"ನನ್ನ ಇಬ್ಬರು ಹಿರಿಯ ಪುತ್ರರು ಪಾಟೀಲ್ (ಕೃಷಿ ಮಾಲಿಕರು) ಅವರ ಬಳಿ ಎರಡು ದಿನಗಳ ಕಾಲ ಕೆಲಸ ಮಾಡಿ ತಲಾ 150 ರೂ ಗಳಿಸಿದರು. ಅವರು ಅದೇ ಹಣದಿಂದ ಪಾಟೀಲರ್ ಬಳಿ ಕನ್ಯಾವನ್ನು ಖರೀದಿಸಿದರು", ಎಂದು ವನಿತಾ ಭೋಯಿರ್ ಹೇಳುತ್ತಾ ಹಳದಿ ಬಣ್ಣದ ಪ್ಲಾಸ್ಟಿಕ್ ಜಾರ್ ತೆರೆದು ನನಗೆ ತೋರಿಸಲೆಂದು ಅದರಿಂದ ಒಂದಿಷ್ಟು ಅಕ್ಕಿಯ ನುಚ್ಚನ್ನು ಕೈಯಲ್ಲಿ ತೆಗೆದುಕೊಂಡರು. ಅವು ಭತ್ತದ ಕೊಯ್ಲಿನ ನಂತರ ಅಕ್ಕಿ ಮಾಡಿಸುವಾಗ ಸಿಗುವ ತುಂಡಾದ ಅಕ್ಕಿಕಾಳುಗಳಾಗಿದ್ದವು ಮತ್ತು ಇದರ ಬೆಲೆ ಅಕ್ಕಿಗಿಂತ ಕಡಿಮೆಯಿರುತ್ತದೆ. ಈ ಕನ್ಯಾದ ಜೊತೆಗೆ 52 ವರ್ಷದ ವನಿತಾರ ಒಣ ಹುಲ್ಲು ಮತ್ತು ಮಣ್ಣಿನಿಂದ ನಿರ್ಮಿಸಿದ ಗುಡಿಸಲಿನಲ್ಲಿ ಒಂದು ವಾರಕ್ಕಾಗುವಷ್ಟು ಉಪ್ಪು, ಮೆಣಸಿನಕಾಯಿ ಮತ್ತು ಅರಿಶಿನ ಪುಡಿ, ಅಡುಗೆ ಎಣ್ಣೆ ಮತ್ತು ಕೆಲವು ಆಲೂಗಡ್ಡೆಗಳ ಸಂಗ್ರಹವಿತ್ತು. ಇವುಗಳನ್ನು ಅವರ ಕುಟುಂಬಕ್ಕೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ನೀಡಿದ್ದರು.
"ಪಡಿತರ ಚೀಟಿ ಹೊಂದಿರುವವರಿಗೆ ಸರಕಾರದಿಂದ ಧಾನ್ಯಗಳನ್ನು ನೀಡಲಾಗುತ್ತಿದೆ. ಅವರು ಉಚಿತವಾಗಿ ಅಕ್ಕಿಯನ್ನು ಸಹ ಪಡೆದರು. (ಪ್ರತಿ ತಿಂಗಳು, ಮಾರ್ಚ್ ತಿಂಗಳ ಲಾಕ್ಡೌನ್ ಆರಂಭವಾದಾಗಿನಿಂದ) ಆದರೆ ನನ್ನ ಬಳಿ ಪಡಿತರ ಚೀಟಿಯಿಲ್ಲ. ಈಗ ನನ್ನ ಕುಟುಂಬ ಏನು ಮಾಡಬೇಕು? ಸರ್ಕಾರ ನನಗೆ ಸಹಾಯ ಮಾಡುವುದಿಲ್ಲ. ನಮ್ಮ ಕೆಲಸವೂ ನಿಂತುಹೋಗಿದೆ. ನಾವು ಏನು ತಿನ್ನಬೇಕು?", ಇದು 55 ವರ್ಷದ ನವ್ಸು ಭೋಯಿರ್, ವನಿತಾರ ಪತಿಯ ಪ್ರಶ್ನೆ.
ನವ್ಸು ಪಡಿತರ ಚೀಟಿಗಾಗಿ ಇದುವರೆಗೂ ಅರ್ಜಿ ಸಲ್ಲಿಸಿಲ್ಲ. "ನಾವು ಪ್ರತಿ ವರ್ಷ ಕೆಲಸದ ಹುಡುಕಾಟದಲ್ಲಿ ವಲಸೆ ಹೋಗುತ್ತೇವೆ. ಇದಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆಂದು ನನಗೆ ತಿಳಿದಿಲ್ಲ", ಎಂದು ಅವರು ಹೇಳುತ್ತಾರೆ. ನವ್ಸು ಅಶಿಕ್ಷಿತ. ದಂಪತಿಗಳ ಮೂವರು ಮಕ್ಕಳು ಕಾಲಕ್ರಮೇಣ ಶಾಲೆಯಿಂದ ಹೊರಗುಳಿದಿದ್ದಾರೆ. 18 ವರ್ಷ ಪ್ರಾಯದ ಆನಂದ್ ಮತ್ತು 12 ವರ್ಷದ ಶಿವ 3ನೇ ತರಗತಿ ನಂತರ ಶಾಲೆ ಬಿಟ್ಟಿದ್ದಾರೆ. ರಾಮದಾಸ್ 16 ವರ್ಷ 4ನೇ ತರಗತಿಯ ತನಕ ಓದಿದ್ದಾನೆ. ಅವರ ಇಬ್ಬರು ಕಿರಿಯ ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. 8 ವರ್ಷದ ಕೃಷ್ಣ 2ನೇ ತರಗತಿ ಓದುತ್ತಿದ್ದರೆ ಕಿರಿಯಳಾದ ನಾಲ್ಕು ವರ್ಷದ ಸಂಗೀತ ಸ್ಥಳೀಯ ಅಂಗನವಾಡಿಗೆ ಹೋಗುತ್ತಾಳೆ.
ಭೋಯಿರ್ ಕುಟುಂಬವು ಪಾಲ್ಘರ್ ಜಿಲ್ಲೆಯ ವಡಾ ಪಟ್ಟಣದಿಂದ 20 ಕಿಲೋಮೀಟರ್ ದೂರದಲ್ಲಿರುವ ಬೊರಾಂಡಾ ಎಂಬ ಹಳ್ಳಿಯಲ್ಲಿ ವಾಸಿಸುತ್ತಿದೆ. ಅವರು ಕಟ್ಕರಿ ಆದಿವಾಸಿ ಸಮುದಾಯದ ಸುಮಾರು ಎಂಟು ಗುಡಿಸಲುಗಳ ಗುಂಪಿನಲ್ಲಿ ವಾಸಿಸುತ್ತಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಕಾರ್ಮಿಕರ ಕುಟುಂಬವು ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡಲು ಭಿವಾಂಡಿ ತಾಲ್ಲೂಕಿಗೆ ವಲಸೆ ಬಂದಿತು. ಇಟ್ಟಿಗೆ ಗೂಡಿನಲ್ಲಿ ಕೆಲಸವೆಂದರೆ ಹಗಲು ರಾತ್ರಿಗಳ ಮೈಮುರಿಯುವಷ್ಟು ದುಡಿಮೆ. ವಾರಕ್ಕೊಮ್ಮೆ ಮಾಲಿಕರಿಂದ 400-500 ಖರ್ಚಿಗಾಗಿ ಪಡೆದು ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು. ತಿಂಗಳ ಕೊನೆಯಲ್ಲಿ ಅವರಿಗೆ ಸಂಬಳದ ಲೆಕ್ಕ ಹಾಕುವಾಗ ಅವರ ಒಟ್ಟು ಗಳಿಕೆಯಿಂದ ಕಡಿತಗೊಳಿಸಲಾಗುತ್ತದೆ. ಕುಟುಂಬದ ಯಾವುದೇ ಸಾಲ ಇಲ್ಲದಿದ್ದಲ್ಲಿ ನವೆಂಬರ್ ತಿಂಗಳಿನಿಂದ ಮೇ ತನಕ ಏಳು ತಿಂಗಳು ದುಡಿದರೆ ಅವರ ಕೈಯಲ್ಲಿ 10,000-12,000 ರೂಪಾಯಿಗಳು ಕೈಯಲ್ಲಿರುತ್ತದೆ.
ಈ ಹಣವನ್ನು ಅವರು ಮುಂಗಾರಿನ ಅಗತ್ಯ ವಸ್ತುಗಳ ಖರೀದಿಗೆ ಬಳಸುತ್ತಾರೆ. ಇದಲ್ಲದೆ ಮನೆ ರಿಪೇರಿಗೂ ಒಂದಿಷ್ಟು ಹಣ ಬೇಕಿರುತ್ತದೆ. ಹಾಗೆಯೇ ಮಕ್ಕಳ ಶಿಕ್ಷಣದ ಖರ್ಚು ಕೂಡಾ ಇರುತ್ತದೆ. ಈ ಪರಿಸ್ಥಿತಿ ಇವರಿಗೆ ಸರ್ವೇಸಾಧಾರಣ. ಈ ನಡುವೆ ತೀರಿಸದ ಸಾಲಗಳಿದ್ದರೆ ಅವರ ಕೈಯಲ್ಲಿ ಒಂದು ರೂಪಾಯಿ ಕೂಡಾ ಉಳಿಯುವುದಿಲ್ಲ. ಬದಲಿಗೆ ಮುಂದಿನ ಒಂದಿಷ್ಟು ತಿಂಗಳು ಬದುಕುಳಿಯಲು ಇಟ್ಟಿಗೆ ಗೂಡಿನ ಮಾಲಿಕರ ಬಳಿ ಮತ್ತಷ್ಟು ಸಾಲವನ್ನು ಮಾಡಬೇಕಾಗುತ್ತದೆ. ಇದನ್ನು ಮರುಪಾವತಿಸಲು ಅದೇ ಹಣದಾಸೆಯ ಮಾಲಿಕರ ಬಳಿ ದುಡಿಯಲು ಹೋಗುವುದನ್ನುಳಿದು ಅವರಿಗೆ ಬೇರೆ ಆಯ್ಕೆಗಳಿಲ್ಲ.
ಪ್ರತಿವರ್ಷ ಮೇ ತನಕ ನಡೆಯುತ್ತಿದ್ದ ಕೆಲಸ ಈ ಬಾರಿ ಕೋವಿಡ್ - 19ರ ಕಾರಣದಿಂದಾಗಿ ಮಾರ್ಚ್ನಲ್ಲೇ ನಿಂತು ಹೋಯಿತು. ಇದರೊಂದಿಗೆ ವನಿತಾ, ನವ್ಸು ಮತ್ತು ಅವರ ಮಕ್ಕಳು ಮನೆಗೆ ಮರಳಿದರು. "ಕೆಲಸದ ಆರಂಭದ ತಿಂಗಳುಗಳಲ್ಲಿ (ಗೂಡುಗಳಲ್ಲಿ) ನಾವು ಗಳಿಸುವ ಹಣವನ್ನು ವಾರದ ವೆಚ್ಚಗಳಿಗಾಗಿ ಖರ್ಚು ಮಾಡುತ್ತೇವೆ. ನಂತರದ ದಿನದ ದುಡಿಮೆಯ ಒಂದಿಷ್ಟು ಆದಾಯ ನಮ್ಮ ಕೈಯಲ್ಲಿ ಉಳಿಯುತ್ತದೆ. ಆದರೆ ಈ ಬಾರಿ ಕೆಲಸ ಬೇಗನೇ ನಿಂತು ಹೋಯಿತು. ನಾವು ಊರಿಗೆ ಹೊರಟು ನಿಂತಾಗ ಮಾಲಿಕರು ನಮಗೆ ಕೇವಲ 2,000 ರೂಪಾಯಿಗಳನ್ನು ಮಾತ್ರ ನೀಡಿದರು. ಆದರೆ ಆ ಹಣ ಎಷ್ಟು ದಿನಗಳಿಗೆ ಸಾಕಾಗುತ್ತದೆ? ಈಗ ಆ ಹಣದಲ್ಲಿ ಏನೂ ಉಳಿದಿಲ್ಲ. ನಾವು ಇಲ್ಲಿಗೆ ಮರಳಿದ ತಕ್ಷಣ ಗುಡಿಸಲಿನ ಛಾವಣಿಗೆ ಸೋರದಂತೆ ಟಾರ್ಪಲ್ ಹೊದೆಸಿದೆವು. ಒಂದಿಷ್ಟು ಹಣ ಊರು ತಲುಪಲು ಖರ್ಚಾಯಿತು. (ಟೆಂಪೋದಲ್ಲಿ ಊರು ತಲುಪಿಕೊಂಡೆವು)" ಎಂದು ವನಿತಾ ವಿವರಿಸುತ್ತಾರೆ.
ಬೊರಾಂಡಾಗೆ ಮರಳಲು ಮಾರ್ಚ್ ಅಂತ್ಯದಲ್ಲಿ ಅವರು ಇಟ್ಟಿಗೆ ಗೂಡನ್ನು ಬಿಡುವ ಮೊದಲು ಗುತ್ತಿಗೆದಾರನು ಅವರ ಗಳಿಕೆ ಮತ್ತು ವೆಚ್ಚವನ್ನು ಲೆಕ್ಕಾಚಾರ ಮಾಡಿರಲಿಲ್ಲ. ಹೀಗಾಗಿ ಅವರಿಗೆ ವಾಸ್ತವದಲ್ಲಿ ಅವರು ಎಷ್ಟು ಗಳಿಸಿದ್ದಾರೆ ಅವರಿಗೆ ಬರಬೇಕಿರುವ ಬಾಕಿಯೆಷ್ಟು ಎನ್ನುವುದು ಅವರಿಗೆ ತಿಳಿದಿಲ್ಲ. ಈಗ ವನಿತಾ ಮತ್ತು ನವ್ಸು ತಮ್ಮ ಏಳು ಜನರ ಕುಟುಂಬಕ್ಕೆ ಮುಂದಕ್ಕೆ ಆಹಾರ ಒದಗಿಸುವುದು ಹೇಗೆ, ದಿನ ಕಳೆಯುವುದು ಹೇಗೆ ಎಂಬ ಚಿಂತೆಗೆ ಬಿದ್ದಿದ್ದಾರೆ. ಅವರು ಭೂಹೀನ ಕಾರ್ಮಿಕರಾಗಿರುವುದರಿಂದ ಕೆಲಸ ಹುಡುಕುತ್ತಾ ಅಲೆಯುವುದನ್ನು ಬಿಟ್ಟರೆ ಬೇರೆ ಬದುಕಿಲ್ಲ. ಆದರೆ ಈ ಅವಧಿಯಲ್ಲಿ ಕೆಲಸವನ್ನು ಎಲ್ಲಿ ಹುಡುಕುವುದು? - ಇದು ಭೋಯಿರ್ ಕುಟುಂಬವನ್ನು ಕಾಡುತ್ತಿರುವ ಚಿಂತೆಯಾಗಿದೆ.
ಅವರ ಹಳ್ಳಿಯ ಸುತ್ತಮುತ್ತ ಕೃಷಿ ಕೆಲಸಗಳು ವಿರಳ. ಅಲ್ಲಿನ ರೈತರು ಸಣ್ಣ ಪ್ರಮಾಣದ ಹಿಡುವಳಿಗಳನ್ನು ಹೊಂದಿದ್ದು ಹೆಚ್ಚೆಂದರೆ ಬಿತ್ತನೆ ಮತ್ತು ಕೊಯ್ಲಿನ ಸಮಯದಲ್ಲಿ ಎರಡು ವಾರಗಳ ಕೆಲಸ ನೀಡಬಹುದು. ಈ ಕೆಲಸಕ್ಕೆ ದಿನಗೂಲಿಯಾಗಿ 150 ರೂಪಾಯಿಗಳನ್ನು ನೀಡಲಾಗುತ್ತದೆ. ಅಥವಾ ಅದೇ ಸಮಯಕ್ಕೆ ಯಾರಿಗಾದರೂ ಕಾಡಿನ ಉರುವಲು ಸೌದೆ ಅಗತ್ಯ ಬಿದ್ದರೆ ಭೋಯಿರ್ಸ್ ಮತ್ತು ಇತರರಿಗೆ ಇನ್ನೊಂದು 150 ರೂಪಾಯಿ ಸಿಗುತ್ತದೆ. ಇನ್ನೂ ಅದೃಷ್ಟವಿದ್ದರೆ ಹತ್ತಿರದ ಕಟ್ಟಡ ನಿರ್ಮಾಣ ಕೆಲಸಗಳಲ್ಲಿ 250 ರೂಪಾಯಿಯ ದಿನಗೂಲಿ ಕೆಲಸ ಸಿಗುತ್ತದೆ. ಆದರೆ ಇದು ಅದೃಷ್ಟವಿದ್ದಾಗ ಮಾತ್ರ.
ಸಾಮಾನ್ಯವಾಗಿ ಬಿಕ್ಕಟ್ಟಿನ ಸಮಯದಲ್ಲಿ, ಇಂತಹ ಕುಟುಂಬಗಳು ತಮ್ಮ ಮಾಲೀಕರಿಂದ ಸಾಲವನ್ನು ತೆಗೆದುಕೊಳ್ಳುತ್ತವೆ. ಆದರೆ ಈ ವರ್ಷ, ಎಲ್ಲಾ ಇಟ್ಟಿಗೆ ಗೂಡು ಮಾಲೀಕರು ಅವರಿಗೆ ಮಾಡಿದ ಕೆಲಸಕ್ಕೆ ಮಾತ್ರ ಪಾವತಿ ಮಾಡಲಾಗುವುದು ಎಂದು ತಿಳಿಸಿದ್ದರು. ಆದ್ದರಿಂದ ಸಾಲ ಪಡೆಯುವ ಅವರ ಆಶಯವೂ ಮುಳುಗಿದಂತಾಗಿದೆ.
ನನ್ನ ಒಂದು ಭೇಟಿಯ ಸಂದರ್ಭದಲ್ಲಿ ಬೊರಾಂಡದಲ್ಲಿ ಕೆಲವು ಗುಡಿಸಲುಗಳ ಮುಂದೆ ಸುಮಾರು 8ರಿಂದ 10 ಪುರುಷರು ಮತ್ತು ಮಹಿಳೆಯರು ಸಣ್ಣ ಜಗಲಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಆಗ ಮಧ್ಯಾಹ್ನ ಎರಡು ಗಂಟೆಯ ಸಮಯವಾಗಿತ್ತು. "ಸರ್ಕಾರವು ಅನೇಕ ಕುಟುಂಬಗಳಿಗೆ ಅಕ್ಕಿಯನ್ನು ನೀಡಿತು. (ಲಾಕ್ಡೌನ್ ನಂತರ) ಜೊತೆಗೆ 2,000 ರೂಪಾಯಿಗಳನ್ನೂ ಅವರ ಬ್ಯಾಂಕ್ ಅಕೌಂಟುಗಳಿಗೆ ಹಾಕಿದರಂತೆ. ಜನರೂ ಅದನ್ನೇ ಹೇಳಿದರು. ಆದರೆ ಅದಕ್ಕಾಗಿ ನಾವು (ಬೊರಾಂಡಾದಿಂದ ನಾಲ್ಕು ಕಿ.ಮೀ ದೂರದಲ್ಲಿರುವ ಹತ್ತಿರದ ಬ್ಯಾಂಕ್ ಗೆ) ಖಾರಿವ್ಲಿ ಗ್ರಾಮಕ್ಕೆ ಹೋಗಬೇಕಾಗುತ್ತದೆ. ಆದರೆ ಈಗ ಈ ರೋಗವಿದೆ. ಏನು ಮಾಡೋದು? ನಾವು ಅಲ್ಲಿಗೆ ಹೋಗುವುದು ಹೇಗೆ? ಯಾವುದೇ ಸಾರಿಗೆ ವ್ಯವಸ್ಥೆ ಕೂಡ ಇಲ್ಲ", ಎಂದು ಅನಿತಾ ಅವರ ಪಕ್ಕದ ಮನೆಯಲ್ಲಿ ವಾಸಿಸುತ್ತಿರುವ 65 ವರ್ಷದ ಭಾಯ್ಜಿ ತನ್ನೊಂದಿಗೆ ಕುಳಿತಿದ್ದ ಇತರರೊಂದಿಗೆ ಹೇಳುತ್ತಿದ್ದರು.
ಕೆಲವು ಗುಡಿಸಲುಗಳ ಹೊರಗೆ, ಆ ದಿನ ನೆಲದ ಮೇಲೆ ಒಣಗಲು ಮಾಹುವಾ (ಇಪ್ಪೆ) ಹೂವುಗಳನ್ನು ಹರಡಲಾಗಿತ್ತು. ಈ ಒಣಗಿದ ಮಾಹುವಾ ಹೂವುಗಳನ್ನು ಅವರು ಏನು ಮಾಡುತ್ತಾರೆಂದು ನಾನು ಕೇಳಿದೆ. “ಮಳೆಗಾಲದ ಮೊದಲು ಉರೂಸ್ ನಡೆಯುತ್ತದೆ. ಅಲ್ಲಿ ನಾವು ಈ ಹೂವುಗಳನ್ನು ಮಾರಾಟ ಮಾಡಿ ಬಂದ ಹಣದಿಂದ ಈರುಳ್ಳಿ-ಆಲೂಗಡ್ಡೆಯನ್ನು ಖರೀದಿಸುತ್ತೇವೆ”, ಎಂದು ಮಹಿಳೆಯೊಬ್ಬರು ಉತ್ತರಿಸಿದರು.
ಉರೂಸ್ ಒಂದು ದೊಡ್ಡ ಮಾರುಕಟ್ಟೆಯಾಗಿದ್ದು, ಮಳೆಗಾಲ ಪ್ರಾರಂಭವಾಗುವ ಮೊದಲು ಮೇ ತಿಂಗಳಲ್ಲಿ 10-12 ದಿನಗಳವರೆಗೆ ನಡೆಯುತ್ತದೆ. ಈ ವರ್ಷ ಲಾಕ್ಡೌನ್ ಮತ್ತು ಕೋವಿಡ್ -19 ಹರಡುವ ಭೀತಿಯಿಂದ ಉರೂಸ್ ನಡೆಯಲಿಲ್ಲ.
ಇಷ್ಟು ವರ್ಷಗಳು ಇಲ್ಲಿ ಮಾರಾಟದಲ್ಲಿ ಆಹಾರ ಧಾನ್ಯಗಳು, ಮಸಾಲೆ, ಈರುಳ್ಳಿ, ಆಲೂಗಡ್ಡೆ, ಮೀನು, ಮನೆ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಮತ್ತು ಹೆಚ್ಚಿನವು ಸಿಗುತ್ತಿದ್ದವು. ಬೊರಾಂಡಾದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ ವಡಾ ತಾಲ್ಲೂಕಿನ ಕುಡುಸ್ ಪಟ್ಟಣದಲ್ಲಿನ ಈ ಮಾರುಕಟ್ಟೆಗೆ ಅನೇಕ ಹಳ್ಳಿಗಳ ಜನರು ಸೇರುತ್ತಾರೆ. ಆದಿವಾಸಿ ಕುಟುಂಬಗಳು ಇಲ್ಲಿ ಮಾಹುವಾ ಹೂಗಳು ಮತ್ತು ಡಿಂಕಾ (ಸಹಜ ಅಂಟು)ಗಳನ್ನು ಮಾರಾಟ ಮಾಡುತ್ತಾರೆ ಮತ್ತು ಹೆಚ್ಚಿನ ಕೆಲಸ ಪಡೆಯಲು ಸಾಧ್ಯವಾಗದಿದ್ದಾಗ ಮಳೆಗಾಲಕ್ಕಾಗಿ ಕೆಲವು ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ,. ಅವರು ಈ ದಿನಗಳನ್ನು ಈ ದಾಸ್ತಾನು ಧಾನ್ಯಗಳ ಮೂಲಕ ಕಳೆಯುತ್ತಾರೆ.
ವನಿತಾ ಮತ್ತು ನವ್ಸು ಈ ವರ್ಷವೂ ಅದೇ ಭರವಸೆಯನ್ನು ಹೊಂದಿದ್ದರು - ಮುಂದಿನ ಕೆಲವು ತಿಂಗಳುಗಳನ್ನು ಸಂಗ್ರಹಿಸಿದ ಧಾನ್ಯಗಳೊಂದಿಗೆ ಕಳೆಯಲು ಯೋಚಿಸಿದ್ದರು. ಆದರೆ ಅವರ ಗುಡಿಸಲಿನಲ್ಲಿರುವ ಧಾನ್ಯಗಳು ಬಹುತೇಕ ಮುಗಿದಿವೆ.
ಅನುವಾದ: ಶಂಕರ ಎನ್. ಕೆಂಚನೂರು