ತನುಜಾ ತನಗೆ ಬೆನ್ನು ನೋವು ಮತ್ತು ಸೆಳೆತ ಅಸಹನೀಯ ಎನ್ನಿಸತೊಡಗಿದಾಗ ಅವರು ಹೋಮಿಯೋಪಥಿ ವೈದ್ಯರೊಬ್ಬರ ಬಳಿ ಹೋದರು. “ಅವರು ನನಗೆ ನನಗೆ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಸಮಸ್ಯೆ [ಕೊರತೆ] ಇದೆ ಮತ್ತು ನೆಲದ ಮೇಲೆ ಕುಳಿತು ಕೆಲಸ ಮಾಡಬಾರದು ಎಂದು ಹೇಳಿದರು.”

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೀಡಿ ಕಾರ್ಮಿಕರಾಗಿರುವ ಅವರು ಎಂಟು ಗಂಟೆಗಳ ಕಾಲ ನೆಲದ ಮೇಲೆ ಕುಳಿತು ಬೀಡಿ ಕಟ್ಟುತ್ತಾರೆ . "ನನಗೆ ಜ್ವರ ಮತ್ತು ನಿತ್ರಾಣ ಕಾಡುತ್ತಿದೆ, ಮತ್ತು ನನ್ನ ಬೆನ್ನಿನಲ್ಲಿ ತುಂಬಾ ನೋವು ಇದೆ," ಎಂದು 40ರ ದಶಕದ ಉತ್ತರಾರ್ಧದಲ್ಲಿ ಈ ಈ ಕೆಲಸಗಾರ್ತಿ ಹೇಳುತ್ತಾರೆ. "ಒಂದು ಕುರ್ಚಿ ಮತ್ತು ಮೇಜನ್ನು ಖರೀದಿಸಲು ನನಗೆ ಸಾಧ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು," ಎಂದು ಅವರು ಹೇಳುತ್ತಾರೆ.

ಅದು ನವೆಂಬರ್ ತಿಂಗಳ ಕೊನೆಯ ದಿನವಾಗಿತ್ತು ಮತ್ತು ಹರೇಕ್ ನಗರ ಮೊಹಲ್ಲಾದಲ್ಲಿರುವ ಅವರ ಮನೆಯ ಗಟ್ಟಿಯಾದ ಸಿಮೆಂಟ್ ನೆಲದ ಮೇಲೆ ಬೆಚ್ಚಗಿನ ಬೆಳಕು ಬೀಳುತ್ತಿತ್ತು. ತನುಜಾ ತಾಳೆಗರಿಯ ಮದುರ್ (ಚಾಪೆ) ಮೇಲೆ ಕುಳಿತು ಒಂದರ ನಂತರ ಒಂದರಂತೆ ಬೀಡಿಯನ್ನು ಕಟ್ಟುತ್ತಿದ್ದರು. ಅವರು ಕೆಂಡು ಎಲೆಯನ್ನು ತಿರುಚುವಾಗ, ಮೊಣಕೈಗಳನ್ನು ಒಂದು ಭಂಗಿಯಲ್ಲಿರಿಸಿ, ಭುಜಗಳನ್ನು ಮೇಲಕ್ಕೆತ್ತಿ, ತಲೆಯನ್ನು ಒಂದು ಬದಿಗೆ ವಾಲಿಸುವಾಗ ಬೆರಳುಗಳು ಜಾಣ್ಮೆಯಿಂದ ಚಲಿಸುತ್ತವೆ. "ನನ್ನ ಬೆರಳುಗಳು ಎಷ್ಟು ಮರಗಟ್ಟಿವೆಯೆಂದರೆ, ನನಗೆ ಬೆರಳುಗಳಿವೆಯೇ ಎಂದು ಅನುಮಾನವಾಗುತ್ತದೆ," ಎಂದು ಅರೆ ತಮಾಷೆಯಾಗಿ ಹೇಳುತ್ತಾರೆ.

ಅವರ ಸುತ್ತಲೂ ಬೀಡಿ ಕಟ್ಟಲು ಬೇಕಾಗುವ ಪರಿಕರಗಳಿದ್ದವು: ಕೆಂಡು ಎಲೆ, ಹೊಗೆಸೊಪ್ಪಿನ ಪುಡಿ ಮತ್ತು ನೂಲಿನ ಉಂಡೆ. ಜೊತೆಗೆ ಒಂದು ಸಣ್ಣ ಹರಿತವಾದ ಚೂರಿ ಮತ್ತು ಕತ್ತರಿ ಅವರ ಕೆಲಸದ ಉಪಕರಣಗಳಾಗಿ ಪಕ್ಕದಲ್ಲಿದ್ದವು.

ತನುಜಾ ಮನೆಗೆ ದಿನಸಿ ಸಾಮಾನುಗಳನ್ನು ತರಲು, ಅಡುಗೆ ಮಾಡಲು, ನೀರು ತರಲು, ಮನೆ ಮತ್ತು ಅಂಗಳವನ್ನು ಸ್ವಚ್ಛಗೊಳಿಸಲು ಮತ್ತು ಇತರ ಮನೆಕೆಲಸಗಳನ್ನು ಮುಗಿಸಲು ಸ್ವಲ್ಪ ಸಮಯ ಹೊರಗೆ ಬರುತ್ತಾರೆ. ಆದರೆ ದಿನಕ್ಕೆ ಸರಿಸುಮಾರು 500-700 ಬೀಡಿಗಳ ಗುರಿಯನ್ನು ಅವರು ಸಾಧಿಸಲೇಬೇಕು, ಆಗಲಷ್ಟೇ ತನಗೆ ಮಾಸಿಕ 3,000 ರೂ.ಗಳ ಆದಾಯ ಪಡೆಯಲು ಸಾಧ್ಯವೆನ್ನುವುದರ ಆಳವಾದ ಅರಿವು ಅವರಿಗಿದೆ.

Tanuja Bibi has been rolling beedis since she was a young girl in Beldanga. Even today she spends all her waking hours making beedis while managing her home
PHOTO • Smita Khator
Tanuja Bibi has been rolling beedis since she was a young girl in Beldanga. Even today she spends all her waking hours making beedis while managing her home
PHOTO • Smita Khator

ಬೆಲ್ದಂಗಾದ ತನುಜಾ ಬೀಬಿ ಚಿಕ್ಕ ಹುಡುಗಿಯಾಗಿದ್ದಾಗಿನಿಂದಲೂ ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ . ಇಂದಿಗೂ ಅವರು ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಮನೆಗೆಲಸಗಳನ್ನು ಹೊರತಪಡಿಸಿದರೆ ಉಳಿದಂತೆ ಬೀಡಿ ಕಟ್ಟುವುದರಲ್ಲಿ ತೊಡಗಿಸಿಕೊಂಡಿರುತ್ತಾರೆ

ಈ ಕಾರಣಕ್ಕಾಗಿ ಅವರು ಸೂರ್ಯ ಹುಟ್ಟುವ ಸಮಯಕ್ಕೆದ್ದು ಕೆಲಸಕ್ಕೆ ತೊಡಗಿದರೆ ವಿರಮಿಸುವುದು ರಾತ್ರಿ ಮಲಗುವಾಗಲೇ. "ಮೊದಲ ಅಝಾನ್ ಘೋಷಿಸಿದಾಗ ನಾನು ಎಚ್ಚರಗೊಳ್ಳುತ್ತೇನೆ. ಫಜ್ರ್ ನಮಾಜ್ ನೀಡಿದ ನಂತರ  ನಾನು ನನ್ನ ಕೆಲಸವನ್ನು ಪ್ರಾರಂಭಿಸುತ್ತೇನೆ," ಎಂದು ತನುಜಾ ತಾನು ಕಟ್ಟುತ್ತಿರುವ ಬೀಡಿಗಳಿಂದ ತನ್ನ ಕಣ್ಣುಗಳನ್ನು ತೆಗೆಯದೆ ಹೇಳುತ್ತಾರೆ. ಅವರ ದಿನದ ಲೆಕ್ಕ ನಮಾಜುಗಳಂದಲೇ ನಡೆಯುತ್ತದೆ, ಏಕೆಂದರೆ ಅವರಿಗೆ ಸಮಯ ನೋಡಲು ಬರುವುದಿಲ್ಲ. ಮಗ್ರಿಬ್ (ಸಂಜೆ ನಾಲ್ಕನೇ ಪ್ರಾರ್ಥನೆ) ಮತ್ತು ಇಶಾ (ರಾತ್ರಿಯಲ್ಲಿ ಐದನೇ ಕೊನೆಯ ಪ್ರಾರ್ಥನೆ) ನಡುವೆ, ಅವರು ಅಡುಗೆ ಮಾಡುತ್ತಾರೆ ಮತ್ತು ಮಧ್ಯರಾತ್ರಿಯ ಸುಮಾರಿಗೆ ಮಲಗುವ ಮೊದಲು ಎಲೆಗಳನ್ನು ಸುತ್ತಲು ಅಥವಾ ಕತ್ತರಿಸಲು ಕನಿಷ್ಠ ಎರಡು ಗಂಟೆಗಳ ಕಾಲವನ್ನು ವ್ಯಯಿಸಲು ಪ್ರಯತ್ನಿಸುತ್ತಾರೆ.

“ಈ ಸೊಂಟ ಮುರಿಯುವಂತಹ ಕೆಲಸದಿಂದ ಒಂದಿಷ್ಟು ಬಿಡುವು ಪಡೆಯುವ ಸಮಯವೆಂದರೆ ಅದು ನಮಾಜಿನ ಸಮಯ; ಆಗ ಮಾತ್ರ ನನಗೆ ಒಂದಷ್ಟು ಬಿಡುವು ಮತ್ತು ಮನಶಾಂತಿ ದೊರೆಯುತ್ತದೆ,” ಎನ್ನುತ್ತಾರಾಕೆ. “ಬೀಡಿ ಸೇದುವುದರಿಂದ ಜನರಿಗೆ ಕಾಯಿಲೆ ಬರುತ್ತೆ ಅಂತಾರೆ, ಆದ್ರೆ ಇವರು ಯಾವತ್ತಾದರೂ ಬೀಡಿ ಕಟ್ಟುವವರ ಕುರಿತು ಯೋಚಿಸಿದ್ದಾರ?” ಎಂದು ಕೇಳುತ್ತಾರೆ ತನುಜಾ.

2020ರ ಆರಂಭದಲ್ಲಿ, ತನುಜಾ ಕೊನೆಗೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿಯಾಗಲು ಸಿದ್ಧರಾಗುತ್ತಿದ್ದಾಗ, ಲಾಕ್ಡೌನ್ ವಿಧಿಸಲಾಯಿತು ಮತ್ತು ಕೋವಿಡ್ ಸೋಂಕಿನ ಭಯವು ಅವರನ್ನು ಆಸ್ಪತ್ರೆಗೆ ಹೋಗದಂತೆ ತಡೆದು ನಿಲ್ಲಿಸಿತು. ಬದಲಾಗಿ, ಅವರು ಹೋಮಿಯೋಪಥಿಯ ವೈದ್ಯರನ್ನು ನೋಡಲು ಹೋದರು. ಅವರೊಬ್ಬ ರಿಜಿಸ್ಟರ್ಡ್‌ ಅಲ್ಲದ ವೈದ್ಯ. ಬೆಲ್ಡಂಗ- 1 ಬ್ಲಾಕ್ ಇಲ್ಲಿಗೆ ಸೇರಿದ ಕಡಿಮೆ ಆದಾಯದ ಬೀಡಿ ಕಾರ್ಮಿಕರ ಮೊದಲ ಆಯ್ಕೆ ಈ ವೈದ್ಯರೇ ಆಗಿರುತ್ತಾರೆ . ಗ್ರಾಮೀಣ ಪ್ರದೇಶದ ಆರೋಗ್ಯ ಅಂಕಿಅಂಶಗಳು 2020-21ರ ಪ್ರಕಾರ, ಪಶ್ಚಿಮ ಬಂಗಾಳವು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ (ಪಿಎಚ್‌ಸಿ) 578 ವೈದ್ಯರ ಕೊರತೆಯನ್ನು ಎದುರಿಸುತ್ತಿದೆ . ಗ್ರಾಮೀಣ ಪ್ರದೇಶಗಳಲ್ಲಿ ಶೇಕಡಾ 58ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೊರತೆಯೂ ಇದೆ. ಹೀಗಾಗಿ ಜನರಿಗೆ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳು ಅಗ್ಗವಾದರೂ ಅಲ್ಲಿ ತಪಾಸಣೆಗೆ ಮತ್ತು ಸ್ಕ್ಯಾನಿಂಗ್‌ ಮಾಡಿಸಲು ಉದ್ದನೆಯ ಸರದಿಯಲ್ಲಿ ಕಾಯಬೇಕಾಗುತ್ತದೆಯಾದ್ದರಿಂದ ಜನರು ಅಲ್ಲಿಗೆ ಹೋಗುವುದಿಲ್ಲ. ಅಲ್ಲಿಗೆ ಹೋದರೆ ಒಂದಿಡೀ ದಿನದ ಕೂಲಿ ಇಲ್ಲವಾಗುತ್ತದೆ. ತನುಜಾ ಹೇಳುವಂತೆ, “ನಮಗೆ ಅಷ್ಟೊಂದು ಪುರುಸೊತ್ತು ಸಿಗುವುದಿಲ್ಲ.”

ಹೋಮಿಯೋಪಥಿ ಔಷಧಿಗಳು ಸಹಾಯ ಮಾಡದಿದ್ದಾಗ, ತನುಜಾ ತನ್ನ ಪತಿಯಿಂದ 300 ರೂಪಾಯಿಗಳನ್ನು ಪಡೆದು, ತನ್ನ ಸಂಪಾದನೆಯಿಂದ 300 ರೂಪಾಯಿಗಳನ್ನು ಸೇರಿಸಿ, ಕೊನೆಗೂ ಸ್ಥಳೀಯ ಅಲೋಪಥಿಕ್ ವೈದ್ಯರನ್ನು ಭೇಟಿಯಾಗಲು ಹೋದರು. "ಅವರು ನನಗೆ ಕೆಲವು ಮಾತ್ರೆಗಳನ್ನು ನೀಡಿದರು ಮತ್ತು ನನ್ನ ಎದೆಯ ಎಕ್ಸ್-ರೇ ಮತ್ತು ಸ್ಕ್ಯಾನ್ ಮಾಡಲು ಹೇಳಿದರು. ನಾನು ಅದನ್ನು ಮಾಡಿಸಲಿಲ್ಲ," ಎಂದು ಅವರು ಹೇಳುತ್ತಾರೆ, ಆ ಟೆಸ್ಟುಗಳ ಖರ್ಚನ್ನು ಭರಿಸಲು ತನಗೆ ಸಾಧ್ಯವಾಗಲಿಲ್ಲ ಎಂದು ಸ್ಪಷ್ಟಪಡಿಸಿದರು.

ಪಶ್ಚಿಮ ಬಂಗಾಳ ರಾಜ್ಯದಲ್ಲಿನ 20 ಲಕ್ಷ ಬೀಡಿ ಕಾರ್ಮಿಕರಲ್ಲಿ ತನುಜಾ ಅವರಂತಹ ಮಹಿಳಾ ಕಾರ್ಮಿಕರು ಶೇಕಡಾ 70ರಷ್ಟಿದ್ದಾರೆ. ಅವರ ಕಳಪೆ ಸೌಲಭ್ಯದ ಕೆಲಸದ ಸ್ಥಳಗಳು ಸೆಳೆತ, ಸ್ನಾಯು ಮತ್ತು ನರಗಳ ನೋವು, ಶ್ವಾಸಕೋಶದ ಸಮಸ್ಯೆಗಳು ಮತ್ತು ಕ್ಷಯರೋಗದಂತಹ ಭಂಗಿ-ಸಂಬಂಧಿತ ತೊಡಕುಗಳಿಗೆ ಕಾರಣವಾಗುತ್ತದೆ. ಕಡಿಮೆ-ಆದಾಯದ ಮತ್ತು ಪೌಷ್ಟಿಕಾಂಶದ ಕೊರತೆಯಿಂದ ಬಳಲುವ ಕುಟುಂಬಗಳಿಗೆ ಸೇರಿದ ಇವರಿಗೆ ಕೆಲಸಕ್ಕೆ ಸಂಬಂಧಿಸಿದ ಕಾಯಿಲೆಗಳ ಅಪಾಯ ಹೆಚ್ಚಿರುತ್ತದೆ. ಮತ್ತು ಇದು ಅವರ ಒಟ್ಟಾರೆ ಆರೋಗ್ಯ ಮತ್ತು ಸಂತಾನೋತ್ಪತ್ತಿ ಯೋಗಕ್ಷೇಮದ ಮೇಲೆ ಪ್ರಭಾವ ಬೀರುತ್ತದೆ

In many parts of Murshidabad district, young girls start rolling to help their mothers
PHOTO • Smita Khator
Rahima Bibi and her husband, Ismail Sheikh rolled beedis for many decades before Ismail contracted TB and Rahima's spinal issues made it impossible for them to continue
PHOTO • Smita Khator

ಎಡ : ಮುರ್ಷಿದಾಬಾ ದ್‌ ಅನೇಕ ಮೊಹಲ್ಲಾಗಳಲ್ಲಿ , ಯುವತಿಯರು ತಮ್ಮ ತಾಯಂದಿರಿಗೆ ಸಹಾಯ ಮಾ ಡುವ ಸಲುವಾಗಿ ಬೀಡಿ ಕಟ್ಟಲು ಪ್ರಾರಂಭಿಸುತ್ತಾರೆ . ಬಲ : ರಹಿಮಾ ಬೀಬಿ ಮತ್ತು ಆಕೆಯ ಪತಿ ಇಸ್ಮಾಯಿಲ್ ಕ್ಷಯರೋಗಕ್ಕೆ ತುತ್ತಾಗುವ ಮೊದಲು ಅನೇಕ ದಶಕಗಳ ಕಾಲ ಬೀಡಿ ಕಟ್ಟುತ್ತಿದ್ದರು ಮತ್ತು ಬೆನ್ನುಮೂಳೆಯ ಸಮಸ್ಯೆಗಳು ರಹಿಮಾ ಅವರನ್ನು ಬೀಡಿ ಕಟ್ಟುವ ಕೆಲಸದಲ್ಲಿ ಮುಂದುವರಿ ಯವುದು ಅಸಾಧ್ಯವಾಗುವಂತೆ ಮಾಡಿತು

ಮುರ್ಷಿದಾಬಾದಿನಲ್ಲಿ 77.6 ಪ್ರತಿಶತ 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ರಕ್ತಹೀನತೆಯು ಆತಂಕಕಾರಿ ಮಟ್ಟದಲ್ಲಿದ್ದು. ಇದು ನಾಲ್ಕು ವರ್ಷಗಳ ಹಿಂದೆ ಇದ್ದುದಕ್ಕಿಂತ ಗಮನಾರ್ಹವಾಗಿ ಹೆಚ್ಚಾಗಿದೆ - 58 ಪ್ರತಿಶತ. ರಕ್ತಹೀನತೆ ಹೊಂದಿರುವ ತಾಯಂದಿರ ಮಕ್ಕಳು ರಕ್ತಹೀನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ವಾಸ್ತವವಾಗಿ, ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ( ಎನ್ಎಫ್ಎಚ್ಎಸ್ -5 ) ಜಿಲ್ಲೆಯ ಎಲ್ಲಾ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚುತ್ತಿರುವ ರಕ್ತಹೀನತೆ ಮಟ್ಟವನ್ನು ತೋರಿಸುತ್ತದೆ. ಅಲ್ಲದೆ, ಈ ಜಿಲ್ಲೆಯಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಶೇಕಡಾ 40ರಷ್ಟು ಮಕ್ಕಳು ಬೆಳವಣಗೆಯಿಂದ ಕುಂಟಿತರಾಗಿದ್ದಾರೆ ಮತ್ತು ಆತಂಕ ಹುಟ್ಟಿಸುವ ಸ್ಥಿತಿಯಲ್ಲಿದ್ದಾರೆ, ನಾಲ್ಕು ವರ್ಷಗಳ ಹಿಂದೆ 2015-2016ರಲ್ಲಿ ನಾಲ್ಕು ವರ್ಷಗಳ ಹಿಂದೆ ಮಾಡಿದ ಎನ್ಎಫ್ಎಚ್ಎಸ್‌ ಸಮೀಕ್ಷೆಯ ಈ ಅಂಕಿಅಂಶದಲ್ಲಿ ಯಾವುದೇ ನಿಜವಾದ ಬದಲಾವಣೆ ಕಂಡುಬಂದಿಲ್ಲ.

ಈ ಪ್ರದೇಶದಲ್ಲಿ ಪರಿಚಿತ ವ್ಯಕ್ತಿಯಾಗಿರುವ ಅಹ್ಸಾನ್ ಅಲಿ, ಮಠಪಾರಾ ಮೊಹಲ್ಲಾದ ನಿವಾಸಿಯಾಗಿದ್ದು, ಅಲ್ಲಿ ಒಂದು ಸಣ್ಣ ಔಷಧಿ ಅಂಗಡಿಯನ್ನು ನಡೆಸುತ್ತಿದ್ದಾರೆ. ತರಬೇತಿ ಪಡೆಯದ ವೈದ್ಯರಾದ ಅವರು ಬೀಡಿ ಕಟ್ಟುವವರ ಕುಟುಂಬದಿಂದ ಬಂದಿರುವುದರಿಂದ ಸಮುದಾಯದಲ್ಲಿನ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಶ್ವಾಸಾರ್ಹ ಸಲಹೆಗಾರರಾಗಿದ್ದಾರೆ. ನೋವನ್ನು ನಿವಾರಿಸಿಕೊಳ್ಳಲು ಬೀಡಿ ಕಾರ್ಮಿಕರು ಮಾತ್ರೆಗಳು ಮತ್ತು ಮುಲಾಮುಗಳಿಗಾಗಿ ತಮ್ಮ ಬಳಿಗೆ ಬರುತ್ತಾರೆ ಎಂದು 30 ವರ್ಷದ ಅವರು ಹೇಳುತ್ತಾರೆ. "ಅವರು 25-26 ವರ್ಷದವರಾಗುವ ಹೊತ್ತಿಗೆ, ಸೆಳೆತ, ಸ್ನಾಯು ದೌರ್ಬಲ್ಯ, ನರ ಸಂಬಂಧಿ ನೋವು ಮತ್ತು ತೀವ್ರವಾದ ತಲೆನೋವಿನಂತಹ ಸಾಕಷ್ಟು ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತಾರೆ," ಎಂದು ಅವರು ಹೇಳುತ್ತಾರೆ.

ಚಿಕ್ಕ ಹುಡುಗಿಯರು ತಮ್ಮ ಮನೆಗಳಲ್ಲಿನ ತಂಬಾಕು ಧೂಳಿಗೆ ಬಾಲ್ಯದಲ್ಲೇ ಒಡ್ಡಿಕೊಳ್ಳುವುದರಿಂದ ಮತ್ತು ದಿನದ ಗುರಿಯನ್ನು ಪೂರೈಸಲು ತಮ್ಮ ತಾಯಂದಿರಿಗೆ ಸಹಾಯ ಮಾಡುವುದರಿಂದ ಹೆಚ್ಚಿನ ಅಪಾಯದಲ್ಲಿದ್ದಾರೆ. ತನುಜಾ ಅವರು 10 ವರ್ಷ ತುಂಬುವ ಮೊದಲೇ ಮಜ್ಪಾರಾ ಮೊಹಲ್ಲಾದಲ್ಲಿ ಬೀಡಿ ಕಟ್ಟಲು ಪ್ರಾರಂಭಿಸಿದರು. "ನಾನು ನನ್ನ ತಾಯಿಗೆ ಬೀಡಿಗಳ ತುದಿಗಳನ್ನು ಮಡಚಲು ಮತ್ತು ಕಟ್ಟಲು ಸಹಾಯ ಮಾಡುತ್ತಿದ್ದೆ," ಎಂದು ಅವರು ಹೇಳುತ್ತಾರೆ ಮತ್ತು "ನಮ್ಮ ಸಮಾಜದಲ್ಲಿ, ʼಬೀಡಿ ಕಟ್ಟುವುದು ಹೇಗೆಂದು ತಿಳಿದಿಲ್ಲದ ಹುಡುಗಿಯರಿಗೆ ಗಂಡಂದಿರು ಸಿಗುವುದಿಲ್ಲ' ಎಂದು ಅವರು ಹೇಳುತ್ತಾರೆ."

ಅವರು 12ನೇ ವಯಸ್ಸಿನಲ್ಲಿ ರಫೀಕುಲ್ ಇಸ್ಲಾಂ ಅವರನ್ನು ವಿವಾಹವಾದರು ಮತ್ತು ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗುವಿಗೆ ಜನ್ಮ ನೀಡಿದರು. ಎನ್‌ಎಫ್‌ಎಚ್ಎಸ್ -5 ರ ಪ್ರಕಾರ, ಜಿಲ್ಲೆಯ ಶೇಕಡಾ 55ರಷ್ಟು ಮಹಿಳೆಯರು 18 ವರ್ಷಕ್ಕಿಂತ ಮೊದಲು ಮದುವೆಯಾಗಿದ್ದಾರೆ. ಕಳಪೆ ಪೌಷ್ಠಿಕ ಸ್ಥಿತಿಯೊಂದಿಗೆ ಬಾಲ್ಯ ವಿವಾಹ ಮತ್ತು ಮಕ್ಕಳನ್ನು ಹೆರುವುದು ಮುಂದಿನ ಪೀಳಿಗೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಯುನಿಸೆಫ್ ಹೇಳಿದೆ.

"ಮಹಿಳೆಯರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯವು ಮಹಿಳೆಯರ ಸಾಮಾನ್ಯ ಆರೋಗ್ಯದೊಂದಿಗೆ ಅಂತರ್ಗತವಾಗಿ ಸಂಬಂಧ ಹೊಂದಿದೆ - ದೈಹಿಕ ಮತ್ತು ಮಾನಸಿಕ ಎರಡೂ ವಿಧದಲ್ಲಿ. ನೀವು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ," ಎಂದು ಆರೋಗ್ಯ ಮೇಲ್ವಿಚಾರಕಿ ಹಾಶಿ ಚಟರ್ಜಿ ಹೇಳುತ್ತಾರೆ. ಅವರು  ಬೆಲ್ಡಂಗ- ಐ ಬ್ಲಾಕ್ ನ ಮಿರ್ಜಾಪುರ ಪಂಚಾಯತ್ ಉಸ್ತುವಾರಿ ಮತ್ತು ವಿವಿಧ ಆರೋಗ್ಯ ಯೋಜನೆಗಳು ಅಗತ್ಯವಿರುವ ಜನರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಜವಬ್ಧಾರಿಯನ್ನು ಹೊಂದಿದ್ದಾರೆ.

Julekha Khatun is in Class 9 and rolls beedis to support her studies.
PHOTO • Smita Khator
Ahsan Ali is a trusted medical advisor to women workers in Mathpara
PHOTO • Smita Khator

ಎಡ: ಜುಲೇಖಾ ಖಾತುನ್ 9ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ತನ್ನ ವಿದ್ಯಾಭ್ಯಾಸದ ಖರ್ಚುಗಳನ್ನು ಸರಿದೂಗಿಸಲು ಬೀಡಿ ಕಟ್ಟುತ್ತಾಳೆ  . ಬಲ: ಅಹ್ಸಾನ್ ಅಲಿ ಮಥ್ಪಾರಾದ ಮಹಿಳಾ ಕಾರ್ಮಿಕರಿಗೆ ವಿಶ್ವಾಸಾರ್ಹ ವೈದ್ಯಕೀಯ ಸಲಹೆಗಾರರಾಗಿದ್ದಾರೆ

ತನುಜಾ ಅವರ ತಾಯಿ ತನ್ನ ಇಡೀ ಜೀವನದುದ್ದಕ್ಕೂ ಕಟ್ಟುವ ಕೆಲಸ ಮಾಡಿದ್ದಾರೆ . ಈಗ ತನ್ನ 60ರ ದಶಕದ ಉತ್ತರಾರ್ಧದಲ್ಲಿದ್ದಾರೆ. ಅವರ ಮಗಳು ತನ್ನ ತಾಯಿಯ ಆರೋಗ್ಯವು ಎಷ್ಟು ದುರ್ಬಲವಾಗಿದೆಯೆಂದರೆ ಅವಳು ಇನ್ನು ಮುಂದೆ ಸರಿಯಾಗಿ ನಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ. "ಅವಳ ಬೆನ್ನಿಗೆ ಹಾನಿಯಾಗಿದೆ ಮತ್ತು ಅವಳು ಹಾಸಿಗೆ ಹಿಡಿದಿದ್ದಾಳೆ," ಎಂದು ಅವರು ಹೇಳುತ್ತಾರೆ ಮತ್ತು ಅಸಹಾಯಕತೆ ಬೆರೆತ ದನಿಯಲ್ಲಿ, "ಇದು ನನಗೂ ಕಾದಿದೆ," ಎನ್ನುತ್ತಾರೆ.

ಈ ಉದ್ಯಮದಲ್ಲಿ ಬಹುತೇಕ ಎಲ್ಲಾ ಕಾರ್ಮಿಕರು ಕಡಿಮೆ ಆದಾಯದ ಕುಟುಂಬಗಳಿಗೆ ಸೇರಿದವರು ಮತ್ತು ಅವರ ಬಳಿ ಬೇರೆ ಯಾವುದೇ ಕೌಶಲವಿಲ್ಲ. ಮಹಿಳೆಯರು ಬೀಡಿಗಳನ್ನು ಕಟ್ಟದಿದ್ದರೆ  ಅವರು ಮತ್ತು ಅವರ ಕುಟುಂಬಗಳು ಹಸಿವಿನಿಂದ ಬಳಲುತ್ತವೆ. ತನುಜಾರ ಪತಿ ತೀವ್ರ ಅನಾರೋಗ್ಯಕ್ಕೊಳಗಾದಾಗ ಮತ್ತು ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದಾಗ, ಬೀಡಿ ತಯಾರಿಕೆಯು ಆರು ಜನರ ಕುಟುಂಬವನ್ನು ಪೋಷಿಸಲು ಸಹಾಯ ಮಾಡಿತು. ಅವರು ತನ್ನ ನಾಲ್ಕನೇ ಮಗುವನ್ನು ಪಕ್ಕದ ಕಾಂತಾ ತೊಟ್ಟಿಲಿನಲ್ಲಿ ಮಲಗಿಸಿ ಬೇಡಿ ಕಟ್ಟುತ್ತಿದ್ದರು. ಆ ಸಣ್ಣ ಮಗುವಿಗೂ ಬೀಡಿಯ ಧೂಳಿಗೆ ತನ್ನನ್ನು ಒಡ್ಡಿಕೊಳ್ಳಬೇಕಾದ ಸಂಕಷ್ಟವಿದು.

"ಒಂದು ಕಾಲದಲ್ಲಿ ನಾನು ದಿನಕ್ಕೆ 1,000-1,200 ಬೀಡಿಗಳನ್ನು ತಯಾರಿಸುತ್ತಿದ್ದೆ," ಎಂದು ತನುಜಾ ಹೇಳುತ್ತಾರೆ. ಈಗ, ಅವರಿರುವ ದುರ್ಬಲ ಸ್ಥಿತಿಯಲ್ಲಿ, ದಿನಕ್ಕೆ 500-700 ಬೀಡಿಗಳನ್ನಷ್ಟೇ ಕಟ್ಟುವುದು ಅವರಿಗೆ ಸಾಧ್ಯವಾಗುತ್ತಿದೆ. ಅದು ತಿಂಗಳಿಗೆ ಸರಿಸುಮಾರು 3,000 ರೂ.ಗಳನ್ನು ತರುತ್ತದೆ ಮತ್ತು ಈ ಸಂಪಾದನೆಗಾಗಿ ತನ್ನ ಆರೋಗ್ಯವನ್ನೇ ಪಣಕ್ಕಿಡಬೇಕಿದೆ.

ಮುರ್ಷಿದಾ ಖಾತುನ್ ದೇಬ್ಕುಂದಾ ಎಸ್‌ಎಆರ್‌ಎಮ್ ಗರ್ಲ್ಸ್ ಹೈ ಮದರಸಾದ ಮುಖ್ಯೋಪಾಧ್ಯಾಯರು. ತನ್ನ ಮದರಸಾದಲ್ಲಿ ಓದುವ ಶೇಕಡಾ 80 ಕ್ಕೂ ಹೆಚ್ಚು ಹುಡುಗಿಯರು ಬೆಲ್ದಂಗಾದಲ್ಲಿನ – ಐ ಬ್ಲಾಕ್‌ ನಿವಾಸಿಗಳು ಎಂದು ಅವರು ಹೇಳುತ್ತಾರೆ. ಅವರೆಲ್ಲರೂ ಮನೆಯಲ್ಲಿ ತಾಯಿಗೆ ಅವರ ದೈನಂದಿನ ಗುರಿಯನ್ನು ತಲುಪಲು ಬೀಡಿ ಕಟ್ಟುವಲ್ಲಿ ಸಹಾಯ ಮಾಡುತ್ತಾರೆ. ಶಾಲೆಯಲ್ಲಿ ಹೆಚ್ಚಾಗಿ ಮಧ್ಯಾಹ್ನದ ಊಟ - ಅನ್ನ, ದಾಲ್ ಮತ್ತು ತರಕಾರಿ – ಯುವತಿಯರಿಗೆ ಅದೇ ದಿನದ ಮೊದಲ ಊಟವಾಗಿದೆ ಎಂದು ಅವರು ಹೇಳುತ್ತಾರೆ. "ಅವರ ಮನೆಗಳಲ್ಲಿ ಪುರುಷ ಸದಸ್ಯರ ಅನುಪಸ್ಥಿತಿಯಲ್ಲಿ, ಸಾಮಾನ್ಯವಾಗಿ ಬೆಳಿಗ್ಗೆ ಏನನ್ನೂ ತಯಾರಿಸಲಾಗುವುದಿಲ್ಲ" ಎಂದು ಅವರು ಹೇಳುತ್ತಾರೆ.

ಮುರ್ಷಿದಾಬಾದ್ ಜಿಲ್ಲೆಯು ಬಹುತೇಕ ಸಂಪೂರ್ಣವಾಗಿ ಗ್ರಾಮೀಣ ಪ್ರದೇಶವಾಗಿದೆ - ಅದರ ಜನಸಂಖ್ಯೆಯ 80 ಪ್ರತಿಶತದಷ್ಟು ಜನರು ಅದರ 2,166 ಹಳ್ಳಿಗಳಲ್ಲಿ ವಾಸಿಸುತ್ತಿದ್ದಾರೆ ಮತ್ತು ಇಲ್ಲಿ ಸಾಕ್ಷರತೆಯು ಶೇಕಡಾ 66ರಷ್ಟಿದೆ, ಇದು ರಾಜ್ಯದ ಸರಾಸರಿ ಶೇಕಡಾ 76ಕ್ಕಿಂತ ಕಡಿಮೆಯಾಗಿದೆ (ಜನಗಣತಿ 2011). ಈ ಉದ್ಯಮದಲ್ಲಿ ಮಹಿಳೆಯರು ಆದ್ಯತೆಯ ಕೆಲಸಗಾರರಾಗಿದ್ದು, ಅವರು ಮನೆಯಿಂದ ಕೆಲಸ ಮಾಡಬಹುದು ಮತ್ತು ಕೆಲಸಕ್ಕೆ ಅಗತ್ಯವಿರುವ ಚುರುಕಾದ ಬೆರಳುಗಳನ್ನು ಹೊಂದಿರುತ್ತಾರೆ ಎಂದು  ರಾಷ್ಟ್ರೀಯ ಮಹಿಳಾ ಆಯೋಗದ ವರದಿ ಹೇಳುತ್ತದೆ .

*****

ಒಂದು ನಿಮಿಷವನ್ನೂ ವ್ಯರ್ಥ ಮಾಡದೆ, ಶಾಹಿನೂರ್ ಬೀಬಿ ಈರುಳ್ಳಿ, ಮೆಣಸಿನಕಾಯಿಗಳನ್ನು ಕತ್ತರಿಸುತ್ತಾ ಮತ್ತು ಘುಗ್ನಿಗಾಗಿ ಮಸಾಲಾವನ್ನು ತಯಾರಿಸುತ್ತಾ ಮಾತನಾಡಿದರು.  ಬೆಲ್ದಂಗಾದ ಹರೇಕ್‌ನಗರ ಪ್ರದೇಶದ ಮಾಜಿ ಬೀಡಿ ಕಾರ್ಮಿಕರಾದ ಅವರು ಆದಾಯಕ್ಕಾಗಿ ಕಡಲೆ ಮಸಾಲೆಯನ್ನು ಮನೆಯಲ್ಲಿ ತಯಾರಿಸಿ ಸಂಜೆ ಮಾರುತ್ತಾರೆ.

Shahinur Bibi holds up her X-ray showing her lung ailments.
PHOTO • Smita Khator
PHOTO • Smita Khator

ಎಡ : ಶಾಹಿನೂರ್ ಬೀಬಿ ತನ್ನ ಶ್ವಾಸಕೋಶದ ಕಾಯಿಲೆಗಳನ್ನು ತೋರಿಸುವ ತನ್ನ ಎಕ್ಸ್ - ರೇ ಜೊತೆ . ಬಲ : ಬೆಲ್ಡಂಗ ಗ್ರಾಮೀಣ ಆಸ್ಪತ್ರೆಯ ಟಿಬಿ ಘಟಕದಲ್ಲಿ , ಜನರು ಮಾಹಿತಿ ಮತ್ತು ವೈದ್ಯಕೀಯ ಸಲಹೆ ಪಡೆಯಲು ಬರುತ್ತಾರೆ

"ಅನಾರೋಗ್ಯಕ್ಕೆ ಒಳಗಾಗುವುದು ಬೀಡಿ ಕಟ್ಟುವವರ ಹಣೆಬರಹವಾಗಿದೆ," ಎಂದು 45 ವರ್ಷದ ಅವರು ಹೇಳುತ್ತಾರೆ. ಕೆಲವು ತಿಂಗಳ ಹಿಂದೆ, ದೇಹಸ್ಥಿತಿ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ತಪಾಸಣೆಗಾಗಿ ಬೆಲ್ಡಂಗಗ್ರಾಮೀಣ್ ಆಸ್ಪತ್ರೆಗೆ ಹೋದರು ಮತ್ತು ಖಾಸಗಿ ಕ್ಲಿನಿಕ್ಕಿನಲ್ಲಿ ಎದೆಯ ಎಕ್ಸ್-ರೇ ಮಾಡಿಸಿದರು. ಆದರೆ ಈಗ ಅವರ ಪತಿ ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರಿಗೆ ಆಸ್ಪತ್ರೆಗೆ ಮತ್ತೆ ಹೋಗಲು ಸಾಧ್ಯವಾಗಿಲ್ಲ. "ನನ್ನ ಇಬ್ಬರು ಸೊಸೆಯಂದಿರು ಬೀಡಿ ಕಟ್ಟಲು ಬಿಡುವುದಿಲ್ಲ. ಅವರು ಕೆಲಸವನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡಿದ್ದಾರೆ ಆದರೆ ನಾವು ಅದರಿಂದಲೇ ಬದುಕು ನಡೆಸಲು ಸಾಧ್ಯವಿಲ್ಲ," ತಾನು ಘುಗ್ನಿ ವ್ಯಾಪಾರ ಏಕೆ ಪ್ರಾರಂಭಿಸಿದೆ ಎನ್ನುವುದನ್ನು ವಿವರಿಸುತ್ತಾ ಅವರು ಹೇಳುತ್ತಾರೆ.

ಡಾ. ಸಲ್ಮಾನ್ ಮೊಂಡಲ್ ಅವರು ಕೆಲಸ ಮಾಡುವ ಬ್ಲಾಕ್ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 20-25 ದೃಢೀಕೃತ ಟಿಬಿ ರೋಗಿಗಳ ನಿಯಮಿತ ಬರುವಿಕೆಯನ್ನು ಗಮನಿಸಿದ್ದಾರೆ. " ಬೀಡಿ ಕಟ್ಟುವವರು ವಿಷಕಾರಿ ಧೂಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಕ್ಷಯರೋಗಕ್ಕೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಇದು ಆಗಾಗ್ಗೆ ನೆಗಡಿಯಾಗುವುದು ಮತ್ತು ಶ್ವಾಸಕೋಶಗಳು ಕ್ರಮೇಣ ದುರ್ಬಲಗೊಳ್ಳಲು ಕಾರಣವಾಗುತ್ತದೆ," ಎಂದು ಬೆಲ್ಡಂಗ- ಐ ಬ್ಲಾಕ್ ಮೆಡಿಕಲ್ ಆಫೀಸರ್ (ಬಿಎಂಒ) ಮೊಂಡಲ್ ಹೇಳುತ್ತಾರೆ.

ದರ್ಜಿಪಾರಾ ಮೊಹಲ್ಲಾದ , ಸೈರಾ ಬೇವಾ ನಿರಂತರ ಕೆಮ್ಮು ಮತ್ತು ನೆಗಡಿಯೊಂದಿಗೆ ಹೋರಾಡುತ್ತಾರೆ. ಇದಲ್ಲದೆ 60ರ ಆಸುಪಾಸಿನ ಇವರು ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಳೆದ ಹದಿನೈದು ವರ್ಷಗಳಿಂದ ಹೊಂದಿದ್ದಾರೆ. ಸುಮಾರು ಐದು ದಶಕಗಳಿಂದ ಬೀಡಿ ಕಟ್ಟುತ್ತಿರುವ ಅವರ ಕೈಗಳು ಮತ್ತು ಉಗುರುಗಳಲ್ಲಿ ತಂಬಾಕಿನ ಧೂಳು ತುಂಬಿ ಹೋಗಿದೆ.

" ಮೊಸ್ಲಾ [ನುಣ್ಣಗೆ ಪುಡಿಮಾಡಿದ ತಂಬಾಕು] ಒಂದು ಸಾಮಾನ್ಯ ಅಲರ್ಜಿಕಾರಕವಾಗಿದೆ ಮತ್ತು ಬೀಡಿ ಕಟ್ಟುವಾಗ ಅದರ ಧೂಳಿನ ಕಣಗಳು ಉಸಿರಿನಲ್ಲಿ ಸೇರಿಕೊಳ್ಳುತ್ತವೆ," ಎಂದು ಡಾ. ಸಲ್ಮಾನ್ ಮೊಂಡಲ್ ಹೇಳುತ್ತಾರೆ. ಪಶ್ಚಿಮ ಬಂಗಾಳದಲ್ಲಿ, ಅಸ್ತಮಾ ಹೊಂದಿರುವ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಎರಡು ಪಟ್ಟು ಹೆಚ್ಚಿದೆ. ಇಲ್ಲಿ ಪ್ರತಿ 100,000ಕ್ಕೆ 4,386 ಮಹಿಳೆಯರು ಅಸ್ತಮಾ ಪೀಡಿತ (ಎನ್ಎಫ್ಎಚ್ಎಸ್ -5).

"ತಂಬಾಕು ಧೂಳು ಮತ್ತು ಟಿಬಿಗೆ ಒಡ್ಡಿಕೊಳ್ಳುವುದರ ನಡುವೆ ಬಲವಾದ ಪರಸ್ಪರ ಸಂಬಂಧದ ಹೊರತಾಗಿಯೂ, ನಾವು ಟಿಬಿಗಾಗಿ ಉದ್ಯೋಗ ನಿರ್ದಿಷ್ಟ ಸ್ಕ್ರೀನಿಂಗ್ ಹೊಂದಿಲ್ಲ," ಎಂದು ಬಿಎಂಓ ಸೂಚಿಸುತ್ತದೆ.  ಬೀಡಿ ಕಾರ್ಮಿಕರು ಅತಿ ಹೆಚ್ಚು ಕೇಂದ್ರೀಕೃತವಾಗಿರುವ ಜಿಲ್ಲೆಯಲ್ಲಿ ಈ ಲೋಪವು ವಿಶೇಷವಾಗಿ ಎದ್ದುಕಾಣುತ್ತದೆ . ಸಾಯಿರಾ ರಕ್ತವನ್ನು ಕೆಮ್ಮುತ್ತಿದ್ದಾರೆ - ಇದು ಕ್ಷಯರೋಗಕ್ಕೆ ತುತ್ತಾಗುವ ಮುನ್ಸೂಚನೆಯಾಗಿದೆ. "ನಾನು ಬೆಲ್ಡಂಗಗ್ರಾಮೀಣ್ ಆಸ್ಪತ್ರೆಗೆ ಹೋಗಿದ್ದೆ. ಅವರು ಕೆಲವು ಪರೀಕ್ಷೆಗಳನ್ನು ಮಾಡಿದರು ಮತ್ತು ನನಗೆ ಕೆಲವು ಮಾತ್ರೆಗಳನ್ನು ನೀಡಿದರು," ಎಂದು ಅವರು ಹೇಳುತ್ತಾರೆ. ಅವರು ಕಫವನ್ನು ಪರೀಕ್ಷಿಸಿಕೊಳ್ಳಲು ಮತ್ತು ತಂಬಾಕು ಧೂಳಿನಿಂದ ದೂರವಿರಲು ಸಲಹೆ ನೀಡಿದರು. ಆದರೆ ಯಾವುದೇ ರಕ್ಷಣಾತ್ಮಕ ಪರಿಕರಗಳನ್ನು ಒದಗಿಸಲಾಗಿಲ್ಲ.

ವಾಸ್ತವವಾಗಿ, ಜಿಲ್ಲೆಯಲ್ಲಿ ಪರಿ ಭೇಟಿಯಾದ ಯಾವುದೇ ಬೀಡಿ ಕಾರ್ಮಿಕರು ಯಾವುದೇ ಮಾಸ್ಕ್ ಅಥವಾ ಕೈಗವಸುಗಳನ್ನು ಹೊಂದಿರಲಿಲ್ಲ ಅಥವಾ ಬಳಸುತ್ತಿರಲಿಲ್ಲ. ಉದ್ಯೋಗಕ್ಕೆ ಸಂಬಂಧಿಸಿದ ದಾಖಲೆಗಳು, ಸಾಮಾಜಿಕ ಭದ್ರತಾ ಪ್ರಯೋಜನಗಳು, ಪ್ರಮಾಣಿತ ವೇತನಗಳು, ಕಲ್ಯಾಣ, ಸುರಕ್ಷತೆ ಅಥವಾ ಆರೋಗ್ಯ ರಕ್ಷಣೆ ನಿಬಂಧನೆಗಳನ್ನು ಸಹ ಅವರು ಹೊಂದಿರಲಿಲ್ಲ. ಬೀಡಿ ಕಂಪನಿಗಳು ಕೆಲಸವನ್ನು ಮಹಾಜನ್‌ಗಳಿಗೆ  (ಮಧ್ಯವರ್ತಿಗಳಿಗೆ) ಹೊರಗುತ್ತಿಗೆ ನೀಡುತ್ತವೆ ಮತ್ತು ಯಾವುದೇ ಹೊಣೆಗಾರಿಕೆಗಳಿಂದ ತಮ್ಮ ಕೈ ತೊಳೆದುಕೊಳ್ಳುತ್ತವೆ. ಮಹಾಜನರು ಪ್ರತಿಯಾಗಿ ಬೀಡಿಗಳನ್ನು ಖರೀದಿಸುತ್ತಾರೆ ಆದರೆ ಇದ್ಯಾವುದಕ್ಕೂ ಕಿವಿಗೊಡುವುದಿಲ್ಲ.

Saira Bewa and her daughter-in-law Rehana Bibi (in pink) rolling beedis. After five decades spent rolling, Saira suffers from many occupation-related health issues
PHOTO • Smita Khator
Saira Bewa and her daughter-in-law Rehana Bibi (in pink) rolling beedis. After five decades spent rolling, Saira suffers from many occupation-related health issues
PHOTO • Smita Khator

ಸಾಯಿರಾ ಬೀಬಿ ಮತ್ತು ಅವ ಸೊಸೆ ರೆಹಾನಾ ಬೀಬಿ (ಗುಲಾಬಿ ಬಣ್ಣದ ಉಡುಗೆ) ಬೀಡಿ ಕಟ್ಟುತ್ತಿರುವುದು . ಬೀಡಿ ಕಟ್ಟುವುದರಲ್ಲೇ ಐದು ದಶಕಗಳನ್ನು ಕಳೆದ ನಂತರ , ಸಾಯಿರಾ ಅನೇಕ ಉದ್ಯೋಗ - ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ

Selina Khatun with her mother Tanjila Bibi rolling beedis in their home in Darjipara. Tanjila's husband abandoned the family; her son is a migrant labourer in Odisha. The 18-year-old Selina had to drop out of school during lockdown because of kidney complications. She is holding up the scans (right)
PHOTO • Smita Khator
Selina Khatun with her mother Tanjila Bibi rolling beedis in their home in Darjipara. Tanjila's husband abandoned the family; her son is a migrant labourer in Odisha. The 18-year-old Selina had to drop out of school during lockdown because of kidney complications. She is holding up the scans (right)
PHOTO • Smita Khator

ಸೆಲಿನಾ ಖಾತುನ್ ತನ್ನ ತಾಯಿ ತಂಜಿಲಾ ಬೀಬಿಯೊಂದಿಗೆ ದರ್ಜಿಪಾರಾದಲ್ಲಿರುವ ತಮ್ಮ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದರು . ತಂಜಿಲಾ ಅವರ ಪತಿ ಕುಟುಂಬವನ್ನು ತೊರೆದರು ಮತ್ತು ಅವರ ಮಗ ಒಡಿಶಾದಲ್ಲಿ ವಲಸೆ ಕಾರ್ಮಿಕರಾಗಿದ್ದಾರೆ . ಮೂತ್ರಪಿಂಡದ ತೊಂದರೆಗಳಿಂದಾಗಿ 18 ವರ್ಷದ ಸೆಲಿನಾ ಲಾಕ್ ಡೌನ್ ಸಮಯದಲ್ಲಿ ಶಾಲೆಯಿಂದ ಹೊರಗುಳಿಯಬೇಕಾಯಿತು ಮತ್ತು ತಮ್ಮ ಸ್ಕ್ಯಾನಿಂಗ್‌ ರಿಪೋರ್ಟ್‌ ಪ್ರದರ್ಶಿಸುತ್ತಿದ್ದಾರೆ ( ಬಲಕ್ಕೆ )

ಮುರ್ಷಿದಾಬಾದ್ ಜನಸಂಖ್ಯೆಯ ಮೂರನೇ ಎರಡರಷ್ಟು ಜನರು ಮುಸ್ಲಿಮರಾಗಿದ್ದು, ಬಹುತೇಕ ಎಲ್ಲ ಬೀಡಿ ಕಾರ್ಮಿಕರು ಮುಸ್ಲಿಂ ಮಹಿಳೆಯರೇ ಆಗಿದ್ದಾರೆ. ರಫೀಕುಲ್ ಹಸನ್ ಮೂರು  ದಶಕಗಳಿಂದ ಬೀಡಿ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಿದ್ದಾರೆ. " ಬೀಡಿ ಉದ್ಯಮವು ಯಾವಾಗಲೂ ಅಗ್ಗದ ಕಾರ್ಮಿಕ ಶಕ್ತಿಯ ಶೋಷಣೆಯಿಂದ ಪ್ರವರ್ಧಮಾನಕ್ಕೆ ಬಂದಿದೆ, ಹೆಚ್ಚಾಗಿ ಆದಿವಾಸಿ ಮತ್ತು ಮುಸ್ಲಿಂ ಹುಡುಗಿಯರು ಮತ್ತು ಮಹಿಳೆಯರಿಂದ ಈ ಉದ್ಯಮ ದುಡಿಸಿಕೊಳ್ಳುತ್ತದೆ," ಎಂದು ಬೆಲ್ದಂಗಾದ ಸೆಂಟರ್ ಫಾರ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನ ಬ್ಲಾಕ್ ಕಾರ್ಯದರ್ಶಿ ಹೇಳುತ್ತಾರೆ.

ಅನೌಪಚಾರಿಕ ವಲಯದಲ್ಲಿ ಬೀಡಿ ಕಾರ್ಮಿಕರು ಅತ್ಯಂತ ದುರ್ಬಲ ಕಾರ್ಮಿಕರಲ್ಲಿ ಒಬ್ಬರು ಎಂದು ಪಶ್ಚಿಮ ಬಂಗಾಳದ ಕಾರ್ಮಿಕ ಇಲಾಖೆ ದಾಖಲೆಯಲ್ಲಿ ಒಪ್ಪಿಕೊಳ್ಳುತ್ತದೆ. ಇಲಾಖೆಯು ಪ್ರತಿ 1,000 ಬೀಡಿಗಳಿಗೆ 267.44 ರೂ.ಗಳನ್ನು ನಿಗದಿಪಡಿಸಿದೆ ಆದರೆ ಇದರ ಫಲ ಕಾರ್ಮಿಕರಿಗೆ ದೊರೆಯುತ್ತಿಲ್ಲ. ಅವರಿಗೆ ಕೇವಲ 150 ರೂ.ಗಳನ್ನು ಮಾತ್ರವೇ ನೀಡಲಾಗುತ್ತಿದೆ. ಇದು 2019ರ ವೇತನ ಸಂಹಿತೆ ನಿಗದಿಪಡಿಸಿದ ರಾಷ್ಟ್ರೀಯ ಕನಿಷ್ಠ ವೇತನವಾದ 178 ರೂ.ಗಳಿಗಿಂತ ಕಡಿಮೆಯಾಗಿದೆ .

ಸಿಐಟಿಯು ಸಂಯೋಜಿತ ಮುರ್ಷಿದಾಬಾದ್ ಜಿಲ್ಲಾ ಬೀಡಿ ಮಜ್ದೂರ್ ಮತ್ತು ಪ್ಯಾಕರ್ಸ್ ಯೂನಿಯನ್‌ನಲ್ಲಿ ಕೆಲಸ ಮಾಡುವ ಸೈದಾ ಬೇವಾ ಹೇಳುವಂತೆ, "ಒಂದೇ ರೀತಿಯ ಕೆಲಸಕ್ಕೆ ಮಹಿಳೆಯರು ಪುರುಷರಿಗಿಂತ ಕಡಿಮೆ ಸಂಬಳವನ್ನು ಪಡೆಯುತ್ತಾರೆ ಎಂದು ಎಲ್ಲರಿಗೂ ತಿಳಿದಿದೆ.” " ಮಹಾಜನರು [ಮಧ್ಯವರ್ತಿಗಳು] 'ನಿಮಗೆ ಇಷ್ಟವಿಲ್ಲದಿದ್ದರೆ ನಮ್ಮೊಂದಿಗೆ ಕೆಲಸ ಮಾಡಬೇಡಿ' ಎಂದು ನಮಗೆ ಬೆದರಿಕೆ ಹಾಕುತ್ತಾರೆ," ಎಂದು 55 ವರ್ಷದ ಅವರು ಹೇಳುತ್ತಾರೆ, ಅವರು ರಾಜ್ಯವು ಬೀಡಿ ಕಾರ್ಮಿಕರಿಗಾಗಿ ನಿರ್ದಿಷ್ಟ ಯೋಜನೆಗಳನ್ನು ಪ್ರಕಟಿಸಬೇಕೆನ್ನುವುದು ಅವರ ಅಭಿಪ್ರಾಯ.

ಇತ್ತ ವೇತನದ ಮೇಲೆ ನಿಯಂತ್ರಣವಿಲ್ಲದ ಕಾರ್ಮಿಕರಿಗೆ ಮಹಾಜನಗಳು ಕೂಡಾ ಅನ್ಯಾಯ ಮಾಡುತ್ತಾರೆ. ಅವರಿಗೆ ಕಳಪೆ ಗುಣಮಟ್ಟದ ಕಚ್ಚಾ ವಸ್ತುಗಳನ್ನು ಪೂರೈಸುವ ಅವರು ಕೊನೆಗೆ ಬೀಡಿ ಕೊಂಡು ಹೋಗುವಾಗ ಪರಿಶೀಲನೆಯ ಸಮಯದಲ್ಲಿ ಕೆಲವು ಉತ್ಪನ್ನಗಳನ್ನು ತಿರಸ್ಕರಿಸುತ್ತಾರೆ. “ಮಹಾಜನರು ತಿರಸ್ಕೃತವಾದ ಬೀಡಿಗಳನ್ನು ಕೊಂಡು ಹೋಗುತ್ತಾರೆ, ಆದರೆ ಅದಕ್ಕೆ ಯಾವುದೇ ಹಣ ನೀಡುವುದಿಲ್ಲ,” ಎಂದು ಅವರು ಅನ್ಯಾಯವನ್ನು ಎತ್ತಿ ತೋರಿಸುತ್ತಾರೆ.

ಅಲ್ಪ ವೇತನ ಮತ್ತು ಯಾವುದೇ ಸುರಕ್ಷತಾ ಜಾಲವಿಲ್ಲದೆ, ತನುಜಾ ಅವರಂತಹ ದಿನಗೂಲಿ ಕಾರ್ಮಿಕರು ಆರ್ಥಿಕವಾಗಿ ಅನಿಶ್ಚಿತ ಜೀವನವನ್ನು ನಡೆಸುತ್ತಿದ್ದಾರೆ. ದಂಪತಿಗಳು ತಮ್ಮ ಮೂರನೇ ಮಗಳ ಮದುವೆಗಾಗಿ ಮರುಪಾವತಿಸಬೇಕಿರುವ 35,000 ರೂ.ಗಳ ಸಾಲವನ್ನು ಹೊಂದಿದ್ದಾರೆ. "ನಮ್ಮ ಜೀವನವು ಸಾಲ ಮತ್ತು ಮರುಪಾವತಿಯ ಚಕ್ರದಲ್ಲಿ ಸಿಲುಕಿಕೊಂಡಿದೆ," ಎಂದು ಅವರು ಪ್ರತಿ ಮದುವೆಗೂ ಸಾಲ ಮಾಡುವ ಮತ್ತು ಅದನ್ನು ತೀರಿಸುವ ಪ್ರಕ್ರಿಯೆಯ ಕುರಿತು ಮಾತನಾಡುತ್ತಾರೆ

A mahajan settling accounts in Tanuja Bibi’s yard; Tanuja (in a yellow saree) waits in the queue.
PHOTO • Smita Khator
Saida Bewa at the door of the home of  beedi workers in Majhpara mohalla, Beldanga where she is speaking to them about their health
PHOTO • Smita Khator

ಎಡ: ತನುಜಾ ಬೀಬಿಯವರ ಅಂಗಳದಲ್ಲಿ ಓರ್ವ ಮಹಾಜನ್ ಲೆಕ್ಕಗಳನ್ನು ಗಮನಿಸುತ್ತಿರುವುದು. ಅಲ್ಲೇ ತನುಜಾ ತಮ್ಮ ಸರದಿಗಾಗಿ ಕಾಯುತ್ತಿದ್ದಾರೆ. ಬಲಗಡೆ: ಬೆಲ್ದಂಗಾದ ಮಜ್ಪಾರಾ ಮೊಹಲ್ಲಾದಲ್ಲಿರುವ  ಬೀಡಿ ಕಾರ್ಮಿಕರ ಮನೆಯ ಬಾಗಿಲಲ್ಲಿ ಸೈದಾ ಬೇವಾ ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದಾರೆ

ಯುವ ದಂಪತಿಗಳಾಗಿ, ತನುಜಾ ಮತ್ತು ರಫೀಕುಲ್ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದರು, ಆದರೆ ಮಕ್ಕಳು ಜನಿಸಿದಾಗ, ದಂಪತಿಗಳು ಹಣವನ್ನು ಸಾಲವಾಗಿ ಪಡೆದು ಭೂಮಿಯನ್ನು ಖರೀದಿಸಿದರು ಮತ್ತು ಒಂದು ಕೋಣೆಯ ಹುಲ್ಲಿನ ಮನೆಯನ್ನು ನಿರ್ಮಿಸಿದರು. "ನಾವಿಬ್ಬರೂ ಆಗ ಚಿಕ್ಕವರಾಗಿದ್ದೆವು ಮತ್ತು ನಮ್ಮ ಕಠಿಣ ಪರಿಶ್ರಮದಿಂದ ನಾವು ಆ ಸಾಲವನ್ನು ಮರುಪಾವತಿಸಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಅದು ಸಾಧ್ಯವಾಗಲೇ ಇಲ್ಲ. ನಾವು ಒಂದಾದ ಮೇಲೊಂದರಂತೆ ಸಾಲ ಪಡೆಯುತ್ತಲೇ ಇದ್ದೆವು ಮತ್ತು ಈಗ ನಾವು ಇಲ್ಲಿಗೆ ತಲುಪಿದ್ದೇವೆ, ಇನ್ನೂ ಈ ಮನೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ." ಪಿಎಂ ಆವಾಸ್ ಯೋಜನೆಯಡಿ ಮನೆ ಪಡೆಯಲು ಅರ್ಹರಾಗಿದ್ದರೂ, ಭೂರಹಿತ ದಂಪತಿಗಳಿಗೆ ಇನ್ನೂ ಮನೆ ಸಿಕ್ಕಿಲ್ಲ.

ರಫೀಕುಲ್ ಈಗ ಡೆಂಗ್ಯೂ ನಿರ್ಮೂಲನಾ ಕಾರ್ಯಕ್ರಮಕ್ಕಾಗಿ ಗ್ರಾಮ ಪಂಚಾಯಿತಿಯೊಂದಿಗೆ ಒಪ್ಪಂದದ ಅಡಿಯಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಮಾಸಿಕ 5,000 ರೂ.ಗಳ ಸಂಬಳ ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ: "ಈ ಅನಿಯಮಿತತೆಯು ನನ್ನ ಮೇಲೆ ಸಾಕಷ್ಟು ಒತ್ತಡವನ್ನು ಸೃಷ್ಟಿಸುತ್ತದೆ. ಒಂದು ಕಾಲದಲ್ಲಿ ಆರು ತಿಂಗಳವರೆಗೆ ಒಂದು ಪೈಸೆಯೂ ಬಂದಿರಲಿಲ್ಲ," ಎಂದು ಅವರು ಹೇಳುತ್ತಾರೆ ಮತ್ತು ಕುಟುಂಬವು ಸ್ಥಳೀಯ ಅಂಗಡಿಯಲ್ಲಿ 15,000 ರೂಪಾಯಿಗಳ ಸಾಲ ಇರಿಸಿತ್ತು.

ಬೀಡಿ ಕಾರ್ಮಿಕರು ಹೆರಿಗೆ ಅಥವಾ ಅನಾರೋಗ್ಯದ ರಜೆಯನ್ನು ತೆಗೆದುಕೊಳ್ಳುವುದಿಲ್ಲ; ಗರ್ಭಧಾರಣೆ ಮತ್ತು ಹೆರಿಗೆ ಎರಡನ್ನೂ ಅವರು ರೋಲಿಂಗ್ ಮಾಡುತ್ತಲೇ ಇರುವುದರಿಂದ ನಿರ್ವಹಿಸಲಾಗುತ್ತದೆ. ಜನನಿ ಸುರಕ್ಷಾ ಯೋಜನೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಮತ್ತು ಉಚಿತ ಮಧ್ಯಾಹ್ನದ ಊಟದಂತಹ ಕಾರ್ಯಕ್ರಮಗಳು ಕಿರಿಯ ಮಹಿಳೆಯರಿಗೆ ಸಹಾಯ ಮಾಡಿವೆ. "ಆದರೆ ವಯಸ್ಸಾದ ಮಹಿಳಾ ಕಾರ್ಮಿಕರ ಆರೋಗ್ಯದ ಮೇಲಿನ ಹಾನಿಯನ್ನು ಲೆಕ್ಕ ಹಾಕಲಾಗಿಲ್ಲ" ಎಂದು ಉಷಾ ಕಾರ್ಯಕರ್ತೆ ಸಬೀನಾ ಯಾಸ್ಮಿನ್ ಹೇಳುತ್ತಾರೆ. "ಮೆನೊಪಾಸ್‌ ಹಂತವನ್ನು ತಲುಪಿದ ನಂತರ ಅವರ ಆರೋಗ್ಯವು ಹದಗೆಡುತ್ತದೆ. ಕ್ಯಾಲ್ಸಿಯಂ ಮತ್ತು ಕಬ್ಬಿಣ ಮಹಿಳೆಯರಿಗೆ ಪಾಲಿಗೆ ಎರಡು ಪ್ರಮುಖ ವಿಷಯಗಳು. ಅವುಗಳ ಕೊರೆತೆ ಮಹಿಳೆಯರನ್ನು ತೀವ್ರವಾಗಿ ಕಾಡುತ್ತವೆ. ಅವರು ದುರ್ಬಲ ಮೂಳೆಯ ಆರೋಗ್ಯ ಮತ್ತು ರಕ್ತಹೀನತೆಯನ್ನು ಹೊಂದಿದ್ದಾರೆ," ಎಂದು ಅವರು ಹೇಳುತ್ತಾರೆ. ಬೆಲ್ಡಂಗಪಟ್ಟಣದ ಪುರಸಭೆಯ 14 ವಾರ್ಡ್ ಗಳಲ್ಲಿ ಒಂದರ ಉಸ್ತುವಾರಿ ವಹಿಸಿಕೊಂಡಿರುವ ಯಾಸ್ಮಿನ್, ತನ್ನ ಪಾತ್ರ ಮತ್ತು ಕರ್ತವ್ಯಗಳು ಹೆಚ್ಚಾಗಿ ಹೆರಿಗೆ ಮತ್ತು ಮಕ್ಕಳ ಆರೈಕೆಗೆ ಸೀಮಿತವಾಗಿರುವುದರಿಂದ ತಾನು ಈ ಕುರಿತು ಏನೂ ಮಾಡಲು ಸಾಧ್ಯವಿಲ್ಲ ಎಂದು ವಿಷಾದಿಸುತ್ತಾರೆ.

ಉದ್ಯಮ ಸರಕಾರಗಳೆರಡರಿಂದಲೂ ಪರಿತ್ಯಕ್ತರಾದ ಮಹಿಳಾ ಬೀಡಿ ಕಾರ್ಮಿಕರಿಗೆ ಎದುರುನೋಡುವಂತಹದ್ದು ಹೆಚ್ಚೇನಿಲ್ಲ. ಕೆಲಸದ ಸೌಲಭ್ಯಗಳ ಕುರಿತು ಕೇಳದಾಗ ಕೇಳಿದಾಗ ತನುಜಾ ಉದ್ವಿಗ್ನರಾದರು. “ನಮ್ಮ ಬಗ್ಗೆ ವಿಚಾರಿಸಲು ಯಾವ ಬಾಬುವೂ (ಗುತ್ತಿಗೆದಾರ) ಬರುವುದಿಲ್ಲ. ಬಹಳ ಸಮಯದ ಹಿಂದೆ ಬಿಡಿಒ ಕಚೇರಿಯು ವೈದ್ಯರು ನಮ್ಮನ್ನು ಪರೀಕ್ಷಿಸುತ್ತಾರೆ ಎಂದು ಹೇಳಿತ್ತು. ನಾವು ಹೋದೆವು ಮತ್ತು ಅವರು ನಮಗೆ ದೊಡ್ಡ ನಿರುಪಯುಕ್ತ ಮಾತ್ರೆಗಳನ್ನು ನೀಡಿದರು, ಅದು ಏನೂ ಕೆಲಸ ಮಾಡಲಿಲ್ಲ," ಎಂದು ಅವರು ನೆನಪಿಸಿಕೊಳ್ಳುತ್ತಾರೆ. ಮತ್ತೆ ಈ ಮಹಿಳೆಯರನ್ನು ಪರೀಕ್ಷಿಸಲು ಯಾರೂ ಬರಲಿಲ್ಲ.

ತನುಜಾ ಆ ಮಾತ್ರೆಗಳು ಮನುಷ್ಯರಿಗೆಂದು ತಯಾರಿಸಿದಂತಿಲ್ಲ ಎಂದು ಅನುಮಾನಿಸುತ್ತಾರೆ. "ಅವು ದನಗಳಿಗೆ ಕೊಡಲು ತಯಾರಿಸಿರಬೇಕು."

ಗ್ರಾಮೀಣ ಭಾರತದ ಹದಿಹರೆಯದ ಬಾಲಕಿಯರು ಮತ್ತು ಯುವತಿಯರ ಬಗ್ಗೆ PARI ಮತ್ತು ಕೌಂಟರ್ ಮೀಡಿಯಾ ಟ್ರಸ್ಟ್ ಬೆಂಬಲಿತ ರಾಷ್ಟ್ರವ್ಯಾಪಿ ವರದಿ ಮಾಡುವ ಯೋಜನೆಯು ಮಹತ್ವದ ಆದರೆ ಸಮಾಜದ ಅಂಚಿನಲ್ಲಿರುವ ಗುಂಪುಗಳ ಪರಿಸ್ಥಿತಿಯನ್ನು ಅನ್ವೇಷಿಸಲು , ಸಾಮಾನ್ಯ ಜನರ ಮಾತುಗಳು ಮತ್ತು ಜೀವಂತ ಅನುಭವಗಳ ಮೂಲಕ ತಿಳಿಯುವ ಉದ್ದೇಶವನ್ನು ಹೊಂದಿದೆ . ಇದು ಪಾಪ್ಯುಲೇಷನ್ ಆಫ್ ಇಂಡಿಯಾದ ಬೆಂಬಲವನ್ನು ಹೊಂದಿದೆ .
ಲೇಖನವನ್ನು ಮರುಪ್ರಕಟಿಸುವ ಆಸಕ್ತಿಯಿದೆಯೇ ? ಇದಕ್ಕಾಗಿ - ಮೈಲ್ ವಿಳಾಸವನ್ನು ಸಂಪರ್ಕಿಸಿ : mailto:[email protected] ಹಾಗೂ ಒಂದು ಪ್ರತಿಯನ್ನು mailto:[email protected] . ವಿಳಾಸಕ್ಕೆ ಕಳುಹಿಸಿ.

ಅನುವಾದ: ಶಂಕರ. ಎನ್. ಕೆಂಚನೂರು

Smita Khator

اسمِتا کھٹور، پیپلز آرکائیو آف رورل انڈیا (پاری) کے ہندوستانی زبانوں کے پروگرام، پاری بھاشا کی چیف ٹرانسلیشنز ایڈیٹر ہیں۔ ترجمہ، زبان اور آرکائیوز ان کے کام کرنے کے شعبے رہے ہیں۔ وہ خواتین کے مسائل اور محنت و مزدوری سے متعلق امور پر لکھتی ہیں۔

کے ذریعہ دیگر اسٹوریز اسمیتا کھٹور
Illustration : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Editor : Priti David

پریتی ڈیوڈ، پاری کی ایگزیکٹو ایڈیٹر ہیں۔ وہ جنگلات، آدیواسیوں اور معاش جیسے موضوعات پر لکھتی ہیں۔ پریتی، پاری کے ’ایجوکیشن‘ والے حصہ کی سربراہ بھی ہیں اور دیہی علاقوں کے مسائل کو کلاس روم اور نصاب تک پہنچانے کے لیے اسکولوں اور کالجوں کے ساتھ مل کر کام کرتی ہیں۔

کے ذریعہ دیگر اسٹوریز Priti David
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru