“ಕೃಷಿಯಲ್ಲಿ ಬಿಕ್ಕಟ್ಟು ಎಂಬುದೇ ಇಲ್ಲ.”
ಪಂಜಾಬ್‌ನ ಪ್ರಬಲ ಅರ್ತಿಯಾ ಅಸೋಸಿಯೇಶನ್‌ನ ಉಪಾಧ್ಯಕ್ಷ ದರ್ಶನ್ ಸಿಂಗ್ ಸಂಘೇರಾ ಮತ್ತು ಬರ್ನಾಲಾ ಜಿಲ್ಲೆಯ ಅದರ ಶಾಖೆಯ ಮುಖ್ಯಸ್ಥರನ್ನು ಭೇಟಿ ಮಾಡಿ. ಅರ್ತಿಯಾಗಳು ಕಮಿಷನ್ ಏಜೆಂಟ್‌ಗಳು, ರೈತರು ಮತ್ತು ಅವರ ಉತ್ಪನ್ನಗಳ ಖರೀದಿದಾರರ ನಡುವಿನ ಕೊಂಡಿ. ಕೊಯ್ಲು ಮಾಡಿದ ಬೆಳೆಯನ್ನು ಹರಾಜು ಹಾಕಿ ಖರೀದಿದಾರರಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಾರೆ. ಬಹಳ ದಿನಗಳಿಂದ ಈ ದಂಧೆಯಲ್ಲಿ ಹಣ ಕೊಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ, ಅವರು ಒಳಸುರಿಗಳ ಡೀಲರ್‌ಗಳಾಗಿಯೂ ಹೊರಹೊಮ್ಮಿದ್ದಾರೆ. ಈ ಎಲ್ಲಾ ಸಂಗತಿಗಳು ಈ ರಾಜ್ಯದ ರೈತರ ಮೇಲೆ ಅವರಿಗೆ ಸಾಕಷ್ಟು ಹಿಡಿತವಿದೆ ಎನ್ನುವುದನ್ನು ತೋರಿಸುತ್ತದೆ.
ಅರ್ತಿಯಾಗಳು ರಾಜಕೀಯವಾಗಿಯೂ ಪ್ರಬಲರಾಗಿದ್ದಾರೆ. ಅವರು ವಿಧಾನಸಭೆಯ ಸದಸ್ಯರನ್ನು ತಮ್ಮ ಸಹೋದರರಂತೆ ಪರಿಗಣಿಸುತ್ತಾರೆ. ಕಳೆದ ವರ್ಷ ಜುಲೈನಲ್ಲಿ ಅವರು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರಿಗೆ 'ಫಖ್ರ್-ಎ-ಕೌಮ್' ('ಸಮುದಾಯದ ಹೆಮ್ಮೆ') ಬಿರುದನ್ನು ನೀಡಿದರು. ಸ್ಥಳೀಯ ಮಾಧ್ಯಮವು ಕಾರ್ಯಕ್ರಮವನ್ನು "ದೊಡ್ಡ ಅಭಿನಂದನಾ ಸಮಾರಂಭ" ಎಂದು ಬಣ್ಣಿಸಿದೆ. ರೈತರು ಅರ್ತಿಯಾಗಳ ಮಾಡಿರುವ ಸಾಲ ಮನ್ನಾ ಮಾಡುವುದು ಕಷ್ಟ ಎಂದು ಮುಖ್ಯಮಂತ್ರಿ ಹೇಳಿದ ಬೆನ್ನಲ್ಲೇ ಈ ಸಭೆಯನ್ನು ಆಯೋಜಿಸಲಾಗಿತ್ತು.
ಪಂಜಾಬಿನ ಗ್ರಾಮೀಣ ಪ್ರದೇಶದ ರೈತರು ಮತ್ತು ಕೃಷಿ ಕಾರ್ಮಿಕರ ನಡುವಿನ ಸಾಲದ ಮೇಲಿನ ಅಧ್ಯಯನವು 86 ಪ್ರತಿಶತ ರೈತರು ಮತ್ತು 80 ಪ್ರತಿಶತ ಕೃಷಿ ಕಾರ್ಮಿಕರು ಸಾಲದಲ್ಲಿದ್ದಾರೆ ಎಂದು ಹೇಳುತ್ತದೆ. ಅದರ ಲೇಖಕರು, ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದ ಸಂಶೋಧಕರು, ಆ ಸಾಲದ ಐದನೇ ಒಂದು ಭಾಗವನ್ನು ಅರ್ತಿಯಾಗಳು ಮತ್ತು ಲೇವಾದೇವಿದಾರರಿಗೆ ಪಾವತಿಸಬೇಕು ಎಂದು ಹೇಳಿದ್ದಾರೆ. ಮೇಲಾಗಿ ಸಾಲದ ಹೊರೆ ಹೆಚ್ಚುತ್ತಲೇ ಇದೆ. ಇದು ಕನಿಷ್ಠ ಮತ್ತು ಸಣ್ಣ ರೈತರಲ್ಲಿ ಅತಿ ಹೆಚ್ಚು. 1007 ರೈತರು ಮತ್ತು 301 ಕೃಷಿ ಕಾರ್ಮಿಕರ ಕುಟುಂಬಗಳನ್ನು ಈ ಅಧ್ಯಯನದಲ್ಲಿ ಸೇರಿಸಲಾಗಿದೆ. ಇದರ ಕ್ಷೇತ್ರ ಸಮೀಕ್ಷೆಯನ್ನು 2014-15ರಲ್ಲಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಮಾಡಲಾಗಿದೆ. ಇತರ ಅಧ್ಯಯನಗಳು ಸಾಲದ ಆಳ ಮತ್ತು ಸಂಕಟದ ಉಲ್ಬಣದ ಬಗ್ಗೆ ಮಾತನಾಡಿವೆ.
ದರ್ಶನ್ ಸಿಂಗ್ ಸಂಘೇರಾ ಅವರು ಕೃಷಿ ಬಿಕ್ಕಟ್ಟನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ “ಎಲ್ಲವೂ ರೈತರ ವೆಚ್ಚದ ಅಭ್ಯಾಸಗಳಿಂದ ಉಂಟಾಗುತ್ತದೆ. ಅದು ಅವರಿಗೆ ತೊಂದರೆ ಕೊಡುತ್ತದೆ” ಎಂದು ದೃಢವಾಗಿ ಹೇಳುತ್ತಾರೆ. “ಒಳಸುರಿಗಳನ್ನು (ಗೊಬ್ಬರ ಇತ್ಯಾದಿ) ಖರೀದಿಸಲು ನಾವು ಅವರಿಗೆ ಹಣ ಸಹಾಯ ಮಾಡುತ್ತೇವೆ. ಇದಲ್ಲದೇ ಅವರ ಮದುವೆ, ವೈದ್ಯಕೀಯ ಮತ್ತಿತರ ವೆಚ್ಚಗಳಿದ್ದಾಗಲೂ ಹಣ ನೀಡುತ್ತೇವೆ. ರೈತನ ಬೆಳೆ ಸಿದ್ಧವಾದಾಗ ತಂದು ಏಜೆಂಟರಿಗೆ ಕೊಡುತ್ತಾನೆ. ನಾವು ಬೆಳೆಯನ್ನು ಸ್ವಚ್ಛಗೊಳಿಸುತ್ತೇವೆ, ಚೀಲಗಳಲ್ಲಿ ಪ್ಯಾಕ್ ಮಾಡುತ್ತೇವೆ, ಸರ್ಕಾರ, ಬ್ಯಾಂಕುಗಳು, ಮಾರುಕಟ್ಟೆಯೊಂದಿಗೆ ವ್ಯವಹರಿಸುತ್ತೇವೆ. ಗೋಧಿ ಮತ್ತು ಭತ್ತದ ಒಟ್ಟು ಖರೀದಿ ಬೆಲೆಯ ಶೇ.2.5ರಷ್ಟನ್ನು ಸರ್ಕಾರ ಏಜೆಂಟರಿಗೆ ಪಾವತಿಸುತ್ತದೆ. ಅವರ ಚಟುವಟಿಕೆಯ ಅಧಿಕೃತ ಭಾಗವಾದ ರಾಜ್ಯ ಸಂಯೋಜನೆಯು ಪಂಜಾಬ್ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯಿಂದ ನಿಯಂತ್ರಿಸಲ್ಪಡುತ್ತದೆ. ಈ ಕಮಿಷನ್ ಏಜೆಂಟರ ಮೂಲಕ ರೈತರು ತಮ್ಮ ಪಾವತಿಯನ್ನು ಪಡೆಯುತ್ತಾರೆ. ಮತ್ತು ಇದೆಲ್ಲವೂ ಅರ್ಹತಿಯಾಗಳು ಲೇವಾದೇವಿಯಿಂದ ಪಡೆಯುವ ಆದಾಯದಿಂದ ಹೊರತಾಗಿದೆ.
ಜೋಧ್‌ಪುರ ಗ್ರಾಮಕ್ಕೆ ಭೇಟಿ ನೀಡಿದ ನಂತರ ತಕ್ಷಣ ಬರ್ನಾಲಾ ನಗರದ ಅದೇ ಬ್ಲಾಕ್‌ನಲ್ಲಿರುವ ಸಂಘೇರಾರ ಧಾನ್ಯ ಮಾರುಕಟ್ಟೆ ಕಚೇರಿಯನ್ನು ತಲುಪಿದೆವು. ಅಲ್ಲಿ, ರಂಜಿತ್ ಮತ್ತು ಬಲ್ವಿಂದರ್ ಸಿಂಗ್ ಅವರು ಏಪ್ರಿಲ್ 25, 2016ರಂದು ತಮ್ಮ ಸಂಬಂಧಿ ಬಲ್ಜಿತ್ ಸಿಂಗ್ ಮತ್ತು ಅವರ ತಾಯಿ ಬಲ್ಬೀರ್ ಕೌರ್ ಒಂದು ಗಂಟೆಯೊಳಗೆ ಒಬ್ಬರ ನಂತರ ಒಬ್ಬರು ಸಾರ್ವಜನಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೆನಪಿಸಿಕೊಂಡರು. "ಅವರು ನ್ಯಾಯಾಲಯದ ಆದೇಶ ಮತ್ತು 100 ಪೊಲೀಸರೊಂದಿಗೆ ನಗರಕ್ಕೆ ಬಂದಿದ್ದ ಅರ್ತಿಯಾ ಮೂಲಕ ತಮ್ಮ ಭೂಮಿಯನ್ನು ವಶಮಾಡಿಕೊಳ್ಳುವುದನ್ನು ಪ್ರತಿಭಟಿಸುತ್ತಿದ್ದರು" ಎಂದು ಬಲ್ವಿಂದರ್ ಹೇಳಿದರು. "ಇದಲ್ಲದೆ, ಸ್ಥಳೀಯ ಆಡಳಿತದ ಅನೇಕ ಅಧಿಕಾರಿಗಳು ಮತ್ತು ಅನೇಕ ಗೂಂಡಾಗಳು ಬಂದಿದ್ದರು." ಒಟ್ಟು ಸುಮಾರು 150 ಜನರಿದ್ದರು – ಕುಟುಂಬದ ಎರಡು ಎಕರೆ ಜಮೀನನ್ನು ವಶಕ್ಕೆ ಪಡೆಯಲು ಬಂದಿದ್ದರು.
ಬಲ್ವಿಂದರ್ ಹೇಳುತ್ತಾರೆ, “ಈ ಜೋಧ್‌ಪುರ ಗ್ರಾಮದಲ್ಲಿಯೇ 450 ಮನೆಗಳಿವೆ. ಇವುಗಳಲ್ಲಿ 15-20 ಮಾತ್ರ ಸಾಲ ಮುಕ್ತವಾಗಿವೆ. ಅಲ್ಲದೇ ಸಾಲದ ಬಾಧೆಯಿಂದಾಗಿ ರೈತರು ತಮ್ಮ ಭೂಮಿಯನ್ನು ಅರ್ತಿಯಾಗಳಿಗೆ ಬಿಟ್ಟುಕೊಡುತ್ತಿದ್ದಾರೆ.
"ಅರ್ತಿಯಾಗಳು ಮತ್ತು ರೈತರ ನಡುವಿನ ಸಂಬಂಧವು ತುಂಬಾ ಕೆಟ್ಟದ್ದಲ್ಲ" ಎಂದು ಸಂಘೇರಾ ಹೇಳುತ್ತಾರೆ. "ಮತ್ತು ಕೃಷಿಯಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ನೋಡಿ ನನಗೆ ಪಿತ್ರಾರ್ಜಿತವಾಗಿ ಬಂದಿದ್ದು ಎಂಟು ಎಕರೆ ಜಮೀನು ಮಾತ್ರ. ಈಗ ನನಗೆ 18 ಎಕರೆ ಇದೆ. ಮಾಧ್ಯಮಗಳು ಕೆಲವೊಮ್ಮೆ ಸಮಸ್ಯೆಯನ್ನು ಸ್ವಲ್ಪ ಉತ್ಪ್ರೇಕ್ಷಿಸುತ್ತವೆ. ಆತ್ಮಹತ್ಯೆಯ ನಂತರ ಸರ್ಕಾರ ಪರಿಹಾರ ನೀಡಿದ ನಂತರ ಇಂತಹ ಘಟನೆಗಳು ಹೆಚ್ಚಾಗುತ್ತವೆ. ಒಂದು ಕುಟುಂಬಕ್ಕೆ ಪರಿಹಾರ ದೊರೆತರೆ, ಅದು ಇತರರನ್ನು ಅದೇ ರೀತಿ ಮಾಡಲು ಪ್ರೇರೇಪಿಸುತ್ತದೆ. ಪರಿಹಾರವನ್ನು ಸಂಪೂರ್ಣವಾಗಿ ನಿಲ್ಲಿಸಿ, ಆತ್ಮಹತ್ಯೆ ತಾನಾಗಿಯೇ ನಿಲ್ಲುತ್ತದೆ.”
ರೈತರ ಹಕ್ಕುಗಳನ್ನು ರಕ್ಷಿಸುವ ಸಂಘಗಳೇ ಅವರ ಪಾಲಿಗೆ ಖಳನಾಯಕರು. ಮತ್ತು ಅತ್ಯಂತ ಕೆಟ್ಟ ಅಪರಾಧಿ ಭಾರತೀಯ ರೈತರ ಸಂಘ (ಡಾಕೊಂಡ). ಭೇದಿಸಲು ಕಷ್ಟವಾಗಿರುವ ಈ ಪ್ರದೇಶದಲ್ಲಿ ಬಿಕೆಯು(ಡಿ) ಪ್ರಬಲವಾಗಿದೆ. ಭೂಮಿಯನ್ನು ವಶಪಡಿಸಿಕೊಳ್ಳುವುದನ್ನು ತಡೆಯಲು ಅವರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಆ ಅದರಲ್ಲೂ ಏಜೆಂಟರು ಬಂದೂಕು ಹಿಡಿದು ಬಂದಿರುವಾಗ.
"ಹೆಚ್ಚಿನ ಅರ್ತಿಯಾಗಳು ಆಯುಧಗಳನ್ನು ಹೊಂದಿದ್ದಾರೆ" ಎಂದು ಸಂಘೇರಾ ಒಪ್ಪಿಕೊಳ್ಳುತ್ತಾರೆ. ಆದರೆ ಇವುಗಳನ್ನು ಆತ್ಮರಕ್ಷಣೆಗಾಗಿ ಮಾತ್ರ ಬಳಸಲಾಗುತ್ತದೆ. ನಿಮ್ಮ ಬಳಿ ದೊಡ್ಡ ಪ್ರಮಾಣದ ಹಣವಿದ್ದಾಗ, ನಿಮಗೆ ರಕ್ಷಣೆ ಬೇಕು, ಅಲ್ಲವೇ? 99ರಷ್ಟು ರೈತರು ಒಳ್ಳೆಯವರು ಎಂಬುದನ್ನು ನೆನಪಿಡಿ. ನಿಸ್ಸಂಶಯವಾಗಿ, ಉಳಿದ ಒಂದು ಶೇಕಡಾ ಎಷ್ಟು ಅಪಾಯಕಾರಿ ಎಂದರೆ ಅವರಿಗೆ ಎಲ್ಲಾ ಸಮಯದಲ್ಲೂ ಸಶಸ್ತ್ರ ರಕ್ಷಣೆ ಅಗತ್ಯವಿರುತ್ತದೆ. ಆತನ ಬಳಿ ಗನ್ ಕೂಡ ಇರುತ್ತದೆ. "ಪಂಜಾಬ್‌ನಲ್ಲಿ ಭಯೋತ್ಪಾದನೆಯ ದಿನಗಳಲ್ಲಿ ಇದು ಅಗತ್ಯವಾಯಿತು" ಎಂದು ಅವರು ಹೇಳುತ್ತಾರೆ.
ಈ ನಡುವೆ ಸಾಲಬಾಧೆಯಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. 2000 ಮತ್ತು 2015ರ ನಡುವೆ 8,294 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಳೆದ ವರ್ಷ ವಿಧಾನಸಭೆಯ ಕೃಷಿ ಆತ್ಮಹತ್ಯೆಗಳ ಸಮಿತಿಯ ಮುಂದೆ ಮಂಡಿಸಿದ ಅಧ್ಯಯನ ಹೇಳಿದೆ. ಪಂಜಾಬ್‌ನಲ್ಲಿ ರೈತರು ಮತ್ತು ಕಾರ್ಮಿಕರ ಆತ್ಮಹತ್ಯೆಗಳು ಎಂಬ ಶೀರ್ಷಿಕೆಯ ವರದಿಯು ಇದೇ ಅವಧಿಯಲ್ಲಿ 6,373 ಕೃಷಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳುತ್ತದೆ. ಮತ್ತು ಇದು ರಾಜ್ಯದ 22 ಜಿಲ್ಲೆಗಳ ಪೈಕಿ ಕೇವಲ ಆರು ಜಿಲ್ಲೆಗಳಲ್ಲಿ ಸಂಭವಿಸಿದೆ ಎಂದು ವರದಿಯ ಲೇಖಕರು, ಪಂಜಾಬ್ ಕೃಷಿ ವಿಶ್ವವಿದ್ಯಾಲಯ (ಪಿಎಯು), ಲುಧಿಯಾನ ಸಂಶೋಧಕರು ಹೇಳಿದ್ದಾರೆ. ರಾಜ್ಯ ಸರ್ಕಾರದ ಕಂದಾಯ ಇಲಾಖೆ ನಡೆಸಿದ ಅಧ್ಯಯನದಲ್ಲಿ ಈ ಎಲ್ಲ ಆತ್ಮಹತ್ಯೆಗಳಲ್ಲಿ ಶೇ.83 ರಷ್ಟು ಆತ್ಮಹತ್ಯೆಗಳು ಸಾಲದ ಬಾಧೆಯಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ.
"ಅಸಹಾಯಕತೆಯಿಂದ ಯಾರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ" ಎಂದು ತೇಜಾ ಸಿಂಗ್ ಪ್ರತಿಪಾದಿಸುತ್ತಾರೆ. "ಕಳೆದ 10 ವರ್ಷಗಳಲ್ಲಿ ಕೃಷಿ ಉತ್ತಮವಾಗಿ ನಡೆಯುತ್ತಿದೆ. ವಾಸ್ತವವಾಗಿ ಅರ್ತಿಯಾಗಳು ಸಾಲದ ಬಡ್ಡಿ ದರಗಳನ್ನು ಕಡಿಮೆ ಮಾಡಿದ್ದಾರೆ." ತಿಂಗಳಿಗೆ 1 ಪ್ರತಿಶತಕ್ಕೆ (ವರ್ಷಕ್ಕೆ 12 ಪ್ರತಿಶತ) ಇಳಿದಿದೆ ಎಂದು ಅವರು ಹೇಳುತ್ತಾರೆ. ಆದಾಗ್ಯೂ, ಹಳ್ಳಿ ಹಳ್ಳಿಗಳಲ್ಲಿ, ರೈತರು ದರವು ಶೇಕಡಾ 1.5 (ವರ್ಷಕ್ಕೆ ಶೇಕಡಾ 18) ಅಥವಾ ಅದಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದರು. ಜೋಧ್ ಪುರ್ ಗ್ರಾಮದ ಕದನದಲ್ಲಿ ತಾಯಿ ಮತ್ತು ಮಗ ಸಂಪೂರ್ಣ ಸಾರ್ವಜನಿಕರ ಎದುರಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ ಅರ್ತಿಯಾ ತೇಜಾ ಸಿಂಗ್. "ಈ ಎಲ್ಲಾ ಕೃಷಿ ಆತ್ಮಹತ್ಯೆಗಳಲ್ಲಿ ಕೇವಲ 50 ಪ್ರತಿಶತದಷ್ಟು ಮಾತ್ರ ನೈಜವಾಗಿವೆ" ಎಂದು ಅವರು ಅಪಹಾಸ್ಯ ಮಾಡುತ್ತಾರೆ.
ಆದರೆ, ಅವರು ಅರ್ತಿಯಾಗಳ ರಾಜಕೀಯದ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ. ಹೌದು, ಗುಂಪುಗಳಿವೆ. ಆದರೆ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಅವರ ವ್ಯಕ್ತಿಯೇ ನಮ್ಮ ಸಂಘದ ಅಧ್ಯಕ್ಷರಾಗುತ್ತಾರೆ. ಸದ್ಯದ ರಾಜ್ಯಾಧ್ಯಕ್ಷರು ಕಾಂಗ್ರೆಸ್ ಜೊತೆಗಿದ್ದಾರೆ. ಚುನಾವಣೆಗೂ ಮುನ್ನ ಈ ಹುದ್ದೆಯಲ್ಲಿ ಅಕಾಲಿ ಇರುತ್ತಿದ್ದರು. ತೇಜಾ ಸಿಂಗ್ ಅವರ ಪುತ್ರ ಜಸ್ಪ್ರೀತ್ ಸಿಂಗ್ ಅವರು ಅರ್ತಿಯಾಗಳನ್ನು ಅಪಮಾನಿಸಲಾಗುತ್ತಿದೆ ಎಂದು ನಂಬುತ್ತಾರೆ. “ಇತರ ವೃತ್ತಿಗಳಂತೆ ನಮ್ಮದೂ ಒಂದು ವೃತ್ತಿಯಷ್ಟೇ," ಎಂದು ಅವರು ಹೇಳುತ್ತಾರೆ. “ನಮ್ಮನ್ನು ನಿಂದಿಸಲಾಗುತ್ತಿದೆ ಅದು ತಪ್ಪು. ನಮ್ಮ [ಜೋಧ್‌ಪುರ] ಪ್ರಕರಣದ ನಂತರ, ಸುಮಾರು 50 ಅರ್ತಿಯಾಗಳು ವೃತ್ತಿಯನ್ನು ತೊರೆದರು."
ಆದರೆ, ಜಸ್ಪ್ರೀತ್ ಮಾಧ್ಯಮದ ಬಗ್ಗೆ ಖುಷಿಯಾಗಿದ್ದಾರೆ. "ಸ್ಥಳೀಯ ಪತ್ರಿಕಾ ಮಾಧ್ಯಮವು ನಮ್ಮೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಮಾಧ್ಯಮಗಳ ಮೇಲೆ ನಮಗೆ ನಂಬಿಕೆ ಇದೆ. ಅವರ ಉಪಕಾರವನ್ನು ತೀರಿಸಲು ನಮಗೆ ಸಾಧ್ಯವಾಗುವುದಿಲ್ಲ. ಇಲ್ಲ, ಅನುಕೂಲಕರ ಕವರೇಜ್‌ಗಾಗಿ ನಾವು ಯಾರಿಗೂ ಪಾವತಿಸಿಲ್ಲ. [ಜೋಧ್‌ಪುರ ಘಟನೆಯ ನಂತರ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಿದಾಗ] ಹಿಂದಿ ಪತ್ರಿಕೆಗಳು ನಮ್ಮ ರಕ್ಷಣೆಗೆ ಬಂದವು. ನಮಗೆ ತಕ್ಷಣವೇ ಹೈಕೋರ್ಟ್‌ನಿಂದ ಜಾಮೀನು ಸಿಕ್ಕಿತು, ಅದನ್ನು ಬೇರೆ ಯಾವುದೇ ಪರಿಸ್ಥಿತಿಯಲ್ಲಿ ಮಾಡಲಾಗಲಿಲ್ಲ. ಹಿಂದಿ ಪತ್ರಿಕೆಗಳು ವ್ಯಾಪಾರ ಸಮುದಾಯವನ್ನು ಬೆಂಬಲಿಸುವುದರಿಂದ ಹೆಚ್ಚು ಸಹಾಯಕವಾಗಿವೆ ಎಂದು ಅವರು ಭಾವಿಸುತ್ತಾರೆ. ಪಂಜಾಬಿ ಪತ್ರಿಕಾ ಮಾಧ್ಯಮವು ಭೂಮಾಲೀಕ ವರ್ಗಗಳಿಗೆ ಹತ್ತಿರವಾಗಿದೆ ಎಂದು ಅವರು ವಿಷಾದಿಸುತ್ತಾರೆ.
ರಾಜ್ಯ ಸರ್ಕಾರದ ಅಕ್ಟೋಬರ್ 2017ರ ಸಾಲ ಮನ್ನಾ ಸೀಮಿತವಾಗಿದೆ, ಲೇಯರ್ಡ್ ಮತ್ತು ಷರತ್ತುಬದ್ಧವಾಗಿದೆ. ಸಹಕಾರಿ ಬ್ಯಾಂಕ್‌ಗಳು ಮತ್ತು ಸಾರ್ವಜನಿಕ ವಲಯದ ಅಥವಾ ಖಾಸಗಿ ಬ್ಯಾಂಕ್‌ಗಳಿಗೆ ರೈತರು ಎಷ್ಟು ಋಣಭಾರ ಹೊಂದಿದ್ದಾರೆ ಎಂಬುದಕ್ಕೆ ಇದು ಅನ್ವಯಿಸುತ್ತದೆ. ಮತ್ತು ಅದು ಕೂಡ ಸಂಕುಚಿತ, ನಿರ್ಬಂಧಿತ ರೀತಿಯಲ್ಲಿ ಮುನ್ನೆಲೆಗೆ ಬಂದಿದೆ. ಕಾಂಗ್ರೆಸ್ ಪಕ್ಷವು ತನ್ನ 2017ರ ಚುನಾವಣಾ ಪ್ರಣಾಳಿಕೆಯಲ್ಲಿ "ರೈತರ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ" ಭರವಸೆ ನೀಡಿತ್ತು. ಮತ್ತು 2016ರ ಪಂಜಾಬ್‌ನ ಕೃಷಿ ಸಾಲ ಕಾಯಿದೆಯನ್ನು "ಹೆಚ್ಚು ಸಮಗ್ರ ಮತ್ತು ಪರಿಣಾಮಕಾರಿ" ಮಾಡಲು ಬಳಸಲಾಗುವುದು ಎಂದು ಹೇಳಿದರು. ಆದರೆ ರೈತರು ಆರ್ಹತಿಯಾಗಳಿಂದ ಪಡೆದಿರುವ 17 ಸಾವಿರ ಕೋಟಿ ರೂ. ಸಾಲದಲ್ಲಿ ಒಂದು ಪೈಸೆಯನ್ನೂ ಸರಕಾರ ಮನ್ನಾ ಮಾಡಿಲ್ಲ.
2010ರ ಅಧ್ಯಯನವು ಈ "ರೈತರ ಉತ್ಪನ್ನಗಳಿಗೆ ಕಮಿಷನ್ ಏಜೆಂಟ್‌ಗಳ ಮೂಲಕ ಪಾವತಿಸುವ ವ್ಯವಸ್ಥೆಯನ್ನು ತೆಗೆದುಹಾಕಬೇಕು" ಎಂದು ಶಿಫಾರಸು ಮಾಡಿದೆ. ಲುಧಿಯಾನದ ಪಿಎಯು ಯಿಂದ ಸಂಶೋಧಕರು ಪಂಜಾಬ್ ಕೃಷಿಯಲ್ಲಿ ಕಮಿಷನ್ ಏಜೆಂಟ್ ವ್ಯವಸ್ಥೆಯ ಅಧ್ಯಯನವು "ರೈತರಿಗೆ ಅವರ ಉತ್ಪನ್ನಗಳ ಖರೀದಿಗೆ ನೇರವಾಗಿ ಪಾವತಿಸಬೇಕು" ಎಂದು ಹೇಳಿದೆ.
ಕಮಿಷನ್ ಏಜೆಂಟರು ಮತ್ತು ರೈತರ ಕಥೆ ದೇಶಾದ್ಯಂತ ಸದ್ದು ಮಾಡುತ್ತಿದೆ. ಆದರೆ ಇಲ್ಲಿ ಒಂದು ವಿಶಿಷ್ಟ ಅಂಶವಿದೆ. ಬೇರೆಡೆ ಇರುವ ಅವರ ಬಂಧುಬಳಗದಂತೆ ದರ್ಶನ್ ಸಿಂಗ್ ಸಂಘೆರ, ತೇಜಾ ಸಿಂಗ್ ಮತ್ತು ಅವರಂತಹ ಅನೇಕರು ಬನಿಯಾಗಳು ಅಥವಾ ಇತರ ವ್ಯಾಪಾರಿ ಜಾತಿಗಳಿಂದ ಬಂದವರಲ್ಲ. ಅವರು ಜಾಟ್ ಸಿಖ್ಖರು. ಜಾಟರು ತಡವಾಗಿ ಈ ವೃತ್ತಿಗೆ ಸೇರಿದರು. ಆದರೆ ಅವರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದು, ಪಂಜಾಬ್‌ನಲ್ಲಿ 47,000 ಅರ್ತಿಯಾಗಳಲ್ಲಿ 23,000 ಜಾಟ್‌ಗಳು. "ನಗರಗಳಲ್ಲಿ, ನಾವು ದೊಡ್ಡ ಗುಂಪು ಅಲ್ಲ," ಸಂಘೆರ ಹೇಳುತ್ತಾರೆ. “ನಾನು 1988ರಲ್ಲಿ ಈ ವೃತ್ತಿಗೆ ಸೇರಿಕೊಂಡೆ. ಈ ಮಂಡಿಯಲ್ಲಿ 10 ವರ್ಷ ಕಳೆದರೂ 5-7 ಜಾಟರು ಮಾತ್ರ ಕೆಲಸ ಮಾಡುತ್ತಿದ್ದರು. ಇಂದು 150 ಅಂಗಡಿಗಳಿವೆ, ಅದರಲ್ಲಿ ಮೂರನೇ ಒಂದು ಭಾಗ ಜಾಟರು. ಮತ್ತು ಈ ಪರಿಧಿಯ ಸಣ್ಣ ಮಾರುಕಟ್ಟೆಗಳಲ್ಲಿ, ನಾವು ಬಹುಮತದಲ್ಲಿದ್ದೇವೆ.
ಹೆಚ್ಚಿನ ಜಾಟ್‌ಗಳು ಬನಿಯಾ ಅರ್ತಿಯಾಗಳ ಕಿರಿಯ ಪಾಲುದಾರರಾಗಿ ವೃತ್ತಿ ಪ್ರಾರಂಭಿಸಿ ನಂತರ ತನ್ನದೇ ಆದ ಸ್ವತಂತ್ರ ವ್ಯವಹಾರವನ್ನು ಪ್ರಾರಂಭಿಸಿದರು. ಆದರೆ ಬನಿಯಾಗಳು ಜಾಟ್‌ಗಳನ್ನು ಪಾಲುದಾರರನ್ನಾಗಿ ಏಕೆ ಬಯಸುತ್ತಾರೆ? ಹಣ ವಸೂಲಿ ಮಾಡುವಾಗ ಬೆದರಿಕೆ ಮತ್ತು ಏನಾದರೂ ಮುನ್ನೆಲೆಗೆ ಬಂದಾಗ, "ಬನಿಯಾ ಏಜೆಂಟ್‌ಗಳು ಹೆದರುತ್ತಾರೆ" ಎಂದು ಸಂಘೇರಾ ಹೇಳುತ್ತಾರೆ. ಜಾಟ್ ಅರ್ತಿಯಾಗಳು ಯಾರಿಗೂ ಹೆದರುವುದಿಲ್ಲ. "ನಾವು ಹಣವನ್ನು ಹಿಂತಿರುಗಿ ಪಡೆಯುತ್ತೇವೆ" ಎಂದು ಅವರು ಶಾಂತವಾಗಿ ಹೇಳುತ್ತಾರೆ.
ಮುಕ್ತಸರ ಜಿಲ್ಲೆಯ ಬಹುತೇಕ ಜಾಟ್ ರೈತರ ಗುಂಪಿಗೆ ನಾನು ಈ ಕಥೆಯನ್ನು ಹೇಳಿದಾಗ, ಅವರು ಜೋರಾಗಿ ನಕ್ಕರು. "ಅವನು ನಿಮಗೆ ಸತ್ಯವನ್ನೇ ಹೇಳಿದ್ದಾನೆ " ಎಂದು ಅವರಲ್ಲಿ ಕೆಲವರು ಹೇಳಿದರು. “ಜಾಟ್‌ಗಳು ತಪ್ಪು ಮಾಡುವುದರಿಂದಲೂ ಹಿಂದೆ ಸರಿಯುವುದಿಲ್ಲ. ಬನಿಯಾಗಳು ಹಿಂದೆ ಸರಿಯುತ್ತಾರೆ. ಜೂನಿಯರ್ ಪಾಲುದಾರರು ಈಗ ಈ ವ್ಯವಹಾರದಲ್ಲಿ ಅವರ ಅಣ್ಣನಾಗುವ ದಾರಿಯಲ್ಲಿದ್ದಾರೆ.
ಆದರೆ ಬನಿಯಾಗಳೊಂದಿಗಿನ ಪಾಲುದಾರಿಕೆಯ ಪ್ರಭಾವವು ಬಹುಶಃ ಈಗ ಸೀಮಿತ ರೀತಿಯಲ್ಲಿ ಗೋಚರಿಸುತ್ತದೆ. ಸಂಘೇರಾ ಅವರ ಕಛೇರಿಯಲ್ಲಿರುವ ಐದು ವಾಲ್ ಪೇಂಟಿಂಗ್‌ಗಳ ಬಗ್ಗೆ ನಾವು ಅವರ ಮಗ ಓಂಕಾರ್ ಸಿಂಗ್‌ಗೆ ಕೇಳಿದೆವು. ಮೊದಲ ಇಬ್ಬರು ಗುರು ಗೋಬಿಂದ್ ಸಿಂಗ್ ಮತ್ತು ಗುರು ನಾನಕ್. ಕೊನೆಯ ಇಬ್ಬರು ಗುರು ಹರಗೋಬಿಂದ್ ಮತ್ತು ಗುರು ತೇಗ್ ಬಹದ್ದೂರ್. ಸಾಲಿನಲ್ಲಿರುವ ಐದು ಚಿತ್ರಗಳಲ್ಲಿ, ಮಧ್ಯದ ಚಿತ್ರವು ಶಿವ ಮತ್ತು ಪಾರ್ವತಿ ಮತ್ತು ಶಿಶು ಗಣೇಶನದಾಗಿತ್ತು. ಇದು ಹೇಗಾಯಿತು?
"ನಾವು ಈ ವೃತ್ತಿಯನ್ನು ಪ್ರವೇಶಿಸಿದ್ದೇವೆ, ಹೀಗಾಗಿ ನಾವು ಅದರ ವಿಧಾನಗಳನ್ನು ಅನುಸರಿಸಬೇಕು" ಎಂದು ಓಂಕಾರ್ ಹೇಳಿದರು.
ಅನುವಾದ: ಶಂಕರ. ಎನ್. ಕೆಂಚನೂರು