ಬಹಶಃ ತೇಲು ಮಹತೋ ನನ್ನ ಪುಸ್ತಕ ʼಲಾಸ್ಟ್‌ ಹೀರೋಸ್‌ʼ ಪುಸ್ತಕದಲ್ಲಿ ದಾಖಲಾದ ಹೋರಾಟಗಾರರಲ್ಲಿ ಹಿರಿಯರು. ಅವರು ಗುರುವಾರ ಸಂಜೆ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಪಿರ್ರಾ ಗ್ರಾಮದಲ್ಲಿನ ತನ್ನ ಮನೆಯಲ್ಲಿ ನಿಧನರಾದರು. ನನ್ನ ಪುಸ್ತಕ ಬಿಡುಗಡೆಯಾದ ನಂತರ ಮರಣ ಹೊಂದಿದವರಲ್ಲಿ ಅವರು ಮೊದಲಿಗರು. ಅವರು 1942ರಲ್ಲಿ ಪುರುಲಿಯಾದಲ್ಲಿನ 12 ಪೊಲೀಸ್‌ ಠಾಣೆಗಳಿಗೆ ನಡೆದ ಐತಿಹಾಸಿಕವಾದ – ಈಗ ಮರೆತು ಹೋಗಿರುವ – ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ತೇಲು ಅವರಿಗೆ ನಿಧನ ಹೊಂದಿದಾಗ 102 -105 ವರ್ಷವಾಗಿತ್ತು.

ಅವರು ನಮ್ಮನ್ನು ಅಗಲುವುದರೊಂದಿಗೆ ನಮ್ಮ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟ ಸುವರ್ಣಯುಗದ ಪೀಳಿಗೆಯ ಅಂತ್ಯಕ್ಕೆ ಇನ್ನೊಂದು ಹೆಜ್ಜೆ ಹತ್ತಿರವಾಗಿದ್ದೇವೆ. ಇನ್ನೊಂದು ಐದಾರು ವರ್ಷಗಳಲ್ಲಿ ಸ್ವತಂತ್ರ ಭಾರತಕ್ಕಾಗಿ ಹೋರಾಟ ಮಾಡಿದವರಲ್ಲಿ ಒಬ್ಬರೂ ಉಳಿದಿರುವುದಿಲ್ಲ. ಹೊಸ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟಗಾರರೊಡನೆ ಮಾತನಾಡುವ, ಒಡನಾಡುವ ಮತ್ತು ಅವರನ್ನು ನೋಡುವ ಅವಕಾಶ ಸಿಗುವುದಿಲ್ಲ. ಅವರು ಯಾರು, ಅವರು ಯಾಕಾಗಿ ಹೋರಾಡಿದರು, ಯಾರಿಗಾಗಿ ಹೋರಾಡಿದರು ಎನ್ನುವ ಕತೆಯನ್ನು ಈ ಪೀಳಿಗೆಗೆ ನೇರವಾಗಿ ಕೇಳಲು ಸಾಧ್ಯವಿಲ್ಲ.

ತೇಲು ಮಹತೋ ಮತ್ತು ಅವರ ಬದುಕಿನ ಸಂಗಾತಿ ಲೋಕಿ ಮಹತೋ ತಮ್ಮ ಬದುಕಿನ ಕಥೆಗಳನ್ನು ಹೇಳಲು ಉತ್ಸುಕರಾಗಿದ್ದರು. ಹೊಸ ಪೀಳಿಗೆಗೆ ತಾವು ದೇಶಕ್ಕಾಗಿ ಹೋರಾಡಿದ್ದೆವು ಮತ್ತು ಆ ಕುರಿತು ನಮಗೆ ಹೆಮ್ಮೆಯಿದೆ ಎಂದು ಹೇಳಿಕೊಳ್ಳಲು ಕಾತರರಾಗಿದ್ದರು. ಇನ್ನು ತೇಲು ಮಹತೋ ತಮ್ಮ ಕತೆಯನ್ನು ನಮಗೆ ಹೇಳಲಾರರು. ಇನ್ನೊಂದು ಐದಾರು ವರ್ಷದಲ್ಲಿ ಉಳಿದವರೂ ಇಲ್ಲವಾಗಿ ಆ ಕತೆಗಳನ್ನು ನಮಗೆ ಹೇಳಲು ಯಾರೂ ಇರುವುದಿಲ್ಲ.

ಇದು ಮುಂದಿನ ಪೀಳಿಗೆಗೆ ಬಹಳ ದೊಡ್ಡ ನಷ್ಟವಾಗಲಿದೆ. ಈಗಿನ ಪೀಳಿಗೆಗೆ ನಮ್ಮ ಕಾಲದ ತೇಲು ಅವರಂತಹ ಜನರ ಕುರಿತು ತಿಳಿದಿರುವುದೇ ಅತ್ಯಲ್ಪ. ಅವರ ತ್ಯಾಗ, ಅವರ ಕತೆಗಳು ನಮ್ಮ ಬದುಕನ್ನು ರೂಪಿಸಲು ಎಷ್ಟು ಮುಖ್ಯವೆನ್ನುವುದು ಇವರಿಗೆ ತಿಳಿದೇ ಇಲ್ಲ.

ಅದರಲ್ಲೂ ವಿಶೇಷವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ತಿರುಚಿ, ಕಲ್ಪಿತ ಸತ್ಯಗಳನ್ನು ತುಂಬಲಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಜೀವಂತ ಸಾಕ್ಷಿಗಳ ನಷ್ಟ ನಿಜಕ್ಕೂ ತುಂಬಲಾರದ ನಷ್ಟವೇ ಹೌದು. ಈಗ ಮೋಹನದಾಸ್ ಕರಮಚಂದ್ ಗಾಂಧಿಯವರ ಹತ್ಯೆಯ ಸುತ್ತಲಿನ ಪ್ರಮುಖ ಸತ್ಯಗಳನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಿಂದ, ಸಾರ್ವಜನಿಕ ಸಂವಾದಗಳಿಂದ, ಮಾಧ್ಯಮಗಳ ಚರ್ಚೆಗಳಲ್ಲಿ ಸಾಧ್ಯಂತವಾಗಿ ಅಳಿಸಿಹಾಕಲಾಗುತ್ತಿದೆ.

Thelu Mahato's home in Pirra village of Puruliya district, West Bengal where he passed away on April 6, 2023. Thelu never called himself a Gandhian but lived like one for over a century, in simplicity, even austerity.
PHOTO • P. Sainath
PHOTO • P. Sainath

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಪಿರ್ರಾ ಗ್ರಾಮದವರಾದ ತೇಲು ಮಹತೋ ಅವರ ಮನೆಯಲ್ಲಿ ಅವರು ಏಪ್ರಿಲ್ 6, 2023ರಂದು ನಿಧನರಾದರು. ತೇಲು ಮಹತೋ ಎಂದಿಗೂ ತನ್ನನ್ನು ತಾನು ಗಾಂಧಿವಾದಿಯೆಂದು ಕರೆದುಕೊಂಡವರಲ್ಲ. ಆದರೆ ಶತಮಾನಕ್ಕೂ ಹೆಚ್ಚು ಕಾಲ ಗಾಂಧಿಯಂತೆ ಬದುಕಿದವರು. ಅವರ ತಪಸ್ಸು ಮತ್ತು ಸರಳತೆನ್ನು ಅನುಸರಿಸಿದವರು. ಬಲ: ತೇಲು ಮಹತೋ ಮತ್ತು ಅವರ ಜೀವಮಾನದ ಸಹವರ್ತಿ ಲೋಕಿ ಮಹತೋ ತಮ್ಮ ಕಥೆಗಳನ್ನು ಹೇಳಲು ಉತ್ಸುಕರಾಗಿದ್ದರು

ತೇಲು ಮಹತೋ ಎಂದಿಗೂ ತನ್ನನ್ನು ತಾನು ಗಾಂಧಿವಾದಿಯೆಂದು ಕರೆದುಕೊಂಡವರಲ್ಲ. ಆದರೆ ಶತಮಾನಕ್ಕೂ ಹೆಚ್ಚು ಕಾಲ ಗಾಂಧಿಯಂತೆ ಬದುಕಿದವರು. ಅವರ ತಪಸ್ಸು ಮತ್ತು ಸರಳತೆನ್ನು ಅನುಸರಿಸಿದವರು. ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅವರು 1942ರ ಸೆಪ್ಟೆಂಬರ್ 29 ಮತ್ತು 30ರಂದು ಪುರುಲಿಯಾದಲ್ಲಿ 12 ಪೊಲೀಸ್ ಠಾಣೆಗಳಿಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅವರು ತಮ್ಮನ್ನು ತಾವು ಒಬ್ಬ ಎಡಪಂಥೀಯ ಮತ್ತು ಕ್ರಾಂತಿಕಾರಿ ಮನೋಭಾವದವರನ್ನಾಗಿ ನೋಡುತ್ತಾರಾದರೂ ಆತ್ಮರಕ್ಷಣೆಯ ಹೊರತು ಹಿಂಸೆಯ ಮೊರೆ ಹೋಗುವುದಿಲ್ಲವೆನ್ನುವ ಪ್ರತಿಜ್ಞೆ ಮಾಡಿದವರು.

2022ರಲ್ಲಿ ಪಿರ್ರಾ ಗ್ರಾಮದಲ್ಲಿ ಅವರ ಸಂದರ್ಶನ ಮಾಡುವಾಗ, ನೀವು ಸಾಕಷ್ಟು ಹಿಂಸಾಚಾರವನ್ನು ಕಂಡ ಪೊಲೀಸ್ ಠಾಣೆಯ ಮೇಲಿನ ದಾಳಿಯಲ್ಲಿ ನೀವು ಭಾಗವಹಿಸಿದ್ದೀರಲ್ಲ? ಎಂದು ಕೇಳಿದಾಗ ಅವರು ಹಿಂಸೆ ಮಾಡಿದವರು ಬ್ರಿಟಿಷರು. “ಅವರ ಪೊಲೀಸರು ಜನರತ್ತ ಹೇಗೆಂದರೆ ಹಾಗೆ ಗುಂಡು ಹಾರಿಸಿದರು…“ ಆ ಜನರು ಸ್ಟೇಷನ್‌ ಮೇಲೆ ಭಾರತದ ಬಾವುಟ ಹಾರಿಸಲು ಹೋಗಿದ್ದರು. "ಜನರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಸಂಗಾತಿಗಳನ್ನು ತಮ್ಮ ಕಣ್ಣ ಮುಂದೆಯೇ ಪೊಲೀಸರು ಗುಂಡಿಕ್ಕಿ ಕೊಂದಿರುವುದನ್ನು ನೋಡಿದಾಗ ಖಂಡಿತವಾಗಿಯೂ ಪ್ರತೀಕಾರ ತೀರಿಸಿಕೊಳ್ಳುತ್ತಾರೆ."

ತೇಲು ಮಹತೋ ಮತ್ತು ಅವರ ಜೀವಮಾನದ ಸಹವರ್ತಿ ಲೋಕಿ ಮಹತೋ ಅವರೊಂದಿಗಿನ ನಮ್ಮ ಸಂಭಾಷಣೆಗಳು ಅವರ ಪೀಳಿಗೆಯು ಆಲೋಚನೆಗಳು ಮತ್ತು ಪ್ರಭಾವಗಳಿಗೆ ಎಷ್ಟು ಮುಕ್ತವಾಗಿವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡಿತು, ಆದರೆ ಆ ಬಹು ಪ್ರಭಾವಗಳಿಂದ ರೂಪುಗೊಂಡ ಪಾತ್ರಗಳು ಎಷ್ಟು ಸಂಕೀರ್ಣವಾಗಿವೆ. ತೇಲು - ಲೋಕಿಯವರು ಸಹ - ಭಾವುಕರು ಮತ್ತು ರಾಜಕೀಯದಿಂದ ಅಚಲವಾಗಿ ಎಡಪಂಥೀಯರಾಗಿದ್ದವರು; ನೈತಿಕ ಸಂಹಿತೆ ಮತ್ತು ಜೀವನಶೈಲಿಯಿಂದ ಗಾಂಧಿವಾದಿ. ಬದ್ಧತೆ ಮತ್ತು ಮನವೊಲಿಕೆಯಿಂದ ಎಡಪಂಥೀಯ, ವ್ಯಕ್ತಿತ್ವದಿಂದ ಗಾಂಧಿವಾದಿ. ಇಬ್ಬರೂ ದಶಕಗಳಿಂದ ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿದ್ದರು.

ಅವರು ಯಾವಾಗಲೂ ವಾಸಿಸುತ್ತಿದ್ದ ಪ್ರದೇಶದ ಮಟ್ಟದಲ್ಲಿ ಅವರ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್ ಆಗಿದ್ದರು ಮತ್ತು ಖಂಡಿತವಾಗಿಯೂ ಆಗಿರಬೇಕಾಗಿತ್ತು. ಅವರು ತೇಲು ಮತ್ತು ಲೋಕಿಯವರ ಪಾಲಿಗೆ ಜಗತ್ತು ಎಂದರೆ ಏನು ಎನ್ನುವುದನ್ನು ವ್ಯಾಖ್ಯಾನಿಸಿದವರು. ಅವರು ಎಂದಿಗೂ ಕಣ್ಣೆತ್ತಿಯೂ ನೋಡದ ಗಾಂಧಿ ದೂರದ ಆದರೆ ಅತ್ಯುನ್ನತ, ವಿಸ್ಮಯಕಾರಿ ವ್ಯಕ್ತಿ. ಅವರ ಸ್ಥಳೀಯ ನಾಯಕರಲ್ಲಿ ಮೂವರು ರಾಬಿನ್ ಹುಡ್ ಮಾದರಿಯ ದರೋಡೆಕೋರರೂ ಸೇರಿದ್ದಾರೆ - ಬಿಪಿನ್, ದಿಗಂಬರ ಮತ್ತು ಪೀತಾಂಬರ್ ಸರ್ದಾರ್. ದರೋಡೆಕೋರರು ಭಯಾನಕವಾಗಿ ಹಿಂಸಾತ್ಮಕರಾಗಿರಬಹುದು, ಆದರೆ ಊಳಿಗಮಾನ್ಯ ಭೂಮಾಲೀಕರು ಮತ್ತು ಇತರ ದಬ್ಬಾಳಿಕೆಗಾರರ ವಿರುದ್ಧ ನ್ಯಾಯಕ್ಕಾಗಿ ಸಣ್ಣ ಜನರ ಪರವಾಗಿ ನಿಂತ ಹೋರಾಟಗಾರರು. ಇತಿಹಾಸಕಾರ ಎರಿಕ್ ಹಾಬ್ಸ್‌ಬಾಮ್ ಅವರ ಡಕಾಯಿತಿಯನ್ನು ಕ್ರೂರವಾಗಿದ್ದರೂ, "ಏಕಕಾಲದಲ್ಲಿ ಆರ್ಥಿಕ ಮತ್ತು ಸಾಮಾಜಿಕ ರಾಜಕೀಯ ವ್ಯವಸ್ಥೆಗೆ ಸವಾಲೊಡ್ಡುತ್ತದೆ" ಎಂದು ಬಣ್ಣಿಸಿದ್ದಾರೆ.

PHOTO • P. Sainath
PHOTO • P. Sainath

ತೇಲು ಮತ್ತು ಲೋಕಿ ಮಹತೋ ತಮ್ಮ ಪೀಳಿಗೆಯ ಆಲೋಚನೆಗಳು ಮತ್ತು ಪ್ರಭಾವಗಳಿಗೆ ಎಷ್ಟು ಮುಕ್ತರಾಗಿದ್ದರು ಎಂಬುದನ್ನು ನಮಗೆ ತೋರಿಸಿದರು. ತೇಲು ತನ್ನನ್ನು ಎಡಪಂಥೀಯ ಮತ್ತು ಕ್ರಾಂತಿಕಾರಿ ನೋಡಿದವರು ಆದರೆ ಅವರು ಅಹಿಂಸೆಯನ್ನು ಆಚರಿಸುವ ಪ್ರತಿಜ್ಞೆ ಮಾಡಿದ್ದರು

ತೇಲು ಮತ್ತು ಲೋಕಿಯವರ ಪಾಲಿಗೆ ಇಂತಹ ಹಲವು ನಾಯಕರನ್ನು ಅನುಸರಿಸುವುದರಲ್ಲಿ ಯಾವುದೇ ವಿರೋಧಾಬಾಸ ಕಾಣಲಿಲ್ಲ. ಡಕಾಯಿತರ ಕುರಿತಾದ ಅವರ ಗೌರವಭಾವವು ಅಸಹ್ಯ ಮತ್ತು ಗೌರವದ ಮಿಶ್ರಣವಾಗಿತ್ತು. ಅವರು ಅವರನ್ನು ಗೌರವಿಸುತ್ತಲೇ ಅವರ ಹಿಂಸೆಯ ದಾರಿಯಿಂದ ದೂರವುಳಿದಿದ್ದರು. ಸ್ವಾತಂತ್ರ್ಯ ದೊರೆತ ನಂತರವೂ ಅವರು ದಶಕಗಳವರೆಗೆ, ವಿವಿಧ ಭೂಮಿ ಮತ್ತು ಇತರ ಹೋರಾಟಗಳಲ್ಲಿ ರಾಜಕೀಯವಾಗಿ ಸಕ್ರಿಯರಾಗಿದ್ದರು. ಈ ಸ್ವತಂತ್ರ ಮನೋಭಾವದ ಎಡಪಂಥೀಯರು ಗಾಂಧಿ ಮಾರ್ಗದ ಜೀವನವನ್ನು ಮುನ್ನಡೆಸುತ್ತಿದ್ದರು.

ತೇಲು ಮಹತೋ ಕುರ್ಮಿ ಸಮುದಾಯಕ್ಕೆ ಸೇರಿದವರು. ಈ ಸಮುದಾಯವು ಜಂಗಲ್‌ ಮಹಲ್‌ ಪ್ರದೇಶದಲ್ಲಿ ಅನೇಕ ದಂಗೆಯಿಂದ ಕೂಡಿದ ಹೋರಾಟಗಳಲ್ಲಿ ಭಾಗವಹಿಸಿತ್ತು. ಇದಕ್ಕಾಗಿ 1931ರಲ್ಲಿ ಬ್ರಿಟಿಷರು ಅವರನ್ನು ಶಿಕ್ಷಿಸಿದರು. ಅವರು ಅವರ ಬುಡಕಟ್ಟು ಸ್ಥಾನಮಾನವನ್ನು ಕಿತ್ತುಕೊಂಡರು. ಈಗ ಆ ಸ್ಥಾನಮಾನವನ್ನು ಮತ್ತೆ ಪಡೆಯುವುದು ಆ ಸಮುದಾಯದ ಗುರಿಯಾಗಿದೆ. ತೇಲು ಮಹತೋ ತೀರಿಕೊಂಡ ದಿನವೇ ಜಂಗಲ್ ಮಹಲ್ಲಿನಲ್ಲಿ ಈ ಹೋರಾಟವು ಹೊಸ ಮಟ್ಟವನ್ನು ತಲುಪಿತು.

ತೇಲು ಮಹತೋ ಅವರಿಗೆ ಎಂದೂ ಸ್ವಾತಂತ್ರ್ಯ ಹೋರಾಟಗಾರರಿಗೆ ದೊರಕುತ್ತಿದ್ದ ಪಿಂಚಣಿ ದೊರೆತಿಲ್ಲ. ಅವರನ್ನು ಸ್ವಾತಂತ್ರ್ಯ ಹೋರಾಟಗಾರರನ್ನಾಗಿ ಗುರುತಿಸಿಯೂ ಇಲ್ಲ. ನಾವು ಅವರನ್ನು ಕೊನೆಯ ಬಾರಿ ಭೇಟಿಯಾದ ಸಮಯದಲ್ಲಿ ಸಾವಿರ ರೂಪಾಯಿಗಳ ಹಿರಿಯ ನಾಗರಿಕರ ಪಿಂಚಣಿ ಹಣದಲ್ಲಿ ಬದುಕುತ್ತಿದ್ದರು. ಅವರದು ಒಂದು ಕೋಣೆಯ ಟಿನ್‌ ಶೀಟ್‌ ಚಾವಣಿ ಹೊಂದಿರುವ ಮನೆ. ಆ ಮನೆಯ ಹತ್ತಿರದಲ್ಲೇ ಒಂದ ಬಾವಿಯಿದೆ. ಅದನ್ನು ಅವರೇ ತೋಡಿದ್ದು. ಅವರು ಅಂದು ಅದರ ಪಕ್ಕದಲ್ಲಿ ನಿಂತು ಹೆಮ್ಮೆಯಿಂದ ಫೋಟೊ ತೆಗೆಸಿಕೊಂಡಿದ್ದರು.

ತೇಲು ಮಹತೋ ತೋಡಿದ ಆ ಬಾವಿ ಮುಂದೆಯೂ ಇರಲಿದೆ. ದೇಶಕ್ಕಾಗಿ ಹೋರಾಡಿದವರ ಕತೆಯ ಬಾವಿಯಲ್ಲಿನ ನೀರು ಹಿಂದೆಂದಿಗಿಂತಲೂ ಆಳಕ್ಕೆ ಬತ್ತಿ ಹೋಗಿದೆ. ಅದು ಮತ್ತೆ ತುಂಬಿಕೊಳ್ಳುವುದಿಲ್ಲ.

ಸಾಯಿನಾಥ್ ಅವರ ಪುಸ್ತಕ ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ, ನವೆಂಬರ್ 2022ರಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದೆ. ಇದರಲ್ಲಿ ನೀವು ತೇಲು ಮಹತೋ, ಲೋಕಿ ಮಹತೋ ಮತ್ತು ಇತರ 14 ಸ್ವಾತಂತ್ರ್ಯ ಹೋರಾಟಗಾರರ ಸಂಪೂರ್ಣ ಕಥೆಯನ್ನು ಓದಬಹುದು.

ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ (ಪರಿ) ದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲರಿಯಲ್ಲಿ ಅವರ ಫೋಟೋ ಆಲ್ಬಂಗಳು ಮತ್ತು ವೀಡಿಯೊಗಳನ್ನು ನೋಡಿ

ಈ ಲೇಖನವನ್ನು ಮೊದಲು ದಿ ವೈರ್ ಜಾಲತಾಣಲ್ಲಿ ಪ್ರಕಟಿಸಲಾಯಿತು

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru