ಅಮ್ರೋಹಾದಿಂದ ದೆಹಲಿಯತ್ತ ಸಾಗಲು ಮುಂಜಾನೆ ರೈಲ್ವೆ ನಿಲ್ದಾಣದಿಂದ ಹೊರಡುವ ಕಾಶಿ ವಿಶ್ವನಾಥ ಎಕ್ಸ್-ಪ್ರೆಸ್ ರೈಲಿನಲ್ಲಿ ಮೊದಲ ಬಾರಿಗೆ ಕೂತಿದ್ದಾಗ ಐನೂಲ್ ನಿಜಕ್ಕೂ ಆತಂಕಿತಳಾಗಿದ್ದಳು. "ನಾನು ಭಯಭೀತಳಾಗಿದ್ದೆ. ನಾನು ಬಾಂಬೈ ಹೋಗೋದೆಂದೇ ಪದೇ ಪದೇ ಯೋಚಿಸುತ್ತಿದ್ದೆ. ಅಷ್ಟು ದೂರ ಹೋಗುತ್ತಿದ್ದೇನೆ. ಅಲ್ಲಿಯವರು ನನ್ನೊಂದಿಗೆ ಹೇಗೆ ನಡೆದುಕೊಳ್ಳುವರೋ ಏನೋ. ನಾನು ಹೇಗೆ ನಿಭಾಯಿಸುತ್ತೇನೋ ಏನೋ!", ಹೀಗೆ ಜನರಲ್ ಮಹಿಳಾ ಬೋಗಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಹದಿನೇಳರ ಹರೆಯದ ಐನೂಲಳ ಮನದಲ್ಲಿ ಚಿಂತೆಗಳೇ ತುಂಬಿದ್ದವು.
ಐನೂಲಳ ಮಾವನಾಗಿದ್ದ ಆಲಿಮ್ ಕೂಡ ಅದೇ ರೈಲಿನಲ್ಲಿದ್ದ. ಇಬ್ಬರೂ ದೆಹಲಿಯಲ್ಲಿ ಮತ್ತೊಂದು ರೈಲನ್ನು ಹಿಡಿದು ಬಾಂದ್ರಾ ಟರ್ಮಿನಸ್ ನಲ್ಲಿ ಬಂದಿಳಿದಿದ್ದರು. ಹೀಗೆ ಬಂದು ಐನೂಲಳನ್ನು ಆತ ಕರೆದುಕೊಂಡು ಹೋಗಿದ್ದು ಮಾಹಿಮ್ ಪ್ರದೇಶದ ನಯೀ ಬಸ್ತಿ ಕೊಳಗೇರಿ ಕಾಲೋನಿಯಲ್ಲಿದ್ದ ಹೊಸಮನೆಗೆ. ಇತ್ತ ಐನೂಲಳನ್ನು ಮನೆಗೆ ಬಿಟ್ಟಿದ್ದ ಆತ ಮಕ್ದೂಮ್ ಅಲಿ ಮಾಹಿಮಿ ದರ್ಗಾದ ಬಳಿ ಎಂದಿನಂತೆ ಭಿಕ್ಷಾಟನೆಗೆ ಹೊರಟಿದ್ದ.
ಮೂರು ವರ್ಷಗಳ ನಂತರ ಕೆಲ ಕಾಲದ ಮಟ್ಟಿಗೆ ಐನೂಲ್ ಕೂಡ ಈ ಭಿಕ್ಷಾಟನೆಯ ವೃತ್ತಿಯನ್ನು ಮಾಡುವವಳಿದ್ದಳು. ಹೀಗೆ ಹುಟ್ಟಿದ ಸಂಪಾದನೆಯು ಸೆಂಟ್ರಲ್ ಮುಂಬೈನ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಹಲವು ವಾರಗಳಿಂದ ರೋಗಿಯಾಗಿ ಮಲಗಿದ್ದ ಆಕೆಯ 18 ತಿಂಗಳ ಕೂಸಿನ ಖರ್ಚಿಗೆ ಸರಿಯಾಗುತ್ತಿತ್ತು. ಮಗನಿಗೆ ಸೋಕಿದ್ದ ಖಾಯಿಲೆಯಾದರೂ ಯಾವುದು ಎಂಬುದು ಖುದ್ದು ಐನೂಲಳಿಗೇ ತಿಳಿದಿರಲಿಲ್ಲ. "ಸಾಲದ ಮೊತ್ತ ಹಿಂದಿರುಗಿಸುವವರಿಲ್ಲವಾದ್ದರಿಂದ [ಚಿಕಿತ್ಸೆಯ ಖರ್ಚಿಗಾಗಿ] ನನಗೆ ಎಲ್ಲಿಂದಲೂ ಸಾಲ ಹುಟ್ಟಲಿಲ್ಲ," ಎನ್ನುತ್ತಾ ಕಳೆದುಹೋದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಐನೂಲ್.
ಹೀಗೆ ಐನೂಲ್ ಆ ರೈಲಿನಲ್ಲಿ ಕೂತಿದ್ದಾಗ ಅವಳೊಳಗಿದ್ದ ಆತಂಕವು ಸುಳ್ಳಾಗಿರಲಿಲ್ಲ.
ಅಂದು ರೈಲುಮಾರ್ಗವಾಗಿ ಅಷ್ಟು ದೂರದ ಪ್ರಯಾಣಕ್ಕೆಂದು ಹೊರಟಾಗ ಐನೂಲಳ ಕೈಯಲ್ಲಿದ್ದಿದ್ದು ಕೆಲವೇ ಕೆಲವು ಬಟ್ಟೆಗಳಿದ್ದ ಒಂದು ಚೀಲವಷ್ಟೇ. ತವರುಮನೆಯಿಂದ ಗಂಡನ ಮನೆಗೆ ಕೊಂಡೊಯ್ಯಲೆಂದು ಖರೀದಿಸಿದ್ದ ಒಂದೊಂದು ಪಾತ್ರೆ-ಪಗಡಿಯೂ ಮಾರಾಟವಾಗಿತ್ತು. ಯಾರ್ಯಾರದ್ದೋ ಪಾತ್ರೆಗಳನ್ನು ತೊಳೆಯುತ್ತಾ, ಮನೆಗಳನ್ನು ಸ್ವಚ್ಛಗೊಳಿಸುತ್ತಾ, ಹೊಲಗಳಲ್ಲಿ ಕೆಲಸ ಮಾಡುತ್ತಾ... ಹೀಗೆ ಬಾಲ್ಯದಿಂದಲೂ ಶ್ರಮಜೀವನವನ್ನೇ ನಡೆಸುತ್ತಾ ಬಂದವಳು ಐನೂಲ್. "ನನಗೆ ತಿನ್ನಲು ಆಹಾರವನ್ನೋ, ಒಂದಷ್ಟು ಹಣವನ್ನೋ ನೀಡುತ್ತಿದ್ದರು. ಅದನ್ನು ನಾನು ಪುಟ್ಟ ಡಬ್ಬಿಯೊಂದರಲ್ಲಿ ಕೂಡಿಡುತ್ತಿದ್ದೆ. ಹೀಗೆ ಒಂದೊಂದು ಪೈಸೆ ಕೂಡಿಡುತ್ತಾ ನನ್ನ ಮದುವೆಗಾಗಿ 5000 ರೂಪಾಯಿ ಹಣ ಕೂಡಿಸಿದ್ದೆ. ಇದರಿಂದಲೇ ಆಸುಪಾಸಿನ ಅಂಗಡಿಗಳಿಂದ ಕಂಚಿನ ತಟ್ಟೆ, ಹರಿವಾಣ, ಸೌಟು ಮತ್ತು ತಾಮ್ರದ ಬಾಣಲೆಯನ್ನೂ ಖರೀದಿಸಿದ್ದೆ," ಎನ್ನುತ್ತಾರೆ ಐನೂಲ್.
ಐನೂಲ್ ಜಮೀಲನನ್ನು ವಿವಾಹವಾಗಿ ಅಮ್ರೋಹಾದ ವಠಾರದಲ್ಲೇ ಇದ್ದ ಗಂಡನ ಮನೆಗೆ ತೆರಳಿದರೆ, ಆಕೆಯ ಎಲ್ಲಾ ಸ್ವತ್ತುಗಳನ್ನು ಜಮೀಲ್ ಒಂದೊಂದಾಗಿಯೇ ಮಾರಿ ತನ್ನ ಮದ್ಯಪಾನದ ಮೋಜಿಗೆ ಹಣ ಹೊಂದಿಸುತ್ತಿದ್ದ. ಇನ್ನು ಐನೂಲ್ ಬಾಂದ್ರಾ ಟರ್ಮಿನಸ್ಸಿಗೆ ಬಂದ ನಂತರವಂತೂ ಹತ್ತಕ್ಕೂ ಹೆಚ್ಚು ವರ್ಷಗಳ ಕಾಲ ರಕ್ತ ಒಸರುವಂತೆ ಆಕೆಯನ್ನು ನಿರ್ದಯವಾಗಿ ಬಡಿಯುತ್ತಿದ್ದ. ಐನೂಲ್ ಮುಂಬೈಗೆ ಬಂದ ನಂತರ ಜಮೀಲನಿಂದ ದೈಹಿಕ ಕಿರುಕುಳ ಆರಂಭವಾಗಿದ್ದು ಸತ್ಯವಾದರೂ ಅದು ಯಾವತ್ತೆಂದು ನಿಖರವಾಗಿ ಹೇಳಲು ಆಕೆಗೆ ಸಾಧ್ಯವಾಗುತ್ತಿಲ್ಲ. "ತಾಯಿಗೆ ಕರೆ ಮಾಡಿ ಈ ಬಗ್ಗೆ ಹೇಳಿದ್ದೆ. ಆದರೆ ಅವಳೋ ಸುಧಾರಿಸಿಕೊಂಡು ಹೋಗುವಂತೆ ಹೇಳಿದ್ದಳು," ಎಂದು ನಿಡುಸುಯ್ಯುತ್ತಾರೆ ಐನೂಲ್.
ಆಗಿನ ಉತ್ತರಪ್ರದೇಶದ ಜ್ಯೋತಿಬಾಫುಲೆ ನಗರ ಜಿಲ್ಲೆಯ ಗ್ರಾಮೀಣ ಬತ್ವಾಲ್ ಮೊಹಲ್ಲಾದಲ್ಲಿ ಐನೂಲ್ ಕಳೆದುಕೊಂಡಿದ್ದು ತಾನು ಖರೀದಿಸಿದ್ದ ಪಾತ್ರೆಗಳನ್ನಷ್ಟೇ ಅಲ್ಲ. ಆಕೆ ತನ್ನ ತಾಯಿ, ಇಬ್ಬರು ಸಹೋದರಿಯರು ಮತ್ತು ಇಬ್ಬರು ಸಹೋದರರನ್ನೂ ಅಲ್ಲೇ ಬಿಟ್ಟು ಬಂದಿದ್ದಳು. ಕ್ಷೌರಿಕನಾಗಿದ್ದ ಐನೂಲಳ ತಂದೆ ಕೆಲ ವರ್ಷಗಳ ಹಿಂದಷ್ಟೇ ಮೃತನಾಗಿದ್ದ. ತವರ ಮತ್ತು ಕಲ್ನಾರಿನಿಂದ ಮಾಡಲ್ಪಟ್ಟ, ಮಧ್ಯದಂತಸ್ತಿನಲ್ಲಿರುವ ಒಂದು ಕೋಣೆಯ ಮನೆಯಲ್ಲಿ ಕುಳಿತಿರುವ ಐನೂಲ್ ತಾನು ಸಲ್ಮಾನಿ ಜಾತಿಗೆ ಸೇರಿದವಳೆಂದು ಹೇಳುತ್ತಿದ್ದಾಳೆ. "ನಮ್ಮ ಸಮುದಾಯದ ಗಂಡಸರೆಲ್ಲಾ ತಮ್ಮ ಸಾಂಪ್ರದಾಯಿಕ ವೃತ್ತಿಯಾದ ಕ್ಷೌರಿಕವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆಗೆಲ್ಲಾ ಅಪ್ಪ ಛಪ್ಪರ್ ಒಂದರ ಕೆಳಗೆ ಕೂತು ಬಂದವರ ಕ್ಷೌರ ಮಾಡಿ ಒಂದಷ್ಟು ಸಂಪಾದನೆ ಮಾಡುತ್ತಿದ್ದ. ನಾವು ಬಹಳ ಬಡತನದಲ್ಲಿದ್ದೆವು. ಅಮ್ಮಿ ನಮ್ಮ ಹೊಟ್ಟೆ ತುಂಬಲೆಂದು ಆರು ಮಕ್ಕಳಿಗೂ ಬಿಸಿನೀರು ಕುಡಿಸುತ್ತಿದ್ದಳು. ಹಸಿವಿಗೊಂದಿಷ್ಟು ಬೆಲ್ಲದ ತುಣುಕು. ನಮಗೆ ಸರಿಯಾದ ಬಟ್ಟೆಗಳಾಗಲೀ, ಹೊಂದುವ ಚಪ್ಪಲಿಯಾಗಲೀ ಇರಲಿಲ್ಲ. ಒಂದು ಕಾಲಿನದ್ದು ನೀಲಿ ಬಣ್ಣದ್ದಾದರೆ ಇನ್ನೊಂದು ಕಪ್ಪು ಬಣ್ಣದ್ದಾಗಿತ್ತು. ಎರಡಕ್ಕೂ ಸೇಫ್ಟಿ ಪಿನ್ ಹಾಕಿ ಸಿಕ್ಕಿಸಿಡಬೇಕಿತ್ತು," ಎಂದು ತನ್ನ ಬಡತನದ ಹಿನ್ನೆಲೆಯ ಬಗ್ಗೆ ಹೇಳುತ್ತಾಳೆ ಆಕೆ. ಐನೂಲಳ ಸದ್ಯದ ಪುಟ್ಟ ಮನೆ ಧಾರಾವಿಯ ಅಂಚಿನಲ್ಲಿದೆ.
ಆರು ಮಕ್ಕಳಲ್ಲಿ ಚಿಕ್ಕವಳಾಗಿದ್ದ ಐನೂಲ್ ಶಾಲೆಯ ಮೆಟ್ಟಿಲು ಹತ್ತಿದವಳೇ ಅಲ್ಲ. ಹೊಟ್ಟೆಪಾಡಿಗಾಗಿ ಮಕ್ಕಳು ಸಾಧ್ಯವಾದಷ್ಟು ಬೇಗ ಏನಾದರೊಂದು ಉದ್ಯೋಗ ಮಾಡುವುದೇ ಕುಟುಂಬದ ಆದ್ಯತೆಯಾಗಿತ್ತು. ಒಬ್ಬ ಸಹೋದರ ಗ್ಯಾರೇಜೊಂದರಲ್ಲಿ ಸಹಾಯಕನಾಗಿ ಸೇರಿಕೊಂಡರೆ ಇನ್ನಿಬ್ಬರು ರಿಕ್ಷಾ ಎಳೆಯುತ್ತಿದ್ದರು. ಐನೂಳ ತಾಯಿ ಹಿರಿಯಕ್ಕನೊಂದಿಗೆ ಬೀಡಿ ಕಟ್ಟುತ್ತಾ ಏಜೆಂಟ್ ಮೂಲಕವಾಗಿ ಒಂದು ಸಾವಿರ ಬೀಡಿಗೆ 50 ರೂಪಾಯಿಗಳನ್ನು ಗಳಿಸುತ್ತಿದ್ದಳು. ಐನೂಲ್ ಮತ್ತು ಇನ್ನೊಬ್ಬಳು ಅಕ್ಕ ಪಕ್ಕದ ಜೋಯಾ ಹಳ್ಳಿಯ ಹೊಲಗಳಿಗೆ ಹೋಗಿ ಕಾರ್ಮಿಕರಾಗಿ ದುಡಿಯಬೇಕಿತ್ತು. ಹೀಗೆ ಸಂಪಾದನೆಯಾಗಿ ಸಿಕ್ಕ ಧವಸಧಾನ್ಯಗಳಿಂದ ಕುಟುಂಬದ ಆಹಾರಕ್ಕೆ ಒಂದಷ್ಟು ದಾರಿಯಾಗುತ್ತಿತ್ತು. "ಅಷ್ಟಿದ್ದರೂ ಆ ದಿನಗಳಲ್ಲಿ ಕೈತುಂಬಾ ಕೆಲಸ ಮಾಡುತ್ತಾ ನಾನು ಸಂತಸದಲ್ಲಿದ್ದೆ," ಎಂದು ನೆನಪಿಸಿಕೊಳ್ಳುತ್ತಾರೆ ಐನೂಲ್.
ಕಾಲಕ್ರಮೇಣ ಐನೂಲಳ ತಂದೆಯ ಶೆಡ್ಡೊಂದರಿಂದಾಗಿ ತಕ್ಕಮಟ್ಟಿನ ಸ್ಥಳಾವಕಾಶವಿದ್ದ ಮನೆಯನ್ನು ಕೊನೆಗೂ ಮಾಡಿಕೊಳ್ಳುವಲ್ಲಿ ಶೇಖ್ ಕುಟುಂಬವು ಯಶಸ್ವಿಯಾಗಿತ್ತು. ಆಕೆಯ ತಾಯಿಯೂ ಸ್ಥಳೀಯ ಸಂಸ್ಥೆಯೊಂದರ ಯೋಜನೆಯಡಿಯಲ್ಲಿ ಸೂಲಗಿತ್ತಿಯಾಗಿ ತರಬೇತಿ ಪಡೆದುಕೊಂಡು ಒಂದಷ್ಟು ಸಂಪಾದಿಸತೊಡಗಿದ್ದಳು. ಆದರೆ ಐನೂಲ್ 13 ರ ಪ್ರಾಯಕ್ಕೆ ಬಂದಾಗ ಮಾತ್ರ ಪದೇಪದೇ ಖಾಯಿಲೆ ಬೀಳುತ್ತಲೇ ಇದ್ದ ಆಕೆಯ ತಂದೆ ಲಕ್ವಾ ಪೀಡಿತನಾಗಿ ಎರಡಕ್ಕೂ ಹೆಚ್ಚು ವರ್ಷಗಳ ಕಾಲ ಮನೆಯಲ್ಲೇ ಉಳಿದುಬಿಟ್ಟ (ತನ್ನ ವಯಸ್ಸು ಮತ್ತು ವರ್ಷಗಳ ಕೆಲ ಮಾಹಿತಿಯನ್ನು ಬಿಟ್ಟರೆ ಸದ್ಯ 30 ರ ಹರೆಯದ ಐನೂಲಳ ಸ್ಮರಣಶಕ್ತಿ ಬಹಳ ಚೆನ್ನಾಗಿದೆ). ಇದರಿಂದಾಗಿ ಕುಟುಂಬವು ಮತ್ತೆ ಬಡತನದ ದವಡೆಯಲ್ಲಿ ಸಿಲುಕಿಕೊಳ್ಳಬೇಕಾಯಿತು. "ನಾವು ಬಹಳ ಪ್ರಯತ್ನಿಸಿದೆವು. ವಠಾರದ ಜನರೂ ಕೂಡ ನಮಗೆ ನೆರವಾದರು. ಆದರೆ ಅವರನ್ನು ಉಳಿಸಿಕೊಳ್ಳಲಾಗಲಿಲ್ಲ," ಎನ್ನುತ್ತಾಳೆ ಐನೂಲ್. ಕೊನೆಗೂ ತಂದೆಯ ದೇಹಾಂತ್ಯವಾದಾಗ ಆಕೆಗೆ 15 ರ ಹರೆಯ. ಇನ್ನು ಐನೂಲ್ 16 ರ ವಯಸ್ಸಿಗೆ ಕಾಲಿಡುವಷ್ಟರ ಹೊತ್ತಿಗೆ ಸಹೋದರರೆಲ್ಲಾ ಸೇರಿ ಆಕೆಗೆ ವಿವಾಹ ಗೊತ್ತುಮಾಡಿದ್ದರು.
ಕೆಲ ದಿನಗಳ ಮಟ್ಟಿಗೆ ಐನೂಲ್ ತನ್ನ ಮಾವನಾದ ಆಲಿಮ್ ನ ಮನೆಯಲ್ಲೇ ವಾಸ್ತವ್ಯ ಹೂಡಿದ್ದಳು. ಐನೂಲ್ ಹೇಳುವ ಪ್ರಕಾರ ಆತ ಕೆಲ ತಿಂಗಳುಗಳ ಕಾಲ ಮುಂಬೈನಲ್ಲಿ ಭಿಕ್ಷಾಟನೆ ಮಾಡುತ್ತಾ ಒಂದಷ್ಟು ಕಾಸು ಸಂಪಾದಿಸಿ, ನಂತರದ ಕೆಲ ತಿಂಗಳುಗಳನ್ನು ಹೀಗೆ ಸಂಪಾದಿಸಿದ ಹಣದಲ್ಲಿ ಅಮ್ರೋಹಾದಲ್ಲಿ ಕಳೆಯುತ್ತಿದ್ದ. ಆಕೆಯ ಗಂಡನಾದ ಜಮೀಲನ ತಾಯಿ ಆಗಷ್ಟೇ ತೀರಿಕೊಂಡಿದ್ದರೆ, ಜಮೀಲನ ಸಹೋದರ ಬತ್ವಾಲ್ ವಠಾರದಲ್ಲಿ ಕ್ಷೌರಿಕನಾಗಿದ್ದ. ಇತ್ತ ವಿವಾಹವಾಗಿ ಸುಮಾರು ಒಂದು ವರ್ಷದ ತರುವಾಯ ಜಮೀಲ್ ತನ್ನ ಪತ್ನಿಯನ್ನು ಕರೆದುಕೊಂಡು ಮುಂಬೈಗೆ ಬಂದಿಳಿದಿದ್ದ.
ಜಮೀಲ್ ಮಾಡುತ್ತಿದ್ದ ಉದ್ಯೋಗಗಳು ಅಸ್ಥಿರವಾಗಿದ್ದವು. ಆತ ಧಾರಾವಿಯ ಪುನರುತ್ಪಾದನಾ ಘಟಕವೊಂದರಲ್ಲಿ ಒಮ್ಮೆ ಪೋರ್ಟರ್ ಆಗಿ ದಿನಕ್ಕೆ 100-150 ರೂಪಾಯಿಗಳ ಸಂಪಾದನೆಯಲ್ಲಿ, ಮತ್ತೊಮ್ಮೆ ಅಕ್ಕಿ ಮತ್ತು ಗೋಧಿಗಳನ್ನು ಹೊತ್ತು ಉತ್ತರಪ್ರದೇಶದತ್ತ ಸಾಗುತ್ತಿದ್ದ ಟ್ರಕ್ಕುಗಳಲ್ಲಿ ಸಹಾಯಕನಾಗಿ... ಹೀಗೆ ತರಹೇವಾರಿ ಉದ್ಯೋಗಗಳನ್ನು ಮಾಡುತ್ತಿದ್ದ. ಹಣದ ವಿಚಾರದಲ್ಲಿ ಆತನಿಗೆ ಆಗಾಗ ಆಲಿಮ್ ನ ಸಹಾಯವೂ ಸಿಗುತ್ತಿತ್ತು. ಒಂದು ರೀತಿಯಲ್ಲಿ ಆತ ಸ್ವೇಚ್ಛೆಯ ಸ್ವಭಾವದವನಾಗಿದ್ದು ಜೂಜಿನಂಥಾ ಚಟಗಳತ್ತ ಅವನಿಗೆ ಒಲವಿತ್ತು. ಐನೂಲಳು ಹೇಳುವ ಪ್ರಕಾರ ಅವನೊಬ್ಬ ಯಾವುದಕ್ಕೂ ಲಾಯಕ್ಕಲ್ಲದ ಮನುಷ್ಯನಾಗಿದ್ದ.
ಮುಂಬೈಗೆ ಬಂದ ಕೆಲ ವರ್ಷಗಳ ಕಾಲ ಆದಾಯಕ್ಕೆಂದು ಐನೂಲ್ ಯಾವ ಉದ್ಯೋಗವನ್ನೂ ಮಾಡಿರಲಿಲ್ಲ. "ನನ್ನನ್ನು ಭಿಕ್ಷಾಟನೆಗೆಂದು ದರ್ಗಾದ ಬಳಿ ಕಳಿಸಲು ನಾನು ನನ್ನ ಪತಿಯನ್ನು ಕೇಳುತ್ತಿದ್ದೆ. ಆದರೆ ಅವನು ನನ್ನನ್ನು ಹಾಗೆಲ್ಲಾ ಕಳಿಸುತ್ತಿರಲಿಲ್ಲ. ಯಾರದ್ದಾದರೂ ಮನೆಕೆಲಸಕ್ಕಾಗಿ ಹೋಗೋಣವೆಂದರೆ ಅದಕ್ಕೂ ಬೇಡವೆನ್ನುತ್ತಿದ್ದ. ದಿನವೂ 30 ರೂಪಾಯಿಗಳನ್ನು ತಂದು ನನ್ನ ಕೈಗಿಡುತ್ತಿದ್ದ. ಅದರಲ್ಲೇ ನಾನು ಎಲ್ಲವನ್ನೂ ಸಂಭಾಳಿಸಬೇಕಿತ್ತು. ನೆರೆಹೊರೆಯವರು ಕೊಂಚ ಉದಾರಿಗಳಾಗಿದ್ದರಿಂದ ಅವರ ಮನೆಯಲ್ಲಿ ಅಳಿದುಳಿದದ್ದೇನಾದರೂ ಇದ್ದರೆ ತಂದು ನಮಗೆ ಕೊಡುತ್ತಿದ್ದರು," ಎನ್ನುತ್ತಾಳೆ ಐನೂಲ್. ಐನೂಲಳ ಮೊದಲ ಮಗುವು ಖಾಯಿಲೆ ಬಿದ್ದಾಗ ಮಾತ್ರ ಪತಿಯ ಯಾವ ವಿರೋಧಕ್ಕೂ ಸೊಪ್ಪು ಹಾಕದೆ ಐನೂಲ್ ಕೆಲಸ ಹುಡುಕುತ್ತಾ ದರ್ಗಾದತ್ತ ಹೊರಟಿದ್ದಳಂತೆ.
ಐನೂಲ್ ಹೇಳುವ ಪ್ರಕಾರ ಕುಟುಂಬದ ಕೆಟ್ಟ ಸಮಯವು ಶುರುವಾಗಿದ್ದು ಎಂಟು ವರ್ಷಗಳ ಹಿಂದೆ ಆಲಿಮ್ ಸತ್ತ ನಂತರ. ಮೊದಲೇ ಹಿಂಸಾತ್ಮಕ ಮನೋಭಾವದವನಾಗಿದ್ದ ಜಮೀಲ್ ನಲ್ಲಿ ಈಗ ಮತ್ತಷ್ಟು ಕ್ರೌರ್ಯವು ತಾಂಡವವಾಡುತ್ತಿತ್ತು. "ನಾನು ತಿಂದ ಹೊಡೆತಗಳಿಗೆ ಲೆಕ್ಕವೇ ಇಲ್ಲ. ಅವನ ಬಾಯಿಯಿಂದ ಅಸಹ್ಯವಾದ ಅದೆಷ್ಟೋ ಬೈಗುಳಗಳನ್ನು ಕೇಳಿದ್ದೇನೆ. ಒಮ್ಮೆಯಂತೂ ಮಾಹಿಮ್ ನಲ್ಲಿ ನನ್ನನ್ನು ರೈಲುಹಳಿಗಳ ಮೇಲೆ ನೂಕಿ ಇಲ್ಲೇ ಸತ್ತುಹೋಗು ಎಂದಿದ್ದ," ಎಂದು ಆ ಭೀಕರ ದಿನಗಳನ್ನು ನೆನಪಿಸಿಕೊಳ್ಳುತ್ತಾಳೆ ಐನೂಲ್. "ಕೆಲವೊಮ್ಮೆ ಕೈಗಳಿಂದ, ಕೋಲಿನಿಂದ, ಚಿಮ್ಮಟೆಯಿಂದ... ಹೀಗೆ ಸಿಕ್ಕಸಿಕ್ಕವುಗಳಿಂದ ನನಗೆ ಜಮೀಲ್ ಬಡಿಯುತ್ತಿದ್ದ. ಆದರೆ ನಾನಾದರೂ ಏನು ಮಾಡಲಿ? ಎಲ್ಲವನ್ನೂ ಸಹಿಸಿಕೊಳ್ಳಬೇಕಿತ್ತು," ಎಂದು ಮೊಣಗಂಟಿಗಾದ ಹಳೆಯ ಗಾಯವೊಂದನ್ನು ತೋರಿಸುತ್ತಾ ಹೇಳುತ್ತಾಳೆ ಐನೂಲ್. ಆತ ರೈಲ್ವೆಹಳಿಗೆ ಅದೆಷ್ಟು ಭೀಕರವಾಗಿ ಆಕೆಯನ್ನು ತಳ್ಳಿದ್ದನೆಂದರೆ ಅವಳ ಮೊಣಕಾಲಿನ ಗಂಟು ಎರಡಾಗಿ ಸೀಳಿತ್ತಂತೆ.
ಇವೆಲ್ಲಾ ಜಂಜಾಟಗಳ ಮಧ್ಯೆಯೂ ಐನೂಲ್-ಜಮೀಲ್ ದಂಪತಿಗೆ ಮೂವರು ಮಕ್ಕಳಿದ್ದರು - ಇಬ್ಬರು ಮಗಂದಿರು, 15 ರ ಮೊಹಮ್ಮದ್, 9 ರ ಪ್ರಾಯದ ಜುನೈದ್ ಮತ್ತು ಓರ್ವ ಮಗಳು, 11 ರ ಮೆಹಜಬೀನ್. "ಗಂಡನನ್ನು ಬಿಟ್ಟುಹೋಗಮ್ಮಾ ನೀನು ಎಂದು ಕೆಲವರೆಲ್ಲಾ ಬಂದು ಬುದ್ಧಿವಾದ ಹೇಳಿದ್ದೂ ಇದೆ. ಆದರೆ ಹಾಗೆ ಎದ್ದುಹೋದರೆ ನನ್ನ ಮಕ್ಕಳ ಗತಿಯೇನಾಗುತ್ತಿತ್ತು? ನಮ್ಮ ಬಿರಾದರಿಯಲ್ಲಿ ಅವರ ವಿವಾಹಗಳಿಗೂ ಕೂಡ ಇದರಿಂದ ಕಲ್ಲು ಬಿದ್ದಂತಾಗುತ್ತಿತ್ತು," ಎಂದು ನಿಡುಸುಯ್ಯುತ್ತಾರೆ ಐನೂಲ್.
ಇದಾದ ಕೆಲ ದಿನಗಳ ನಂತರ ದರ್ಗಾದಲ್ಲಿ ಸಿಕ್ಕ ಮಹಿಳೆಯೊಬ್ಬಳು ಐನೂಲಳನ್ನು ತನ್ನ ಮನೆಕೆಲಸಕ್ಕೆಂದು ಮಾಸಿಕ 600 ರೂಪಾಯಿಗಳ ಪಗಾರದಲ್ಲಿ ಇಟ್ಟುಕೊಂಡಿದ್ದಳು. ಅಂದಿನಿಂದ ಆರಂಭಿಸಿ ಐನೂಲ್ ಹಲವು ಜಾಗಗಳಲ್ಲಿ ದುಡಿಯುತ್ತಾ ಬಂದಿದ್ದಾಳೆ. ('ವಾಡಿ' ಎಂದು ಕರೆಯಲಾಗುವ) ಕ್ಯಾಟೆರಿಂಗ್ ಕೆಲಸಗಳನ್ನು ಗುತ್ತಿಗೆಗಾಗಿ ತೆಗೆದುಕೊಳ್ಳುವ ಗುತ್ತಿಗೆದಾರರು ಕಾರ್ಮಿಕರನ್ನು ಮದುವೆಮನೆಗಳಿಗೆ ಕರೆದುಕೊಂಡು ಹೋಗಿ ಪಾತ್ರೆಗಳನ್ನು ತೊಳೆಯುವ ಕೆಲಸಕ್ಕೆ ಹಚ್ಚುವುದರಿಂದ ಹಿಡಿದು ಉಪನಗರವಾಗಿರುವ ಜೋಗೇಶ್ವರಿಯಲ್ಲಿ ದಾದಿಯಾಗಿ ದುಡಿಯುವವರೆಗೂ ಅವಳ ಅನುಭವವು ಸಾಗುತ್ತಾ ಬಂದಿದೆ.
ಈ ಹಲವು ವರ್ಷಗಳಲ್ಲಿ ಐನೂಲ್ ತನ್ನ ಮಕ್ಕಳೊಂದಿಗೆ ಮಾಹಿಮ್-ಧಾರಾವಿಯ ಪುಟ್ಟ ಬಾಡಿಗೆಯ ಕೋಣೆಗಳಲ್ಲಿ ಮಲಗಿದ್ದರೆ, ಜಮೀಲ್ ಪಕ್ಕದ ರಸ್ತೆಯ ಮೂಲೆಗಳಲ್ಲಿ ಹೆಚ್ಚಾಗಿ ಮಲಗುತ್ತಿದ್ದ. ಹಾಗೆಂದು ಐನೂಲ್ ಕೂಡ ಬೀದಿಬದಿಯಲ್ಲಿ ಮಲಗಿದ್ದ ದಿನಗಳಿಲ್ಲವೆಂದಲ್ಲ. ಧಾರಾವಿಯಲ್ಲಿ ಒಂದು ಬಾಡಿಗೆ ಕೋಣೆ ಹಿಡಿಯಲು ಏನಿಲ್ಲವೆಂದರೂ 5000 ರೂಪಾಯಿಗಳನ್ನು ಡಿಪಾಸಿಟ್ ಆಗಿ ಮುಂಗಡವಾಗಿ ನೀಡಬೇಕು. ಐನೂಲಳ ಬಳಿ ಈ ಮೊತ್ತವೂ ಇರುತ್ತಿರಲಿಲ್ಲ. "ಆದರೆ ಕ್ರಮೇಣ ಸುತ್ತಮುತ್ತಲ ಜನರ ಪರಿಚಯವಾದ ಬಳಿಕ ಡಿಪಾಸಿಟ್ ಇಲ್ಲದೆಯೂ ನಾನು ಕೋಣೆಯನ್ನು ಪಡೆಯಲು ಸಫಲಳಾದೆ. ಆದರೆ ಡಿಪಾಸಿಟ್ ಮೊತ್ತವನ್ನು ನೀಡುವಷ್ಟು ಸ್ಥಿತಿವಂತಳಾಗಿಲ್ಲದಿದ್ದರಿಂದ ಹಲವು ಬಾರಿ ನಾನು ಜಾಗಗಳನ್ನು ಬದಲಾಯಿಸುತ್ತಾ ಹೋಗಬೇಕಾಯಿತು. ಒಂದು ದಿನ ತಲೆಯ ಮೇಲೊಂದು ಸೂರಿದ್ದರೆ ಮತ್ತೊಂದು ದಿನ ಬೀದಿಯಲ್ಲಿ ಮಲಗಿರುತ್ತಿದ್ದೆ. ಒಮ್ಮೆ ಅಲ್ಲಿ, ಒಮ್ಮೆ ಇಲ್ಲಿ...," ಹೀಗೆ ತನ್ನ ಸಂಕಷ್ಟದ ದಿನಗಳ ಬಗ್ಗೆ ಇಂದು ನೆನಪಿಸಿಕೊಳ್ಳುತ್ತಾರೆ ಐನೂಲ್.
ಐನೂಲ್ ಕಳೆದ ಹಲವು ವರ್ಷಗಳಿಂದ ಮಾಹಿಮ್-ಧಾರಾವಿಯ ಪುಟ್ಟ ಬಾಡಿಗೆಮನೆಗಳಲ್ಲೂ, ಕೆಲವೊಮ್ಮೆ ಬೀದಿಗಳಲ್ಲೂ ತಂಗಿದ್ದಾಳೆ. "(ಬಾಡಿಗೆ ನೀಡಲಾಗದಿದ್ದ ಪರಿಣಾಮವಾಗಿ) ನಾನು ಹಲವು ಬಾರಿ ಮನೆಗಳನ್ನು ಬದಲಾಯಿಸಬೇಕಿತ್ತು. ಬೀದಿಗೆ ಬೀಳುವುದು, ಹೊಸಕೋಣೆಯ ತಲಾಶೆ ಇತ್ಯಾದಿಗಳು ನಡೆಯುತ್ತಲೇ ಇದ್ದವು...", ಹೀಗೆ ತನ್ನ ಸಂಕಷ್ಟದ ದಿನಗಳ ಬಗ್ಗೆ ಇಂದು ನೆನಪಿಸಿಕೊಳ್ಳುತ್ತಾರೆ ಐನೂಲ್.
ಜನವರಿ 2012 ರ ಒಂದು ಕರಾಳ ದಿನದಂದು ಐನೂಲ್ ನೆಲೆಯಾಗಿದ್ದ ಬಸ್ತಿಯು ಬೆಂಕಿಗೆ ಆಹುತಿಯಾಗಿತ್ತು. "ಮುಂಜಾನೆಯ 3 ರ ಜಾವವಿರಬಹುದೇನೋ. ಎಲ್ಲರೂ ಹಾಯಾಗಿ ಮಲಗಿದ್ದರು. ನಾವು ಛಾವಣಿ ಹತ್ತಿ ಜೀವ ಉಳಿಸಿಕೊಳ್ಳಲು ಓಡಬೇಕಾಯಿತು," ಎನ್ನುವ ಐನೂಲ್ ಈ ಘಟನೆಯ ನಂತರ ಎಂಟು ತಿಂಗಳುಗಳ ಕಾಲ ತಾನು ತನ್ನ ಮಕ್ಕಳೊಂದಿಗೆ ಮಾಹಿಮ್-ಸಿಯೋನ್ ಸೇತುವೆಯಿದ್ದ ಬೀದಿಯ ಬದಿಯಲ್ಲಿ ರಾತ್ರಿಗಳನ್ನು ಕಳೆಯಬೇಕಾಯಿತು ಎನ್ನುತ್ತಾಳೆ. ಆಕೆಯ ಪತಿಯೂ ಕೂಡ ಜೊತೆಗಿದ್ದ. "ಮಳೆಗಾಲದ ದಿನಗಳಂತೂ ಅತ್ಯಂತ ಕೆಟ್ಟದ್ದಾಗಿರುತ್ತಿದ್ದವು. ಮಳೆಯು ಧೋ ಎಂದು ಸುರಿಯುತ್ತಿದ್ದಾಗಲೆಲ್ಲಾ ನಾನು ನನ್ನ ಮಕ್ಕಳನ್ನು ಬಾಚಿಕೊಂಡು ಆಸರೆಗಾಗಿ ಪಕ್ಕದ ಗುಜರಿ ಅಂಗಡಿಯೊಳಕ್ಕೆ ಸೇರುತ್ತಿದ್ದೆ," ಎನ್ನುತ್ತಾರೆ ಐನೂಲ್.
ಐನೂಲ್ ಹೇಳುವ ಪ್ರಕಾರ ನೆರೆಹೊರೆಯವರು ಮತ್ತು ಕೆಲ ಸ್ಥಳೀಯ ಸಂಸ್ಥೆಗಳು ಬೆಂಕಿ ಅವಘಡದಿಂದ ಬೀದಿಗೆ ಬಿದ್ದ ಕುಟುಂಬಗಳಿಗೆ ಒಂದಷ್ಟು ನೆರವಾಗಿದ್ದವು. ಇದರಿಂದಾಗಿ ಆಕೆಗೂ ಕೂಡ ಒಂದಷ್ಟು ಧಾನ್ಯ, ಪಾತ್ರೆ, ಬಾಲ್ದಿ, ಒಂದು ಸ್ಟವ್ ಮತ್ತು ಚಾಪೆಗಳು ದೊರಕುವಂತಾಯಿತು. ಕ್ರಮೇಣ ಐನೂಲಳ ಜನಸಂಪರ್ಕಗಳು ಹೆಚ್ಚುತ್ತಾ ಅವಳ ವಲಯವು ದೊಡ್ಡದಾಗುತ್ತಾ ಹೋದಂತೆ ಸೇತುವೆಯ ಬಳಿಯ ಜಾಗವೊಂದರಲ್ಲಿ ಕುಟುಂಬಕ್ಕಾಗಿ ಚಿಕ್ಕ ಸೂರೊಂದನ್ನು ಮಾಡುವಲ್ಲಿ ಆಕೆಗೆ ಯಶಸ್ಸು ದೊರಕಿತ್ತು. ಆಕೆ ಈ ಹಿಂದೆ ಇದ್ದ ಗಾಳಿಯಾಡದ ಕೋಣೆಗಳಿಗೆ ಹೋಲಿಸಿದರೆ ಈ ಕೋಣೆಯು ವಿಶಾಲವಾಗಿದ್ದು ದೊಡ್ಡದೊಂದು ಕಿಟಕಿಯೂ ಇದೆ. "ಇದೊಂದು ತಾರಸಿಯಿದ್ದಂತಿದೆ ನೋಡಿ," ಎಂದು ಈ ಜಾಗವನ್ನು ತೋರಿಸುತ್ತಾ ಹೆಮ್ಮೆಯಿಂದ ಹೇಳುತ್ತಿದ್ದಾಳೆ ಐನೂಲ್.
ಮಾರ್ಚ್ 2015 ರಿಂದ ಕಾಗದದ ಮರುಬಳಕೆ ಮತ್ತು ಇತರ ಕೆಲಸಗಳನ್ನು ನೋಡಿಕೊಳ್ಳುತ್ತಿರುವ ಸ್ಥಳೀಯ ಸಂಸ್ಥೆಯೊಂದರಲ್ಲಿ ಐನೂಲ್ ಕಾಗದಗಳನ್ನು ಪ್ರತ್ಯೇಕಿಸುವ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಈ ಉದ್ಯೋಗವು ಆಕೆಗೆ ಮಾಸಿಕ 6000 ರೂಪಾಯಿಗಳ ಪಗಾರವನ್ನು ನೀಡುತ್ತಿರುವುದಲ್ಲದೆ ತನ್ನ ಬಗ್ಗೆಯೇ ಆಕೆಗೆ ಅಭಿಮಾನವನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಸಂಬಳದಲ್ಲಿ 3500 ರೂಪಾಯಿ ಮನೆಯ ಬಾಡಿಗೆಗೆ ವ್ಯಯವಾದರೆ 1000 ರೂಪಾಯಿಗಳನ್ನು ಧಾನ್ಯ, ಹಿಟ್ಟು, ತರಕಾರಿಗಳೆಂದು ತಿಂಗಳಿನ ಖರೀದಿಯ ಖರ್ಚಿಗಾಗುತ್ತದೆ. ಕುಟುಂಬದ ಬಳಿ ಇದ್ದ ಪಡಿತರ ಚೀಟಿಯು ಬೆಂಕಿ ಅವಘಡದಲ್ಲಿ ನಾಶವಾದ ನಂತರ ಹೊಸದನ್ನು ಮಾಡಿಸಿಕೊಳ್ಳಲು ಅವಳಿಗಿನ್ನೂ ಸಾಧ್ಯವಾಗಿಲ್ಲ. ಇವುಗಳನ್ನು ಬಿಟ್ಟರೆ ಅವಳ ಪಗಾರವು ಹೊಂದಿಕೆಯಾಗುವುದು ವಿದ್ಯುತ್ ಮತ್ತು ಮನೆಯ ಇತರೆ ಖರ್ಚುಗಳಲ್ಲಿ. "ನನ್ನ ಮಕ್ಕಳು ಈಗ ಹೊಟ್ಟೆ ತುಂಬುವಷ್ಟು ಉಣ್ಣುವುದನ್ನು ನೋಡುವಾಗ ಸಂತಸವಾಗುತ್ತದೆ," ಎಂದು ಹೆಮ್ಮೆಯಿಂದ ಹೇಳುತ್ತಾರೆ ಐನೂಲ್.
ಆಕೆಯ ಕುಟುಂಬವು ಶೌಚಕ್ಕಾಗಿ ಸಾರ್ವಜನಿಕ ಶೌಚಾಲಯದ ಬ್ಲಾಕ್ ಒಂದನ್ನು ಅವಲಂಬಿಸಿದೆ. ವಠಾರದ ನಲ್ಲಿಯಿಂದ ಬರುವ ನೀರಿಗೆ ಪ್ರತೀ ತಿಂಗಳೂ 200 ರೂಪಾಯಿಗಳನ್ನು ನೀಡಬೇಕು (ಇದನ್ನು ಸ್ಥಳೀಯ ಗಟ್ಟಿಗಿತ್ತಿ ಮಹಿಳೆಯೊಬ್ಬಳು ನಿಯಂತ್ರಿಸುತ್ತಿದ್ದಾಳೆ). ಪ್ರತೀಸಂಜೆಯೂ 7 ರಿಂದ 8 ರ ನಡುವಿನಲ್ಲಿ ಐನೂಲ್ ಬಕೆಟ್, ಡಬ್ಬಿ ಮತ್ತು ಬಾಟಲ್ಲುಗಳಲ್ಲಿ ನೀರನ್ನು ತಂದು ತುಂಬಿಸಿಡುತ್ತಾಳೆ. ಈ ಕೆಲಸದಲ್ಲಿ ಮಗನಾದ ಮೊಹಮ್ಮದ್ ಆಕೆಗೆ ನೆರವಾಗುತ್ತಾನಂತೆ. ನಾನು ಹೋಗಿದ್ದಾಗ ತನ್ನ ಶಾಲಾಕೆಲಸಗಳು ಮತ್ತು ಪುಸ್ತಕಗಳಲ್ಲಿ ವ್ಯಸ್ತಳಾಗಿದ್ದ ಹನ್ನೆರಡರ ಹರೆಯದ ಮೆಹಜಬೀನ್ ಈಗ ಆರನೇ ತರಗತಿಯಲ್ಲಿದ್ದಾಳೆ. ನಾಚಿಕೆಯ ಸ್ವಭಾವದವನೂ, ಹಸನ್ಮುಖಿಯೂ ಆಗಿರುವ ಕಿರಿಮಗ ಜುನೈದ್ 2 ನೇ ತರಗತಿಯಲ್ಲಿದ್ದಾನೆ. ಇವರಿಬ್ಬರೂ ಪಕ್ಕದ ನಗರಪಾಲಿಕೆಯ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾರೆ.
ಮೊಹಮ್ಮದನ ವಿದ್ಯಾಭ್ಯಾಸ 5 ನೇ ತರಗತಿಗೆ ಕೊನೆಗೊಂಡಿತ್ತು. ಅಪರೂಪಕ್ಕೊಮ್ಮೆ ಆತ ವೆಲ್ಡರ್ ಒಬ್ಬನ ಸಹಾಯಕನಾಗಿ ದುಡಿದು ದಿನಕ್ಕೆ 100 ರೂಪಾಯಿಗಳನ್ನು ಸಂಪಾದಿಸುತ್ತಾನೆ. ಅಥವಾ ವಠಾರದ ನೆರೆಕರೆಯ ಓರ್ವನಿಗಾಗಿ ಪುಸ್ತಕಗಳನ್ನು ಕೊಂಡೊಯ್ದು ಒಂದಷ್ಟು ಕಾಸು ಸಂಪಾದಿಸುತ್ತಾನೆ. ಅವನ ಕನಸುಗಳಿನ್ನೂ ಚಿಕ್ಕದಿವೆ. ಆ ಪಕ್ಕದ ಮನೆಯ ಹಿರಿಯನಂತೆ ಒಂದು ಪುಟ್ಟ ಪುಸ್ತಕದಂಗಡಿಯನ್ನಿಡಬೇಕೆಂದೋ, ತನ್ನ ಅಂಕಲ್ ನಂತೆ ಮೆಕ್ಯಾನಿಕ್ ಆಗಬೇಕೆಂದೋ ಆತ ಹಂಬಲಿಸುತ್ತಾನೆ. "ಅಥವಾ ಕ್ಷೌರಿಕನಾದರೂ ಆದೀತು. ನನ್ನ ಬಿರಾದರಿಯ ಇತರರಂತೆ ಅದೇ ಆಗಬೇಕೆಂದು ನನ್ನ ಆಸೆ. ಆದರೆ ಮೊದಲು ಈ ವೃತ್ತಿಯನ್ನು ನಾನು ಕಲಿಯಬೇಕಿದೆ. ಒಟ್ಟಿನಲ್ಲಿ ಯಾವ ವೃತ್ತಿಯಾದರೂ ಸರಿಯೇ. ಕೈಲಾದಷ್ಟು ಸಂಪಾದಿಸಿ ಕೊಂಚ ಅಮ್ಮನ ಕೈಗಿಡುತ್ತೇನೆ," ಎನ್ನುತ್ತಿದ್ದಾನೆ ಮೊಹಮ್ಮದ್.
ಈಗ ಜಮೀಲ್ ಐನೂಲಳ ಮೇಲೆ ಕೈಮಾಡುವಾಗಲೆಲ್ಲಾ ಅವನನ್ನು ತಡೆಯುವುದು ಮೊಹಮ್ಮದ್. ಹೀಗಾಗಿ ಜಮೀಲನ ಆರ್ಭಟವೀಗ ಕಿರುಚಾಡುವುದಕ್ಕಷ್ಟೇ ಸೀಮಿತವಾಗಿದೆ. ನಿರಂತರ ದೈಹಿಕ ದೌರ್ಜನ್ಯ, ಭೀಕರ ಹೊಡೆತಗಳು, ಶ್ರಮಜೀವನ, ಹಸಿವು... ಇವೆಲ್ಲವೂ ಸೇರಿ ಐನೂಲಳ ಆರೋಗ್ಯವನ್ನು ಕಂಗಾಲಾಗಿಸಿವೆ. ರಕ್ತದೊತ್ತಡ ಮತ್ತು ಆಗಾಗ ಬಂದು ಜೀವಹಿಂಡುವ ತಲೆನೋವಿನಿಂದಾಗಿ ಆಕೆ ಪೇಲವವಾಗಿದ್ದಾಳೆ.
ಈ ನಡುವೆ ಕೆಲಬಾರಿ ಐನೂಲ್ ಮರಳಿ ಬತ್ವಾಲ್ ವಠಾರಕ್ಕೂ ಹೋಗಿಬಂದಿದ್ದಾಳೆ. ಕ್ಷಯರೋಗದ ಪರಿಣಾಮದಿಂದಾಗಿ ಹಲವು ವರ್ಷಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ತಾಯಿ ಕೊನೆಯುಸಿರು ಎಳೆಯುವವರೆಗೂ ಐನೂಲ್ ಅಲ್ಲಿ ಆಕೆಯ ಜೊತೆಗಿದ್ದಳಂತೆ. "ಅಮ್ಮಿ ಆಗಾಗ ಒಂದಷ್ಟು ಹಣ ಕಳಿಸುತ್ತಿದ್ದಳು. ನನಗೆ ನೆರವಾಗುತ್ತಿದ್ದಳು," ಐನೂಲ್ ಮೆಲ್ಲನೆ ಉಸುರುತ್ತಿದ್ದಾಳೆ. ಅಂದಹಾಗೆ ಒಂದೆರಡು ವರ್ಷಗಳಿಗೊಮ್ಮೆ ತನ್ನೂರಾದ ಬತ್ವಾಲ್ ಗೆ ಹೋಗುವ ಪರಿಪಾಠವನ್ನು ಇನ್ನೂ ಆಕೆ ಉಳಿಸಿಕೊಂಡಿದ್ದಾಳೆ. ಸದ್ಯ ತನ್ನ ಸಹೋದರಿಯ ಮಗಳ ಮದುವೆಗೂ ಹೊರಡುವ ಸಿದ್ಧತೆ ಆಕೆಯದ್ದು.
ಐನೂಲ್ ಹೇಳುವ ಕೊನೆಯ ಮಾತುಗಳು ನಮ್ಮನ್ನು ತಟ್ಟದಿರುವುದಿಲ್ಲ ನೋಡಿ: "ನನ್ನೂರಿನಲ್ಲಿ ನನ್ನದು ಅಂತ ಹೇಳಿಕೊಳ್ಳಲೊಂದು ಪುಟ್ಟ ಮನೆಯನ್ನು ಮಾಡಬೇಕೆಂಬುದು ನನ್ನಾಸೆ. ಸತ್ತರೆ ಆ ಮಣ್ಣಿನಲ್ಲೇ ಸಾಯಬೇಕು. ನನ್ನ ಹೃದಯವು ಈ ಬಾಂಬೈಯಲ್ಲಿಲ್ಲ. ಈ ನಗರಿಯು ನನ್ನ ಉಸಿರುಗಟ್ಟಿಸುತ್ತದೆ. ನಮ್ಮ ಹಳ್ಳಿಯಲ್ಲಿ ನಾವು ಹಸಿವಿನಲ್ಲಿದ್ದರೂ ಹೇಗೋ ನಿಭಾಯಿಸುತ್ತಿದ್ದೆವು. ನನ್ನ ಬಾಲ್ಯ ಅಲ್ಲಿದೆ.. ನನ್ನೆಲ್ಲಾ ಸವಿನೆನಪುಗಳು ಅಲ್ಲಿವೆ... ಅಲ್ಲಿ ನಗಲು ನನಗೆ ಯಾವ ಅಡೆತಡೆಗಳೂ ಇರಲಿಲ್ಲ..."
ಅನುವಾದ : ಪ್ರಸಾದ್ ನಾಯ್ಕ್
ಕ್ರೇಝಿ ಫ್ರಾಗ್ ಮೀಡಿಯಾ ಈ ಅನುವಾದದ ರೂವಾರಿ. ಸಮಾನಮನಸ್ಕ ಬರಹಗಾರರನ್ನು ಮತ್ತು ಪತ್ರಕರ್ತರನ್ನು ಹೊಂದಿರುವ ಸಮೂಹವಿದು. ಬೆಂಗಳೂರು ಮೂಲದ ಆನ್ಲೈನ್ ನ್ಯೂಸ್ ಮೀಡಿಯಾ ಹಬ್ ಆಗಿರುವ ಕ್ರೇಝಿ ಫ್ರಾಗ್ ಮೀಡಿಯಾ ಸುದ್ದಿಗಳನ್ನು, ಕ್ರಿಯೇಟಿವ್ ಕಂಟೆಂಟ್ ಗಳನ್ನು, ಬ್ಯುಸಿನೆಸ್ ಸೊಲ್ಯೂಷನ್ ಗಳನ್ನು ನೀಡುತ್ತಾ ಪ್ರಸ್ತುತ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತಿದೆ.