೃಷ್ಣದೇವಿ, ಗ್ರಾಹಕರು ತಮ್ಮ ಖಾತೆಯ ಬಾಕಿ ಪರಿಶೀಲಿಸಲು ಮತ್ತು ಹಣವನ್ನು ಹಿಂಪಡೆಯಲು ಅಥವಾ ಠೇವಣಿ ಮಾಡಲು ಬಯೋಮೆಟ್ರಿಕ್ ಸಾಧನವನ್ನು ಬಳಸಿ ಸಹಾಯ ಮಾಡುತ್ತಾರೆ. ಬಲ: ಎಸ್. ಸುಮತಿ, ತನ್ನ ಒಂದು ಕೋಣೆಯ ಮನೆಯಲ್ಲಿ ಸಣ್ಣ ಅಂಗಡಿಯೊಂದನ್ನು ನಡೆಸುತ್ತಿದ್ದು, ಓವರ್‌ಡ್ರಾಫ್ಟ್ ಸೌಲಭ್ಯದ ಬಗ್ಗೆ ತಿಳಿದಾಗ ಅವರು ಆಶ್ಚರ್ಯಚಕಿತರಾದರು.

ಕೈಲಾಸಂ ಅವರಂತೆ, ಹೆಚ್ಚಿನ ಇರುಳ ಕುಟುಂಬಗಳು ಕೆನರಾ ಬ್ಯಾಂಕಿನಲ್ಲಿ ಖಾತೆಗಳನ್ನು ಹೊಂದಿವೆ - ಇದು ಸುಮಾರು ಒಂದು ದಶಕದವರೆಗೆ ಇಲ್ಲಿರುವ ಏಕೈಕ ಬ್ಯಾಂಕ್ ಆಗಿತ್ತು. (ಒಂದೆರಡು ವರ್ಷಗಳ ಹಿಂದೆ, ಆಂಧ್ರ ಬ್ಯಾಂಕ್ ಕೆ. ಜಿ. ಕಂಡಿಗೈನಲ್ಲಿ ಒಂದು ಶಾಖೆಯನ್ನು ಸ್ಥಾಪಿಸಿತು, ಮತ್ತು ಈಗ ಆ ಊರಿನಲ್ಲಿ ನಾಲ್ಕು ವಿಭಿನ್ನ ಬ್ಯಾಂಕುಗಳ ಎಟಿಎಂಗಳಿವೆ). ಕೆಲವರು ನಿಯಮಿತ ಉಳಿತಾಯ ಖಾತೆಗಳನ್ನು ಹೊಂದಿದ್ದರೆ, ಇತರರು ಕನಿಷ್ಟ ಬ್ಯಾಲೆನ್ಸ್ ಅಗತ್ಯವಿಲ್ಲದ 'ಝೀರೋ ಬ್ಯಾಲೆನ್ಸ್' ಅಥವಾ ಜನ ಧನ್ ಖಾತೆಗಳನ್ನು ತೆರೆಯುತ್ತಾರೆ.

ನಾನು ಮಾತನಾಡಿದ ಅನೇಕ ಜನರು ತಮ್ಮ ಝೀರೊ ಬ್ಯಾಲೆನ್ಸ್ ಖಾತೆಗಳಲ್ಲಿ ಸ್ವಲ್ಪ ಹಣವನ್ನು ಇರಿಸಿಕೊಂಡಿರುವಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಿದರು. ಅಂತಹ ಖಾತೆಯನ್ನು ಹೊಂದಿರುವ ಗೋವಿಂದಮ್ಮಾಳ್, “ಕೆ. ಜಿ. ಕಂಡಿಗೈನಲ್ಲಿ, ಅವರು ಯಾವಾಗಲೂ ಸ್ವಲ್ಪ ಹಣವನ್ನುಅಕೌಂಟಿನಲ್ಲಿ ಬಿಡಲು ಹೇಳುತ್ತಾರೆ, ಕನಿಷ್ಠ 500-1,000 ರೂಪಾಯಿಗಳ ತನಕ. ಆಗ ಮಾತ್ರ ಏರಿ ವೇಲೈ [ಎಂಜಿಎನ್‌ಆರ್‌ಇಜಿಎ ಕೆಲಸ] ಹಣ ಬರುತ್ತದೆ. ಅದಕ್ಕಾಗಿಯೇ ನಾನು ಚೆರುಕ್ಕನೂರ್ [ಮಿನಿ ಬ್ಯಾಂಕ್]ಗೆ ಹೋಗುತ್ತೇನೆ. ಅಲ್ಲಿ ನಾನು ಖಾತೆಯಲ್ಲಿ 200-300 ರೂಪಾಯಿಗಳನ್ನು ಮಾತ್ರ ಬಿಡುತ್ತೇನೆ. "

2020ರ ಅಂತ್ಯದ ವೇಳೆಗೆ, ನಾನು ಇದನ್ನು ಕೆ.ಜಿ.ಕಂಡಿಗೈ ಶಾಖೆಯ ಅಂದಿನ ವ್ಯವಸ್ಥಾಪಕ ಕೆ.ಪ್ರಶಾಂತ್ ಅವರೊಂದಿಗೆ ಚರ್ಚಿಸಿದಾಗ, ಜನ ಧನ್ ಖಾತೆಗಳಿಗೆ ಕನಿಷ್ಠ ಬಾಕಿ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. "ಅವರಿಗೆ ಎಲ್ಲಾ ರೀತಿಯ ವಹಿವಾಟುಗಳೊಂದಿಗೆ ಕೆವೈಸಿ ಕಾಂಪ್ಲಿಯೆಂಟ್ ಖಾತೆಯ ಅಗತ್ಯವಿದ್ದರೆ, ಅವರು ನಿಯಮಿತ ಖಾತೆಯನ್ನು ತೆರೆಯಬೇಕು, ಅದರಲ್ಲಿ ಕನಿಷ್ಠ 500 ರೂ. ಬಾಕಿ ಇಡಬೇಕಾಗುತ್ತದೆ.

ಅದೇನೇ ಇದ್ದರೂ, ಪ್ರಸ್ತುತ ವ್ಯವಸ್ಥಾಪಕ ಬಿ. ಲಿಂಗಮಯ್ಯ, ಜನ ಧನ್ ಖಾತೆದಾರರು ಕನಿಷ್ಠ ಬಾಕಿ ಮೊತ್ತ ಕಾಯ್ದುಕೊಳ್ಳುವ ಅಗತ್ಯವಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ, ಆದರೆ ಬ್ಯಾಂಕ್ ಸಿಬ್ಬಂದಿ ಅದಕ್ಕಾಗಿ ಒತ್ತಾಯಿಸುತ್ತಾರೆ. ಮತ್ತು ಅವರು ನಿರ್ದಿಷ್ಟವಾಗಿ ಜನ ಧನ್ ಅಥವಾ ಝೀರೋ ಬ್ಯಾಲೆನ್ಸ್ ಖಾತೆಯನ್ನು ಕೇಳದ ಹೊರತು, ಬ್ಯಾಂಕ್ ಪೂರ್ವನಿಯೋಜಿತವಾಗಿ ನಿಯಮಿತ ಖಾತೆಯನ್ನು ತೆರೆಯುತ್ತದೆ ಎಂದು ಅವರು ಹೇಳುತ್ತಾರೆ.

ಗೋವಿಂದಮ್ಮಾಳ್ ಮತ್ತೊಂದು ಸಮಸ್ಯೆಯತ್ತ ಬೆರಳು ತೋರಿಸುತ್ತಾರೆ. "ಮೊದಲಿಗೆ, ಅವರು [ಬ್ಯಾಂಕ್] ನಾನು ಖಾತೆಗೆ ಪಾವತಿಸಬೇಕಾಗಿಲ್ಲ ಎಂದು ಹೇಳಿದರು, ಈಗ ಪ್ರತಿ ವರ್ಷ ಅವರು 500 ಅಥವಾ 1000 ತೆಗೆದುಕೊಳ್ಳುತ್ತಾರೆ. ಯಾವಾಗಲೂ ಬ್ಯಾಂಕಿನಲ್ಲಿ ನಿರೀಕ್ಷಿಸಿದ್ದಕ್ಕಿಂತ ಕಡಿಮೆ ಹಣ ಇರುತ್ತದೆ" ಎಂದು ಅವರು ಹೇಳುತ್ತಾರೆ.

ಕೆ.ಪ್ರಶಾಂತ್ ಈ ಗೊಂದಲಕ್ಕೆ ಜನ ಧನ್ ಖಾತೆಗಳಿಗೂ ಶುಲ್ಕದೊಂದಿಗೆ ಒದಗಿಸುವ ಓವರ್‌ಡ್ರಾಫ್ಟ್ ಸೌಲಭ್ಯಗಳು ಕಾರಣವೆಂದು ಹೇಳಿದ್ದರು. “ಅವರು [ಖಾತೆದಾರರು] ರೂ. 2,000 ಖಾತೆಯಲ್ಲಿ ಉಳಿದಿದ್ದು ರೂ. 3,000 ತೆಗೆಯಲು ಪ್ರಯತ್ನಿಸಿದಾಗ ಸಿಸ್ಟಮ್‌ ಅನುಮತಿಸುತ್ತದೆ. ಹೊಸದಾಗಿ ಹಣ ಠೇವಣಿ ಮಾಡಿದಾಗ 1,000 ರೂಪಾಯಿಗಳನ್ನು ಸರಿಹೊಂದಿಸಲಾಗುತ್ತದೆ. ಅವರು ಈ ಸೌಲಭ್ಯ ಬಳಸುತ್ತಿದ್ದಾರೆಂದು ಅವರಿಗೆ ತಿಳಿದಿಲ್ಲವೆಂದು ಕಾಣುತ್ತಿದೆ."

R. Vanaja with M. Ankamma and her child. In 2020, Vanaja and her husband R. Johnson (right) , lost money from their account in a phone scam
PHOTO • Smitha Tumuluru
R. Vanaja with M. Ankamma and her child. In 2020, Vanaja and her husband R. Johnson (right) , lost money from their account in a phone scam
PHOTO • G. Manigandan

ಎಂ.ಅಂಕಮ್ಮ ಮತ್ತು ತನ್ನ ಮಗುವಿನೊಂದಿಗೆ ಆರ್. ವನಜಾ. 2020ರಲ್ಲಿ, ವನಜಾ ಮತ್ತು ಅವರ ಪತಿ ಆರ್. ಜಾನ್ಸನ್ (ಬಲ) ಫೋನ್ ವಂಚನೆಯಲ್ಲಿ ತಮ್ಮ ಖಾತೆಯಿಂದ ಹಣವನ್ನು ಕಳೆದುಕೊಂಡರು

ಕಳೆದ ವರ್ಷ ಓವರ್‌ಡ್ರಾಫ್ಟ್ ಸೌಲಭ್ಯದ ಬಗ್ಗೆ ತಿಳಿದಾಗ ಗೋವಿಂದಮ್ಮಾಳ್ ಮನೆಯ ತಿರುವಿನಲ್ಲಿ ವಾಸಿಸುವ ಎಸ್. ಸುಮತಿ (28) ಬೆರಗಾದರು: “ಇದನ್ನು ಯಾರಾದರೂ ನಮಗೆ ವಿವರಿಸಬಹುದಿತ್ತು. ಬ್ಯಾಂಕ್ ನಮ್ಮ ಹಣವನ್ನು ತೆಗೆದುಕೊಳ್ಳುತ್ತಿದೆ ಎಂದು ನಾವು ಭಾವಿಸಿದ್ದೆವು."

ಎಸ್‌ಎಂಎಸ್ ಸೇವೆಯಲ್ಲಿಯೂ ಹಣ ಕಡಿತಗೊಳ್ಳುತ್ತದೆ, ಇದಕ್ಕಾಗಿ ಬ್ಯಾಂಕ್ ರೂ. ಪ್ರತಿ ತ್ರೈಮಾಸಿಕಕ್ಕೆ 18 ರೂ ಶುಲ್ಕ ವಿಧಿಸುತ್ತದೆ. ಆದರೆ ಇಲ್ಲಿರುವ ಎಲ್ಲರ ಬಳಿಯೂ ಫೋನ್‌ಗಳಿಲ್ಲ, ಮತ್ತು ಜನರು ತಮ್ಮ ಖಾತೆಯಲ್ಲಿನ ಬಾಕಿ ಮೊತ್ತವನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿದ್ದಾಗ  ಅವರಿಗೆ ಸಂದೇಶಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಮತ್ತು ನಗದು ಹಿಂಪಡೆಯುವಾಗ ಮಾತ್ರ ಎಸ್‌ಎಂಎಸ್ ಕಳುಹಿಸಲಾಗುತ್ತದೆ ಎಂದು ಸುಮತಿ ಹೇಳುತ್ತಾರೆ. “ಅವರು ನಮ್ಮ ಖಾತೆಗೆ ಹಣವನ್ನು ಠೇವಣಿ ಮಾಡಿದಾಗ ನಮಗೆ ಎಸ್‌ಎಂಎಸ್ ಏಕೆ ಕಳುಹಿಸುವುದಿಲ್ಲ? ಅವರು ಹಾಗೆ ಮಾಡಿದಲ್ಲಿ ನಮಗೆ ಸಾಕಷ್ಟು ತೊಂದರೆಗಳಿಂದ ಪರಿಹಾರ ದೊರೆಯುತ್ತದೆ."

ಹೆಚ್ಚಿದ ಡಿಜಿಟಲೀಕರಣವನ್ನು ಸರಿದೂಗಿಸುವಲ್ಲಿ ಇತರ ಸವಾಲುಗಳೂ ಇವೆ. ನವೆಂಬರ್ 2020ರಲ್ಲಿ, ಮಣಿಗಂಡನ್ ಅವರ ಸೋದರಳಿಯ ಆರ್. ಜಾನ್ಸನ್, 23, ವಂಚಕರಿಂದ 1,500 ರೂ. ಕಳೆದುಕೊಂಡರು. ಅವರ 22 ವರ್ಷದ ಪತ್ನಿ ಆರ್.ವನಜಾ ಅವರ ಬ್ಯಾಂಕ್ ಖಾತೆಯಲ್ಲಿ ರೂ. 2,000 ಇತ್ತು, ಅದು ಅವರ ಎಂಜಿಎನ್‌ಆರ್‌ಇಜಿಎ ವೇತನದಿಂದ ಉಳಿಸಲಾದ ಹಣವಾಗಿತ್ತು. ದಂಪತಿಗಳು ಹೊಂದಿರುವ ಏಕೈಕ ಬ್ಯಾಂಕ್ ಖಾತೆಯ ವಿವರಗಳನ್ನು ಎಂದರೆ ವನಜಾ ಅವರ ಕಾರ್ಡ್ ವಿವರಗಳನ್ನುಬ್ಯಾಂಕ್ ಉದ್ಯೋಗಿಯಂತೆ ನಟಿಸಿದ ಅಪರಿಚಿತನೊಬ್ಬನ ಬಳಿ ಫೋನ್‌ ಕರೆಯಲ್ಲಿ ಹಂಚಿಕೊಂಡರು. “ಅವನು ಬ್ಯಾಂಕಿನ ಅಧಿಕಾರಿಯಂತೆ ಮಾತಾಡಿದ. ಕಾರ್ಡ್ ಲಾಕ್ ಆಗಿದೆ ಮತ್ತು ಅದನ್ನು ಅನ್ ಲಾಕ್ ಮಾಡಲು ನಾನು ಅವನಿಗೆ ಸಂಖ್ಯೆಯನ್ನು ಹೇಳಬೇಕೆಂದುಅವನು ಹೇಳಿದ. ನನಗೆ ತಿಳಿದಿರುವ ಎಲ್ಲಾ ಸಂಖ್ಯೆಗಳನ್ನು ನಾನು ಅವನಿಗೆ ಕೊಟ್ಟಿದ್ದೆ. ರಹಸ್ಯ ಸಂಖ್ಯೆ [ಒಟಿಪಿ] ಕೂಡ. ನಮ್ಮ ಖಾತೆಯಲ್ಲಿ 500 ರೂಪಾಯಿಗಳು ಉಳಿದಿದ್ದವು” ಎಂದು ಅವರು ಹೇಳುತ್ತಾರೆ.

ಜಾನ್ಸನ್ ಅವರ ಕಾರ್ಡನ್ನು "ಅನ್ಲಾಕ್" ಮಾಡುವ ಸಲುವಾಗಿ ಕರೆ ಮಾಡಿದವರು ಜಾನ್ಸನ್ ಅವರ ಚಿಕ್ಕಪ್ಪ ಮಣಿಗಂಡನ್ ಅವರ ಕಾರ್ಡ್ ವಿವರಗಳನ್ನು ಹಂಚಿಕೊಳ್ಳಲು ಮನವೊಲಿಸಿದ್ದರು. ಅನೇಕ ಶಂಕಿತ ವಹಿವಾಟುಗಳ ಬಗ್ಗೆ ಬ್ಯಾಂಕ್ ಮಣಿಗಂಡನ್‌ ಅವರನ್ನು ಎಚ್ಚರಿಸಿತು. ಅಷ್ಟು ಹೊತ್ತಿಗಾಗಲೇ ಅವರು ರೂ. 17,000 ಕಳೆದುಕೊಂಡಿದ್ದರು. ಇದು ವಸತಿ ಯೋಜನೆಯಡಿ ಹೊಸ ಮನೆ ನಿರ್ಮಿಸಲು ಅವರು ಇತ್ತೀಚೆಗೆ ಪಡೆದುಕೊಂಡ ಮೊತ್ತದ ಒಂದು ಭಾಗವಾಗಿತ್ತು.

ಜಾನ್ಸನ್ ಮತ್ತು ಇತರ ಇರುಳರು ತಮ್ಮ ನಿರ್ದಿಷ್ಟ ಕಾಳಜಿಗಳಿಗೆ ಸ್ಥಳಾವಕಾಶ ನೀಡದ ಡಿಜಿಟಲ್ ಜಗತ್ತು ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ತಮ್ಮ ದಾರಿ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಮತ್ತು ಕೈಲಾಸಂ ಅವರ ಪಾಸ್‌ಬುಕ್ ಈಗಲೂ ಅಪ್ಡೇಟ್‌ ಆಗಿಲ್ಲ. ಆದರೆ ಅವರಿಗೆ ಒಂದು ವಿಷಯದ ಬಗ್ಗೆ ಸಮಾಧಾನವಿದೆ: “ಕೈ ರೇಗೈ [ಬಯೋಮೆಟ್ರಿಕ್] ಯಂತ್ರವನ್ನು ಬಳಸುವಾಗ ಯಾವುದೇ ಚಲನ್‌ ತುಂಬಿಸುವ ಅವಶ್ಯಕತೆಯಿಲ್ಲ.”

ಅನುವಾದ: ಶಂಕರ ಎನ್. ಕೆಂಚನೂರು

Smitha Tumuluru

اسمیتا تُمولورو بنگلورو میں مقیم ایک ڈاکیومینٹری فوٹوگرافر ہیں۔ تمل ناڈو میں ترقیاتی پروجیکٹوں پر ان کے پہلے کے کام ان کی رپورٹنگ اور دیہی زندگی کی دستاویزکاری کے بارے میں بتاتے ہیں۔

کے ذریعہ دیگر اسٹوریز Smitha Tumuluru
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru